ಪದ್ದುವಿನ ತಮ್ಮಲೆ ಅಂದರೆ ಮಾವ ದೋಗಣ್ಣ. ಭಾರೀ ಗಟ್ಟಿ ಬೇಸಾಯದ ಆಸಾಮಿ.
ದೋಗಣ್ಣನ ಏಕೈಕ ತಂಗಿ ದೇವಕಿಯ ಮಗ ಪದ್ದು.
ಮದುವೆಯಾಗಿ ಗಂಡನ ಮನೆ ಸೇರಿದ್ದ ದೇವಕಿ ಅಲ್ಲಿ ಅತ್ತೆ, ನಾದಿನಿಯರ ಕಾಟ ತಡೆಯಲಾಗದೆ ಎರಡೇ ವರ್ಷಕ್ಕೆ ತವರು ಮನೆ ಸೇರಿದ್ದರು. ಗಂಡ ಆಗಾಗ ಬಂದು ಹೋಗುತ್ತಿದ್ದ. ಹೇಗೂ ಬೇಸಾಯದ ಕೆಲಸಕ್ಕೆ ಜನ ಬೇಕಲ್ಲಾ ಎಂದು ದೋಗಣ್ಣ ಸುಮ್ಮನಿದ್ದರು. ಇದ್ದವಳು ಮತ್ತು ಬಂದವಳಲ್ಲಿ ತಮ್ಮ ತಮ್ಮ ಮರಿಗಳ ಕಡೆ ಒಕ್ಕಿ ಹಾಕುವ ಪೆರಡೆಯ ಗುಣ ಬಿಟ್ಟರೆ ಮತ್ತೇನೂ ತಂಟೆ- ತಕರಾರು ಇಲ್ಲ.
ಭೂ ಮಸೂದೆ ಬಂದಾಗ ದೋಗಣ್ಣನ ಮಾವ, ಪದ್ದುವಿನ ಅಜ್ಜನಾಗುವ ಕಿಟ್ಟಣ್ಣ ನೂರು ವರ್ಷ ಕಳೆದರೂ ದಂಟೆ ಕುಟ್ಟಿಕೊಂಡು ಗದ್ದೆ ಪುಣಿಯಲ್ಲಿ ಓಡಾಡುತ್ತಿದ್ದರು.
ಮೂಲತಃ ಆ ಎಲ್ಲಾ ಜಮೀನು ಕಿಟ್ಟಣ್ಣನ ಪೂರ್ವಿಕರದ್ದೆ. ಯಾರೋ ಹಿರಿಯರು ಬಡತನ ಬಂತು ಅಂತ ಬೆದ್ರದವರಿಗೆ ಅಡವು ಹಾಕಿದ್ದರು. ಸಾಲ ತೀರಿಸಲು ಅಗದೇ ಇದ್ದಾಗ ಬೆದ್ರದವರು ಭೂಮಿ ಸ್ವಾಧೀನ ಮಾಡಿ ಚೆನ್ನಾಗಿ ಬೆನ್ನು ಬಗ್ಗಿಸುತ್ತಾರೆ ಎಂದು ಇವರಿಗೇ ಗೇಣಿಚೀಟು ಮಾಡಿಸಿದ್ದರು. ಹಾಗೆ ಆ ಭೂಮಿ, ಮನೆಯಲ್ಲಿದ್ದ ಪ್ರಚಂಡ ಕಾರಣಿಕದ ದೈವ, ಭೂತ ಎಲ್ಲ ಇವರದ್ದೆ.
ಡಿಕ್ಲರೇಷನ್ ಅಂದರೆ ಏನು ಅಂತ ಕಿಟ್ಟಣ್ಣಗೆ ಅರ್ಥವೇ ಆಗುತ್ತಿರಲಿಲ್ಲ. ಜಮೀನು ನಿಮ್ಮ ಹೆಸರಿಗೆ ಆಗುತ್ತದೆ ಅಂದದ್ದಕ್ಕೆ ಬೇಡ ಅಂದಿದ್ದರು. ದೋಗಣ್ಣ ಬಿಡಬೇಕಲ್ಲ. ಕುಟುಂಬದ ಹೆಸರಿಗೆ ಮಾಡುವ ಎಂದರು.
ಕಿಟ್ಟಣ್ಣ ಅದು ನ್ಯಾಯ ಅಲ್ಲ ಮಗಾ. ಏನು ಬೇಕಾದರೂ ಮಾಡು ಅಂದರು. ಆದರೆ ದೋಗಣ್ಣ ಪೆದಂಬು ಗೊಬ್ಬು ಆಡಿದ್ದರು. ಕುಟುಂಬದ ಹೆಸರು ಕಾಣಿಸದೆ ತನ್ನ ಹೆಸರಲ್ಲಿ ಡಿಕ್ಲರೇಷನ್ ಕೊಟ್ಟಿದ್ದರು. ಆಗ ಪದ್ದುವಿಗೂ ಅದೇನೆಂದು ಗೊತ್ತಿರಲಿಲ್ಲ.
ಈ ದೋಗಣ್ಣ ಕೋಳಿ ಅಂಕದ ಚಾಂಪ್ಯನ್. ಎರಡನೇ ಕ್ಲಾಸ್ ಕಲಿತ ದೋಗಣ್ಣನಿಗೆ ಓದು ಬರುತ್ತಿತ್ತು. ಬರೆಯಲು ಕಷ್ಟವಾಗುತ್ತಿತ್ತು.
ಅದೆಲ್ಲಿಂದಲೋ ಒಂದು ಕೋಳಿ ಪಂಚಾಂಗ ಸಂಪಾದಿಸಿದ್ದರು. ಅದರ ತಿಥಿ, ಕೋಳಿಯ ಬಣ್ಣ ಆಧಾರದಲ್ಲಿ ಜೂಜು ಕಟ್ಟುತ್ತಿದ್ದರು.
ಗೆಲ್ಲುತ್ತಿದ್ದರು. ಒಂದೆರಡು ಪರ್ತೆ ಬಿಟ್ಟ ನಂತರ ಕೋಳಿ ಸ್ಪೆಷಲಿಸ್ಟ್ ಗಳು ಆರೈಕೆ, ಅಪರೇಷನ್, ಹೊಲಿಗೆ ಅಂತೆಲ್ಲಾ ಮಾಡುವಾಗ ಸಮಯ ಕಳೆದು ತದಿಗೆ ಹೋಗಿ ಬಿದಿಗೆ ಬಂದು ಸೋಲುವುದೂ ಇತ್ತು.
ಆದರೆ ಕೋಳಿ ಅಂಕದಿಂದ ಮನೆಗೆ ಬಂದ ದೋಗಣ್ಣ ಆಗಷ್ಟೇ ಶಾಲೆಗೆ ಕಲಿಯುತ್ತಿದ್ದ ಪದ್ದುವನ್ನು ಕರೆದು ಮುನ್ನೂರು ಪುಟದ ಲೇಖಕ್ ಪುಸ್ತಕದಲ್ಲಿ ಶುಕ್ರವಾರ ಸಂಜೆ ನಾಲ್ಕು ಗಂಟೆ ಬಹುಳ ತಿಥಿ, ಕರ್ಬೊಲ್ಲೆ X ಮೈಪ = ಮೈಪ. ಶುಕ್ರವಾರ ಸಂಜೆ ಆರು ಗಂಟೆ ಕಕ್ಕೆ X ಪಂಚನಿ = ಪಂಚನಿ ಎಂದು ಬರೆಸುತ್ತಿದ್ದರು.
ಪದ್ದು ತನ್ನ ಮುದ್ದಾದ ಅಕ್ಷರದಲ್ಲಿ ಬರೆಯುತ್ತಿದ್ದ.
ದೋಗಣ್ಣ ಅದನ್ನು ಜೋಪಾನವಾಗಿ ಎತ್ತಿ ಇಡುತ್ತಿದ್ದರು. ಹೀಗೆ ಬರೆದು ಬರೆದು ಸುಮಾರು ನೂರು ಪುಟ ತುಂಬಿದ ನಂತರ. ಪದ್ದು ಬೆಳಿಗ್ಗೆ ಎದ್ದ ಕೂಡಲೇ ಆ ದಿನದ ವಾರ ಸಮಯ ತಿಥಿ ಬರೆದು ಯಾವ ಕೋಳಿ ಯಾವ ಕೋಳಿ ಗೆಲ್ಲುತ್ತದೆ. ಎಂಬ ಒಂದು ಸಣ್ಣ ಪಟ್ಟಿಯನ್ನು ಬರೆಸಿ ತಯಾರು ಮಾಡಿ ತನ್ನ ಕಿಸೆಯೊಳಗೆ ಇಟ್ಟುಕೊಳ್ಳುತ್ತಿದ್ದರು.
ಆ ದಿನ ಸಂಜೆ ದೋಗಣ್ಣ ಉಲ್ಲಾಸದಿಂದ ಇರುತ್ತಿದ್ದರು. ಮರುದಿನ ಲೇಖಕ್ ಪುಸ್ತಕದಲ್ಲಿ ಹೊಸ ಫಲಿತಾಂಶ ನೋಟ್ ಮಾಡಿಸುತ್ತಿದ್ದರು. ಮುನ್ನೂರು ಪುಟದ ಲೇಖಕ್ ಪುಸ್ತಕ ಹೆಚ್ಚುಕಮ್ಮಿ ಭರ್ತಿಯಾಗಿತ್ತು.
ಹಲವು ವರ್ಷಗಳ ಈ ಅಧ್ಯಯನ ಮತ್ತು ಪದ್ದು ಬರೆದು ಕೊಡುವ ಚೀಟಿ ಅವರನ್ನು ಕೋಳಿ ಅಂಕದಲ್ಲಿ ನಷ್ಟವನ್ನು ಉಂಟು ಮಾಡಲು ಬಿಡುತ್ತಲೇ ಇರಲಿಲ್ಲ.
ಪದ್ದು ಯುವಕನಾದಾಗ ಈ ಲೇಖಕ್ ಪುಸ್ತಕ ದೋಗಣ್ಣನ ಕಪಾಟು ಸೇರಿತ್ತು.
ಈ ನಡುವೆ ಪದ್ದು ಮತ್ತು ದೋಗಣ್ಣನ ನಡುವೆ ಆಸ್ತಿಗಾಗಿ ಕಲಹ ಏರ್ಪಟ್ಟಿತ್ತು.
ಜಮೀನಿನ ಕಾಗದ ಪತ್ರವನ್ನು ವಕೀಲ ಐತಾಳರ ಮುಂದೆ ಇಟ್ಟ ಪದ್ದುವಿಗೆ 'ನಿನಗೇನು ಇಲ್ಲ ಪದ್ಮನಾಭ. ಕೊಟ್ಟರೆ ತೆಗೆದುಕೋ' ಅಂದಿದ್ದರು.
ದೋಗಣ್ಣನಿಗೂ ಪದ್ದುವನ್ನು ಹಾಗೇ ಬಿಡುದಕ್ಕೆ ಮನಸ್ಸಿರಲಿಲ್ಲ. ತನ್ನ ಕೈಕಾಲು ಬಿದ್ದ ಮೇಲೆ ದೈವಕ್ಕೆ ಹೂ-ನೀರು ಇಡಲು ಯಜಮಾನ ಬೇಕಲ್ಲ? ಅದಕ್ಕೆ ಕೊಟ್ಟರೂ ಫಲಿಸದ ಹಾಗೆ ಗುಳಿಗ ಜೋರ ಎಂಬ ನುರ್ಕು ಪಾದೆ ಕಲ್ಲು, ಚೂರಿಮುಳ್ಳು, ಕನಪಡೆ ಜೋರ-ಗುಂಡಿ ಗಳಿಂದ ಕೂಡಿದ ಯಾವುದಕ್ಕೂ ಆಗದ ಎರಡು ಮೂರು ಎಕರೆ ಜಮೀನನ್ನು ಪದ್ದುವಿಗೆ ತೋರಿಸಿ ‘ಬೆನ್ನು ಬಾಗಿಸಿ ದುಡಿ’ ಎಂದು ಹೇಳಿದ್ದರು.
‘ಅಲ್ಲಿ ಬೆನ್ನು ಬಾಗಿಸಿದರೆ ನನ್ನ ಎದೆ ಬೇಗ ಒಡೆಯುತ್ತದೆ’ ಎಂದು ಹೇಳಿದ ಪದ್ದು ತನಗೆ ಮೂರು ಬೆಳೆಯ ಬೈಲು ಗದ್ದೆ ಬೇಕು ಎಂದು ಗಲಾಟೆ ಎಬ್ಬಿಸಿ, ಸಿಪಾಯಿಗಿರಿಗೆ ತೊಡಗಿದ್ದ.
ಮಾವ ಅಳಿಯ ಹಾವು ಮುಂಗುಸಿ ತರ ಆದರೂ ಪದ್ದು ದೋಗಣ್ಣನ ಕಪಾಟಿನೊಳಗೆ ಇದ್ದ ಲೇಖಕ್ ಪುಸ್ತಕಕ್ಕೆ ಒಂದು ಕಣ್ಣು ಇಟ್ಟಿದ್ದ. ಕೆಲವು ಬಾರಿ ಅದನ್ನು ಕೇಳಿಯೂ ಇದ್ದ. ದೋಗಣ್ಣ ಅವನ ಮಾತನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ಬಿಗುಮಾನ ತೋರಿಸಿ ಮೀಸೆ ತಿರುವುತ್ತಿದ್ದರು.
ಒಂದು ಬೆಳಿಗ್ಗೆ ದೋಗಣ್ಣ ಎದೆ ಒತ್ತಿಕೊಂಡು, ಕಣ್ಣು ಪಿಳಿ ಪಿಳಿ ಮಾಡಿ ಕುಸಿದು ಕೈಕಾಲು ಬಡಿದಾಗ ಅತ್ತೆ ಓಡಿ ಹೋಗಿ ಪದ್ದುವಿನ ಮುಂದೆ ಗೋಗರೆದರು.
ಪದ್ದು ಓಡಿ ಬಂದು ಮಾವನನ್ನು ಆಸ್ಪತ್ರೆಗೆ ಸಾಗಿಸಲು ಕಾರು ಹೇಳಿದ.
ಕಾರಿಗೆ, ‘ಆಸ್ಪತ್ರೆಗೆ ಕೊಡಲು ದುಡ್ಡು ಬೇಕು’ ಎಂದು ಅತ್ತೆಗೆ ಹೇಳಿದ.
ದೋಗಣ್ಣನ ಹಾಸಿಗೆ ಅಡಿಯಲ್ಲಿದ್ದ ಕಪಾಟಿನ ಬೀಗದ ಕೈಯನ್ನು ಅತ್ತೆ ತೆಗೆದರು.
‘ಕೊಡಿ ಕೊಡಿ ಬೇಗ ಬೇಗ’ ಎಂದು ಪದ್ದು ಕೀಲಿ ಕಸಿದು ಕಪಾಟಿನ ಬೀಗ ತೆಗೆದ
ಅತ್ತೆ ತನ್ನ ಗಂಡನಿಗೆ ಉಡುಪು ತೊಡಿಸುವ ಗಡಿಬಿಡಿಯಲ್ಲಿ ತೊಡಗಿದ್ದರು.
ಇಡೀ ಕಪಾಟು ಜಾಲಾಡಿದ ಪದ್ದು ‘ಅತ್ತೆ ಹಣ ಎಲ್ಲಿ ಇದೆ ಹುಡುಕಿ ಕೊಡಿ’ ಎಂದು ಪಕ್ಕಕ್ಕೆ ಸರಿದ.
ಅತ್ತೆ ಕಪಾಟಿನ ಲಾಕರ್‌ನಲ್ಲಿದ್ದ ಹಣವನ್ನು ಎಣಿಸಿ ಪದ್ದುವಿನ ಕೈಗೆ ಕೊಟ್ಟರು.
ವಾಯು ಪ್ರಕೋಪದಿಂದ ಎದೆ ಹಿಡಿದ ದೋಗಣ್ಣ ಗುಣಮುಖರಾಗಿ ಬಂದು ನೋಡುವಾಗ ಕಪಾಟಿನಲ್ಲಿದ್ದ ಲೇಖಕ್ ಪುಸ್ತಕ ಕಾಣೆಯಾಗಿತ್ತು.
ದೋಗಣ್ಣ ಪದ್ದುವನ್ನು ಮಸೆತು ನೋಡಿದರೂ ಪೆದಂಬು ಗೊಬ್ಬು ತೋರಿಸಿದ್ದ ಆತ ಕ್ಯಾರೇ ಮಾಡದೆ ಒಳಗೊಳಗೆ ನಗುತ್ತಿದ್ದ.
ಆನಂತರ ಪದ್ದು ಕೋಳಿ ಕಟ್ಟದಲ್ಲಿ ಕಟ್ಟಿದ ಜೂಜು ಸೋಲುತ್ತಲೇ ಇರಲಿಲ್ಲ.
ಮುಂದಿನ ಭಾಗದಲ್ಲಿ : ಮನೆಗೆ ಎಳೆದು ತಂದ ಅಗೋಚರ ಶಕ್ತಿ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ