32. ಗೊಂಡೆ ಹೂವಿನಿಂದ ಅಲಂಕಾರವಾಗುತ್ತಿದ್ದ ಗುತ್ತು ಬಾಗಿಲಿಗೆ ಬೀಗ

ಪೆದಂಬು ನರಮಾನಿ - ತುಳುನಾಡ ಮಣ್ಣಿನ ಪರಿಮಳದ ಕತೆಗಳು- ಭಾಗ 32

ProfileImg
07 Jul '25
7 ನಿಮಿಷದ ಓದು


image

ತುಂಬಿ ತುಳುಕುವ ಮಂಜೊಟ್ಟಿ ಗುತ್ತು ಬಾಗಿಲಲ್ಲಿ ಗೊಂಡೆ ಹೂವಿನ ಅಲಂಕಾರ.

ಹಣತೆಗಳ ಚಿತ್ತಾರ. 

ಮಕ್ಕಳ ಝೇಂಕಾರ,

ಪಟಾಕಿ ಅಬ್ಬರ.

ದೀಪಾವಳಿಗೆ ದೋಗಣ್ಣನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಊರಿಗೆ ಬಂದಿದ್ದರು.

ಅವರೆಲ್ಲ ದೀಪಾವಳಿ ಹಬ್ಬಕ್ಕಾಗಿಯೇ ಬಂದಿರಲಿಲ್ಲ.

‘ಪೊಪ್ಪ ತೀರಿಕೊಂಡ ಬಳಿಕ ಮನೆಯಲ್ಲಿ ಪ್ರಶ್ನೆ ಇಡಬೇಕು. ವ್ಯವಹಾರದಲ್ಲಿ ಲಾಸ್ ಆಗುತ್ತಲೇ ಉಂಟು. ದೈವದ ದೋಷ ಅಂತ ತಿಳಿದು ಬರುತ್ತಿದೆ’ ಎಂದು ಶ್ರೀಧರ ಪರೋಕ್ಷವಾಗಿ ಪದ್ದುವಿಗೆ ಸುದ್ದಿ ಮುಟ್ಟಿಸಿದ್ದ.

‘ಅದು ಮಂಜೊಟ್ಟಿ ಗುತ್ತಿನ ಚಾವಡಿ ಭೂತದ ಏತ್ ಅಲ್ಲ. ಅವನ ಕುಟುಂಬದ ಮನೆಯಲ್ಲಿ ಪ್ರಶ್ನೆ ಇಡಲಿ’ ಎಂದು ಪದ್ದು ತನಗೆ ಹೇಳಿದವರಲ್ಲಿ ಶ್ರೀಧರನಿಗೆ ಹೇಳಿಸಿದ್ದ.

ಆದರೂ ದೀಪಾವಳಿಯ ಮರು ದಿನ ಮನೆಯಲ್ಲಿ ಪ್ರಶ್ನೆಗೆ ಸಿದ್ಧತೆ ಮಾಡಬೇಕು. ಖರ್ಚು ನನ್ನದು. ಎಲ್ಲರೂ‌ ಇರಬೇಕು ಎಂಬುದು ಶ್ರೀಧರನ ಆಗ್ರಹವಾಗಿತ್ತು.

ಪ್ರಶ್ನೆಗೆ ಬೇಕಾದ ಬಲ್ಯಾಯರ ಆಯ್ಕೆಗಾಗಿ ಪದ್ದು ಊರಿನ ಜ್ಯೋತಿಷಿ ಎಂಕಟೇಶ ಬಲ್ಯಾಯನ ಮುಂದೆ ಹೋಗಿ ಕುಳಿತಿದ್ದ.

ಎಂಕಟೇಶ ಬಲ್ಯಾಯ ಕರಕರನೆ ಕವಡೆ ತಿರುಗಿಸಿ ಕುಲದೈವವನ್ನು ಪ್ರಾರ್ಥಿಸಿ ದೀರ್ಘ ಉಸಿರು ತೆಗೆದುಕೊಂಡು ಕವಡೆಯನ್ನು ಪ್ರತ್ಯೇಕಿಸಿದ.

ಎದುರು ಕುಳಿತ ಪದ್ದುವಿನ ಮುಖವನ್ನೇ ತುಸು ಹೊತ್ತು ದಿಟ್ಟಿಸಿದ. ಪದ್ದು ಎಂಕಟೇಶನ ದೃಷ್ಟಿಗೆ ದೃಷ್ಟಿ ತಾಗಿಸಿದ.

‘ಪದ್ದು ನೀನು ನೆನೆಸಿದಂತೆ ನಡೆಯುವುದಿಲ್ಲ... ಏನಾಗುತ್ತದೋ ಅದನ್ನು ಮೌನವಾಗಿ ನೋಡುತ್ತಾ ನಿನ್ನ ನಿರ್ಧಾರ ನೀನು ತೆಗೆದುಕೊಳ್ಳಬೇಕು... ನೀನು ಅಲ್ಲಿ ಏನು ಮಾಡುತ್ತಿಯೋ ಅದಕ್ಕೆ ದೈವ ಬಲ ಉಂಟು’

ಎರಡು-ಮೂರೇ ಮಾತು. ಕವಡೆ ಮಡಿಸಿದ.

ಎಂಕಟೇಶ ಬಲ್ಯಾಯನ ಮಾತು ಕೇಳಿ ಪದ್ದು ಚಕಿತಗೊಂಡ.

‘ನಿನಗೆ  ಪ್ರಶ್ನೆಗೆ ಜನ ನಾನು ಮಾಡಿಕೊಡಬೇಕು ಅಂತಾದರೆ ಐದು ದಿನ ಬಿಟ್ಟು ಬಾ. ಆಗ ಹೇಳುತ್ತೇನೆ..’ ಎಂದು ಎಂಕಟೇಶ ಬಲ್ಯಾಯ ಪದ್ದುವನ್ನು ‘ನೀನಿನ್ನು ಹೋಗಬಹುದು’ ಎನ್ನುವಂತೆ ನುಡಿದ.

ಅದಾದ ಮೂರು ದಿನದಲ್ಲೇ ಮುಂಬೈಯಿಂದ ಕರೆ ಬಂತು.

‘ತೆನ್ಕಾಯಿ ಕೇರಳದ ನಾರಾಯಣ  ಪೊದುವಾಳ್ ಪಂಡಿತ್ ಎಂಬವರು  ಪ್ರಶ್ನೆಗೆ ಬರುತ್ತಾರೆ ನೀನು ಎಲ್ಲಾ ತಯಾರಿ ಮಾಡಿ ಇಡು’ ಎಂದು ಶ್ರೀಧರನ ತಮ್ಮ ಶಂಕರ ಕರೆಮಾಡಿ ಹೇಳಿದ.

‘ಅಲ್ಲ ಮಾರಾಯಾ ಪ್ರಶ್ನೆಗೆ ಎರಡು ಜನ ಯಾಕೆ? ಪೊದುವಾಳ್ ಒಬ್ಬರೆ ಸಾಕಾಗುವುದಿಲ್ಲವಾ? ತೆನ್ಕಾಯಿ ಕೇರಳದವನಿಗೆ ನಮ್ಮ ಕ್ರಮ, ಭಾಷೆ ಗೊತ್ತುಂಟಾ? ಊರಲ್ಲಿ ಬಲ್ಯಾಯರಿಲ್ವಾ?’ ಪದ್ದು ಅಚ್ಚರಿಯಿಂದ ಕೇಳಿದ.

‘ಅದು ಒಬ್ಬನದ್ದೇ ಹೆಸರು ಮಾರಾಯ. ಬೊಂಬಾಯಲ್ಲಿ ಯಾರೋ ಏಜಂಟರು ಅವನ ತಲೆತಿಂದಿದ್ದಾರೆ, ಅದೆಲ್ಲಾ ನಿನಗೆ ಬೇಡ. ಅವ ಶ್ರೀಧರಣ್ಣನಿಗೆ ಕೋಪ ಬರುತ್ತದೆ. ಊರಿನವರಾದರೆ ನೀನು ಪೆದಂಬು ಮಾಡುತ್ತಿ ಅಂತ ಅವನಿಗೆ ಡೌಟು.  ನೀನು ತಯಾರಿ ಮಾಡಿ ಇಡು ಅಷ್ಟೆ. ಭಟ್ರಿಗೆ ನೀನು ಹೇಳುವುದಕ್ಕೆ ಹೋಗಬೇಡ. ಅವನೆ ಫೋನ್ ಮಾಡಿದ್ದಾನೆ’ ಎಂದ.

‘ನನ್ನ ಮನೆ, ನಾನು ಹೂ ನೀರು ಇಡುವ ದೈವ ಮಾರಾಯಾ ಅವನಿಗೆ ಯಾಕೆ ಕೋಪ ಬರುವುದು? ಎಲ್ಲಾ ಅವನೆ ಮಾಡುವುದಾದರೆ ನನಗೆ ಫೋನ್ ಮಾಡುವುದು ಯಾಕೆ?’ ಅವನೆ ಮಾಡಲಿ. ಅವನಿಗೆ ಪಂಚಾಯತ್‌ನಲ್ಲಿ ನನ್ನ ಎದುರು ಮಸಲತ್ತು ಮಾಡುವುದಕ್ಕೆ ಜನ ಸಿಗುತ್ತದೆ ಅಂತೆ ಮನೆಯಲ್ಲಿ ಪ್ರಶ್ನೆಗೆ ತಯಾರಿ ಮಾಡುವುದಕ್ಕೆ ಜನ ಸಿಗುವುದಿಲ್ಲವಾ. ನಿನ್ನ ಅಣ್ಣನಿಗೆ ಹಾಗೇ ಹೇಳು?’ ಪದ್ದು ಕೋಪದಿಂದ ನುಡಿದ.

‘ನೋಡು ಪದ್ದು. ನನಗೂ ನಿನಗೂ ಜಗಳ ಇಲ್ಲ. ಅವ ಹೇಳಿದ್ದನ್ನು ನಿನಗೆ ಹೇಳಿದ್ದೇನೆ ಅಷ್ಟೆ. ಅವನ ಬುದ್ದಿ ನಿನಗೆ ಗೊತ್ತುಂಟಲ್ಲಾ. ನೀನು ಆಗುವುದಿಲ್ಲ ಅಂತ ಹೇಳಿದ್ದನ್ನು ಅವನಿಗೆ ಹೇಳುತ್ತೇನೆ ಅಷ್ಟೆ’ ಎಂದು ಶಂಕರ ಕರೆ ಕಟ್ ಮಾಡಿದ.

ದೀಪಾವಳಿ ಬಂತು.

ಮನೆಮಂದಿ ಎಲ್ಲಾ ಬೇಗ ಎದ್ದು ಎಣ್ಣೆ ಹಚ್ಚಿ ಬಿಸಿ ಬಿಸಿ ನೀರು ಸ್ನಾನ‌ಮಾಡಿ ಅವಲಕ್ಕಿ ತೆಲ್ಲವು ಸವಿದರು.

ಪಾಡ್ಯದ ದಿನ ಮಕ್ಕಳೆಲ್ಲಾ ಸೇರಿ ದನ ಕರುಗಳನ್ನು ಮೀಯಿಸಿ ಶೃಂಗರಿಸಿದ್ದರು.

ಬಲಿಪಾಡ್ಯದ ಕತ್ತಲಲ್ಲಿ ಪದ್ದು ಪೊಟ್ಟುಬಜಿಲ್, ಗಟ್ಟಿ, ತೆಂಗಿನ ಕಾಯಿಯಯ ಹೋಳು, ಬಜ್ಜಿರೆ ಬಜ್ಜೆಯಿ, ಉಮಿ ಹೂ, ಗೊಂಡೆ ಹೂ ತುಂಬಿದ್ದ ಬುಟ್ಟಿ ಹೊತ್ತುಕೊಂಡಿದ್ದ,

ಅವನ ಮಗ ಕುಮಾರ ತೆಂಗಿನ ಸಿಪ್ಪೆಯಿಂದ ತಯಾರಿಸಿದ್ದ ದೀಪ ಇಡುವ ಕೋಲು ಹಿಡಿದಿದ್ದ. ಪದ್ದು, ಶಂಕರ, ಶಂಭು, ಸಿರಿ ಮತ್ತು ಮುಂಬೈಯಿಂದ ಬಂದ ಹೆಣ್ಣು-ಗಂಡು ಮಕ್ಕಳ ಸೈನ್ಯ ಗದ್ದೆಗೆ ದೀಪ ಇಟ್ಟು ಬಲೀಂದ್ರನನ್ನು  ಕರೆಯಲು ಬೈಲಿಗೆ ಇಳಿಯಿತು.

ಪದ್ದು ಬಲೀಂದ್ರ ದೀಪದ ಮುಂದೆ ಮುಂಡಾಸು ಕಟ್ಟಿದ.

ಕರ್ಗಲ್ಲ್ ಕಾಯಾನಗಾ... ಬೊಲ್ಗಲ್ಲ್ ಪೂ ಪೋನಗಾ
ಜಾಲ್ ಪಾದೆ ಆನಗಾ..  ಉಪ್ಪು ಕರ್ಪುರಾನಗಾ....
ತುಂಬೆದಡಿಟ್ ಆಟ ಆನಗಾ... ನೆಕ್ಕಿದಡಿಟ್ ಕೂಟ ಆನಗಾ...
ದಂಟೆದಜ್ಜಿ ಮದ್ಮಲಾನಗಾ.. ಮಂಜಲ್‌ಪಕ್ಕಿ ಮೈ ಪಾಡ್ನಗಾ...
ಕೊಟ್ರುಂಜ ಕೊಡಿ ಜಾನಗ... ಕಲ್ಲ ಬಸವೆ ಮುಕ್ಕುಡ್‌ದಕ್ಕ್‌ನಗಾ...
ಉರ್ದು ಮದ್ದೊಲಿ ಆನಗಾ... ದಂಬೆಲ್‌ಗ್ ಪಾಂಪು ಪಾಡ್ನಗಾ...
ಅಲೆಟ್ ಬೊಲ್ಯ ನೆಯ್ ಮುರ‍್ಕುನಗಾ... 
ಆಟಿದ ಅಮಾಸೆಗ್, ಸೋನದ ಸಂಕ್ರಾಂದಿಗ್, 
ಬೊಂತೆಲ್ದ ಕೊಡಿಪರ್ಬೊಗು
ವೊಟ್ಟೆ ವೋಡೊಡು.. ಮೋಂಟು ಜಲ್ಲೊಡು 
ಆ ಊರ ಪೊಲಿ ಕನಲಾ.. ಈ ಊರ ಬಲಿ ಕೊನೊಲಾ ಬಲೀಂದ್ರಾ...

ಪದ್ದುವಿನ ಕಂಚಿನ ಕಂಠ ನಿಂತ ನಂತರ ಕರಿ ಕತ್ತಲಲ್ಲಿ ಊರಿಡೀ ಪ್ರತಿಧ್ವನಿಸುವಂತೆ ಮಕ್ಕಳೂ ಎಲ್ಲರೂ ಸೇರಿ ‘ಕೂ.....’ ಎಂದರು.

ಮುಂಬೈಯ ಮಕ್ಕಳು ‘ವಾಟ್ ಈಸ್ ದ ಮೀನಿಂಗ್ ಅಂಕ್ ಲ್...’ ಅನ್ನುತ್ತಾ ಶಂಕರನನ್ನು ಕಾಡತೊಡಗಿದರು.

ತಡ್ಪೆಯಲ್ಲಿ ಬತ್ತ, ತೆಂಗಿನಕಾಯಿ, ವೀಳ್ಯ ಇತ್ಯಾದಿಗಳನ್ನು ಇಟ್ಟು ಹೂವಿನಿಂದ ಶೃಂಗರಿಸಿ, ದೀಪ ಇಟ್ಟು ಢಣ ಢಣ ಬಟ್ಟಲು ಬಡಿಯುತ್ತಾ ಮನೆ, ಹಟ್ಟಿ, ಕೃಷಿಪರಿಕರಕ್ಕೆಲ್ಲಾ ತುಡರ್ ತೋರಿಸಿ ಸಂಭ್ರಮಿಸಿದರು.

ದನಕರುಗಳಿಗೆ ತಿಂಡಿ ತಿನ್ನಿಸಿ ತುಡರ್ ತೋರಿಸಿದರು.

ಪದ್ದುವಿನ ಮಕ್ಕಳು ಮುಂಬೈಯ ಮಕ್ಕಳ ಜತೆ ಸೇರಿ ಈವರೆಗೆ ಇಲ್ಲ ಮುಂದೆಂದಿಗೂ ಇಲ್ಲ ಎಂಬಂತೆ ಪಟಾಕಿಯ ಓಕುಳಿಯಾಡಿದ್ದರು.

ಇವತ್ತು ಒಂದು ದಿನವಾದರೂ ಮಕ್ಕಳು ಮೊಬೈಲ್ ಮರೆತರಲ್ಲಾ ಎನ್ನುವ ಕುಷಿ ಮುಂಬಯಿಂದ ಬಂದವರಿಗೆ.

ಚೀಪೆಗಟ್ಟಿ, ಅರಶಿನ ಎಲೆಯ ಗಟ್ಟಿ, ಬಂಗುಡೆ ರೆಸದಲ್ಲಿ ಪೊಟ್ಟುಗಟ್ಟಿ ಸವಿದು ಕಣ್ಣೆಳೆದಾಗ ಎಲ್ಲರೂ ಸವಿನಿದ್ದೆಗೆ ಜಾರಿದರು.

ಮರುದಿನ ಮುಂಜಾನೆ ಶ್ರೀಧರ ಮಂಜೊಟ್ಟಿ ಗುತ್ತಿನ ಬಾಗಿಲು ಬಡಿದಿದ್ದ.

ಹೊತ್ತೇರುತ್ತಿದ್ದಂತೆ ಆತ ಹೇಳುವ ಅಪ್ಪೆಯ ರಾಜಕೀಯ ಪಾರ್ಟಿಯ ಸಂಗಡಿಗರು ಜತೆಯಾದರು.

ಎಂಕಟೇಶ ಬಲ್ಯಾಯ ನುಡಿದಂತೆ ಪದ್ದು ಎಲ್ಲವನ್ನೂ ಮೌನದಿಂದ ನೋಡುತ್ತಾ ಕುಳಿತ.

ಎರಡು ಕಾರುಗಳಲ್ಲಿ ಜ್ಯೋತಿಷ್ಯರು, ಅನುವಾದಕರು, ಸಹಾಯಕರು, ಭಟ್ರು ಮಂಜೊಟ್ಟಿ ಗುತ್ತಿಗೆ ಬಂದಿಳಿದರು.

ಪ್ರಶ್ನಾ ಕಾರ್ಯಕ್ರಮದ ಪೂರ್ವ ವಿಧಿ ವಿಧಾನಗಳು ನಡೆದವು.

ನಾರಾಯಣ  ಪೊದುವಾಳ್ ಪಂಡಿತ್ ಮಲೆಯಾಳಿಯಲ್ಲಿ ಹೇಳತೊಡಗಿದ.

ಅನುವಾದಕ ಅನುವಾದ ಮಾಡತೊಡಗಿದ. ಸಹಾಯಕ ಬರೆಯ ತೊಡಗಿದ.

ಭಟ್ರು ನಡು ನಡುವೆ ವಿವರಣೆ ನೀಡತೊಡಗಿದರು.

‘ನವಮಾಧಿಪತಿ ದುಸ್ಥಾನದಲ್ಲಿದೆ ಪ್ರಧಾನವಾಗಿ ಪಿತೃ ದೋಷ ಯಜಮಾನನ್ನು ಕಾಡುತ್ತಿದೆ. ಸಮಸ್ಯೆ ಇದರಿಂದ ಆಗುತ್ತಿದೆ. ಅದಕ್ಕೆ ಪರಿಮಾರ್ಜನೆ ಬೇಕು. ಹಿರಿಯರ ಬಗ್ಗೆ ಸಮಸ್ಯೆ ಆಗಿತ್ತಾ...?’ ಜ್ಯೋತಿಷ್ಯ ಮಾತಿನ ಅನುವಾದದ ಪ್ರಶ್ನೆಗೆ ಶ್ರೀಧರ ಮತ್ತಿತರರು ನಿರುತ್ತರರಾದರು.

‘ಅದು ಪೊಪ್ಪನ ಕಾಟಕ್ಕೆ ಬೆಂಕಿ ಹತ್ತದೆ ಸಮಸ್ಯೆ ಆಗಿತ್ತಲ್ಲಾ? ಸುಮಾರು ಹೊತ್ತಾಗಿತ್ತಲ್ಲಾ? ಎಲ್ಲರೂ ಕೈ ಮುಗಿದ ನಂತರ ಸರಿಯಾಗಿತ್ತಲ್ಲ? ಅದಕ್ಕೆ ಮತ್ತೆ ಪಿರಿಕಟ್ ಮಾಡಿದ್ದು ನೆನಪಿಲ್ವಾ?’ ಶ್ಯಾಮಲ ಹೇಳಿದಳು.

'ಅದು ಹಾಗಲ್ಲ... ಹಿರಿಯರ ಜಾಗವನ್ನು ಯಾರಾದರೂ ಮಾರಿ ತಿಂದಿದ್ದೀರಾ..? ಅಶ್ವತ್ಥ, ಗೋಳಿ ಇತ್ಯಾದಿ ಹಾಲು ಬರುವ ಮರ ಕಡಿದಿದ್ದೀರಾ ಇದೆಲ್ಲಾ ಈ ದೋಷಕ್ಕೆ ಕಾರಣ. ಮತ್ತೆ ಪೂರ್ವ ಜನ್ಮದ್ದು ಅಂತ ಕೂಡಾ ಬರ್ತದೆ. ನಿಮ್ಮಲ್ಲಿ ಅಂದ್ರೆ ಅಳಿಯ ಸಂತಾನ ಕಟ್ಟಿನಲ್ಲಿ ಪೂರ್ವ ಜನ್ಮ, ಪುನರ್ಜನ್ಮ ಅಂತ ನಂಬಿಕೆ ಇಲ್ಲ. ಮೊದಲ ಎರಡರಲ್ಲಿ ಯಾವುದು ಅಂತ ವಿಮರ್ಶೆ ಆಗಬೇಕು' ಭಟ್ರು ನುಡಿದರು.

'ಅದೆಲ್ಲಾ ಇಲ್ಲ. ಪೊಪ್ಪನ ಕಾಟಕ್ಕೆ ಬೆಂಕಿ ಹತ್ತಲಿಲ್ಲ ಅದು ದೋಷ ಅಲ್ವಾ?' ಶ್ರೀಧರ ನುಡಿದ.

ಭಟ್ರು ಈ ವಿಚಾರವನ್ನು ಜ್ಯೋತಿಷ್ಯರಿಗೆ ವಿವರಿಸಿದರು.

ಅವರಿಗೆ ಹೊಸ ವಿಷಯ ಸಿಕ್ಕಿ ಬಿಟ್ಟಿತು.

‘ಬೊಜ್ಜ ಕೂಡಾ ಎರಡು ಆಗಿತ್ತಾ?’ ಜ್ಯೋತಿಷ್ಯರ ಮಾತನ್ನು ಅನುವಾದಕ ಅನುವಾದಿಸಿದ.

‘ಹೌದು... ಹೌದು... ಇವ ಅರ್ವತ್ತ ಪದ್ದು ಮನೆಯಲ್ಲಿ ಮಾಡಿದ್ದ. ನಾವು ಮಕ್ಕಳು ಪಿಂಡ ಬಿಡುವುದಕ್ಕೆ ಹೋಗಿದ್ದೆವು. ಹಾಲ್‌ನಲ್ಲಿ ಊಟ ಆಗಿತ್ತು. ಮನೆಯಲ್ಲಿ ಕಾಗೆ ಮುಟ್ಟಿದೆ. ಹಾಲ್‌ನಲ್ಲಿ ಮುಟ್ಟಲಿಲ್ಲ...’ ಶಂಕರ ನೆನಪಿಸಿಕೊಂಡ.

ಅವಡುಗಚ್ಚಿ ಸುಮ್ಮನೆ ಕುಳಿತಿದ್ದ ಪದ್ದುವಿನ ತಾಳ್ಮೆ ತಪ್ಪಿ ಹೋಯಿತು.

‘ಎಂತದು ಇದು. ಪ್ರಶ್ನೆ... ಎಂತದ್ದು? ಇದು ಮಂಜೊಟ್ಟಿ ಗುತ್ತಿನ ಮನೆ. ದೈವಗಳು ಕುಟುಂಬದವರದ್ದು. ಇವ ಊರಿಗೆ, ಕುಟುಂಬದವರಿಗೆ ಹೇಳದೆ ಕೇಳದೆ ಮಾವನ ಹೆಣ ಎತ್ತಿದ್ದ. ಹೆಣ ಹೂಳುವ ಅನ್ಯ ಮತದವರಲ್ಲಿ ಮರದ ಡಿಪ್ಪೋದಲ್ಲಿ ಹೂಡಿದಂತೆ ಕಾಟ ಗೂರಿ ಬೆಂಕಿ ಕೊಟ್ಟಿದ್ದ. ಕೊನೆಗೆ ನಾನು ಬಂದು ಸೌಧೆ ಸಡಿಲಿಸಿ ಬೆಂಕಿ ಹತ್ತಿಕೊಳ್ಳುವಂತೆ ಮಾಡಿದೆ. ಅದರ ಒಳಗೆ ಇವರ ಪರಕೆ, ಪಿರಿಕಟ್ಟ್, ಈಡು ಎಲ್ಲಾ ಆಗಿತ್ತು.

ಬೊಜ್ಜದ ದಿನ ನಾವು ಗುತ್ತಿನವರು ಮನೆಯಲ್ಲಿ ಕ್ರಮಬದ್ದವಾಗಿ ಮಾಡಿದ ಬೊಜ್ಜ ಊಟದಲ್ಲಿ ಕಾಗೆ ಮುಟ್ಟಿದೆ. ನಮಗೆ ಯಾವುದೇ ದೋಷ ಇಲ್ಲ. ಪಿತೃ ದೋಷ ಇದ್ದರೆ ನಮಗೆ ಕುಟುಂಬದವರಿಗೆ ಕಂಡು ಬರಬೇಕು. ಶ್ರೀಧರನಿಗೆ ಅಲ್ಲ. ಅವನ ಮನೆಯಲ್ಲಿ ಸತ್ತವರಿಗೆ ಗತಿ ಗೋತ್ರ ಮಾಡಿಲ್ಲ. ಬಾಯಿಗೆ ನೀರಿಲ್ಲ ಅಂತ ಕಾಣುತ್ತದೆ. ಇವ ಇಲ್ಲಿಗೆ ಬಂದಿದ್ದಾನೆ.

ಅವನ ತಾಯಿಯ ಕುಟುಂಬದ ಪಾಲಿಗೆ ಜಗಳ ಮಾಡಿ ಪಾಲು ಪಡೆದು ದೈವದ ಕಲ್ಲು, ಹಾಲು ಬರುವ ಮರ ಎಂದು ಹಿಂದೆ ಮುಂದೆ ನೋಡದೆ ಎಲ್ಲ ಕಡಿದು ಸಮತಟ್ಟು ಮಾಡಿ ಮಾರಿ ಪರವೂರಲ್ಲಿ ಹೊಟೇಲ್, ಬಾರ್ ಅಂತ ಸುರಿದಿದ್ದಾನಲ್ಲ. ಅದನ್ನು ಹೇಳಿ.

ಅವನ ಕುಟುಂಬದ ಮನೆಯಲ್ಲಿ ಹೋಗಿ ಪ್ರಶ್ನೆ ಇಟ್ಟು ಪಿರಿಕಟ್ಟ್ ಮಾಡಲಿ.

‘ಇವ ಮಂಜೊಟ್ಟಿ ಗುತ್ತಿನ ಕುಟುಂಬದವನೇ ಅಲ್ಲ ಅಂತೆ. ಇವ ಎಂತ ದೈವಗಳಿಗೆ ಪ್ರಶ್ನೆ ಇಡುವುದು? ನಿಮಗೆ ಹಣ ಹೆಚ್ಚಾಗಿದ್ದರೆ ಎಲ್ಲಿಯಾದರೂ ಅನಾಥಾಶ್ರಮಕ್ಕೆ ದಾನ ಮಾಡಿ. ಈ ನಾಟಕ ಎಲ್ಲ ಬೇಡ’ ಎನ್ನುತ್ತಾ ಎದ್ದು ನಿಂತ.

‘ಈ ಆಳುಕಲ್ ಎಂತಾನು  ಪರಂಞತು?’ ಪ್ರಶ್ನೆಯವ ಕುತೂಹಲದಿಂದ ಪ್ರಶ್ನಿಸಿದ.

‘ಇವರು ಅಳಿಯ ಸಂತಾನ ಕಟ್ಟಿನವರು. ಮಕ್ಕಳ ಕಟ್ಟಿನವರು ಅಲ್ಲ. ಮನೆ ಅಳಿಯನ ಕುಟುಂಬದ್ದು. ಮಕ್ಕಳು ಕುಟುಂಬ ಆಗುವುದಿಲ್ಲ. ಇವರು ನಂಬಿದ ದೈವ ಕೂಡಾ ಹಾಗೇ ಹೇಳುವುದು. ಇದು ಪ್ರಶ್ನೆ ಇಟ್ಟದ್ದು ಸರಿಯಲ್ಲ. ಅವನು ಅವನ ಮನೆಯಲ್ಲಿ ಪ್ರಶ್ನೆ ಇಡಲಿ. ಇಲ್ಲಿ ಅಲ್ಲ... ’ ಎಂದು ಭಟ್ರು ಹೇಳಿದ್ದನ್ನು ಅನುವಾದಕ ಪ್ರಶ್ನೆಯವನಿಗೆ ಅನುವಾದಿಸಿ ಹೇಳಿದ.

ಶ್ರೀಧರ ಕುಳಿತಲ್ಲಿಂದ ಎದ್ದ.
‘ಅದೆಲ್ಲಾ ಹಳೆಯ ಕಾಲಕ್ಕೆ. ಇವ ಇಲ್ಲಿ ಸ್ವಂತ ತಮ್ಮಲೆಗೆ ಜೀವ ಎಳೆಯುವಾಗ ಎಲ್ಲೋ ಕೋರ‍್ಡಟ್ಟಕ್ಕೆ ಹೋಗಿ ಸುದ್ದಿ ಇಲ್ಲದೆ ರಾತ್ರಿ ಹಗಲು ಕುಳಿತಿದ್ದ. ಅವನಿಗೆ ಕಾದು ಹೆಣ ಕೊಳೆಯುವಂತೆ ಮಾಡುವುದಕ್ಕೆ ಆಗುತ್ತದಾ?. ಅದಕ್ಕೆ ನಾವೇ ಮಕ್ಕಳು ಸುಟ್ಟದ್ದು.

ಈಗ ಈ ಮನೆ ನನ್ನದು. ನನ್ನ ಪೊಪ್ಪನಿಗೆ ಡಿಕ್ಲರೇಶನ್‌ನಲ್ಲಿ ಬಂದ ಭೂಮಿ ಇದು. ಅಪ್ಪ ತೀರಿಕೊಂಡ ನಂತರ ಹಿರಿಯವನಾದ ನಾನು ಯಜಮಾನ. ಕಾನೂನು ಬದಲಾಗಿದೆ.

ದೈವಕ್ಕೆ ಹೊಸ ಕಾನೂನು ಆಗುವುದಿಲ್ಲವಾ? ಪದ್ದು ಮೂರು ಎಕ್ರೆ ಜಾಗ ಮೋಸದಿಂದ ಪಡೆದು ಅಲ್ಲಿ ಮನೆ ಮಾಡಿದ್ದಾನೆ. ದೈವ, ಕ್ರಮ, ಸಂಪ್ರದಾಯ ಅಂತ ಹೇಳುತ್ತಾನೆ. ಅವನ ಹೆಸರಿಗೆ ಕಾನೂನು ಪ್ರಕಾರ ಮೂರೆಕ್ರೆ ಮಾಡಿಸಿಕೊಂಡದ್ದು ಯಾಕೆ? ಅದರಲ್ಲಿ ನನಗೆ ದಾರಿ ಕೂಡಾ ಇಲ್ಲ ಅನ್ನುತ್ತಾನೆ. ಅವನಿಗೆ ದೈವದ ಭೂಮಿ ಅಂತ ಭಯ ಭಕ್ತಿ ಉಂಟಾ? ದೈವದ ಗುಳಿಗ ಜೋರ ಸಮತಟ್ಟು ಮಾಡಿ ಅವ ಮನೆ ಕಟ್ಟಿಲ್ವಾ? ಅವ ಅಲ್ಲಿ ಮರಕಡಿದಿಲ್ವಾ?, ಮಣ್ಣು ಮಾರಿಲ್ವಾ? ಸಮತಟ್ಟು ಮಾಡಿ, ಹಂದಿ ಸಾಕಿ ಮಲಿನ ಮಾಡಿಲ್ವಾ? ಮಂಜೊಟ್ಟಿ ಗುತ್ತು ಆಗದೇ ಇದ್ದರೆ ಅವನ ಮನೆಯಲ್ಲಿ ಹೋಗಿ ಇರಲಿ. ಇಲ್ಲಿಗೆ ಬರುವುದು ಬೇಡ. ಎಲ್ಲಾ ಚಾರ್ ಸೌ ಬೀಸ್...

ನಾನು ಹೂ ನೀರು ಇಡುವವ ಅಂತ ಬ್ಲಾಕ್ ಮೇಲ್ ಮಾಡುವುದು ಬೇಡ. ಇವತ್ತಿನಿಂದ ಹೂ ನೀರು ಇಡುವುದಕ್ಕೆ ಭಟ್ರಿಗೆ ಹೇಳುತ್ತೇನೆ. ಸಂಕ್ರಾಂದಿ ಸಂಕ್ರಾಂದಿ ಬಂದು ಅವರು ಹೂ ನೀರು ಇಡಲಿ. ಪರ್ವಕ್ಕೆ ನಾನು ಬರ‍್ತೇನೆ... ಕುಟುಂಬದವರು ದೈವ ಬೇಕಾದರೆ ಬರಲಿ... ಈ ಮನೆ ನನ್ನ ಹೆಸರಿಗೆ ನಾನು ಮಾಡಿಕೊಳ್ಳುತ್ತೇನೆ’  ಕೋಪದಿಂದ ನಡುಗುತ್ತಾ ನುಡಿದ.

ಪದ್ದು ಸ್ತಂಭೀಭೂತನಾದ.

ಅಲ್ಲಿ ಒಂದು ನಿಮಿಷ ಮೌನ ಆವರಿಸಿತು.

ಜ್ಯೋತಿಷಿ ಕವಡೆ ಆಡಿಸುವ ಕರ ಕರ ಸದ್ದು ಮಾತ್ರ.

ಶ್ರೀಧರನ ತಮ್ಮ ಶಂಭು ಎದ್ದು ನಿಂತ. ‘ಇದು ಪೊಪ್ಪನ ಮನೆ ಅದು ಹೇಗೆ ಒಬ್ಬನ ಹೆಸರಿಗೆ ಆಗುತ್ತದೆ?. ಇದು ದೋಗಣ್ಣನ ಎಲ್ಲಾ ಮಕ್ಕಳಿಗೆ ಸೇರಿದ್ದು. ಅವರೆಲ್ಲಾ ಬಂದು, ಇದ್ದು ಹೋಗಲು ಮನೆ ಬೇಕು. ನಿನ್ನ ಹೆಸರಿಗೆ ಹಾಗೆಲ್ಲಾ ಮಾಡಿಕೊಳ್ಳಲು ಆಗುವುದಿಲ್ಲ’ ಎಂದ.

ಶ್ಯಾಮಲಾ, ವನಜ ಶಂಭುವಿನ ಮಾತಿಗೆ ಜತೆಯಾಗಿ ನಿಂತರು.

ಶ್ರೀಧರ ಅವರನ್ನು ಕೆಕ್ಕರಿಸಿ ನೋಡಿದ. ‘ನಿಮಗೆ ಮದುವೆ ಮಾಡಿಸಿದ್ದು, ಕಲಿಯುವುದಕ್ಕೆ ಅಂತ ಖರ್ಚಿಗೆ ಕೊಟ್ಟದ್ದು ಮುಂಬೈಗೆ ಕರೆದುಕೊಂಡು ಹೋಗಿ ಒಂದು ತಿಕಾನ ಅಂತ ಮಾಡಿದ್ದು ನಾನು. ಅದೆಲ್ಲಾ ಗುರ್ತ ಇಲ್ವಾ?’ ನೀವು ಈ ನಮೂನೆ ಮಾತಾಡುತ್ತೀರಿ ಅಂತ ನಾನು ಕನಸಿನಲ್ಲೂ ಭಾವಿಸಿರಲಿಲ್ಲ ಎಲ್ಲರೂ ಸ್ವಾರ್ಥಿಗಳು’ ಎಂದ.

‘ಮನೆ ಎಲ್ಲರಿಗೂ ಇರಲಿ. ನಮಗೆಲ್ಲಾ ಕೊಟ್ಟಿದ್ದಿ ಎನ್ನುತ್ತಿಯಲ್ಲಾ ಉಳಿದ ಜಮೀನಿನಲ್ಲಿ ಪಾಲು ನೀನು ಹೆಚ್ಚಿಗೆ ತೆಗೆದುಕೋ. ಅಥವಾ ನೀನೇ ಇಟ್ಟುಕೋ ಮನೆ ಎಲ್ಲರಿಗೂ ಬೇಕು’ ಶಂಕರ ನುಡಿದ.

‘ನಿಮ್ಮ ಆಸ್ತಿ ಪಾಲು ನೀವು ಮತ್ತೆ ಮಾಡಿಕೊಳ್ಳಿ. ಈಗ ಪ್ರಶ್ನೆಗೆ ಒಂದು ಮಂಗಳ ಹಾಡಬೇಕಲ್ಲಾ’ ಭಟ್ರು ಎಲ್ಲರನ್ನು ಉದ್ದೇಶಿಸಿ ನುಡಿದರು.

‘ನಿನ್ನ ಕಂತ್ರಿ ಬುದ್ದಿಯಿಂದ  ಒಂದು ತಾಯಿ ಮಕ್ಕಳನ್ನು ಕಂಟಿಸಿ ಹಾಕಿಸಿದಿಯಲ್ಲಾ...?’  ಶ್ರೀಧರ ಪದ್ದುವನ್ನು ಕೆಕ್ಕರಿಸಿ ನೋಡುತ್ತಾ ಮುನ್ಕಿದ.

ಜ್ಯೋತಿಷಿ ಕವಡೆ ಆಡಿಸುವ ಕರ ಕರ ಸದ್ದು ಪದ್ದುವಿಗೆ ಎಂಕಟೇಶ ಬಲ್ಯಾಯನ ಮಾತನ್ನು ನೆನಪಿಸಿತು.

ಆತ ಎದ್ದು, ನಿಧಾನವಾಗಿ ಅಂಗಳ ಇಳಿದು ಮರೆಯಾದ.

ಅಲ್ಲಿ ಸೇರಿದ್ದ ಮಂಜೊಟ್ಟಿ ಗುತ್ತಿನ ಕುಟುಂಬದವರು ಒಬ್ಬೊಬ್ಬರಾಗಿ ಹೇಳದೆ ಕೇಳದೆ ಜಾಗ ಖಾಲಿ ಮಾಡಿದರು.

ದೋಗಣ್ಣನ ಮಕ್ಕಳು, ಪ್ರಶ್ನೆಯವರ ಜತೆ ಬಂದವರು, ಶ್ರೀಧರನ ರಾಜಕೀಯ ಪಾರ್ಟಿ ಸಂಗಡಿಗರು ಮಾತ್ರ ಉಳಿದರು.

'ಭಟ್ರು ಹೂ ನೀರು ಇಟ್ಟರೆ ಏನಾಗುತ್ರದೆ?' ಶ್ರೀಧರ ಪ್ರಶ್ನಿಸಿದ.

ನಾರಾಯಣ ಪಂಡಿತ್ ಪೊದುವಾಳ್ 'ಇಲ್ಲ' ಎನ್ನು ವಂತೆ ತಲೆ ಆಡಿಸುತ್ತಾ
'ಅಥೊರು ತೆಟ್ಟಾನು, ಕುಟುಂಬ ಅತು ಚೆಯ್ಯನಂ. ಕುಟುಂಬಂ ಆರೂ ಮಿಲ್ಲೆಂಗಿಲ್ ಪುರೋಹಿತಾನ‌್ ಮರ್ಕು ಅತು ಚೆಯ್ಯಂ' ಎಂದರು.

'ಅದು ದೋಷ. ಕುಟುಂಬದವರೇ ಅದು ಮಾಡಬೇಕು. ಕುಟುಂಬ ಯಾರೂ ಇಲ್ಲದಿದ್ದರೆ ಪುರೋಹಿತರು ಮಾಡಬಹುದು' ಅನುವಾದಕ ನುಡಿದ.

'ಭಟ್ರೇ ನೀವು ಮಾಡಬಹುದು ಅಂತ ಆಯ್ತು. ಅವ ಪದ್ದು ಎದ್ದು ಹೋದಲ್ಲ. ಇನ್ನು ಮುಂದೆ ನೀವೇ ಮಾಡಿ' ಶ್ರೀಧರ ಹೇಳಿದ.

ಶಂಕರನಿಗೆ ಇದು ಸರಿಬರದಿದ್ದರೂ 'ನನಗೆ ಯಾಕೆ ಸುಮ್ಮನೆ' ಎಂದು ಮೌನವಾದ.

ಜ್ಯೋತಿಷ್ಯರು ಪಿತೃದೋಷ ಮತ್ತಿತರ ದೋಷ ಪರಿಹಾರ, ಹೋಮ, ಹವನ ಎಂದು ದೊಡ್ಡ ಪಟ್ಟಿಯನ್ನೇ ಕೊಟ್ಟರು.

ಭಟ್ರು ಅದನ್ನೆಲ್ಲಾ ಮಾಡಿಸುವುದರ ಜತೆಗೆ ಪ್ರತಿ ಸಂಕ್ರಾಂತಿ ಮಂಜೊಟ್ಟಿ ಗುತ್ತಿಗೆ ಬಂದು ಹೂ ನೀರು ಇಡುವ ಜವಾಬ್ದಾರಿ ವಹಿಸಿಕೊಂಡರು. ಒಂದಷ್ಟು ಲಕ್ಷ ಮೊತ್ತ ಫಿಕ್ಸ್ ಮಾಡಿದರು.

ಪದ್ದು ಸಂಸಾರದ ಜತೆಗೆ ತಾನು ಹೊಸದಾಗಿ ಕಟ್ಟಿದ ಮನೆಗೆ ಸ್ಥಳಾಂತರವಾದ.

ಮಂಜೊಟ್ಟಿ ಗುತ್ತಿನಲ್ಲಿ ಸಂಕ್ರಾಂತಿ ಹೂ ನೀರು ಇಡುವ ದಿನ, ಸಮಯ ವ್ಯತ್ಯಾಸವಾಗತೊಡಗಿತು.

ಗುಳಿಗಜೋರದ ಕಲ್ಲಿನ ಮುಂದೆ ಪದ್ದು ಪ್ರತಿ ಸಂಕ್ರಮಣ ನಿಗದಿತ ಸಮಯಕ್ಕೆ ಹಾಜರಿದ್ದ ಕುಟುಂಬದವರ ಜತೆ ಹೂ ನೀರು ಇಡುವ ಸಂಪ್ರದಾಯ ಮುಂದುವರಿಸಿದ.

ಮಂಜೊಟ್ಟಿ ಗುತ್ತಿನ ಬಾಗಿಲಲ್ಲಿ ಬೀಗ ನೇತಾಡತೊಡಗಿತು.

****

ಈ ಕತೆಗೆ ಪೂರಕ ಹಿಂದಿನ ಭಾಗದ  

3 ನೇ ಕತೆ ಮನೆಗೆ ಎಳೆದು ತಂದ ಅಗೋಚರ ಶಕ್ತಿ ಓದಿ

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ