ಆಯ್ರಾ ನಲ್ಲಿ ಟ್ರೆಂಡಿಂಗ್


ದೇಶದ ಜೀವಾಳ ರೈತ
"ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು ಹಾಗಾಗಿ ಅನ್ನ ನೀಡುವ ರೈತ ಸದಾ ಸುಖವಾಗಿರಲಿ ಎಂದು ಆಶಿಸುತ್ತ ಅನ್ನದಾತನಿಗಾಗಿ ಸಮರ್ಪಿಸಲಾಗಿರುವ ಈ ದಿನದಂದು ದೇಶದ ಎಲ್ಲಾ ರೈತರಿಗೂ ಕೃತಜ್ಞತೆ ಸಲ್ಲಿಸೋಣ!ಕೃಷಿ ಇದ್ದಲ್ಲಿ ದುರ್ಭಿಕ್ಷ ಇರಲಾರದು ಎಂಬ ಮಾತು ಅಕ್ಷರಶಃ ನಿಜ,ಕಾರಣ ನಮ್ಮ ದೇಶದ ಆರ್ಥಿಕ ಮೂಲವೇ ಕೃಷಿ ಹಾಗಾಗಿಯೇ ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯಯುವುದು ನೇಗಿಲ ಯೋಗಿ ರೈತನನ್ನು ಮತ್ತು ಆತನ ತ್ಯಾಗ ಕೊಡುಗೆಗಳನ್ನು ಗುರುತಿಸಲು ಹಾಗು ಕೃಷಿಯ ಕೊಡುಗೆಗಳನ್ನು ಸ್ಮರಿಸಲು ಡಿಸೆಂಬರ್ 23 ರನ್ನು "ರಾಷ್ಟ್ರೀಯ ರೈತ ದಿನ" ಅಥವಾ "ಕಿಸಾನ್ ದಿವಸ"ವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನ ವನ್ನು ರೈತದಿನ ಕಿಸಾನ್ ಕಿಸಾನ್ ದಿವಸ ಎಂದು ಆಚರಿಸಲು ಕಾರಣ ಕೃಷಿಯ ಆರ್ಥಿಕತೆಯ ಮಹತ್ವವನ್ನು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ದೇಶದ ಅನ್ನದಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವರ ಪರವಾಗಿ ನಿಂತು ಆಧುನಿಕ ಕೃಷಿ ಅಳವಡಿಕೆ ಪದ್ಧತಿ ಸೇರಿ ರೈತರಿಗೆ ಪೂರಕವಾದ ಹಲವಾರು ರೈತಸ್ನೇಹಿ ಯೋಜನೆಗಳನ್ನು ಪ್ರಧಾನ ಮಂತ್ರಿಯಾಗಿ ತಮ್ಮ ಅಧಿಕಾರದ ಕಡಿಮೆ ಆವಧಿಯಲ್ಲಿ ಜಾರಿಗೆ ತಂದರು ಹಾಗಾಗಿ ಅವರ ಜನ್ಮ ದಿನವನ್ನು "ರಾಷ್ಟ್ರೀಯ ರೈತ ದಿನ" ವೆಂದು ಆಚರಿಸಲಾಗುತ್ತದೆ.ಅನ್ನ ದೈವಿಸ್ವರೂಪ ಹಾಗಾಗಿ ಅನ್ನವೇ ಪರಬ್ರಹ್ಮವೆಂದು ನಮ್ಮ ದೇಶದಲ್ಲಿ ಅನ್ನವನ್ನು ದೇವರೆಂದು ಗೌರವಿಸುತ್ತೇವೆ. ತಾಂತ್ರಿಕತೆ ಎಷ್ಟೇ ಮುಂದುವರೆದರೂ ಕಂಪ್ಯೂಟರ್ನಿಂದ ಇಲ್ಲವೇ ಫ್ಯಾಕ್ಟರಿಗಳಿಂದ ಅನ್ನವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಹಾಗೆಯೇ ಎಷ್ಟೇ ದುಡ್ಡಿದ್ದರೂ ಕೂಡ ದುಡ್ಡನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ, ನಾವು ಹೊಟ್ಟೆ ತುಂಬಿಸಿಕೊಳ್ಳಲು ರೈತ ಬೆಳೆಯನ್ನ ಬೆಳೆಯಲೇ ಬೇಕು.ಅದರಿಂದಲೇ ಹೊಟ್ಟೆ ತುಂಬಬೇಕು,ಆದರೆ ಹೊಟ್ಟೆ ತುಂಬಿಸುವ ಅನ್ನ ಬೆಳೆವ ರೈತನ ಸ್ಥಿತಿ ಮಾತ್ರ ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ಇರುವುದು ಶೋಚನೀಯ ರೈತ ಹಲವಾರು ಸವಾಲುಗಳನ್ನು ಎದುರಿಸಿ ತನ್ನ ಬೆಳೆಯನ್ನು ಕಾಪಾಡಿಕೊಂಡು ಉಳಿಸಿ ಜನರ ಹೊಟ್ಟೆ ತುಂಬಿಸುವ ಹಂತಕ್ಕೆ ತರುವಷ್ಟರಲ್ಲಿ ಅವನ ತ್ಯಾಗ ತಾಳ್ಮೆ,ಕಷ್ಟ ನಷ್ಟದ ಜೊತೆಗೆ ಅವನು ಎದುರಿಸಬೇಕಾದ ಸಮಸ್ಯೆಗಳು ಹತ್ತು ಹಲವು ಇರುತ್ತವೆ. ಒಂದೆಡೆ ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ತೊಂದರೆಗೀಡು ಮಾಡುವವು. ತಿಂಗಳುಗಳ ಕಾಲ ಮಗುವಿನಂತೆ ಜೋಪಾನ ಮಾಡಿ ಕನಸು ಕಟ್ಟಿ ಬೆಳೆಸಿದ ಬೆಳೆಯೂ ಇನ್ನೇನು ಕೈಸೇರಿ ಮಾರಾಟ ಮಾಡಿ ತಮ್ಮ ನಿರೀಕ್ಷೆಗಳನ್ನು ಕನಸುಗಳನ್ನು ನನಸು ಮಾಡಿಕೊಳ್ಳೋಣ ಎನ್ನುವಷ್ಟರಲ್ಲೇ, ಅನಾವೃಷ್ಟಿ ಇಲ್ಲವೇ ಅತಿವೃಷ್ಟಿಯಾಗಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಬೆಳೆದ ಬೆಳೆ ನೀರು ಪಾಲಾದಾಗ ಆಗುವ ನೋವು ನಿರಾಸೆ ದುಃಖ ಅವನಿಗಷ್ಟೇ ಗೊತ್ತಿರುತ್ತದೆ, ಇದು ಪ್ರಕೃತಿಯ ಹೊಡೆತವಾದರೆ ಇನ್ನೊಂದೆಡೆ ತಾವು ಬೆಳೆದ ಬೆಳೆಗೆ ನಿರ್ದಿಷ್ಟ ಬೆಂಬಲ ಬೆಲೆ ಇಲ್ಲದೆ ನಷ್ಟ ಅನುಭವಿಸುವ ಅವರ ಗೋಳು ನಿಜಕ್ಕೂ ಬೇಸರ ತರಿಸುತ್ತದೆ, ಇಲ್ಲಿ ಪ್ರಸ್ಥಾಪಿಸಲೇಬೇಕಾದ ವಿಚಾರವೆಂದರೆ ರೈತರಲ್ಲಿ ಎರಡು ವರ್ಗ ಇದೆ ಒಂದು ಮಳೆಯನ್ನೇ ನಂಬಿ ಬೆಳೆ ಬೆಳೆಯುವ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರು ಮತ್ತು ಮಳೆಯ ಮೇಲೆ ಅವಲಂಬಿತವಾಗದೆ ಕೃತಕ ವ್ಯೆವಸ್ಥೆ ಮಾಡಿಕೊಂಡ ದೊಡ್ಡ ಬೆಳೆಗಾರರು, ಇವರಲ್ಲಿ ಹೆಚ್ಚಿನ ತೊಂದರೆ ಅನುಭವಿಸುವವರು ಸಣ್ಣ ಮತ್ತು ಅತಿಸಣ್ಣ ಬಡ ಹಾಗೂ ಮಧ್ಯಮ ಬೆಳೆಗಾರು ಹಾಗಾಗಿ ಸರ್ಕಾರಗಳು ಈ ವರ್ಗದವರ ಬೆನ್ನಿಗೆ ನಿಲ್ಲಬೇಕಿದೆ, ಈಗಾಗಲೇ ಸರ್ಕಾರ ರೈತರಿಗೆ ಆನೂಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರೋತ್ಸಾಹ ಕೊಡುತ್ತಿದ್ದರೂ ಕೂಡ ಇನ್ನೂ ಹಲವು ಯೋಜನೆಗಳ ಮೂಲಕ ರೈತರಿಗೆ ನೆರವಾಗಬೇಕಾದ ಅವಶ್ಯಕತೆ ಇದೆ. ಬಡ ಹಾಗು ಮಧ್ಯಮ ವರ್ಗದ ರೈತರಿಗೆ ವರ್ಷವಿಡೀ ಒಂದಿಲ್ಲೊಂದುಸಮಸ್ಯೆಗಳು ಕಟ್ಟಿಟ್ಟ ಬುತ್ತಿ ರೈತರ ಕೆಲವೊಂದು ಸಮಸ್ಯೆಗಳನ್ನು ಸರ್ಕಾರ ಯುಕ್ತಿಯಿಂದ ಮಾಡಬೇಕಾಗುತ್ತದೆ. ವಿದ್ಯುತ್ ಹಾಗು ನೀರಿನ ಸಮಸ್ಯೆಗಳು ಪ್ರತಿ ವರ್ಷವೂ ಸಾಮಾನ್ಯ. ಹಾಗಾಗಿ ಹಲವು ಉಚಿತ ಯೋಜನೆಗಳ ಜೊತೆಗೆ ಸಾಲಮನ್ನಾ , ಬಡ್ಡಿಮನ್ನಾದಂಥ ಸೌಲಭ್ಯಗಳ ಬದಲು ಪ್ರತಿ ಗ್ರಾಮಗಳಿಗೆ ಶಾಶ್ವತವಾಗಿ ಮಳೆ, ಬಿಸಿಲು, ಚಳಿಗಾಲಕ್ಕೆ ಬೆಳೆದ ಬೆಳೆಗಳು ನಷ್ಟವಾಗದಂತ ವ್ಯವಸ್ಥಿತ ಉಗ್ರಾಣಗಳ ವ್ಯೆವಸ್ಥೆ,ಬಿತ್ತನೆ ಬೀಜಗಳ ಉಚಿತ ವಿತರಣೆ ಹಾಗೂ ನೀರು (ಕೆರೆ,ಬಾವಿ) ಹಾಗು ವಿದ್ಯುತ್ (ಸೋಲಾರ್) ನ ಪರ್ಯಾಯ ವ್ಯವಸ್ಥೆ ಮಾಡಿ ಅದರ ನಿರ್ವಹಣೆಯನ್ನು ಸ್ಥಳೀಯ ಆಡಳಿತಕ್ಕೆ ಬಿಡಬೇಕು ಆಗ ರೈತರ ಆತ್ಮಹತ್ಯೆಯಂತಹ ಅತೀ ಕೆಟ್ಟ ಘಟನೆಗಳಿಗೆ ಕಡಿವಾಣ ಹಾಕಬಹುದು, ಆಗ ರೈತರಿಗೆ ಒಂದು ರೀತಿಯ ಬಲದ ಜೊತೆಗೆ ಭದ್ರತೆಯು ಸಿಗುತ್ತದೆ.ಇಂದು ನಮ್ಮಲ್ಲಿ ಅನೇಕರಿಗೆ ಕೃಷಿ, ರೈತ ಎಂದರೆ ಏನೋ ಒಂದು ತಾತ್ಸಾರ ನಾವು ಓದಿದವರು ಅವರು ಏನೂ ಅರಿಯದವರು ಎಂಬ ಒಣ ಹಮ್ಮು, ಆದರೆ ಒಂದು ಬಾರಿ ಯೋಚಿಸಿ ನೋಡಿ ರೈತರಿಲ್ಲದ ಸಮಾಜ ಉಳಿಯಲು ಸಾಧ್ಯವಿಲ್ಲ, ಹಾಗೆಯೇ ಬಹಳಷ್ಟನ್ನು ಓದಿ, ಅನೇಕ ಪದವಿಗಳಿದ್ದೂ ಕೃಷಿಯತ್ತ ಮುಖಮಾಡಿ ಜೀವನ ನಡೆಸುವ ಅದೆಷ್ಟು ಜನರ ಉದಾಹರಣೆಗಳೂ ಕೂಡ ಇವೆ,ರೈತರು ಹಳ್ಳಿಯ ಮುಗ್ಧರೆ ಹೊರತು ಆದರೆ ಅಜ್ಞಾನಿಗಳಲ್ಲ. ಅವರುಗಳು ಇನ್ನೂ ಮಾನವೀಯತೆ ಕರುಣೆ, ನಿಷ್ಠೆ ಮತ್ತು ಶ್ರಮ ಜೀವನದಲ್ಲಿ ನಂಬಿಕೆ ಇರಿಸಿ ಬದುಕುತ್ತಿದ್ದಾರೆ. ಇವರ ಮುಗ್ದತೆಯನ್ನು ಮಧ್ಯವರ್ತಿಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಬಡ ರೈತರು ಅವಶ್ಯವಾಗಿ ಶಿಕ್ಷಣವಂತ ರಾಗಬೇಕು ಕೃಷಿಯ ಸವಲತ್ತುಗಳು ಹಾಗೂ ಆದುನಿಕ ಕೃಷಿಯ ಬಗ್ಗೆ ಹಾಗೂ ಮಾರುಕಟ್ಟೆಗಳ ಸೌಲಭ್ಯ ಲಾಭ ನಷ್ಟಗಳ ಬಗ್ಗೆ ಜ್ಞಾನವಂತರಗಬೇಕು.ರೈತರ ದಿವಸದಂದು ಮಾತ್ರವಲ್ಲದೆ ರೈತನ ಶ್ರಮದ ಬಗ್ಗೆ ಸದಾ ಎಲ್ಲರಿಗೂ ಗೌರವವಿರಬೇಕು, ರೈತರ ಎಲ್ಲಾ ಸಂಕಷ್ಟಗಳನ್ನು ಮನಗಂಡು ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆನ್ನಲುಬಾಗಿ ನಿಲ್ಲಬೇಕಿದೆ, ಅನ್ನದಾತ ಸುಖೀಭವ ಎಂಬ ಹಾರೈಕೆಯಂತೆ ಅನ್ನದಾತ ಸದಾ ಕಾಲಕ್ಕೂ ಸುಖವಾಗಿರಲಿ !ಗೀತಾಂಜಲಿ ಎನ್,ಎಮ್
23 Dec '24
3 ನಿಮಿಷದ ಓದು
ಸಾಮಾಜಿಕ ವ್ಯಾಖ್ಯಾನ
ದೇಶದ ಜೀವಾಳ ರೈತ
ಮಣ್ಣಿನ ಪೋಷಣೆ ಪ್ರತಿಯೊಬ್ಬರ ಹೊಣೆ
ಇಂದು ಡಿಸೆಂಬರ್ 5, ಈ ದಿನವನ್ನು ವಿಶ್ವ ಮಣ್ಣಿನ ದಿನವನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ,ಇದರ ಉದ್ದೇಶ ಮಣ್ಣಿನ ಮಹತ್ವವನ್ನು ತಿಳಿಸುವದು ಮತ್ತು ಮಣ್ಣಿನ ಪೋಷಕಾಂಶಗಳ ಅಗತ್ಯಯತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಈ ದಿನವನ್ನು ಮಿಸಲಾಗಿಡಲಾಗಿದೆ.! ಮಣ್ಣಿನ ವಿಜ್ಞಾನಗಳ ಅಂತರಾಷ್ಟ್ರೀಯ ಒಕ್ಕೂಟ ಐಯುಎಸ್‌ಎಸ್‌ 2002 ರಲ್ಲಿ ವಿಶ್ವ ಮಣ್ಣಿನ ದಿನ ಆಚರಣೆಗೆ ಶಿಫಾರಸು ಮಾಡಿತ್ತು. ಥಾಯ್ಲೆಂಡ್‌ ನೇತೃತ್ವದಲ್ಲಿ ಎಫ್‌ಎಒ ಸಹಾಯದೊಂದಿಗೆ ವಿಶ್ವ ಮಣ್ಣಿನದಿನ ಆಚರಣೆ ಆರಂಭವಾಯಿತು 2013 ಜೂನ್‌ನಲ್ಲಿ ಎಫ್‌ಎಒ ಒಕ್ಕೂಟವು ಈ ದಿನಾಚರಣೆಗೆ ಬೆಂಬಲ ಸೂಚಿಸಿತು.ನಂತರ ವಿಶ್ವಸಂಸ್ಥೆಯ 68ನೇ ಸಭೆಯಲ್ಲಿ ವಿಶ್ವ ಮಣ್ಣಿನ ದಿನವನ್ನು ಅಧಿಕೃತವಾಗಿ ಅಂಗೀಕರಿಸುವಂತೆ ಮನವಿ ಮಾಡಲಾಯಿತು ಈ ಮನವಿಯನ್ನು ಪರಿಗಣಿಸಿದ ವಿಶ್ವಸಂಸ್ಥೆ, 2013 ರಲ್ಲಿ ಡಿಸೆಂಬರ್ 5ರಂದು ವಿಶ್ವ ಮಣ್ಣಿನ ದಿನ ಆಚರಣೆಗೆ ಸಮ್ಮತಿ ಸೂಚಿಸಿತು. ನಂತರ 2014 ಡಿಸೆಂಬರ್ 5 ರಂದು ಮೊದಲ ಬಾರಿಗೆ ವಿಶ್ವ ಮಣ್ಣಿನ ದಿನಾಚರಣೆ ಅಧಿಕೃತವಾಗಿ ಆಚರಣೆಯಾಯಿತು !ಮಣ್ಣಿನ ಸಾಮರ್ಥ್ಯ‌ವೇ ಜೀವ ಸೃಷ್ಟಿಗೆ ಕಾರಣವಾಗಿದ್ದರೂ ಇಂದು ಮಣ್ಣಿನ ಕಳಪೆ ಸ್ಥಿತಿಯಿಂದಾಗಿ ಮಣ್ಣಿನ ಸವೆತ ತೀವ್ರವಾಗಿ ಆಗುತ್ತಿದ್ದು ಜಗತ್ತಿನಾದ್ಯಂತ ಗಂಭೀರ ಸಮಸ್ಯೆಯಾಗಿ ಕಾಡುತ್ತಿದೆ, ನಮ್ಮ ಬದುಕಿನ ಎಲ್ಲಾ ಸ್ತರಗಳಿಗೂ ಪೂರಕವಾಗಿರುವ ಮಣ್ಣು ಇಂದು ಹಲವು ರೀತಿಯ ಮಾಲಿನ್ಯಗಳಿಂದಾಗಿ ಕಲುಷಿತಗೊಳ್ಳುತ್ತಿದೆ.ಮತ್ತು ಅದರ ಪೋಷಕಾಂಶ ಮಟ್ಟ ಕಡಿಮೆಯಾಗುತ್ತಿದೆ. ಇದಕ್ಕೆ ಮೂಲ ಕಾರಣ ಮನುಷ್ಯನ ದುರಾಸೆ.ಮನುಷ್ಯನ ಜೀವನಕ್ಕೆ ಮಣ್ಣು ಬಹಳಷ್ಟು ಅನಿವಾರ್ಯ,ನಮ್ಮ ಆಹಾರದ ಮುಖ್ಯ ಮೂಲವೇ ಮಣ್ಣು ಹಾಗಾಗಿ"ಮಣ್ಣಿನ ಪೋಷಣೆ ಪ್ರತಿಯೊಬ್ಬರ ಹೊಣೆ" ಮಣ್ಣು ರೈತನ ಜೀವನಾಡಿಯಾಗಿರುವುದರಿಂದ ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವ ರೈತನಿಗೆ ಚನ್ನಾಗಿ ತಿಳಿದಿರುತ್ತದೆ ಪೋಷಕಾಂಶ ದಿಂದ ಕೂಡಿದ ಮಣ್ಣು ನಮ್ಮ ಜೀವನಕ್ಕೆ ಅತ್ಯವಶ್ಯಕವಾಗಿ ಬೇಕು, ಮನುಷ್ಯನಿಗೆ ಹೇಗೆ ಪೋಷಕಾಂಶದ ಅಗತ್ಯವಿರುತ್ತದೆಯೋ ಹಾಗೆಯೇ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ.ಆದರೆ ಇದನ್ನು ಮನುಕುಲ ಅರ್ಥಮಾಡಿ ಕೊಳ್ಳುತ್ತಿದೆಯೇ ಎಂಬುದನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗುತ್ತದೆ, ಕಾರಣ ನಾವು ಮಣ್ಣನ್ನು ಎಷ್ಟು ಸಂರಕ್ಷಿಸುತ್ತಿದ್ದೇವೆ ಎಷ್ಟು ಆರೋಗ್ಯವಾಗಿ ಇಡುತ್ತಿದ್ದೇವೆಂಬುದನ್ನು ನೋಡಿದಾಗ ಖಂಡಿತ ಆತಂಕವಾಗುತ್ತದೆ ಮಣ್ಣು ಭೂಮಿಯ ಮೇಲ್ಮೈ ಪದರವಾಗಿದ್ದು, ಸಾವಯವ ಮತ್ತು ಅಜೈವಿಕ ವಸ್ತುಗಳನ್ನು ಒಳಗೊಂಡಿದೆ. ಭೂಮಿಯ ಮೇಲೆ ಪ್ರತೀ ಸಸ್ಯಗಳ ಬೆಳವಣಿಗೆಯ ಜೊತೆ ನಾವು ತಿನ್ನುವ ಆಹಾರ ಬೆಳೆಯಲು ಅಗತ್ಯವಾಗಿ ಫಲಭರಿತ ಮಣ್ಣು ಬೇಕೇ ಬೇಕು ಅಂದಮೇಲೆ ನಾವು ಮಣ್ಣಿನ ಫಲವತ್ತತೆಯನ್ನು ಕಾಪಾಡುವುದು ಎಷ್ಟು ಮುಖ್ಯವಲ್ಲವೇ? ಆದರೆ ಇಂದು ಆಗುತ್ತಿರುವ ಬೆಳವಣಿಗೆಗ ಳನ್ನು ನೋಡಿದಾಗ ನಿಜಕ್ಕೂ ಆತಂಕವಾಗು ತ್ತದೆ, ಸ್ವಾರ್ಥಿ ಮನುಷ್ಯ ತನ್ನ ದುರಾಸೆಗಾಗಿ ಬೆಳೆಯುವ ಬೆಳೆಯ ಹೆಚ್ಚಿನ ಇಳುವರಿಗಾಗಿ ಅತಿಯಾದ ರಾಸಾಯನಿಕ ಯುಕ್ತ ಗೊಬ್ಬರವನ್ನು ಬಳಸುತ್ತಿರುವುದರ ಫಲ ಮಣ್ಣು ತನ್ನ ಮೂಲ ರೂಪವನ್ನು ಕಳೆದುಕೊಳ್ಳುತ್ತಿದೆ ಇದು ಸಾಲದು ಎಂಬಂತೆ ಕರಗಲು ಸಾವಿರಾರು ವರುಷ ತೆಗೆದುಕೊಳ್ಳುವ ಪ್ಲ್ಯಾಸ್ಟಿಕ್ ಎಂಬ ನಂಜನ್ನು ನಿತ್ಯವೂ ಭೂಮಿಗೆ ಉಣ್ಣಿಸುತ್ತಿರುವ ಪ್ರತಿಫಲ ಮಣ್ಣು ತನ್ನ ಫಲವತ್ತತೆಯನ್ನೇ ಕಳೆದು ಕೊಳ್ಳುತ್ತಿದೆ,ಈ ಪ್ಲಾಸ್ಟಿಕ್ ಆನ್ನು ಮನುಷ್ಯ ತನ್ನ ಅವನತಿ ಗಾಗಿಯೇ ಕಂಡುಹಿಡಿದಂತಿದೆ ಇದರಿಂದಾಗಿಯೇ ಹತ್ತು ಹಲವು ಆರೋಗ್ಯ ಸಮಸ್ಯೆಗಳು ಪ್ರತಿನಿತ್ಯವೂ ಹೆಚ್ಚುತ್ತಿರುವುದು, ಹೀಗೆಯೇ ಮುಂದುವರೆದರೆ ನಮ್ಮ ಮುಂದಿನ ಪೀಳಿಗೆಯವರ ಆರೋಗ್ಯದ ಸ್ಥಿತಿ ಏನಾಗಬಹುದು ಅಲ್ಲವೇ? ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು ಪ್ರತಿಯೊಬ್ಬರು ಪಣತೊಡಬೇಕಿದೆ. ಪ್ಲಾಸ್ಟಿಕ್ ಬಳಕೆಯನ್ನು ಅಗತ್ಯವಾಗಿ ನಿಲ್ಲಿಸಿ, ಪರಿಸರ ಸ್ನೇಹಿ ವಸ್ತುಗಳನ್ನು ಹೆಚ್ಚಾಗಿ ಬಳಕೆ ಮಾಡಬೇಕು ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡವುದನ್ನು ತಡೆಗಟ್ಟಬೇಕು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ನಿಲ್ಲುಸಬೇಕು ಮತ್ತು ಜನರೂ ಸಹ ಅವಶ್ಯಕವಾಗಿ ಜಾಗೃತರಾಗಬೇಕು ಇಂದಿನ ಯಾಂತ್ರಿಕ ಹಾಗೂ ತಾಂತ್ರಿಕ ಮಾಲಿನ್ಯ ತುಂಬಿದ ಯುಗದಲ್ಲಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಉಳಿಸಿಕೊಳ್ಳುವುದು ಒಂದು ಸವಾಲೇ ಸರಿ,ತಾಂತ್ರಿಕತೆ ಎಷ್ಟೇ ಮುಂದುವರೆದರು ನಾವು ತಿನ್ನುವ ಅನ್ನವನ್ನು ಕಂಪ್ಯೂಟರ್ನಿಂದ ಬೆಳೆಯಲಾಗುವುದಿಲ್ಲ, ತಿನ್ನುವ ಅನ್ನವನ್ನು ಬೆಳೆಯಲು ಮಣ್ಣೇ ಬೇಕು, ಇದನ್ನು ಅರಿತರಷ್ಟೇ ಮಣ್ಣಿನ ಫಲವತ್ತತೆಯ ಉಳಿವಿಗೆ ಕಾರ್ಯತತ್ಪ ರರಾಗಬಹುದು, ಸೃಷ್ಟಿಕರ್ತ ಸೃಷ್ಟಿಯಲ್ಲಿ ಮಾನವನ ಬದುಕಿಗೆ ಅವಶ್ಯಕವಾದ ಪ್ರತಿಯೊಂದನ್ನು ಆರೋಗ್ಯ ಕರವಾಗಿ ಹಾಗೂ ಹೇರಳವಾಗಿ ಕೊಟ್ಟಿದ್ದಾನೆ, ಆದರೆ ಅವಿವೇಕಿ ಮಾನವ ಮಾತ್ರ ಅದನ್ನು ಉಳಿಸಿ ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸುವ ಬದಲು ತನ್ನ ಸ್ವಾರ್ಥದಿಂದ ಎಲ್ಲವನ್ನು ತಾನೇ ಹಾಳು ಮಾಡಿಕೊಳ್ಳುತ್ತಿದ್ದಾನೆ .ಮುಂದೆ ಮನುಕುಲದ ಭವಿಷ್ಯದ ಉಳಿವಿನ ದೃಷ್ಟಿಯಿಂದ ನೋಡಿದಾಗ ಸರ್ಕಾರ ಮಣ್ಣಿನ ಫಲವತ್ತತೆಗೆ ಒತ್ತು ಕೊಟ್ಟು ಹೆಚ್ಚಿನ ಕಾಳಜಿ ಹಾಗೂ ಅರಿವನ್ನು ಪ್ರತಿಯೊಬ್ಬರಲ್ಲಿ ಮೂಡಿಸುವಂತಹ ಕಾರ್ಯಗಳನ್ನು ಮಾಡಬೇಕು,ಮಾನವ ತನ್ನ ದುರಾಸೆಯಿಂದಾಗಿ ಪ್ರಕೃತಿಯ ಮೇಲೆ ನಿತ್ಯವೂ ನೆಡೆಸುತ್ತಿರುವ ಅತ್ಯಾಚಾರವನ್ನು ನಿಲ್ಲಿಸಿ ಮಣ್ಣಿನ ಮಹತ್ವವನ್ನು ತಿಳಿದು ತಾನೇ ಅರಿವು ಮೂಡಿಸಿಕೊಂಡು ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಫಲವತ್ತತೆಗಾಗಿ ಪಣತೊಟ್ಟರೆ ಮಾತ್ರವೇ ನಮ್ಮ ಮುಂದಿನ ಪೀಳಿಗೆ ಆರೋಗ್ಯಕರವಾಗಿ ಇರಲು ಸಾಧ್ಯ ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕು.!ಗೀತಾಂಜಲಿ ಎನ್,ಎಮ್
05 Dec '24
3 ನಿಮಿಷದ ಓದು
ಪರಿಸರ
ಮಣ್ಣಿನ ಪೋಷಣೆ ಪ್ರತಿಯೊಬ್ಬರ ಹೊಣೆ
ಯುನಿವರ್ಸಲ್ ಹೆಲ್ತ್ ಕವರೇಜ್ ಡೇ.
ಮನುಷ್ಯನಿಗೆ ಆರೋಗ್ಯವೆನ್ನುವುದು ಬಹಳ ಪ್ರಮುಖವಾದ ವಿಷಯ, ಉತ್ತಮ ಆರೋಗ್ಯವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಹಾಗಾಗಿಯೇ ನಮ್ಮ ಹಿರಿಯರು "ಆರೋಗ್ಯವೇ ಭಾಗ್ಯ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಂಬಂದ ಪಟ್ಟಂತೆ ಜನ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ, ಇದರಲ್ಲಿ ಒಂದು ಇಂದು ಆಚರಿಸುತ್ತಿರುವ ಯುನಿವರ್ಸಲ್ ಹೆಲ್ತ್ ಕವರೇಜ್ ಡೇ. ಈ ದಿನ ಪ್ರತಿಯೊಬ್ಬರಿಗೂ ಆರೋಗ್ಯದ ಸೌಲಭ್ಯಗಳನ್ನು ರಕ್ಷಣಾ ವ್ಯವಸ್ಥೆಯ ಅಗತ್ಯವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಆರ್ಥಿಕ ಸಮಸ್ಯೆಗಳನ್ನು ಎದುರಿಸದೆ ಅಗತ್ಯವಿರುವಾಗ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದಕ್ಕಾಗಿಯೇ ಡಿಸೆಂಬರ್ 12 ರಂದು ಯುನಿವರ್ಸಲ್ ಹೆಲ್ತ್ ಕವರೇಜ್ ದಿನವನ್ನು ಆಚರಿಸಲಾಗುತ್ತದೆ.ಈ ಆಚರಣೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವಲ್ಲಿ ಬಲವಾದ ಮತ್ತು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲರಿಗೂ ಆರೋಗ್ಯದ ಕಡೆಗೆ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಪ್ರಮುಖ ಅಂಶಗಳನ್ನು ಈ ಆಚರಣೆ ಹೊಂದಿದೆ,ಕೈಗೆಟಕುವ ದರದಲ್ಲಿ ಔಷಧಿ ಮತ್ತು ಚಿಕಿತ್ಸೆ ಲಭ್ಯವಾಗುವುದು ಪ್ರತಿಯೊಬ್ಬರ ಮೂಲಭೂತ ಮಾನವ ಹಕ್ಕು. ಎಲ್ಲಾ ಮಾನವರು ಆರೋಗ್ಯ ರಕ್ಷಣೆಯ ಹಕ್ಕನ್ನು ಹೊಂದಿದ್ದಾರೆ ಎಂಬ ಕಲ್ಪನೆಯನ್ನು ಮುಂದಿಡಲು ಈ ದಿನ ಮೀಸಲಾಗಿದೆ. ಎಲ್ಲಾ ರಾಷ್ಟ್ರಗಳು ತಮ್ಮ ನಾಗರಿಕರನ್ನು ಸಮಾನವಾಗಿ ಬೆಂಬಲಿಸಲು ಮತ್ತು ಆರೋಗ್ಯ ರಕ್ಷಣೆ ಮೂಲಭೂತ ಮಾನವ ಹಕ್ಕಾಗಿರುವುದರಿಂದ ಪ್ರತಿಯೊಬ್ಬರಿಗೂ ಜಾಗರೂಕರಾಗಬೇಕುಇದು ಮಾನವಹಕ್ಕುಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ವಿಶ್ವಸಂಸ್ಥೆಯ ಯೋಜನೆಗಳಲ್ಲಿ ಒಂದಾಗಿದೆ. ಹಸಿವು ಮುಕ್ತತೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಯೋಗ್ಯ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಕೈಗಾರಿಕೆ,ನಾವೀನ್ಯತೆ ಮತ್ತು ಮೂಲಸೌಕರ್ಯ ಗಳನ್ನು ಪ್ರತಿ ಯೊಬ್ಬರಿಗೂ ತಲುಪಿಸುವ ಪ್ರಮುಖ ಉದ್ದೇಶಗಳನ್ನು ಹೊಂದಲಾಗಿದೆ ಯುನಿವರ್ಸಲ್ ಹೆಲ್ತ್ ಕವರೇಜ್ ಎನ್ನುವುದು ಆರ್ಥಿಕ ಸಂಕಷ್ಟಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೆ ವೈದ್ಯಕೀಯ ಸೇವೆಗಳನ್ನು ಪ್ರವೇಶಿಸುವಲ್ಲಿ ಸಮಾನತೆಯನ್ನು ಖಾತ್ರಿಪಡಿಸುವ ಅಡಿಪಾಯದ ಮೇಲೆ ನಿರ್ಮಿಸಲಾದ ಪರಿಕಲ್ಪನೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು, ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ಯಾವಾಗ ಮತ್ತು ಎಲ್ಲಿ ಬೇಕಾದರೂ ವೈದ್ಯಕೀಯ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಇದು ಸೂಚಿಸುತ್ತದೆ. ಇಂದು ಜಗತ್ತಿನಾದ್ಯಂತ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆಯ ಕೊರತೆ ಇರುವ ಲಕ್ಷಾಂತರ ಜನರಿದ್ದಾರೆ.ಈ ಬಗ್ಗೆ"ಆರೋಗ್ಯ ಮಾನವ ಹಕ್ಕು" ಈ ದಿನವನ್ನು ಆರ್ಥಿಕ ಸಂಕಷ್ಟವನ್ನು ಎದುರಿಸದೆ ಜನರಿಗೆ ಅಗತ್ಯವಿರುವ ಮತ್ತು ಅರ್ಹವಾದ ಗುಣಮಟ್ಟದ ಆರೋಗ್ಯವನ್ನು ನಮಗೆ ನೆನಪಿಸುತ್ತದೆ. ಈ ಯುನಿವರ್ಸಲ್ ಹೆಲ್ತ್ ಕವರೇಜ್ ದಿನದ ಮಹತ್ವಗಳೆಂದರೆ, ಸಾರ್ವತ್ರಿಕ ಆರೋಗ್ಯ ರಕ್ಷಣೆಯು ಹಣಕಾಸಿನ ನಿರ್ಬಂಧಗಳನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳ ಪೂರ್ಣ ಶ್ರೇಣಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು ಹಾಗೂ ಪ್ರಮುಖ ಆರೋಗ್ಯ ಸೇವೆಗಳು,ಚಿಕಿತ್ಸೆ, ಪುನರ್ವಸತಿ ಮತ್ತು ಉಪಶಮನದ ಆರೈಕೆಯನ್ನು ಒಳಗೊಂಡಿದೆ, ಅಲ್ಲದೆ,ಆರೋಗ್ಯ ಪ್ರಚಾರ ರೋಗದ ಉಲ್ಬಣದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ ಸಾರ್ವತ್ರಿಕಆರೋಗ್ಯ ರಕ್ಷಣೆಯು ಮೂರು ಆಯಾಮಗಳನ್ನು.ಹೊಂದಿದೆ. ಜನಸಂಖ್ಯೆಯ ವ್ಯಾಪ್ತಿಗನುಗುಣವಾಗಿ ಅಂದರೆ ಇಕ್ವಿಟಿಗೆ ಲಿಂಕ್ ಮಾಡಲಾದ ಸೇವೆಗಳನ್ನು ಸ್ವೀಕರಿಸುವವರು (ಇಕ್ವೆಟಿ ಎಂದರೆ ಖಾಸಗಿ ಕಂಪನಿಗಳಿಗೆ ಹೂಡಿಕೆ) ಹಾಗೂ ಸೇವಾ ವ್ಯಾಪ್ತಿ ಅಂದರೆ ಯಾವ ಆರೋಗ್ಯ ಸೇವೆಗಳು ಲಭ್ಯವಿದೆ ಎಂಬುದರ ಜೊತೆಗೆ ಆರ್ಥಿಕ ಭದ್ರತೆಯ ಭರವಸೆ ಒದಗಿಸುವುದು ಅಂದರೆ ಆರೋಗ್ಯ ಸೇವೆಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಸಾರ್ವತ್ರಿಕ ಆರೋಗ್ಯ ರಕ್ಷಣೆಯು ಸಮಾನತೆ, ತಾರತಮ್ಯ ಮತ್ತು ಆರೋಗ್ಯದ ಹಕ್ಕುಗಳ ತತ್ವಗಳನ್ನು ಆಧರಿಸಿದೆ. ಅಲ್ಲದೆ UHC ಅಡಿಯಲ್ಲಿ ಸಮಾಜದ ಅತ್ಯಂತ ದುರ್ಬಲ ಜನರಿಗೆ ಎಲ್ಲಾ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ ಅಂಕಿ ಅಂಶಗಳ ಪ್ರಕಾರ ಕಳೆದ 20 ವರ್ಷಗಳಲ್ಲಿ ಆರ್ಥಿಕ ರಕ್ಷಣೆ ಹದಗೆಟ್ಟಿದೆ, ಸರಿ ಸುಮಾರು 2 ಶತಕೋಟಿ ಜನರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿ ದ್ದಾರೆ ಮತ್ತು 1.3 ಶತಕೋಟಿ ಜನರು ಆರೋಗ್ಯ ವೆಚ್ಚಗಳಿಂದ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಹಾಗಾಗಿ ಇದು ಅಗತ್ಯವಾಗಿ ಬದಲಾಗಬೇಕು ಈ ನಿಟ್ಟಿನಲ್ಲಿ UHC ಅಂತಾರಾಷ್ಟ್ರೀಯ ಯುನಿವರ್ಸಲ್ ಹೆಲ್ತ್ ಕವರೇಜ್ ಡೇ ಅನ್ನು ಮೊದಲ ಬಾರಿಗೆ ಡಿಸೆಂಬರ್ 12, 2012 ರಂದು ಆಚರಿಸಿತು, ವಿಶ್ವಸಂಸ್ಥೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಕೈಗೊಳ್ಳಲು ಪ್ರತಿ ದೇಶವನ್ನು ಪ್ರೋತ್ಸಾಹಿಸು ವ ನಿರ್ಣಯವನ್ನು ಅಂಗೀಕರಿಸಿತು.ಯಾವುದೇ ರೀತಿಯ ಆರ್ಥಿಕ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ಸಮಾನ ಮತ್ತು ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬೇಕು ಎಂಬ ನಂಬಿಕೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಈ ದಿನದಂದು ನಾವು ಎಲ್ಲರಿಗೂ ಆರೋಗ್ಯದಲ್ಲಿ ಹೂಡಿಕೆ ಮಾಡಲು ಮತ್ತು ಜನರನ್ನು ರಕ್ಷಿಸಲು ಸರ್ಕಾರಗಳಿಗೆ ಕರೆನೀಡುವುದ _ರೊಂದಿಗೆ ಅತ್ಯಂತ ದುರ್ಬಲರು ತಮ್ಮ ಬಡತನದ ಸಲುವಾಗಿ ಆರೋಗ್ಯ ವೆಚ್ಚದಿಂದ ಮುಕ್ತರಾಗಬೇಕು ಯುನಿವರ್ಸಲ್ ಹೆಲ್ತ್ ಕವರೇಜ್ ನ ಗುರಿಯು ಜಗತ್ತು ಶ್ರೀಮಂತವಾಗಿರು ವುದರಿಂದ ಹೆಚ್ಚು ಸಾಧಿಸ ಬಹುದಾಗಿದೆ ಇದರಿಂದ ಆರೋಗ್ಯ ಸೇವೆಗಳು ಮತ್ತು ತಂತ್ರಜ್ಞಾನಗಳಿಗೆ ಹೆಚ್ಚಿನ ಪ್ರವೇಶಕ್ಕೆ ದಾರಿಯಾಗುತ್ತದೆ, ಪ್ರತಿಯೊಬ್ಬ ವ್ಯಕ್ತಿಯು 'ಆರೋಗ್ಯದ ಮಾನವ ಹಕ್ಕಿನಿಂದ'ಪ್ರಯೋಜನ ಹಾಗೂ ಸೌಲಭ್ಯಗಳನ್ನು ಪಡೆಯುವುದನ್ನು ಹಾಗೂ ಸಿಗುವ ಸೌಲಭ್ಯಗಳ ಮಾಹಿತಿಯನ್ನು ತಿಳಿದುಕೊಂಡು ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮಹತ್ತರ ಜವಾಬ್ದಾರಿಯನ್ನು ನಮ್ಮ ಸರ್ಕಾರಗಳು ಹಾಗೂ ಜನನಾಯಕರು ಮಾಡಬೇಕು. ಇದಕ್ಕಾಗಿ ನಾವು ನಮ್ಮ ರಾಜಕೀಯ ನಾಯಕರನ್ನು ಸರಿಯಾಗಿ ಆಯ್ಕೆ ಮಾಡಬೇಕು, ಆರೋಗ್ಯವೇ ನಿಜವಾದ ಸಂಪತ್ತು ಇದನ್ನು ಅರಿತು ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಆರೋಗ್ಯದ ಮಾನವ ಹಕ್ಕಿನಿಂದ' ಸಿಗುವ ಪ್ರಯೋಜನ ಹಾಗೂ ಸೌಲಭ್ಯಗಳನ್ನು ಅರಿತು ಸರಿಯಾಗಿ ಬಳಸಿಕೊಳ್ಳೋಣ.!ಗೀತಾಂಜಲಿ ಎನ್, ಎಮ್
ಯುನಿವರ್ಸಲ್ ಹೆಲ್ತ್ ಕವರೇಜ್ ಡೇ.

ಸಾಮಾಜಿಕ ಮಾಧ್ಯಮಗಳಲ್ಲಿ ಫಾಲೋ ಮಾಡಿ