7- ಅಜಕಾಯಿ ಕಲ್ಲಿಗೆ ಜೋಡು ತೆಂಗಿನ ಕಾಯಿ

ಪೆದಂಬು ನರಮಾನಿ (ಕಾದಂಬರಿ ಭಾಗ - 7)

ProfileImg
31 Jan '25
4 ನಿಮಿಷದ ಓದು


image

ಪೂರ್ವದಲ್ಲಿ ಚುಕ್ಕಿಗಳ ನಡುವೆ ಕೆಂಪು ಬೆಳ್ಳಿ ಕಣ್ಣು ಕೋರೈಸುತ್ತಿತ್ತು.

ಅದರ ನೆರಳು ತೆಂಗು, ತಾಳೆ ಮರಗಳ ಹಿನ್ನೆಲೆಯಲ್ಲಿ ನಾಲ್ಕೈದು ಮಾರು ದೂರದಲ್ಲಿ ಸಾಲಾಗಿ ಹಾಕಿದ ಗೊಬ್ಬರದ ಕುಪ್ಪೆಯ ಇರುವ ಗದ್ದೆಯ ನೀರಿನಲ್ಲಿ ಸ್ಪಷ್ಟವಾಗಿ ಮನಮೋಹಕವಾಗಿ ಕಂಡು ಬರುತ್ತಿತ್ತು.

ಗದ್ದೆಯ ನಡುವೆ ಹಾವೊಂದು ಚಲಿಸುತ್ತಿತ್ತು. ಅದರ ಎರಡೂ ಬದಿ ನೀರಿನ ತರಂಗಗಳು.

ಹಕ್ಕಿಗಳ ಚಿಲಿಪಿಲಿ, ಮುಂಜಾನೆಯ ಚುಮು ಚುಮು ಚಳಿ.

ಪದ್ದು ಮತ್ತು ಶಂಕರ ಗದ್ದೆಯ ಪುಣಿಯಲ್ಲಿ ಜಿದ್ದಿಗೆ ಬಿದ್ದವರಂತೆ ಓಡುತ್ತಿದ್ದರು.

ಮುಂಚಿನ ದಿನ ರಾತ್ರಿ ದೊಂದಿ ಇಟ್ಟು ಬಲೀಂದ್ರ ಕರೆದ, ಬೆಂಡೆಕಾಯಿಯ ಕೋಲಿನ ತುದಿಯಲ್ಲಿ ತೂತು ಮಾಡಿ ಸಿಕ್ಕಿಸಿದ, ನಾರು ತೆಗೆದು ಸವರಿದ ತೆಂಗಿನ ಸಿಪ್ಪೆಯ ಮೇಲಿರುವ ತೆಂಗಿನಕಾಯಿಯ ತುಂಡು ಅವಲಕ್ಕಿ ಈ ಜೋಡಿಯ ಗುರಿ.

ಗದ್ದೆಯ ಮೂಲೆಯನ್ನು ದಾಟುವುದಕ್ಕೆ ಶಂಕರ ವಕ್ರವಾಗಿ ಸಾಗಿದರೆ, ಪದ್ದು ನೇರವಾಗಿ ಗದ್ದೆಯ ಕೆಸರಿಗೇ ಇಳಿದಿದ್ದ. ಕಾಲು ಎಳೆದು ಹಾಕುತ್ತಾ ಓಡಿದ ಕೋಲಿನ ತುದಿಯ ತೆಂಗಿನ ಸಿಪ್ಪೆಯಲ್ಲಿದ್ದ ತೆಂಗಿನ ಕಾಯಿ ತುಂಡು ಪದ್ದುವಿನ ವಶವಾಗಿತ್ತು. ಶಂಕರನಿಗೆ ನಿರಾಸೆ. ಅಲ್ಲಿದ್ದ, ಮಂಜಿನ ಹನಿಗೆ ಒದ್ದೆಯಾದ ಪೊಟ್ಟು ಅವಲಕ್ಕಿ ಹೆಕ್ಕಿಕೊಳ್ಳುತ್ತಾ ಪದ್ದುವಿನ ಕೈಯಲ್ಲಿದ್ದ ತೆಂಗಿನ ಕಾಯಿಯ ತುಂಡನ್ನು ಆಸೆಯಿಂದ ನೋಡಿದ.

ತೆಂಗಿನ ಕಾಯಿ ತುಂಡನ್ನು ಎರಡು ಭಾಗ ಮಾಡಿದ ಪದ್ದು ‘ತೆಗೋ’ ಎಂದು ಒಂದು ತುಂಡು ಶಂಕರನ ಕೈಗಿತ್ತ. ಆತನ ಮುಖ ಅರಳಿತು.

ಇಬ್ಬರು ಮಕ್ಕಳು ಪೂರ್ವಭಾಗದಿಂದ ಗದ್ದೆಯಲ್ಲಿ ಹಾಕಿದ್ದ ಗೊಬ್ಬರದ ಕುಪ್ಪೆಗೆ ಕೈ ಇಕ್ಕಿ ಸುತ್ತ ಮುತ್ತ ಚೆಲ್ಲಾಡತೊಡಗಿದರು.

ಗೊಬ್ಬರ ಚೆಲ್ಲುತ್ತಲೇ, ಪರಸ್ಪರ ಸ್ಪರ್ಧಿಸುತ್ತಾ ಒಬ್ಬರ ಮೈಗೆ ಇನ್ನೊಬ್ಬ ನೀರು ಹಾರಿಸುವ ಆಟ ಆಡತೊಡಗಿದರು.

ಪೂರ್ವ ಕೆಂಪೇರಿದಂತೆ ದೋಗಣ್ಣ ನೊಗ-ನೇಗಿಲು ಹೊತ್ತುಕೊಂಡು ಕೋಣಗಳ ಹಿಂದೆ ಗದ್ದೆಯ ಕಡೆ ಬರುತ್ತಿದ್ದ.

ದೋಗಣ್ಣನನ ಹಿಂದೆ ದೀಪಾವಳಿಗೆಂದು ಮುಂಬಾಯಿಯಿಂದ ಊರಿಗೆ ಬಂದಿದ್ದ ದೋಗಣ್ಣನ ಹೆಂಡತಿಯ ತಮ್ಮ ಶೇಖರ ಚಳಿಗೆ ದೊಡ್ಡದಾದ ಟರ್ಕಿ ಟೆವೆಲ್ ಹೊದ್ದುಕೊಂಡು ಹೆಜ್ಜೆ ಹಾಕುತ್ತಿದ್ದ.

ಎರಡು ಮೂರು ಸಾಲು ಗೊಬ್ಬರ ಹರಡಿದ್ದ ಪದ್ದು ಕೋಣಗಳ ಕಡೆಗೆ ಓಡಿ ಬಂದ. ಕೋಣಗಳು ನೇರವಾಗಿ ಪದ್ದುವಿನ ಕೈಗೆ ತಮ್ಮ ಮೂಗುದಾರವನ್ನು ಅಣಿಸಿ, ಕೈಗಳನ್ನು ನೆಕ್ಕತೊಡಗಿತು.

ಸಂಜೆಯ ಹೊತ್ತು ಗುರಿಕಲ್ಲಿನಲ್ಲಿ ತೌಡು ಬೆರಸಿದ ಹುರುಳಿಯನ್ನು ಒನಕೆಯಿಂದ ಕುಟ್ಟಿ ಹದ ಮಾಡಿ ಕೈಯಾರೆ ಹಿಡಿದು ತಿನ್ನಿಸುತ್ತಿದ್ದ ಪದ್ದುವಿನ ಕೈಗಳು ಕೋಣಗಳಿಗೆ ಆಪ್ಯಾಯಮಾನವಾಗಿದ್ದವು.

ಶಂಕರ ನೊಗ ಎತ್ತಿಕೊಂಡು ಬಂದು ಹೂಡಿದ. ನೇಗಿಲು ಕಟ್ಟಿದ ಪದ್ದು ಭೂಮಿತಾಯಿಗೆ ವಂದಿಸಿ. ಸಾಲು ಹಿಡಿದು ಉಳುವುದಕ್ಕೆ ಆರಂಭಿಸಿದ. ಎರಡು ಸುತ್ತು ಉತ್ತು ಮಾವ ದೋಗಣ್ಣನಿಗೆ ಪುಡ್ಕಯಿ ಹಸ್ತಾಂತರಿಸಿ ಗೊಬ್ಬರದ ಕುಪ್ಪೆಗಳ ಕಡೆಗೆ ನಡೆದ.

ಗದ್ದೆಯ ಕಲರವದಿಂದ ಬೆದರಿದ ಅಡಗಿದ್ದ ಮಾರುದ್ದದ ನೀರೊಳ್ಳೆ ದೂರ ಸಾಗತೊಡಗಿತು. ಅದರ ಕಡೆಗೆ ಓಡಿದ ಪದ್ದು ಪಕ್ಕನೆ ಅದರ ಬಾಲ ಹಿಡಿದು ಆಟವಾಡಿಸತೊಡಗಿದ. ಶೇಖರ ಗದ್ದೆ ಪುಣಿಯಲ್ಲಿದ್ದ ಉರಬಡು ಹಿಡಿದುಕೊಂಡು ಬಂದು ಅದರ ತಲೆಗೆ ಗುರಿ ಇಟ್ಟ.

‘ಬೇಡ.. ಬೇಡ ಮಾಮಾ... ಕೊಲ್ಲಬಾರದು. ಅದು ಏನೂ ಮಾಡುವುದಿಲ್ಲ... ಹೀಗೇ ಸುಮ್ಮನೆ...’ ಪದ್ದು ತಡೆದು ಅದನ್ನು ಬೀಸಿ ಒಗೆದ. ದೂರಕ್ಕೆ ಹಾರಿ ಬಿದ್ದ ಒಳ್ಳೇಹಾವು ಬದುಕಿದೆಯಾ ಬಡಜೀವವೇ ಎಂದು ಸರಸರನೆ ಹರಿದು ಹೋಯಿತು.

ಶೇಖರ ಪದ್ದುವಿನ ಧೈರ್ಯ ಕಂಡು ದಂಗು ಬಡಿದು ನಿಂತ.

‘ಅವ ಹಾಗೇ ಮಾವ... ಒಳ್ಳೆ, ಕಪ್ಪೆ, ಕೇರೆ, ಪೆರ್ಮರಿ ಒಂದನ್ನೂ ಬಿಡುವುದಿಲ್ಲ. ಮೊನ್ನೆ ನಾಗರ ಹಾವಿನ ಬಾಲ ಹಿಡಿದಿದ್ದ’ ಎಂದ ಶಂಕರ.

‘ನಾನು ಆಡುವುದು ಮಾತ್ರ ಆಯ್ತಾ... ಒಂದನ್ನೂ ಇಷ್ಟರವರೆಗೆ ಕೊಂದಿಲ್ಲ ಆಯ್ತಾ...’ ಎಂದ ಪದ್ದು.

ಪದ್ದು, ಶಂಕರ ಸರಸರನೆ ಗೊಬ್ಬರ ಬೀಸಿ ಬೀಸಿ ಒಗೆದರು.

ಬೈಲ್ ವಾಸು ಆತನ ಅಪ್ಪನ ಜತೆ ಕೋಣ ಹೊಡೆದುಕೊಂಡು ಬಂದು ಹೂಡಿದ. ಎರಡು ಜತೆ ಕೋಣ ಗದ್ದೆ ಉಳಲಾರಂಭಿಸಿತು.

ಎಳೂವರೆ-ಎಂಟು ಗಂಟೆಯಾಗುತ್ತಿದ್ದಂತೆ ನಾಟಿ ಹೆಂಗಸರು ಒಬ್ಬೊಬ್ಬರಾಗಿ ಬಂದು ಗದ್ದೆ ಇಳಿದರು. ಸುಮಾರು ಅರ್ಧದಷ್ಟು ಗದ್ದೆ ಹದವಾಗಿತ್ತು. ಪದ್ದು, ಶಂಕರ, ವಾಸು ಸೇರಿ ಉತ್ತು ಹಸನಾದ ಗದ್ದೆಗೆ ನೇಜಿಯ ಸೂಡಿ ಹರಡಿದರು. ನಾಟಿ ಆರಂಭವಾಗಿತ್ತು.

ದೂರದಲ್ಲಿ ಬಟವಾಡೆ ಮಾಡುವ ಕಾಗದ ಪತ್ರ ತರಲು ಪೋಸ್ಟ್ ಆಫೀಸ್‌ಗೆ ಹೋಗುತ್ತಿದ್ದ ಪೋಸ್ಟ್‌ಮೆನ್ ಕುಂಞಣ್ಣನ ತಲೆ ಕಂಡ ಪದ್ದು ‘ಹೊತ್ತಾಯ್ತು ಶಂಕರ ಓಡು’ ಎಂದ.  ಪದ್ದು, ಶಂಕರ ಒಂದೇ ಉಸಿರಿಗೆ ಗದ್ದೆಯಿಂದ ಮನೆಗೆ ಓಡಿದರು.

‘ಪಾಪ, ಮಕ್ಕಳಿಗೆ ಶಾಲೆಗೆ ಹೊತ್ತಾಯ್ತು...’ ಗದ್ದೆ ಉಳುತ್ತಲೇ ಶೇಖರನನ್ನು ಉದ್ದೇಶಿಸಿ ದೋಗಣ್ಣ ಹೇಳಿದ.

ಪದ್ದುವಿನ ನಿಂತಲ್ಲಿ ನಿಲ್ಲದ ಉರಿಮೆನ್‌ತನ ನೋಡಿದ ಶೇಖರ ‘ಇವನೇ ತನಗೆ ತಕ್ಕ ಹುಡುಗ’ ಎಂದು ಮನದಲ್ಲೇ ಯೋಚಿಸಿದ.

‘ಈ ಸಲ ಇಬ್ಬರದ್ದೂ ಹತ್ತನೇ ಆಗುತ್ತದೆ ಅಲ್ವಾ... ಬೇಸ, ಪತ್ತನಾಜೆಗೆ ಹೊತ್ತಿಗೆ ಬರುತ್ತೇನೆ. ಪದ್ದುವನ್ನು ನನ್ನ ಜತೆ ಕಳುಹಿಸಿಕೊಡಬೇಕು ಬಾವ...’ ದೀಪಾವಳಿ ಕಳೆದು ಮುಂಬೈಗೆ ಹೊರಟು ನಿಂತ ಶೇಖರನ ಮಾತು ಕೇಳಿ ದೋಗಣ್ಣ ಅವಕ್ಕಾದ.

‘ಶ್ರೀಧರ, ಶಂಭುವನ್ನು ನಿನ್ನ ಜತೆ ಕಳಿಸಿದ್ದಲ್ವಾ.. ಈಗ ಪದ್ದು ಕೂಡಾ ಬೇಕಾ...?’ ಅಂದ ದೋಗಣ್ಣ.

ಅವರಿಬ್ಬರು ಸ್ವಂತ ತಂಗಿಯ ಮಕ್ಕಳು. ಅವರನ್ನು ಕೈಕಾಲು ಕೊಳೆತು ನಂಜಿ ತಿನ್ನುವ ಹಾಗೆ ಕೊಪಸ್ ತೊಳೆಯಲು ಮೋರಿಯಲ್ಲಿ ಹಾಕುವುದಕ್ಕೆ ಆಗುತ್ತದಾ? ಅದೂ ಅಲ್ಲದೆ ಮಾವ ಎಂಬ ಸಲಿಗೆ ಬೇರೆ ಯಾವುದಕ್ಕೂ ಬಗ್ಗುವುದಿಲ್ಲ. ಮಾಡಿದ್ದೇ ಕೆಲಸ... ಪದ್ದು ಹಾಗಲ್ಲ. ಸ್ವಲ್ಪ ದೂರ ಸಂಬಂಧ. ಜತೆಗೆ ಚಾಲಾಕಿ ಹುಡುಗ. ಸುಲಭವಾಗಿ ಬಗ್ಗಿಸಬಹುದು. ಮೋರಿಗೆ ತಕ್ಕ ಹುಡುಗ... ಎಂದು ಮನದಲ್ಲೇ ಯೋಚಿಸುತ್ತಿದ್ದ ಶೇಖರ ಕ್ಷಣಕಾಲ ಸುಮ್ಮನಿದ್ದು,

‘ಅವರಿಬ್ಬರು ಮುಂಬೈಯಲ್ಲಿ ಕಾಲೇಜಿಗೆ ಹೋಗ್ತಾ ಇದ್ದಾರಲ್ಲವಾ.. ನಾನೇನೂ ಕಮ್ಮಿ ಮಾಡಿಲ್ಲ. ಮುಂಬೈಯಲ್ಲಿ ಇದ್ದರೆ ನಾಲ್ಕು ಕಾಸು ಕಮಾಯಿಸಬಹುದು. ಇಲ್ಲಿ ಏನುಂಟು ಕೆಸರು ಪೊರೆಂಚುವುದು ಅಷ್ಟೇ ಅಲ್ವಾ...? ಹೆಣ್ಣು ಮಕ್ಕಳಿಗೆ ಮದುವೆ ಮಾಡುವುದಕ್ಕೆ ಖರ್ಚಿ ಇಲ್ವಾ? ಶಂಕರ ನಿಮಗೆ ಸಹಾಯಕ್ಕೆ ಇರಲಿ. ಪದ್ದುವನ್ನು ಕರ‍್ಕೊಂಡು ಹೋಗುತ್ತೇನೆ...’ ಎಂದ.

ಶೇಖರನ ಮಾತು ದೋಗಣ್ಣನಿಗೂ ಸರಿ ಅನಿಸಿತು.

‘ಯಾವುದಕ್ಕೂ ಪತ್ತನಾಜೆ ಹೊತ್ತಿಗೆ ಬಾ. ನೋಡುವ..’ ಎಂದರು.

ಇವರ ಮಾತನ್ನು ಕೇಳಿದ ದೋಗಣ್ಣನ ತಂಗಿ, ಪದ್ದುವಿನ ಅಮ್ಮ ದೇವಕಿಯ ಎದೆ ಧಸಕ್ಕೆಂದಿತು. ‘ಗಂಡ ಅಂತು ಲೆಕ್ಕಕ್ಕೆ ಸಿಗುವುದಿಲ್ಲ. ಎಲ್ಲಿದ್ದಾನೆ ಅಂತ ಗೊತ್ತಿಲ್ಲ. ಇನ್ನು ಮಗನನ್ನೂ ಪರವೂರಿಗೆ ಕಳುಹಿಸಿದರೆ...? ಪ್ರಾಯ ಕಳೆದಾಗ ನನಗೆ ಯಾರು ದಿಕ್ಕು...?’ ಅವಳ ಕಣ್ಣುಗಳು ಮಂಜಾಗಿತ್ತು.

ಪದ್ದು ಮುಂಬೈಗೆ ಹೋಗದೆ ಊರಲ್ಲೇ ಉಳಿದರೆ ಪತ್ತನಾಜೆ ಅಗೆಲಿಗೆ ತೆಂಗಿನ ಕಾಯಿ ಒಡೆಸುತ್ತೇನೆ ಎಂದು ದೇವಕಿ ತಲೆಸ್ನಾನ ಮಾಡಿ, ಕಣ್ಣೀರು ಇಳಿಸುತ್ತಾ ಮನಪೂರ್ವಕ ದೈವವನ್ನು ನೆನೆದಳು.

ದಿಂಡ್ ಕಳೆದು ಆಟ, ಕೋಲ-ಬಲಿ, ನೇಮ, ಜಾತ್ರೆ, ಕೋರ‍್ದಟ್ಟ, ಕಂಬುಲ ಅಂತ ದಿನ ಸರಾಗವಾಗಿ ಓಡಿ ಪತ್ತನಾಜೆ ಬಂದದ್ದೇ ಗೊತ್ತಾಗಲಿಲ್ಲ.

ಬೇಸ ಸಂಕ್ರಮಣಕ್ಕೆ ಸರಿಯಾಗಿ ಶೇಖರ ಬಂದಿಳಿದ.

ಪದ್ದುವನ್ನು ಕರೆದುಕೊಂಡು ಹೋಗಲು ಬ್ಯಾಗ್, ಬಟ್ಟೆಬರೆ ಎಲ್ಲವನ್ನು ಹಿಡಿದುಕೊಂಡೇ ಬಂದಿದ್ದ.

ಪದ್ದು ಮುಂಬೈಗೆ ಹೋಗುತ್ತಾನೆ ಎಂದು ಗೊತ್ತಾದ ದೋಗಣ್ಣನ ಹೆಂಡತಿಯ ಮೆದುಳಿಗೆ ಹುಳು ಹೊಕ್ಕಿಬಿಟ್ಟಿತು.

ಹೇಗೂ ಭೂಮಿ ಗಂಡನ ಹೆಸರಿಗೆ ಆಗಿದೆ. ಮಕ್ಕಳು ಪರವೂರಿಗೆ ಹೋಗಿ ಹಣ ಸಂಪಾದಿಸಿದರೆ ಎಲ್ಲವೂ ತನ್ನ ಮಕ್ಕಳಿಗೆ ಸಿಕ್ಕ ಹಾಗೆ. ಅವ ಪದ್ದು ಹಿಂದಿಲ್ಲ, ಮುಂದಿಲ್ಲ. ಒಂಟಿ ಭೂತ. ಅವ ಇಲ್ಲೇ ಇದ್ದರೆ ಒಳ್ಳೆಯದು. ಕೆಲಸ ಮಾಡುವುದರಲ್ಲೂ ಎತ್ತಿದ ಕೈ. ಈ ಶೇಖರ ಶಂಕರನನ್ನು ಕರೆದುಕೊಂಡು ಹೋಗುವ ಬದಲು ಪದ್ದುವನ್ನು ಏಕೆ ಬಯಸಿದ?

ಮಕ್ಕಳು, ದೇವಕಿ ಇಲ್ಲದ ವೇಳೆ ಗಂಡ, ಶೇಖರನ ತಲೆ ತಿನ್ನತೊಡಗಿದಳು. ಶಂಕರನನ್ನೇ ಕರೆದುಕೊಂಡು ಹೋಗಬೇಕು ಎಂದು ಹಠ ಹಿಡಿದಳು.

‘ಬೇರೆಯವರನ್ನು ದುಡಿಸಿದ ಹಾಗೆ ನಿನ್ನ ಮಕ್ಕಳನ್ನು ದುಡಿಸುವುದಕ್ಕೆ ಆಗುವುದಿಲ್ಲ...’ ಎಂದು ಶೇಖರ ಎಷ್ಟೇ ಹೇಳಿದರೂ ಕೇಳಲಿಲ್ಲ. ‘ಅದಕ್ಕೆ ಬೇರೆ ಜನ ಮಾಡು’ ಎಂದಳು.

ಶಂಕರ ಮುಂಬೈಗೆ ಹೋಗುವಂತಾದರೆ ದೈವಕ್ಕೆ ಕಾಯಿ ಒಡೆಸುತ್ತೇನೆ ಎಂದು ಮನಪೂರ್ವ ಹರಕೆ ಹೇಳಿಕೊಂಡಳು.

‘ನೋಡು ಶೇಖರ... ಪದ್ದು ನಿನ್ನ ಜತೆ ಬಂದರೆ ನನ್ನ ನಂತರ ಇಲ್ಲಿ ದೈವಕ್ಕೆ ಹೂ ನೀರು ಇಡುವವರು ಯಾರು? ಅದಕ್ಕೆ ಮಕ್ಕಳು ಆಗುವುದಿಲ್ಲ. ಕುಟುಂಬದವರೇ ಆಗಬೇಕು. ನಿನಗೆ ಕಟ್ಟುಕಟ್ಲೆ ಗೊತ್ತಲ್ಲ.. ಬೇಕಾದರೆ ಶಂಕರನನ್ನು ಕರೆದುಕೊಂಡು ಹೋಗು’ ದೋಗಣ್ಣ ನಿರ್ಧಾರ ಪ್ರಕಟಿಸಿದ.

ಪತ್ತನಾಜೆಯ ಮುಂಚಿನ ದಿನ ಪದ್ದುವಿಗಾಗಿ ತಂದಿದ್ದ ಬ್ಯಾಗನ್ನು ಹಿಡಿದುಕೊಂಡು ಶಂಕರ ಮಾವ ಶೇಖರನ ಜತೆ ಗಾಡಿಗಾಪಟೇಲ್ ಬಸ್ಸು ಹತ್ತಿದ. 'ಹೇಳಿ ಸಿಕ್ಕಿಬಿದ್ದಾಗಿದೆ. ಅಲ್ಲಿ ಇವನೊಂದು ಹೊರೆ' ಎಂದು ಶೇಖರ ಮನದಲ್ಲೆ ಮುನ್ಕಿದ.

ಮುಂಬೈಗೆ ಕಳುಹಿಸುತ್ತಾರೆ ಎಂಬ ಸುದ್ದಿ ಸಿಕ್ಕಿ ಹೊಸ ಊರು ನೋಡುವ ಖುಷಿಯಲ್ಲಿ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಿದ್ದ ಪದ್ದು ಕುಸಿದು ಕುಳಿತ. ಏಕಾಂತದಲ್ಲಿ ಕಣ್ಣೀರು ಸುರಿಸಿದ.

ದೇವಕಿ ಪದ್ದುವನ್ನು ಅಪ್ಪಿ ಹಿಡಿದು ತಲೆ ನೇವರಿಸುತ್ತಾ ಅತ್ತು ಬಿಟ್ಟಳು.

ದೈವದ ಕಲ್ಲಿಗೆ ಪತ್ತನಾಜೆಯ ಧೂಪ ಕೊಡುವಾಗ ತಂಗಿ-ಹೆಂಡತಿ ಪ್ರತ್ಯೇಕ ಪ್ರತ್ಯೇಕವಾಗಿ ತಂದಿಟ್ಟ ತೆಂಗಿನ ಕಾಯಿ ನೋಡಿ ದೋಗಣ್ಣ ಆಶ್ಚರ್ಯ ಚಕಿತನಾದ.

ಮುಂದಿನ ಭಾಗ - *ಮುಂಬ್ರಾ ಪೊಲೀಸ್ ಠಾಣೆಯಲ್ಲಿ ಕೋಳಿ ಕಾಳಗ*

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ