ಸರ್ವರನ್ನೂ ಸಂಘಟಿಸುವ ಸಾರ್ವಜನಿಕ ಉತ್ಸವ

ProfileImg
07 Sep '24
3 ನಿಮಿಷದ ಓದು


image

ಗಣೇಶ ಚತುರ್ಥಿ

ಭಾರತದಾದ್ಯಂತ ಬಹಳ ವೈಭವದಿಂದ ದೇಶೀಯ ಹಬ್ಬವಾಗಿ ಆಚರಿಸಲ್ಪಡುವ ಹಬ್ಬ ಈ ಗಣೇಶ ಚತುರ್ಥಿ! ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ಅಂದರೆ ಚತುರ್ಥಿಯ ದಿನ ಈ ಹಬ್ಬವನ್ನು ದೇಶದೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸೌಂದರ್ಯವೇ ಹಾಗೆ ಯಾವ ಬೇಧ ಭಾವ ಮೇಲು ಕೀಳಿಲ್ಲದೆ ಎಲ್ಲರನ್ನೂ ಆಕರ್ಷಿಸುತ್ತಾ ಸಾರ್ವಜನಿಕವಾಗಿ ಆಚರಿಸಲ್ಪಡುತ್ತದೆ. 

ಗಣಪ ಎಂದರೆ ಹಿಂದೂಗಳಿಗೆ ಪ್ರೀತಿ ಮತ್ತು ಭಕ್ತಿಯ ಜೊತೆಗೆ ಒಂದು ರೀತಿಯ ಆತ್ಮೀಯ ಭಾವ ಹಾಗಾಗಿ ಗಣಪ ಪ್ರತಿಯೊಬ್ಬರ ಪ್ರೀತಿಯ ಆರಾಧ್ಯ ದೈವ. ಗಣೇಶನನ್ನು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ವಿಘ್ನ ನಿವಾರಕ ಎಂದು ಕರೆಯುತ್ತೇವೆ. ಗಣೇಶನು ಪ್ರತಿ ವರ್ಷ ಸಮೃದ್ಧಿ ಮತ್ತು ಯಶಸ್ಸಿನೊಂದಿಗೆ ಬರುತ್ತಾನೆ ಎಂಬುದು ಎಲ್ಲರ ನಂಬಿಕೆ ಹಾಗಾಗಿ ಗಣೇಶ ಚತುರ್ಥಿ ಹಬ್ಬಕ್ಕಾಗಿ ಎಲ್ಲರೂ ಉತ್ಸಾಹ ಮತ್ತು ಕಾತರದಿಂದ ಕಾಯುತ್ತಾರೆ. ಅಲ್ಲದೆ ಈ ಹಬ್ಬದ ಮೂಲಕ ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಆವನನ್ನು ಸ್ವಾಗತಿಸುತ್ತಾ ಬುದ್ಧಿವಂತಿಕೆ, ಸಮೃದ್ಧಿ, ಅದೃಷ್ಟ ವಿದ್ಯೆ ಮತ್ತು ಶುಭ ಫಲಕ್ಕಾಗಿ ಗಣಪನ ಆಶೀರ್ವಾದವನ್ನು ಕೋರಿ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.! 

ಭಾರತದಲ್ಲಿ ಗಣೇಶ ಚತುರ್ಥಿ ಉತ್ಸವವು ಐತಿಹಾಸಿಕವಾಗಿಯೂ ಮಹತ್ವ ಪಡೆದುಕೊಂಡಿದ್ದು ಗಣೇಶ ಚತುರ್ಥಿಯನ್ನು ಶಿವಾಜಿಯ ಕಾಲದಿಂದಲೂ ಆಚರಿಸಲಾಗುತ್ತಿದೆ ಎಂದು ಇತಿಹಾಸ ಹೇಳುತ್ತದೆ. ಮರಾಠಾ ದೊರೆ ಶಿವಾಜಿ ಮೊಘಲರ ವಿರುದ್ಧ ಹೋರಾಡುತ್ತಿದ್ದ ಸಂಧರ್ಭದಲ್ಲಿ ತನ್ನ ಪ್ರಜೆಗಳಲ್ಲಿ ರಾಷ್ಟ್ರೀಯತಾವಾದಿ ಭಾವನೆಯನ್ನು ಉತ್ತೇಜಿಸಲು ಗಣೇಶ ಚತುರ್ಥಿಯ ಆಚರಣೆಯನ್ನು ಅಳವಡಿಸಿ ಕೊಂಡಾಗ ಗಣೇಶ ಚತುರ್ಥಿಯು ಸಾರ್ವಜನಿಕ ಆಚರಣೆಯ ಸ್ವರೂಪವನ್ನು ಪಡೆದುಕೊಂಡಿತು.  1893 ರಲ್ಲಿ, ಬ್ರಿಟಿಷರು ರಾಜಕೀಯ ಸಭೆಗಳನ್ನು ನಿಷೇಧಿಸಿದಾಗ, ಭಾರತೀಯ ರಾಷ್ಟ್ರೀಯವಾದಿ ನಾಯಕ ಬಾಲಗಂಗಾಧರ ತಿಲಕ್ ಅವರು ಈ ಉತ್ಸವವನ್ನು ಪುನರುಜ್ಜಿವನಗೊಳಿಸಿ ದೊಡ್ಡ ಸುಸಂಘಟಿತ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ನೋಡಿಕೊಂಡು ವಾರ್ಷಿಕ ದೇಶೀಯ ಹಬ್ಬವನ್ನಾಗಿ ಪ್ರೋತ್ಸಾಹಿಸಿದರು.

ಇನ್ನೂ ಈ ಹಬ್ಬವನ್ನು ಧಾರ್ಮಿಕ ನಂಬಿಕೆಯ ಪ್ರಕಾರ ನೋಡುವುದಾದರೆ ಶಿವ ಪುರಾಣದಲ್ಲಿ ಹೇಳಿರುವಂತೆ ಗಣೇಶನ ಜನ್ಮಕಥೆ ಇಂತಿದ್ದು ಕೈಲಾಸದಲ್ಲಿ ಪಾರ್ವತಿದೇವಿಯು ತನ್ನ ಸಖಿಯರ ಜೊತೆಯಲ್ಲಿರುವಾಗ ಅಲ್ಲಿಗೆ ಪರಶಿವನ ಆಗಮನವಾಗುತ್ತೆ. ದ್ವಾರವನ್ನು ಕಾಯಲು ಗಣವೊಂದು ಇಟ್ಟಿದ್ದರೂ ಕೂಡ ಈ ರೀತಿ ತನ್ನ ಪತಿಯೇ ಆಗಲಿ ಅನಪೇಕ್ಷಿತವಾಗಿ ಒಳಗೆ ಬಂದದ್ದು ಪಾರ್ವತಿಗೆ ಸ್ವಲ್ಪ ಅಸಮಧಾನವನ್ನು ಉಂಟು ಮಾಡಿತ್ತದೆ, ಇದಕ್ಕಾಗಿ ಪಾರ್ವತಿ ಸ್ನಾನಕ್ಕಾಗಿ ಹೋಗುವ ಮೊದಲು ತನ್ನ ಮೈಯಲ್ಲಿರುವ ಮಣ್ಣಿನಿಂದ ಮುದ್ದಾದ ಒಂದು ಮಗುವನ್ನು ನಿರ್ಮಿಸಿ, ಅದಕ್ಕೆ ಜೀವ ತುಂಬಿ ಅವನ ಕೈಯಲ್ಲಿ ದಂಡವೊಂದನ್ನು ಕೊಟ್ಟು ಸ್ನಾನಗೃಹದ ಬಾಗಿಲು ಕಾಯಲು ನೇಮಿಸಿ ಯಾರನ್ನೂ ಒಳಗೆ ಬಿಡಬೇಡ ಎಂದು ಹೇಳುತ್ತಾಳೆ. ಹೀಗಿದ್ದಾಗ ಕೈಲಾಸಪತಿ ಈಶ್ವರನ ಆಗಮನ ವಾಗುತ್ತದೆ ಆಗ ಈ ಪುಟ್ಟ ದ್ವಾರಪಾಲಕ ತನ್ನ ದಂಡವನ್ನು ಶಿವನ ಮುಂದೆ ಅಡ್ಡವಾಗಿಸಿ ಒಳಗೆ ಪ್ರವೇಶಿಸದಂತೆ ನಿರ್ಭಂಧಿಸುತ್ತಾನೆ ಇದೇನು ಯಾವನೋ ಹೊಸ ಹುಡುಗ ನನ್ನನ್ನು ತಡೆಯುತ್ತಿರುವನಲ್ಲ ಎಂದು ಕೋಪಿಸಿಗೊಂಡ ಶಿವ ಯಾರು ನೀನು? ಎಂದು ಕೇಳುತ್ತಾನೆ. ನಾನು ಪಾರ್ವತಿಯ ಮಗ, ಅವಳ ಸೇವಕ, ತಾಯಿಯ ಆಜ್ಞೆ ಮೇರೆಗೆ ಯಾರನ್ನು ಒಳ ಹೋಗಲು ಬಿಡಲು ಸಾಧ್ಯವಿಲ್ಲ. ಆದ್ದರಿಂದ ನಿನ್ನನ್ನು ಒಳಹೋಗಲು ಬಿಡುವುದಿಲ್ಲ ಎಂದು ಬಾಲಕ ಶಿವನಿಗೆ ಹೇಳುತ್ತಾನೆ. ಇದನ್ನು ಕೇಳಿ ರುದ್ರಗಣಗಳು ಸಿಟ್ಟಿನಿಂದ ಅವನ ಮೇಲೆ ಮುಗಿಬೀಳುತ್ತಾರೆ, ಆದರೆ ಆ ಬಾಲಕ ಒಬ್ಬೊಬ್ಬರನ್ನು ಥಳಿಸಿ ತನ್ನ ಪರಾಕ್ರಮವನ್ನು ತೋರುತ್ತಾನೆ. ಇದೆಲ್ಲವನ್ನು ನೋಡುತ್ತಿದ್ದ ಶಿವ ತನ್ನ ಗಣಗಳ ಸೋಲು ಮತ್ತು ಈ ಹುಡುಗನ ಉದ್ಧಟತನದಿಂದ ಕ್ರೋಧಿತನಾಗಿ ತನ್ನ ಶೂಲದಿಂದ ಅವನ ಶಿರವನ್ನು ಕತ್ತರಿಸುತ್ತಾನೆ. 

ತನ್ನ ಪತಿಯ ಈ ಕೃತ್ಯವನ್ನು ನೋಡಿದ ಪಾರ್ವತಿಯು ಪುತ್ರನ ಮರಣದಿಂದ ಶೋಕಿತಳಾಗಿ ರೋಧಿಸುತ್ತಾಳೆ. ಗೌರಿಯು ಕ್ಷಣಾರ್ಧದಲ್ಲಿ ದುರ್ಗೆಯಾಗಿ ಅನೇಕ ಮಹಾಶಕ್ತಿಗಳನ್ನು ಸೃಷ್ಟಿಸಿ ರುದ್ರಗಣಗಳ ಮೇಲೆ ಬಿಡುತ್ತಾಳೆ. ಇದರಿಂದ ಗಾಬರಿಗೊಂಡ ಗಣಗಳು ಶಿವನಲ್ಲಿ ಬಂದು ಪ್ರಾರ್ಥಿಸುತ್ತಾರೆ. ಪಾರ್ವತಿಯನ್ನು ಸಮಾಧಾನ ಪಡಿಸಲು ಶಿವನು ಬಾಲಕನನ್ನು ಬದುಕಿಸುವದಾಗಿ ಹೇಳಿ, ತನ್ನ ಭಟರಿಗೆ ಉತ್ತರ ದಿಕ್ಕಿಗೆ ಹೋಗಿ ಮೊದಲು ಸಿಗುವ ಪ್ರಾಣಿಯ ತಲೆಯನ್ನು ತರಲು ಆಜ್ಞಾಪಿಸುತ್ತಾನೆ, ಅಂತೆಯೇ ಉತ್ತರಕ್ಕೆ ತಲೆ ಹಾಕಿ ಮಲಗಿದ್ದ ಆನೆಯ ಶಿರವನ್ನು ಕತ್ತರಿಸಿಕೊಂಡು ತರುತ್ತಾರೆ. ಶಂಕರನು ಆ ಬಾಲಕನ ಮುಂಡಕ್ಕೆ ಆನೆಯ ತಲೆಯನ್ನು ಸರಿಯಾಗಿ ಜೋಡಿಸಿ, ಅವನನ್ನು ಪುನಃ ಬದುಕಿಸಿದನು. ಉಮೆಯು ಬಂದು ಆ ಬಾಲಕನನ್ನು ಮುದ್ದಿಸಿ ತನ್ನ ಮಗನಾದ ಗಜಮುಖನಿಗೆ ವರಗಳನ್ನು ದಯಪಾಲಿಸುವಂತೆ ಮಹೇಶ್ವರನನ್ನು ಕೇಳಿಕೊಂಡಳು. ಆಗ ಶಿವನು ಇಂದಿನಿಂದ ನೀನು ನನ್ನ ಕಿರಿಯ ಮಗನೆಂದೂ, ಸರ್ವಕಾರ್ಯಗಳಲ್ಲಿ ನೀನೆ ಪ್ರಥಮ ಪೂಜಿತನಾಗೆಂದೂ, ಸಕಲ ರುದ್ರಗಣಗಳ ಅಧಿಪತಿಯಾಗು ಎಂದು ಶಿವನು ಹರಸುತ್ತಾನೆ. ಹೀಗೆ ಶಿವ ಪಾರ್ವವತಿಯರ  ಮಗನಾಗಿ ಗಣಪತಿಯು ಜಗತ್ಪ್ರಸಿದ್ಧನಾದನು.!

ಗೌರಿ ಹಬ್ಬದ ಮಹತ್ವ

ಗಣೇಶ ಚತುರ್ಥಿಗೆ ಒಂದು ದಿನ ಮೊದಲು ಗಣಪನ ಅಮ್ಮ ಗೌರಿಯನ್ನು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸಿ ಗೌರಿ ಹಬ್ಬವೆಂದು ಆಚರಿಸಲಾಗಿತ್ತದೆ ತದನಂತರ ಮರುದಿನ ಗಣೇಶನನ್ನು ಮನೆಗೆ ಆಹ್ವಾನಿಸಲಾಗುತ್ತದೆ.ಧಾರ್ಮಿಕ ನಂಬಿಕೆಗಳ ಪ್ರಕಾರ,ಗೌರಿ ಆದಿ ಶಕ್ತಿ ಮಹಾಮಾಯೆಯ ಅವತಾರ ಎಂದು ಹೇಳಲಾಗುತ್ತದೆ. ಅಲ್ಲದೆ ಆಕೆ ಶಿವನ ಶಕ್ತಿ ಕೂಡ ಭಾದ್ರ ಮಾಸದಲ್ಲಿ ಗೌರಿಯು ಇತರ ವಿವಾಹಿತ ಮಹಿಳೆಯಂತೆ ತನ್ನ ಹೆತ್ತವರ ಮನೆ ಭೂಲೋಕಕ್ಕೆ ಬರುತ್ತಾಳೆ ಎಂದು ನಂಬಲಾಗಿದೆ. ಆಕೆಯನ್ನು ಮತ್ತೆ ಕೈಲಾಸಕ್ಕೆ ಕರೆದುಕೊಂಡು ಹೋಗಲು ಅವಳ ಪುತ್ರನಾದ ಗಣೇಶನು ಭೂಮಿಗೆ ಬರುತ್ತಾನೆ ಎಂಬುದು ಪ್ರತೀತಿ
ಗೌರಿ ಹಬ್ಬವನ್ನು ಮುಖ್ಯವಾಗಿ ಮಹಿಳೆಯರು ಆಚರಿಸುತ್ತಾರೆ. ಗೌರಿ ಅಂದರೆ ಪಾರ್ವತಿ ದೇವಿಯ ಅತ್ಯಂತ ಸುಂದರವಾದ ಮೈಬಣ್ಣದ ಅವತಾರವಾದ ಗೌರಿಯನ್ನು ಈ ದಿನದಂದು ಪೂಜಿಸಲಾಗುತ್ತದೆ ಮತ್ತು ಸಂತೋಷದ ದಾಂಪತ್ಯ ಜೀವನಕ್ಕಾಗಿ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ಗೌರಿ ದೇವಿಯ ಆಶೀರ್ವಾದವನ್ನು ಪಡೆಯಲು ಮಹಿಳೆಯರು ಸ್ವರ್ಣ ಗೌರಿ ವ್ರತವನ್ನಾಗಿ ಕೂಡ ಆಚರಿಸುತ್ತಾರೆ.

ಕೆಟೆಗರೀ / ವರ್ಗ:ಆಧ್ಯಾತ್ಮಿಕತೆ



ProfileImg

ಇದರ ಲೇಖಕರು Geethanjali NM

Author ✍️