ಶೋಭಾ

ನೈಜ ಕಥೆಯಾಧಾರಿತ

ProfileImg
26 Nov '24
4 ನಿಮಿಷದ ಓದು


image

ಶೋಭಾ:

                       ಅದೊಂದು ಸಾಧಾರಣ ಕುಟುಂಬ. ಐವರು  ಮಕ್ಕಳನ್ನು ಹೊಂದಿದ್ದ ಆ ಸಂಸಾರದಲ್ಲಿ ಮಕ್ಕಳನ್ನು ಸಾಕಿ  ಬೆಳೆಸುವುದೇ ಒಂದು ಸವಾಲು .ಎಲ್ಲವೂ ಇತಿ ಮಿತಿಯಲ್ಲೇ ನಡೆಯಬೇಕಾಗಿದ್ದ ಸಂಸಾರ ನೌಕೆ ,ಹೊಯ್ದಾಟಗಳಿಗೆ ಸಿಕ್ಕಿದರೂ ಸಮಯೋಜಿತವಾಗಿ  ನಡೆದುಕೊಂಡು ಸಾಗುತ್ತಿತ್ತು …ಅವರ ಕೊನೆಯ ಮಗಳು ಶೋಭಾ  ಸದ್ಗುಣಗಳನ್ನು ಹೊಂದಿದ್ದಲ್ಲದೆ ಸಾದ್ವಿಯೂ  ಆಗಿದ್ದಳು.ಚಿಕ್ಕಂದಿನಿಂದಲೂ ಹೊಂದಾಣಿಕೆಯ ಪ್ರತಿರೂಪ. ತನ್ನ ಹಿರಿಯ ಐವರು ಸಹೋದರ ಸಹೋದರಿಯರ  ಇಚ್ಛೆಗಳನ್ನು ಪೂರೈಸಿ ಕೊನೆಗೆ ತನ್ನ  ಪಾಲಿಗೆ ಬರುವಾಗ ಬರಿಗೈ. ಆದರೂ ತನ್ನ ಆಸೆಗಳಿಗೆ  ಬೆಲೆ ಕೊಡದೆ ಇದ್ದುದರಲ್ಲಿಯೇ ತೃಪ್ತಿ ಕಾಣುವ ಮನಸ್ಸು ಆಕೆಯದು.ಕುಟುಂಬದ  ಏಳಿಗೆಯ ಬಗ್ಗೆ ಸದಾ ಕನಸು ಕಾಣುತ್ತಾ ತನ್ನವರ ಸಂತೋಷದಲ್ಲಿ ತನ್ನ ಸಂತೋಷ ಕಾಣುತ್ತಾ ಸಕಲಗುಣಾಸಂಪನ್ನಳಾಗಿ    ಜೀವನ ಸಾಗಿಸುತ್ತಿದ್ದಳು .ದಿನಾ ಕಳೆದಂತೆ ಬೆಳೆದು ವಿದ್ಯಾವಂತೆಯಾಗಿ ಉದ್ಯೋಗಿಯಾದಳು. ತನ್ನ ಅಕ್ಕಂದಿರ ಹಾಗೂ ಅಣ್ಣಂದಿರ ಜೀವನ ರೂಪಿಸುವುದರಲ್ಲಿ ತನ್ನ ಜೀವನವನ್ನು ಸವೆಸುತ್ತಾ ಅವರನ್ನು ದಡ ಸೇರಿಸುವುದೇ ಅವಳ ಚಿಂತೆಯಾಗಿತ್ತು.ಪ್ರತಿಯೊಬ್ಬರಿಗೂ ಮದುವೆ ಮಾಡಿಸುವ ಜವಾಬ್ಧಾರಿಯನ್ನು ತನ್ನ ಕರ್ತವ್ಯ ಎಂಬಂತೆ ಪಾಲಿಸಿದಳು.ಎಲ್ಲರ ಜೀವನವನ್ನು ರೂಪಿಸಿದ ಮೇಲೆ ಮತ್ತೆ ಅದೇ ದಾರಿ . ಅವರ ಮಕ್ಕಳ ಲಾಲನೆ ಪಾಲನೆಯ ಹೊಣೆಯೂ ಈಕೆಯ ಮೇಲೆಯೇ . ಅಲ್ಲದೆ ತನ್ನ ವಯಸ್ಸಾದ  ಅಪ್ಪ ಅಮ್ಮನ ಆರೈಕೆಯ ಕಾಳಜಿ ಒಂದೆಡೆ. ಹಾಗೋ  ಹೀಗೋ ಆಕೆಗೆ  ಲಗ್ನ ಭಾಗ್ಯ ಕೂಡಿ  ಬರಲು ತನ್ನ ತವರಲ್ಲಿ ಕಳೆದ  ಕಷ್ಟಗಳಿಗೆ ವಿರಾಮ ದೊರೆತು , ಮಧ್ಯಮ ವರ್ಗದ ವರನೊಂದಿಗೆ  ಹೊಸ ಸಂಸಾರಕ್ಕೆ ಅಡಿ ಇಟ್ಟಳು. ವಿವಾಹದ ನಂತರ ಹೊಸ ಬಾಳಿಗೆ  ಹೊಂದಿಕೊಳ್ಳಲು ಕಷ್ಟವಾಗಲಿಲ್ಲ. ಏಕೆಂದರೆ  ಹೆತ್ತವರು ಬೆಳೆಸಿದ ರೀತಿ, ನೀಡಿದ ಮಾರ್ಗದರ್ಶನ ಹಾಗೂ ಬೆಳೆದ ಪರಿಸರ ಆಕೆಗೆ ಸ್ಪೂರ್ತಿಯಾದವು. ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಂಡ ಪತಿಗೆ ಬೆನ್ನೆಲುಬಾಗಿ ನಿಂತು ಪ್ರತಿ ಹಂತದಲ್ಲಿಯೂ ನೆರವಾದಳು.ಮಾನಸಿಕ ಸ್ಥೈರ್ಯ ತುಂಬುತ್ತಾ ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ನಿಂತು ಆತನ ಬೇಕು ಬೇಡಗಳನ್ನು ಅರಿತು ಸಹಧರ್ಮಿಣಿಯಾದಳು. .

 

          “ಪ್ರತಿ ಪುರುಷನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ “ಎಂಬ ಮಾತಿಗೆ ಅನ್ವರ್ಥವಾಗಿ ಸಕಲ ವಿಧದಲ್ಲೂ ಪತಿಯ ಏಳಿಗೆಗೆ  ಕಾರಣಿಭೂತಳಾದಳು. ಅವಳ ಕಾಲ್ಗುಣದಿಂದ ಒಂದು ಸುಂದರವಾದ ಕುಟುಂಬ ಅರಳಿತ್ತು . ತಮ್ಮ ಪ್ರೀತಿಯ ಫಲವಾಗಿ ಒಂದು ಮುದ್ದಾದ  ಹೆಣ್ಣು ಮಗು  ಆಕೆಯ ಮಡಿಲಲ್ಲಿ ಆಡುತ್ತಾ ಬೆಳೆಯುತ್ತಿತ್ತು.

 

           'ಕಾರ್ಯೇಶು ದಾಸಿ, ಕರುಣೇಶು ಮಂತ್ರಿ, ರೂಪೇಶು ಲಕ್ಷ್ಮೀ, ಕ್ಷಮಯಾ ಧರಿತ್ರಿ..' ಎಂಬ ಸಂಸ್ಕೃತ ಉಕ್ತಿಯಂತೆ,ಪತ್ನಿಯಾದವಳು ಪತಿಯ ಅಗತ್ಯಕ್ಕೆ, ಸಮಯಕ್ಕೆ ತಕ್ಕಂತೆ ನಾನಾ ಸೇವೆಯ ಪಾತ್ರ ವಹಿಸಿಕೊಂಡು ಆದರ್ಶ ಮೆರೆದಳು. ಹೀಗೆ ಗಂಡನ ಅಚ್ಚುಮೆಚ್ಚಿನ ಮಡದಿಯಾಗಿ ಸಂಸಾರಕ್ಕೆ ಯಾವುದೇ ಕುಂದಿಲ್ಲದಂತೆ ಏಳಿಗೆಯನ್ನು ಸಾಧಿಸುತ್ತಿರುವಾಗ  ಮಗಳು ಬೆಳೆದು ವಿದ್ಯಾವಂತೆಯಾಗಿ ಉದ್ಯೋಗಿಯಾದಳು. ಇವಳ ಮುದ್ದಾದ ಸಂಸಾರಕ್ಕೆ ಯಾರ ದೃಷ್ಟಿ ತಾಕಿತೋ ತಿಳಿಯಲಿಲ್ಲ . ಊಹಿಸದ ರೀತಿಯಲ್ಲಿ ಅವಳ ಬದುಕಲ್ಲಿ ಬರಸಿಡಿಲು ಬಂದಾಗಿತ್ತು. ತನ್ನ ದೇಹದಲ್ಲಿ ಯಾವುದೋ ಬದಲಾವಣೆ ಕಾಣತೊಡಗಿತ್ತು. ಏನೋ ಸಂಕಟ ಹೆಚ್ಚುತ್ತಾ ದಿನ ಕಳೆದಂತೆ ಆರೋಗ್ಯದ ಸ್ಥಿತಿಯಲ್ಲಿ ಏರುಪೇರಾಗಿತ್ತು. ಒಮ್ಮೆ  ವೈದ್ಯರನ್ನು ಸಂಪರ್ಕಿಸಿದಾಗ ಮಾರಕ ಕ್ಯಾನ್ಸರ್ ಕಾಯಿಲೆಯು  ಅವಳನ್ನಾವರಿಸಿದ್ದು  ದೃಢಪಟ್ಟಿತ್ತು . ಆಕಾಶವೇ ತಲೆ ಕೆಳಗಾದಂತೆ  ಭಾಸವಾಗಿ  ಯಮನು ತನ್ನ ಮುಂದೆ ಉರುಳು ಹಿಡಿದು ಕರೆದೊಯ್ಯುತ್ತಿರುವುದನ್ನು ನೆನೆದು ಬೆಚ್ಚಿಬಿದ್ದಳು.  ಎಷ್ಟೋ ದಿನಗಳನ್ನು  ಗಂಡನಿಗೂ ಹಾಗೂ ಅವಳ ಕುಟುಂಬಕ್ಕೂ ತನ್ನ ಅನಾರೋಗ್ಯದ ಬಗ್ಗೆ ತಿಳಿಸದೆ  ತಾನೆ ನೋವನ್ನು ನುಂಗಿಕೊಂಡು ದಿನ ಕಳೆದಳು. ಕಾಲಕ್ರಮೇಣ ರೋಗ ಉಲ್ಬಣವಾದಾಗ ಅನಾರೋಗ್ಯದ ವಿಚಾರ ತಿಳಿಸುವುದು ಅನಿವಾರ್ಯವಾಯಿತು. ಮೊದ ಮೊದಲು ಕಾಳಜಿ ತೋರಿಸುತ್ತಿದ್ದ ಮನೆಯವರು “ ದಿನಾ ಸಾಯುವವರಿಗೆ  ಅಳುವವರಾರು “ ಎಂಬಂತೆ ಕಾಯಿಲೆಯ ಬಗ್ಗೆ ತಾತ್ಸಾರ ಹೊಂದಿದರು. ಒಳ್ಳೆಯ ವೈದ್ಯರನ್ನು ಸಂಪರ್ಕಿಸುವ ಸಲಹೆಯನ್ನು ಧಿಕ್ಕರಿಸಿ ಗುಣಪಡಿಸಲಾಗದ ಕಾಯಿಲೆಯಿಂದ ‘ಹಣ ದಂಡ ‘ಎಂದು ಬಗೆದು ಅವಳನ್ನು ನಿರ್ಲಕ್ಷ ಮಾಡತೊಡಗಿದರು. ಸರಿಯಾದ ಶುಶ್ರೂಷೆ ಅಗತ್ಯವಿದ್ದ ಆಕೆಗೆ ದಿನಂಪ್ರತಿ ತನ್ನನ್ನು ಅವಹೇಳನ ಮಾಡಿ   ದೂರ ಇಡುತ್ತಿದ್ದ ವಿಚಾರ  ಆಕೆಗೆ  ಇನ್ನೂ ಹೆಚ್ಚಿನ ಖಿನ್ನತೆ ಮೂಡಿಸಿತು.ದಿನೇ ದಿನೇ  ಕಾಯಿಲೆಯೂ ಬಹುಬೇಗ  ಉಲ್ಬಣವಾಯಿತು . ಮಾನಸಿಕ ಹಿಂಸೆಯನ್ನು ಯಾರಲ್ಲೂ ಹೇಳದಾದಳು.

                  ಒಂದು ಕಾಲದಲ್ಲಿ ಎಲ್ಲಾ ಕಾರ್ಯದಲ್ಲಿಯೂ ಮುಂದಾಗಿ ನಿಂತು ಮನೆಯವರನ್ನು ಮುನ್ನಡೆಸಿದ ಈಕೆ ಈಗ ಎಲ್ಲರಿಂದಲೂ ತಿರಸ್ಕೃತರಾಗಿ ಹಾಸಿಗೆ ಹಿಡಿದಳು. ಇವಳನ್ನು ನೋಡಿಕೊಳ್ಳಲಾಗದೆ  ಆಕೆಯನ್ನು ತವರಿಗೆ ಕಳಿಸುವ ಯೋಚನೆ  ಮಾಡಿದಾಗ ಅತ್ತ ಕಡೆಯಿಂದ ನೀರಸ ಪ್ರತಿಕ್ರಿಯೆ.ತವರಿನಲ್ಲಿ ಎಲ್ಲರೂ ಅವರವರದೇ ಆದ ಸಮಸ್ಯೆಯಲ್ಲಿ ಮುಳುಗಿ ಈಕೆ ಅವರಿಗೆಲ್ಲ ಮಾಡಿದ ತ್ಯಾಗದ ಅರಿವು ಅವರಾರಿಗೂ ಆಗಿರಲಿಲ್ಲ.ಇವಳ ಬಗ್ಗೆ ಕಾಳಜಿ ತೋರಿಸುವ ಯಾವ ಮನಸ್ಸುಗಳು ಅಲ್ಲಿರಲಿಲ್ಲ .  ಕೊನೆಗೆ ಶೋಭಾಳ ತ್ಯಾಗಕ್ಕೆ ಸಿಕ್ಕ ಬಹುಮಾನ ಅನಾಥಾಲಯ . ಎಲ್ಲಾರಿಂದಲೂ ದೂರವಾಗಿ ಯಾರಿಗೂ ಬೇಡವಾದ ಜೀವವಾಗಿ ಪಟ್ಟ ಯಾತನೆ  ಅಷ್ಟಿಷ್ಟಲ್ಲ.ತನ್ನನ್ನು ನೋಡಲು ತನ್ನವರು ಈಗ ಬರುವರು ಎಂಬ ಭರವಸೆಯಲ್ಲಿ  ದಾರಿ ಕಾಯುತ್ತಾ ದಿನ ಕಳೆಯುವಂತಾಗಿತ್ತು. ಆದರೆ ತನ್ನ ಎಣಿಕೆ ಸುಳ್ಳಾಗಿತ್ತು. ಸ್ಥಿತಿ ಗಂಭೀರವಾಗಿ ಆಕೆಯನ್ನು ನೋಡಲು ಬರಬೇಕೆಂದು ಪತಿ ಮನೆಯವರಿಗೆ ಕರೆ ಹೋಯಿತು.ಆತ ಅಸಡ್ಡೆಯಿಂದ   ಇನ್ನೆರಡು ದಿನಗಳಲ್ಲಿ ಬರುವುದಾಗಿ ತಿಳಿಸಿದ .  ಎರಡು ದಿನಗಳನ್ನು ಎರಡು ಯುಗಗಳಂತೆ ಮನೆಯವರ ಬರುವಿಕೆಗಾಗಿ  ಕಣ್ಣು ಮಿಟುಕಿಸದೆ  ಕಾಯುತ್ತ ಕುಳಿತಳು. “ತಾನೊಂದು ನೆನೆದರೆ ದೈವವೊಂದು ಬಗೆಯುತ್ತದೆ “ಎಂಬಂತೆ ಎರಡು ದಿನಗಳು  ಕಳೆದವು .ಆಕೆಯ ಕಣ್ಣು ತನ್ನವರ ಬರುವಿಕೆಯನ್ನು ದಿಟ್ಟಿಸುತ್ತಲೇ ಕೊನೆ ಉಸಿರೆಳೆಯಬೇಕಾಯಿತು . ಪತಿ  ಈಕೆಯನ್ನು ನೋಡುವ ತಯಾರಿ ನಡೆದು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ  ಫೋನ್ ಕರೆ ಮೂಲಕ ಆಕೆಯ ಪ್ರಾಣ ಪಕ್ಷಿ ಹಾರಿ ಹೋದ ವಿಚಾರ ಬಂದೆರಗಿತ್ತು. ಕಷ್ಟಗಳನ್ನು  ನೋಡಲಾಗದೆ ಆ ಭಗವಂತನೆ  ಆಕೆಯ ನೋವಿಗೆ ಅಂತ್ಯ ಹಾಡಿದ್ದ. ಈಕೆಯ ಬಗ್ಗೆ ಯಾರಲ್ಲಿಯೂ ಹೇಳುವ ಮನಸ್ಸು ತನ್ನವರು ಎನಿಸಿಕೊಂಡ ಯಾರಿಗೂ ಇರಲಿಲ್ಲ .ಇಡೀ ಜೀವನವನ್ನು ತನ್ನವರಿಗಾಗಿ ಮೀಸಲಿಟ್ಟವಳಿಗೆ ಕೊನೆಯೂ ಘೋರವಾಗಿತ್ತು .ಎಲ್ಲರ ಗಮನ ಸೆಳೆಯುತ್ತಾ ಬೆಳೆದ ಒಂದು ಸುಂದರವಾದ ಹೂ ಹೇಳ ಹೆಸರಿಲ್ಲದಂತೆ ಬಾಡಿತ್ತು …  ಎಲ್ಲಾರಿಗೂ ಶುಭವನ್ನೇ ಹಾರೈಸಿದ  ಶೋಭಾಳ  ಬಾಳು ಅಂತ್ಯವಾಗಿದ್ದರೂ ಎಲ್ಲಾರ  ನೆನಪಿನಲ್ಲಿ ಅಮರಳಾಗಿದ್ದಳು .ಹುಟ್ಟುವಾಗಲೇ ದೇವರು  ಹಣೆಬರಹವನ್ನು  ಬರೆಯುತ್ತಾನಂತೆ. ಆದರೆ ಕೆಲವರ ಹಣೆಬರಹ ಎಷ್ಟೊಂದು ಘೋರವಾಗಿರುತ್ತದೆ. ಸಿನಿಮಾ ಮಾಧ್ಯಮಗಳಲ್ಲಿ ಕಂಡು ಬರುವ ಕೆಲವು ದೃಶ್ಯಗಳು ಕಣ್ಣೀರು ತರಿಸುತ್ತದೆ. ಅಂತಹದರಲ್ಲಿ ನೈಜವಾಗಿ ನಡೆಯುವಂತಹ ಇಂತಹ ಎಷ್ಟೋ ಘಟನೆಗಳು ಅದಕ್ಕೂ ಘೋರ . ವಿಧಿ ಆಟ ಬಲ್ಲವರಾರು, ಅದನ್ನು ತಮಗೆ ಬೇಕಾದಂತೆ ಬದಲಾಯಿಸುವ ಶಕ್ತಿ  ಈ ಹುಲು ಮಾನವನಿಗೆಲ್ಲಿದೆ.! ? ಬಂದಿದ್ದನ್ನು ಅನುಭವಿಸುವುದಷ್ಟೇ ನಮ್ಮ ಮುಂದಿರುವ ದಾರಿ.

 

✍️ ಮೀರಾ ಸುಮನ್ .ಶಿಕ್ಷಕಿ. ಸ.ಪ್ರೌ.ಶಾಲೆ. ಕಡಕೊಳ.

 

ಕೆಟೆಗರೀ / ವರ್ಗ:ಜಗತ್ತು



ProfileImg

ಇದರ ಲೇಖಕರು Meera suman Castalino

ಶಿಕ್ಷಕಿ .. ಸರಕಾರಿ ಪ್ರೌಢಶಾಲೆ ಕಡಕೊಳ

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ