ನಿನ್ನ ಮಾತು ಕೇಳಿ ಸ್ವಲ್ಪ ದುಡುಕಿದೆವಾಂತ...? ಬರುವ ವರ್ಷ ಕೋಲ ಕಟ್ಟುವುದಕ್ಕೆ ಯಾರನ್ನು ಹುಡುಕುವುದು?’
ನೇಮದ ಮರುದಿನ ಬಡವಾಡೆ ಮುಗಿದು ಸಂಪಾಯ್ ಗುತ್ತಿನ ಅಂಗಳದಲ್ಲಿ ಬೆಳಗ್ಗಿನ ಚಹಾ ಕುಡಿಯುವ ಸಂದರ್ಭದಲ್ಲಿ ವಡಾ ಮುರಿದು ಸಾಂಬಾರ್‌ಗೆ ಮುಳುಗಿಸಿ ಬಾಯಿಗಿಡುತ್ತಾ ಒಂದನೇ ಕವರಿನ ಹಿರಿಯವ ಹೇಳಿದ ಮಾತು ಕೇಳಿ ಸುಂದರ ಬೆಚ್ಚಿ ಬಿದ್ದ.
‘ಗುತ್ತಿನವರಿಗೆ ಅವಮಾನ ಮಾಡುವುದನ್ನು ಹೇಗಾದರೂ ನಿಲ್ಲಿಸಬೇಕು ಅಂತ ಹೇಳಿದ್ದು ನೀವಲ್ಲವಾ?.
ಅದಕ್ಕೆ ಒಂದು ಪ್ಲಾನು ಮಾಡಿದೆ. ಆದರೆ ಆ ಗಿರಿಯ ಎಲ್ಲರೆದುರು ಮಾನ ಕಳೆಯುತ್ತಾನೆ. ಈ ಮಟ್ಟಕ್ಕೆ ನಿಲ್ಲುತ್ತಾನೆ ಅಂತ ಗೊತ್ತಿರಲಿಲ್ಲ’ ಸುಂದರ ನುಡಿದ.
‘ತೊಂದರೆ ಇಲ್ಲ ಬಿಡು. ಹಣ ಕೊಟ್ಟರೆ ನೂರು ಮಂದಿ ಸಿಗುತ್ತಾರೆ. ರಾಜದಕಲದಲ್ಲಿ ಅವ ಹೇಳುವ ಅಜ್ಜಿಸುಲೆಕಕ್ಕಿಂತ ನಮಗೆ ಮರ‍್ಯಾದೆ ಮುಖ್ಯ ಬೇರೆ ಯಾರನ್ನಾದರೂ ಹುಡುಕು... ಅವನ ಅಜಲು ಯಾರಿಗೆ ಬೇಕು? ಈಗ ಅಜಲು ನಿಷೇಧ ಕಾನೂನೇ ಉಂಟಲ್ಲ...
ಈ ಗುತ್ತಿನ ಚಾಕರಿ ಮಾಡುವ ಕುಟುಂಬದವರಿಗೇ ಒಂದಕ್ಕೆ ಒಂದುವರೆ ಹಣ ಕೊಡಬೇಕಂತೆ ಅದರ ಮುಂದೆ ಕೋಲ ಕಟ್ಟುವವನದ್ದು ಒಂದು ಹೆಚ್ಚಾಗುತ್ತದಾ...?’
ಒಂದನೆ ಕವರಿನ ಹಿರಿಯವ ತನ್ನ ಎದುರು ಸಾಲಿನಲ್ಲಿ ಕುಳಿತು ಚಹಾ ಹೀರುತ್ತಿದ್ದ ಪದ್ದು, ಸುಜ್ಜಾ ಮತ್ತು ಅವನ ಮಕ್ಕಳ ಕಡೆಗೆ ತೀಕ್ಷ್ಣವಾಗಿ ನೋಡುತ್ತಾ ಎದ್ದು ಕೈ ತೊಳೆಯಲು ನಡೆದ.
ಪದ್ದು ಈ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ.
ಪದ್ದುವಿನ ಪಕ್ಕದಲ್ಲಿ ಕುಳಿತಿದ್ದ ಮಲಾಡ್ ತಾನಾಜಿ ಬಾರ್ ಮಾಲಕ ಶಿವಾನಂದ ಎಡಕೈಯ ಮೊಣಗಂಟಿನಿಂದ ಪದ್ದುವಿನ ಪಕ್ಕೆಯನ್ನು ತಿವಿದ.
‘ಅವ ಯಾರಿಗೆ ಹೇಳಿದ್ದು ಗೊತ್ತಾಗಲಿಲ್ಲವಾ...? ನಿಮಗೆ...’ ಎಂದು ಪಿಸುಗುಟ್ಟಿದ.
‘ಯಾಕೆ...?’ ಪದ್ದು ಚಕಿತನಾಗಿ ಪ್ರಶ್ನಿಸಿದ.
ಸುಜ್ಜಾ ಮತ್ತು ಮಕ್ಕಳು ಎದ್ದು ಕೈ ತೊಳೆಯಲು ಹೋದರು.
ಪದ್ದು, ಶಿವ ಇನ್ನೊಂದು ವಡಾ, ಸಾಂಬಾರ್ ಹಾಕಿಸಿಕೊಂಡರು..
‘ನೋಡು ಪದ್ದು ಸಂಕ್ರಾಂದಿ ಸಂದರ್ಭದಲ್ಲಿ ಸುಜ್ಜಾ ಅಷ್ಟು ದೂರದಿಂದ ಬಂದು ಚಾಕರಿ ಮಾಡಿ ಚಹಾ ತಿಂಡಿ, ಊಟ ಮಾಡಿ ಕೊಡುತ್ತಾಳಲ್ಲಾ... ಅದಕ್ಕೆ ಅವಳಿಗೆ ಸಕ್ರಾಂತಿಗೆ ಐದು ಸಾವಿರದಂತೆ ಮತ್ತು ಅಗೆಲು ಮತ್ತು ಇತರ ಪರ್ವಕ್ಕೆ ಅಂತ ವರ್ಷಕ್ಕೆ ಒಟ್ಟು ಎಪ್ಪತ್ತೈದು ಸಾವಿರ ಕೊಡುತ್ತಾರಲ್ಲಾ ಅದಕ್ಕೆ ಹೇಳಿದ್ದು’ ಶಿವನ ಮಾತು ಕೇಳಿ ಪದ್ದುವಿನ ತಲೆಗೆ ತಣ್ಣೀರು ಸುರಿದಂತಾಯಿತು.
‘ಎಪ್ಪತ್ತೈದು ಸಾವಿರ...
ನೋಡಿ ಶಿವಣ್ಣಾ ಇಷ್ಟರವರೆಗೆ ಒಂದು ನಯಾ ಪೈಸಾ ಕೂಡಾ ಸುಜ್ಜಾ ಸಂಪಾಯ್ ಗುತ್ತಿನಿಂದ ಪಡೆದಿಲ್ಲ. ಸಂಕ್ರಾಂತಿ ಮುಂಚಿನ ದಿನ ಮನೆಯಲ್ಲಿ ಪದೆಂಗಿ ನೆನಸಲು ಹಾಕಿ ಮರು ದಿನ ಇಲ್ಲಿಗೆ ಬರುವಾಗಲೇ ಅಂಗಡಿಯಿಂದ ಚಾಹುಡಿ, ಹಾಲು ಸಹಿತ ಅವಲಕ್ಕಿ ಬೆಲ್ಲ ಎಲ್ಲಾ ಖರೀದಿಸಿ ಇಲ್ಲಿ ಬಂದು ತಿಂಡಿ ತಯಾರಿಸಿ ಕುಟುಂಬದವರು ತಿಂದದ್ದು. ಮಂಜೊಟ್ಟಿ ಗುತ್ತಿನಿಂದಲೇ ಪುಂಡಿ-ಅರೆಪು ತಯಾರಿಸಿ ಇಲ್ಲಿ ತಂದು ತಿಂದದ್ದು ಇದೆ. ಮೊನ್ನೆ ಒಂದು ಗ್ಯಾಸ್ ಸಿಲಿಂಡರ್ ಕೂಡಾ ನಾನೇ ತಂದು ಹಾಕಿದ್ದು.. ಇಲ್ಲಿಂದ ಈವರೆಗೆ ಒಂದು ನಯಾ ಪೈಸಾ ಕೂಡಾ ಪಡೆದಿಲ್ಲ....’
ಪದ್ದುವಿನ ಮಾತನ್ನು ಶಿವ ಕತ್ತರಿಸಿದ.
‘ನನಗೆ ಎಲ್ಲಾ ಗೊತ್ತು ಪದ್ದು. ಇದು ಸುಂದರನ ಕಿತಾಪತಿ. ಲೆಕ್ಕ ಪತ್ರದಲ್ಲಿ ಸಂಕ್ರಾಂತಿ ಅಗೆಲು ಇತ್ಯಾದಿ ಚಾಕರಿ ತಿಂಡಿ ಖರ್ಚು ಅಂತ ಸುಜ್ಜಾ ಹೆಸರಿಗೆ ಬರೆಯಲಾಗಿದೆ. ಹಣ ಯಾರ ಕಿಸೆ ಸೇರಿದ ಅಂತ ನಾನು ಬೇರೆ ಹೇಳಬೇಕಾಗಿಲ್ಲ.
ಇಷ್ಟರವರೆಗೆ ಇಲ್ಲಿ ಇವತ್ತು ಸುಜ್ಜಾ ಮತ್ತು ಕುಟುಂಬದವರು ತಯಾರಿಸಿದ ರುಚಿಕಟ್ಟಾದ ಊಟ, ಮೂಡೆ ಗಸಿ ಎಲ್ಲಾ ಇತ್ತಲ್ಲಾ ಈ ಬಾರಿಯಿಂದ ಬದಲಾಗಿದೆ. ಎಲ್ಲವೂ ಸುಂದರನ ಗುರ್ತದ ಕ್ಯಾಟರಿಂಗ್‌ನವರಿಗೆ.
ಈಗ ನೋಡು ಬೊಂಬಾಯಿ ಸ್ಟೈಲ್ ವಡಾ ಸಾಂಬಾರ್.. ಮಧ್ಯಾಹ್ನ ಕ್ಯಾಟರಿಂಗ್, ಬ್ರಾಯ್ಲರ್ ಕೋಳಿ... ಅಂತೆ. ನನಗೆ ಒಂಚು ಚೂರು ಕೂಡಾ ಇಷ್ಟ ಇಲ್ಲ. ಈ ವರೆಗೆ ಸುಜ್ಜಾ ಮಾಡುತ್ತಿರಲಿಲ್ಲವಾ? ಇವರ ಊಟ ನನಗೆ ಬಾಯಿಗೆ ಇಡುವುದಕ್ಕೆ ಆಗುವುದಿಲ್ಲ... ಎಲ್ಲಾ ಸುಂದರನಿಗೆ ಕಂಟ್ರಾಕ್ಟ್.
ದೈವ ಏನು ಹೇಳುತ್ತದೆ ಸ್ವಲ್ಪ ಕೇಳಿ. ಊರಿನವರನ್ನು ಒಟ್ಟು ಮಾಡಿ, ಕುಟುಂಬದವರಿಗೆ ಹೇಳಿ ಎಲ್ಲವನ್ನೂ ಚೆನ್ನಾಗಿ ಮಾಡುವ ಅಂತ ಹೇಳಿದ್ದಕ್ಕೆ
ಅದೆಲ್ಲಾ ಹಳೆ ಕಾಲಕ್ಕೆ ಆಯ್ತು. ಈಗ ಮಾಡುವುದು ನಾವಂತೆ... ನಾವು ಹೇಳಿದಂತೆ ಆಗಬೇಕು ಅಂತ
ಹಣದ ಮದದಿಂದ ನನ್ನನ್ನೇ ದೂರ ಮಾಡಿದ್ದಾರೆ.
ಕೋಲ ಕಟ್ಟುವವನಿಗೆ ನುಡಿ ಬದಲಿಸಬೇಕು ಎಂದು ಹೇಳಿದ್ದಕ್ಕೆ ವಿರೋಧಿಸಿದವ ನಾನು. ಅವನಿಗೆ ಕರೆದು ಹೇಳುವಾಗ ನಾನು ಇರುವುದಿಲ್ಲ ನೀವೇ ಹೇಳಿ ಎಂದು ಹೇಳಿದ್ದೆ. ಈಗ ನೋಡು ನಿನ್ನೆ ರಾತ್ರಿ ನೇಮದಲ್ಲಿ ಏನಾಯಿತು? ಅದೆಲ್ಲಾ ಸರಿಯಾ?
ಇವರೊಟ್ಟಿಗೆ ನಾನಿಲ್ಲ ಪದ್ದು. ಪಾಪ ಆ ಹುಡುಗಿ ಸುಜ್ಜಾಗೆ ಇದೆಲ್ಲಾ ಹೇಳಬೇಡ. ಅವಳು ಭಯ ಭಕ್ತಿಯಿಂದ ಚಾಕರಿ ಮಾಡಿದವಳು. ಅವಳಿಗೆ ಗೊತ್ತಾದರೆ ಬೇಸರ ನೋವು ಆಗುತ್ತದೆ. ಅವಳನ್ನು ಅಳಿಸುವುದು ಬೇಡ. ನಮ್ಮಲ್ಲೇ ಇರಲಿ.’
ಅರ್ಧ ವಡಾ ತಿಂದು ಇನ್ನೊಂದು ಅರ್ಧ ಬಾಯಿಗಿಡಲು ಹೋದ ಪದ್ದು ಅದನ್ನು ಮತ್ತೆ ಹಾಳೆ ತಟ್ಟೆಗೆ ಇಳಿಸಿ ಎದ್ದು ನಿಂತ.
‘ನೀನು ಚಹಾ ಕುಡಿ ಪದ್ದು... ಅವರವರ ಕರ್ಮ ಅವರವರಿಗೆ... ದೈವ ನೋಡಿಕೊಳ್ಳುತ್ತದೆ’ ಶಿವ ಪದ್ದುವಿನ ಕೈ ಹಿಡಿದು ಎಳೆದು ಕೂರಿಸಲು ನೋಡಿದ.
‘ಇಲ್ಲ ಶಿವಣ್ಣಾ... ನನಗೆ ಇಲ್ಲಿ ಇನ್ನು ನಿಲ್ಲುವುದಕ್ಕೆ ಮನಸಿಲ್ಲ...’ ಪದ್ದು ಎದ್ದು ನಡೆದ.
ಸಂಪಾಯ್ ಗುತ್ತಿನ ಕೋಳಿಗಳನ್ನು ನೇಮದ ಅಂಕಕ್ಕೆ ತೆಗೆದುಕೊಂಡು ಹೋಗಲು ಘಟ್ಟದ ಕೆಲಸದವರು ತಯಾರಾದರು.
ಪದ್ದು ಶಿವನೊಂದಿಗೆ ತಾನು ತಂದಿದ್ದ ನಾಲ್ಕು ಕೋಳಿಗಳಲ್ಲಿ ಆಯ್ದ ಎರಡು ಕೋಳಿಗಳನ್ನು ಗೂಟದಿಂದ ಬಿಚ್ಚಿದ.
ಅದಾಗಲೇ ಪದ್ದುವಿನ ಸಂಗಡಿಗರು ಅಲ್ಲಿ ತಯಾರಾಗಿದ್ದರು.
ಗುತ್ತಿನ ಕವರಿನವರಿಗೆ ಪದ್ದು ಕೋಳಿ ಜಾತಕದ ಪಿತಾಮಹ ಎಂದು ಮೊದಲೇ ಗೊತ್ತಿತ್ತು. ಪದ್ದುವಿನ ಕೋಳಿ ಜಾತಕದ ಮೇಲೆ ನಂಬಿಕೆ ಇಟ್ಟು ಅವನು ಹೇಳಿದ ಜಾತಿಯ, ಬಣ್ಣದ ಕೋಳಿಯ ಮೇಲೆ ಸಾವಿರ ಗಟ್ಟಲೆ ಜೂಜು ಕಟ್ಟಲು ತಯಾರಾದರು.
ಪದ್ದು ಶಿವಾನಂದ ಮತ್ತು ಸಂಗಡಿಗರನ್ನು ಕರೆದು ಅವರ ಕಿವಿಯಲ್ಲಿ ‘ನೋಡಿ ಗುತ್ತಿನ ಕವರಿನವರಿಗೆ ನಾನು ಹೇಳಿದ ಕೋಳಿಯ ವಿರುದ್ಧವಾಗಿ ನೀವು ಜೂಜು ಕಟ್ಟಬೇಕು’ ಎಂದು ಪಿಸುಗುಟ್ಟಿದ.
ಶಿವ ಮತ್ತು ಸಂಗಡಿಗರಿಗೆ ಪದ್ದುವಿನ ಪೆದಂಬು ಅರ್ಥವಾಗಿತ್ತು. ಅವರು ನಸುನಕ್ಕರು. ಸೈ ಎಂದರು.
ಗುತ್ತಿನ ಕವರಿನವರು ಜೂಜು ಕಟ್ಟಿದ ಕೋಳಿಗಳು ನೆಲಕಚ್ಚಿದ್ದವು. ಸಾವಿರಾರು ರೂಪಾಯಿ ಕಳೆದುಕೊಂಡ ಅವರು ಪದ್ದುವಿನ ಬಗ್ಗೆ ಕಿಡಿ ಕಿಡಿಯಾಗಿದ್ದರು.
ಶಿವ, ಪದ್ದುವಿನ ಸಂಗಡಿಗರು ಕಿಸೆ ಭರ್ತಿ ಮಾಡಿಕೊಂಡರು.
ಎದೆ ಉಬ್ಬಿಸಿ ಕೊಂಡು ಕೋಳಿ ಅಂಕಕ್ಕೆ ಬಂದಿದ್ದ ಗುತ್ತಿನ ಮೂರು ಕವರಿನವರ ಎದೆ ಕುಗ್ಗಿತ್ತು. ಅವರು ಜೋಲು ಮೋರೆ ಹಾಕಿಕೊಂಡು ಮಧ್ಯಾಹ್ನ ಗುತ್ತಿನ ದಾರಿ ಹಿಡಿದರು.
‘ನಿನ್ನೆ ರಾತ್ರಿ ಕೋಲ ಕಟ್ಟುವ ಗಿರಿಯ ತಲೆ ಕಂತ ಹಾಕುವಂತೆ ಮಾಡಿದ್ದರೆ. ಇಂದು ಮಧ್ಯಾಹ್ನ ಶಿವಾನಂದ ಮತ್ತು ಪದ್ದು ಸೇರಿ ಮೋಸ ಮಾಡಿದರು. ಈ ಶಿವ ಕೂಡಾ ಹೀಗೆ ಮಾಡುತ್ತಾನೆ ಅಂತ ಗೊತ್ತೇ ಇರಲಿಲ್ಲ’ ಎನ್ನತೊಡಗಿದರು.
ಅವತ್ತಿನವರೆಗೆ ಗುತ್ತಿನಲ್ಲಿ ಕಟ್ಟದ ಕೋಳಿ ರೊಟ್ಟಿ ಸವಿಯುತ್ತಿದ್ದ ಕುಟುಂಬದವರಿಗೆ ಕ್ಯಾಟರಿಂಗ್‌ನ ಬ್ರಾಯ್ಲರ್ ಕೋಳಿಯ ಊಟ ರುಚಿಸಲಿಲ್ಲ.
ಪದ್ದು ಸಂಪಾಯ್ ಗುತ್ತಿನ ಕಡೆಗೆ ಕಾಲಿಡಲಿಲ್ಲ. ಅವನಿಗಾಗಿ ಕಾದ ಸುಜ್ಜಾ ಮತ್ತು ಮಕ್ಕಳು ಊಟ ಮುಗಿಸಿದರು.
ಸಂಜೆಗೆ ಒಟ್ಟೆ ಬಾಲಿಗೆ ಕಟ್ಟಿದ ಏಳೆಂಟು ಕೋಳಿಗಳನ್ನು ಶುಚಿ ಮಾಡಲು ಕೋಳಿ ಅಂಗಡಿಗೆ ಒಯ್ಯಲು ಘಟ್ಟದ ಯುವಕರು ತಯಾರಾದರು. ಶಿವಾನಂದ ಅದರಲ್ಲಿ ಪದ್ದು ತಂದಿದ್ದ ಗಟ್ಟಿಮುಟ್ಟಾದ ಮೂರು ಕೋಳಿಗಳನ್ನು ಆಯ್ದು ಚೀಲಕ್ಕೆ ಹಾಕಿ ತನ್ನ ಕಾರಿನ ಡಿಕ್ಕಿಗೆ ಹಾಕಿದ.
‘ಸುಜ್ಜಾಳನ್ನು ಕರೆ, ನಿನ್ನ ಮನೆಗೆ ಹೋಗುವ ಅಲ್ಲಿ ಪದಾರ್ಥ ಮಾಡುವ ಸುಜ್ಜಾಳ ಕೈಯ ಪುಳಿಮುಂಚಿ ತಿನ್ನುದಕ್ಕೆ ಅಂತ ನಾನು ಬಂದದ್ದು’ ಎಂದು ಪದ್ದುವಿಗೆ ಹೇಳಿದ.
‘ಸಂಜೆಗೆ ಸಂಪಾಯ್ ಗುತ್ತಿನಲ್ಲಿ ನಿಲ್ಲುವ ಅಗತ್ಯ ಇಲ್ಲ. ಕೋಳಿ ಪದಾರ್ಥ ಮಾಡಲು ಘಟ್ಟದವರು ಇದ್ದಾರೆ. ಶಿವಣ್ಣ ಮನೆಗೆ ಬರುತ್ತೇನೆ ಅಂತ ಹೇಳಿದ್ದಾರೆ. ಕೂಡಲೇ ಹೊರಟು ಬಾ. ಶಿವಣ್ಣನ ಕಾರಿನಲ್ಲಿ ಮನೆಗೆ ಹೋಗುವ’ ಎಂದು ಪದ್ದು ಸುಜ್ಜಾಳಿಗೆ ಹೇಳಿಕಳುಹಿಸಿದ.
ಸುಜ್ಜಾ ಮಕ್ಕಳೊಂದಿಗೆ ಶಿವನ ಕಾರು ಏರಿದಳು. ಕಾರು ಸುರತ್ಕಲ್ ಕಡೆಗೆ ಸಾಗಿತು.
ಸುದ್ದಿ ತಿಳಿದ ಸಂಪಾಯ್ ಗುತ್ತಿನ ಮೂರು ಕವರಿನವರು ಶಿವ ಮತ್ತು ಪದ್ದುವಿನ ವಿರುದ್ಧ ಕ್ರೋಧದಿಂದ ಗುಟುರು ಹಾಕಿದರು.
‘-- ಮಕ್ಕಳು ಎಲ್ಲಿ ಲಾಭ ಉಂಟು ಅಲ್ಲಿ ನೆಲಂಟುತ್ತದೆ. ಅವಳಿಗೆ ಸಿಗುವ ಹಣ ಕಟ್ ಮಾಡಿದ್ದು ಒಳ್ಳೆಯದಾಯಿತು’ ಎಂದರು.
ಸುಂದರನ ಮುಖ ಹುಳಿಹುಳಿಯಾಯಿತು.
ಕಾರಿನಲ್ಲಿ ಮಂಜೊಟ್ಟಿ ಗುತ್ತಿಗೆ ಬರುವಾಗ ಮಧ್ಯಾಹ್ನ ಊಟಕ್ಕೆ ಪದ್ದು ಬಾರದೇ ಇರುವ ಬಗ್ಗೆ ಸುಜ್ಜಾಳ ಆಕ್ಷೇಪಕ್ಕೆ ಪದ್ದು ತುಟಿ ಬಿಚ್ಚಲೇ ಇಲ್ಲ.
ಕಾರಿನ ಡಿಕ್ಕಿಯಲ್ಲಿದ್ದ ಕಟ್ಟದ ಕೋಳಿಯನ್ನು ಶಿವ ಸುಜ್ಜಾಳಿಗೆ ಹಸ್ತಾಂತರಿಸಿದ. ‘ಪದಾರ್ಥ ಕಡಕ್ ಆಗಬೇಕು.. ಗೊತ್ತಲ್ಲಾ’ ಎಂದ.
ಸುಜ್ಜಾ ಸಂಭ್ರಮದಿಂದ ಕೋಳಿಗಳನ್ನು ಪಡೆದುಕೊಂಡಳು.
ಅಂದು ಸಂಜೆ ಮಂಜೊಟ್ಟಿ ಗುತ್ತಿನಲ್ಲಿ ಕಟ್ಟದ ಕೋಳಿ ರೊಟ್ಟಿಯ ಊಟದ ಸಂಭ್ರಮ. ಪದ್ದು ತನ್ನ ಗೆಳೆಯರಾದ ಬಾಚು, ರಘುವನ್ನೂ ಆಹ್ವಾನಿಸಿದ್ದ.
ಪದ್ದುವಿನ ಮಕ್ಕಳು ಶಿವನೊಂದಿಗೆ ಚೆನ್ನಾಗಿ ಹೊಂದಿಕೊಂಡರು.
‘ದೊಡ್ಡದಾದ ಮೇಲೆ ಏನಾಗಬೇಕು ಅಂತ ಇದ್ದಿ...?’ ಶಿವ ಶ್ರೀಕುಮಾರನನ್ನು ಪ್ರಶ್ನಿಸಿದ.
‘ನಾನು ವಿಮಾನ ಡ್ರೈವರ್ ಆಗುತ್ತೇನೆ ಮಾವ’ ಶ್ರೀಕುಮಾರ ತಟ್ಟನೆ ನುಡಿದ.
‘ಅಣ್ಣಾ, ಅವ ಹಗಲಿಗೆ ವಿಮಾನದ ಸದ್ದು ಕೇಳಿದರೆ ಹೊರಗೆ ಬಂದು ಅದರ ಶಬ್ದ ಮರೆಯಾಗುವವರೆಗೆ ಅಂಗಳದಲ್ಲಿ ಇರುತ್ತಾನೆ. ರಾತ್ರಿ ಇಡೀ ಆಕಾಶ ನೋಡುತ್ತಾ ಎಲ್ಲಿ ವಿಮಾನ ಹೋಗುತ್ತದೆ ಎಂದು ಕಾಯುತ್ತಾ ಇರುತ್ತಾನೆ. ಅವನಿಗೆ ವಿಮಾನ ಬಿಡಬೇಕಂತೆ...’ ಎಂದಳು.
‘ಒಳ್ಳೆಯ ಆಸೆ .. ಏವಿಯೇಶನ್‌ಗೆ ಭಾರೀ ಡಿಮಾಂಡ್ ಇದೆ. ಹತ್ತನೇ ಕ್ಲಾಸು ಮುಗಿಯಲಿ. ಮುಂಬೈಗೆ ಕಳುಹಿಸಿ ಅಲ್ಲಿ ನನ್ನ ತಾನಾಜಿ ಬಾರ್ ಸಮೀಪವೇ ಒಳ್ಳೆಯ ಏವಿಯೇಶನ್ ಕಾಲೇಜು ಇದೆ. ನಾನು ಕಲಿಸುತ್ತೇನೆ. ನೀವೇನೂ ತಲೆ ಬಿಸಿ ಮಾಡಬೇಡಿ. ನನ್ನ ಮನೆಯಿಂದಲೇ ಕಾಲೇಜಿಗೆ ಹೋಗಲಿ. ನನ್ನ ಮನೆಯಲ್ಲಿ ಉರ್ಪೆಲರಿ ಊಟ, ಪದ್ಧತಿ, ಕ್ರಮ ಎಲ್ಲ ಊರಿನಂತೆ. ನನ್ನ ಅಳಿಯ ಒಂದು ಏವಿಯೇಶನ್ ಇಂಜಿನಿಯರ್ ಆಗಲಿ. ಮುಂಬೈಗೆ ಬರುತ್ತಿಯಾ ಬಾಬಾ...’ ಎಂದ ಶಿವ.
‘ವಿಮಾನ ಬಿಡಲು ಕಲಿಸುತ್ತೀರಾದರೆ ಬರುತ್ತೇನೆ...’ ಎಂದ ಶ್ರೀಕುಮಾರ.
ಮಂಗಳೂರಿನ ಹೊಟೇಲ್‌ನಲ್ಲಿ ರೂಮ್ ಮಾಡಿದ್ದ ಶಿವಾನಂದ ಮಂಜೊಟ್ಟಿ ಗುತ್ತಿನ ಮನೆ, ತಂಪಾದ ಪರಿಸರ ನೋಡಿ ‘ರೂಮಿಗೆ ಹೋಗುವುದಿಲ್ಲ ರಾತ್ರಿ ಇಲ್ಲೇ ಇರುತ್ತೇನೆ’ ಎಂದ.
‘ಇನ್ನು ಊರಿಗೆ ಬಂದರೆ ರೂಮ್ ಮಾಡಬೇಡಿ ಇಲ್ಲಿಗೇ ಬನ್ನಿ ಅಣ್ಣಾ...’ ಎಂದಳು ಸುಜ್ಜಾ.
‘ತಡವಾಗಿಯಾದರೂ ನನಗೊಬ್ಬಳು ಮೋಕೆದ ತಂಗಡಿ ಸಿಕ್ಕಳು. ಇಲ್ಲಿಗೇ ಬರುತ್ತೇನೆ’ ಎಂದ ಶಿವ.
‘ನನಗೂ ಬಹಳ ತಡವಾಗಿ ದೈವದ ಕೃಪೆಯಿಂದ ನಿಮ್ಮಂತಹ ಅಣ್ಣಂದಿರು, ಕುಟುಂಬದವರು ಸಿಕ್ಕಿದ್ದು’ ಎಂದು ಭಾವ ಪರವಶಳಾಗಿ ಸುಜ್ಜಾ ನುಡಿದಳು.
ತಡರಾತ್ರಿಯವರೆಗೆ ಕೋಟ್ ಆಟ. ಚೈತನ್ಯ ಪಾನೀಯ, ಕಟ್ಟದ ಕೋಳಿ ರೊಟ್ಟಿ, ಸುಕ್ಕ ಸಮಾರಾಧನೆಯೊಂದಿಗೆ ಮಂಜೊಟ್ಟಿ ಗುತ್ತಿನಲ್ಲಿ ಹಬ್ಬದ ವಾತಾವರಣವಿತ್ತು.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ