4. ಕುಕ್ಕುಡು ದೋಲು ; ತಾರಿಡ್ ತಂಬಡ (ಮಾವಿನ ಮರದಲ್ಲಿ ಡೋಲು ; ತಾಳೆ ಮರದಲ್ಲಿ ತಮಟೆ)

ಪೆದಂಬು ನರಮಾನಿ (ಕಾದಂಬರಿ - ಭಾಗ - 4)

ProfileImg
31 Jan '25
6 ನಿಮಿಷದ ಓದು


image

 

ದೋಲು, ತಮಟೆಯ ಸದ್ದು ವಾತಾವರಣದಲ್ಲಿ ದುಃಖದ ವಾತಾವರಣ ಸೃಷ್ಟಿಸಿತ್ತು.

ದೋಗಣ್ಣನನ್ನು ಸುಟ್ಟ ಗದ್ದೆಯಲ್ಲಿ ಉರಿದು ಹೋದ ಚಿತೆಯ ಅವಶೇಷದ ಪಕ್ಕದಲ್ಲಿ ರಾಮಣ್ಣ ಮಡಿವಾಳ ನಿಂತಿದ್ದರು.

ದೋಗಣ್ಣನ ಕುಟುಂಬದ ಸದಸ್ಯರು ಏಳೆಂಟು ಜನ ಸೇರಿದ್ದರು.

ರಾಮಣ್ಣ ಕೈಯಲ್ಲಿ ಸುಲಿದ ತೆಂಗಿನ ಕಾಯಿ ಮತ್ತು ಕತ್ತಿಯನ್ನು ಹಿಡಿದಿದ್ದರು.

‘ದೋಗಣ್ಣ ತೀರಿಕೊಂಡು ಇವತ್ತಿಗೆ ಮೂರು ದಿನ. ಅವರ ಕಾಟದ ದೂಳೊಪ್ಪದ ದಿನ. ಸುಟ್ಟ ಗದ್ದೆ ಶುದ್ದ ಮಾಡಬೇಕಾದದ್ದು ಕ್ರಮ.

ಕೆಲವರು ಎಲ್ಲಿಂದಲೋ ದೇವರ ನೀರು ಅಂತ ನೀರು ತಂದು ಶುದ್ದ ಮಾಡುತ್ತಾರೆ. ಅದು ಬಾವಿದ್ದ. ನಳ್ಳಿದ್ದಾ, ಎಲ್ಲಿದ್ದು ಅಂತ ನಮಗೆ ಗೊತ್ತಿಲ್ಲ.

ಇದು ನೋಡಿ ತೆಂಗಿನ ಕಾಯಿ. ಇದರ ಒಳಗಿರುವುದು ದೇವರೇ ನಮಗೆ ಕೊಟ್ಟ ಶುದ್ದ ನೀರು. ನೀರು ಮೇಲಿನಿಂದ ಕೆಳಗೆ ಇಳಿಯುವುದು ಲೋಕದ ಕ್ರಮ. ಆದರೆ ಇದು ಹಾಗಲ್ಲ. ಕೆಳಗಿನಿಂದ ಮೇಲೆ ದೇವರು ಕಳುಹಿಸಿದ ನೀರು. ಹಾಗಾಗಿ ಇದು ದೇವರ ನೀರು. ನಾವು ಶುದ್ದ ಮಾಡುವುದು ಈ ದೇವರ ನೀರಿನಿಂದ’ ಎನ್ನುತ್ತಾ ಕಾಯಿ ಒಡೆದು, ಹರಡಿಕೊಂಡು ಬಿದ್ದ ಬೂದಿ ಚಿತೆಯ ಅವಶೇಷದ ಮೇಲೆ ಚೆಲ್ಲಿದರು.

‘ನಮ್ಮ ಕಟ್ಟಿನ ಪ್ರಕಾರ ಎಲುಬು ಹೆಕ್ಕುವುದಕ್ಕೆ ಇಲ್ಲ. ಈಗ ಹೊಸ ಸಂಪ್ರದಾಯ ಉಂಟು. ನಿಮಗೆ ಪಿಂಡ ಬಿಡುವುದಕ್ಕೆ ಎಲುಬು ಎಲ್ಲಿಗಾದರೂ ನದಿ ಸಮುದ್ರಕ್ಕೆ ಬಿಡುವುದಕ್ಕೆ ಉಂಟಾ...? ನಾಳೆ ಮತ್ತೆ ನಾನು ಕೇಳಿಲ್ಲಾ ಅಂತ ಆಗಬಾರದು..’ ಎಂದರು ರಾಮಣ್ಣ.

‘ನಮ್ಮ ಕಟ್ಟಿನಲ್ಲಿ ಇಲ್ಲವಲ್ಲ ಮತ್ತೆ ಯಾಕೆ ಎಲುಬು ಬೇಡ’ ಅಂದ ಪದ್ದು.

‘ಇಲ್ಲ ನನಗೆ ಪಿಂಡ ಬಿಟ್ಟು ಬೊಜ್ಜ ಮಾಡುವುದಕ್ಕಿದೆ ಎಲುಬು ಬೇಕು...’ ಎಂದ ಶ್ರೀಧರ.

‘ಹಾಗಾದರೆ ಎಲುಬು ಸಂಗ್ರಹಿಸುವುದಕ್ಕೆ ತಂದ ತೂರಿ ಕೊಡಿ’ ಎಂದರು ರಾಮಣ್ಣ

‘ತೂರಿ.... ತೂರಿ...’ ರಾಮಣ್ಣ ತೊದಲಿದ.

‘ತೂರಿ ಇಲ್ಲವಾ ಹಾಗಾದರೆ ಬೈರಾಸು ಕೊಡಿ’ ಎಂದರು ರಾಮಣ್ಣ.

ದೋಗಣ್ಣನ ಕಿರಿಯ ಮಗ ಶಂಕರ ಕುತ್ತಿಗೆಗೆ ಸುತ್ತಿದ್ದ ಬೈರಾಸು ತೆಗೆದು ಕೊಟ್ಟ.

ಬೈರಾಸಿಗೆ ಎಲುಬು ಹಾಕಿ ಕಟ್ಟಿ ‘ಇದನ್ನು ಒಂದು ತೂರಿಗೆ ಹಾಕಿ ಅದನ್ನು ಬೈರಾಸಲ್ಲಿ ಬಿಗಿದು, ಮರಕ್ಕೆ ಕಟ್ಟಿ. ಪಿಂಡ ಬಿಡುವಾಗ ತೆಗೆದುಕೊಂಡು ಹೋಗಿ’ ಎಂದರು.

‘ಈಗ ಕುಟುಂಬದವರು, ಮಕ್ಕಳು ಎಲ್ಲಾ ಸೇರಿ ಬೂದಿ ಒಟ್ಟು ಮಾಡಿ’ ಎಂದರು ರಾಮಣ್ಣ.

ಪದ್ದು ತಲೆಗೆ ಬೈರಾಸು ಕಟ್ಟಿ, ಹೊಗೆಯಾಡುವ ಬೂದಿಗೆ ಎರಡು ಮೂರು ಕೊಡಪಾನ ನೀರು ಹಾಕಿದ. ಹಾರೆ ಹಿಡಿದು ಬೂದಿ ಒಟ್ಟು ಮಾಡತೊಡಗಿದ. ಶ್ರೀಧರ ಮತ್ತು ಆತನ ತಮ್ಮಂದಿರು ಸೇರಿಕೊಂಡರು.

ರಾಮಣ್ಣ ಹೇಳಿಕೊಟ್ಟಂತೆ ಪದ್ದು ತ್ರಿಕೋನಾಕಾರದ ದೂಪೆ ತಯಾರಿಸಿದ. ಪೂರ್ವ ಭಾಗಕ್ಕೆ ಒಂದು ಮೆಟ್ಟಲು ರಚಿಸಿದ. ದೂಪೆಯ ಮೇಲ್ಭಾಗದಲ್ಲಿ ಕೈಬೆರಳಿನಿಂದ ಒತ್ತಿ ತೂತು ಮಾಡಿದ.

‘ಸತ್ತ ದಿನ ಮರಕ್ಕೆ ಗಡಿ ಇಟ್ಟದ್ದು ಯಾರು? ಯಾರು ಕ್ರಿಯೆ ಹಿಡಿಯುವವರು?’ ರಾಮಣ್ಣ ಪ್ರಶ್ನಿಸಿದರು.

‘ಮರಕ್ಕೆ ಗಡಿ... ಗಡಿ... ’ ಶ್ರೀಧರ ಮತ್ತೆ ತೊದಲಿದ.

‘ಪದ್ದು... ಸತ್ತ ದಿನ ಮಾವಿನ ಮರಕ್ಕೆ ಹಿರಿಯ ಮಗ ಗಡಿ ಇಡಬೇಕಲ್ಲಾ... ಮರ ಉರುಳಿದ ಮೇಲೆ ಅದರ ಬುಡಕ್ಕೆ ಒಂದು ಕಲ್ಲು ಇಟ್ಟು ಸತ್ತವರು ಧೂಳೊಪ್ಪದ ದಿನದವರೆಗೆ ಆ ಕಲ್ಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರಾರ್ಥನೆ ಮಾಡುವುದಕ್ಕಿಲ್ವಾ...?

ಈಗ ಆ ಕಲ್ಲನ್ನು ತೆಗೆದು ನಾವು ದೂಪೆ ಮಾಡಿದ್ದೇವೆ ಅದರಲ್ಲಿ ಸತ್ತವರು ಬಂದು ಕುಳಿತುಕೊಳ್ಳಬೇಕು ಎಂದು ಕೇಳಿಕೊಳ್ಳಬೇಕಲ್ಲಾ... ಇದು ಈ ಊರಿನ ಕ್ರಮ ಅಲ್ವಾ...

ನಿಮಗೆ ಕ್ರಮ ಹೇಳಿಕೊಟ್ಟದ್ದು ಯಾರು? ಅವರ ಕ್ರಮದಲ್ಲಿ ಏನುಂಟು ಅದನ್ನಾದರೂ ಮಾಡಬೇಕಲ್ವಾ’ ರಾಮಣ್ಣ ಕಣ್ಣು ಅಗಲ ಮಾಡಿದರು.

‘ನನಗೇನೂ ಗೊತ್ತಿಲ್ಲ ಎಲ್ಲಾ ಅವನೆ’ ಎಂದು ಪದ್ದು ಶ್ರೀಧರನ ಕಡೆ ಕೈ ತೋರಿಸಿದ.

‘ಅದು ಮರ ಕಡಿದದ್ದು ಐದ್ರೋಸ್ ಬ್ಯಾರಿ ಮತ್ತು ಆತನ ಜನರು. ಅಡಿಮರ, ಕಟ್ಟಿಗೆ ಎಲ್ಲ ತಯಾರು ಮಾಡಿ ಕಾಟದ ಬಳಿಗೆ ತಂದದ್ದು ಅವರೆ... ನಾವು ಕಾಟಗೂರಿದ್ದು...’ ಶ್ರೀಧರ ಅಸ್ಪಷ್ಟವಾಗಿ ನುಡಿದ.

ಪದ್ದು ಶ್ರೀಧರನನ್ನು ಮಸೆದು ನೋಡುತ್ತಿರುವುದನ್ನು ಕಂಡ ರಾಮಣ್ಣ ಏನೋ ಜೋರಾದ ಗಡಿ ಬಿಡಿ ಇದೆ ಎಂದುಕೊಂಡು ಸುಮ್ಮನಾದರು.

ಇರಲಿ ಬಿಡಿ ಸುಧಾರಿಸುವ. ‘ತುಳಸಿ ಗಿಡ ಏನಾದರೂ ತಂದಿದ್ದೀರಾ..?’ ರಾಮಣ್ಣ ಪ್ರಶ್ನಿಸಿದರು.

ದೋಗಣ್ಣನ ಎರಡನೇ ಮಗ ಶಂಭು ತುಳಸಿ ಗಿಡ ತರಲು ಮನೆ ಕಡೆ ಧಾವಿಸಿದ..

‘ಬರುವಾಗ ಒಂದಷ್ಟು ಮಾವಿನ ತುದಿಯನ್ನೂ ತಾ.. ಮಾರಾಯ’ ಎಂದರು ರಾಮಣ್ಣ.

ಶಂಭು ಎದುಸಿರು ಬಿಡುತ್ತಾ ತುಳಸಿ, ಮಾವಿನ ಸೊಪ್ಪು ತಂದ.

‘ಯಾರು ಹಿರಿ ಮಗ ಮುಂದೆ ಬಾ. ಕುಟುಂಬದವರೂ ಆದೀತು.. ಈ ತುಳಸಿ ಗಿಡ ನೆಟ್ಟು ಅದರ ಸುತ್ತಲೂ ಮಾವಿನ ತುದಿ ಊರಿಬಿಡಿ... ಆನಂತರ ಬೊಂಡ ಒಟ್ಟೆ ಮಾಡಿ ಮೆಟ್ಟಲ್ಲಿ ಇಡಿ’ ಎಂದು ರಾಮಣ್ಣ ನಿರ್ದೇಶನ ನೀಡಿದರು.

‘ಈ ಊರಿನ ಸಂಪ್ರದಾಯದ, ಹಿರಿಯರು ಹೇಳಿಕೊಟ್ಟ ಪ್ರಕಾರ ಧೂಳೊಪ್ಪ ಮಾಡಿದ್ದೇವೆ. ಇನ್ನು ಹತ್ತು ದಿವಸ ಬೊಜ್ಜದವರೆಗೆ ಈ ದೂಪೆಯಲ್ಲಿ ಇದ್ದು, ಬೊಜ್ಜದ ರಾತ್ರಿ ಒಳಗೆ ಕರೆಯುವಾಗ ಬಂದು ಮನೆ ಸೇರಿಕೊಳ್ಳಬೇಕು.

ಗೋರಿ ಕಟ್ಟಲು ಇದ್ದರೆ, ದೂಪೆ ಕಟ್ಟುವ ಸಲುವಾಗಿ 
ಇವತ್ತು ದೂಪೆದ ಕಂಡ ಸುದ್ದ. ಮನೆಯಲ್ಲಿ, ದೈವ ಚಾವಡಿ, ಕುಟುಂಬದವರದ್ದು ಬೊಜ್ಜದ ದಿನ ತಲಿಪು, ಶುದ್ದ. ಕ್ರಮದಲ್ಲಿ ಎದುರು ಬದುರು, ವ್ಯತ್ಯಾಸ ಏನಾದರೂ ಇದ್ದರೆ ಸುಧಾರಿಸಿಕೊಳ್ಳಬೇಕು’ ಎಂದು ಕೈಮುಗಿದರು.

ಕುಟುಂಬದವರು, ಮಕ್ಕಳನ್ನು ಅಡ್ಡ ಬಿದ್ದು ಕೈ ಮುಗಿಯುವುದಕ್ಕೆ ಹೇಳಿದರು.

ಇನ್ನು ಮುಂದೆ ಹತ್ತು ದಿನ ನಿಮ್ಮ ಕುಟುಂಬಕ್ಕೆ ಶೋಕಾಚರಣೆ. ಅಕ್ಕಿಯಲ್ಲಿ ಕಡೆದು ತಿಂಡಿ ಮಾಡಿದ್ದು, ಎಣ್ಣೆಯಲ್ಲಿ ಕಾಯಿಸಿದ್ದು, ಒಗ್ಗರಣೆ ಹಾಕಿದ್ದು, ಸಿಹಿ, ಮೀನು- ಮಾಂಸ’ ತಿನ್ನುವುದಕ್ಕೆ ಇಲ್ಲ ಒಟ್ಟಿನಲ್ಲಿ ಶೋಕದ ದಿನಗಳಲ್ಲಿ ಸಬಿ ತಿನ್ನಬಾರದು ಎಂದು ಅರ್ಥ. ಮನೆಯ ಚಾವಡಿಯಲ್ಲಿ ಒಂದು ಮಣೆ ಹಾಕಿ ಅದರ ಮುಂದೆ ದೀಪ, ನೀರು ಇಟ್ಟು ಅಡ್ಡ ಬಿದ್ದು ಧೂಪ ಕೊಟ್ಟು ಕೈ ಮುಗಿಯಬೇಕು. ಎರಡು ಹೊತ್ತಿಗೆ ನೀರು ಬದಲಿಸಬೇಕು. ಸ್ವಲ್ಪ ಹೊತ್ತು ಮೌನವಾಗಿ ಕುಳಿತುಕೊಳ್ಳಬೇಕು. ಇದು ನಮ್ಮ ಊರಿನ ಕ್ರಮ’ ಎಂದು ರಾಮಣ್ಣ ಕ್ರಮಗಳನ್ನು ವಿವರಿಸಿ ಹೇಳಿದರು.

ಮನೆ ಅಂಗಳದ ಬದಿಯ ತೆಂಗಿನ ಮರದ ಕಟ್ಟೆಯಲ್ಲಿ ತನ್ನ ಬಾಲು ಪೆಟ್ಟಿಗೆ ತೆರೆದು ‘ಯಾರು ಒಬ್ಬೊಬ್ಬರಾಗಿ ಬಂದು ಕುಳಿತುಕೊಳ್ಳಿ ತಲೆಗೆ ಬಾಲು ಇಡುವುದಕ್ಕಿದೆ’ ಎಂದರು.

‘ಶಂಕರ ನೀನು ಹೋಗಿ ಕುಳಿತುಕೋ...’ ಎಂದ ಶ್ರೀಧರ.

‘ಇಲ್ಲ ನನಗಾಗುವುದಿಲ್ಲ. ಶಂಭು ಹೋಗು’ ಎಂದ ಶಂಕರ.

ಶಂಭು ಅನುಮಾನಿಸಿದ.

‘ನಾನು ಮಾಡಿಸುತ್ತಿದ್ದೆ... ಮೊನ್ನೆ ಬಾಲಾಜಿಗೆ ಹೋಗಿ ಬೋರು ಮಾಡಿಸಿದ್ದು... ಪುನಃ...’ ಶ್ರೀಧರ ಅನುಮಾನಿಸಿದ.

ಇವರ ಪಿಕಿಲಾಟವನ್ನು ಪದ್ದು ದೂರದಿಂದಲೇ ಗಮನಿಸುತ್ತಿದ್ದ.

ಕೋಪಗೊಂಡ ರಾಮಣ್ಣ ಬಾಲು ಬಂಡಾರದ ಪೆಟ್ಟಿಗೆ ಮುಚ್ಚಿದರು.

‘ಪದ್ದು... ಏನಂತೆ ಇವರ ಕತೆ... ನಾಳೆ ಬೇಕಾದರೆ ಸೆಲೂನಿಗೆ ಹೋಗಿ ತೆಗಿಸಲಿ... ಈಗಿನ ಕಾಲದಲ್ಲಿ ಕ್ರಿಯೆ ಕೂಡಾ ಹಿಡಿಯಬೇಕುಂತ ಇಲ್ಲ. ಭಟ್ರಿಗೆ ಹೇಳಿದರೆ ಎಲ್ಲಾ ಆಗುತ್ತದೆ...’ ಎಂದು ಎದ್ದರು.

‘ನೀವು ಕುಳಿತುಕೊಳ್ಳಿ ರಾಮಣ್ಣ’ ಎಂದ ಪದ್ದು ಅಂಗಿ ಕಳಚಿದ ನೇರವಾಗಿ ಬಂದು ರಾಮಣ್ಣನ ಮುಂದೆ ಕೂತ... ರಾಮಣ್ಣ ಪೆಟ್ಟಿಗೆ ಕಳಚಿ ಪದ್ದುವಿನ ತಲೆಗೆ ಬಾಲು ಇಟ್ಟರು...

‘ನೀನು ನಿಜವಾದ ಅರುವತ್ತ ಪದ್ದು. ಜೀವಮಾನ ಇಡಿ ತಮ್ಮಲೆ ಜೊತೆ ಪೊಣೆದರೂ ಸತ್ತ ಮೇಲೆ ಎಲ್ಲಾ ಮರೆತಿದ್ದಿ. ಅವರು ಸತ್ತ ದಿನ ನೀನು ಇರಲಿಲ್ಲ ಅಂತ ನನಗೂ ವರ್ತಮಾನ ಇದೆ. ದೋಗಣ್ಣ ಇರುವಾಗ ನಾನು ಈ ಮನೆಯವನಂತೆ ಇದ್ದವನು ಸದ್ಯ ನೀನಾದರೂ ಇದ್ದಿಯಲ್ಲ ಮಾರಾಯ ಆ ಸಂಬಂಧ ಮುಂದುವರಿಸಲು..

ದೋಗಣ್ಣ ಸತ್ತ ದಿನ ನೀನೇನಾದರೂ ಇದ್ದಿದ್ದರೆ ತಾರಿಯಲ್ಲಿ ತಂಬಡ, ಕುಕ್ಕುವಿನಲ್ಲಿ ದೋಲು ಹಾಕಿಸುತ್ತಿದ್ದೆ...

ಹುಟ್ಟುವುದಕ್ಕೂ ಸಾಯುವುದಕ್ಕೂ ಋಣ ಬೇಕು... ದೋಗಣ್ಣ ಜನ ಬಂಗಾರ್. ಕಾಲ ಸ್ವಲ್ಪ ಕುರೆ ಹಿಡಿಸಿತು ನೋಡು' ಎಂದರು...

ಈ ಮಾತುಗಳು ಶ್ರೀಧರನ ಕಿವಿಗೆ ಕಾದ ಸೀಸ ಸುರಿದಂತೆ ಕೇಳಿಸಿತು.

ಪದ್ದುವಿನ ತಲೆ ನುಣ್ಣಗೆ ಬೋಳಿಸಿದ ನಂತರ ರಾಮಣ್ಣ ಪೆಟ್ಟಿಗೆ ಮಡಚಿದರು.

ಪದ್ದು ಸ್ನಾನಕ್ಕೆ ಹೋದ...

ಶ್ರೀಧರ ತಣ್ಣಗೆ ಬಂದು ರಾಮಣ್ಣನ ಮುಂದೆ ಕುಳಿತ.

‘ನೆತ್ತಿಯಲ್ಲಿ ಚೂರು ಬಿಡಿ ರಾಮಣ್ಣ’ ಎಂದ.

ರಾಮಣ್ಣ ನೆತ್ತಿಯನ್ನೇ ಮೊದಲು ಬೋಳಿಸಿದರು.

ಆನಂತರ ಶಂಭು, ಶಂಕರ ಬಂದು ತಲೆ ಬೋರು ಮಾಡಿಸಿಕೊಂಡರು.

ಒಬ್ಬೊಬ್ಬರಾಗಿ ಸ್ನಾನ ಮಾಡಿ ಬಂದರು...

ದೋಗಣ್ಣನ ಎರಡು ಹೆಣ್ಣು ಮಕ್ಕಳು ಮನೆಗೆ ಬಂದಿದ್ದರೂ, 'ಕಂಟಲ ಆಂಟಿ' ಅಡ್ಡ ಹೆಸರಿನ, ಮನೆಯಲ್ಲಿ ಕಂಟಲ ಆಗುತ್ತದೆ ಎಂದು ಪೇಟೆ ಯ ಲಾಡ್ಜ್ ನಲ್ಲಿ ವಾಸ್ತವ್ಯ ಹೂಡಿದ್ದ ಶ್ರೀಧರನ ಹೆಂಡತಿ ಹಾಜರಿದ್ದರೂ ಪದ್ದುವಿನ ಹೆಂಡತಿ ಸುಜಾತಾ ಎಲ್ಲರಿಗೂ ಸಜ್ಜಿಗೆ ಅವಲಕ್ಕಿ ತಯಾರು ಮಾಡಿದ್ದಳು. ಅವರೆಲ್ಲರು ಅದೂ ಇದು ಸಹಕಾರ ಮಾಡಿದಂತೆ ಮಾಡಿದ್ದರು.

ಅಷ್ಟು ಹೊತ್ತಿಗೆ ಶ್ರೀಧರನ ಫೋನು ರಿಂಗಾಯಿತು.

‘ಹೌದಾ. ಬಾ... ಬಾ...’ ಎಂದು ಶ್ರೀಧರ ಫೋನಿನಲ್ಲಿ ಮನೆ ದಾರಿ ಹೇಳಿದ.

ಒಂದೆರಡು ನಿಮಿಷದಲ್ಲಿ ಬೈಕ್‌ನಲ್ಲಿ ಡಬ್ಬ ಹೊತ್ತುಕೊಂಡ ‘ಸುಗ್ಗಿ’ಯವ ಒಂದು ಪಾರ್ಸೆಲ್ ಶ್ರೀಧರನ ಕೈಗಿತ್ತು ಹಣ ಇ_ಪೇ ಮಾಡಿಸಿಕೊಂಡ.

‘ವನಜಾ ಪಾತ್ರೆ ತಾ’ ಎಂದು ಶ್ರೀಧರ ತಂಗಿಯನ್ನು ಕರೆದ.

ವನಜ ಪಾತ್ರೆಗಳನ್ನು ತಂದಳು. ಪಾರ್ಸೆಲ್ ಒಳಗಿದ್ದ ವಡಾ, ಇಡ್ಲಿ, ಸಾಂಬಾರನ್ನು ಪಾತ್ರೆಗೆ ವರ್ಗಾಯಿಸಿದಳು.

ರಾಮಣ್ಣ, ಸುಜಾತಾ ಧೂಳೊಪ್ಪಕ್ಕೆ ಬಂದಿದ್ದ ಕುಟಂಬದ ಐದಾರು ಸದಸ್ಯರು ಮೂಕ ವಿಸ್ಮಿತರಾಗಿ ನೋಡುತ್ತಿದ್ದರು.

‘ಮೂರು ದಿನದಿಂದ ಆ ಗತಿಗೋತ್ರ ಇಲ್ಲದವಳ ಸಜ್ಜಿಗೆ ಬಜಿಲ್, ಪದೆಂಗಿ ಅಂತಾ ತಿಂದು ಬಾಯಿ ಚಪ್ಪ ಚಪ್ಪೆ ಆಗಿದೆ ಅಂತ ಆನ್‌ಲೈನ್ ಆರ್ಡರ್ ಮಾಡಿದ್ದೆ’ ಎಂದು ಶ್ರೀಧರ ತನ್ನ ಸಾಧನೆ ಕೊಚ್ಚಿಕೊಂಡ.

ಪದ್ದು ಮತ್ತು ರಾಮಣ್ಣ, ಕುಟುಂಬದ ಸದಸ್ಯರು ಚಹಾ ತಿಂಡಿ ಸ್ವೀಕರಿಸಲು ನಿರಾಕರಿಸಿದರು.

'ರಾಮಣ್ಣಾ, ನಾನು ಗತಿ ಇಲ್ಲದವಳಾಗಿರಬಹುದು. ಅದರೆ ನೀತಿ ಕೆಟ್ಟಿಲ್ಲ.  ದೊಡ್ಡಪ್ಪ ಅವರಿಗೆ ತಾರಾಮಾರಾ ಬೈದಿರಬಹುದು. ಈ ವರಗೆ ನನ್ನಲ್ಲಿ ತಪ್ಪಿ ಮಾತಾಡಿಲ್ಲ. ಮಗಳಂತೆ ನೋಡಿಕೊಂಡರು. ಅವರು ಬೀಳುವ ಮೊದಲು, ಇವರೆಲ್ಲಾ ಬಂದ ನಂತರವೂ ಎಲ್ಲದಕ್ಕೂ ನನ್ನನ್ನೇ ಕರೆಯುತ್ತಿದ್ದರು. ಅವರೇನೂ ಕೋಡಿಯಲ್ಲಿ ಬಿದ್ದು ಚಾಕ್ರಿ ಮಾಡಲು ಸಿಗಲಿಲ್ಲ ಅಷ್ಟೆ. ಶ್ರೀಧರಣ್ಣ ನನಗೆ ಹಾಗೆ ಹೇಳಬಹುದಾ?' ಎಂದು ಒಂದು ಕೊಡಪಾನ ನೀರು ಕೇಳಿದ ರಾಮಣ್ಣನ ಬಳಿ ಬಾವಿಕಟ್ಟೆಯಲ್ಲಿ ನೀರೆಳೆಯುತ್ತಾ ಸುಜಾತಾ ಕಣ್ಣೀರು ಇಳಿಸಿದಳು.

'ನೀನು ಸುಮ್ಮನಿರು ಮಗಾ... ಅವರವರ ಹಣೆಬರಹಕ್ಕೆ ತಕ್ಕ ಹಾಗೆ ಮಾತಾಡ್ತಾರೆ...' ರಾಮಣ್ಣ ಸಮಾಧಾನಿಸಿದರು.

'ಏನಾಯ್ತು..' ಎನ್ನುತ್ತಾ ಪದ್ದು ಅಲ್ಲಿಗೆ ಆಗಮಿಸಿದ.

ಸುಜಾತ 'ಹೇಳಬೇಡಿ. ರಂಪಾಟ ಅಗಬಹುದು' ಎಂಬಂತೆ ತುಟಿಗೆ ಅಡ್ಡವಾಗಿ ತೋರು ಬೆರಳು ಇಟ್ಟಳು.

'ಏನಿಲ್ಲ... ಮಗು ದೊಡ್ಡಪ್ಪನನ್ನು ನೆನೆದುಕೊಂಡು ಕಣ್ಣೀರಿಳಿಸಿತು' ಎಂದರು ರಾಮಣ್ಣ.

‘ಒಂಚೂರು ಸಜ್ಜಿಗೆ- ಬಜಿಲಾದರೂ ತಿನ್ನಿ’ ಎಂದು ಸುಜಾತಾ ಎಲ್ಲರಲ್ಲಿ ವಿನಂತಿಸಿದಳು.

‘ಅದು ಸರಿಯಾದ ಮಾತು’ ಎಂದ ರಾಮಣ್ಣ ಜಗಲಿಯಲ್ಲಿ ಚಕ್ಕಳ ಮಕ್ಕಳ ಹಾಕಿ ಕುಳಿತೇ ಬಿಟ್ಟರು.

ಕುಟುಂಬದ  ಎಲ್ಲರೂ ಕುಳಿತು ಸಜ್ಜಿಗೆ ಬಜಿಲ್ ತಿಂದು, ಚಹಾ ಕುಡಿದರು. ಸುಜಾತನ ಕೈರುಚಿ ಕೊಂಡಾಡಿದರು.

ಶಂಭು, ಶಂಕರ, ವನಜ, ಯಶೋಧ ಹಿಂದೆ ಮುಂದೆ ನೋಡುತ್ತಾ ಅಳುಕುತ್ತಾ ಇಡ್ಲಿ, ವಡೆ ಸಾಂಬಾರ್ ಅರ್ಧರ್ಧ ತಿಂದರು.

ರಾಮಣ್ಣ, ಪದ್ದು ದೋಗಣ್ಣನ ಮಕ್ಕಳು ಕುಟುಂಬದ ಸದಸ್ಯರು ಉತ್ತರ ಕ್ರಿಯೆಯ ತಯಾರಿ ಬಗ್ಗೆ ಮಾತಾಡತೊಡಗಿದರು.

‘ಮನೆಯಲ್ಲೇ ಬೊಜ್ಜ, ಏನೆಲ್ಲಾ ಬೇಕು ವ್ಯವಸ್ಥೆ ನಾನು ಮಾಡುತ್ತೇನೆ. ದೈವಗಳ ಚಾಕ್ರಿ ಮಾಡಿದ ಮಾವನಿಗೆ ಕ್ರಮ ಪ್ರಕಾರ ಬೊಜ್ಜ ಆಗಬೇಕು ಅದಕ್ಕೆ ಏನೆಲ್ಲಾ ಬೇಕು ಹೇಳಿ ರಾಮಣ್ಣ’ ಎಂದು ಪದ್ದು ಹೇಳಿದ.

‘ಮನೆಯಲ್ಲಿ ಕಾಸ್ಟ್ಲಿ ಆಗುತ್ತದೆ. ದೇವಸ್ಥಾನದ ಹಾಲ್‌ನಲ್ಲಿ ಮಾಡುವ, ಮನೆಯಲ್ಲಿ ಏನೂ ಕ್ರಮ ಬೇಡ. ಪಿಂಡ ಬಿಟ್ಟು ನೇರ ಹಾಲ್‌ಗೆ ಬಂದರೆ ಸಾಕು. ಬೊಜ್ಜ ನಾವು ಮಕ್ಕಳು ಮಾಡುವುದು’ ಎಂದು ಶ್ರೀಧರ ಹೇಳಿದಾಗ ಅವನ ತಮ್ಮಂದಿರು, ತಂಗಿಯಂದಿರು ಧ್ವನಿಗೂಡಿಸಿದರು.

ಪದ್ದು, ರಾಮಣ್ಣ ಎದ್ದು ನಡೆದರು. ಕುಟುಂಬ ಸದಸ್ಯರು ಬರುತ್ತೇವೆ, ಹೋಗುತ್ತೇವೆ ಎನ್ನದೆ ಮೌನವಾಗಿ ಜಾಗ ಖಾಲಿ ಮಾಡಿದರು.

ಶ್ರೀಧರನಿಗೆ ಬೈರಾಸ್ ಆದ ಅನುಭವ..

ಎಲ್ಲರೆದುರು ಹೆಜ್ಜೆ ಹೆಜ್ಜೆಗೆ ಆದ ಅಪಮಾನದಿಂದ ಕುದಿದು ಹೋದ...

‘ತಾರಿಡ್ ತಂಬಡ... ಕುಕ್ಕುಡು ದೋಲು...’ ಅಂತೆ ....ಪೊಪ್ಪ ಕುರೆ ಅಂತೆ... ಅವ ರಾಮನಿಗೆ ಯಾಕೆ ಕಂಟಿಸಿ ಹಾಕುವ ಅಧಿಕಪ್ರಸಂಗ? ಅಜಲು ಮುಗಿಸಬೇಕು ನೆಟ್ಟಗೆ ಹೋಗಬೇಕು.

ಈ ದೋಲಿನವರನ್ನು ಹೇಳಿದ್ದು ಯಾರು? ಯಾರಾದರೂ ಅಟ್ರಾಸಿಟಿ ಅಂತ ಕಂಪ್ಲೇಂಟ್ ಕೊಟ್ಟರೆ ಗತಿ ಏನು? ದೊಡ್ಡ ಮಗ ನಾನು ಜೈಲಿಗೆ ಹೋಗಬೇಕು.

ದೋಲು ತಂಬಡದ ರೆಕಾರ್ಡಿಂಗ್ ಮಾಡಿ ಲೌಡ್ ಸ್ಪೀಕರ್‌ನಲ್ಲಿ ಹಾಕಿದ್ರೆ ಆಯಿತು... ಹತ್ತೂರಿಗೆ ಕೇಳುತ್ತದೆ.

ತಮ್ಮಲೆಗೆ ತಕ್ಕ ಅರುವತ್ತ ಅಂತೆ.  ಸಾಯುವವರೆಗೆ ಅವರ ನೆತ್ತರು ಹೀರಿ, ಹೀರಿ ಕಿರುಕುಳ ಕೊಟ್ಟು ಬಂಗಾರದ ಬೆಲೆಯ ಗುಳಿಗಜೋರದ ಮೂರಕ್ರೆ ಮತ್ತು ಕುಮ್ಕಿ ಮೋಸ ಮಾಡಿ ಒಳಗೆ ಹಾಕಿದ್ದಾನಲ್ಲಾ...

ಈಗ ನಮಗೆ ಇರುವ ಜಾಗ ಮಾರುವ ಅಂದ್ರೆ ದಾರಿ ಕೊಡುವುದಿಲ್ಲ ಹೇಗೆ ಮಾರುತ್ತೀರಿ? ಅಂತ ಸವಾಲು ಹಾಕ್ತಾನೆ...

ಈ ಪದ್ದು ಇದ್ದಾನಲ್ಲಾ ಅವ... ಅಜಲಿನವರನ್ನೆಲ್ಲಾ ತನ್ನ ಕೈವಶಮಾಡಿಕೊಂಡು ತನ್ನ ಮೂಗಿನ ನೇರಕ್ಕೆ ಕುಣಿಸುತ್ತಾನೆ...

ಊರಿನವರಿಗೆಲ್ಲಾ ಒಂದು ದಾರಿ ಅಂದರೆ ಕಳ್ಳನಿಗೆ ಅವನದೇ ದಾರಿ ಎನ್ನುವಂತೆ ಅವನಿಗೆ ಅವನದೇ ಪೆದಂಬು ದಾರಿ..

ಪಿಂಡ ಬಿಡುವುದಕ್ಕೆ, ಎಲುಬು ಬಿಡುವುದಕ್ಕೆ ಇಲ್ಲ ಅಂತಾನೆ _ ಮಗ. ಊರಿಗೆ ಒಂದು ಕ್ರಮ ಆದರೆ ಇವನಿಗೆ ಬೇರೆ ಕ್ರಮ. ದುರಾಭ್ಯಾಸದ ಪೆದಂಬು ಜನ್ಮದವ...

ಯಾವುದಕ್ಕೂ ಬೊಜ್ಜ ಒಂದು ಆಗ್ಲಿ ನೋಡಿಕೊಳ್ಳುತ್ತೇನೆ.'

ಶ್ರೀಧರ ತನ್ನ ತಮ್ಮಂದಿರ, ಸಹೋದರಿಯರ ಮುಂದೆ ಅಸಮಾಧಾನ ಕಕ್ಕಿಕೊಂಡ.

ಮುಂದಿನ ಭಾಗದಲ್ಲಿ : *ಅರ್ವತ್ತನದ್ದು ಬೊಜ್ಜ; ಮಗನದ್ದು ಪಿಂಡ*

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ