ನಮ್ಮ ದೇಶದ ರಾಷ್ಟ್ರೀಯ ಪ್ರಾಣಿ ಆಗಿರುವ ಹುಲಿ ಗಂಭೀರತೆ ಮತ್ತು ಭವ್ಯತೆಯ ದ್ಯೋತಕವಾಗಿದೆ ! ಅರಣ್ಯ ಸಂಪತ್ತು ಹಾಗೂ ವನ್ಯಜೀವಿಗಳ ಮಹತ್ವದ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಹುಲಿಗಳು ನಮ್ಮ ನಡುವೆ ಇರುವ ವಿಶಿಷ್ಟ ಪ್ರಾಣಿ ಹುಲಿ ಎಂದೊಡನೆ ನಮ್ಮೆಲ್ಲರ ಮನಸ್ಸು ಒಮ್ಮೆಗೆ ಝಲ್ಲೆನ್ನಿಸುತ್ತದೆ ಅಲ್ಲದೆ ಪ್ರತಿಯೊಬ್ಬರೂ ಹುಲಿಯನ್ನು ಒಮ್ಮೆಯಾದರು ಕಾಡಿನಲ್ಲಿ ನೋಡಬೇಕು ಎಂದು ಬಯಸುತ್ತಾರೆ ಅಲ್ಲದೆ ಹುಲಿಯ ಘರ್ಜನೆಯು ಸಹ ಒಂದು ರೀತಿಯ ವಿಭಿನ್ನ ಅನುಭವ ನೀಡುತ್ತದೆ ಅಷ್ಟರ ಮಟ್ಟಿಗೆ ಹುಲಿ ನಮ್ಮನ್ನು ಆಕರ್ಷಿಸುವ ಜೀವಿ. ಆದರೆ ಇತ್ತಿಚಿನ ದಿನಗಳಲ್ಲಿ ಈ ಹುಲಿಗಳ ಸತತಿಯು ಅಳುವಿನಂಚಿನತ್ತ ಸಾಗುತ್ತಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ ಈ ನಿಟ್ಟಿನಲ್ಲಿ ಕ್ಷೀಣಿಸುತ್ತಿರುವ ಹುಲಿಗಳ ಸಂಖ್ಯೆಯ ಕುರಿತಾಗಿ ಜನ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 29 ನ್ನು ಅಂತರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದ ಮೂಲ ಉದ್ದೇಶ ದಿನೇ ದಿನೇ ಅಳಿವಿನತ್ತ ಸಾಗುತ್ತಿರುವ ಹುಲಿ ಸಂಕುಲನವನ್ನು ಹೇಗೆ ಉಳಿಸಬೇಕು ಇರುವ ಸಂತತಿಯನ್ನು ಹೇಗೆ ರಕ್ಷಿಸಬೇಕು ಹುಲಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಹೇಗೆ ಕಾರ್ಯತತ್ಪರ ರಾಗಬೇಕು ಮತ್ತು ಇಳಿಮುಖವಾಗುತ್ತಿರುವ ಹುಲಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೇಗೆ ಜನಜಾಗೃತಿ ಮೂಡಿಸುವುದು ಮತ್ತು ಹುಲಿಗಳ ಉಳಿಯುವಿಕೆಯನ್ನು ಹೇಗೆ ಉತ್ತೇಜಿಸುವುದು ಎಂಬುದು ಈ ಆಚರಣೆಯ ಪ್ರಮುಖ ಉದ್ದೇಶವಾಗಿದೆ. ಹುಲಿ ದಿನವನ್ನು 2010 ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಶೃಂಗಸಭೆಯಲ್ಲಿ ನಿರ್ದರಿಸಲಾಯಿತು ಈ ಶೃಂಗಸಭೆಯಲ್ಲಿ ಹುಲಿಗಳನ್ನು ಹೊಂದಿರುವ ದೇಶಗಳ ಸರ್ಕಾರಗಳು 2020 ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣ ಗೊಳಿಸುವುದಾಗಿ ಪ್ರತಿಜ್ಞೆ ಮಾಡಿದವು.ಈ ನಿಟ್ಟಿನಲ್ಲಿ ಸರ್ಕಾರಗಳು ಹುಲಿಸಂರಕ್ಷಣೆ ಕುರಿತು ಚರ್ಚೆ ಉಪನ್ಯಾಸ ಜಾಥಾ,ವಿಚಾರ ಸಂಕಿರಣ,ಛಾಯಚಿತ್ರ ಪ್ರದರ್ಶನದ ಮೂಲಕ ಹುಲಿಗಳನ್ನು ಭೇಟೆಯಾಡದಂತೆ ಹುಲಿಗಳ ರಕ್ಷಣೆಯ ಕುರಿತಾದ ಜನ ಜಾಗೃತಿ ಕಾರ್ಯಕ್ರಮ ಗಳನ್ನು ನಡೆಸಲಾಗುತ್ತಿದೆ. ವಿಶ್ವದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶ ನಮ್ಮ ಭಾರತವಾಗಿದೆ ಎಂಬುದು ಹೆಮ್ಮೆಯ ವಿಚಾರ ಭಾರತದಲ್ಲಿ ಸುಮಾರು 3,000 ಕ್ಕಿಂತಲೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು ಭಾರತವು ವಿಶ್ವದ ಶೇಕಡಾ 70 ಕ್ಕಿಂತ ಹೆಚ್ಚು ಹುಲಿಗಳ ನೆಲೆಯಾಗಿದೆ ಎಂಬುದು ಸಂತಸದ ವಿಷಯ.ಭಾರತದ ನಂತರ ರಷ್ಯಾ,ನೇಪಾಳ ಇಂಡೋನೇಷ್ಯಾ, ಮತ್ತು ಥೈಲ್ಯಾಂಡ್ ದೇಶಗಳು ಸ್ಥಾನ ಪಡೆದಿವೆ. ಹುಲಿ ಸಂರಕ್ಷಣೆ ವಿಚಾರದಲ್ಲಿ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಗಮನ ನೀಡುತ್ತಿದೆ ಏಷಿಯಾದ ಹುಲಿಗಳ ರಕ್ಷಣೆ, ಅದರಲ್ಲೂ ವೈಭವದ ಸಂಕೇತದಂತೆಯೇ ಇರುವ ರಾಯಲ್ ಬೆಂಗಾಲ್ ಹುಲಿಗಳನ್ನು ಮುಂದಿನ ಪೀಳಿಗೆಗೂ ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಈ ಹುಲಿಗಳ ಸಂತತಿ ನಶಿಸುತ್ತಿರುವುದಕ್ಕೆ ಹಲವು ಕಾರಣಗಳಿವೆ ಅಕ್ರಮವಾಗಿ ನಡೆಸುತ್ತಿರುವ ವನ್ಯಜೀವಿಗಳ ವ್ಯಾಪಾರ, ಮನುಷ್ಯರ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಹಾಗೂ ಕಾಡಿನ ನಿರಂತರ ನಾಶದಿಂದಾಗಿ ಹುಲಿಗಳ ಸಂಖ್ಯೆ ದಿನದಿಂದ ದಿನಕ್ಕೆಇಳಿಮುಖವಾಗುತ್ತಿದೆ ಅಲ್ಲದೆ ಬೇಟೆಯಾಡುವುದು ಸಾಂಪ್ರದಾಯಿಕ ಔಷಧ ಮತ್ತು ಅಲಂಕಾರಿಕ ವಸ್ತುಗಳ ಶ್ರೀಮಂತ ಮಾರುಕಟ್ಟೆಯು ಹುಲಿಗಳನ್ನು ಕೊಲ್ಲುವುದನ್ನು ಪ್ರೇರಿಸುತ್ತಿದೆ ಎಂದೇ ಹೇಳಬಹುದು, ಅಲ್ಲದೆ ಕೃಷಿ ಚಟುವಟಿಕೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ನಿರಂತರ ಕಾಡುಗಳ ನಾಶ ಮಾನವರು ಮತ್ತು ಜಾನುವಾರುಗಳ ಮೇಲೆ ದಾಳಿಯಿಂದ ಉಂಟಾಗುತ್ತಿರುವ ಹತ್ಯೆಗಳಿಂದ ಹುಲಿಗಳ ಸಂಖ್ಯೆ ಮತ್ತಷ್ಟು ಅಪಾಯಕ್ಕೆ ಸಿಲುಕುತ್ತಿದೆ. ಪ್ರತಿ 4 ವರ್ಷಕ್ಕೊಮ್ಮೆ ಹುಲಿ ಗಣತಿ ಮಾಡಲಾಗುತ್ತಿದ್ದು. 2018ರ ಹುಲಿ ಗಣತಿ ಪ್ರಕಾರ ದೇಶದಲ್ಲಿ ಸುಮಾರು 2967 ಹುಲಿಗಳು ಇವೆಯೆಂದು ವರದಿ ತಿಳಿಸಿತ್ತು ಇತ್ತೀಚಿನ ವರದಿಗಳ ಪ್ರಕಾರ ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ ಇಲ್ಲಿ 785 ಹುಲಿಗಳಿವೆ ಎಂದು ವರದಿ ಹೇಳುತ್ತದೆ. ಕರ್ನಾಟಕವು ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿದೆ ನಂತರ, ಉತ್ತರಾಖಂಡ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಹೆಚ್ಚು ಹುಲಿಗಳನ್ನು ಹೊಂದಿವೆ, 2022 ರ ಹುಲಿ ಗಣತಿಯ ಪ್ರಕಾರ, ಭಾರತದಲ್ಲಿ ಒಟ್ಟು 3,167 ಹುಲಿಗಳಿವೆ ಎಂದು ಅಂದಾಜಿಸಲಾಗಿದ್ದು ಹಿಂದಿನ ವರದಿಗೆ ಹೋಲಿಸಿದಾಗ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಖುಷಿಯ ವಿಚಾರವೆನ್ನಬಹುದು. ವಿಶ್ವದಲ್ಲೇ ಅತಿಹೆಚ್ಚು ಹುಲಿಗಳು ಇರುವುದು ಏಷ್ಯಾಖಂಡದಲ್ಲೇ ಎಂಬುದು ಗಮನಾರ್ಹ 2006 ರಿಂದ ಹುಲಿಗಳ ಗಣತಿಯನ್ನು ಮಾಡಲಾಗುತ್ತಿದ್ದು ಈ ಪ್ರಕ್ರಿಯೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೈಜ್ಞಾನಿಕ ರೀತಿಯಲ್ಲಿ ನಡೆಯುತ್ತದೆ. ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಖ್ಯಾತಿ ಚಾಮರಾಜನಗರ ಜಿಲ್ಲೆಗೆ ಇದೆ. ಎರಡೆರಡು ಹುಲಿ ಸಂರಕ್ಷಿತಾರಣ್ಯ ಹೊಂದಿರುವ ಈ ಚಾಮರಾಜನಗರ ಜಿಲ್ಲೆಯಲ್ಲಿ ಮೊನ್ನೆ ಮೊನ್ನೆಯಷ್ಟೇ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಐದು ಹುಲಿಗಳ ಹತ್ಯಾಕಾಂವಾಗಿದ್ದು ರಾಜ್ಯಕ್ಕೆ ಒಂದು ರೀತಿಯ ಕಪ್ಪು ಚುಕ್ಕಿ ಇಟ್ಟಂತಾಗಿದೆ ಅಲ್ಲದೆ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸೃಷ್ಟಿಯಲ್ಲಿ ಮನುಷ್ಯನಷ್ಟೇ ಪ್ರಾಣಿ ಪಕ್ಷಿಗಳಳೂ ಕೂಡ ಬದುಕುವ ಅರ್ಹತೆ, ಅಧಿಕಾರ ಹೊಂದಿವೆ ಆದರೆ ಸ್ವಾರ್ಥ ಮಾನವ ತನ್ನ ದುರಾಸೆಗಾಗಿ ಎಲ್ಲವನ್ನು ತನ್ನ ಅನುಕೂಲಕ್ಕೆ ಬಲಿ ಪಡೆದುಕೊಳ್ಳುತ್ತಿ ರುವುದು ನಿಜಕ್ಕೂ ವಿಷಾದನೀಯ.ಅವುಗಳು ಪ್ರಾಣಿಗಳು ಹಾಗಾಗಿ ಅವುಗಳಿಗೆ ಮನುಷ್ಯ ಜೀವನದ ಬಗ್ಗೆ ಅರಿವಿರುವುದಿಲ್ಲ, ಆದರೆ ಅರಿವಿರುವ ಮಾನವ ಅವುಗಳು ಮಾಡುವ ಹಾನಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕೇ ಹೊರತು ಅವುಗಳನ್ನೇ ಹತ್ಯೆ ಮಾಡುವುದು ಎಷ್ಟು ಸಮಂಜಸ ಅಲ್ಲವೇ, ಹಾಗೆ ಮಾಡಿದರೆ ಪ್ರಾಣಿಗಳಿಗೂ ಮನುಷ್ಯರಿಗೂ ವ್ಯೆತ್ಯಾಸ ಎಲ್ಲಿದೆ ಅಲ್ಲವೇ ? ಈ ನಿಟ್ಟಿನಲ್ಲಿ ಹುಲಿಗಳನ್ನು ರಕ್ಷಿಸುವ ಸರ್ಕಾರದ ಜಾಗೃತಿ ಕಾರ್ಯಕ್ರಮಗಳಿಗೆ ಕೈಜೋಡಿಸೋಣ ಮತ್ತು ಹುಲಿಗಳ ಸಂತತಿಯನ್ನು ರಕ್ಷಿಸೋಣ, ಬೆಳೆಸೋಣ ನಿರಾತಂಕವಾಗಿ ವ್ಯಾಘ್ರಗಳ ಮತ್ತೆ ಘರ್ಜಿಸುವಂತಾಗಲಿ ಎಂದು ಆಶಿಸೋಣ.
ಗೀತಾಂಜಲಿ ಎನ್,ಎಮ್
Author ✍️
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ