ಕಾಡಿನಲ್ಲಿ ನಾ ಕಳೆದ ದಿನಗಳು (1/7)

ProfileImg
03 Sep '24
2 ನಿಮಿಷದ ಓದು


image

ಕಾಡಿನಲ್ಲಿ ನಾ ಕಳೆದ ದಿನಗಳು (1/7)
(ವೈಯಕ್ತಿಕ ಅನುಭವ)
ಸಂಚಿಕೆ 1/6 ರ ಮುಂದುವರಿದ ಭಾಗ....

ಬಹಳ ದಿನಗಳ ನಂತರ ನನಗೆ ಇಲಾಖಾ ವಾಹನದಲ್ಲಿ ಸಫಾರಿ ಮಾಡುವ ಅವಕಾಶ ಸಿಕ್ಕಿತ್ತು. ಅಂದು ನನ್ನೊಂದಿಗೆ ಇದ್ದವರು ಟೂರಿಸಂ ವಿಭಾಗದ ಸಿಂಹ ಧ್ವನಿಯ  ಶ್ರೀನಿವಾಸ DyRfo ಮತ್ತು  ಶಾಂತ ಸ್ವಭಾವದ ಫಾರೆಸ್ಟ ಗಾರ್ಡ್ ಶಿವಕುಮಾರ.

ಮೊದಲ ದಿನ ನಾನು ನಾಗರಹೊಳೆಯ ಗಂಗೋತ್ರಿ ಅರಣ್ಯ ವಸತಿ ಗೃಹದಲ್ಲಿ ಉಳಿದಾಗ ಟೂರಿಸಂ ವಿಭಾಗದ  ಶ್ರೀನಿವಾಸ DyRfo ಮತ್ತು ಫಾರೆಸ್ಟ ಗಾರ್ಡ್ ಶಿವಕುಮಾರ ರವರು ನನಗೆ ಪರಿಚಯ ಆದವರು . ಅವರ ಬಗ್ಗೆ ಸಣ್ಣ ಕಿರುಪರಿಚಯ ಮಾಡುವೆ. ಶ್ರೀನಿವಾಸ DyRfo ರವರದು ನೇರ ನುಡಿ ವ್ಯಕ್ತಿತ್ವ.ಇಲಾಖೆಯ ಒಳಹೊರಗು ಅರಿತ, ಅರಣ್ಯ ವೀಕ್ಷಕರ ಮತ್ತು ಅರಣ್ಯ ರಕ್ಷಕರ ಪರವಾಗಿ ಕೆಲಸ ಮಾಡಿದ ವ್ಯಕ್ತಿ. ಸಾಕಷ್ಟು ತಿಳುವಳಿಕೆಯುಳ್ಳ,  ಅಷ್ಟೇ ಮುಂಗೋಪಿ ಸ್ವಭಾವದವ. ಇವರಲ್ಲಿ ನನ್ನನ್ನು ಹೆಚ್ಚು ಸೆಳೆದಿದ್ದು ಇವರು ವಾಕಿಟಾಕಿಯಲ್ಲಿ (ಅರಣ್ಯದಲ್ಲಿ ಸಂವಹನ ಮಾಡಲು ಬಳಸುವ ಉಪಕರಣ ) ಮಾತನಾಡುವ ಗತ್ತು. ಕೇಳಿದವರಿಗೆ ಮಾತ್ರವೇ ಗೊತ್ತು ಇದು ಸಿಂಹಧ್ವನಿ ಎಂದು.
ಫಾರೆಸ್ಟ್ ಗಾರ್ಡ್ ಶಿವಕುಮಾರ್ ಈ ಹಿಂದೆ ಹುಲಿಕಲ್ ಗಸ್ತಿನಲ್ಲಿ ಕಳ್ಳಭೇಟೆ ತಡೆ ಶಿಬಿರ ದಲ್ಲಿ ಕೆಲಸ ಮಾಡಿದ್ದು ಇತ್ತೀಚಿಗೆ ಪ್ರವಾಸೋದ್ಯಮ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ನಾಗರಹೊಳೆ ಯಲ್ಲಿ ಉತ್ತಮ ಕೆಲಸಗಾರ ಎಂದು ಹೆಸರು ಸಹ ಮಾಡಿದ್ದರು. ಶಾಂತ ಸ್ವಭಾವದ ಸಂಭಾವಿತ ವ್ಯಕ್ತಿ.

ಅಂದು ನಾಣ್ಣಚ್ಚಿ ಸಫಾರಿ ಗೇಟ್ ನಲ್ಲಿ ಸಫಾರಿಗೆ ಇಲಾಖೆ ವಾಹನದಲ್ಲಿ ಹೊರಟ ನಾವು ಸಿದ್ದಾಪುರ ಹಡ್ಲು - ನಾಗರಹೊಳೆ  -  ನಾಗಸರಕೆರೆ-  ಕಾಯಿತೋಳೆಕೆರೆ - ಕುಂತುರು ಕೆರೆ-  ನಾಗರಾಜಚೈನ್ ಗೇಟ್ ಮುಖೇನ ನಾಗರಹೊಳೆ ಶಾಖೆಯ ಬೈಸನ್ ರೋಡ್ -ಪಿಕಾಕ್ ಕೆರೆ - ದೊಡ್ಡ ಹಳ್ಳ ಭಾಗಗಳಲ್ಲಿ  ಸುಮಾರು ಒಂದೂವರೆ ತಾಸು ಸುತ್ತಾಡಿದೆವು. ಮಳೆಯ ಸಿಂಚನ ಸಹ ನಮಗಾಗಿತ್ತು. ಸಾಕಷ್ಟು ಮರ ಗಿಡ ಪ್ರಾಣಿ ಪಕ್ಷಿ ಜಂತು ಗಳನ್ನು ಅವುಗಳು ಇರುವ ಸ್ಥಳದಲ್ಲೇ ನೋಡಿ ಖುಷಿ ಪಟ್ಟೆವು .

ಅಂದಿನ ಪ್ರಕೃತಿ ನನಗೆ ಗೋಚರಿಸಿದಂತೆ ಮತ್ತು ನನ್ನಲ್ಲಿ ದರ್ಶನವಾದಂತೆ.... ಕಾವ್ಯದ ಪರಿಭಾಷೆ ಯಲ್ಲಿ.....

ಕಾಡು ಚೆಂದ ನಾಡು ಚೆಂದ
ಕಾಡಿದ್ದರೆ ನಾಡು ಇನ್ನು ಚೆಂದ 
ನಾವಿಲ್ಲದಿದ್ದರೆ ಕಾಡು ಇನ್ನೂ 
ಚೆಂದವೋ ಚೆಂದ ಚೆಂದ

ಹೂವು ಚೆಂದ ಹಣ್ಣು ಚೆಂದ 
ಮರ ಗಿಡ ಬಳ್ಳಿ ಇನ್ನೂ ಚೆಂದ 
ಪ್ರಾಣಿ - ಪಕ್ಷಿ, ಕ್ರಿಮಿ -ಕೀಟಗಳಿದ್ದರೆ 
ಇನ್ನೂ ಚೆಂದವೋ ಚೆಂದ ಚೆಂದ

ರವಿಯು ಚೆಂದ ಚಂದಿರನು ಚೆಂದ
ನಕ್ಷತ್ರಗಳು ಇನ್ನೂ ಚೆಂದ 
ವಸುಂಧರೆಯ ಕಂದಮ್ಮಗಳು 
ಇನ್ನೂ ಚೆಂದವೋ ಚೆಂದ ಚೆಂದ

ಇರುವೆಯು ಬೇಕು ಆನೆಯು ಬೇಕು 
ನಾಯಿಯು ಬೇಕು ನರಿಯು ಬೇಕು 
ಚಿಗರೆಯು ಬೇಕು ಚಿರತೆಯು ಬೇಕು 
ಗುಬ್ಬಿಯು ಬೇಕು ಗಿಡುಗನು ಬೇಕು

ಕೊನೆಗೊಮ್ಮೆ 
ಗೆದ್ದಲು ಹುಳು ಸಹ ಬೇಕೇ ಬೇಕು 
ಸಾಮರಸ್ಯದ ಪಾಠವ ಜಗಕ್ಕೆ ಸಾರಲು 
ಮನುಷ್ಯನಿಗೆ ಬುದ್ದಿ ಹೇಳಲು

ಅಂದು ಸಫಾರಿ ಮುಗಿಸಿ ಲಘುಬಗೆಯಲ್ಲಿ ಕ್ವಾಟ್ರಸ್ ಗೆ ಬಂದೆನು. ಅವರೊಂದಿಗೆ ಕಳೆದ ಆ ಕ್ಷಣಗಳು ನನಗೆ ಮರೆಯಲಾಗದ್ದು. ಮುಂದೊಂದು ದಿನ ಈ ಇಬ್ಬರೂ ವರ್ಗಾವಣೆಗೊಂಡು ಬೇರೆಡೆ ಹೋದರು. ಆದರೆ ಸ್ವಲ್ಪ ದಿನಗಳ ನಂತರ ಶ್ರೀನಿವಾಸ  DyRfo ರವರು ಕಾಲನ ಕರೆಗೆ ಓಗೊಟ್ಟು ವಿಧಿವಶರಾದರು. ನಾನು ಈಗಲೂ ವಾಕಿಟಾಕಿಯಲ್ಲಿ ಆತನ ಗತ್ತಿನ ಸಂವಹನ ಶೈಲಿಯನ್ನು ನೆನೆಯುತ್ತಿರುತ್ತೀನಿ. ಆತ ತನಗೂ ತನ್ನ ಪ್ರೀತಿ ಪಾತ್ರದವರಿಗೂ ನೆನಪಿನ ಬುತ್ತಿ ಯನ್ನು ಕಟ್ಟಿಟ್ಟು ತಾನು ತಿನ್ನದೇ ಏಕಾಂಗಿಯಾಗಿ ತಿರುಗಿ ಬಾರದ ಊರಿಗೆ ಹೋಗಿಬಿಟ್ಟದ್ದೇ ವಿಪರ್ಯಾಸ.
                           ******

ಅದಾಗಲೇ ಮಳೆಗಾಲ ಮುಗಿದಿತ್ತು. ನನ್ನ ಗೋಣಿಗದ್ದೆ ಶಾಖೆ ಯಲ್ಲಿ 10 ಕಿ. ಮೀ. ಸಫಾರಿ ರೋಡ್ ಇದ್ದು ರಸ್ತೆಯ ಎರಡೂ ಬದಿ ಕಳೆ ತೆಗೆಯುವ ಕಾಮಗಾರಿ ಪ್ರಾರಂಭಗೊಂಡಿತ್ತು. ಇಲ್ಲಿ ಕೆಲಸ ಮಾಡುವವರು ಹಾಡಿ  ( ಅರಣ್ಯದೊಳಗಿನ ಬುಡಕಟ್ಟು ಜನರ ವಸತಿ ಪ್ರದೇಶ ) ಜನರಾಗಿದ್ದರು. ಇಲಾಖೆ ನಿರ್ದೇಶನದ ಮೇಲೆ ಅವರು ಕಳೆ ತೆಗೆಯುತ್ತಲಿದ್ದರು. ಅವರಲ್ಲಿ ಒಬ್ಬಾಕೆ ಅಗ್ನಿಶಿಕೆ ಹೂ ಅನ್ನು ಮುಡಿದಿದ್ದು ನನ್ನ ಗಮನ ಸೆಳೆದಿತ್ತು. ಅದು ನಾಡಿನ ಹೂ ಆಗದೆ ಕಾಡಿನ ಹೂ ಆಗಿತ್ತು. ನಾನು ಆ ಕೆಲಸದ ಮೇಲ್ವಿಚಾರಣೆ ಮಾಡುತಲಿದ್ದೆ. ಅವರ ಬಗ್ಗೆ    ಅರಿಯಲು ನನಗೆ ಒಂದು ಅವಕಾಶ ಒದಗಿ ಬಂದಿತ್ತು.

(....ಮುಂದುವರಿಯುವುದು)
              *** ವಿಧಿ ಗರ್ಭ ಸಂಜಾತ***

ಕೆಟೆಗರೀ / ವರ್ಗ:ವೈಯಕ್ತಿಕ ಅಭಿಪ್ರಾಯ



ProfileImg

ಇದರ ಲೇಖಕರು GURUMURTHY ವಿಧಿ ಗರ್ಭ ಸಂಜಾತ

ಲೇಖಕರು: ಗುರುಮೂರ್ತಿ ಬನ್ನೂರು ***ವಿಧಿ ಗರ್ಭ ಸಂಜಾತ***