ಕಾಡಿನಲ್ಲಿ ನಾ ಕಳೆದ ದಿನಗಳು (1/4)

ProfileImg
31 Aug '24
3 ನಿಮಿಷದ ಓದು


image

ಕಾಡಿನಲ್ಲಿ ನಾ ಕಳೆದ ದಿನಗಳು (1/4)
(ವೈಯಕ್ತಿಕ ಅನುಭವ)
ಸಂಚಿಕೆ 1/3 ರ ಮುಂದುವರಿದ ಭಾಗ....

ಅದೊಂದು ದಿನ ಮಧ್ಯಾಹ್ನ 3 ರ ಸಮಯ ಕಚೇರಿಯಿಂದ ನಮಗೆ ವಾಕಿಟಾಕಿಯಲ್ಲಿ ಕೋತೂರು ಭಾಗದಲ್ಲಿ ಹುಲಿಯೊಂದು ದನವನ್ನು ಕೊಂದಿದೆ ಎಂಬ ಸುದ್ದಿಯೊಂದಿಗೆ ಸ್ಥಳಕ್ಕೆ ಸಿಬ್ಬಂದಿರೊಂದಿಗೆ ತುರ್ತಾಗಿ ಹೋಗಲು  ಕರೆಬಂದಿತ್ತು.

ಕೋತೂರು ಎಂಬುದು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕಾನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಒಂದು ಸಣ್ಣ ಗ್ರಾಮ. ಹಾಗೂ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶದ ಗೋಣಿಗದ್ದೆ ಶಾಖೆಯ ಬೇರುಕೊಲ್ಲಿ ಗಸ್ತಿನ ಕಾಡಂಚಿನ ಒಂದು ಗ್ರಾಮ.ಇಲ್ಲಿಯ ದೇವಯ್ಯ ಎಂಬುವರ ದನ ಒಂದನ್ನು ಮಾರಿಗುಡಿ ದೇವಸ್ಥಾನದ ಸಮೀಪ ಕೆರೆಯ ಬಳಿ ನೀರು ಕುಡಿಯುವ ಸಂದರ್ಭದಲ್ಲಿ ಹುಲಿಯೊಂದು ಧಾಳಿ ಮಾಡಿ ಹತ್ಯೆ ಮಾಡಿರುತ್ತದೆ.

ಲಘುಬಗೆಯಲ್ಲಿ ನಾನು ,  ಬೇರುಕೊಲ್ಲಿ ಗಸ್ತಿನ ಅರಣ್ಯ ರಕ್ಷಕ ಕೃಷ್ಣಮೂರ್ತಿ  (ನಿವೃತ್ತ ಸೇನಾನಿ)  ಹಾಗೂ ಬೇರುಕೊಲ್ಲಿ ಗಸ್ತಿನ ಕಳ್ಳಬೇಟೆ ತಡೆಯ ಸಿಬ್ಬಂದಿಗಳು ಇಲಾಖಾ ವಾಹನದಲ್ಲಿ ಘಟನೆ ಆದ ಸ್ಥಳಕ್ಕೆ ಹೋದೆವು.ಅದಾಗಲೇ ಜನಸ್ತೋಮ ನೆರೆದಿತ್ತು. ಪರಿಸ್ಥಿತಿ ಬಿಗಡಾಯಿಸುವ ರೀತಿಯಲ್ಲಿತ್ತು. ಅಲ್ಲಿಗೆ ಮತ್ತೊಂದು ವಾಹನದಲ್ಲಿ ಬಂದ  RFO ಅರವಿಂದ ಸರ್ ರವರು ದನದ ಮಾಲೀಕ ಹಾಗೂ ನೆರೆದಿದ್ದ ಜನರೊಂದಿಗೆ ಬಹಳ ಸಂಯಮದಿಂದ ಮಾತಾಡಿ  ಸರಕಾರದ ವತಿಯಿಂದ ಪರಿಹಾರ ಧನ ಕೊಡಿಸುವ ಭರವಸೆ  ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆ ಮಾಡುತ್ತೇವೆಂದು  ಜನರಿಗೆ ಮನವರಿಕೆ ಮಾಡಿಕೊಟ್ಟ ಮೇಲೆಯೇ ನಾವು ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿದ್ದು.

ನಾನು ಈ ತರಹದ ಕೇಸ್ ಅನ್ನು ಜೀವನದಲ್ಲಿ ಮೊದಲ ಬಾರಿಗೆ ಎದುರುಗೊಂಡಿದ್ದೆ. ನಾನು ಮೂಕ ಪ್ರೇಕ್ಷಕನಾಗಿ ಪ್ರತಿಯೊಂದನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದೆ. ಕೃಷ್ಣಮೂರ್ತಿ ಅರಣ್ಯ ರಕ್ಷಕ (ನಿವೃತ್ತ ಸೇನಾನಿ) ರವರೇ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದರು.ನಮ್ಮ ಜೊತೆ ಪೊನ್ನಂಪೇಟೆ ಪ್ರಾದೇಶಿಕ ಅರಣ್ಯದ ಸಿಬ್ಬಂದಿಗಳು ಸಹ ಕೈಜೋಡಿಸಿದರು.

ಅಂದು ನಾವು ಕೈಗೊಂಡ ಕ್ರಮಗಳು
1) ಘಟನೆಯ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು
2) ಎಷ್ಟು ಸಾಧ್ಯವೋ ಅಷ್ಟೂ ಬೇಗನೆ ಘಟನೆ ಸ್ಥಳಕ್ಕೆ ಸಾಕಷ್ಟು ಸಿಬ್ಬಂದಿಗಳೊಂದಿಗೆ ಹೋಗಿದ್ದು
3)RFO ರವರು ಸಮಾಧಾನಚಿತ್ತದೊಂದಿಗೆ ಜನರಿಗೆ ಪರಿಹಾರ ಹಾಗೂ ಹುಲಿ ಹಿಡಿಯುವ ಕಾರ್ಯಾಚರಣೆ ಮಾಡಿಸುವ ಭರವಸೆ ನೀಡಿದ್ದು
4) ಪಶು ವೈದ್ಯಾಧಿಕಾರಿಗಳಿಂದ ಸತ್ತ ದನದ ಮರಣೋತ್ತರ ಪರೀಕ್ಷೆ ಮಾಡಿಸಿದ್ದು
5) ಸತ್ತ ದನದ ಕಳೆಬರದ ಜಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿದ್ದು
6) ಒಂದು ವಾರದ ಅವಧಿಯ ವರೆಗೂ ಹಗಲು ಮತ್ತು ರಾತ್ರಿ ಈ ಭಾಗದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು
7) ಘಟನಾ ನಡೆದ ಪ್ರದೇಶದ ಸುತ್ತ ಮುತ್ತ ಕೂಂಬಿಂಗ್ ಕಾರ್ಯಾಚರಣೆ ಮಾಡಿದ್ದು

ಆ ಘಟನೆಯ ನಂತರ ಹುಲಿಯು ಮತ್ತೆ ಆ ಜಾಗಕ್ಕೆ ಬರಲಿಲ್ಲ ಹಾಗೂ ಕ್ಯಾಮೆರಾದಲ್ಲೂ ದಾಖಲಾಗಲಿಲ್ಲ. ಆದ್ದರಿಂದ ಹುಲಿ ಹಿಡಿಯಲು ಬೋನ್ ಅಳವಡಿಕೆ ಅಲ್ಲಿ ಮಾಡಲಿಲ್ಲ. ಆದರೆ ನನ್ನಲ್ಲಿ ಹುಲಿ ಅಲ್ಲಿಗೆ ಹೇಗೆ ಬಂದಿತು? ಏಕೆ ಜಾನುವಾರು ಅನ್ನು ಕೊಂದಿತು? ಮತ್ತೆ ಏಕೆ ಅಲ್ಲಿಗೆ ಪುನಹಃ ಬರಲಿಲ್ಲ?... ಎಂಬಿತ್ಯಾದಿ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದು ಬಿಟ್ಟವು.

ಈ ಘಟನೆ ಮಾಸುವ ಮೊದಲೇ ಅಂದಿನ RFO ಅರವಿಂದ ಸರ್ ರವರು ಮತ್ತು ಕೃಷ್ಣಮೂರ್ತಿ ಅರಣ್ಯ ರಕ್ಷಕ (ನಿವೃತ್ತ ಸೇನಾನಿ) ರವರು   ವರ್ಗಾವಣೆಗೊಂಡಿದ್ದರು .ಮತ್ತು ನನಗೆ ಪ್ರಭಾರ ವಹಿಸಿಕೊಟ್ಟ ರಾಮ್ ಸಿಂಗ್ ರವರು ಸಹ ನಿವೃತ್ತರಾಗಿದ್ದರು.ರಾಮ್ ಸಿಂಗ್ ರವರು ಸುಧೀರ್ಘ 15 ವರ್ಷಕ್ಕಿಂತಲೂ ಮೇಲ್ಪಟ್ಟು ನಾಗರಹೊಳೆಯಲ್ಲಿ ಕೆಲಸ ನಿರ್ವಹಿಸಿದ್ದ ಅಪಾರ ಅನುಭವಿಗಳು. ನಾನೂ ಸಹ ನಾಗರಹೊಳೆಯಲ್ಲಿನ ಕ್ವಾಟ್ರಸ್ ಖಾಲಿ ಮಾಡಿ ಕೃಷ್ಣಮೂರ್ತಿ ಅರಣ್ಯ ರಕ್ಷಕ ರವರು ವಾಸಿಸುತ್ತಿದ್ದ ಲಕ್ಕುಂದದ ಅರಣ್ಯ ಇಲಾಖಾ ಕ್ವಾಟ್ರಸ್ ಗೆ ವಾಸ್ತವ್ಯ ಬದಲಾಯಿಸಿದ್ದೆ.ಇಲ್ಲಿ ನನ್ನ ಅಡುಗೆಯನ್ನು ನಾನೇ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಇತ್ತು.ಸುತ್ತ ಮುತ್ತ ಯಾವುದೇ ಹೋಟೆಲ್ ಸಹ ಇರಲಿಲ್ಲ.
                           *******
ಈ ಜಂಜಾಟ ಎಲ್ಲಾ ಮುಗಿಯುವುದರೊಳಗೆ ಸರಿಸುಮಾರು 1 ತಿಂಗಳು ಕಳೆದು ಹೋಗಿತ್ತು. ಮನೆಯವರೊಂದಿಗೆ ದಿನ ನಿತ್ಯ 2G ಕೀ ಪ್ಯಾಡ್ ನಲ್ಲೇ ಸಂವಹನ ನಡೆದಿತ್ತು.RFO ಅರವಿಂದ್ ಸರ್ ವರ್ಗಾವಣೆಯಾಗಿ ಹೋಗುವ ಮೊದಲು ನನಗೆ 4 ದಿನ ರಜೆಯನ್ನಿತ್ತರು. ಮೊದಲ ಬಾರಿಗೆ ಅಷ್ಟೊಂದು ದಿನಗಳನ್ನು ಮಡದಿ ಮಕ್ಕಳ ಮುಖನೋಡದೆ ಕಳೆದಿದ್ದೆ ನಾ ನನ್ನ ಜೀವಿತದಲ್ಲಿ. ಅವರನ್ನು ಕಾಣಲೇಬೇಕೆಂಬ ಉತ್ಕಟತೆ, ಮನದ ತುಡಿತ ಮೇರೆ ಮೀರಿತ್ತು ಅಂದು ನನಗೆ ...ನಾ ಹೊರಟಿದ್ದೆ ಊರಿಗೆ....!!!

(....ಮುಂದುವರಿಯುವುದು)
              *** ವಿಧಿ ಗರ್ಭ ಸಂಜಾತ***
 

ಕೆಟೆಗರೀ / ವರ್ಗ:ವೈಯಕ್ತಿಕ ಅಭಿಪ್ರಾಯ



ProfileImg

ಇದರ ಲೇಖಕರು GURUMURTHY ವಿಧಿ ಗರ್ಭ ಸಂಜಾತ

ಲೇಖಕರು: ಗುರುಮೂರ್ತಿ ಬನ್ನೂರು ***ವಿಧಿ ಗರ್ಭ ಸಂಜಾತ***