ಅಂತರಾಷ್ಟ್ರೀಯ ಸಹಿಷ್ಣುತೆ ದಿನ ನವೆಂಬರ್ 16
ಎಂದಿನಂತೆ ಶಾಲೆಯಲ್ಲಿ ಬೆಳಗಿನ ಪ್ರಾರ್ಥನಾ ಚಟುವಟಿಕೆಗಳು ಮುಗಿಸಿ ಹಾಜರಿ ಕರೆದು ಪಾಠ ಪ್ರಾರಂಭಿಸಿದಾಗ ಒಬ್ಬ ವಿದ್ಯಾರ್ಥಿ ಓಡೋಡುತ್ತಾ ಏದುಸಿರಿನೊಂದಿಗೆ ತರಗತಿಗೆ ಪ್ರವೇಶಿಸಿದ.ಎರಡು ಮೂರು ದಿನಗಳ ಗೈರು ಹಾಜರಿಗೆ ಕಾರಣ ಕೇಳಿದಾಗ,ತಂದೆಯ ಕುಡಿತದ ಚಟದಿಂದ ಮನೆಯಲ್ಲಿ ಆಗುತ್ತಿರುವ ತೊಂದರೆಗಳ ವಿವರಿಸುತ್ತಾ,ಹೊಟ್ಟೆಪಾಡಿಗೆ ತಾಯಿಯು ಪಡುತ್ತಿರುವ ಕಷ್ಟಗಳು, ಕುಟುಂಬದಲ್ಲಿ ಪ್ರತಿನಿತ್ಯ ತಂದೆ ತಾಯಿಯರ ಮಧ್ಯೆ ನಡೆಯುತ್ತಿರುವ ಕಲಹಗಳು,ಇದರಿಂದ ಕಲಿಕೆಗೆ ತೊಂದರೆ ಆಗುತ್ತಿರುವುದನ್ನು ತಿಳಿಸಿ, ಅಪ್ಪನ ಜವಾಬ್ದಾರಿಯನ್ನು ಪ್ರಶ್ನಿಸಿದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿ ನಡೆಸಿದ ದೈಹಿಕ ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಮನೆ ಕೆಲಸದ ಜೊತೆ ಅಮ್ಮನ ಶುಶ್ರೂಷೆ ಮಾಡಿ ಬರಲು ತಡವಾದ ವಿಚಾರ ತಿಳಿಸಿದ.ನನಗೆ ಅತೀವ ದುಃಖವಾಯಿತು. ತನ್ನಿಂದ ಯಾವುದೇ ಪರಿಹಾರ ನೀಡಲಾಗದಿದ್ದರೂ ಆತನನ್ನು ಸಂತೈಸಿ ಸಮಾಧಾನ ಪಡಿಸಲಷ್ಟೇ ಸಾಧ್ಯವಾಯಿತು.ಪ್ರತಿನಿತ್ಯ ಗಂಡನ ಚಾಳಿಯನ್ನು ಕ್ಷಮಿಸುತ್ತಾ ದಿನದೂಡುತ್ತಿರುವ ತಾಯಿ,ಅಪ್ಪ ಎಂಬ ಕಾರಣಕ್ಕೆ ಆತನನ್ನು ಗೌರವಿಸುವ ಮಗನ ಸಹಿಷ್ಣುತೆಯನ್ನು ನೋಡುವಾಗ ಇದೇ ರೀತಿ ಕುಟುಂಬದಲ್ಲಿ ಮಾತ್ರವಲ್ಲ ಹಲವೆಡೆ ಶೋಷಿತರು ಸಮಸ್ಯೆ ಎದುರಿಸಲಾಗದೆ ಸಹಿಷ್ಣುತೆಯ ಸಾಕಾರ ಮೂರ್ತಿಗಳಂತೆ ಜೀವಿಸುವ ಕಥೆಗಳು ದಿನನಿತ್ಯದಾಗಿದೆ. ಗಂಡನ ದರ್ಪವನ್ನು ಸಹಿಸುತ್ತಿರುವ ಹೆಂಡತಿ, ಹೆಂಡತಿಯ ಅತಿರೇಕವನ್ನು ಸಹಿಸುವ ಗಂಡ, ಮಾಲೀಕರ ದಬ್ಬಾಳಿಕೆಯ ನಡುವೆ ಕೆಲಸ ಮಾಡುವ ಕೂಲಿಕಾರ್ಮಿಕರು, ಮಾನಸಿಕ ಕಿರುಕುಳವನ್ನು ಬದಿಗಿಟ್ಟು ತನ್ನ ಸಿಟ್ಟು, ಹತಾಶೆ,ನೋವನ್ನು ಸಹಿಸಿಕೊಳ್ಳುವ ಅದೆಷ್ಟೋ ವ್ಯಕ್ತಿಗಳು ಸಹಿಷ್ಣುತೆ ಎಂಬ ಆಯುಧ ಧರಿಸಿ ಜೀವಿಸುತ್ತಿದ್ದಾರೆ.
ಸಮಾಜದಲ್ಲಿ ನಡೆಯುತ್ತಿರುವ ಹಿಂಸೆಗಳು ಒಂದೆಡೆಯಾದರೆ , ಅದನ್ನು ತಾಳ್ಮೆಯಿಂದ ಸಹಿಸುವ ಮನಸ್ಥಿತಿಯುಳ್ಳವರು ಇನ್ನೊಂದೆಡೆ. ಇವೆರಡರ ತಾಕಲಾಟದ ನಡುವೆ ಸಹಿಷ್ಣುತೆಯು ಸಕಾರಾತ್ಮಕವಾಗಿ ಕಾರ್ಯನಿರ್ವಹಿಸುತ್ತದೆ.
ಸಹಿಷ್ಣುತೆ ಬಗ್ಗೆ ವ್ಯಾಖ್ಯಾನಿಸುವಾಗ “ಅನ್ಯಾಯ ಅನೀತಿಗಳನ್ನು ಪ್ರತಿಭಟಿಸಲಾಗದೆ ಎಲ್ಲಾ ನೋವುಗಳನ್ನು ತಡೆದುಕೊಳ್ಳುವವರೇ “ಸಹಿಷ್ಣುತ”ರು ಎನ್ನಬಹುದು.
ಲ್ಯಾಟಿನ್ ಭಾಷೆಯಿಂದ ಅನುವಾದಿಸಲ್ಪಟ್ಟ "ಸಹಿಷ್ಣುತೆ" ಎಂಬ ಪದದ ಅರ್ಥ "ತಾಳ್ಮೆ". ಇದನ್ನು ಸಹನೆ ,ಕಷ್ಟ ಅಥವಾ ಪ್ರತಿಕೂಲತೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಎಂತಲೂ ಹೇಳಬಹುದು.ಸಹಿಷ್ಣುತೆಯು ಒಂದು ಭಾವನಾತ್ಮಕ ಅಂಶವಾಗಿದ್ದೂ,ಶಾಂತಿ ಸ್ಥಾಪನೆ ಹಾಗೂ ಸಮಾಧಾನಕ್ಕಾಗಿ ಅತ್ಯವಶ್ಯಕವಾಗಿದೆ.
ನಮ್ಮ ಸುತ್ತಮುತ್ತ ಸಹಿಷ್ಣುತೆಯನ್ನು ಬಿಂಬಿಸುವ ಎಷ್ಟೋ ಪ್ರಸಂಗಗಳು ಕಂಡುಬಂದರೂ ಅದಕ್ಕೂ ಹೊರತುಪಡಿಸಿ ಜಾಗತಿಕ ಮಟ್ಟದಲ್ಲೂ ಸಹಿಷ್ಣುತೆಗೆ ಅಷ್ಟೇ ಒತ್ತನ್ನು ನೀಡಲಾಗಿದೆ. ಸಂಸ್ಕೃತಿಗಳು, ಸಂಪ್ರದಾಯಗಳು, ಭಾಷೆಗಳು, ಜನಾಂಗಗಳು ಮತ್ತು ಕಲಾ ಪ್ರಕಾರ ಮುಂತಾದ ವೈವಿಧ್ಯತೆಗಳು ವಿವಿಧ ಮೂಲೆಗಳಿಂದ ಹುಟ್ಟಿಕೊಂಡು ದೇಶಗಳು ಮತ್ತು ಜನರನ್ನು ಸುತ್ತುತ್ತವೆ. “ಸಹಿಷ್ಣುತೆ”ಯು ನಮಗೆ ಅಪರಿಚಿತವಾಗಿರುವ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳನ್ನು ಗೌರವಿಸುವಲ್ಲಿ ಸಂತೋಷವನ್ನು ಕಂಡುಕೊಳ್ಳಲು ಅನುವು ಮಾಡಿಕೊಡುತ್ತದೆ.ಪರಿಚಯವಿಲ್ಲದ ಸಂಸ್ಕೃತಿಗಳ ಬಗ್ಗೆ ನಾವು ಅಗೌರವ ಮತ್ತು ಅಸಹಿಷ್ಣುತೆಯನ್ನು ಪ್ರದರ್ಶಿಸಿದಾಗ, ನಾವು ಅಪಶ್ರುತಿ, ಸಂಘರ್ಷವನ್ನು ಬಿತ್ತುತ್ತೇವೆ ಮತ್ತು ನಮ್ಮ ಪ್ರಪಂಚದ ಸಮತೋಲನವನ್ನು ಅಡ್ಡಿಪಡಿಸುತ್ತೇವೆ. ‘ಸ್ವೀಕಾರ’ ಮತ್ತು ‘ಸಹನೆ’ಯಲ್ಲಿ ಅಪಾರ ತೃಪ್ತಿ ಇದೆ. ಜಾಗತಿಕ ಮಟ್ಟದಲ್ಲಿ ಅಸಹಿಷ್ಣುತೆಯ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು 1995 ರಲ್ಲಿ UNESCO ಘೋಷಿಸಿದ ವಾರ್ಷಿಕ ಆಚರಣೆಯ ದಿನ ಇದಾಗಿದೆ. 1996 ರಲ್ಲಿ, UN ಜನರಲ್ ಅಸೆಂಬ್ಲಿ (51/95 ನಿರ್ಣಯದ ಮೂಲಕ) UN ಸದಸ್ಯ ರಾಷ್ಟ್ರಗಳನ್ನು ಸಹಿಷ್ಣುತೆಗಾಗಿ ಅಂತರರಾಷ್ಟ್ರೀಯ ದಿನವನ್ನು ಆಚರಿಸಲು ಆಹ್ವಾನಿಸಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 16ರಂದು ಸಹಿಷ್ಣುತೆ ದಿನವನ್ನು ಆಚರಿಸಲಾಗುತ್ತಿದೆ.
ಧರ್ಮ, ರಾಜಕೀಯ ಅಥವಾ ನೈತಿಕತೆಯ ವಿರುದ್ಧ ದೃಷ್ಟಿಕೋನವನ್ನು ಹೊಂದಿರುವ ಜನರು ವಿಭಿನ್ನ ವಿಶ್ವ ದೃಷ್ಟಿಕೋನವನ್ನು ಹೊಂದಿರುವುದರಿಂದ ಸಹಿಷ್ಣುತೆಯ ಅಗತ್ಯ ಎದ್ದು ಕಾಣುತ್ತದೆ.ಹಾಗಂತ ಸಾಮಾಜಿಕ ಅನ್ಯಾಯವನ್ನು ಸಹಿಸಿಕೊಳ್ಳಬೇಕು ಅಂತೇನು ಅಲ್ಲ. ಸಹಿಷ್ಣುತೆಯು ಒಬ್ಬ ವ್ಯಕ್ತಿ, ಸ್ಥಳ ,ಪ್ರದೇಶದ ಸಂಸ್ಕೃತಿ ಆಚಾರ ವಿಚಾರಗಳಲ್ಲಿನ ಅರಿವಿಗೆ ಸಹಕಾರಿಯಾಗಿದೆ. ಜಗತ್ತಿನಲ್ಲಿ ಉಂಟಾಗುವ ಅರಾಜಕತೆಯ ತಡೆಯುವಿಕೆಗೆ ಇದು ಅಗತ್ಯ ಎನ್ನಬಹುದು.
ಸಹಿಷ್ಣುತೆ ಮತ್ತು ಸಂಸ್ಕೃತಿಗಳು ಮತ್ತು ಸಾಮಾಜಿಕ- ಆರ್ಥಿಕ ಗುಂಪುಗಳ ಮೇಲೆ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಈ ದಿನದ ಸ್ಮರಣಾರ್ಥವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಿನವು ಸಮುದಾಯಗಳ ನಡುವಿನ ಅಂತರವನ್ನು ನಿವಾರಿಸಲು ಮತ್ತು ಸಂವೇದನಾಶೀಲತೆಯ ಪ್ರಚಾರವನ್ನು ಒತ್ತಿಹೇಳುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಮಟ್ಟಗಳಲ್ಲಿ ಸಹಿಷ್ಣುತೆಯನ್ನು ಉತ್ತೇಜಿಸುವುದು ಉತ್ತಮ ಜಗತ್ತನ್ನು ನಿರ್ಮಿಸಲು ಅತ್ಯಗತ್ಯ, ಏಕೆಂದರೆ ಅದು ಸಮತೋಲನವನ್ನು ಉತ್ತೇಜಿಸುತ್ತದೆ.
ಈ ದಿನದಲ್ಲಿ ಸಹಿಷ್ಣುತೆ ಮತ್ತು ಅಹಿಂಸೆಯನ್ನು ಉತ್ತೇಜಿಸಲು ಯುನೆಸ್ಕೋ ಬಹುಮಾನವನ್ನು ಕೂಡ ನೀಡುತ್ತಿದೆ. ಆಚರಣೆಗಳನ್ನು ಪ್ರಾಯೋಜಿಸಿದ ಮದನ್‌ಜೀತ್ ಸಿಂಗ್ ಅವರ ಹೆಸರಿನ ಈ ಪ್ರಶಸ್ತಿಯು ವಿಜ್ಞಾನ, ಕಲೆ, ಸಂಸ್ಕೃತಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ಗುರುತಿಸಿ ನೀಡಲಾಗುತ್ತದೆ.ಅಲ್ಲದೆ ಸಹಿಷ್ಣುತೆ ಮತ್ತು ಅಹಿಂಸೆಗೆ ಪರಿಣಾಮಕಾರಿ ಕೊಡುಗೆ ನೀಡಿದ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಸಹ ಇದನ್ನು ನೀಡಬಹುದಾಗಿದೆ.
ಒಟ್ಟಿನಲ್ಲಿ ಸಮಾಜದಲ್ಲಿ ಸಹಿಷ್ಣುತೆಯು ಆಧಾರ ಸ್ತಂಭವಾಗಿ ನಿಂತಿದೆ. ಜಾಗತೀಕರಣದ ನಿಟ್ಟಿನಲ್ಲಿ ವೈವಿಧ್ಯಮಯ ಹಿನ್ನೆಲೆಗಳು, ಸಂಸ್ಕೃತಿಗಳು ಮತ್ತು ನಂಬಿಕೆಗಳ ಜನರು ಸಹಬಾಳ್ವೆ ನಡೆಸಬೇಕಾಗಿದೆ. ಆದ್ದರಿಂದ ಸಹಿಷ್ಣುತೆ ಮತ್ತು ಸಾಮರಸ್ಯವನ್ನು ಸ್ಥಾಪಿಸುವುದು ಮುಖ್ಯವಾಗುತ್ತದೆ. ಸಹಿಷ್ಣುತೆಯು ಸಮಾಜವನ್ನು ಬೆಳೆಸುತ್ತದೆ, ಇದರಲ್ಲಿ ವ್ಯಕ್ತಿಗಳು ಮೌಲ್ಯಯುತ ಮತ್ತು ಗೌರವವನ್ನು ಎತ್ತಿ ಹಿಡಿಯಲು ಸಹಕಾರಿಯಾಗಿದೆ.
ನಿಸ್ಸಂದೇಹವಾಗಿ, ಸಮಾಜವು ಪ್ರೀತಿ ಮತ್ತು ಯೋಗಕ್ಷೇಮದಿಂದ ಅಭಿವೃದ್ಧಿ ಹೊಂದಲು, ಸಹಿಷ್ಣುತೆ ಅನಿವಾರ್ಯವಾಗಿದೆ. ನಾವು ಇತರ ಸಂಸ್ಕೃತಿಗಳು, ಜಾತಿಗಳು, ಬಣ್ಣಗಳು ಮತ್ತು ಪಂಥಗಳನ್ನು ಗೌರವಿಸಬೇಕು. ಆದಾಗ್ಯೂ, ಸಹಿಷ್ಣುತೆಯು ಒಂದು ಪಕ್ಷಕ್ಕೆ ತಾಳ್ಮೆ ಮತ್ತು ಸ್ವೀಕಾರವನ್ನು ತೋರಿಸುವಾಗ ಮತ್ತೊಂದು ಪಕ್ಷಕ್ಕೆ ಸೀಮಿತವಾಗಿರಬಾರದು ಎಂಬುದನ್ನು ಗುರುತಿಸುವುದು ಮುಖ್ಯವಾಗಿದೆ. ಎಲ್ಲ ಪಕ್ಷಗಳು ಸಹಿಷ್ಣುತೆಯನ್ನು ವ್ಯಕ್ತಪಡಿಸಬೇಕು. ಇದು ಮುಕ್ತ ಮನಸ್ಸನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳುವ ಮೂಲಕ ವೈಯಕ್ತಿಕ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ. ಆದ್ದರಿಂದ, ನವೆಂಬರ್ 16 ರಂದು ಅಂತರರಾಷ್ಟ್ರೀಯ ಸಹಿಷ್ಣುತೆಯ ದಿನವನ್ನು ಆಚರಿಸುವುದು ಸಮಾಜದ ಒಳಿತಿಗಾಗಿ ಸಹಿಷ್ಣು ನಡವಳಿಕೆ ಮತ್ತು ಅಹಿಂಸೆಯನ್ನು ಉತ್ತೇಜಿಸುವ ಕೇಂದ್ರವಾಗಬೇಕಿದೆ. ಅರಾಜಕತೆಯಲ್ಲಿ ತಾಂಡವವಾಡುತ್ತಿರುವ ಸಮಾಜವನ್ನು ನೈತಿಕತೆಯಲ್ಲಿ ಬೆಳೆಸಲು ಈ ದಿನದ ಆಚರಣೆ ಮೂಲಕ ಜಾಗೃತಿಯನ್ನು ಮೂಡಿಸಲು ಪ್ರಯತಿಸೋಣವೇ?
ಶಿಕ್ಷಕಿ .. ಸರಕಾರಿ ಪ್ರೌಢಶಾಲೆ ಕಡಕೊಳ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ