12 - ನಡುರಾತ್ರಿ ಕಿರುಗೆಜ್ಜೆ ಧ್ವನಿ

ಪೆದಂಬು ನರಮಾನಿ (ಕಾದಂಬರಿ ಭಾಗ- 12)

ProfileImg
31 Jan '25
4 ನಿಮಿಷದ ಓದು


image

ನಡುರಾತ್ರಿ...

ರಾತ್ರಿ ಕೀಟ, ಜೀರುಂಡೆಗಳ ಕಿರುಗುಟ್ಟುವಿಕೆ.

ಎಲ್ಲೋ ದೂರದಲ್ಲಿ ನರಿ ಊಳಿಡುವ ಸ್ವರ.

ಅದನ್ನು ಅನುಸರಿಸಿ ನಾಯಿ ಬೊಗಳುವ ಸದ್ದು.

ಎದೆ ನಡುಗಿಸುವ ಕಗ್ಗತ್ತಲು.

ಮಂಜಿನ ಹನಿಗಳನ್ನು ಹೊದ್ದು ತಣ್ಣಗೆ ಮಲಗಿದ ಗುಳಿಗ ಜೋರ.

ಇಳಿಜಾರಲ್ಲಿ ಪದವಿನಿಂದ ಮಂಜೊಟ್ಟಿ ಗುತ್ತಿಗೆ ಸಂಪರ್ಕಿಸುವ ಕೊರಕಲು ಕಾಲು ದಾರಿ.

ಜಾನುವಾರು ಹಾಯದಂತೆ ದಾರಿಗೆ ಅಳವಡಿಸಿದ ತಡಮೆ.

ತಡಮೆಯಿಂದ ಸುಮಾರು ದೂರದಲ್ಲಿರುವ ಕಿತ್ತೆಸೆಯಲಾಗದಂತೆ ಹರಡಿದ ಪಾದೆ.

ಅದರ ಮೇಲೆ ತಲೆಗೆ ಹೆಡ್ ಲೈಟ್ ಕಟ್ಟಿಕೊಂಡು ಕುಳಿತು ಚಳಿಗೆ ಸಣ್ಣಗೆ ನಡುಗುತ್ತಿದ್ದ ಪದ್ದು.

ಪಕ್ಕದಲ್ಲಿ ಕಡ್ಪತ್ತಿ, ಕಠಾರಿ, ದೊಣ್ಣೆ...

‘ನೋಡು ನಡು ರಾತ್ರಿ ಬಿಳಿ ಸೀರೆ ಉಟ್ಟುಕೊಂಡು ಬೆಳ್ಳಗಿನ ಸುಂದರ ಹುಡುಗಿ ರೂಪದಲ್ಲಿ ತಲೆ ಕೂದಲು ಬೆನ್ನ ಮೇಲೆ ಮೊಣಕಾಲ ವರೆಗೆ ಬಿಡಿಸಿಕೊಂಡು ಕುಡ್ಪಲ್ ಭೂತ ಬರುತ್ತದೆ.

ಬೀಡಿ ಕೇಳುತ್ತದೆ. ಕೊಟ್ಟರೆ ಅದರ ಕೈ ಒಟ್ಟೆ. ಬೀಡಿ ನೆಲಕ್ಕೆ ಬೀಳುತ್ತದೆ.

ಹೆಕ್ಕಿ ಕೊಡಲು ಹೇಳುತ್ತದೆ. ಯಾವ ಕಾರಣಕ್ಕೂ ಹೆಕ್ಕಲು ಬಗ್ಗಬಾರದು. ಬಗ್ಗಿದರೆ ಜುಟ್ಟಲ್ಲಿ ಹಿಡಿದು ನೆಲಕ್ಕೆ ಬಡಿಯುತ್ತದೆ. ರಕ್ತಕಾರಿ ಸಾಯಬೇಕಾಗುತ್ತದೆ.

ಅದರ ಬದಲು ನೀನೇ ಹೆಕ್ಕು ಎಂದು ಹೇಳಬೇಕು. ಅದು ಹೆಕ್ಕಲು ಬಗ್ಗುತ್ತದೆ.

ಆಗ ಅದರ ಕೂದಲು ಕೈಯಲ್ಲಿ ಎರಡು ಸುತ್ತು ಹಾಕಿ ಗಟ್ಟಿಯಾಗಿ ಹಿಡಿದುಕೊಳ್ಳಬೇಕು.

ಅದು ಬಿಡು ಎನ್ನುತ್ತದೆ. ಎಷ್ಟು ಮಾತ್ರಕ್ಕೂ ಬಿಡಬಾರದು. ಬಿಟ್ಟರೆ ಕೊಲ್ಲುತ್ತದೆ.

ಅದು ಆಕಾಶಕ್ಕೆ ಹಾರುತ್ತದೆ. ನಾವು ಅದರ ಕೂದಲು ಬಿಡಲೇ ಬಾರದು. ಏಳು ಕಡಲು ಮುಳುಗಿ ಏಳುತ್ತದೆ. ನಾವು ಕೂದಲು ಬಿಡಬಾರದು.

ಮತ್ತೆ ಅದೇ ಸ್ಥಳಕ್ಕೆ ಬಂದು ಬಿಡು ಎಂದು ಬೇಡಿಕೊಳ್ಳುತ್ತದೆ. ‘ಬಿಟ್ಟರೆ ಏನು ಕೊಡುತ್ತಿ?’ ಎಂದು ಕೇಳಬೇಕು.

‘ನಾನು ನೀನು ಹೇಳಿದ ಕೆಲಸ ಮಾಡುತ್ತೇನೆ’ ಎನ್ನುತ್ತದೆ. ಆಗ ಬಿಡಬೇಕು.

ಕುಡ್ಪಲ್ ಭೂತ ಉಂಟಲ್ಲಾ ಅದು ಹೇಳಿದ ಮಾತು ತಪ್ಪುವುದಿಲ್ಲ. ಆಮೇಲೆ ನಾವು ಅದರಲ್ಲಿ ಕೆಲಸ ಮಾಡಿಸಿ ಕೊಳ್ಳಬೇಕು...’

ಬಾಚು ಕುಡ್ಪಲ್ ಭೂತದ ಕತೆ ಹೇಳುತ್ತಾ ಬನ್ನಂಜಲ್ ನಾಟಿಕೋಳಿ ಎಲುಬು ಜಗಿಯುತ್ತಾ ತೊಟ್ಟೆ ಹೊಟ್ಟೆಗೆ ಸೇರಿಸುತ್ತಿದ್ದ.

‘ಹೌದಾ...’ ರಘು ಕಣ್ಣು ಬಾಯಿ ಬಿಟ್ಟು ಭೀತಿಯಿಂದ ಕೇಳುತ್ತಿದ್ದ.

‘ಹೌದು ಹೌದು. ನಿನಗೆ ನಿನ್ನ ಹೆಂಡತಿಯ ತಲೆ ಬಾಚಿ ಸೂಡಿ ಕಟ್ಟಿ ಅನುಭವ ಉಂಟಲ್ಲ. ಈಗ ಕುಡ್ಪಲ್ ಭೂತ ಬಂದರೆ ನೀನೇ ಮುಂದೆ ಹೋಗು...

ಮತ್ತೆ ಈ ನಡು ರಾತ್ರಿ ಬೀಡಿ ಯಾರು ನಿನ್ನಪ್ಪ ಗೋವಿಂದ ತರುತ್ತಾನಾ? ಬೀಡಿ ಇಲ್ಲ ಬೇಕಾದರೆ ತೊಟ್ಟೆಯಲ್ಲಿ ಸುಧಾರಿಸು ಅಂತ ಹೇಳು" ಪದ್ದು ನಗುತ್ತಾ ನುಡಿದ.

ಧೈರ್ಯಕ್ಕೆಂದು ಒಂದೆರಡು ಹೆಚ್ಚೇ ತೊಟ್ಟೆ ಹೊಟ್ಟೆಗೆ ಸೇರಿಸಿದ ರಘು ಮತ್ತು ಬಾಚು ಚಿತ್ತಾಗಿ ನಿದ್ದೆಗೆ ಜಾರಿ ಬಿಟ್ಟರು.

ಸಣ್ಣಗೆ ಗೊರಕೆಯ ಸದ್ದು...

ಹೌದು...

ಗುಳಿಗ ಜೋರವನ್ನು ಸಮತಟ್ಟುಗೊಳಿಸಿದ ಪದ್ದು ಅಲ್ಲೆಲ್ಲಾ ತೆಂಗು, ಕಂಗಿನ ಗಿಡಗಳನ್ನು ನೆಟ್ಟಿದ್ದ.

ದಿನಕಳೆದಂತೆ ಗಿಡಗಳು ಬೇರು ಹರಡಿಕೊಂಡು ಹಸುರಾಗತೊಡಗಿತ್ತು.

ಆದರೆ ತಡಮೆ ದಾರಿ ಇರುವ ಬಳಿ ತೆಂಗಿನ ಗಿಡಗಳು ಅಡ್ಡ ಬಿದ್ದು, ಬುಡ ಮೇಲಾಗುತ್ತಿದ್ದವು. ನೆಲದ ಒಳಗಿದ್ದ ಬೇರು ಬಂದ ತೆಂಗಿನ ಕಾಯಿ ಸಮೇತ ಕಿತ್ತು ಬಂದು ಕತ್ತಿಯಿಂದ ಕೊಯ್ದಂತೆ ಸೀಳು ಸೀಳಾಗುತ್ತಿದ್ದವು. ಕಾಂಡ ಚಿಂದಿಯಾಗಿ ಹೋಗುತ್ತಿದ್ದವು.

ಪದ್ದು ಇದೇನು ಉಪಟಳ ಎಂದು ತಲೆ ಕೆರೆದು ಕೊಂಡಿದ್ದ. ಖಾಸಾ ಗೆಳೆಯರಾದ ರಘು, ಬಾಚುವಿನಲ್ಲಿ ಸಮಸ್ಯೆ ತೋಡಿಕೊಂಡಿದ್ದ.

'ಅದು ನಿನ್ನ ಮಾವ ದೋಗಣ್ಣನ ನಂಜಿನ ಕಿತಾಪತಿ ಇರಬೇಕು' ಅಂತ ರಘು ಹೇಳಿದ್ದ.

'ನಾಚಿಕೆ ಮುಳ್ಳಿನ ಗಿಡವನ್ನಾದರೂ ಯೋಚಿಸಿ ಕೀಳುವ ಮಾವ ನೆಟ್ಟ ಗಿಡ ಕಿತ್ತಾನೇ...?' ಪದ್ದು ಒಪ್ಪಲಿಲ್ಲ.

‘ಸಂಕ್ರಾಂತಿಗೆ ದೈವಕ್ಕೆ ಕಾಯಿ ಹರಕೆ ಹೇಳು ಎಲ್ಲ ಸರಿಯಾಗುತ್ತದೆ’ ಎಂದು ಸಮಾಧಾನ ಹೇಳಿದ್ದರು.

ಹರಕೆ ಹೇಳಿದ್ದರೂ ಉಪಟಳ ನಿಲ್ಲಲಿಲ್ಲ. ಹೊಸದಾಗಿ ನೆಟ್ಟ ಗಿಡಗಳು ಎರಡೇ ದಿನಕ್ಕೆ ಬುಡ ಮೇಲಾಗಿ ಬಿಡುತ್ತಿದ್ದವು.

‘ಇಲ್ಲ ಬಾಚು. ಅದೇನೆಂದು ನೋಡಲೇ ಬೇಕು’ ಎಂದು ಪದ್ದು  ಹೇಳಿದ.

‘ಎಬಾ... ರಾತ್ರಿ ಹೊತ್ತು ನೋಡುವುದಕ್ಕೆ ಏನುಂಟು?. ಅಲ್ಲಿ ಗೆಜ್ಜೆ ಕಟ್ಟಿಕೊಂಡು ಮಾಸ್ತಿ ಬರುತ್ತದೆ ಮಾರಾಯಾ. ಅಲ್ಲಿಗೆ ಹೋದರೆ ಮರು ದಿನ ಮರಗಟ್ಟಿದ ಹೆಣ ತರಬೇಕಷ್ಟೆ’ ಬಾಚು ಕೈ ಚೆಲ್ಲಿದ.

‘ರಘು ಕೂಡಾ ಗುಳಿಗ ಜೋರದ ಬಳಿ ಹಗಲೇ ಹೋಗುವುದಕ್ಕೆ ಹೆದರಿಕೆಯಾಗುತ್ತದೆ. ಇನ್ನು ರಾತ್ರಿ ಯಾರು ಹೋಗುವುದು?’ ಎಂದುಬಿಟ್ಟ

‘ರಾತ್ರಿ ಹೊತ್ತು ಕಾಯಲೇ ಬೇಕು. ಕಟ್ಟದ ಕೋಳಿ ಬನ್ನಂಜಲ್, ಎಷ್ಟು ಬೇಕೋ ಅಷ್ಟು ತೊಟ್ಟೆ ತರುತ್ತೇನೆ. ಕತ್ತಿ, ದೊಣ್ಣೆ ಎಲ್ಲಾ ಹಿಡಿದುಕೊಳ್ಳುವ. ತಡಮೆ ಬಳಿ ಪಾದೆಯಲ್ಲಿ ಒಂದು ರಾತ್ರಿ ಕಳೆಯಲೇ ಬೇಕು’ ಎಂದು ಪದ್ದು ಪುಸಲಾಯಿಸಿದ.

ನಾಟಿ ಹುಂಜ ಬನ್ನಂಜಲ್, ತೊಟ್ಟೆಯ ಸುದ್ದಿ ಕೇಳಿದ ಕೂಡಲೇ ರಘು, ಬಾಚುವಿನ ಮನಸ್ಸು ಮೆತ್ತಗಾಯಿತು. ಒಬ್ಬೊಬ್ಬರು ಅಲ್ಲವಲ್ಲ. ಮೂವರಿದ್ದೇವಲ್ಲಾ? ಒಂದು ಕೈ ನೋಡಿಯೇ ಬಿಡೋಣ ಎಂದು ನಿರ್ಧರಿಸಿದರು.

ಅದರಂತೆ ಆ ರಾತ್ರಿ ಹೊತ್ತು ಕತ್ತಲಾದಂತೆ ಬಾಳೆ ಎಲೆಯಲ್ಲಿ ಕೋಳಿ ಬನ್ನಂಜಲ್ ಕಟ್ಟಿಕೊಂಡು, ಸಾಕಷ್ಟು ತೊಟ್ಟೆ ಹಿಡಿದುಕೊಂಡು ಪಾದೆಯಲ್ಲಿ ಕಾದು ಕುಳಿತರು.

ರಾತ್ರಿ ಹತ್ತು ಗಂಟೆಯಾಗುತ್ತಿದಂತೆ ತೊಟ್ಟೆ, ಕೋಳಿ ಬನ್ನಂಜಲ್ ಖಾಲಿಯಾಗಿತ್ತು. ರಘು, ಬಾಚುವಿಗೆ ಅಮಲಿನ ಜತೆ ನಿದ್ದೆ ಆವರಿಸಿಕೊಂಡಿತು.

ಏನಾದರೂ ಬಂದರೆ ಇವರಿಗೆ ನಿಲ್ಲುವುದಕ್ಕೇ ಆಗುವುದಿಲ್ಲ. ಆದರೂ ಜತೆಗಿದ್ದಾರೆ ಎಂಬ ಧೈರ್ಯ ಅದೇನೆಂದು ನೋಡೇ ಬಿಡುವ ಎಂದು ರಘು ಹೆಚ್ಚು ಮದ್ಯ ಸೇವಿಸದೆ. ಚಳಿಗೆಷ್ಟು ಬೇಕೋ ಅಷ್ಟೇ ಹೊಟ್ಟೆಗಿಳಿಸಿಕೊಂಡು ಕುತೂಹಲದಿಂದ ಕಾದು ಕುಳಿತ.

ರಾತ್ರಿ ಹನ್ನೆರಡು ಗಂಟೆ ಕಳೆದರೂ ಯಾವುದೇ ಸುಳಿವಿಲ್ಲ. ಪದ್ದು ನಿದ್ದೆಯ ಮಂಪರಿನಲ್ಲಿ ಸದ್ದಿಲ್ಲದೆ ಆಕಳಿಸಿದ.

‘ಗಿಜಿ...ಗಿಜಿ... ಗಿಜಿಲ್... ಗಿಜಿಲ್’ ಕಿರುಗೆಜ್ಜೆಯಂತೆ ಸದ್ದು....

ಪದ್ದು ಬೆಚ್ಚಿ ಬಿದ್ದ. ಇದೇನು ಮಂಪರಿನಲ್ಲಿ ಅನಿಸಿದ್ದೋ ಎಂದು ಕಣ್ಣುಜ್ಜಿಕೊಂಡ.

ಮತ್ತೆ ಅದೇ ಕಿರುಗೆಜ್ಜೆಯಂತೆ ಧ್ವನಿ... ತಡಮೆಯ ಬಳಿಯಿಂದ ಸ್ಪಷ್ಟವಾಗಿ ಕೇಳಿಸಿತು.

ಪದ್ದು ಕಡ್ಪತ್ತಿಯ ಕೈಗೆತ್ತಿಕೊಂಡು ಅಕ್ಕ ಪಕ್ಕ ನೋಡಿದ. ರಘು, ಬಾಚು ನಿದ್ದೆಗೆ ಶರಣಾಗಿದ್ದು ಮಸುಕು ಮಸುಕಾಗಿ ಕಂಡಿತು..


ಅವರನ್ನು ಎಚ್ಚರಿಸಬೇಕೆಂದೂ ಅನಿಸದಷ್ಟು ಗೊಂದಲ, ಭೀತಿ ಪದ್ದುವನ್ನು ಆವರಿಸಿಕೊಂಡಿತು.

ಆ ಚಳಿಯಲ್ಲಿಯೂ ಬೆವರು...

ಮತ್ತೆ ಅದೇ ಕಿರುಗೆಜ್ಜೆ ಧ್ವನಿ. ಈ ಬಾರಿ ಅದು ಸ್ಪಷ್ಟವಾಗಿ ತುಸು ಜೋರಾಗಿಯೇ ಕೇಳಿಸಿತ್ತು.

ಪದ್ದುವಿನ ತುಟಿಗಳು ನಡುಗತೊಡಗಿದವು. ಏನು ಮಾಡಬೇಕೆಂದೇ ಅನಿದಷ್ಟು ಭೀತಿ...

‘ಗಿಜಿ...ಗಿಜಿ... ಗಿಜಿಲ್... ಗಿಜಿಲ್’

ಈ ಬಾರಿ ಅದು ಅತೀ ಹತ್ತಿರದಲ್ಲೇ ಕೇಳಿಸಿದಂತಿತ್ತು.

ಪದ್ದುವಿನ ಹಣೆಯಿಂದ ಬೆವರು ತೊಟ್ಟಿಕ್ಕಿ ಕಡ್ಪತ್ತಿ ಹಿಡಿದ ಕೈಯ ಮೇಲೆ ಬಿತ್ತು.

ಒಮ್ಮೆ ನಡುಗಿದ ಪದ್ದು ಬೆವರು ಒರಸುವುದಕ್ಕೆ ಹಣೆಯ ಕಡೆಗೆ ಎಡಗೈ ಎತ್ತಿದ..

ಹಣೆಯಲ್ಲಿ ಹೆಡ್‌ಲೈಟ್ ಇದ್ದದ್ದನ್ನು ಆತ ಭೀತಿಯಿಂದ ಮರೆತೇ ಬಿಟ್ಟಿದ್ದ. ಕೈ ಹೆಡ್ ಲೈಟನ್ನು ಸೋಕಿತು.

ರಪ್ಪನೆ ಹೆಡ್ ಲೈಟ್ ಸ್ವಿಚ್ ಅದುಮಿದ...

ಬೆಳಕು ತಡಮೆಯ ಕಡೆ ಸ್ಪಷ್ಟವಾಗಿ ಬಿತ್ತು...

ನೋಡುವುದೇನು....?

ಮೂರು ಮುಳ್ಳು ಹಂದಿಗಳು ತಡಮೆ ದಾಟುತ್ತಿದ್ದವು. ಅದಾಗಲೇ ಎರಡು ಹಂದಿ ತಡಮೆ ದಾಟಿ ಮುಂದೆ ಬಂದಿದ್ದವು.

ಇನ್ನೊಂದು ದೊಡ್ಡ ಮುಳ್ಳು ಹಂದಿ ತಡಮೆ ದಾಟುತ್ತಿತ್ತು. ಅದರ ಮುಳ್ಳುಗಳು ಇಕ್ಕೆಲಗಳಲ್ಲಿ ತಡಮೆಯ ಕಲ್ಲಿಗೆ ಸೋಕುತ್ತಾ ಗಿಜಿ.... ಗಿಜಿಲ್ ಎಂದು ಕಿರುಗೆಜ್ಜೆಯಂತೆ ಸದ್ದು ಮಾಡುತ್ತಿದ್ದವು...

ಇದ್ದಕ್ಕಿದ್ದಂತೆ ಹೆಡ್ ಲೈಟ್ ಕಂಡ ಹಂದಿಗಳು ಸರಕ್ಕನೆ ಮುಳ್ಳುಗಳನ್ನು ಅರಳಿಸಿ ದೈವ ನರ್ತನ ಭಂಗಿಯಲ್ಲಿ ಬಂದ ದಾರಿಯಲ್ಲೇ ಹಿಂತಿರುಗಿ ಓಡ ತೊಡಗಿದವು...

ಅದರ ಮುಳ್ಳುಗಳು ತಡಮೆಯ ಬದಿ ಕಲ್ಲಿಗೆ ತಾಗಿ. ಜೋರಾದ ಗೆಜ್ಜೆಯ ಧ್ವನಿಯಂತೆ ಕೇಳಿಸಿತ್ತು...

ಪದ್ದು ಜೋರಾಗಿ ಉಸಿರು ಬಿಟ್ಟ. ಎದೆಗೆ ಬಂದು ಕುಳಿತಿದ್ದ ಆತನ ಪ್ರಾಣ ಮರಳಿ ತನ್ನ ಸ್ಥಾನ ಸೇರಿದಂತಾಗಿತ್ತು...

ಎದ್ದು ತಡಮೆಯ ಕಡೆಗೆ ಓಡಿದ. ಅದಾಗಲೇ ಹಂದಿಗಳು ಮುಳ್ಳು ಪೊದೆಯೊಳಗೆ ಸೇರಿ ಮಾಯವಾಗಿದ್ದವು.... ಪೊದೆ ಉದ್ದಕ್ಕೂ ಅಲ್ಲಾಡುತ್ತಿದ್ದವು.

ಪಾದೆಯ ಕಡೆಗೆ ಮರಳಿ ಬಂದ ಪದ್ದುವಿನ ಹೆಡ್‌ಲೈಟ್ ಬಾಚು, ರಘುವಿನ ಕಣ್ಣು ಕುಕ್ಕಿ ಎಚ್ಚರಗೊಳಿಸಿದವು.

ಇದ್ದಕ್ಕಿದ್ದಂತೆ ಗಡಬಡಿಸಿ ಎದ್ದ ಅವರಿಬ್ಬರು ತೂರಾಡುತ್ತ ಪಾದೆಯಲ್ಲಿ ಬದಿಯಲ್ಲಿಟ್ಟಿದ್ದ ಕತ್ತಿ, ದೊಣ್ಣೆಗಳನ್ನು ಎರಡೂ ಕೈಯಲ್ಲಿ ಹಿಡಿದು. ‘ಏನಾಯಿತು...?.. ಏನಾಯಿತು...?’ ಎಂದು ತೂರಾಡುತ್ತಾ ಕುಣಿದಾಡತೊಡಗಿದರು.

‘ಏನಿಲ್ಲ ನಿಮ್ಮ ಅಪ್ಪ ಗೋವಿಂದ, ತನಿಯರ ಪ್ರೇತಗಳು ನಿಮ್ಮನ್ನು ಹುಡುಕಿಕೊಂಡು ಬಂತು... ಈಗ ನಿಮ್ಮ ಮೈಸೇರಿ ದರ್ಶನ ಆಗುತ್ತಿದೆ. ನಡೆಯಿರಿ ಮನೆಗೆ ಹೋಗೋಣ...’ ಎಂದ ಪದ್ದು ಕಡ್ಪತ್ತಿ ಹಿಡಿದುಕೊಂಡು ಮಂಜೊಟ್ಟಿ ಗುತ್ತಿನತ್ತ ನಡೆದ.

ರಘು, ಬಾಚು ಏನೊಂದೂ ತಿಳಿಯದೆ  ಕಣ್ಣು ಉಜ್ಜುತ್ತಾ ಹಿಂಬಾಲಿಸಿದರು.

ಮುಂದಿನ ಭಾಗದಲ್ಲಿ : *ಹುಲಿಯಿಂದ ತಪ್ಪಿಸಿಕೊಂಡ ಹುಲ್ಲೆ*




ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ