'ದಿನಾ ತೊಟ್ಟೆ ಹಾಕಿ ಹಾಕಿ ಬೋರ್ ಅಲ್ಲವಾ? ಇವತ್ತಾದ್ರೂ ಸ್ವಲ್ಪ ವಿಸ್ಕಿ ಹಾಕಿ ಪೊಡಿಯಾಮ’
ಪ್ರಕಾಶ ಒಂದು ಫುಲ್ ಬಾಟಲ್ ವಿಸ್ಕಿ ತೆಗೆದು ಪೊಡಿಯನ ಎದುರು ಇಟ್ಟ.
ಪೊಡಿಯ ಮುಖ ಅರಳಿಸುತ್ತಾ ‘ಎಲ್ಲಿ ಸಿಕ್ಕಿತು ಪ್ರಕಾಶ?’ ಎಂದ.
‘ಕುಡ್ಲಕ್ಕೆ ಹೋಗಿದ್ದೆ, ನಿಮ್ಮ ನೆನಪಾಯಿತು ಹಂಪಕಟ್ಟೆ ಬಿಎನ್‌ಎಸ್ ಬಾರ್‌ನಿಂದ ತಂದದ್ದು’ ಎಂದ ಪ್ರಕಾಶ.
'ಮುಂಬೈಗೆ ಹೋಗ್ಲಿಕುಂಟು ಅನ್ತಿದ್ದಿಯಲ್ಲಾ? ಯಾವಾಗ ಹೋಗುವುದು?' ಬಾಟಲ್ ಪಡೆಯುತ್ರಾ ಪೊಡಿಯ ಪ್ರಶ್ನಿಸಿದ.
'ಇವತ್ತು ರಾತ್ರಿ ಒಂದು ಕೆಲಸ ಉಂಟು. ನಾಳೆ ಮಧ್ಯಾಹ್ನ ಸುರತ್ಕಲ್ ನಲ್ಲಿ ಬಸ್ಸು, ಬಿಡುದಕ್ಕೆ ಪದ್ದು ಬರ್ತೇನೆ ಅಂತ ಹೇಳಿದ್ದಾನೆ' ಅಂದ ಪ್ರಕಾಶ.
‘ಮಾಲ್ ಒಳ್ಳೆಯದೆ. ಇದೆಲ್ಲಾ ತೊಟ್ಟೆಯಷ್ಟು ಚುಟಿ ಇಲ್ಲ’ ಎನ್ನುತ್ತಾ ಪೊಡಿಯ ಬಾಟಲ್ ಕ್ಯಾಪ್ ತಿರುಗಿಸಿದ.
‘ಈಗೆಲ್ಲಾ ಊರು ಊರಿಗೆ ಬಾರ್ ನುಗ್ಗಿದೆ. ಇದನ್ನೂ ಒಂದು ಬಾರ್ ಮಾಡುವ. ಬೇರ ಮಸ್ತ್ ಆಗುತ್ತದೆ. ಅಂದ ಹಾಗೆ ಈ ಗಂಡಂಗಿಗೆ ಎಷ್ಟು ವರ್ಷ ಆಯ್ತು’ ಪ್ರಕಾಶ ಮಾತು ಬೆಳೆಸಿದ.
‘ವರ್ಷ ಸುಮಾರಾಯಿತು. ನಾನು ಇಲ್ಲಿಯವ ಅಲ್ಲ ಕೇರಳ ಗಡಿ ಮಂಜೇಶ್ವರದಲ್ಲಿ ಇದ್ದೆ. ದೊಡ್ಡ ಕುಟುಂಬ ಆಸ್ತಿ ಎಲ್ಲ ಇತ್ತು. ನನ್ನ ಲೆಕ್ಕಕ್ಕೆ ಒಂದು ಒಂದೆರಡು ಕಳಸೆ ಗದ್ದೆ. ನೀರು, ಗೊಬ್ಬರ, ಹುಲ್ಲು, ತರಗೆಲೆ, ಸೊಪ್ಪು ಅದು, ಇದು ಅಂತ ದಿನಾ ಗಲಾಟೆ, ಪೆಟ್ಟು. ರೋಸಿ ಹೋಗಿತ್ತು. ನನ್ನನ್ನು ಊರಿಂದ ಓಡಿಸಬೇಕು ಅಂತ ಅವರೆಲ್ಲಾ ಪಣ ತೊಟ್ಟಿದ್ರು.
ಸಾಲದ್ದಕ್ಕೆ ನನ್ನದು ಗಂಗಸರ ಬೇಯಿಸುವ ಕೆಲಸ. ದಿನ ಹೋಗ್ಬೇಕಲ್ಲಾ? ಗುಡ್ಡೆಯಲ್ಲಿ ಗಂಗಸರ ಬೇಯಿಸುವುದು. ತೋಟದ ಕೆದುವಿನಲ್ಲಿ ಮಣ್ಣಿನ ಗುಡಾಣ ಇಟ್ಟು ಹುಳಿ ಬರಿಸುವುದು... ಬೈಹುಲ್ಲ ಮೂಟೆ, ಗೊಬ್ಬರ ಮೂಟೆ ಅಂತ ಅದರ ಒಳಗೆಲ್ಲಾ ಗಂಗಸರ ಬಚ್ಚಿಡುವುದು.
ಆಗಾಗ ಅಬಕಾರಿ ರೈಡ್. ನಾನು ಗುಡ್ಡೆ, ಕಾಡಲ್ಲಿ ಅಡಗುವುದು. ಅವರು ದೊಡ್ಡ ಸಬಳ ಹಿಡಿದುಕೊಂಡು ಬಂದು ಎಲ್ಲಾ ಮೂಟೆಯ ಒಳಗೆ ತೂರಿಸಿ ಗುಡಾಣ ಒಡೆಯುವುದು.
ಹೀಗೆ ಒಂದ್ಸಾರಿ ರೈಡ್ ಆದಾಗ ಪೊಲೀಸ್ ಒಬ್ಬನೆ ನನ್ನ ಕೈಗೆ ಸಿಕ್ಕಿ ಬಿಟ್ಟ. ಕೈಯಲ್ಲಿದ್ದ ಬೈತಡ್ ಹಿಡಿದು ಸಮಾ ಹೊಡೆದು ಬಿಟ್ಟೆ. ಪಾಪ ಅವನ ಪ್ರಾಣ ಹೋಗುವುದೊಂದೇ ಬಾಕಿ. ಕೇಸ್ ಆಯ್ತು. ಕುಂಞಂಬು ನಾಯರ್ ಅಗ ಮಿನಿಸ್ಟರ್, ಅವರ ಕೈಕಾಲು ಹಿಡಿದಾಗ ಕೇಸ್ ದೊಡ್ಡದು. ಬೇಕಾದ್ರೆ ನರನಾಡಿ ಕಟ್ ಮಾಡಿ ವೀಕ್ ಮಾಡಿಸುವ. ಅವ ಮತ್ತೆ ಪೊಲೀಸರ ಕಣ್ಣಿಗೆ ಬೀಳಬಾರದು. ಬೊಂಬಾಯಲ್ಲಿ ಸಂಬಂಧಿಕರು ಇದ್ದರೆ ಕಳಿಸಿ ಅಂದರು.
ಇನ್ನು ನೀನು ಇಲ್ಲಿ ಇರುವುದು ಬೇಡ ಅಂತ ಮನೆಯವರು ಅಂದ್ರು. ಅವರಿಗೂ ಅದೇ ಬೇಕಿತ್ತು... ನಾನು ಬೊಂಬಾಯಿ ಅಂತ ಟಿಕೆಟ್ ಮಾಡಿ ಕುಡ್ಲಕ್ಕೆ ಬಂದೆ. ಅಲ್ಲಿ ಯಾರಿಗೂ ಗೊತ್ತಿರಲಿಲ್ಲ.
ಸ್ವಲ್ಪ ಸಮಯ ಹೊಟೇಲ್, ಬಾರಲ್ಲಿ ಕೆಲಸ ಮಾಡ್ತಾ ಇದ್ದೆ. ಕೋರ‍್ದಟ್ಟದ ಹುಚ್ಚು ಇತ್ತು. ಹಾಗೆ ದೋಗಣ್ಣ ಕೋರ‍್ದಟ್ಟದಲ್ಲಿ ಪರಿಚಯ. ಜಾತಿಯವ ಅಲ್ಲವಾ ಸಾಗುವಳಿ ಕೆಲಸ ಮಾಡುತ್ತಿಯಾದರೆ ಮನೆಗೆ ಬಾ ಅಂದ್ರು. ಬಂದು ಬಿಟ್ಟೆ.
ದೋಗಣ್ಣ ಅವರ ಮನೆಯವರು ಬಂಗಾರ್ ನರಮಾನಿ. ಇಲ್ಲೂ ಸ್ವಲ್ಪ ಕಂಟ್ರಿ ವೈವಾಟು ಸುರು ಮಾಡಿದೆ. ಖರ್ಚಿಗೆ ದುಡ್ಡು ಬೇಕಲ್ಲಾ? ದೋಗಣ್ಣ ಬೆನ್ನಿಗೆ ನಿಂತ್ರು. ಆದ್ರೆ ಈ ಅಬಕಾರಿಯವ್ರು ಬಿಡಬೇಕಲ್ವಾ...’
ಪೊಡಿಯ ಬಾಯಗಲಿಸಿ ‘ನನ್ನ ಬಾಯಿ ನೋಡು’ ಅಂದ.
ಪ್ರಕಾಶ ಪೊಡಿಯನ ಬೊಚ್ಚು ಬಾಯಿಗೆ ಇಣುಕಿದ.
'ನೋಡು ಪ್ರಕಾಶ ನನ್ನ ಬಾಯಲ್ಲಿ ಒಂದು ಹಲ್ಲೂ ಇಲ್ಲ. ಅದೆಲ್ಲಾ ತೆಗೆದದ್ದು ಮಂಜೇಶ್ವರ ಮತ್ತು ಸುರತ್ಕಲ್ ಅಬಕಾರಿಯವರು ಮತ್ತು ಅವರ ಏಜಂಟರು.
ಜತೆಗೆ ಫಿಟ್ಸ್ ರೋಗ ಅಂಟಿಕೊಂಡಿತು. ಒಂದು ಬಾರಿ ಪೊಲೀಸ್ ಠಾಣೆಯಲ್ಲೇ ಫಿಟ್ಸ್ ಬಂದು ಬಿದ್ದು ಬಿಟ್ಟೆ. ಇವನನ್ನು ಬಿಟ್ಟು ಬಿಡಿ ಇಲ್ಲಾದ್ರೆ ಲಾಕಪ್ ಡೆತ್ ಅಂತ ಕೇಸ್ ಆಗ್ತದೆ ಅಂತ ಇನ್ಸ್‌ಪೆಕ್ಟ್ರು ಅಂದರು. ಬಿಟ್ಟರು. ಆಮೇಲೆ ಕೂಡಾ ಗಂಗಸರ ಬೇಯಿಸುವುದು ನಿಲ್ಲಿಸಲಿಲ್ಲ. ಪೊಲೀಸರು ಬರುವುದು ಜೋರು ಮಾಡುವುದು. ಹೋಗುವುದು ಅಷ್ಟೆ...
ಗಂಗಸರ ಬೇಯಿಸಿ ಗುತ್ತಿಗೆ ಲಾಸ್ ಮಾಡುವ ಈ ಪೊಡಿಯನನ್ನು ಏನು ಮಾಡುವುದು ಅಂತ ಅಬಕಾರಿ ಪೊಲೀಸರಿಗೆ, ಕಂಟ್ರಾಕ್ಟರ್‌ಗೆ ಪೀಕಲಾಟ ಆಯ್ತು. ಕಂಟ್ರಾಕ್ಟರ್ ದೋಗಣ್ಣನ ದೂರದ ಸಂಬಂಧ ಅಂತೆ. ದೋಗಣ್ಣನ ಹತ್ರ ಮಾತಾಡಿದರು. ಪೊಡಿಯನಿಗೆ ಪದವಿನಲ್ಲಿ ಗಡಂಗ್ ಮಾಡಿಸಿ ಕೊಡ್ತೇನೆ. ಶನಿವಾರ, ಆದಿತ್ಯವಾರ ಕೋಳಿಕಟ್ಟ ಮಾಡಿಸಲಿ. ವ್ಯಾಪಾರ ಆಗ್ತದೆ. ಗಂಗಸರ ಬೇಯಿಸುವುದು ಒಮ್ಮೆ ನಿಲ್ಲಿಸಲಿ ಅಂತ ಹೇಳಿದರು.
ಈ ಗಡಂಗ್ ಉಂಟಲ್ಲ ಖಾಲಿ ಭೂತ ಬಂಗ್ಲೆ ಆಗಿತ್ತು. ದೋಗಣ್ಣ ಇದನ್ನು ರಿಪೇರಿ ಮಾಡಿಸಿ ಎದುರಲ್ಲಿ ಗಡಂಗ್ ಮಾಡಿ ಹಿಂದಿನ ನಡುಮನೆ, ಕೋಣೆ, ಅಡುಗೆ ಮನೆಯಲ್ಲಿ ಇರು ಅಂತ ಅಂದ್ರು. ಸುಮ್ಮನೆ ಅಲ್ಲ.. ಕಂಟ್ರಾಕ್ಟರ್ ಹತ್ರ ದುಡ್ಡು ಪೀಕಿಸಿದ್ದಾರೆ. ನನಗೆ ಲಾಭವೇ ಆಯ್ತು.'
‘ಮತ್ತೆ ಸುಜ್ಜಾ... ನಿಮ್ಮ ಹೆಂಡತಿ...’ ಪ್ರಕಾಶ ಮುಖ್ಯ ವಿಷಯಕ್ಕೆ ಬಂದ.
‘ಅದಾ... ಮಂಜೇಶ್ವರದಲ್ಲಿ ಇರುವಾಗಲೇ ಮದುವೆ ಆಗಿತ್ತು. ಹೆಂಡತಿ ಬದಿಯಡ್ಕದವಳು. ನನ್ನ ಮನೆಯ ಪಿರಿಪಿರಿ ಅವಳಿಗೆ ಸರಿ ಹೋಗಲಿಲ್ಲ. ತವರು ಮನೆಯಲ್ಲೇ ಇದ್ದಳು. ಸುಜ್ಜಾ ಹುಟ್ಟಿದ್ದು ಅಲ್ಲೇ...
ಮತ್ತೆ ಇಲ್ಲಿ ಗಡಂಗ್, ಇರುದಕ್ಕೆ ಮನೆ ಅಂತ ಒಂದು ಗತಿ ಆಯ್ತಲ್ಲಾ. ಹೆಂಡತಿ, ಸುಜ್ಜಾಳನ್ನು ಕರೆಸಿಕೊಂಡೆ. ಗಿರಾಕಿಗಳಿಗೆ ಚಾಕಣ, ಪುಂಡಿ, ಕೋರಿ ಅಂತ ಮಾಡಲು ಜನ ಬೇಕಲ್ಲಾ... ಹಗಲಲ್ಲಿ ದೋಗಣ್ಣನ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಳು. ದೋಗಣ್ಣನ ಹೆಂಡತಿ, ಮಕ್ಕಳಿಗೆ ಅವಳೆಂದ್ರ ಇಷ್ಟ.
ಅವಳು ಒಳ್ಳೆಯವಳು. ಚೆನ್ನಾಗಿ ದುಡಿದಳು. ಅವಳನ್ನ ನಾನು ಸುಖವಾಗಿ ಇಡಲಿಲ್ಲ. ಅಮಲು ತಲೆಗೇರಿ ಹೊಡೆದೆ. ಈ ನರಕ ಬೇಡ ಅಂತ ದೇವರು ಬೇಗ ಕರೆಸಿಕೊಂಡ. ಸಾಯುವ ಮೊದಲು ದೋಗಣ್ಣ ಮತ್ತು ಅವರ ಹೆಂಡತಿ ಮತ್ತು ದೇವಕಿಯಕ್ಕನನ್ನು ಕರೆಸಿ ಸುಜ್ಜಾಳ ಕೈಯನ್ನು ಅವರ ಕೈಗೆ ಕೊಟ್ಟು ಇನ್ನು ಇವಳು ನಿಮ್ಮ ಕೊನೆಯ ಮಗಳು ದೋಗಣ್ಣಾ ಅಂತ ಪ್ರಾಣ ಬಿಟ್ಟಳು. ಅವಳ ಮದುವೆ ಒಂದು ಆದ್ರೆ.. ಮತ್ತೆ ನಾನು ನೆಮ್ಮದಿಯಿಂದ ಕಣ್ಣು ಮುಚ್ಚುತ್ತೇನೆ' ಪೊಡಿಯ ಕಣ್ಣೀರು ಇಳಿಸಿದ.
ಮಾತು ಮುಖ್ಯ ವಿಷಯದ ಕಡೆ ಹೊರಳಿದ್ದು ಪ್ರಕಾಶನಿಗೂ ಇಷ್ಟ ಆಯ್ತು...
‘ಪೊಡಿಯಾಮಾ... ನಿಮಗೆ, ಸುಜಾಳಿಗೆ ಯಾರೂ ಇಲ್ಲ ನೋಡಿ... ನೀವು ತಪ್ಪು ತಿಳಿದುಕೊಳ್ಳದೇ ಇದ್ರೆ ನಾನು ಸುಜ್ಜಾಳನ್ನು ಮದುವೆ ಆಗ್ತೇನೆ..’
ಪೊಡಿಯ ಕಣ್ಣರಳಿಸಿ ಪ್ರಕಾಶನ ಮುಖ ದಿಟ್ಟಿಸಿದ...
‘ಯಾರೂ ಇಲ್ಲ ಅಂತ ಏನೂ ಇಲ್ಲ. ದೋಗಣ್ಣ ಅವರ ಮಕ್ಕಳು ಎಲ್ಲಾ ಇದ್ದಾರೆ. ಅವರ ಮೇಲೆ ನಂಬಿಕೆ ಇದೆ. ಅವರು ಬಿಟ್ಟು ಹಾಕುದಿಲ್ಲ. ಆದ್ರೂ ಮಗಳ ಮದುವೆ ಏರ್ಪಾಡು ನಾನೇ ಮಾಡ್ಬೇಕಲ್ಲಾ? ಹುಡುಗ ನೋಡಿ ಹೇಳಿದ್ರೆ ಖಂಡಿತಾ ಸಹಾಯ ಮಾಡ್ತಾರೆ..’ ಪೊಡಿಯ ಅಮಲು ತಲೆಗೇರಿ ತೊದಲುತ್ತಾ ನುಡಿದ.
‘ಅದೇ.. ಅದೇ... ದೇವಸ್ಥಾನದಲ್ಲಿ ಸರಳವಾಗಿ ಮದುವೆ ಮಾಡಿ ಕೊಡಿ ಪೊಡಿಯಾಮ... ನನಗೆ ಏನೂ ಬೇಡ...’ ಎಂದ ಪ್ರಕಾಶ...
‘ನೀನು ಮುಂಬಾಯಲ್ಲಿ ಏನು ಮಾಡ್ತಾ ಇದ್ದಿ...?’ ಪೊಡಿಯ ಪ್ರಶ್ನಿಸಿದ.
ಪ್ರಕಾಶ ಪೊಡಿಯನ ಮುಂದೆ ಆಕಾಶವನ್ನೇ ಭೂಮಿಗೆ ಇಳಿಸಿದ. ದೊಡ್ಡ ಪ್ಲಾಟ್, ಮೂರು ಹೊಟೇಲು, ಎರಡು ಡ್ಯಾನ್ಸ್ ಬಾರ್ ಪಾಟ್ನರ್ ಅಂತ ಬುರುಡೆ ಬಿಟ್ಟ. ಈ ಗಡಂಗನ್ನೂ ಬಾರ್ ಮಾಡ್ತೇನೆ, ಈ ಜಾಗ ಖರೀದಿ ಮಾಡಿ ಸುಜ್ಜಳ ಹೆಸರಿಗೆ ಬರೆದು ಹೊಸ ಕಟ್ಟಡ ಮಾಡುತ್ತೇನೆ ಎಂದ.
ಅವನ ಕಾರುಬಾರು ಕೇಳಿ ದಂಗಾದ ಪೊಡಿಯ 'ಇವ ಇಷ್ಟು ದೊಡ್ಡ ಜನ ಗಡಂಗಿನವನ ಮಗಳನ್ನು ಮದುವೆ ಆಗುವುದಾ?' ಎಂದು ಅರ್ಥವಾಗದೆ ವಿಸ್ಕಿ ಬಾಟಲು ಖಾಲಿ ಮಾಡತೊಡಗಿದ. ಪ್ರಕಾಶನ ಮುಂದೆಯೂ ಗ್ಲಾಸ್, ಚಾಕಣ ತಂದಿರಿಸಿದ. ಪ್ರಕಾಶನಿಗೂ ಅಮಲು ತಲೆಗೇರತೊಡಗಿತು.
ಹನ್ನೊಂದು ಗಂಟೆ ಅಗುತ್ತಲೇ ‘ಸುಜ್ಜಾಳನ್ನೂ ನಿನಗೇ ಕೊಡುತ್ತೇನೆ ಪ್ರಕಾಶ’ ಎಂದು ತೊದಲುತ್ತಾ ಪೊಡಿಯ ಎದುರಿದ್ದ ಬೆಂಚಿನ ಮೇಲೆ ಅಮಲಿನಿಂದ ಕುಸಿದ.
ಇದಕ್ಕಾಗೇ ಕಾಯುತ್ತಿದ್ದ ಪ್ರಕಾಶ ತೂರಾಡುತ್ತಲೇ ಎದ್ದ.
ಮನೆಯ ಹಿಂಬಾಗಿಲಿಗೆ ಬಂದು ಬಲಗಾಲಿನಿಂದ ದೂಡಿದ... ಚಿಲಕ ಹಾಕದ ಬಾಗಿಲು ತೆರೆದುಕೊಂಡಿತು.
ಮನೆಯ ಒಳಗೆ ಮಂದ ಬೆಳಕಿನಲ್ಲಿ ಸುಜ್ಜಾ ಮಲಗಿದ್ದು ಕಂಡಿತು. ತಲೆಗೂದಲನ್ನು ಮೇಲಕ್ಕೆ ನೀಟಾಗಿ ಹರಡಿಕೊಂಡು ಮುಖದ ಮೇಲೆ ಬಲಕೈ ಇಟ್ಟು ಸುಜ್ಜಾ ಗಾಢ ನಿದ್ರೆಯಲ್ಲಿದ್ದಳು. ರಾತ್ರಿ ಹನ್ನಂದು ಗಂಟೆ ಕಳೆಯುತ್ತಿದ್ದಂತೆ ಪೊಡಿಯ ಒಳಗೆ ಬಂದು ಮಲಗುವುದರಿಂದ ಬಾಗಿಲ ಚಿಲಕವನ್ನು ಅವಳು ಹಾಕಿರಲಿಲ್ಲ.
ತೂರಾಡುತ್ತಾ ಹೆಜ್ಜೆ ಇಟ್ಟ ಪ್ರಕಾಶ ಅವಳ ಬಳಿ ಬಂದು ಕುಳಿತ. ತಲೆಗೂದಲನ್ನು ಬಲಗೈಯಲ್ಲಿ ಸುತ್ತಿ ಹಾಕಿ ಹಿಡಿದು ಎಳೆದ.
ಸುಜ್ಜಾ ಗಡಬಡಿಸಿ ಎದ್ದಳು. ‘ಪೊಪ್ಪಾ... ಪೊಪ್ಪಾ’ ಕೂಗಿಕೊಂಡಳು.
‘ನಿನ್ನ ಪೊಪ್ಪ ಬೆಪ್ಪ... ಅಲ್ಲಿ ಬೆಂಚು ಅಪ್ಪಿ ಹಿಡಿದಿದ್ದಾನೆ... ಬೋ.... ನಿನಗೆ ತುರಿಕೆ ಪೌಡರ್ ಕೊಟ್ಟ ಆ ನಿನ್ನ... ಮಿಂ.... ಯಾರೇ ಹೇಳು’ ಎಂದು ಹಿಡಿತ ಬಿಗಿಗೊಳಿಸಿ ರಪ್ಪನೆ ಮುಖಕ್ಕೆ ಬಾರಿಸಿದ.
ನೋವಿನಿಂದ ಚೀರಿದ ಸುಜ್ಜಾ ಎದ್ದು ನಿಂತಳು.
‘ಊರಿಡಿ ನನ್ನನ್ನು ಅಡ್ಡ ಹೆಸರು ಹಿಡಿದು ಕರೆಯುವಂತೆ ಮಾಡಿದೆಯಲ್ಲಾ... ಅವರೆಲ್ಲಾ ಈಗ ಯಾರು ಬರ‍್ತಾರೆ ನೋಡುವ. ನೀನು ನಾಳೆಯಿಂದ ಊರಲ್ಲಿ ಮರ್ಯಾದೆಯಿಂದ ತಲೆ ಎತ್ತದ ಹಾಗೆ ಮಾಡ್ತೇನೆ...’ ಎನ್ನುತ್ತಾ ಆಕೆಯ ಬಟ್ಟೆಗೆ ಕೈ ಹಾಕಿದ.
ಆ ಕಠಿಣ ಸಂದರ್ಭದಲ್ಲಿಯೂ ಸುಜ್ಜಾ ಸಾವರಿಸಿಕೊಂಡಳು.
ಪ್ರಕಾಶನ ಬಾಯಿಯಿಂದ ಹೊರಡುವ ಕಮಟು ವಾಸನೆ, ಆತನ ಅಮಲಿನ ತೂರಾಟವನ್ನು ಗಮನಿಸಿ ತಪ್ಪಿಸಿಕೊಳ್ಳುವ ಬಗೆಯನ್ನು ಕ್ಷಣಾರ್ಧದಲ್ಲಿ ಯೋಚಿಸಿದಳು.
ಮಿಂಚಿನಂತೆ ಹಿಂತಿರುಗಿ ಮೊಣಕಾಲಿನಿಂದ ಆತನ ಹೊಟ್ಟೆಗೆ ಬಲವಾಗಿ ಢಿಕ್ಕಿ ಕೊಟ್ಟಳು...
‘ಅಯ್ಯ.... ಮ್ಮಾ...’ ಎಂದ ಪ್ರಕಾಶ ಹಿಡಿತ ಸಡಿಲಗೊಡಿಸಿ ಎರಡೂ ಕೈಯಿಂದ ಹೊಟ್ಟೆ ಹಿಡಿದ. ತಟ್ಟನೆ ಚಿಗರೆಯಂತೆ ಬಾಗಿಲ ಕಡೆ ಜಿಗಿದ ಸುಜ್ಜಾ ಬಾಗಿಲು ತೆಗೆದು ಹೊರ ಬಂದು ಹೊರಗಿನಿಂದ ಚಿಲಕ ಹಾಕಿದಳು.
ಪ್ರಕಾಶ ಬಾಗಿಲಿಗೆ ಒದೆ ನೀಡತೊಡಗಿದ.
ಸುಜ್ಜಾ ಮನೆಯ ಹಿತ್ತಲ ಕತ್ತಲಲ್ಲಿ ಕರಗಿ ಹೋದಳು.
ಮುಂದಿನ ಭಾಗ : ಬೋಂಟೆ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ