‘ನಾಡದ್ದು ಸಂಕ್ರಾಂತಿ ಕಳೆದು ಶನಿವಾರಕ್ಕೆ ದರ್ಶನ. ಬಾಡು ಪೂಜಾರಿ ದಿನ ಕೊಟ್ಟಿದ್ದಾರೆ. ವಾದ್ಯದ ನಾಗಪ್ಪಣ್ಣನಿಗೂ ಪುರ‍್ಸೊತ್ತು ಉಂಟಂತೆ. ಮದಿಪಿಗೆ ನೀವೇ ಇದ್ದೀರಲ್ಲಾ’
ಮನೆಯ ಮೊಗಂಟೆಯಲ್ಲಿ ನಿಂತ ಪದ್ದು ಮಾವನನ್ನುದ್ದೇಶಿಸಿ ನುಡಿದ.
ಎಲೆ ಅಡಿಕೆ ಹರಿವಾಣದ ಮುಂದೆ ಕುಳಿತಿದ್ದ ದೋಗಣ್ಣ ಅವಕ್ಕಾದ.
ಸುಮಾರು ಆರು ತಿಂಗಳಿಂದ ದರ್ಶನ ಮಾಡಬೇಕು ಎಂದು ಹೇಳುತ್ತಿದ್ದರೆ ಇವ ಪದ್ದು ‘ಯಾವ ಕರ್ಮಕ್ಕೆ ದರ್ಶನ, ನಮ್ಮ ಕುಟುಂಬ ಸರಿ ಉಂಟು’ ಎಂದು ಹೇಳುತ್ತಿದ್ದವ ಈಗ ಇದ್ದಕ್ಕಿದ್ದಂತೆ ಶನಿವಾರ ದರ್ಶನ ದಿನ ಆಗಿದೆ ಅಂತಾ ಇದ್ದಾನಲ್ಲ.. ನಂಬುದಕ್ಕೆ ಆಗುವುದಿಲ್ಲ, ಏನೋ ಪೆದಂಬು ಇರಬೇಕು ಎಂದು ಭಾವಿಸಿದ ದೋಗಣ್ಣ.
‘ಅವ ಬಾಡು ಮುದುಕ ಅಲ್ವಾ... ಅವನ ಅರುವತ್ತ ಈಗ ದರ್ಶನ ಮಾಡುವುದಲ್ವಾ?’ ಬಾಯಿಗೆ ಅಡಿಕೆ ಪೂಲ್ ಹಾಕುತ್ತಾ ಅಂದ ದೋಗಣ್ಣ.
‘ಬಾಡು ಪೂಜಾರಿಗೆ ತಾಖತ್ತು ಇದೆ. ದರ್ಶನ ದೊಡ್ಡದೇನಲ್ಲ. ಪಂಜುರ್ಲಿಗೆ ಮಾತ್ರವಲ್ಲವಾ? ಬೇಕಾದರೆ ಅವರ ಅರ್ವತ್ತ ಕುಮಾರನಿಗೆ ನೀವೇ ಹೇಳಿ’ ಎಂದ ಪದ್ದು.
ಬಾಡು ಪೂಜಾರಿಯದ್ದು ಮಾತು ಅಂದರೆ ಸುಣ್ಣದ ಬೊಟ್ಟೇ ಹೌದು. ಆದರೆ ಇವ ಕಿವಿ ಊದಿದರೆ ಎಂದು ಜನ ಬದಲಾಯಿಸುವ ತಂತ್ರ ಹೂಡಿದ ದೋಗುವಿಗೆ ಪದ್ದು ಬಾಡು ಪೂಜಾರಿಗೆ ಏನೂ ಹೇಳಿಕೊಟ್ಟಿಲ್ಲ ಎಂದು ಖಾತ್ರಿಯಾಯಿತು.
ಶನಿವಾರ ಬಂತು. ದೋಗಣ್ಣನ ಕುಟುಂಬದವರು, ದರ್ಶನಕ್ಕೆ ಸಂಬಂಧಪಟ್ಟ ಗುತ್ತು ಮನೆತನ, ಜಾಗದವರು. ಚಾಕರಿಯವರು ಬಂದು ಸೇರಿದ್ದರು.
ದರ್ಶನದ ವಿಧಿವಿಧಾನ ಆರಂಭವಾಯಿತು. ದೋಗಣ್ಣ ಸುಂದರವಾಗಿ ಮದಿಪು ಹೇಳಿದ. ನಾಗಸ್ವರ ಉಲಿಯಿತು. ತಾಸೆ, ಡೋಲು ಧ್ವನಿಸಿತು. ಸೇರಿದವರ ಹೂಮಳೆಯಲ್ಲಿ ದೈವ ಮಾಯಬಿಟ್ಟು ಮಾನಿಯ ಮೇಲಾಯಿತು.
ಜಾಗ, ಜಾಗದವರನ್ನು ವಿಚಾರಿಸಿದ ಪಂಜುರ್ಲಿ ನೇರವಾಗಿ ವಿಷಯಕ್ಕೆ ಬಂತು.
‘ಉಂಡು ಮಾಡಿದ ಕಾರಣವೇನು?’ ಎಂದು ಕೇಳಿತು.
‘ನನ್ನ ಮಗನಿಗೆ ಮುಂಬೈಯಲ್ಲಿ ವ್ಯಾಪಾರ ಹಿಡಿಸುತ್ತಿಲ್ಲ. ಜಾಗ, ಮನೆ ದೈವದಲ್ಲಿ ಕೇಳಿ ನೋಡಿ ಎಂದು ಪ್ರಶ್ನೆಯಲ್ಲಿ ಕೇಳಿ ಬಂತು ಅದಕ್ಕೆ ದರ್ಶನ.
ಮತ್ತೆ ನನಗೆ ಪ್ರಾಯ ಆಯಿತು ಮುಂದಕ್ಕೆ ಪದ್ದುವಿಗೆ ಹೂ ನೀರು ಇಡುವುದಕ್ಕೆ ಅಭಯ ಬೇಕು’ ಎಂದ ದೋಗಣ್ಣ.
'ನಿನ್ನ ಮಗನಿಗೆ ಮಾಯದ ಅಭಯ ಹೊರತು ಇನ್ನೇನೂ ನಾನು ಹೇಳುವುದಿಲ್ಲ. ಸಂಸಾರ ಮಂಜೊಟ್ಟಿ ಗುತ್ತಿನದ್ದು ಅಲ್ಲ. ಅವರ ಮನೆಯ ದೈವ ದರ್ಶನ ಮಾಡಿ ಕೇಳಲಿ' ಎಂದು ತಟ್ಟನೆ ನುಡಿಯಿತು ಪಂಜುರ್ಲಿ.
‘ನಾನು ಅದನ್ನೇ ಹೇಳುತ್ತಿದ್ದದ್ದು, ಶ್ರೀಧರನಿಗೆ ಮುಂಬೈ ವ್ಯಾಪಾರ ಹಿಡಿಯದೇ ಇದ್ದರೆ ನಮ್ಮ ಮನೆಯ ದೈವದಲ್ಲಿ ಕೇಳುವುದೇನು? ಅವನ ಮನೆಯ ದೈವವನ್ನು ಉಂಡು ಮಾಡಲಿ ಅಂತ. ಮಾವ ಕೇಳಬೇಕಲ್ಲ...ಕುಟುಂಬದ್ದು ಏನಾದರೂ ಇದ್ದರೆ ಹೇಳಿ’ ಎಂದು ಕೋಪದಲ್ಲಿ ಹೇಳಿದ ಪದ್ದು.
‘ಸಂಸಾರ ಬಂದಿದೆಯಾ? ಇಲ್ಲಿ ಇದೆಯಾ?’ ಎಂದಿತು ಪಂಜುರ್ಲಿ.
ಇಲ್ಲ ಎಂದ ದೋಗಣ್ಣ.
‘ದಂಡಿನ ರಾಜ್ಯದಲ್ಲಿರುವ ಬಂಧುವಿಗೆ ಮಾಯದ ಅಭಯ ನೀಡಬೇಕಲ್ಲಾ...? ಧರ್ಮ, ನ್ಯಾಯ, ನೀತಿ ಬಿಟ್ಟು ನಡೆಯದಂತೆ ಹೇಳಿ. ಪ್ರಸಾದವನ್ನು ಕಳುಹಿಸಿಕೊಡಿ. ಒಳ್ಳೆದಾಗುತ್ತದೆ’ ಎಂದ ಪಂಜುರ್ಲಿ ಗಂಧಕ್ಕೆ ಖಡ್ಸಲೆ ಮುಟ್ಟಿಸಿ ದೋಗಣ್ಣನ ಕೈಗೆ ನೀಡಿತು.
ಪದ್ದುವಿಗೆ ಹೂ ನೀರು ಇಡುವ ಜವಾಬ್ದಾರಿ ಕೊಡುವ ಪ್ರಸ್ಥಾಪ ಪಂಜುರ್ಲಿ ಮುಂದೆ ಬಂತು.
ಇದಕ್ಕಾಗೇ ಕಾಯುತ್ತಿದ್ದ ಪದ್ದು. ಹೂ- ನೀರು ಇಡುವ ಜವಾಬ್ದಾರಿ ತನ್ನಿಂದ ಆಗುವುದಿಲ್ಲ ಎಂದ.
‘ಯಾಕೆ? ಸಂಸಾರದ ಅಸಮಾಧಾನ ಏನು?’ ಪ್ರಶ್ನಿಸಿತು ಪಂಜುರ್ಲಿ.
‘ಇಲ್ಲಿ ನನಗೇನೂ ಇಲ್ಲ. ದುಡಿಯುವುದು, ಹೊಟ್ಟೆ ತುಂಬಿಸುವುದು. ಭೂಮಿಯಲ್ಲಿ ನನಗೆ ಯಾವುದೇ ಪಾಲಿಲ್ಲ. ಎಲ್ಲಾ ಮಾವನ ಮಕ್ಕಳಿಗೆ. ಬೈಲು, ಬೆಟ್ಟು, ಗುಡ್ಡೆಯಲ್ಲಿ ಸರಿಯಾಗಿ ಪಾಲು ನನ್ನ ಹೆಸರಿಗೆ ಆಗಲಿ ಆಗ ಹೂ ನೀರು ಇಡಲು ಊರಲ್ಲಿ ಇರುತ್ತೇನೆ. ಇಲ್ಲದೇ ಇದ್ದರೆ ಇಲ್ಲ’ ಎಂದ ಪದ್ದು.
ದೈವ ಹೂಂಕರಿಸಿತು. ಆಕಾಶ ನೋಡಿ ಕಣ್ಣು ಹೊರಳಿಸಿತು.
‘ಒಂದು ಕಾಲದಲ್ಲಿ ದಂಡಿನ ರಾಜ್ಯಕ್ಕೆ ಹೊರಡಲು ಪೊದಿಕೆ (ಗಂಟು) ಕಟ್ಟಿದ್ದ ಸಂಸಾರವನ್ನು ನಿಲ್ಲಿಸಿದ್ದು ಯಾರು? ನನಗೆ ಬೇಕಾದ ಸಂಸಾರವನ್ನು ನಾನು ನಿಲ್ಲಿಸಿದ್ದೇನೆ’ ದೈವ ನುಡಿಯಿತು.
ಪದ್ದು ರೋಮಾಂಚಿತನಾದ.
ತನಗೆಂದು ಶೇಖರ ತಂದಿದ್ದ ಬ್ಯಾಗ್ ಹಿಡಿದು ಶಂಕರ ಮುಂಬೈ ಸೇರಿದ್ದ ಘಟನೆ ಮನಪಟಲದಲ್ಲಿ ತೇಲಿ ಬಂತು...
‘ಹೌದು... ಹೌದು... ಅದು ಹೌದು’ ಎಂದ ದೋಗಣ್ಣ.
ಸೇರಿದ್ದ ಸಭಿಕರು 'ಇದೇನು ಮಾಯದ ಕತೆ?' ಎಂದು ಕುತೂಹಲಗೊಂಡರು.
ಪದ್ದುವಿನ ರೋಮಾಂಚನ ಹೆಚ್ಚು ಕಾಲ ನಿಲ್ಲಲಿಲ್ಲ. ಬಾಡು ಪೂಜಾರಿ ಅಂಗಳ ಏರಿದ ಕೂಡಲೇ ಅವರ ಎರಡೂ ಕೈ ಹಿಡಿದು ‘ನನ್ನನ್ನು ಸೋಲಿಸಬಾರದು’ ಎಂದು ದೋಗಣ್ಣ ಪ್ರಾರ್ಥಿಸಿಕೊಂಡದ್ದು, ‘ನಾವು ಚಾಕರಿಯವರು ದೋಗಣ್ಣ... ಸೋಲಿಸುವುದು ಗೆಲ್ಲುಸುವುದು ಮಾನಿಯಲ್ಲ ಮಾಯೆ..’ ಎಂದು ಎರಡೂ ಕೈ ಎತ್ತಿ ಆಕಾಶ ನೋಡುತ್ತಾ ಬಾಡು ಪೂಜಾರಿ ಹೇಳಿದ್ದು ನೆನಪಿಗೆ ಬಂತು.
ಇದು ಹೇಳಿಕೊಟ್ಟ ಮಾತು ಎಂದು ಭಾವಿಸಿಕೊಂಡ ಪದ್ದು.
‘ಭೂಮಿ ಬಂದರೆ ನಾನಿದ್ದೇನೆ. ಇಲ್ಲದೇ ಇದ್ದರೆ ಬ್ಯಾಗ್ ತಯಾರು ಮಾಡಿಯೇ ಇಟ್ಟುಕೊಂಡಿದ್ದೇನೆ. ಈ ಸಲ ಸಾಗುವಳಿ ಮುಗಿಸಿ ಹೋದವ ಮತ್ತೆ ಬರುವುದಿಲ್ಲ’ ಎಂದು ಖಚಿತವಾಗಿ ಪದ್ದು ನುಡಿದ.
‘ಯಜಮಾನ ಏನು ಹೇಳುತ್ತಾನೆ?’ ಎಂದು ದೈವ ದೋಗಣ್ಣನನ್ನು ಪ್ರಶ್ನಿಸಿತು.
'ಬೈಲು, ಬೆಟ್ಟು ಸರಿಪಾಲು ಕೊಡುವುದಕ್ಕೆ ಆಗುವುದಿಲ್ಲ. ಯಾವ ಪಾಲು ಕೊಡುದಕ್ಕೂ ಮಕ್ಕಳು ಒಪ್ಪುವುದಿಲ್ಲ. ಗುಳಿಗ ಜೋರ ಮೂರು ಎಕ್ರೆ ಇದೆ ಮಕ್ಕಳನ್ನು ಎದುರು ಹಾಕಿಕೊಂಡು ಅದನ್ನು ಕೊಡುತ್ತೇನೆ ಎಂದರೆ ಪದ್ದು ಸಿಪಾಯಿಗಿರಿ ಮಾತಾಡುತ್ತಾನೆ. ಅದನ್ನು ಕೊಡುತ್ತೇನೆ’ ಎಂದ ದೋಗಣ್ಣ.
‘ಅ ಕಲ್ಲು ಮುಳ್ಳು ತುಂಬಿದ ಯಾವುದಕ್ಕೂ ಪ್ರೇಜನ ಇಲ್ಲದ ಸುಡುಗಾಡು ಗುಡ್ಡ ಬೇಡ ಎಂದು ಮೊದಲೇ ಹೇಳಿದ್ದೇನೆ. ಅದು ಅವರ ಮಕ್ಕಳಿಗೇ ಇರಲಿ’ ಎಂದು ಕೋಪದಿಂದ ಉತ್ತರಿಸಿದ ಪದ್ದು.
'ಒಂದು ಕಾಲದಲ್ಲಿ ಸ್ವಂತವಾಗಿದ್ದ ಮಂಜೊಟ್ಟಿ ಗುತ್ತನ್ನು ಹೊಟ್ಟೆ ಗುಜಾರ್ಮೆಗಾಗಿ ಸಂಸಾರ ಬೇರೆಯವರ ಪಾಲು ಮಾಡಿತ್ತು. ಅದನ್ನು ಮತ್ತೆ ಖರ್ಚು ಇಲ್ಲದೆ ಮಂಜೊಟ್ಟಿ ಗುತ್ತಿನ ಸಂಸಾರದ ಹೆಸರಿಗೆ ಮಾಡಿಸಿದ ದೈವ ನಾನು. ಯಜಮಾನನಿಗೆ ಗೋಚರ ಉಂಟಾ..?' ದೈವ ಕೇಳಿತು.
'ಹೌದು... ಹೌದು... ಬೆದ್ರದವರಿಗೆ ಅಡವು ಹಾಕಿದ ಮಂಜೊಟ್ಟಿ ಗುತ್ತು ಸಾಲ ತೀರಿಸಲಾಗದೆ ಅವರ ಕೈ ವಶ ಆಗಿತ್ತು. ಮತ್ತೆ ಗೇಣಿ ಚೀಟಿ ಆಧಾರದಲ್ಲಿ ನನ್ನ ಹೆಸರಿಗೆ ಡಿಕ್ಲರೇಶನ್ ಆಯಿತು...' ದೋಗಣ್ಣ ಹೇಳಿದ.
'ಮತ್ತೆ ಯಜಮಾನನಿಗೆ ಮಣ್ಣಿನ ಮೇಲೆ ಲೋಭವೇ? ದೈವ ಮೇಲೋ.. ಭೂಮಿ ಮೇಲೋ' ದೈವ ಪ್ರಶ್ನಿಸಿತು.
'ಇಲ್ಲ. ಅವ ಕೇಳಿದ್ದು ಕೊಡುವುದಕ್ಕಾಗುವುದಿಲ್ಲ. ನಾನು ಕೊಟ್ಟದ್ದು ತೆಗೆದುಕೊಳ್ಳಲಿ' ದೋಗಣ್ಣ ಹಠ ಹಿಡಿದ.
ದೈವ ವಾದ್ಯ ನುಡಿಸಲು ಹೇಳಿತು. ದರ್ಶನ ತಾರಕಕ್ಕೇರಿತು.
ಮೂರು ವೀಳ್ಯದ ಎಲೆಗಳನ್ನು ದೈವ ಮೇಲಕ್ಕೆ ಹಾರಿಸಿ ಶಕುನ ನೋಡಿತು. ಆಕಾಶ ದಿಟ್ಟಿಸಿ ಅಬ್ಬರಿಸಿತು...
‘ಗುಳಿಗ ಜೋರ ನೀನು ಪಡೆದುಕೊಳ್ಳಬೇಕು. ಮೂರು ದಿನದ ಒಳಗೆ ಯಜಮಾನ ಅದನ್ನು ದಾಖಲೆ ಪತ್ರ ಮಾಡಿಕೊಡಬೇಕು. ನೀನು ಅದನ್ನು ಮಾರಿ ತಿನ್ನಬಾರದು, ಮುರಿದು ತಿನ್ನಬೇಕು. ಸಾಗುವಳಿ ಮುಗಿದು ನೀನು ದಂಡಿನ ರಾಜ್ಯಕ್ಕೆ ಹೊರಡುವ ದಿನ ಬರುವುದರ ಒಳಗೆ ಸೋಲು - ಗೆಲವು ನಿನಗೆ ತಿಳಿಯುತ್ತದೆ. ಗೆಲುವನ್ನು ಅರ್ಥಮಾಡಿಕೋ. ಸೋಲನ್ನು ದೂರ ದೂಡು. ಈ ಶಕುನ ಕಂಡ ಬಾರದೇ ಇದ್ದರೆ. ನಿನಗೆ ದಂಡಿನ ರಾಜ್ಯಕ್ಕೆ ಹೋಗಲೇ ಬೇಕು. ಅಲ್ಲೇ ಇರಬೇಕು ಅಂತ ಅನಿಸಿದರೆ ಹೋಗು... ತನ್ನ ಚಾಕರಿಯವನನ್ನು ಉಳಿಸಿಕೊಳ್ಳದೇ ಇರುವ ದೈವವನ್ನು ನೀನೇಕೆ ನಂಬಬೇಕು....ನನ್ನ ಮಾತು ನಡೆಯದೇ ಇದ್ದರೆ ನನಗೆ ಹೂ ನೀರೇ ಬೇಡ ಬೂಲ್ಯ ಹಿಡಿ’.
ಪಂಜುರ್ಲಿಯ ಕಂಚಿನ ಕಂಠದ ನುಡಿ ಕೇಳಿದ ನೆರೆದವರು ನಡುಗಿದರು...
ಬಾಡು ಪೂಜಾರಿ ನಾಲಗೆ ಹರಿತ ಮತ್ತು ಸತ್ಯ ಎಂಬುದು ಎಲ್ಲರಿಗೂ ಗೊತ್ತಿತ್ತು.
ಪದ್ದು ಮಂತ್ರಮುಗ್ಧನಂತೆ ದೈವದ ಎದುರು ಕೈ ಚಾಚಿ ನಿಂತ.
ಬಲದ ಕೈಯಲ್ಲಿ ಪದ್ದುವಿನ ಎರಡೂ ಕೈಯನ್ನು ಮೇಲೆತ್ತಿತು ಪಂಜುರ್ಲಿ. ಪದ್ದು ಕಣ್ಣೀರು ಸುರಿಸುತ್ತಿದ್ದ. ಪ್ರಸಾದ ಬೂಲ್ಯವನ್ನು ಖಡ್ಸಲೆಗೆ ತಾಗಿಸಿ ಪದ್ದುವಿನ ಕೈಗೆ ಹೂ ಹಿಂಗಾರದ ಜತೆ ನೀಡಿತು.
ದೈವ ಬಿರಿದಿತ್ತು.
ಬಾಡು ಪೂಜಾರಿಯನ್ನು ಬೀಳ್ಕೊಡಲು ಅವನೊಂದಿಗೆ ಪದ್ದು ತುಸು ದೂರ ನಡೆದ.
'ನನ್ನ ಮುಂಬೈಯ ಬ್ಯಾಗನ್ನು ಇನ್ನೊಬ್ಬರು ಕೊಂಡು ಹೋದದ್ದನ್ನು ನಿಮಗೆ ಯಾರು ಹೇಳಿದ್ದು?' ಎಂದು ನೇರವಾಗಿ ಬಾಡು ಪೂಜಾರಿಯಲ್ಲಿ ಪ್ರಶ್ನಿಸಿದ.
ಬಾಡು ಪೂಜಾರಿ ತುಸು ನಿಂತ. ಪದ್ದುವಿನ ತಲೆ ನೇವರಿಸಿದ.
‘ಮಾಯದ ಮದಿಪನ್ನು ಜೋಗದಲ್ಲಿ ಮಥಿಸಲು ಹೋಗಬೇಡ ಮಗಾ... ನಿನಗೆ ಒಳ್ಳೆದಾಗುತ್ತದೆ. ದೈವವನ್ನು ನಂಬಿ ನಡೆ' ಎಂದು ಮುನ್ನಡೆದ.
ದೋಗಣ್ಣ ತನ್ನ ಮನದ ಯೋಚನೆ ಫಲಿಸಿದ್ದನ್ನು ನೆನೆದು ಗೆಲುವಿನ ನಗೆ ಬೀರಿದ.
ಇಬ್ಬರು ಮುದುಕರು ತನ್ನ ಕತ್ತು ಕೊಯ್ದರು ಎಂದು ಪದ್ದು ಕುಗ್ಗಿ ಹೋದ.
ಭೂಮಿ ತನಗೆ ಕೊಟ್ಟದ್ದು ಮಾಯೆಯೋ? ಮಾನಿಯೋ? ಎಂಬ ಗೊಂದಲಕ್ಕೀಡಾದ.
ಮುಂದಿನ ಭಾಗದಲ್ಲಿ : ಮರೆತು ಹೋದ ದಂಡಿನ ರಾಜ್ಯ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ