ದೈವಾರಾಧನೆಗೆ ಯಾರಿಂದ ಅಪಚಾರ ಆಗುತ್ತಿದೆ?

ProfileImg
03 May '24
3 ನಿಮಿಷದ ಓದು


image

 ಭೂತಾರಾಧನೆ ದೈವಾರಾಧನೆಗೆ ಯಾರಿಂದ  ಅಪಚಾರ ಆಗುತ್ತಿದೆ?

ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು
ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ
ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ

ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ

ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .
ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.
ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು
ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.

ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿಯಾಗಿ, ಚಾಮುಂಡೇಶ್ವರಿ ಆಗಿ ಲೆಕ್ಕೇಸಿರಿ  ರಕ್ತೇಶ್ವರಿ ಆಗಿ  ಅಜ್ಜಿ ಭೂತ ಮಹಾ ಲಕ್ಷ್ಮೀ  ಆಗಿ
ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ
ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 
ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 
ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ?

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ
ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ
ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.
ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ

ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು

ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು

ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ
ಈಗ ಪರಿಚಯ ಆಗಿದೆ
ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ
ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ
ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ
ವಿರೋಧವೂ ಬಂದಿರಲಿಲ್ಲ

ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ
ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ
ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.
ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..
ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ
ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು
ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು . ದುಡ್ಡಿಗಾಗಿ ಇತರ ಕೆಲಸ ಮಾಡುವುದು ತಪ್ಪು ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ. ಎಂದು ವಿತ್ತಂಡ ವಾದ ಮಾಡಬಹುದು.

ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಬಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ

ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..

ಡಾ.ಲಕ್ಷ್ಮೀ ಜಿ ಪ್ರಸಾದ
ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile 9480516684

ಕೆಟೆಗರೀ / ವರ್ಗ:ಆಧ್ಯಾತ್ಮಿಕತೆ



ProfileImg

ಇದರ ಲೇಖಕರು Dr Lakshmi G Prasad

Verified

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ