ದರ್ಶನದಲ್ಲಿ ಪಂಜುರ್ಲಿ ನೀಡಿದ ಅಭಯದ ಮರುದಿನ ವಕೀಲ ಐತ ಆಳ್ವರ ಮುಂದೆ ದಾಖಲೆ ಪತ್ರ ಹಿಡಿದು ಕುಳಿತ ಪದ್ದು 'ಆ ಸುಡುಗಾಡನ್ನು ಏನು ಮಾಡುವುದು ವಕೀಲರೇ? ದೈವಕ್ಕೆ ಹೂ ನೀರು ಇಡುವವನಿಗೆ ಹೊಟ್ಟೆಯ ಪಡಿ ಅಂತ ಒಂದೆರಡು ಕಳಸೆ ಗದ್ದೆ, ನಾಲ್ಕೈದು ತೆಂಗಿನ ಮರವಾದರೂ ಬಿಡಬೇಕಲ್ಲ' ಎಂದು ದುಗುಡದಿಂದ ನುಡಿದ.
ದಾಖಲೆ ಪತ್ರವನ್ನು ವಕೀಲರು ಸೂಕ್ಷ್ಮ ವಾಗಿ ಪರಿಶೀಲಿಸಿದರು.
'ನೋಡು ಪದ್ದು ಇದು ಖದೀಂ ಜಾಗ. ಹೊಂದಿಕೊಂಡು ಕುಮ್ಕಿ ಕೂಡಾ ಇದೆ. ಅದೂ ನಿನ್ನದೆ ಆಗುತ್ತದೆ' ಎಂದರು.
'ಅಲ್ಲಿ ಎಂತ ಮಾಡ್ಲಿಕ್ಕೆ ಆಗುತ್ತದೆ? ಕುಮ್ಕಿ ಸರಕಾರದಲ್ವಾ?' ಎಂದ ಪದ್ದು
'ನೋಡು ಪದ್ದು ನಿಜವಾಗಿ ನೋಡಿದರೆ ನಿನಗೆ ಏನೂ ಇಲ್ಲ. ಜಮೀನು ದೋಗುವಿಗೆ ಎಲ್ ಆರ್ ಟಿಯಿಂದ ಬಂದದ್ದು.
1868ನೆ ಇಸವಿಯಲ್ಲಿ ಕದೀಂ ವರ್ಗ ಭೂಮಿಯನ್ನು ಹೊಂದಿರುವವರಿಗೆ ಕುಮ್ಕಿ ಭೂಮಿಯ ಅಧಿಕಾರವನ್ನು ಮದ್ರಾಸ್ ಬೋರ್ಡ್ ಕೊಟ್ಟಿದೆ.
1886 ರ ಮೆಡ್ರಾಸ್ ಆಕ್ಟ್ ಪ್ರಕಾರ ಕುಮ್ಕಿ ಖದೀಂ ಜಮೀನಿನವರದ್ದು. ಈ ಬಗ್ಗೆ ಈಗ ಹಲವು ಕೇಸು ಕೋರ್ಟ್ ಲ್ಲಿ ಉಂಟು.
ನಿನಗೆ ಮಾರುದಕ್ಕೆ ದಾಖಲೆ ಆಗುದಿಲ್ಲ ತೆಂಗು, ಕಂಗು ಇಡು. ಸರಕಾರ ಸ್ವಾಧೀನಕ್ಕೆ ಬಂದಾಗ ನೋಡುವ. ಪಾಲಿಟಿಕ್ಸ್, ರೈತಸಂಘ ಅಂತ ಉಂಟಲ್ಲ.
ಈಗ ದೈವ ಕೊಟ್ಟಿತಲ್ಲಾ?. ಈ ದೈವದ ಅಭಯದ ಪ್ರಭಾವ ಉಂಟಲ್ಲಾ ಅದು ಅಪರೇಶನ್ ಮಾಡುವಾಗ ನೋವು ತಿಳಿಯದಿರಲಿ ಎಂದು ಕೊಡುವ ಅನಾಸ್ತೇಶಿಯಾದ ಹಾಗೆ. ಪ್ರಭಾವ ಕಡಿಮೆಯಾದರೆ ನೋವು ಗೊತ್ತಾಗುತ್ತದೆ.
ನಾಳೆಯೇ ಡಾಕ್ಯುಮೆಂಟ್ ರೆಡಿ ಮಾಡುತ್ತೇನೆ. ನಾಡದ್ದು ರಿಜಿಸ್ಟರ್ ಮಾಡಿ ಬಿಡುವ. ಮತ್ತಿನದ್ದು ಮತ್ತೆ. ದೈವದ ಪ್ರಸಾದಕ್ಕೆ ಸಂತಸ ಪಡು. ದೋಗು ಮತ್ತೆ ಪೆದಂಬು ಮಾಡಿದ್ರೆ ಕಷ್ಟ' ಎಂದರು ವಕೀಲರು.
ದೋಗಣ್ಣನ ಮಕ್ಕಳ ಪ್ರಬಲ ವಿರೋಧದ ನಡುವೆ ಮೂರಕ್ರೆ ಗುಳಿಗ ಜೋರ ಪದ್ದುವಿನ ಹೆಸರಿಗಾಯಿತು.
ಅಲ್ಲಿರುವ ಗುಳಿಗನ ಕಲ್ಲಿನ ಮುಂದೆ ಪದ್ದು ಮೌನವಾಗಿ ಕುಳಿತು ‘ನನ್ನನ್ನು ಉಳಿಸುತ್ತಿಯಾ? ಕಳುಹಿಸುತ್ತಿಯಾ? ನಿನಗೆ ಬಿಟ್ಡದ್ದು’ ಪ್ರಾರ್ಥಿಸಿದ.
ಒಂದು ವಾರ ಕಳೆದು ಒಂದು ಸಂಜೆ ಸುರತ್ಕಲ್ ಪೇಟೆಯಲ್ಲಿ ಮಾಧವ ಸಿಕ್ಕಿದ್ದ.
‘ಒಂದು ಲೇಔಟ್‌ಗೆ ಜಾಗ ಏರಿಸಲು ಮಣ್ಣು ಬೇಕಿತ್ತು ಪದ್ದು. ಯಾರಲ್ಲಾದರೂ ಇದೆಯಾ?’ ಎಂದ.
‘ಮರು ದಿನ ಬೆಳಿಗ್ಗೆ ಮಾಧವನನ್ನು ಪದ್ದು ಗುಳಿಗಜೋರಕ್ಕೆ ಕರೆತಂದಿದ್ದ.
ನುರ್ಕು ಪಾದೆಯ ಗುಡ್ಡ ಸ್ಥಳವನ್ನು ಸಮಗ್ರವಾಗಿ ದಿಟ್ಟಿಸಿದ ಮಾಧವ. ಫಿಲ್ಲಿಂಗ್ ಗೆ ಇದು ಸರಿಯಾದ ಮಣ್ಣು. ಜಾಗ ಯಾರ ಹೆಸರಲ್ಲಿದೆ. ನಾಳೆಯಿಂದ ಮಣ್ಣು ತೆಗೆಯುವ ಎಷ್ಟು ಕೊಡಬೇಕು’ ಎಂದ.
‘ಜಾಗ ನನ್ನದೆ ಮಾಧವ. ನೀನು ಒಟ್ರಾಸಿ ಮಣ್ಣು ತೆಗೆಯಬಾರದು. ನಾನು ಹೇಳಿದ ಹಾಗೆ ತೆಗೆಯಬೇಕು. ನಿನಗೆ ಮಣ್ಣು ನನಗೆ ನನ್ನ ಜಾಗದ ಸಮತಟ್ಟು. ಹಣ ಬೇಡ’ ಎಂದ ಪದ್ದು.
‘ಆಯ್ತು ಮಾರಾಯಾ. ಬೇಡ ಅನ್ನಬೇಡ. ಲೋಡ್‌ಗೆ ಐವತ್ತು ರುಪಾಯಿ ತೆಗೋ. ಮತ್ತೆ ನೀನು ಹೇಳಿದ ಹಾಗೆ ಲೆವೆಲ್ ಮಾಡುವ’ ಎಂದ ಮಾಧವ.
ಎರಡು ಜೆಸಿಬಿಗಳು ಗುಳಿಗ ಜೋರಕ್ಕೆ ನುಗ್ಗಿದವು. ಲಾರಿಗಳು ಓಡಾಡತೊಡಗಿದವು.
ಮಣ್ಣು ತೆಗೆಯುವ, ಕಲ್ಲು ಎಳೆಯುವ ಸದ್ದಿಗೆ ಬೆಚ್ಚಿ ಬಿದ್ದ ದೋಗಣ್ಣ ಓಡಿ ಬಂದ.
‘ಏಯ್ ಪದ್ದು ಏನು ಮಾಡ್ತಾ ಇದ್ದಿಯಾ? ದೈವ ಹೇಳಿದ್ದು ಎಂತ? ಗುಳಿಗ ಜೋರಕ್ಕೆ ಹೀಗೆಲ್ಲಾ ಮಾಡ್ತಾರಾ? ನಿನಗೆ ಪೆಟ್ಟು ಬಿದ್ದೀತು’ ಎಂದು ಗದರಿಸಿದ.
‘ಮಾವಾ ಜಾಗ ನನ್ನ ಹೆಸರಲ್ಲಿದೆ. ಏನು ಬೇಕಾದರೂ ಮಾಡ್ತೇನೆ. ನೀವು ಸುಮ್ಮನಿರಿ' ಎಂದ ಪದ್ದು.
ದೋಗಣ್ಣ ಹಿಡಿಶಾಪ ಹಾಕಿದ.
ಗುಳಿಗ ಜೋರದ ಮೇಲು ಭಾಗದಲ್ಲಿ ಮಾತ್ರ ಗುಂಡು ಗುಂಡು ನುರ್ಕು ಪಾದೆ ಇತ್ತು. ಅದರ ಅಡಿಯಲ್ಲಿ ಬಂಗಾರದಂತಹ ಕೆಂಪು ಮಣ್ಣು ಮೊಗೆದು ಬಂತು. ಅದಕ್ಕೆ ಹೆಚ್ಚು ರೇಟು ಕೊಟ್ಟ ಮಾಧವ.
ಒಂದೆರಡು ಮಾತಿನಲ್ಲೇ ಬಲಿಮೆ ಹೇಳುವ ಎಂಕಟ ಬಲ್ಯಾಯನ ಮುಂದೆ ಕೂತಾಗ ಆತ ಕವಡೆ ಹಾಕಿ ಲೆಕ್ಕಾಚಾರ ಮಾಡಿ 'ಕಲ್ಲಿನ ಸುತ್ತ ಇಪ್ಪತ್ತು ಕೋಲು ಜಾಗ ಬಿಡು ಒಳ್ಳೆದಾಗುತ್ತದೆ' ಎಂದ.
ಗುಳಿಗನ ಕಲ್ಲು ಇರುವ ಅರ್ಧ ಎಕರೆ ಜಾಗದ ಮರಮಟ್ಟು ಒಂದನ್ನೂ ಮುಟ್ಟದೆ. ಸುತ್ತಲಿನ ಜಾಗವನ್ನು ಸಮತಟ್ಟು ಮಾಡಿಸಿದ ಪದ್ದುವಿನ ಕಿಸೆಗೆ ಕಾಸು ಕೂಡಾ ಬಂತು.
ಸೂರ್ಯ ಚಲನೆಯ ದಿಕ್ಕು ನೋಡಿ ತೆಂಗು, ಕಂಗು ಎಲ್ಲೆಲ್ಲಾ ನೆಡಬೇಕು ಎಂದು ಯೋಜನೆ ಮಾಡಿ ಹೊಂಡವನ್ನೂ ತೆಗೆಸಿದ.
ನಡುವೆ ಸರಿಯಾದ ಆಯ ನೋಡಿ ಮನೆ ಕಟ್ಟುವುದಕ್ಕೆ ಪಂಚಾಂಗವನ್ನೂ ಬಿಟ್ಟ.
ಗುಳಿಗ ಜೋರದ ಒಂದು ಬದಿಯಲ್ಲಿ ತಡಮೆ ಹಾಕಿದ, ನಡು ಮಧ್ಯಾಹ್ನ, ಕತ್ತಲಾದಂತೆ ಜನ ಸಂಚರಿಸಲು ಹೆದರುವ, ಸರಿ ರಾತ್ರಿ ಕಿರುಗೆಜ್ಜೆ ಧ್ವನಿ ಕೇಳಿಸುವ, ಪದವು ಅನ್ನು ಸಂಪರ್ಕಿಸುವ ಕಿರಿದಾದ ಕಾಲು ದಾರಿ ಇತ್ತು. ಅದಕ್ಕೆ ಸಮಾನಾಂತರವಾಗಿ ನೀರಿನ ಝರಿ ಮಳೆಗಾಲದಲ್ಲಿ ಹರಿಯುತ್ತಿತ್ತು. ಬೇಸಗೆಯಲ್ಲಿ ಕೂಡಾ ಅಲ್ಲಿ ಪಸೆ ಇರುತ್ತಿತ್ತು. ನೀರಿನ ಇರುವನ್ನು ಸಾರುವ ಅರ್ತಿ, ನೆಲ್ಲಿ ಮರಗಳು ಅಲ್ಲಿದ್ದವು. ಅದರ ಬಳಿ ಸಮತಟ್ಟು ಮಾಡುವಾಗ ನೀರಿನ ಒರತೆ ಉಕ್ಕಿ ಬಂತು. ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ಜೆಸಿಬಿಗೆ ಎಟಕುವಷ್ಟು ಆಳವಾದ ಒಂದು ಕೆರೆಯನ್ನೂ ಪದ್ದು ಮಾಡಿಸಿದ. ನೀರು ಅದರಲ್ಲಿ ಸಂಗ್ರಹವಾಗತೊಡಗಿತು.
ಪಂಚಾಯತ್ ಮೆಂಬರ್ ಗಿರೀಶ ಕೃಷಿ ಅರ್ಜಿ ಸಲ್ಲಿಸುವಂತೆ ತಿಳಿಸಿದ. ಒಂದು ಹೊಂಡಕ್ಕೆ ಸರಕಾರದ ನೂರು ರೂ. ಪ್ರೋತ್ಸಾಹ ಧನ, ಉತ್ತಮ ತಳಿಯ ತೆಂಗು, ಕಂಗಿನ ಗಿಡಗಳು ಲಭಿಸಿದವು.
ಇದನ್ನೆಲ್ಲಾ ಕಂಡು ‘ಅವನಿಗೆ ಗುಳಿಗನ ಪೆಟ್ಟು ಖಂಡಿತಾ ಬೀಳುತ್ತದೆ’ ಎಂದು ದೋಗಣ್ಣ ನಂಜಿನಲ್ಲಿ ಊರೆಲ್ಲಾ ಹೇಳಿಕೊಂಡು ತಿರುಗಾಡಿದ.
‘ಮಾರಿ ತಿನ್ನಬೇಡ- ಮುರಿದು ತಿನ್ನು ಅಂತ ಪಂಜುರ್ಲಿ ಹೇಳಿದ್ದು, ನಾನು ಜಾಗ ಮಾರಿಲ್ಲ ಮುರಿಯುತ್ತಿದ್ದೇನೆ ಮತ್ತೆ ಪ್ರಯೋಜನಕ್ಕೆ ಬಾರದ ಕಲ್ಲು ಮಣ್ಣನ್ನು ಅವರ ಮಕ್ಕಳ ಬೈಲು ಗದ್ದೆಗೆ ಹಾಕಬೇಕಾ?’ ಎಂದು ದೋಗಣ್ಣನ ಪ್ರಚಾರಕ್ಕೆ ಪದ್ದು ಉತ್ತರ ನೀಡಿದ.
ಆ ವರ್ಷ ಸಾಗುವಳಿ ಮುಗಿದು ಮುಂಬೈ ಸೇರುವುದನ್ನೇ ಪದ್ದು ಮರೆತಿದ್ದ.
ಶೇಖರ 'ಹೊಸ ಡ್ಯಾನ್ಸ್ ಬಾರ್ ಮಾಡಿದ್ದೇನೆ. ಜನ ಇಲ್ಲ ಮಾರಾಯ. ಯಾವಾಗ ಬರುತ್ತಿ?' ಎಂದು ಕರೆ ಮಾಡಿದರೂ 'ಸ್ವಲ್ಪ ಕೆಲಸ ಇದೆ ಮತ್ತೆ ಬರುತ್ತೇನೆ' ಎಂದ.
ಮಳೆಗಾಲ ಮುಗಿದು ದೀಪಾವಳಿ ಬಂದಾಗ ಗುಳಿಗ ಜೋರದಲ್ಲಿ ಗುಳಿಗ ಪಂಜುರ್ಲಿಯ ಕಲ್ಲಿನ ಸುತ್ತ ತೆಂಗು, ಕಂಗಿನ ಸಸಿಗಳು ತುಂಬಿಕೊಂಡವು.
ಗುಳಿಗ ಜೋರದ ಗುಳಿಗ ಪಂಜುರ್ಲಿ ಕಲ್ಲಿನ ಮುಂದೆ ಮೌನವಾಗಿ ನಿಂತ ಪದ್ದುವಿನ ಕಣ್ಣುಗಳು ಹನಿಗೂಡಿದ್ದವು. 'ನೀನು ಅಭಯ ನೀಡಿದ್ದು ಸತ್ಯವಾಯಿತು. ಇನ್ನು ದಂಡಿನ ರಾಜ್ಯದ ಗೊಡವೆ ಬೇಡ' ಎಂದುಕೊಳ್ಳುತ್ತಾ ಸಾಷ್ಟಾಂಗ ನಮಸ್ಕಾರ ಮಾಡಿದ.
ಪದವಿನ ಶನಿವಾರದ ಕೋಳಿಕಟ್ಟದಲ್ಲಿ ಸಿಕ್ಕ ಬಾಡು ಪೂಜಾರಿಯ ಎರಡೂ ಕೈ ಹಿಡಿದು 'ಮಾಯೆಯಾ? ಮಾನಿಯಾ? ಅಂತ ಶಂಕಿಸಿದೆ. ನನ್ನನ್ನು ಕ್ಷಮಿಸಿ ಬಾಡಣ್ಣಾ' ಎಂದ.
'ನನಗೀಗ ಎಂಭತ್ತೈದು ವರ್ಷ. ಅರುವತ್ತೈದು ವರ್ಷ ನಿಯತ್ತಿನ ದೈವ ಚಾಕರಿ ಮಾಡಿದ್ದಕ್ಕೆ ಸೀಕ್, ಸಂಕಟ ಇಲ್ಲ. ಖಡ್ಸಲೆ ಹಿಡಿದು ಅಕ್ಕಸ ದಿಟ್ಟಿಸಿದ ಕೂಡಲೇ ಹೇಳಿಕೊಟ್ಟದ್ದೆಲ್ಲಾ ಮರೆಯುತ್ತದೆ. ಏನು ಹೇಳುತ್ತೇನೋ ನನಗೇ ಗೊತ್ತಿಲ್ಲ. ನೀ ನಂಬಿದ ದೈವ ನಿನಗೆ ಒಳ್ಳೆದು ಮಾಡುತ್ತದೆ ಮಗೂ' ಎಂದು ಆಕಾಶಕ್ಕೆ ಕೈ ಮುಗಿದ ಬಾಡು ಪೂಜಾರಿ.
ಮುಂದಿನ ಭಾಗದಲ್ಲಿ : *ಮೂಸೆಲ*
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ