ಕ್ರಿಕೆಟ್ ಮೈದಾನದೊಳಗೊಂದು ಇಣುಕು ನೋಟ: Part 1

ಬ್ರಿಟನಿನಲ್ಲಿ ಹುಟ್ಟಿ ಬ್ರಿಟೀಷರ ಮೂಲಕ ಭಾರತಕ್ಕೆ ಕಾಲಿಟ್ಟ ಕ್ರಿಕೆಟಿನ ಆರಂಭದ ದಿನಗಳು ಹೇಗಿದ್ವು? ಕ್ರಿಕೆಟ್ ಸಾಗಿ ಬಂದ ಹಾದಿ ಯಾವುದು? ಭಾರತೀಯರ ಇಷ್ಟದ ಕ್ರೀಡೆಯಾದ ಕ್ರಿಕೆಟಿನ ಹಿನ್ನಲೆ ಮತ್ತು ಬೆಳವಣಿಗೆಯ ಬಗ್ಗೆ ಒಂದಿಷ್ಟು ಪರಿಶೋಧಿಸುತ್ತಲೇ, ಈಗ ನಡೆಯುತ್ತಿರುವ 2023ರ ವಿಶ್ವಕಪ್ ಪಂದ್ಯಾಟವನ್ನು ಆನಂದಿಸುವ ಬನ್ನಿ..

ProfileImg
21 Oct '23
5 ನಿಮಿಷದ ಓದು


image

ಕ್ರಿಕೆಟ್ ಎಂಬ ಭಾರತೀಯ ಆಟ!

"ಕ್ರಿಕೆಟ್ ಎಂಬುದು ಬ್ರಿಟೀಷರು ಆಕಸ್ಮಿಕವಾಗಿ ಕಂಡು ಹಿಡಿದ, ಒಂದು ಭಾರತೀಯ ಆಟ" ಇದು 'ಅಶೀಷ್ ನಂದಿ' ಬರೆದಿರುವ  'In The Tao of Cricket' ಪುಸ್ತಕದ ಪ್ರಸಿದ್ಧ ಸಾಲುಗಳು. ಭಾರತದಲ್ಲಿ ಕ್ರಿಕೆಟ್ ಎಷ್ಟು ಖ್ಯಾತಿಯನ್ನು ಪಡೆದಿದೆ ಎಂಬುದಕ್ಕೆ ಈ ಸಾಲುಗಳು ಸಾಕ್ಷಿ. ಆಟ ಮನುಷ್ಯರಿಗೆ ಮನರಂಜನೆ ನೀಡಿ  ಹುಮ್ಮಸ್ಸು ತುಂಬುತ್ತದೆ. ಅದಕ್ಕಾಗಿಯೇ ಮನುಷ್ಯರ ನಡುವೆ ಹಲವಾರು ಆಟಗಳಿಗೆ. ಇವತ್ತು ಆಟಗಳ ಮೂಲಕ ವೈಯಕ್ತಿಕವಾಗಿ ದುಡ್ಡು, ಯಶಸ್ಸು ಮತ್ತು ಪ್ರಖ್ಯಾತಿ ಆಟಗಾರರಿಗೆ ಸಿಗುತ್ತಿದೆ. ಫುಟ್ಬಾಲ್ ನಂತರ, ಜಗತ್ತಿನಲ್ಲಿ ಅತ್ಯಂತ ಪಾಪ್ಯುಲರ್ ಆಗಿರುವ ಕ್ರಿಕೆಟ್ ಕೂಡಾ ಅಂತಹ ಆಟಗಳಲ್ಲೊಂದು. ಭಾರತದಲ್ಲಿ‌ ಕ್ರಿಕೆಟ್ ಅಲೆಯಲ್ಲಿ ತೇಲಿ ತುಯ್ದಾಡುತ್ತಿರುವವರು ಲೆಕ್ಕವಿಲ್ಲದಷ್ಟು ಮಂದಿ. ಭಾರತೀಯ ಆಟಗಳಾದ ಹಾಕಿ, ಕಬಡ್ಡಿ, ಲಗೋರಿ, ಚಿನ್ನಿದಾಂಡು, ಖೋಖೋ ಮೇಲಷ್ಟೇ ಅಲ್ಲದೆ ಫುಟ್ಬಾಲ್, ಟೆನ್ನಿಸ್ ನಂತಹ ಆಟಗಳ ಮೇಲು ಕ್ರಿಕೆಟ್ ತನ್ನ ಪಾರುಪತ್ಯ ಸ್ಥಾಪಿಸಿದೆ. ಭಾರತದಷ್ಟೇ ಕ್ರಿಕೆಟ್ ಕ್ರೇಜ್ ನಮ್ಮ ಪಕ್ಕದ ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲು ಇದೆ. 

ಇವಾಗ, 2023ರ ಕ್ರಿಕೆಟ್ ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುತ್ತಿವೆ. ಭಾರತ ತಂಡ ವಿಶ್ವದಲ್ಲೇ ಬಲಿಷ್ಟ ತಂಡವಾಗಿದ್ದು, ಕಪ್ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಒಂದಾಗಿದೆ. ಆದ್ದರಿಂದ, ಭಾರತದ ಕ್ರಿಕೆಟ್ ಅಭಿಮಾನಿಗಳ ಕಪ್ ಗೆಲ್ಲುವ ನಿರೀಕ್ಷೆಯನ್ನು ಹೆಚ್ಚಿಸಿದೆ. ವಿರಾಟ್-ರೋಹಿತ್ ರಂತಹ ವಿಶ್ವಶ್ರೇಷ್ಟ ದಾಂಡಿಗರು, ಹಾರ್ದಿಕ್-ಜಡೇಜರಂತಹ ಆಲ್ ರೌಂಡರ್ ಗಳು ಮತ್ತು ಬುಮ್ರಾ-ಸಿರಾಜ್ ರಂತಹ ಅತ್ಯುತ್ತಮ ಬೌಲರ್‌ಗಳು ಭಾರತದ ಭರವಸೆಯಾಗಿದ್ದಾರೆ. ಎಲ್ಲಾ ಆಟಗಾರರು ಕೋಟ್ಯಾಂತರ ಭಾರತೀಯರ ನಿರೀಕ್ಷೆಗಳನ್ನು ಹೊತ್ತು ಆಡುತ್ತಿದ್ದಾರೆ. ಈ ಲೇಖನ ಪ್ರಕಟಿಸುವ ಹೊತ್ತಿಗೆ, ಆಡಿರುವ ಎಲ್ಲಾ ಪಂದ್ಯಗಳನ್ನು ಗೆದ್ದಿರುವ ಭಾರತವು, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಕ್ರಿಕೆಟ್ ಇತಿಹಾಸ

ಬ್ರಿಟನಿನಿಂದ ಆಚೆಗೆ, ಬ್ರಿಟೀಷ್ ಸೈನಿಕರ ಬಿಡುವಿನ ಸಮಯವನ್ನು ಸಂತುಷ್ಟಗೊಳಿಸಲು ಶುರುವಾದ ಆಟ ಕ್ರಿಕೆಟ್. ಮುಂದೆ ಪ್ರಪಂಚವನ್ನು ಆವರಿಸಿದ ಪರಿ ಅನನ್ಯ. ಶಾಲೆ ಬಿಟ್ಟ ತಕ್ಷಣ ಮನೆಗೆ ಬಂದು ಬ್ಯಾಗು ಬಿಸಾಕಿ, ಕ್ರಿಕೆಟ್ ಆಡಲು ಗ್ರೌಂಡಿಗೆ ಓಡುವ ಬಾಲ್ಯ ತೊಂಬತ್ತರ ದಶಕದಲ್ಲಿ ಮಕ್ಕಳಾಗಿದ್ದವರಿಗೆ ನೆನಪಿರಬಹುದು. ನಾವು ಭಾರತದಲ್ಲಿ ನಿಂತು ಕ್ರಿಕೆಟ್ ಇತಿಹಾಸ ನೋಡಿದರೆ, ಬ್ರಿಟೀಷರಿಂದ ಭಾರತಕ್ಕೆ ಸಿಕ್ಕ ಆಟ ಕ್ರಿಕೆಟ್ ಎಂದೆನ್ನಬಹುದು. ಬ್ರಿಟೀಷ್ ಸೈನಿಕರ ಆನಂದಕ್ಕಾಗಿ ಶುರುವಾದ ಆಟ ಎಂಬುದು ನಮ್ಮ ಅಂದಾಜಿಗೆ ಸಿಗುವ 150 ವರ್ಷಗಳ ಇತಿಹಾಸದ ಸಂಕ್ಷಿಪ್ತ ರೂಪ. ಆದರೆ, ಕ್ರಿಕೆಟ್ 14-15ನೇ ಶತಮಾನಕ್ಕಿಂತ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಅಲ್ಲಿಂದ ಇಲ್ಲಿಯವರೆಗು ಆಟದ ರೂಪು ರೇಷೆಗಳು ಬದಲಾಗುತ್ತಾ ಬಂದಿದೆ. 

ಕ್ರಿಕೆಟಿನ ಉಗಮದ ಬಗ್ಗೆ ನಿಖರವಾದ ಮಾಹಿತಿಗಳು ಲಭ್ಯವಿಲ್ಲವೆಂದೇ ಹೇಳಬೇಕಾಗುತ್ತದೆ. 13-14 ನೇ ಶತಮಾನದಲ್ಲಿ ಇದ್ದ ಬಾಲ್ ಎಸೆಯುವ ಆಟಗಳಿಂದ ಕ್ರಿಕೆಟ್ ಆಟ ಉದ್ಭವಾಗಿರುವ ಸಾಧ್ಯತೆಗಳು ದಟ್ಟವಾಗಿವೆ. ಇಂಗ್ಲೆಂಡ್‌ನ ದಟ್ಟವಾದ ಕಾಡು ಮತ್ತು ಬಯಲು ಪ್ರದೇಶಗಳಿದ್ದ 'ವೀಲ್ಡ್‌'ನಲ್ಲಿ ವಾಸಿಸುವ ಮಕ್ಕಳು 'ಸ್ಯಾಕ್ಸನ್' ಅಥವಾ 'ನಾರ್ಮನ್' ಕಾಲಘಟ್ಟದಲ್ಲಿ ಕ್ರಿಕೆಟ್ ಅನ್ನು ಅದರ ಕರಡು ರೂಪದಲ್ಲಿ ಆಡುತ್ತಿದ್ದಿರಬಹುದು ಎಂದು ಅಭಿಪ್ರಾಯ ಪಡುತ್ತಾರೆ. ಕುರಿ ಕಾಯುತ್ತಿದ್ದ ಮಕ್ಕಳು ಮರದ ಕೋಲುಗಳನ್ನು ನೆಟ್ಟು ಅಥವಾ ಕುರಿಮಂದೆಯನ್ನು ಕೂಡಿಹಾಕಿರುವ ಗೇಟುಗಳೆಡೆಗೆ ಚೆಂಡೆಸೆದು ಕ್ರಿಕೆಟ್ ಆಡುತ್ತಿದ್ದರಂತೆ. ಕ್ರಿಕೆಟ್  ಅನ್ನು ವಯಸ್ಕರ ಕ್ರೀಡೆಯಾಗಿ ಆಡಿದ ಮೊದಲ ಉಲ್ಲೇಖವು 1610 ರ ಸುಮಾರಿನಲ್ಲಿ ಕಾಣ ಸಿಗುತ್ತದೆ. 1611ರ ಫ್ರೆಂಚ್-ಇಂಗ್ಲೀಷ್ ಡಿಕ್ಷನರಿಯಲ್ಲಿ ಫ್ರೆಂಚ್ ಪದವಾದ ಕ್ರಾಸ್ಸೆ(Crosse) ಪದವನ್ನು ಕ್ರಿಕೆಟ್ ಸಿಬ್ಬಂದಿಗಳು ಎಂದು ಗುರುತಿಸಲಾಗಿದೆ. ಆ ಕಾಲದಲ್ಲಿ ಕ್ರಿಕೆಟ್ ಅನ್ನು 'ಬಾಯ್ಸ್ ಗೇಮ್' ಎಂದು ಕರೆಯಲಾಗುತ್ತಿತ್ತು. ಬಾಯ್ಸ್ ಗೇಮ್ ಅಂದ್ರೆ ಇನ್ನೂ ವಯಸ್ಕರಾಗದ ಹುಡುಗರು ಆಡುತ್ತಿದ್ದ ಆಟ ಎಂದು ಅರ್ಥ. ಕೆಳವರ್ಗದ ಜನರ ಮೋಜಿಗಾಗಿ ಹುಟ್ಟಿದ ಆಟ, ಮೇಲು-ಕೀಳಿನ ಕ್ರೌರ್ಯದಾಟದಲ್ಲಿ ಸಹಜವಾಗಿಯೇ ಮೇಲ್ವರ್ಗದವರ ಗತ್ತಿನ ಆಟವಾಗಿ ಬದಲಾಗಿತ್ತು. ಬದಲಾವಣೆ ನಿರಂತರವಾದ ಕಾರಣ ಇಂದೀಗ ಬಡವ-ಬಲ್ಲಿದರೆನ್ನದೆ ಕ್ರಿಕೆಟ್ ಹಲವಾರು ಯುವ ಪ್ರತಿಭೆಗಳಿಗೆ ಮಣೆ ಹಾಕಿ, ಪ್ರಖ್ಯಾತರನ್ನಾಗಿಸುತ್ತಿದೆ.

ಕ್ರಿಕೆಟ್ ಅಸ್ತಿತ್ವವನ್ನು ಮೊದಲ ಬಾರಿಗೆ 1598 ರ ನ್ಯಾಯಾಲಯದ ಭೂ ವಿವಾದದ ಪ್ರಕರಣವೊಂದರಲ್ಲಿ ಔಪಚಾರಿಕವಾಗಿ ದಾಖಲಿಸಲಾಗಿದೆ. ಪ್ರಕರಣದ ಕಡತಗಳು 'ಜಾನ್ ಡೆರಿಕ್' ಎಂಬಾತ ಅರ್ಧ ಶತಮಾನದ ಮೊದಲು ಈ ಭೂಮಿಯಲ್ಲಿ ತಾನು ಕ್ರೆಕೆಟ್(creckett) ಆಡಿದ್ದಕ್ಕೆ ಸಾಕ್ಷ್ಯವನ್ನು ನೀಡಿದ್ದಾನೆ ಎಂದು ಉಲ್ಲೇಖಿಸಲಾಗಿದೆ. ಆ ಕ್ರೆಕೆಟ್ ಮುಂದೆ ಕ್ರಿಕೆಟ್ ಆಗಿರಬಹುದಾದ ಸಾಧ್ಯತೆಗಳಿವೆ. ಇದು 1500 ರ ದಶಕದಲ್ಲಿ ಕ್ರಿಕೆಟ್‌ನ ಖಚಿತ ಅಸ್ತಿತ್ವವನ್ನು ಸಾಬೀತುಪಡಿಸುತ್ತದೆ. 1624 ರಲ್ಲಿ ' 'ಜಸ್ಪರ್ ವಿನಲ್ಲ್' ಎಂಬಾತ ಕ್ರಿಕೆಟ್ ಬ್ಯಾಟ್ ಬಡಿದು, ಕ್ರಿಕೆಟ್ ಆಡುವಾಗ ಸಾವನ್ನಪ್ಪಿದ ಮೊದಲ ವ್ಯಕ್ತಿ ಎಂಬ ವಿವರಗಳು ದೊರೆಯುತ್ತವೆ. ಭಾನುವಾರದಂದು ಯುವಕರು ಚರ್ಚಿಗೆ ಗೈರು ಹಾಜರಾಗುವ ಆತಂಕದಿಂದಾಗಿ, ಒಂದು ಕಾಲದಲ್ಲಿ ಭಾನುವಾರ ಕ್ರಿಕೆಟ್ ಆಡುವ ಹುಡುಗರಿಗೆ ಚರ್ಚು ಹಲವು ನಿರ್ಬಂಧಗಳನ್ನು ಹೇರಿದ್ದೂ ಇದೆ.

ಕ್ರಿಕೆಟ್ ಸಾಗಿ ಬಂದ ಹಾದಿ

ಮೊದ ಮೊದಲಿಗೆ ಕ್ರಿಕೆಟ್ ಆಟದಲ್ಲಿ ಬೌಲಿಂಗ್ ಟೆಕ್ನಿಕ್ ಗಳು ಅಷ್ಟೊಂದು ಮುಂದುವರಿದಿರಲಿಲ್ಲ. ಬ್ಯಾಟಿಂಗಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ಬ್ಯಾಟ್ ಹಿಡಿದಾತ ಹೊಡೆಯುವುದಕ್ಕಾಗಿ, ಬಾಲನ್ನು ಸುಮ್ಮನೆ ಉರುಳಿಸಿ ಬಿಡುತ್ತಿದ್ದರು. ಶುರುವಿನಲ್ಲಿ ಹಾಕಿ ಸ್ಟಿಕ್ಕಿನಂತ ಬ್ಯಾಟ್ ಉಪಯೋಗಿಸುತ್ತಿದ್ದರು. ಮುಂದೆ ಬೇರೆ ಡಿಸೈನಿನ ಬ್ಯಾಟುಗಳು ತಯಾರಿಸಲ್ಪಟ್ಟಿದ್ದವು. ಬ್ಯಾಟ್‌ಗಳ ಹಿಡಿಕೆಯನ್ನು ಮೊಟಕುಗೊಳಿಸಿ, ಅದರ ಕೆಳಭಾಗವನ್ನು ಉದ್ದವಾಗಿ ಮತ್ತು ಅಗಲವಾಗಿ ಮಾಡಲಾಯಿತು. ಇದು ಫಾರ್ವರ್ಡ್ ಪ್ಲೇ, ಡೈವಿಂಗ್ ಮತ್ತು ಕಟ್ ಶಾಟುಗಳು ಹುಟ್ಟಲು ಕಾರಣವಾಯಿತು.

ಇವತ್ತು ಕೆನಡಾ, ಅಮೇರಿಕದಂತಹ ದೇಶಗಳನ್ನು ಕ್ರಿಕೆಟಿನಲ್ಲಿ ಪುಟ್ಟ ಹೆಜ್ಜೆಗಳನ್ನಿಡುತ್ತಿರುವ ದೇಶಗಳೆಂದು ಗುರುತಿಸಲಾಗುತ್ತಿದೆ. ಆದರೆ, 1844 ರಲ್ಲಿ ಮೊದಲ ಅಂತರಾಷ್ಟ್ರೀಯ ಪಂದ್ಯ ಕೆನಡ ಮತ್ತು ಅಮೇರಿಕಾ ನಡುವೆ ನಡೆದಿತ್ತು ಅನ್ನೋದು ವಿಶೇಷ. ಮೊದಲ ಟೆಸ್ಟ್ ಮ್ಯಾಚ್ ಆಸ್ಟ್ರೇಲಿಯಾ ಮತ್ತು ಇಂಗ್ಲೇಂಡ್ ನಡುವೆ 1877 ರಲ್ಲಿ ನಡೆಯಿತು. ಓವರ್ ಒಂದಕ್ಕೆ ಐದು ಬಾಲುಗಳಿದ್ದುದು, 1900 ರಲ್ಲಿ ಆರು ಬಾಲುಗಳಾಗಿ ಬದಲಾಗುತ್ತದೆ. 1932 ರಲ್ಲಿ ಭಾರತವು ತನ್ನ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಪಂದ್ಯವನ್ನಾಡುತ್ತದೆ.

1721 ರ ಸುಮಾರಿಗೆ ಬ್ರಿಟಿಷ್ ನಾವಿಕರು ‘ಕಚ್’ ಕರಾವಳಿಯನ್ನು ತಲುಪಿದಾಗ ಕ್ರಿಕೆಟ್ ಭಾರತಕ್ಕೆ ಬಂದಿತು. ಅವರು ಕ್ರಿಕೆಟ್ ಅನ್ನು ಮನರಂಜನಾ ಚಟುವಟಿಕೆಯಾಗಿ ಆಡುತ್ತಿದ್ದರು ಮತ್ತು ಇದು ಪ್ರದೇಶದ ಸ್ಥಳೀಯರ ಗಮನವನ್ನು ಸೆಳೆಯುತ್ತಿತ್ತು. ಬ್ರಿಟೀಷ್ ಸೈನಿಕರು ಕ್ರಿಕೆಟ್ ಆಡುತ್ತಿದ್ದಾಗ, ಚೆಂಡು ಹೆಕ್ಕಿ ಕೊಡಲು ಹಾಗು ತಲೆತಗ್ಗಿಸಿಕೊಂಡು ಆಟಗಾರರಿಗೆ ಪಾನೀಯಗಳನ್ನು ಪೂರೈಸಲು ಭಾರತೀಯರನ್ನು ಉಪಯೋಗಿಸುತ್ತಿದ್ದರು. ದಾಖಲೆಗಳ ಪ್ರಕಾರ ಭಾರತದಲ್ಲಿ ಮೊದಲ ಕ್ರಿಕೆಟ್ ಪಂದ್ಯವು 1751 ರಲ್ಲಿ ನಡೆಯಿತು. ಬ್ರಿಟಿಷ್ ಸೇನಾ ಅಧಿಕಾರಿಗಳು, ದೇಶದ ಬ್ರಿಟಿಷ್ ವಸಾಹತುಗಾರರ ವಿರುದ್ಧ ಆಡಿದರು. ಈ ಪಂದ್ಯಗಳಲ್ಲಿ ಭಾರತೀಯರು ಯಾವಾಗಲೂ ಪ್ರೇಕ್ಷಕರ ಭಾಗವಾಗಿದ್ದರು. ಹೆಚ್ಚಿನ ಭಾರತೀಯ ಸೈನಿಕರು  ಕ್ರಿಕೆಟ್ ಆಡಲು ಪ್ರಾರಂಭಿಸಿದಾಗ, ಬ್ರಿಟಿಷರು ತಮ್ಮ ಅಧೀನದಲ್ಲಿರುವ ಭಾರತೀಯ ಅಧಿಕಾರಿಗಳೊಂದಿಗೆ ಮಾತ್ರ ಆಟವಾಡಲು ಪ್ರಾರಂಭಿಸಿದರು. ಇದು 1792 ರಲ್ಲಿ ಕಲ್ಕತ್ತಾದಲ್ಲಿ ಭಾರತದ ಮೊದಲ ಕ್ರಿಕೆಟ್ ಕ್ಲಬ್ ಜನನಕ್ಕೆ ಕಾರಣವಾಯಿತು. ಇತ್ತ ಬಾಂಬೆಯಲ್ಲಿ ಪಾರ್ಸಿ ಸಮುದಾಯದ ಹುಡುಗರು ಬ್ರಿಟೀಷರು ಆಡುತ್ತಿದ್ದ ಕ್ರಿಕೆಟನ್ನು ಅನುಕರಿಸಿ ಆಡಲಾರಂಭಿಸುತ್ತಾರೆ. ಅವರು ಬೆಂಕಿಯೂದುವ ಕೊಳವೆಗಳನ್ನು ವಿಕೆಟ್ಟುಗಳಾಗಿಸಿ, ಕೊಡೆಗಳನ್ನು ಬ್ಯಾಟುಗಳಾಗಿಸಿ, ಚಪ್ಪಲಿ ಹೊಲಿಯುವ ನೂಲಿನ ಬಾಲಿನಿಂದ ಆಡಲಾರಂಭಿಸುತ್ತಾರೆ. ಹಾಗೇ ಆಡಿ ಮುಂದುವರಿದು, 1848 ರಲ್ಲಿ ಪಾರ್ಸಿ ಸಮುದಾಯದವರು ಬಾಂಬೆಯಲ್ಲಿ ಶುರು ಮಾಡಿದ್ದೇ  'ಓರಿಯಂಟಲ್ ಕ್ರಿಕೆಟ್ ಕ್ಲಬ್'. ಇದು ಭಾರತೀಯರಿಂದ ಪ್ರಾರಂಭವಾದ ಮೊದಲ ಕ್ಲಬ್ ಆಗಿತ್ತು. ಎರಡು ವರ್ಷಗಳಲ್ಲೇ ವಿಭಜನೆಯಾಗುವ ಕ್ಲಬ್, ಮತ್ತೆ 'ಯಂಗ್ ಸೊರಾಷ್ಟ್ರಿಯನ್ ಕ್ಲಬ್' ಎಂಬ ಹೆಸರಿನಲ್ಲಿ ಟಾಟ, ವಾದಿಯಾರಂತಹ ಉದ್ಯಮಿಗಳ ಬೆಂಬಲದೊಂದಿಗೆ ಪುನರ್ಜನಿಸುತ್ತದೆ. ಬ್ರಿಟೀಷರೊಂದಿಗೆ ವ್ಯಾಪಾರ ಕುದುರಿಸುವ ದೂರಾಲೋಚನೆಯು ಈ ಉದ್ಯಮಿಗಳಿಗೆ ಇದ್ದಿತ್ತು. ಅದಾದ ಮೇಲೆ ಕೆಲವು ಕಾಲ ಪ್ರಬಲವಾಗಿದ್ದ ಜಾತಿ-ಧರ್ಮ-ಪಂಗಡಗಳ ಆಧಾರದ ಮೇಲೆ ಕ್ರಿಕೆಟ್ ಕ್ಲಬ್ಬುಗಳು ರಚನೆಯಾಗಿವೆ. ಒಳ ಜಗಳಗಳನ್ನು ಮಾಡಿಸಿ, ಭಾರತದಲ್ಲಿನ ತಮ್ಮ ವಸಾಹತನ್ನು ಪ್ರಬಲಗೊಳಿಸಲು ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಎಂದು ವಿಂಗಡಿಸಿ ಬ್ರಿಟೀಷರು ಪಂದ್ಯಾಟಗಳನ್ನು ನಡೆಸಿದ್ದೂ ಉಂಟು. ರಾಜರುಗಳ ಕ್ರಿಕೆಟ್ ಹವ್ಯಾಸಕ್ಕೆ ಮತ್ತು ಜಾತಿ ತಾರತಮ್ಯಕ್ಕೆ ಬಲಿಯಾದ ಕ್ರಿಕೆಟ್ ಆಟಗಾರರಿರುವ ಇತಿಹಾಸವು ಇದೆ ಭಾರತಕ್ಕೆ. ರಾಷ್ಟ್ರೀಯತೆಗೆ ಧಕ್ಕೆ ತರುತ್ತದೆಯೆಂದು, ಮತಗಳ ಆಧಾರದಲ್ಲಿ ನಡೆಯುವ ಟೂರ್ನಮೆಂಟುಗಳನ್ನು ಸ್ವತಃ 'ಮಹಾತ್ಮ ಗಾಂಧಿ' ಯವರೇ ವಿರೋಧಿಸಿದ್ದರು ಎಂಬುದು ಗಮನಾರ್ಹ. ಮೊದಲಿಗೆ ಇಂಗ್ಲೀಷರಿಗೆ ಮಾತ್ರ ಆಡಲು ಅವಕಾಶವಿದ್ದ ಕ್ರೀಡೆ, ಆ ನಂತರ ಭಾರತದ ಧನಿಕರ ಕ್ರೀಡೆಯಾಯಿತು. ಮುಂದೆ, ಭಾರತ ಆಧುನಿಕತೆಯತ್ತ ವಾಲುವಾಗ ಬೇಧ-ಭಾವವಿಲ್ಲದೆ ಕ್ರಿಕೆಟಿನಲ್ಲಿ ಮುಳುಗೇಳುವ ಪೀಳಿಗೆಗಳು ಭಾರತದಲ್ಲಿ ಕ್ರಿಕೆಟನ್ನು ಸಮತೆಯ ಆಟವಾಗಿಸಿದ್ದು ಸುಳ್ಳಲ್ಲ.

ಆದರೆ, ಇದಕ್ಕೂ ಮುಂಚೆ, ಅಂದ್ರೆ 1760ರಲ್ಲಿ ಪ್ರಪಂಚದ ಮೊದಲ ಕ್ರಿಕೆಟ್ ಕ್ಲಬ್ 'ಹ್ಯಾಮಿಲ್ಟನ್'ನಲ್ಲಿ ಸ್ಥಾಪಿಸಲಾಯಿತು. ಆ ನಂತರ 'MCC' ಎಂದೇ ಪ್ರಸಿದ್ಧವಾದ, 'ಮೆರಿಲಿಬೋನ್ ಕ್ರಿಕಟ್ ಕ್ಲಬ್' 1787 ರಲ್ಲಿ ಸ್ಥಾಪಿತವಾಯಿತು. MCC ಕ್ರಿಕೆಟಿನ ನಿಯಮಗಳಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿತು. ಆ ಕಾಲದಲ್ಲಿ ಉರುಳಿಸಿ ಬಿಡುತ್ತಿದ್ದ ಚೆಂಡನ್ನು, ಮೇಲಿನಿಂದ ಗಾಳಿಯಲ್ಲಿ ಹಾರಿಸಿ ಹಾಕುವಂತೆ ಮಾಡಲಾಯಿತು. ಇದರ ಮೂಲಕ ಸ್ಪಿನ್ ಮತ್ತು ಸ್ವಿಂಗ್ ಬೌಲಿಂಗಿಗೆ ಹೊಸ ಆಯಾಮಗಳು ಸಿಕ್ಕವು. ಬೀಸಿ ಹೊಡೆಯುವ ತಾಕತ್ತಿನ ಜಾಗದಲ್ಲಿ ಆಟಗಾರರ ಟೆಕ್ನಿಕ್ ಮುಂಪಕ್ತಿಗೆ ಬಂದು ಹಲವು ಬದಲಾವಣೆಗಳಿಗೆ ಕಾರಣವಾಯ್ತು. ಬ್ಯಾಟು, ಬಾಲುಗಳಲ್ಲಿ ಸುಧಾರಣೆಗಳಾದವು. ಲೆಗ್ ಬೈ ಸಂಬಂಧಿತ ನಿಯಮಗಳು ಬಂದವು. ಮುಂದೆ ಹಲವಾರು ಕ್ರಿಕೆಟ್ ನಿಯಮಗಳು ಬರುತ್ತಲೇ ಇದ್ದು, ಇವತ್ತಿನ ಟ್ವೆಂಟಿ-ಟ್ವೆಂಟಿ, ಫ್ರೀ ಹಿಟ್ ವರೆಗು ಬಂದು ತಲುಪಿದೆ. ICC ಯನ್ನು 1909 ರಲ್ಲಿ ಸ್ಥಾಪಿಸಲಾಯಿತು. ಆರಂಭದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಮಾತ್ರ ಇದರ ಸದಸ್ಯರಾಗಿದ್ದವು‌.

ಜಂಟಲ್ ಮ್ಯಾನ್ ಗೇಮ್ ?

ಅಂಪೈರ್ ತೀರ್ಮಾನಕ್ಕೆ ಬದ್ಧವಾಗಿರುವುದು; ತಂಡವಾಗಿ ಆಡುವುದು; ಎದುರಾಳಿಗಳೊಂದಿಗೆ ಉತ್ತಮವಾಗಿ ವ್ಯವಹರಿಸುವುದು; ಎದುರಾಳಿಗಳನ್ನು ಗೌರವಿಸುವುದು; ಎದುರಾಳಿಗಳು ಗೆದ್ದರೆ ಅಭಿನಂದಿಸುವುದು; ಶಿಸ್ತಿನಿಂದ ಆಡುವುದು ಮುಂತಾದ ನಿಯಮಗಳನ್ನು ಆಟಗಾರರು ಪಾಲಿಸುವ ಕಾರಣಕ್ಕೆ, ಕ್ರಿಕೆಟನ್ನು 'ಜಂಟಲ್ ಮ್ಯಾನ್ ಗೇಮ್' ಎನ್ನುತ್ತಾರೆ ಎಂಬ ಭಾವನೆಯಿದೆ. ಆದರೆ ಹಿಂದೆ ಇಂಗ್ಲೆಂಡಿನಲ್ಲಿ ಸ್ಥಿತಿವಂತರಾದವರ ಜಂಟಲ್ ಮ್ಯಾನ್  ಕ್ರಿಕೆಟ್ ಮತ್ತು ಆಟವನ್ನೇ ಜೀವನೋಪಾಯವಾಗಿ ಮಾಡಿಕೊಂಡಿದ್ದ ಕೆಳವರ್ಗದವರ ಕ್ರಿಕೆಟ್ ಎಂಬುದೊಂದಿತ್ತು. ಜಂಟಲ್ ಮ್ಯಾನ್ಗಳು ಹೇಳಿದ್ದನ್ನು ಕೆಳವರ್ಗದವರು ತುಟಿಪಿಟಿಕ್ಕೆನ್ನದೆ ಪಾಲಿಸಲು, ಅವರ ಸೇವಕರಂತೆ ಆಡಲು ಅಲಿಖಿತ ನಿಯಮಗಳಿದ್ದವು. ಹಾಗೇ ಈ ಆಟಕ್ಕೆ ಬಂದ ಹೆಸರೇ ಜಂಟಲ್ ಮ್ಯಾನ್ ಎಂದರೆ ತಪ್ಪಾಗದು. ಇಂದು ಉದ್ಯಮವಾಗಿರುವ, ವೈಯಕ್ತಿಕ ದಾಖಲೆಗಳಿಂದ ವಿಜೃಂಭಿಸುವ, ಆಟವನ್ನು ದೇಶಗಳ ನಡುವಿನ ಯುದ್ದವೆನ್ನುವ, ಹುಡುಗಿಯರ ಕ್ರಿಕೆಟ್ ಅಂದರೆ ಮುಖ ಸಿಂಡರಿಸುವ.. ಕ್ರಿಕೆಟ್ ಲೋಕದಲ್ಲಿ - ಜಂಟಲ್ ಮ್ಯಾನ್ ಗೇಮ್ ಎಂದೆನ್ನುವುದು ಆಟದ ಸ್ಪಿರಿಟಿಗೆ ವ್ಯತಿರಿಕ್ತವಾದುದು ಎಂದು ಕೆಲವರಿಗಾದರು ಭಾಸವಾಗದೇ ಇರದು!

ಹಳ್ಳಿಗಾಡಿನ ಯುವಕರ ಕಥೆಯಿರುವ 'ಲಗಾನ್' ಸಿನಿಮಾ ಆಸ್ಕರ್ ವರೆಗು ಹೋಗಿ ಬಂತು. ನಿಜದ ಕ್ರಿಕೆಟಿನ ಪಯಣ ಇದಕ್ಕಿಂತ ಭಿನ್ನವಾದುದಾಗಿದೆ. ಬ್ರಿಟೀಷರಿಂದ ಕಲಿತು ಬ್ರಿಟೀಷರನ್ನೇ ಸೋಲಿಸುವ ಮಟ್ಟಿಗೆ ಭಾರತೀಯರು ಬೆಳೆದಿರೋದಂತು ಕಣ್ಣೆದುರಿಗಿದೆ. 1983 ರಲ್ಲಿ ವಿಶ್ವ ಕಪ್ ಜಯಿಸುವಲ್ಲಿಂದ ಭಾರತ ತಂಡ ತನ್ನ ಜೈತ್ರಯಾತ್ರೆ ಪ್ರಾರಂಭಿಸಿತು. ಮುಂದಿನ ಭಾಗ 2ರ ಬರಹದಲ್ಲಿ, ವಿಶ್ವಕಪ್ ಕ್ರಿಕೆಟಿನ ಇತಿಹಾಸದಿಂದ ಹಿಡಿದು ಸಮಕಾಲೀನ ಕ್ರಿಕೆಟ್ ಮೈದಾನದೊಳಗೊಂದು ಸುತ್ತು ಹಾಕೋಣ..

ಕೆಟೆಗರೀ / ವರ್ಗ:ಕ್ರೀಡೆ



ProfileImg

ಇದರ ಲೇಖಕರು Guru

Writer, Poet & Automotive Enthusiast

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ