" ಛೇ..!! ಇವತ್ತೇ ಇಷ್ಟು ಲೇಟ್ ಆಗ್ಬೇಕಾ, ಅಡುಗೆ ಬೇರೆ ಮಾಡ್ಬೇಕು" ಎಂದುಕೊಂಡು ಬಸ್ಸಿನ ಮೆಟ್ಟಿಲಿಳಿದ ಆಕೆ ಗಡಿಬಿಡಿಯಿಂದಲೇ ನಡೆದಳು. ಇನ್ನೇನು ಮನೆಗೆ ಹತ್ತು ಹೆಜ್ಜೆಯಷ್ಟೇ, 'ವಸು' ಎಂಬ ಕರೆ ಆಕೆಯ ವೇಗವನ್ನೊಮ್ಮೆ ತಡೆಯಿತು, ಅವಳ ಕಾಲುಗಳು ಇನ್ನು ನಡೆಯಲಾರೆವೆಂಬಂತೆ ಮುಷ್ಕರ ಹೂಡಿಬಿಟ್ಚವು ಅವಳ ಆಜ್ಞೆಯನ್ನು ಪಾಲಿಸೆವೆಂಬಂತೆ. ಆ ಸಂಜೆಗತ್ತಲಿನಲ್ಲೂ ಆ ಕರೆಯಲ್ಲಿನ ಆರ್ದ್ರತೆ ಅರಿವಾಗದಿರಲಿಲ್ಲ ಅವಳಿಗೆ. ಒಂದು ಕ್ಷಣ ನಿಂತವಳು, ತನಗೇನೂ ಕೇಳಿಸಿಯೇ ಇಲ್ಲವೆಂಬಂತೆ ಎರಡು ಹೆಜ್ಜೆ ಮುಂದಿಟ್ಟಳಷ್ಟೇ, ಅದೇ ಪುರುಷ ದನಿ, 'ನಿಂತ್ಕೊ ವಸು'..! ಈಗಂತೂ ಅವಳೊಂದು ಹೆಜ್ಜೆ ಮುಂದಿಡಲಾಗಲಿಲ್ಲ.., ಆ ದನಿಯ ಒಡೆಯ ಆಕೆಯ ಎಡ ಕರವನ್ನು ತನ್ನ ಕೈಯಿಂದ ಬಿಗಿಯಾಗಿ ಬಂಧಿಸಿದ್ದ. ಆ ಆಕೃತಿ ಮುಂದೆ ಬಂದು ನಿಂತಂತೆ ಅವನನ್ನು ದಿಟ್ಟಿಸಿದಳಾಕೆ.
ಹೌದು.!! ಅವನೇ, ಅದೇ ಅಶೋಕ್.. ಮನಪಟಲದ ಮೂಲೆಯಲ್ಲಡಗಿದ್ದ ಬಹು ಪರಿಚಿತ ಭಾವವೊಂದು ಮೆಲ್ಲನೆದ್ದು ಮಗ್ಗಲು ಬದಲಾಯಿಸಿದಂತಾಯಿತು ಅವಳಿಗೆ. ಅವನನ್ನೊಮ್ಮೆ ಅವನ ಹಿಡಿತದಲ್ಲಿದ್ದ ತನ್ನ ಕೈಯನ್ನೊಮ್ಮೆ ಬದಲಿಸಿ ನೋಡಿದವಳು, ಕೊಸರಿಕೊಂಡಳು ಅಸಹ್ಯವೆಂಬಂತೆ. ಕೈಯ ಹಿಡಿತ ಸಡಿಲಿಸಿದವನು ಕಿರುನಕ್ಕು,"ಹೇಗಿದ್ದೀಯ ವಸು?"ಎಂದ. "ಹೇಗಿದ್ದರೆ ನಿಮಗೇನಂತೆ ಮಿಸ್ಟರ್, ಜೀವ ಉಳಿಸಿದ್ದೀರಲ್ಲ ಬದುಕಿದ್ದೀನಿ" ಎಂದುಬಿಟ್ಟಳು. ಅವಳ ಹರಿತವಾದ ಮಾತಿನಿಂದ ನೊಂದುಬಿಟ್ಟನವ. "ವಸು..." ಎನ್ನುವಷ್ಟರಲ್ಲಿ ಸಾಕೆಂಬಂತೆ ಕೈಯೆತ್ತಿದವಳು,"ಕಾಲ್ ಮಿ ವಸುಧಾ" ಎಂದಳು ಅದೇ ದಾಟಿಯಲ್ಲಿ. "ನನ್ನ ಕ್ಷಮಿಸು ವಸುಧಾ ನಾನು ನಿನಗೆ ಅನ್ಯಾಯವೆಸಗಿಬಿಟ್ಟೆ" ಎಂದನವ ಬಹು ನೋವಿನಿಂದ. ಅವಳ ಅಸಹನೆ ಕಡಿಮೆಯಾಗಲಿಲ್ಲ., ಆಗುವಂತಹುದೂ ಅಲ್ಲ. "ಇದೇ ರೀತಿ ತಪ್ಪೇ ಎಸಗದ ನಾನು ಅಂದು ಗೋಗರೆದೆನಲ್ಲಾ ಅಶೋಕ್" ಎಂದಳವಳು ಮನದಲ್ಲೇ. ಅವನ ಮಾತಿಗೊಂದು ವಿಷಾದದ ನಗು ಬೀರಿದವಳು ಮುನ್ನಡೆದುಬಿಟ್ಟಳು. "ವಸು ದಯವಿಟ್ಟು ನಿಂತ್ಕೊ ವಸು" ಎಂದನವನು ಮತ್ತೊಮ್ಮೆ. ಆ ಕರೆಯಲ್ಲಿನ ಆಪ್ಯಾಯಮಾನ ದನಿಗೆ ತಿರುಗಿದಳು ಆಕೆ. ತಾನೇನಾದರೂ ಅವಳನ್ನು ರೇಗಿಸಿದಾಗ ಮುನಿಸಿನಿಂದ ಮುನ್ನಡೆಯುತ್ತಿದ್ದವಳನ್ನು "ವಸು.. " ಎಂದು ಕರೆದರೆ ಸಾಕು ತಿರುಗಿ ತನ್ನೆಡೆಗೆ ಓಡಿ ಬರುತ್ತಿದ್ದ ಆ ವಸುಧಾ ಅಶೋಕ್ ನ ನೆನಪಿನಂಗಳದಲ್ಲೊಮ್ಮೆ ಹಾದು ಹೋದಳು.
ತಿರುಗಿದವಳು ಅವನನ್ನೊಮ್ಮೆ ನೋಡಿ ಮುಂದುವರಿಸಿದಳು,"ನಿಮ್ಮನ್ನು ನಾನು ಕಡೆಯವರೆಗೂ ಕ್ಷಮಿಸಲಾರೆ ಅಶೋಕ್. ಅದೆಷ್ಟು ನಂಬಿದ್ದೆ ನಿಮ್ಮನ್ನು, ನಾನೂ ಸಹ ಅಂದು ಬೇಡಿದ್ದೆ, ಕಣ್ಣೀರಿಟ್ಟಿದ್ದೆ, ನನ್ನ ಕೈ ಬಿಡ್ಬೇಡಿ ಎಂದು ಗೋಗರೆದಿದ್ದೆ. ನನ್ನ ಜೊತೆ ಆಟವಾಡಿಬಿಟ್ಟಿರಲ್ಲ ಅಶೋಕ್. ನನ್ನ ಪ್ರೀತಿ, ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ ನಿಮ್ಮಿಂದ ನನ್ನ ದೂರ ನೂಕಿಬಿಟ್ಟಿರಲ್ಲಾ, ಎಂದು ನೀವು ನನ್ನ ಮಾತು, ನಿಮ್ಮೆಡೆಗಿನ ಕಾಳಜಿ ಉಸಿರುಗಟ್ಟುತ್ತಿದೆ ಎಂದಿರೋ ಅಂದು ನಾನು ಅಕ್ಷರಶಃ ಕುಸಿದೇ ಹೋಗಿದ್ದೆ. ಅದೇ ನಿಮಗೆ ನಾನು ಬೇಕೆಂದಾಗ ದಿನವೆಲ್ಲಾ ನನ್ನ ಹಿಂದೆ ಸುತ್ತುತ್ತಿದ್ದ ನಿಮಗೆ ಸತಾಯಿಸಿಯಾದರೂ ನಾನು ಒಪ್ಪಿಗೆಯನ್ನಿತ್ತಾಗ ನೀವು ಖುಷಿಪಟ್ಟಿರಲ್ಲಾ, ಅಂದು ನಿಮ್ಮ ಕಣ್ಣಲ್ಲಿ ನನ್ನೆಡೆಗಿದ್ದ ಪ್ರೇಮ, ನೀವೇನೇ ಮಾಡಿದರೂ ನಾನು ನಿಮ್ಮನ್ನೆಂದಿಗೂ ತೊರೆಯಲಾರೆನೆಂಬ ಅರಿವಾಗುತ್ತಲೇ ನನ್ನ ಪ್ರೀತಿ, ಕಾಳಜಿ ನಿಮಗೆ ಸರಪಳಿಯಾಯಿತಲ್ಲವೇ..? ನನ್ನ ಅದು ಹೇಗೆ ಅಷ್ಟು ಸುಲಭವಾಗಿ ಬಿಟ್ಟುಬಿಟ್ಟಿರಲ್ಲ ನೀವು, ಅದಾವಾಗಲೋ ನಂಗೆ ನೀವು ಸಮಯ ಕೊಡುತ್ತಿಲ್ಲ ಯಾಕೆಂದು ಕೇಳಿದಾಗ ಏನಂದಿರಿ ನೀವು,"ಪ್ಲೀಸ್ ವಸುಧಾ ನನ್ನ ಬಿಟ್ಟುಬಿಡು, ನಾನು ಹೋದಲ್ಲಿ ಬಂದಲ್ಲಿ ಕಾಡ್ಬೇಡ ನನ್ನ" ಎಂದು ಎಲ್ಲರೆದುರು ಕಿರುಚಿಬಿಟ್ಟಿರಲ್ಲಾ ಅದೇ ಕ್ಷಣ ಆ ನಿಮ್ಮ ವಸು ಸತ್ತಳು ಅಶೋಕ್. ಬೇಡಿ ಅಶೋಕ್ ಪ್ಲೀಸ್ ನಾನು ತಾಳ್ಮೆ ಕಳೆದುಕೊಂಡು ಅಬ್ಬರಿಸುವ ಮೊದಲು ಇಲ್ಲಿಂದ ಹೊರಟುಬಿಡಿ" ಎಂದು ಕೈ ಮುಗಿದಳಷ್ಟೇ., "ವಸು.." ಅತೀ ಪರಿಚಿತ ಮೃದು ಕರೆಗೆ ಕ್ಷಣ ವಿಚಲಿತಳಾದವಳು ಅಶೋಕ್ ಗೆ ಬೆನ್ನು ಹಾಕಿ ಆ ತನ್ನ ಕರೆದ ವ್ಯಕ್ತಿಯತ್ತ ತಿರುಗಿದಳು, "ರಘು ಇದೇನು ನೀವಿಲ್ಲಿ..?" ಅದೇ ನೀನಿನ್ನೂ ಬಂದಿರಲಿಲ್ಲವಲ್ಲಾ ಹಾಗೆ ಹೊರಟುಬಿಟ್ಟೆ". ಸರಕ್ಕನೇ ರಘುವಿನ ದೃಷ್ಟಿ ಅಶೋಕ್ನತ್ತ ಹರಿಯಿತು, ಅವನು ವಸುವಿನತ್ತ ನೋಡುವಷ್ಟರಲ್ಲಿ "ನನ್ ಫ್ರೆಂಡ್ ಅಶೋಕ್ ಅಂತ" ಎಂದಳು ಅದಾವುದೋ ನಿರ್ಭಾವುಕತೆಯಿಂದ. "ಇದೇನ್ ಸಾರ್, ನನ್ ಹೆಂಡ್ತಿ ಏನೋ ಇಲ್ಲಿ ನಿಂತ್ಕೊಂಡು ಮಾತಾಡ್ತಿದಾಳಂತ ನೀವೂ ನಿಂತ್ಬಿಟ್ರಲ್ಲ ಸಾರ್ ಬನ್ನಿ ಮನೆಗೆ ನಡಿ ವಸು" ಎಂದನಾತ.
ಅಮೂಲ್ಯ ರತ್ನವೊಂದು ಕೈ ತಪ್ಪಿ ಹೋದಂತೆ ಚಡಪಡಿಸಿದ ಅಶೋಕ್ ನ ಕಣ್ಣಿಂದ ಅಪ್ರಯತ್ನವಾಗಿ ಕಣ್ಣೀರಿನ ಹನಿಗಳೆರಡು ಅವನ ಅನುಮತಿಯನ್ನೂ ಕಾಯದೆ ಜಾರಿಬಿದ್ದವು. "ನನ್ನ ವಸುವಿಗೆ ಮದುವೆಯಾಯಿತಾ..?" ನೋವಿನ ಸೆಲೆಯೊಂದು ಎದೆಯಾಳದಲ್ಲಿ ಮೂಡಿದಾಗ ತುಟಿಕಚ್ಚಿ ನೋವು ನುಂಗಿದ. ಆ ಯೋಚನೆಯೇ ಅವನನ್ನು ಹೈರಾಣಾಗಿಸಿತ್ತು. ಅದಾವುದೇ ಕಾರಣವೇ ಇಲ್ಲದೆ ಅವಳನ್ನು ದೂರ ತಳ್ಳಿದೆನಲ್ಲಾ, ಅವಳೇನೇ ಆದರೂ, ಏನೇ ಮಾಡಿದರೂ ನನ್ನವಳಾಗಿರುವಳೆಂಬ ಭ್ರಮೆಯಲ್ಲದೆ ಇನ್ನೇನು, ಹೆಚ್ಚು ಕಡಿಮೆ ಅವಳನ್ನು ನೋಡುವ ಪ್ರಯತ್ನವೇ ಮಾಡಿಲ್ಲ ತಾನು.,ತಿಂಗಳುಗಳ ಹಿಂದೆ ವಸುವನ್ನು ಅದೆಲ್ಲೋ ನೋಡಿ ಹುಡುಕಿ ಬಂದರೆ ಅವಳಿನ್ನು ತನ್ನವಳಲ್ಲ ಎಂಬ ಭಾವವೇ ನನ್ನನ್ನು ಕೊಲ್ಲುತ್ತಿದೆ ಇನ್ನು ನನ್ನ ವಸು ನನ್ನಿಂದ ಅನುಭವಿಸಿದ ನೋವು ಅದೆಷ್ಟಿರಬಹುದು ಎಂದು ಯೋಚಿಸಿದವನ ಕಣ್ಣುಗಳಲ್ಲಿ ಕಣ್ಣೀರಿನ್ನೂ ನಿಂತಿರಲಿಲ್ಲ.
"ಹಲೋ ಸಾರ್ ಬನ್ನಿ ಸಾರ್" ಎಂದ ರಘುವಿನ ಧ್ವನಿ ಇನ್ನೂ ನೊಯಿಸಿತು ಆತನನ್ನು. ಬಹು ಆಯಾಸಪಟ್ಟು ವಸುವನ್ನೊಮ್ಮೆ ನೋಡಿದಾತ, "ಇಲ್ಲ ಸಾರ್ ನೋಡಿ, ಮಾತಾಡಿ ಆಯ್ತು ನಾನಿನ್ನು ಬರ್ತೀನಿ ಸಾರ್, ಬರ್ತೀನಿ ವಸುಧಾ" ಎಂದವ ಅನುಮತಿಗೂ ಕಾಯದೆ ನಡೆದುಬಿಟ್ಟ.
ಅವನ ಕಣ್ಣೀರೇನೂ ವಸುವಿಗೆ ಕಾಣದಿರಲಿಲ್ಲ. ಆದರೂ ಆಕೆಯ ಭಾವದಲ್ಲೇನೂ ವ್ಯತ್ಯಾಸವಿಲ್ಲ. ನೋವೊಂದು ಕ್ಷಣ ಮೂಡಿ ಮರೆಯಾಯಿತಷ್ಟೇ. ಅದೂ ಕ್ಷಣಿಕ. ಉಳಿದಂತೆ ರಘುವಿನ ಒಲವಲ್ಲಿ ಅವಳೆಂದೂ ಸುಖಿಯೇ. "ನಡಿ ವಸು" ಎಂದವನತ್ತ ಸುಂದರ ನಗುವೊಂದನ್ನು ಚೆಲ್ಲಿದವಳು ಅವನ ಹೆಜ್ಜೆಯನ್ನು ಅನುಸರಿಸಿದಳು ನಿರಾಳ ಭಾವದೊಂದಿಗೆ.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ