ಅಂದು ಸಂಪಾಯಿಗುತ್ತಿನ ರಾಜದ ಕಲದ ನೇಮ ಎಂದಿನಂತಿರಲಿಲ್ಲ.
ಬಂಟ ದೈವದ ಅಸಮಾಧಾನದ ಅಬ್ಬರವನ್ನು ನೋಡಿ ನೇಮಕ್ಕೆ ನೆರೆದಿದ್ದ ಸಭೆ ರೋಮಾಂಚನಗೊಂಡಿತ್ತು.
ಅರದಾಳ ಮುಖಕ್ಕೆ ಹಾಕಲು ಕುಳಿತಲ್ಲಿಂದಲೇ ಬಂಟ ಚಾಕರಿಯ ಚಂದಪ್ಪ ತನ್ನನ್ನು ತಾನು ನಿಯಂತ್ರಿಸಲಾಗದೆ ಪುಟಿದೇಳುತ್ತಿದ್ದ.
ಜೀಟಿಗೆಯನ್ನು ಎದೆಗೆ ಅಪ್ಪಿ ಹಿಡಿದು ಕುಸಿದ ಆತನನ್ನು ನಿಯಂತ್ರಿಸಲು ನಾಲ್ಕೈದು ಮಂದಿಗೆ ಅಸಾಧ್ಯವಾಗಿತ್ತು.
ಮಧ್ಯಸ್ತರಾಗಿ ಬಂದ ಗುತ್ತಿನಾರ್ ಸಮಾಧಾನಿಸಿ ಸೋತು ಹೋಗಿದ್ದರು.
‘ಹೇಳದೆ ಕೇಳದೆ ಪರಿಮಳದ ಮರವನ್ನು ಯಾರಾದರೂ ಕಡಿದಿದ್ದೀರಾ? ಯಾಕೆ ಹೀಗೆಲ್ಲಾ ಮಾಡ್ತೀರಿ? ದೈವ ಅಂದರೆ ಕುಸಲಾ?’
ಬಂಟ ದೈವದ ಕೈ, ನಾಲಗೆ, ಕಣ್ಣು ಸನ್ನೆಗಳನ್ನು ಅರ್ಥಮಾಡಿಕೊಂಡ ಗುತ್ತಿನಾರ್ ಕೋಪದಿಂದ ಕೇಳಿದರು.
ಗುತ್ತಿನ ನಾಲ್ಕು ಕವರಿನವರು ಮುಖ ಮುಖ ನೋಡಿಕೊಂಡರು.
‘ಹಾಂ ಹೌದು... ಗುತ್ತಿನ ಅಂಗಳಕ್ಕೆ, ಮಾಡಿಗೆ ಎಲೆ ಬಿದ್ದು ಕಸ ಆಗುತ್ತದೆ ಅಂತ. ಹರಿದಾಡುವಂತದ್ದು ಬರುತ್ತದೆ ಅಂತ. ಅದರಿಂದ ಮಂಗ, ಮುಜ್ಜು ಹಾರಿ ಗುತ್ತಿನ ಮನೆಯ ಹೆಂಚು ಹುಡಿಯಾಗುತ್ತದೆ ಅಂತ. ಅದನ್ನು ಈ ಬಾರಿ ಕಡಿಸಿ ಬಿಟ್ಟಿದ್ದೇವೆ’ ಗುತ್ತಿನವರ ಹಿಂದೆ ನಿಂತ ಗುತ್ತಿನ ಉಸ್ತುವಾರಿ ಸುಂದರ ನುಡಿದ.
‘ಓ...’ ಎನ್ನುತ್ತಾ ದೈವ ಆಕಾಶಕ್ಕೆ ಕೈ ತೋರಿಸಿ ಒಂದು ಸುತ್ತು ತಿರುಗಿ ಕುಸಿದು ಕುಳಿತು ‘ಯಾಕೆ...?’ ಎಂದು ಕೈ ಸನ್ನೆ ಮಾಡಿ ಎದೆ ಬಡಿದುಕೊಂಡಿತು.
‘ಅದೇನಿದ್ದರೂ ಮೊಗ ಏರಿ ನುಡಿ ಆಗುವಾಗ ಮದಿಪು ಮಾಡುವ. ಈಗ ನೇಮದ ಕಟ್ಲೆ ಮುಂದುವರಿಯಲಿ ಪೊರ್ತು ಕಡೆಸುತ್ತದೆ ಗುತ್ತಿನಾರರು ಆಜ್ಞಾಪಿಸಿದರು..’
ನೇಮದ ಕಟ್ಟು ಕಟ್ಟಲೆ ಮುಂದೆ ಸಾಗಿತು.
ನೇಮದ ದಿನ ಪದ್ದು ಸುಜ್ಜಾ ಮತ್ತು ಮಕ್ಕಳ ಜತೆ ಸಂಪಾಯಿ ಗುತ್ತಿನ ಚಾವಡಿಗೆ ಕಾಲಿಡುವಾಗಲೇ ಅಸಹಜತೆಯೊಂದನ್ನು ಗಮನಿಸಿದ್ದ.
ಅಂಗಳದಲ್ಲಿ ಮನೆಯ ಮೂರು ಕವರಿನ ಮುಖ್ಯಸ್ಥರು, ಗುತ್ತಿನ ಉಸ್ತುವಾರಿ ಸುಂದರನ ನಡುವೆ ನೇಮ ಕಟ್ಟುವ ಗಿರಿಯ ತಲೆ ತಗ್ಗಿಸಿ ನಿಂತಿದ್ದ. ಏನೋ ಅಸಮಾಧಾನದಿಂದ ಕಿರಿಯ ಕವರಿನವ ಅಲ್ಲಿರಲಿಲ್ಲ.
‘ಊರಿನವರನ್ನು ಹಿಂದಿಟ್ಟುಕೊಂಡು ನೇಮದ ಕಲದಲ್ಲಿ ಯಾವಾಗಲೂ ಗುತ್ತಿನವರಿಗೆ ಅರ್ಹತೆ ಇಲ್ಲಾಂತ ನಾಲಿಸ್ ಮಾಡುವುದು ಸರಿಯಾಗುವುದಿಲ್ಲ ಗಿರಿಯಾ. ಇಷ್ಟರವರೆಗೆ ನುಡಿಯುತ್ತಿದ್ದ ನುಡಿಗಟ್ಟು ಇಂದು ರಾತ್ರಿ ಹೇಳುವಂತಿಲ್ಲ.
ಏನು ಹೇಳಬೇಕೋ ಅದನ್ನು ಸುಂದರ ಹೇಳಿಕೊಡುತ್ತಾನೆ. ನಿನಗೆ ಗುತ್ತಿನ ನೇಮ ಬೇಕೋ, ಊರಿನ ಹದಿನಾರುಮಂದಿ, ವರ್ಗ ಬೇಕೋ ಇವತ್ತು ನಿರ್ಧರಿಸು. ಮತ್ತೆ ಹಿಂದಿನಂತೇ ಹೇಳಿದರೆ ನಿನ್ನ ಅಜಲು ಇವತ್ತಿಗೆ ಕೊನೆ ಅಂತ ತಿಳಿದುಕೋ...’
ಬೇಡ ಬೇಡ ಎಂದರೂ ಮಾತುಗಳು ಪದ್ದುವಿನ ಕಿವಿಗೆ ಕೇಳಿಸಿತ್ತು.
ಗಿರಿಯ ತಲೆ ತಗ್ಗಿಸಿ ನಡೆದ. ಆತನ ಕಣ್ಣುಗಳಿಂದ ನೀರು ಸುರಿದಿತ್ತು.
ಈ ಪಂಚಾತಿಕೆಯನ್ನು ಅತ ತನ್ನ ಸಂಗಡಿಗರಿಗೂ ಹೇಳದೆ ಗಂಟಲಿನೊಳಗೆಯೇ ಮುಚ್ಚಿಟ್ಟುಕೊಂಡ.
ಇದರ ಪ್ರತಿಕ್ರಿಯೆ ನೇಮದ ಕಲದಲ್ಲಿ ಗಿರಿಯನಿಂದ ವ್ಯಕ್ತವಾಗುತ್ತದೆ ಎಂದು ಪದ್ದು ಭಾವಿಸಿದ್ದ.
ಆದರೆ ಈಗ ನೇಮದ ಆರಂಭದಲ್ಲೇ ಬಂಟ ಕಟ್ಟಿದ ಚಂದಪ್ಪ ಅಬ್ಬರಿಸುತ್ತಿದ್ದಾನೆ...! ಏನಿದು ಸೋಜಿಗ? ಪದ್ದು ಮನದಲ್ಲಿಯೇ ಯೋಚಿಸಿದ.
‘ಈ ಗಿರಿಯ ಸಾಮಾನ್ಯದವನಲ್ಲ ಚಂದುವಿಗೆ ಎಲ್ಲಾ ಹೇಳಿಕೊಟ್ಟಿದ್ದಾನೆ. ನೋಡುವ ನಾಟಕ, ಅಬ್ಬರ ಎಲ್ಲಿಯವರೆಗೆ ಮುಂದುವರಿಯುತ್ತದೆ. ನಾನು ಹೇಳಿ ಕೊಟ್ಟ ನುಡಿ ಕಟ್ಟು ಹೇಳುತ್ತಾನಾ ಇಲ್ಲವಾ ಅಂತಾ...’ ಸುಂದರ ಮೊದಲಿನ ಕವರಿನ ಹಿರಿಯವನ ಕಿವಿಯಲ್ಲಿ ನಾಗಸ್ವರ, ತಾಸೆಯ ಸದ್ದಿನ ನಡುವೆಯೇ ಉಸುರಿದ.
ಸಂಪಾಯ್ ಗುತ್ತಿನ ಕವರಿನ ಹಿರಿಯರು, ಪದ್ದು ಮತ್ತು ಊರಿನವರು ಮುಗ ಏರಿದ ದೈವದ ನುಡಿ ಕೇಳಲು ಉತ್ಸುಕರಾಗಿದ್ದರು. ಸುಂದರ ತಾನು ಹೇಳಿಕೊಟ್ಟ ನುಡಿಕಟ್ಟು ದೈವದ ಬಾಯಿಂದ ಕೇಳಲು ಕೆಬಿಕೊಂಡೆ ಮಾಡಿದ್ದ.
‘ಓ....’
‘ಗುತ್ತಿನಾರೇ... ಯಾವುದನ್ನು ಯಾವಾಗ ಮದಿಪಬೇಕೋ ಆವಾಗ ಮದಿಪದೇ ಇದ್ದರೆ ತಪ್ಪಾಗುತ್ತದೆ ಅಲ್ಲವೇ?’ ದೈವ ಕೇಳಿತು.
‘ಹೌದು ಹೇಳುವುದನ್ನು ಆಯಾಯ ಸಮಯದಲ್ಲೇ ಹೇಳಬೇಕು ಇಲ್ಲದೇ ಇದ್ದರೆ ದೈವಕ್ಕೆ ಅಪಚಾರ’ ಗುತ್ತಿನಾರ್ ಹೇಳಿದರು.
‘ನಾನು ಸಂಪಾಯ್ ಗುತ್ತಿಗೆ ಹೇಗೆ ಬಂದೆ? ಏನು ಕತೆ ಎಂದು ಇಂದು ಹೇಳದೆ ಮತ್ತೆ ಯಾವಾಗ ಹೇಳುವುದು?’
ಕವರಿನವರು ತನ್ನ ಮುಖ ನೋಡಿದಾಗ ‘--- ಮಗ ಹೊಸ ಪುರಾಣ ಬಿಡಿಸುತ್ತಾನೆ’ ಎಂದು ಸುಂದರ ಮನದಲ್ಲಿಯೇ ಬೈಯ್ದಾಡಿದ.
‘ಓ....
ಅನಾಚಾರದ ಹೊಗೆ, ಸ್ವೇಚ್ಚಾಚಾರದ ಧಗೆ,
ನಮಗ್ಯಾರು ದಿಕ್ಕು, ನಮಗೇನು ದಾರಿ ಎಂದು ಜನಮಾನಿ ಆಕಾಶಕ್ಕೆ ಕೈ ಮುಗಿಯುವ ಹೊತ್ತು...
ಲೋಕ ಉಂಟು ಮಾಡಿದ ಬೆಮ್ಮೆರ ಅನುವು ಕೇಳಿದೆ.
ಅನ್ಯಾಯ ಅಳಿಸಬೇಕು, ಧರ್ಮ ಉಳಿಸಬೇಕು.
ಬಂಟನ ಜತೆಗೂಡಿ ಊರಿಗೆ ನುಗ್ಗಿದೆ.
ಅನ್ಯಾಯದ ಒಂದು ಬಿದೆ ಗುತ್ತಿನಲ್ಲಿತ್ತು.
ಗುತ್ತಿನ ಬಳಿ ಬಂದೆ.
ರಾತ್ರಿ ಹೋಗಿ ಹಗಲಾಗುವ ಮೊದಲು ಸಂಪಿಗೆಯ ಗಿಡವಾದೆ.
ಬೆಳಗಿನ ಹೊತ್ತು ಗುತ್ತು ತುಂಬ ಸಂಪಿಗೆಯ ಪರಿಮಳ.
'ಇದೇನು ಮಾಯ?, ಇದೇನು ಮಂತ್ರ?' ಎಂದು ಗುತ್ತಿನವ ಎದ್ದು ಬಂದ.
ಆಳುಗಳ ಕರೆಸಿ ಮರ ಕಡಿಸಿ ಬಿಸಾಡಿದ.
ಮರು ದಿನ ಬೆಳಗಾಗುವುದರ ಒಳಗೆ ಅದೇ ಸ್ಥಳದಲ್ಲಿ ಅದೇ ಮರ, ಅದೇ ಪರಿಮಳ.
ನೂರು ಬಾರಿ ಕಡಿಸಿದ, ನೂರೊಂದೊ ಬಾರಿ ಉದಿಸಿದೆ.
ಬಲಿಮೆಗೆ ಜನ ಕಳಿಸಿದ. ಕವಡೆ ಹಿಡಿದು ಬಲ್ಯಾಯ ಬಂದ.
'ದೈವ ನುಗ್ಗಿದೆ, ನಂಬಬೇಕು' ಎಂದ.
'ಕಾಟ್ ಬೂತ, ಕುಡ್ಪೊಲ್ ಬೂತ ನಂಬುವುದಿಲ್ಲ. ಬಲಿಮೆಯವನನ್ನು ಓಡಿಸಿ' ಎಂದ.
ತೆನ್ಕಾಯಿ ರಾಜ್ಯದಿಂದ ಮಾಟದವನನ್ನು ಕರೆಸಿದ. ದಿಬ್ಬಂಧನ ಹಾಕಿಸಿದ.
ಬಂಟನ ಒಂದೇ ಏಟು.
ಮಾಟದವ ಮಾಲೆ ಮಾಲೆ ರಕ್ತಕಾರಿ ಸತ್ತ.
ಇಷ್ಟಾಗುವಾಗ ಗುತ್ತಿಗೆ ದಂಡಿನ ಕರೆ ಬಂತು.
ಬಡಕಾಯಿ ರಾಜ್ಯದ ದಂಡು ಬಂದಿದೆ.
ಮೂಡಾಯಿ ರಾಜ್ಯಕ್ಕೆ ದಂಡು ಸಾರಲಿದೆ.
ಸಾರಾಳ ದಂಡು ಹಿಡಿದು ಬರಬೇಕು ಎಂಬ ಓಲೆ ಬಂತು.
ಗುತ್ತಿನ ಚಾವಡಿಯ ತಂಬಡ ಬಾರಿಸಿದ.
ಕತ್ತಿ, ಕೊದಂಟಿ, ಸುರಿಯ, ಬಾಲ್, ಮಡು, ಕುಡರಿ ಬೈಯ್ತಾಡ್ ಹಿಡಿದು ಆಳುಗಳು ಬಂದರು.
'ಪರದೇಶಿಯಾಗಿ ಬಂದ ದೈವವೇ ಕೇಳು. ದಂಡು ಗೆದ್ದು ಬಂದರೆ ನಿನಗೆ ಗುತ್ತಿನೊಳಗೆ ಸಿಂಗದನ ಇಲ್ಲದೇ ಇದ್ದರೆ ಚೊಂಬಿನೊಳಗೆ ಬಂಧನ' ಎಂದ.
ದಂಡಿನ ಮುಂದೆ ಬಂಟನನ್ನು ಕಳಿಸಿದೆ. ಹಿಂದೆ ನಾನು ನಿಂತೆ.
ರಕ್ತ ಬೀಳದಂತೆ ತಡೆದ, ಬೆವರು ಬಿದ್ದಲ್ಲಿ ಗೆಲ್ಲಿಸಿದೆ.
ಬಡಕಾಯಿ ರಾಜ್ಯ ಓಡಿಸಿದ. ಮೂಡಾಯಿ ರಾಜ್ಯ ಗೆದ್ದ.
ಇನಾಮು, ಬೊಲ್ಗುಡೆ, ಸತ್ತಿಗೆ ಯೊಂದಿಗೆ ಗುತ್ತಿಗೆ ಬಂದ.
‘ನನಗೆಲ್ಲಿ ಮಣೆ?’ ಎಂದೆ.
‘ದಂಡು ಗೆದ್ದದ್ದು ರೆಟ್ಟೆ ಬಲದಿಂದ, ಕಾಟ್ ಭೂತದ ಬಡ್ಡ್ ಕಡ್ಸಲೆಯಿಂದ ಅಲ್ಲ’ ಎಂದ.
ಸಂಪಾಯಿ ಮರ ಕಡಿಸಿದ, ಸುಡಲ ಕಂಡದಲ್ಲಿ ಸುಡಿಸಿದ.
ಕೆಂಪು ಬೆಂಕಿ ಹಾರುವ ನನ್ನ ಕಣ್ಣು ನೋಡಿದ ಬಂಟ ನಡುರಾತ್ರಿ ಗುತ್ತು ನುಗ್ಗಿದ.
ಅಹಂಕಾರದ ರೆಟ್ಟೆ ಮುರಿದು ಅಂಗಳಕ್ಕೆ ಬಿಸಾಡಿದ.
ಗುತ್ತು ತುಂಬ ಬೆಂಕಿ. ಗಂಡು, ಹೆಣ್ಣು, ಮಕ್ಕಳು, ಚೆಲ್ಲಿ ಪಿಲ್ಲೆ, ತೊಟ್ಟಿಲ ಕೂಸು ಬಿಡದೆ ಸುಟ್ಟು ಸುಡುಕರಿ ಮಾಡಿದ.
ಗುತ್ತಿಗೊಂದು ಯಜಮಾನ ಬೇಕು. ತಂಕ ಇದ್ದ, ರೆಟ್ಟೆ ಬಲ ಗಟ್ಟಿ ಇದ್ದವರು ಬನ್ನಿ ರಾಜ್ಯದ ಓಲೆ ಬಂತು.
ತಂಕದ ಜಕ್ಕ ಜವನರು ರಾಜನ ಮುಂದೆ ನೆರೆದರು.
ಆನೆ ಹೂ ಮಾಲೆ ಹಿಡಿದು ಬಂತು.
ಆನೆ ಸೊಂಡಿಲಲ್ಲಿ ಬಂಟನನ್ನು ಇರಿಸಿದೆ.
ನನಗೆ ಬೇಕಾದ ಬಿಸಿ ರಕ್ತದ ಜವನ್ಯನ ಕುತ್ತಿಗೆಗೆ ಮಾಲೆ ಬಿತ್ತು.
ಗುತ್ತಿಗೆ ಬಂದ. ಬಲ್ಯಾಯನನ್ನು ಕರೆದ.
ನನ್ನ ಕಲೆ ಕಾರ್ನಿಕ ಕಂಡು ಬಂತು.
ಸಂಪಿಗೆ ಮರದ ಪರಿಮಳದಲ್ಲಿದ್ದ ನಾನು ಗುತ್ತಿನ ಸಿಂಗದನಕ್ಕೆ ಜಿಗಿದೆ.
ಸಂಪಿಗೆ ಮರ ಸೂರ್ಯ ಚಂದ್ರಾದಿ ಕಾಲದ ವರೆಗೆ ಇರಬೇಕು ಎಂದು ಕಟ್ಟು ಮಾಡಿದೆ.
ಹದಿನಾರು ಗುತ್ತು, ಹದಿನಾರು ವರ್ಗ, ಚಾಕರಿಗೆ ಜನ ಮಾಡಿಸಿದೆ.
ಸಂಪಾಯಿದಾಲ್ ಪಟ್ಟದ ಹೆಸರು ಕೊಟ್ಟೆ.
ಸಂಪಾಯ್ ಗುತ್ತು ಎಂದು ಜನಮಾನಿ ಕರೆಯುವಂತೆ ಮಾಡಿದೆ....
ಸಂಪಾಯ್ ಗುತ್ತಿನ ಕತೆ ಕೇಳಿದ ಊರವರು ರೋಮಾಂಚಿತರಾದರು.
ಓ....
‘ಈಗ ಯಾರು ಸಂಪಾಯ್ ಮರ ಕಡಿದು ಬಿಸಾಡಿದ್ದು....?
ರೆಟ್ಟೆ ಮುರಿಸಿಕೊಂಡು ಅಂಗಳದಲ್ಲಿ ನೆಗರುವ, ಮನೆ ಸುಡುಕರಿ ಆಗುವ ಅಭಯಬೇಕೇ?’
ಸುಂದರ ನಡುಗಿದ.
ಬಂಟದೈವ ಕಣ್ಣು ಮಲೆದು ಆಕಾಶಕ್ಕೆ ಮುಖ ಮಾಡಿ ಏದುಸಿರು ಬಿಡುತ್ತಿತ್ತು.
ಕವರಿನವರ ಮುಖ ಭೀತಿಯಿಂದ ವಿವರ್ಣವಾಯಿತು..
‘ತಪ್ಪಾಯಿತು... ಕ್ಷಮೆ... ಬೇಕು... ಪರಿಮಾರ್ಜನೆ ಏನು?’
ಹಿರಿಯ ಕವರಿನವರ ಜತೆ ಎಲ್ಲರೂ ಕೈಮುಗಿದರು.
‘ಗೊತ್ತಿದ್ದೂ ಯಾರೂ ತಪ್ಪು ಮಾಡುವುದಿಲ್ಲ, ಗೊತ್ತಾಗದೆ ಆಯಿತು... ನಾವು ಚರ್ಮ ದೃಷ್ಟಿ, ನೀನು ಮಾಯಾ ದೃಷ್ಠಿ ಮಾಪು ಬೇಕು. ಮುಂದೇನು ನುಡಿ ಆಗಬೇಕು...’
‘ಹದಿನಾರು ದಿನದೊಳಗೆ ಸಂಪಿಗೆ ಗಿಡ ನೆಡಬೇಕು. ಅದು ಬಲಿತು ಹೂ ಬಿಟ್ಟು ಪರಿಮಳ ಬೀರುವಾಗ ಗುತ್ತಿಗೊಬ್ಬ ಗಡಿ ಹಿಡಿವ ಯಜಮಾನ ಬರುತ್ತಾನೆ... ಈಗಿರುವ ಯಾರಿಗೂ ಗಡಿ ಹಿಡಿಯವ ಯೋಗ್ಯತೆ ಇಲ್ಲ’
ದೈವದ ನುಡಿ ಕವರಿನವರಿಗೆ, ಸುಂದರನಿಗೆ ಚಾಟಿ ಏಟಿನಂತೆ ಅಪ್ಪಳಿಸಿತು. ಊರು ನೆರೆದ ಸಭೆಯಲ್ಲಿ ಗಂಭೀರ ಮೌನ ಆವರಿಸಿತ್ತು.
‘ಯಾರದು ಆಟಿ ಆಮಾಸ್ಯೆ ದಿನ ನಡುಗಿದ್ದು... ಮುಂದೆ ಬನ್ನಿ..’
ದೈವದ ನುಡಿ ಪದ್ದುವನ್ನು ಎಚ್ಚರಿಸಿತು. ಆತ ಸುಜ್ಜಾಳಿಗೆ ಕಣ್ಣು ಸನ್ನೆ ಮಾಡಿದೆ. ಸುಜ್ಜಾ ಮಗ ಶ್ರೀಕುಮಾರ ಮತ್ತು ಮಗಳು ಸಿರಿಯೊಂದಿಗೆ ದೈವದ ಮುಂದೆ ನಿಂತಳು.
ಅಟಿ ಅಮಾಸೆ ದಿನ ಮಗನಿಗೆ ತೊಂದರೆ ಆಗಿತ್ತು... ಸುಜ್ಜಾಳ ಮಾತನ್ನು ದೈವ ಅರ್ಧದಲ್ಲಿ ತುಂಡರಿಸಿತು.
‘ಮಗು ನಡುಗಿತು. ನನಗೆ ಈಡು ಕಟ್ಟಿ ಇಟ್ಟಿರಿ. ಅಷ್ಟಕ್ಕೆ ಬಿಟ್ಟಿರಾ? ವೈದ್ಯರಲ್ಲಿಗೆ ಹೋದಿರಿ, ನೆತ್ತಿಯ ಕೂದಲ ತುದಿಯಿಂದ ಉಂಗುಷ್ಟದ ಉಗುರು ವರೆಗೆ ಪರೀಕ್ಷೆ ಮಾಡಿಸಿದಿರಿ ಸೀಕ್ - ಸಂಕಟ ಯಾವುದೂ ನಮ್ಮ ಲೆಕ್ಕದಲ್ಲಿ ಸಿಗುವುದಿಲ್ಲ, ಮದ್ದಿಲ್ಲ ಅಂದರು. ಮಗು ಚೆನ್ನಾಗಿದೆ ಎಂದು ಹೇಳಿದರು.
ಬಲಿಮೆ ಕೇಳಿದಿರಿ. ದೈವದ ಕಲದಲ್ಲಿ ಪರಿಮಾರ್ಜನೆ ಎಂದರು. ಹೌದಲ್ಲಾ?’
ಸುಜ್ಜಾ ಹೌದೆನ್ನುವಂತೆ ತಲೆ ಅಲ್ಲಾಡಿಸಿದಳು.
‘ಗುತ್ತಿನ ಮನೆಯಲ್ಲಿ ದೈವದ ಆಟಕ್ಕೆ ಸವಾಲೊಡ್ಡುವ ನರಮಾನಿ ಗೊಬ್ಬು ಸುರುವಾಗಿದೆ. ಪರ್ವ ಹಿಂದೆ ಮುಂದೆ ಆಗಿದೆ. ಚಾಕರಿ ಮಾಡುತ್ತಿದ್ದ ಸಂಸಾರವನ್ನು ದೂರ ಮಾಡಲಾಗಿದೆ. ಘಟ್ಟದಿಂದ ಇಳಿದು ಬಂದವರಿಗೆ ಸಂಬಳ ಕೊಟ್ಟು ಚಾಕರಿ ಮಾಡಲಾಗುತ್ತಿದೆ. ಹೌದಲ್ಲಾ...?’
ಸಂಕ್ರಮಣದ ದಿನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುಜ್ಜಾ ಮತ್ತು ಕುಟುಂಬದವರನ್ನು ಸುಂದರ ತಡೆದಿದ್ದ.
‘ಗುತ್ತಿನ ಕವರಿನವರು ಹೇಳಿದ್ದಾರೆ. ಎಲ್ಲವನ್ನೂ ಸಂಬಳಕ್ಕೆ ಜನ ಮಾಡಿ ಮಾಡುವ. ಯಾರಿಗೂ ಭಾರ ಬೇಡ ಅಂತ. ನಿನಗೂ ಕಷ್ಟ. ನೀನು ಅಷ್ಟು ದೂರದಿಂದ ಬೇಗ ಬಂದು ಮನೆಯಲ್ಲಿ ಕೆಲಸ ಮಾಡುವುದು ಬೇಡ. ಊಟ ತಿಂಡಿ ಎಲ್ಲ ಕ್ಯಾಟರಿಂಗ್‌ನವರಿಗೆ ಹೇಳುವ’ ಎಂದು ಸುಂದರ ಹೇಳಿದಾಗ ಉತ್ಸಾಹದಿಂದ ಗುತ್ತಿನ ಕೆಲಸಗಳನ್ನು ಮಾಡುತ್ತಿದ್ದ ಸುಜ್ಜಾ ಮತ್ತು ಕುಟುಂಬದವರ ಮುಖ ಬಾಡಿ ಹೋಗಿತ್ತು. ಅವರು ಸುಮ್ಮನಾಗಿದ್ದರು.
ಸುಜ್ಜಾ ದೈವದ ಮುಂದೆ ‘ಹೌದು...’ ಎಂದು ಒಪ್ಪಿಕೊಂಡಳು.
‘ಈ ಮಗುವನ್ನು ಸಂಕ್ರಮಣದ ದಿನ ಗುತ್ತಿಗೆ ತರಬೇಕು. ಇದು ನನ್ನ ಭಾಗ್ಯದ ಸೊತ್ತು. ಏನೂ ಆಗದಂತೆ ಕಾಪಾಡುತ್ತೇನೆ...’ ದೈವ ಅಭಯ ನೀಡಿತು.
‘ಮಗು ಬೆಳೆಯುತ್ತಿದೆ. ಇನ್ನು ಕಲಿಯುವುದಕ್ಕಿದೆ, ದೂರದ ಊರಿಗೆ ಕಲಿಯುವುದಕ್ಕೆ ಹೋದರೆ ಪ್ರತಿ ಸಂಕ್ರಮಣ ಬರುವುದಕ್ಕೆ ಆಗುತ್ತದೆಯೇ...? ದೈವ ಏನಾದರೂ....’ ಪದ್ದುವಿನ ಕಳಕಳಿಯ ಮಾತನ್ನು ದೈವ ಕತ್ತರಿಸಿತು.
ಗುತ್ತಿನಾರೇ...
'ಪರದೇಶ, ದಂಡಿನರಾಜ್ಯಕ್ಕೆ ಹೋಗಬೇಡ ಎನ್ನುವ ದೈವವೇ ನಾನು? ಅಲ್ಲೆಲ್ಲಾ ಬೆನ್ನಿಗೆ ನಿಲ್ಲುವ ಶಕ್ತಿ ನಾನು.
ಸಂಸಾರ ಪರದೇಶ, ದಂಡಿನ ರಾಜ್ಯಕ್ಕೆ ಹೋದರೆ ನಡುಗಿದಾಗ ಅಲ್ಲಿಂದಲೇ ಪ್ರಾರ್ಥಿಸಲಿ. ಸಂಸಾರದ ಹಿಂದೆ ನಾನಿದ್ದೇನೆ..
ಆದರೆ ನೆನಪಿಟ್ಟುಕೊಳ್ಳಲಿ. ಈ ನಡುಗುವಿಕೆಗೆ ಪರಿಹಾರ ಯಾವುದೇ, ಮಂತ್ರ, ತಂತ್ರ, ನೂಲು, ಉರ್ಕು, ಪ್ರಸಾದದಲ್ಲಿ ಇಲ್ಲ. ಸಂಪಾಯ್ ಗುತ್ತಿನ ಸಂಸಾರಕ್ಕೆ ಇದರ ಅಗತ್ಯವೇ ಇಲ್ಲ. ಇರುವುದು ಸಂಪಾಯ್ ಗುತ್ತಿನ ಚಾಕರಿ, ಪರಿಮಳದಲ್ಲಿ ಮಾತ್ರ. ಇನ್ನು ಎರಡು ಮಾತಿಲ್ಲ... ಬೂಲ್ಯ ಹಿಡಿಯಿರಿ....’
ಸುಜ್ಜಾ ಮಕ್ಕಳ ಜತೆ ಸೇರಿ ಪ್ರಸಾದ ಸ್ವೀಕರಿಸಿದಳು.
ಬೆಳಗಾಗಿತ್ತು, ನೇಮ ಬಿರಿದಿತ್ತು.
ಕವರಿನವರು ಸಂಬಳದ ಲೆಕ್ಕಪತ್ರ ಚುಕ್ತಾ ಮಾಡುತ್ತಿದ್ದರು.
ಸುಂದರ ಪಕ್ಕದಲ್ಲೇ ನಿಂತು ಗಿರಿಯ ಬಂದು ಕೈಮುಗಿದು ದಯನೀಯವಾಗಿ ನಿಲ್ಲುವುದನ್ನು ಕಾಯತೊಡಗಿದ.
ತನ್ನೆಲ್ಲಾ ಸಾಮಾನು ಸರಂಜಾಮುಗಳನ್ನು ರಿಕ್ಷಾದ ಮೇಲೆ ಹೇರಿದ ಗಿರಿಯ ದೈವದ ಗುಡಿಯ ಮುಂದೆ ಕಣ್ಣೀರು ತುಂಬಿ ಅಡ್ಡಬಿದ್ದ.
‘ಇನ್ನು ಹೋಗುವ’ ಎಂದು ರಿಕ್ಷಾ ಚಾಲಕನಿಗೆ ಹೇಳಿದ.
ಕಿರಿಯ ಕವರಿನ ಮುಖ್ಯಸ್ಥ ಓಡಿ ಬಂದು ‘ಗಿರಿಯಣ್ಣ... ಅಜಲು..’ ಎಂದ.
‘ಅದು ನಿನ್ನೆ ಗುತ್ತಿನ ಅಂಗಳದಲ್ಲಿ ಇತ್ಯರ್ಥವಾಗಿದೆ’
‘ಇನ್ನು ಹದಿನಾರು ವರ್ಷ ನಾನು ಇಲ್ಲಿಗೆ ಕಾಲಿಡುವುದಿಲ್ಲ. ಆನಂತರ ಬದುಕಿದ್ದರೆ, ದೈವ ಕರೆದರೆ ಬರುತ್ತೇನೆ. ಅಲ್ಲಿಯವರೆಗೆ ನನ್ನ ಅಜಲು ನಿಮ್ಮ ಪೆಟ್ಟಿಗೆಯಲ್ಲಿ ಇರಲಿ’ ಎಂದು ರಿಕ್ಷಾ ಏರಿದ.
ಸುಂದರ ಸೇರಿ ಎಲ್ಲಾ ಕವರಿನವರು ಬಂಡಕಲ್ಲಿನಂತೆ ನಿಂತರು.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ