Do you have a passion for writing?Join Ayra as a Writertoday and start earning.

ಕ್ರಿಕೆಟ್ ಮೈದಾನದೊಳಗೊಂದು ಇಣುಕು ನೋಟ: Part 2

1975 ರಿಂದ ಶುರುವಾದ 'ಪುರುಷರ ಕ್ರಿಕೆಟ್ ವಿಶ್ವಕಪ್', 2023 ರಲ್ಲಿ ಭಾರತದ ಅಂಗಳದಲ್ಲಿ ತನ್ನ ವಿಕೆಟುಗಳನ್ನು ನೆಟ್ಟಿದೆ. ಈ ನಡುವೆ ಕ್ರಿಕೆಟ್ ಚೆಂಡು ಎಲ್ಲೆಲ್ಲಿ ಸಂಚರಿಸಿತು? ಬ್ಯಾಟುಗಳು ಹೇಗೆಲ್ಲಾ ಬೀಸಿದವು? ಮಹಿಳೆಯರ ಕ್ರಿಕೆಟ್ ಹೇಗೆಲ್ಲಾ ಅರಳಿತು? ಕ್ರಿಕೆಟ್ ಮೈದಾನದೊಳಗೆ ಇನ್ನೊಂದು ಸುತ್ತು ಹಾಕೋಣ ಬನ್ನಿ..

ProfileImg
27 Oct '23
5 min read


image

ನೀವಿನ್ನೂ ಈ ಲೇಖನದ ಮೊದಲ ಭಾಗವನ್ನು ಓದದೇ ಇದ್ದರೆ, ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹೀಗೆ ಏಕದಿನ ಕ್ರಿಕೆಟ್ ಶುರುವಾಯಿತು..

"ಕೆಂಪು ಬಾಲು ಹೋಗಿ, ವೈಟು ಬಾಲು ಬಂತು

ಬಿಳಿಯ ಡ್ರೆಸ್ಸು ಹೋಗಿ, ಕಲರು ಡ್ರೆಸ್ಸು ಬಂತು

ಓವರುಗಟ್ಲೇ ಮ್ಯಾಚಿನಿಂದ, ಟ್ವೆಂಟಿ-ಟ್ವೆಂಟಿ ಹುಟ್ಟಿತು

ಕೋಟಿಗಟ್ಟಲೇ ದುಡ್ಡು, ಜೇಬಿನೊಳಗೆ ಇಳಿಯಿತು

ಅತಿ ವೇಗದ ಈ ಬದುಕು, ಮೈದಾನದಲಿ ನೆರೆಯಿತು"

ಇದು ಇವತ್ತಿನ ಯಾವುದೋ ಹೊಡಿ-ಬಡಿ ಸಿನಿಮಾದ ಹಾಡಲ್ಲ. ಕಾಲಕ್ಕೆ ತಕ್ಕ ಮೇಳ ಎಂಬಂತೆ, ಕ್ರಿಕೆಟ್ ಅನ್ನೋ ಆಟ ಬದಲಾಗುತ್ತಲೇ ಇರುವ ರೀತಿಯಿದು. ಇದು ಇವತ್ತಿನ ಕಮರ್ಷಿಯಲ್ ಸಿನಿಮಾಗಿಂತ ಏನೇನೂ ಕಮ್ಮಿಯಿಲ್ಲವಾದ್ದರಿಂದ, ಅದೇ ಧಾಟಿಯ ಹಾಡಿನಿಂದ ಶುರು ಮಾಡಬೇಕಾಯಿತು. ಏಕದಿನ ಪಂದ್ಯಗಳು ಹುಟ್ಟಿದಂದಿನಿಂದ ಈ ಬದಲಾವಣೆ ನಿರಂತರವಾಗಿ ನಡೆಯುತ್ತಲೇ ಇದೆ. ಈ ಬದಲಾವಣೆಯ ಪಯಣದಲ್ಲಿ ಬಣ್ಣದ ಬಟ್ಟೆಗಳು, ಸೀಮಿತ ಓವರುಗಳ ಹಗಲು-ರಾತ್ರಿ ಪಂದ್ಯಗಳು ಕ್ರಿಕೆಟನ್ನು ಆಕರ್ಷಣೀಯವಾಗಿಸುತ್ತಾ ಮುಂದುವರೆಸಿದವು. ಒನ್ ಡೇ ವಿಶ್ವಕಪ್ಪಿನ ಜೊತೆ ಜೊತೆಗೇ, ಟ್ವೆಂಟಿ ಟ್ವೆಂಟಿ ವಿಶ್ವಕಪ್ ಆಟದ ರೋಮಾಂಚನವನ್ನು ಉತ್ತುಂಗಕ್ಕೇರಿಸುತ್ತಿದೆ. ಐಪಿಎಲ್ ಅದಕ್ಕೆ ಇನ್ನಷ್ಟು ಮಸಾಲೆ ಸೇರಿಸಿ ಕ್ರಿಕೆಟ್ ಪ್ರೇಮಿಗಳಿಗೆ ವಿಧ ವಿಧದ ಖಾದ್ಯಗಳನ್ನು ಉಣ ಬಡಿಸುತ್ತಿದೆ.

1972 ರಲ್ಲಿ ಮೆಲ್ಬರ್ನ್'ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಮ್ಯಾಚೊಂದು ನಡೆಯುತ್ತದೆ. ಆದರೆ, ಮಳೆಯ ಕಾರಣದಿಂದಾಗಿ ಆ ಪಂದ್ಯ ರದ್ದಾಗುತ್ತದೆ. ಮಳೆ ಮೋಡ ಕರಗಿ ನೀರಾಗಿ, ಅಲ್ಲಿ ಸೇರಿದ್ದ 50 ಸಾವಿರದಷ್ಟು ಪ್ರೇಕ್ಷಕರ ಮುಖದಲ್ಲಿ ನಿರಾಶೆಯ ಕಾರ್ಮೋಡ ಕವಿಯುತ್ತದೆ. ಆ ಪ್ರೇಕ್ಷರನ್ನು ಖುಷಿ ಪಡಿಸಲೆಂದು, ಮಳೆ ನಿಂತ ಮೇಲೆ ಒಂದು ದಿನದ ಪಂದ್ಯವೊಂದನ್ನು ಆಡಿಸಲಾಗುತ್ತದೆ. ಅಂದು ಓವರೊಂದಕ್ಕೆ ಎಂಟು ಚೆಂಡುಗಳಿದ್ದು, 40 ಓವರ್'ಗಳ ಪಂದ್ಯವಾಗಿತ್ತದು. ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವನ್ನು ತನ್ನದಾಗಿಸಿಕೊಂಡಿತ್ತು. ಆ ಪಂದ್ಯ ಕ್ರಿಕೆಟಿನ ಭವಿಷ್ಯವನ್ನೇ ಬದಲಾಯಿಸಿತು. ಹಾಗೇ, ಅಧಿಕೃತ ಟೆಸ್ಟ್ ಕ್ರಿಕೆಟ್ ಹುಟ್ಟಿ 95 ವರ್ಷಗಳ ನಂತರ ಆಕಸ್ಮಿಕವಾಗಿ ಏಕದಿನ ಕ್ರಿಕೆಟ್ ಹುಟ್ಟಿತು. ಇದಾಗಿ ನಾಲ್ಕು ವರ್ಷಗಳಲ್ಲೇ ಮೊದಲ ಪುರುಷರ ವಿಶ್ವಕಪ್ ಪಂದ್ಯಾಟಗಳು ನಡೆದವು. ಮೊದಲ ವಿಶ್ವಕಪ್ಪಿನಲ್ಲಿ 8 ತಂಡಗಳು ಭಾಗವಹಿಸಿದ್ದವು. 60 ಓವರುಗಳ ಪಂದ್ಯಾಟವಾಗಿತ್ತದು. 1975ರ ಜೂನ್ 7ರಂದು, ಭಾರತದ 'ಮದನ್ ಲಾಲ್' ಇಂಗ್ಲೆಂಡಿನ 'ಜಾನ್ ಜೇಮ್ಸ'ನಿಗೆ ಮೊದಲ ಎಸೆತ ಎಸೆಯುವ ಮೂಲಕ ವಿಶ್ವಕಪ್ ಪಂದ್ಯಾಟ ಆರಂಭವಾಗಿತ್ತು. ಇವತ್ತು ಹೀನಾಯ ಪರಿಸ್ಥಿತಿಯಲ್ಲಿರುವ 'ವೆಸ್ಟ್ ಇಂಡೀಸ್' ಕ್ರಿಕೆಟ್ ತಂಡ, ಅವತ್ತು ಉಚ್ಛ್ರಾಯ ಸ್ಥಿತಿಯಲ್ಲಿತ್ತು. 1975ರಲ್ಲಿ ನಡೆದ ಮೊದಲ ಮತ್ತು ಆ ನಂತರದ ಎರಡನೇ ವರ್ಲ್ಡ್ ಕಪ್ಪನ್ನೂ ಗೆದ್ದು, ಮೇಲಿಂದ ಮೇಲೆ ಎರಡು ವಿಶ್ವಕಪ್ಪುಗಳನ್ನು ಗೆದ್ದಿತ್ತು ವೆಸ್ಟ್ ಇಂಡೀಸ್. 'ಕ್ಲೈವ್ ಲಾಯ್ಡ್', 'ವಿವಿಯನ್ ರಿಚರ್ಡ್ಸನ್' ರಂತಹ ಅಸಾಮಾನ್ಯ ಆಟಗಾರರಿಂದ ತುಂಬಿದ್ದ ತಂಡವಾಗಿತ್ತು ವೆಸ್ಟ್ ಇಂಡೀಸ್. ಮೊದಲ ಎರಡೂ ವಿಶ್ವಕಪ್’ಗಳಲ್ಲು ಭಾರತದ ಪ್ರದರ್ಶನ ಶೋಚನೀಯವಾಗಿತ್ತು. ಎರಡನೇ ವಿಶ್ವಕಪ್'ನ ಸೆಮಿಫೈನಲಿಗೇರುವ ಮೂಲಕ, ಆ ಸಾಧನೆ ಮಾಡಿದ ಏಷ್ಯಾದ ಪ್ರಥಮ ತಂಡವಾಯ್ತು ಪಾಕಿಸ್ಥಾನ. ಆದರೆ ಮೂರನೇ ವಿಶ್ವಕಪ್ಪಿನಲ್ಲಿ ಎಲ್ಲರ ನಿರೀಕ್ಷೆಗಳು ತಲೆಕೆಳಗಾಯಿತು. ಕಪಿಲ್ ನಾಯಕತ್ವದ ಭಾರತ ತಂಡ, ವಿಂಡೀಸ್ ದೈತ್ಯರನ್ನು ಸೋಲಿಸಿ ಕಪ್ ಎತ್ತಿತು. ಆ ಮೂಲಕ ಭಾರತದಲ್ಲಿ ಕ್ರಿಕೆಟ್ ಕ್ರೇಝಿನ ಆರಂಭಕ್ಕೆ ತುದಿಯೊತ್ತಿತು. ಅಲ್ಲಿಂದ ಮುಂದೆ ‘ಸಚಿನ್ ತೆಂಡುಲ್ಕರ್’ ಯುಗ ಮುಗಿದು, ಈಗ ‘ಕೊಹ್ಲಿ’ ಯುಗಕ್ಕೆ ಕಾಲಿಟ್ಟಿದೆ ಭಾರತದ ಪುರುಷರ ಕ್ರಿಕೆಟ್. ಈ ಯುಗಗಳ ನಡುವೆ ಮತ್ತು ಅದಕ್ಕಿಂತ ಮುಂಚೆ, ಅವರಿಬ್ಬರಷ್ಟೇ ಪ್ರತಿಭಾವಂತರಾದ ಹಲವು ಬ್ಯಾಟ್ಸ್ ಮೆನ್’ಗಳು ಬಂದು ಹೋದರು. ಕಲಾತ್ಮಕ ಆಟದ ಶಿಖರ ಪ್ರಾಯರಂತಿದ್ದ ಕರ್ನಾಟಕದ ‘ಗುಂಡಪ್ಪ ವಿಶ್ವನಾಥ್’ ಮತ್ತು ‘ರಾಹುಲ್ ದ್ರಾವಿಡ್’ ಆ ಪ್ರತಿಭಾವಂತರಲ್ಲಿ ಪ್ರಮುಖರು.

West Indies World cup victory

ಮಹಿಳೆಯರ ಕ್ರಿಕೆಟ್: ಸಂಘರ್ಷದ ಹಾದಿ

ಗಂಡು-ಹೆಣ್ಣಿನ ಮಧ್ಯೆ ಬಹುಕಾಲದಿಂದ ಇರುವ ಅಸಮಾನತೆ, ಕ್ರಿಕೆಟ್ ಆಟವನ್ನೂ ಬಿಟ್ಟಿಲ್ಲ. ಕ್ರಿಕೆಟ್ ಅಂದ್ರೆ, ಪುರುಷರ ಕ್ರಿಕೆಟ್ ಅಷ್ಟೇ ನಮ್ಮ ಕಣ್ಮುಂದೆ ಬರುವುದು ಇದಕ್ಕೆ ಸಾಕ್ಷಿ. ವಿಶೇಷ ಅಂದ್ರೆ, ಪುರಷರ ವಿಶ್ವಕಪ್ ಕ್ರಿಕೆಟ್ ನಡೆಯುವುದಕ್ಕೂ ಎರಡು ವರ್ಷ ಮುಂಚೆ, ಅಂದ್ರೆ 1973ರಲ್ಲೇ ಮಹಿಳೆಯರ ವಿಶ್ವಕಪ್ ನಡೆದಿತ್ತು ಅನ್ನೋದು. ಅದರಲ್ಲಿ ಇಂಗ್ಲೆಂಡ್ ತಂಡ ವಿಜಯಿಯಾಗಿತ್ತು. ಮಹಿಳೆಯರ ವಿಶ್ವಕಪ್'ನ ಫೈನಲ್ ನಡೆದ ದಿವಸ, ಮುಂದೆ ಪುರುಷರ ವಿಶ್ವಕಪ್ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ತೀರ್ಮಾನಕ್ಕೆ ಮಹಿಳೆಯರ ವಿಶ್ವಕಪ್ ಪಂದ್ಯಾಟವೇ ಸ್ಪೂರ್ತಿ ಅಂದರೆ ತಪ್ಪಾಗಲಾರದು. ಪುರುಷರ ವಿಶ್ವಕಪ್ಪಿಗಿಂತಲೂ ಮೊದಲೇ ಶುರುವಾಗಿದ್ದರೂ, ಮಹಿಳೆಯರ ವರ್ಲ್ಡ್ ಕಪ್ ಗೆ ಅಂತಹ ಪ್ರಾಧಾನ್ಯತೆ ದಕ್ಕಿರಲಿಲ್ಲ. ಎಲ್ಲೆಡೆಯಂತೆ ಇಲ್ಲೂ ಮಹಿಳೆಯರ ಹಾದಿ ಸಂಘರ್ಷದ ಹಾದಿಯೇ ಆಗಿತ್ತು. ಅಪಹಾಸ್ಯ ಮತ್ತು ವಿರೋಧಗಳ ನಡುವೆಯೇ ಮಹಿಳೆಯರ ಕ್ರಿಕೆಟ್ ಬೆಳೆದು ಬಂತು. 1882 ರಲ್ಲಿ ಲಾರ್ಡ್ಸ್ ಮೈದಾನದಲ್ಲಿ ಮೊದಲ 'ಓವರ್ ಆರ್ಮ್' ಎಸೆತ ಎಸೆದ ಆಟಗಾರ 'ಜಾನ್'ಗೆ ಸ್ಪೂರ್ತಿಯಾಗಿದ್ದು, ಆತನ ಸಹೋದರಿ ‘ಕ್ರಿಸ್ಟೀನ ವಿಲ್ಲೀಸ್’. ಬೌಲಿಂಗ್ ಮಾಡುವಾಗ ಆಕೆಯ ಲಂಗದಲ್ಲಿ ಬಾಲ್ ಸಿಕ್ಕಿಹಾಕಿಕೊಳ್ಳುತ್ತಿದ್ದುದರಿಂದ, ಆಕೆ ಕಂಡುಕೊಂಡ ಪರಿಹಾರವೇ ಮೇಲಿನಿಂದ ಗಾಳಿಯಲ್ಲಿ ಹಾರಿಸಿ ಚೆಂಡೆಸೆದದ್ದಾಗಿತ್ತು. ಮುಂದೆ ಆ ಬೌಲಿಂಗ್ ಶೈಲಿ ಕ್ರಿಕೆಟಿನಲ್ಲಿ ತಂದ ಬದಲಾವಣೆಗಳು ನಮ್ಮ ಕಣ್ಮುಂದಿವೆ.

Women playing cricket in skirts

1926 ರಲ್ಲಿ 'ವಿಮೆನ್ಸ್ ಕ್ರಿಕೆಟ್ ಅಸೋಸಿಯೇಶನ್' ಇಂಗ್ಲೆಂಡಿನಲ್ಲಿ ಸ್ಥಾಪನೆಯಾಯಿತು. 1934ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಮ್ಯಾಚ್ ನಡೆಯುತ್ತದೆ. 1970 ರಿಂದ ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ಆಟಗಳು ವೇಗ ಪಡೆಯಲಾರಂಭಿಸಿದ್ದವು. 1973 ರಲ್ಲಿ ‘ವಿಮೆನ್ಸ್ ಕ್ರಿಕೆಟ್ ಅಸೋಸಿಯೇಶನ್ ಆಫ್ ಇಂಡಿಯಾ' ಸ್ಥಾಪನೆಯಾಗಿ, 2007 ರಲ್ಲಿ 'ಬಿಸಿಸಿಐ'ನಲ್ಲಿ ವಿಲೀನವಾಯಿತು. ಜಗತ್ತಿನ ಎಲ್ಲೆಡೆಗೆ ಮಹಿಳಾ ಕ್ರಿಕೆಟಿನ ಘಮಲನ್ನು ಹರಡಲು 1958ರಲ್ಲಿ 'ಇಂಟರ್ ನ್ಯಾಷನಲ್ ವಿಮೆನ್ಸ್ ಕ್ರಿಕೆಟ್ ಕೌನ್ಸಿಲ್' ಸ್ಥಾಪನೆಯಾಯಿತು. 1976ರಲ್ಲಿ ಭಾರತದ ಮಹಿಳಾ ತಂಡವು ತನ್ನ ಮೊದಲ ಅಂತರಾಷ್ಟ್ರೀಯ ಪಂದ್ಯವನ್ನಾಡಿತು. 1900ರ ವರೆಗೂ ಮಹಿಳೆಯರು ಸ್ಕರ್ಟ್ ಹಾಕಿಕೊಂಡೆ ಕ್ರಿಕೆಟ್ ಆಡಬೇಕಾಗಿತ್ತು. ಕ್ರಿಕೆಟಿಗೆ ಗ್ಲ್ಯಾಮರ್ ತರುವ ಉದ್ದೇಶದಿಂದ, ವೀಕ್ಷಕ ವಿವರಣೆಕಾರರಾಗಿ ಬಂದ 'ಮಂದಿರಾ ಬೇಡಿ'ಗೆ ಸಿಕ್ಕ ಪ್ರಚಾರ ಮಹಿಳಾ ಆಟಗಾರರಿಗೆ  ಸಿಕ್ಕಿರಲಿಲ್ಲ ಎಂದರೆ ಹೆಣ್ಣಿನ ದೇಹವನ್ನು ಆಧರಿಸಿಯಷ್ಟೇ ನಡೆಯುವ ಪ್ರಚಾರಗಳ ಬಗ್ಗೆ ಅರಿವಾಗಬಹುದು. ಇವತ್ತಿಗೂ ಬೇಧ-ಭಾವ ನಿಂತಿಲ್ಲವಾದರೂ, ಮಹಿಳಾ ಕ್ರಿಕೆಟರುಗಳು ಸಾಧನೆಯಲ್ಲೇನು ಹಿಂದೆ ಬಿದ್ದಿಲ್ಲ. ಇಲ್ಲಿಯವರೆಗೆ ಮಹಿಳೆಯರ ಕ್ರಿಕೆಟಿನಲ್ಲಿ ಭಾರತ ವಿಶ್ವಕಪ್ ಗೆದ್ದಿಲ್ಲವಾದರೂ, 2005 ಮತ್ತು 2017 ರಲ್ಲಿ ಫೈನಲ್ ತಲುಪಿರುವ ಭಾರತೀಯ ಮಹಿಳಾ ತಂಡ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ಈ ಎರಡೂ ಫೈನಲುಗಳಲ್ಲು ಭಾರತದ ಚುಕ್ಕಾಣಿ ಹಿಡಿದಿದ್ದ 'ಮಿಥಾಲಿ ರಾಜ್' ಪ್ರಪಂಚದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಸಚಿನ್ ಮತ್ತು ಮಿಥಾಲಿ ಇಬ್ಬರೂ 16 ನೇ ವರ್ಷದಲ್ಲಿ (16 ವರ್ಷ 205 ದಿನಗಳು) ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರೂ, ನಮಗೆ ಸಚಿನ್ ವಿವರಗಳು ಮಾತ್ರ ಗೊತ್ತಿದೆ ಅಲ್ವೇ? ಹಾಗೇ ನೋಡಿದರೇ, ತಮ್ಮ ಆಟ, ನಾಯಕತ್ವ ಮತ್ತು ಗಟ್ಟಿ ನಿಲುವುಗಳಿಗೂ ಹೆಸರಾದ ಮಿಥಾಲಿ, ತೆಂಡುಲ್ಕರಿಗಿಂತಲೂ ಹೆಚ್ಚಿನ ಪ್ರಖ್ಯಾತಿಯನ್ನು ಗಳಿಸಬೇಕಿತ್ತು.

Mithali Raj

ಭಾರತದಲ್ಲಿ ಕ್ರಿಕೆಟ್ ಕ್ರೇಝ್ ಕಡಿಮೆಯಾಗುತ್ತಿದೆಯೇ !

ಇದೀಗ 2023ರ ಪುರುಷರ ಏಕದಿನ ವಿಶ್ವಕಪ್ ಪಂದ್ಯಾವಳಿಗಳು ನಡೆಯುತ್ತಿದೆ. ಭಾರತ ತಂಡ ಮೂರನೇ ಭಾರಿಗೆ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಇದುವರೆಗು ಏಳು ಭಾರಿ ಫೈನಲ್ ತಲುಪಿ, ಐದು ಭಾರಿ ಕಪ್ ಗೆದ್ದಿರುವ ಆಸ್ಟ್ರೇಲಿಯಾ, ಅತೀ ಹೆಚ್ಚು ವಿಶ್ವಕಪ್ ಗೆದ್ದಿರುವ ದಾಖಲೆಯನ್ನು ಹೊಂದಿದೆ. 1999, 2003 ಮತ್ತು 2007 ರಲ್ಲಿ ಗೆಲ್ಲುವ ಮೂಲಕ, ಹ್ಯಾಟ್ರಿಕ್ ಕಪ್ ಗೆದ್ದಿರುವುದು ಆಸ್ಟ್ರೇಲಿಯಾದ ಹೆಗ್ಗಳಿಕೆಯಾಗಿದೆ. ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡಿನಲ್ಲಾದರೂ, ವಿಶ್ವಕಪ್ ಗೆಲ್ಲಲು 2019 ರ ವರೆಗು ಇಂಗ್ಲೆಂಡ್ ಕಾಯಬೇಕಾಯಿತು. ಅದುವರೆಗೆ 3 ಭಾರಿ ಫೈನಲ್ ತಲುಪಿದ್ದ ಇಂಗ್ಲೆಂಡ್, ಮೂರೂ ಭಾರಿಯು ಸೋಲುಂಡಿತ್ತು. ಭಾರತ ಹೊರತುಪಡಿಸಿ ಏಷ್ಯಾದ ಇನ್ನೆರಡು ಬಲಿಷ್ಟ ತಂಡಗಳಾದ, ಪಾಕಿಸ್ಥಾನ ಮತ್ತು ಶ್ರೀಲಂಕಾ ದೇಶಗಳು ತಲಾ ಒಂದೊಂದು ಭಾರಿ ವಿಶ್ವ ಕಪ್ ಗೆದ್ದಿವೆ. 

IPL

2007 ರಲ್ಲಿ ಪುರುಷರ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ವಿಶ್ವಕಪ್ ಪ್ರಾರಂಭವಾಯಿತು. ಕ್ರಿಕೆಟ್ಟಿನ ಹುಚ್ಚಿಗೆ, ಈ ಮೂಲಕ ಇನ್ನಷ್ಟು ಕಿಚ್ಚು ಹಚ್ಚಲಾಯಿತು. ನಗರಗಳ ಟ್ರಾಫಿಕ್ಕಿನಂತಿದ್ದ ಕ್ರಿಕೆಟ್, ಎಕ್ಸ್ ಪ್ರೆಸ್ ಹೈವೇಗಳ ವೇಗಕ್ಕೆ ತಿರುಗಿತು. ಭಾರತದಲ್ಲಿ  'ಐಪಿಎಲ್' ಟೂರ್ನಮೆಂಟುಗಳು ಶುರುವಾದವು. ಮೈದಾನದಲ್ಲಿ ರನ್ನು, ಸಂಭ್ರಮ ಮೇರೆ ಮೀರುವುದಷ್ಟೇ ಅಲ್ಲದೆ, ದುಡ್ಡಿನ ಹೊಳೆಯೇ ಹರಿಯಿತು. ಭಾರತ, ಧೋನಿ ನಾಯಕತ್ವದಲ್ಲಿ ಪಾಕಿಸ್ಥಾನವನ್ನು ಸೋಲಿಸಿ, ಮೊದಲ ಟ್ವೆಂಟಿ-ಟ್ವೆಂಟಿ ವಿಶ್ವ ಕಪ್ ಗೆದ್ದು ಬೀಗಿತು. ಎರಡನೇ ಟ್ವೆಂಟಿ-ಟ್ವೆಂಟಿ ವಿಶ್ವ ಕಪ್ ಗೆಲ್ಲುವ ಮೂಲಕ ಪಾಕಿಸ್ಥಾನವು ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಏಕದಿನ ಕ್ರಿಕಟಿನಂತೆಯೇ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ವಿಶ್ವಕಪ್ಪಿನಲ್ಲು ಎರಡು ಭಾರಿ ಪ್ರಶಸ್ತಿ ಮುಡಿಗೇರಿಸಿಕೊಂಡ ತಂಡ ವೆಸ್ಟ್ ಇಂಡೀಸ್. ಐಪಿಎಲ್ ನಂತಹ ಸರಣಿಗಳ ದುಡ್ಡಿನ ಆಟದ ಮುಂದೆ, ವೆಸ್ಟ್ ಇಂಡೀಸ್ ತಂಡದ ಆಟಗಾರರು ರಾಷ್ಟ್ರೀಯ ತಂಡವನ್ನು ಕಡೆಗಣಿಸಿದ್ದು, 2023ರ ಏಕದಿನ ವಿಶ್ವ ಕಪ್ಪಿಗೆ ವೆಸ್ಟ್ ಇಂಡೀಸ್  ತಂಡ ಅರ್ಹತೆ ಗಳಿಸದಿರಲು ಕಾರಣವಾಯಿತು ಎಂದೇ ಹೇಳಲಾಗುತ್ತಿದೆ. ಇದೀಗ ಅತಿಯಾದ ಕ್ರಿಕೆಟ್ ನಿಂದಾಗಿ ಭಾರತದಲ್ಲಿ ಕ್ರಿಕೆಟ್ ಕ್ರೇಝ್ ಕಡಿಮೆಯಾಗುತ್ತಿದೆಯೇ ಎಂಬ ಸಂಶಯಗಳು ಮೂಡುತ್ತಿವೆ. ಅದಕ್ಕೆ ಪೂರಕವಾಗಿ 2023 ರ ವಿಶ್ವಕಪ್ಪಿನ ಆರಂಭದ ಪಂದ್ಯಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿರುವ ಅಂಕಿಅಂಶಗಳು ಬರುತ್ತಿವೆ. ಭಾರತೀಯರು ಇತರ ಆಟಗಳೆಡೆಗೆ ಮುಖ ಮಾಡಿರುವುದು ಸಹ ಇದಕ್ಕೆ ಕಾರಣವಾಗಿರಬಹುದು.

1966 ರಿಂದ 1979 ರ ವರೆಗೆ ಭಾರತ ತಂಡವನ್ನು ಪ್ರತಿನಿಧಿಸಿದ 'ಬಿಷನ್ ಸಿಂಗ್ ಬೇಡಿ'ಯವರು ಕಳೆದ ವಾರವಷ್ಟೇ (ಅಕ್ಟೋಬರ್ 23, 2023) ತೀರಿಕೊಂಡರು. ಭಾರತದ ಸರ್ವಶ್ರೇಷ್ಟ ಸ್ಪಿನ್ ಬೌಲರುಗಳಲ್ಲಿ ಒಬ್ಬರಾದ ಬೇಡಿ, ಕ್ರಿಕೆಟಿನ ಹೊರಗೂ ತಮ್ಮ ಗಟ್ಟಿ ಧ್ವನಿಯ ಅಭಿಪ್ರಾಯಗಳ ಮೂಲಕ ಖ್ಯಾತರಾಗಿದ್ದರು. ಆ ಲೆಜಂಡರಿ ಸ್ಪಿನ್ ಪ್ರತಿಭೆಗೆ ಶ್ರದ್ಧಾಂಜಲಿಯನ್ನು ಅರ್ಪಿಸೋಣ. ಎಲ್ಲಾ ರಂಗಗಳಲ್ಲು ಮನುಷ್ಯರ ನಡುವೆ  ಇರುವ ಬೇಧ-ಭಾವಗಳು ಕೊನೆಯಾಗಲಿ. ಆಟಗಳು ಮನುಷ್ಯರ ನಡುವೆ ಭಾಂಧವ್ಯ ಬೆಸೆಯಲು, ಸಂತೋಷಕ್ಕೆ ಕಾರಣವಾಗಲಿ ಎಂದು ಆಶಿಸುತ್ತಾ, ಸದ್ಯಕ್ಕೆ ಕ್ರಿಕೆಟಿನ ಮೈದಾನದಿಂದ ಹೊರ ನಡೆಯೋಣ.. ಆಟದ ಖುಷಿಯನ್ನು ಸಂಭ್ರಮಿಸೋಣ

Category : Sports


ProfileImg

Written by Guru

Writer, Poet & Automotive Enthusiast