ಬ್ರೂಸ್ಲೀ ಬೌನ್ಸರ್

ಪೆದಂಬು ನರಮಾನಿ - ಕಾದಂಬರಿ ಭಾಗ 33

ProfileImg
13 Jul '25
4 ನಿಮಿಷದ ಓದು


image

‘ಕುಮಾರ ಬೊಂಬಾಯಿಗೆ ಬಂದಿದ್ದಾನಂತೆ. ಅವನಿಗೆ ಪೈಲೆಟ್ ಆಗಬೇಕಂತೆ. ನಿಮ್ಮ ತಮ್ಮ, ತಂಗಿಯರೆಲ್ಲ ಕರೆದು ಊಟ ಹಾಕಿಸಿದ್ದಾರೆ. ನೀವು ಈ ಲೋಕದಲ್ಲೇ ಇಲ್ಲ. ಒಂದು ಬಾರಿ ಮನೆಗೆ ಕರೆಯಿರಿ ಹೇಗಿದ್ದರೂ ನಿಮ್ಮ ಮಾಮಿಯ ಪುಲ್ಲಿ ಅಲ್ವಾ? ನಾವು ಹತ್ತಿರದವರು ಅಲ್ವಾ?. ಒಮ್ಮೆ ಬಂದು ಹೋಗಲಿ’

‘ಅವನಾ...?’ ಶ್ರೀಧರ ಪಕಪಕನೆ ಕೊಂಕು ನಗೆ ನಕ್ಕ.

'ಬಜಪೆಯಿಂದ ವಿಮಾನ ತಲೆ ಮೇಲೆ ಹಾರಿ ಹೋಗುವಾಗ ‘ಬೊಂಬಾಯಿಗ್ ಪೋಪಿನಕ್ಲೆಗ್ ಟಾ.. ಟಾ... ಬೈ’ ಎಂದು ಮಂಜೊಟ್ಟಿ ಗುತ್ತಿನ ಅಂಗಳದಲ್ಲಿ ನಿಂತು ಹೇಳಿದಂತಲ್ಲ. ಅದರ ರೆಕ್ಕೆ ಅಂದರೆ ಕನೆಪಲಾಯಿಯ ತುದಿ ಅಂತ ತಿಳಿದುಕೊಂಡು ಆ - ಮಗ ಪದ್ದು ಇಲ್ಲಿಗೆ ಕಳುಹಿಸಿದ್ದು ಕಾಣ್ತದೆ.

ಅವ ತಾನಾಜಿ ಶಿವ ಸಾಮಾನ್ಯದ ಮೂರ್ತಿ ಅಲ್ಲ ಹೊಟೇಲಲ್ಲಿ ಪ್ಲೇಟ್ ತೊಳೆಯಲು ಜನ ಇಲ್ಲ ಅಂತ ಕಾಣ್ಬೇಕು. ಊರಿನವರ ಕೊಪಸ್ ತೊಳೆಯುವ ಕಾಲ ಎಂದೋ ಮುಗಿದು ಹೋಗಿದೆ. ಘಟ್ಟದವರು ಕೂಡಾ ಗಟ್ಟಿ ಆಗಿದ್ದಾರೆ. ಈಗ ಜಾರ್ಖಂಡ್, ಒರಿಸ್ಸಾ, ರೋಹಿಂಗ್ಯಾದವರ ಕಾಲ. ಇವನಿಗೆ ಅವರ ಮೇಲೆ ನಂಬಿಕೆ ಇಲ್ಲ. ಸುಮ್ಮನೆ ಕರೆದಿಲ್ಲ. ಶಾಲೆಗೆ ಕಳುಹಿಸುತ್ತೇನೆ ಅಂತ ಹೊಟೇಲಲ್ಲಿ ದುಡಿಸುವುದಕ್ಕೆ ಅಷ್ಟೆ. ಅವನಜ್ಜ ಪೊಡಿಯ ಕೂಡಾ ಗಡಂಗಲ್ಲಿ ಅದೇ ಮಾಡಿದ್ದಲ್ವ.

ಅವ ಇಲ್ಲಿಗೆ ಬರುವುದು ಯಾಕೆ? ಅವನ ಅಮ್ಮ ಮಂಜೊಟ್ಟಿ ಗುತ್ತಿಗೆ ನುಗ್ಗಿ ಕಾರ್ಬಾರ್ ಮಾಡಿದ್ದು ಸಾಕಾಗಲಿಲ್ಲವ. ಇನ್ನು ಇವ ಇಲ್ಲಿಗೆ ಬರುವುದು ಬೇಡ’

ಶ್ರೀಧರ ಖಂಡ ತುಂಡವಾಗಿ ನುಡಿದ.

‘ನಾವು ಸರಿ ಇದ್ದರೆ ತಾನೆ ಊರವರು ಮನೆಯವರು ಸರಿ ಇರುವುದು. ತವರು ಮನೆ ಗಟ್ಟಿ ಉಂಟು ಅಂತ ನಾನು ಹೇಗೋ ಏಗಿಕೊಂಡು ಹೋಗುತ್ತೇನೆ. ಬೇರೆಯವರಾದರೆ...’ ಶ್ರೀಧರ ಹೆಂಡತಿ ಮಾತು ನಿಲ್ಲಿಸಿದಳು.

‘ಏನು ಬೇರೆಯವರಾದರೆ...?’ ಎಂದು ಕೆಕ್ಕರಿಸಿ ನೋಡುತ್ತಾ ಶ್ರೀಧರ ಎದ್ದು ಫ್ಲಾಟ್‌ನಿಂದ ಹೊರಗೆ ನಡೆದ.

‘ಏನಾದರೂ ಕಷ್ಟ ಆದರೆ ಹೇಳು ಮಗಾ. ಫೀಸಿಗೆ, ಡ್ರೆಸ್ಸಿಗೆ ಹಣ ಬೇಕಾದರೆ ಹೇಳು’ ಎನ್ನುತ್ತಾ ಶ್ರೀಧರನ ಹೆಂಡತಿ ಮದುವೆ ಕಾರ್ಯಕ್ರಮವೊಂದರಲ್ಲಿ ಕುಮಾರನಿಗೆ ಡ್ರೆಸ್ ಉಡುಗೊರೆ ತೊಟ್ಟೆ ನೀಡುತ್ತಾ ಪ್ರೀತಿಯಿಂದ ತಲೆ ಸವರಿದ್ದಳು.

‘ಆಯ್ತು ಮಾಮಿ’ ಎಂದು ಕುಮಾರ ಕಾಲು ಹಿಡಿದಿದ್ದ.

ತಾನಾಜಿ ಬಾರ್ ಸಮೀಪ ಇದ್ದ ಶಿವಾನಂದನ ಮನೆಯಿಂದಲೇ ಕಾಲೇಜಿಗೆ ಹೋದ ಕುಮಾರ ಪಿಯುಸಿ ಸಯನ್ಸ್ ಮುಗಿಸಿದ. ಏವಿಯೇಶನ್ ಬಿಎಸ್ಸಿಗೆ ಸೇರಿದ. ಶಿವಾನಂದನ ಮನೆ‌ಮಂದಿ ಕುಮಾರನಿಗೆ ಅಪಾರ ಅಕ್ಕರೆ ತೋರಿಸಿದ್ದರು.

ಕುಮಾರ ಸಂಜೆ ಹೊತ್ತಿಗೆ ತಾನಾಜಿ ಬಾರ್‌ನ ಗಲ್ಲೆಯ ಬಳಿ ಸ್ಟೂಲ್ ಹಾಕಿಕೊಂಡು ಕುಳಿತು ಕ್ಯಾಶಿಯರ್‌ಗೆ ಸಹಾಯ ಮಾಡುತ್ತಿದ್ದ. ಬಿಲ್ಲಿಂಗ್ ಮಾಡುವುದಕ್ಕೆ, ಒಳ ಹೊರಗೆ ಓಡಾಡುತ್ತಾ, ಕೈಜೋಡಿಸುತ್ತಾ ನಿಧಾನವಾಗಿ ಕೆಲಸ, ವ್ಯವಹಾರವನ್ನೂ ಕಲಿತುಕೊಳ್ಳತೊಡಗಿದ. ಯಾವ ಭಾಗದಲ್ಲಿ ಕೊರತೆ, ಸಮಸ್ಯೆ ಇದೆಯೋ ಅಲ್ಲಿ ತಯಾರಾಗುತ್ತಿದ್ದ. ಶಿವಾನಂದನಿಗೆ ಅವನಿದ್ದರೆ ತಾನು ಇದ್ದಂತೆ ಎಂದು ಅನಿಸತೊಡಗಿತು. ಆರು ಅಡಿ ಉದ್ದ, ಅದಕ್ಕೆ ತಕ್ಕಂತೆ ತೋರ ಬೆಳೆದ ಕುಮಾರ ಈಗ ಜಕ್ಕ ಜವನ್ಯನಾಗಿದ್ದ.

ತಾನಾಜಿ ಬಾರ್ ವಿಸ್ತರಿಸತೊಡಗಿತು. ಪಾರ್ಟಿಹಾಲ್, ಪಬ್ ಎಂದು ನಿಧಾನವಾಗಿ ಉನ್ನತಿಗೆ ಏರತೊಡಗಿತು.

ಒಂದು ಶನಿವಾರ ಸಂಜೆಯಾಗುತ್ತಿದ್ದಂತೆ ಶಿವಾನಂದನ ರಕ್ತದ ಒತ್ತಡ ಹೆಚ್ಚಾಗತೊಡಗಿತು ಗಡಿಬಿಡಿಯಿಂದ ಓಡಾಡತೊಡಗಿದ.

ಆ ಪರಿಸರದ ಅತೀ ಕೆಟ್ಟ ಹೆಸರಿನ ಕತರ್ನಾಕ್ ಟೈಗರ್ ಗ್ಯಾಂಗ್ ತಾನಾಜಿ ಬಾರ್‌ನಲ್ಲಿ ಪಾರ್ಟಿ ಏರ್ಪಡಿಸಿತ್ತು. ಮಲಾಡ್‌ನ ಯಾವ ಹೊಟೇಲಿನವರೂ ಟೈಗರ್ ಗ್ಯಾಂಗ್‌ನ ಪಾರ್ಟಿ ವಹಿಸಿಕೊಳ್ಳದೆ ‘ಬುಕ್ಕಿಂಗ್ ಆಗಿದೆ’ ‘ರಿಪೇರಿ ಇದೆ’ ಎಂದು ಕೈತೊಳೆದುಕೊಳ್ಳುತ್ತಿದ್ದರು. ಆ ಪಾರ್ಟಿಯಲ್ಲಿ ಗಲಾಟೆ, ಮಾರಾಮಾರಿ. ಹೊಟೇಲ್ ಪುಡಿಯಾಗುವುದು ಮಾಮೂಲಿಯಾಗಿತ್ತು.

ಈಗ ಒಪ್ಪಿಕೊಂಡು ಆಗಿದೆ. ಈ ಬೌನ್ಸರ್ ಕಂಟ್ರಾಕ್ಟರ್ ಮರಕಟ್ಟುತ್ತಾನಂತ ಯಾರಿಗೆ ಗೊತ್ತು. 'ನಾಲ್ಕು ಬೌನ್ಸರ್ ಜಾಸ್ತಿ ಕಳುಹಿಸು' ಎಂದು ಕೇಳಿದರೆ 'ಇವತ್ತು ಒಬ್ಬನೇ ಒಬ್ಬ ಬೌನ್ಸರ್ ಸಿಗುವುದಿಲ್ಲ' ಎಂದು ಹೇಳುತ್ತಿದ್ದಾನಲ್ಲಾ  ಬೋ... ಮಗ. ಇತ್ತ ಮ್ಯಾನೇಜರ್ ಕೂಡಾ ಕೈಚೆಲ್ಲಿದ್ದಾನೆ.

ಬೇರೇನಿಲ್ಲ ಇದು ಜೀನಿಸ್ ಬಾರ್‌ನವನ ಕಿತಾಪತಿ. ಅವನಿಗೆ ಗೊತ್ತಿದೆ ಇವತ್ತು ಇಲ್ಲಿ ಟೈಗರ್ ಗ್ಯಾಂಗ್ ಪಾರ್ಟಿ ಇದೆ ಅಂತ. ತಾನಾಜಿಯ ಏಳಿಗೆ ಸಹಿಸಲಾಗದೆ ಹೊಟ್ಟೆ ಕಿಚ್ಚಿನಿಂದ ಬೌನ್ಸರ್ ಕಂಟ್ರಾಕ್ಟರ್‌ಗೆ ದುಡ್ಡು ಕೊಟ್ಟು ತಪ್ಪಿಸಿದ್ದಾನೆ. ಏನು ಮಾಡುವುದು...?

ಮೊಬೈಲ್ ತೆಗೆದ ಶಿವಾನಂದ ಬೌನ್ಸರ್ ಕಂಟ್ರಾಕ್ಟರ್‌ಗೆ ಕರೆ ಮಾಡಿ ‘ನಿನ್ನ ಉಲ್ಟಾ... ಪೆದಂಬು ಎಲ್ಲಾ ನನ್ನತ್ರ ಬೇಡ..’ ಎಂದು ಎಕ್ಕಾಸಕ್ಕಾ ಬೈಯ್ದಾಡತೊಡಗಿದ. ಆತ ಒಂದಷ್ಟು ಮಾತಾಡಿ ಕಾಲ್ ಕಟ್ ಮಾಡಿದ.

ಒತ್ತಡದಿಂದ ಬೆವರಿಕೊಂಡ ಶಿವಾನಂದ ಕೌಂಟರ್ ನ‌ ಚೆಯರ್ ನಲ್ಲಿ ಕುಸಿದು ಕುಳಿತು ಸಿಗರೇಟು ಹಚ್ಚಿ ಹೊಗೆ ಬಿಡತೊಡಗಿದ.

ಸಿಗರೇಟು ಹೊಗೆ ಉಂಗುರದ ನಡುವೆ  ಆತನ ಕಣ್ಣು ಹೊಟೇಲು ಬಾಗಿಲ ಬಳಿ ಇದ್ದ ಜೂಸ್ ಕಾರ್ನರ್‌ನ ಕಡೆ ಹೊರಳಿತು.

ಕಪ್ಪು ಪ್ಯಾಂಟು, ಶರ್ಟು, ಶೂಸ್  ಧರಿಸಿಕೊಂಡ ನೀಟಾದ ಪೊಲೀಸ್ ಕಟ್ ಯುವಕರು ಎರಡು ಟೇಬಲಿನ ಎಂಟು ಚಯರ್‌ನಲ್ಲಿ ಕುಳಿತು ಜೂಸ್ ಕುಡಿಯುತ್ತಿದ್ದರು. ಕುಮಾರ ಅವರ ಜತೆ ಮಾತನಾಡುತ್ತಿದ್ದ.

ಇದ್ದಕ್ಕಿದ್ದಂತೆ ಕಪ್ಪು ಉಡುಗೆ ಧರಿಸಿದ ಗಡ್ಡಧಾರಿ ಪೇಟಾ ತೊಟ್ಟ ಪೈಲ್ವಾನ್ ಸರ್ದಾರ್ಜಿ ಅವರ ಬಳಿಗೆ ಬಂದ. ಯುವಕರು ಜೋರಾಗಿ ನಗುತ್ತಾ. ‘ಕ್ಯಾಪ್ಟನ್ ಕಮಾನ್. ಜೂಸ್ ಪೀಜಿಯೇ...?' ಎಂದು ಕುಳಿತಲ್ಲಿಂದ ಎದ್ದು ಸೆಲ್ಯೂಟ್ ಹೊಡೆದರು.

ಏನಾಗುತ್ತಿದೆ ಎಂದು ಶಿವಾನಂದನನಿಗೆ ಅರ್ಥವೇ ಆಗುತ್ತಿರಲಿಲ್ಲ. ಆತ ಕುಮಾರನನ್ನು ಕೈ ಸನ್ನೆಯಿಂದ ಕರೆದ.

‘ಟೆನ್ಶನ್ ಮಾಡಬೇಡಿ ಮಾಮಾ. ಬೌನ್ಸರ‍್ಸ್ ಬಂದಿದ್ದಾರೆ’ ಎಂದ.

‘ಯಾರು ಅವರೆಲ್ಲಾ...?’ ಶಿವಾನಂದ ಕುತೂಹಲದಿಂದ ಕೇಳಿದ.

‘ಜೀನಿಯಸ್‌ನವ ಬೌನ್ಸರ್‌ಗೆ ಗಾಳ ಹಾಕುತ್ತಾನೆ ಅಂತ ಮೊದಲೇ ಗೊತ್ತಿತ್ತು ಮಾಮ. ಅದಕ್ಕೆ ನನ್ನಷ್ಟೇ ಎತ್ತರದ ನನ್ನ ಕ್ಲಾಸ್‌ನ ಫಸ್ಟ್ ಇಯರ್, ಸೆಕೆಂಡ್ ಇಯರ್ ಪಂಚಾಬಿ, ಪಠಾನ್, ನೇಪಾಳಿ ಗೆಳೆಯರನ್ನು ಕಪ್ಪು ಯೂನಿಫಾರ‍್ಮ್ ಹಾಕಿಕೊಂಡು ಬರಲು ಫೋನ್ ಮಾಡಿ ಹೇಳಿದ್ದೆ. ಇವರು ಸಾಕಲ್ವಾ? ಆ ಬೌನ್ಸರ‍್ಸ್ ಕೂಡಾ ಮಾಡುವುದು ಅಷ್ಟೇ ಅಲ್ವಾ? ಇವರು ನಾಲ್ಕು ಬಾರಿಸುವುದಕ್ಕೂ ರೆಡಿ ಇದ್ದಾರೆ’ ಎಂದ.

ಶಿವಾನಂದನ ಬಿಪಿ ಒಮ್ಮೆಗೆ ಇಳಿದು ಹೋಗಿತ್ತು. ಆತನ ಮುಖ ಅರಳಿತು.

ಸಿಗರೇಟು ಕುತ್ತಿ ಆ್ಯಶ್ ಟ್ರೇಗೆ ಕುಕ್ಕಿದ.

‘ಕುಮಾರ, ಮೊದಲೇ ಹೇಳುದಲ್ವಾ...? ಅವರು ಏನು ತಿನ್ತಾರೆ ಅದೆಲ್ಲಾ ಕೊಡು. ಪಾರ್ಟಿ ಮುಗಿಯುವಾಗ ಹನ್ನೊಂದಾದೀತು. ಹುಡುಗರು ಹಸಿವು ಅನ್ನಬಾರದು'  ಎನ್ನುತ್ತಾ  'ನೀನು ಮರ್ಯಾದೆ ಉಳಿಸಿದೆ ಮಾರಾಯಾ’ ಎಂದು ಕುಮಾರನನ್ನು ಅಪ್ಪಿ ಹಿಡಿದು ಯುವಕರ ಬಳಿ ಬಂದ. ಎದ್ದು ನಿಂತ ತನಗಿಂತ ಎತ್ತರದ ಎಲ್ಲಾ ಯುವಕರ ಪರಿಚಯ ಕೇಳುತ್ತಾ ಕೈ ಕುಲುಕಿದ. ‘ಆಲ್ ಇಂಡಿಯಾ ಗ್ಯಾದರ‍್ಡ್ ಹಿಯರ್’ ಎಂದು ಸಂತಸದ ನಗು ನಕ್ಕ.

‘ಇವರಿಗೆಲ್ಲಾ ಈ ಯೂನಿಫಾರ‍್ಮ್ ಹೇಗೆ ತೆಗೆದುಕೊಟ್ಟೆ ಕುಮಾರ’ ಎಂದ ಶಿವಾನಂದನಿಗೆ ‘ಅದು ನಮ್ಮ ಫ್ಲೈಟ್ ಯೂನಿಫಾರ‍್ಮ್ ಮಾಮಾ. ಎಲ್ಲರಿಗೂ ಬಿಳಿ ಟೈ ಒಂದು ಇದ್ದರೆ ಒಳ್ಳೆಯದಿತ್ತು’ ಅಂದ.

ಶಿವಾನಂದ ಕೂಡಲೇ ಒಂದಷ್ಟು ಬಿಳಿ ಟೈ ತರಿಸಿದ.

ಯುವಕರ ಗುಂಪಿಗೆ ಮತ್ತೆ ಮೂರು ಯುವಕರು ಸೇರಿಕೊಂಡರು.

ಹನ್ನೆರಡು ಮಂದಿ ಕಪ್ಪು ಉಡುಗೆಯ ಯುವಕರು ಪಾರ್ಟಿ ಹಾಲ್‌ನ ಆಯಕಟ್ಟಿನ ಸ್ಥಳದಲ್ಲಿ ಎದೆ ಉಬ್ಬಿಸಿ ಎಲ್ಲದಕ್ಕೂ ತಯಾರು ಎನ್ನುವಂತೆ ನಿಂತರು.

ಬಿರುಗಣ್ಣಿನ ಗಡಸು ಮುಖದ ಸರ್ದಾರ್‌ಜೀ ಅವರ ಕ್ಯಾಪ್ಟನ್ ಆದ.

ಎಷ್ಟೇ ಕುಡಿದು ಚಿತ್ತಾದರೂ ಮುಖದಲ್ಲಿ ಒಂದು ಚೂರು ನಗುವಿನ ಸುಳಿವಿಲ್ಲದೆ ಸುಳಿದಾಡುತ್ತಿದ್ದ ಬೌನ್ಸರ್‌ಗಳನ್ನು ಕಂಡು ಟೈಗರ್ ಗ್ಯಾಂಗ್ ಬಾಲ ಮಡಚಿತ್ತು.

‘ನೋ ಮಾಮಾ... ನೋ ಮಾಮಾ ಇಟ್ ಇಸ್ ಏ ಜಸ್ಟ್ ಟೈಂಪಾಸ್, ದೆ ಆರ್ ರಿಯಲ್ ರೌಡೀಸ್. ನೈಸ್ ಎಕ್ಸ್ ಪೀರಿಯನ್ಸ್. ಹಮಾರಾ ಮೂ ಮೇ ಸೀರಿಯಸ್ ಹಾರ್ಟ್ ಮೇ ಪುಕುಪುಕು’ ಎಂದು ನಗುತ್ತಲೇ ಹಣ ನಿರಾಕರಿಸಿದ ಎಲ್ಲಾ ಯುವಕರ ಮೊಬೈಲ್ ನಂಬರ್ ಪಡೆದು ಒಂದೊಂದು ಸಾವಿರ ಪೇಮಾಡಿದ ಶಿವಾನಂದ ಅವರಿಗೆ ಬೇಕಾದ ತಿಂಡಿ ತಿನ್ನಿಸಿದ.

ಟೈಗರ್ ಗ್ಯಾಂಗ್‌ನ ನಾಯಕ ಕೊನೆಗೆ ಬಿಲ್‌ಪಾವತಿಸುತ್ತಾ

‘ಶಿವಾ ಭಾಯಿ ಎ ಬೌನ್ಸರ್ ಲೋಗ್ ಕೌನ್ ಹೇ?’ ಎಂದ.

ಶಿವಾನಂದ ತಲೆ ಕಂತ ಹಾಕಿ ನಸುನಗುತ್ತಾ ನುಡಿದ.

‘ನಯಾ ವಾಲಾ ಹೇ. ಹಮಾರಾ ಬ್ರೂಸ್ಲೀ ಜೂಡೋ ಕ್ಲಬ್ ಕಾ ಚೋಕ್ರಾ ಹೇ’

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ