1-ಸೋತು ಗೆದ್ದ ಪದ್ದು

ಪೆದಂಬು ನರಮಾನಿ (ಕಾದಂಬರಿ ಭಾಗ - 1)

ProfileImg
29 Jan '25
2 ನಿಮಿಷದ ಓದು


image

ಪದ್ದುವಿನ ಮುಖದಲ್ಲಿ ನಸುನಗು ಇತ್ತು.

ಯಾಕೆಂದರೆ ಅವನ ಜೂಜು ಕಟ್ಟಿದ್ದ ‘ಉರಿಯ’ ಕೋಳಿ ಸೋತು ಹೋಗಿತ್ತು.

ಇದಕ್ಕೇ ಹೇಳುವುದು ಪದ್ದು ಅಲಿಯಾಸ್ ಪದ್ಮನಾಭ ಪೆದಂಬು ನರಮಾನಿ ಅಂತ.

ಕೋಳಿ ಕಟ್ಟದಲ್ಲಿ ಪದ್ದುವನ್ನು ಮೀರಿಸಿದ ವ್ಯಕ್ತಿ ಆತನ ಊರಿನಲ್ಲಿ ಇರಲಿಲ್ಲ. ಅದು ಆತನಿಗೆ ಮಾವನಿಂದ ಬಂದ ಬಳುವಳಿ. ‘ತಮ್ಮಲೆ ಅಜಿಪ್ಪ ಆಂಡ ಅರುವತ್ತೆ ನೂತ್ತಜಿಪ' ಅಂತ. ಜನರಾಡಿಕೊಳ್ಳುತ್ತಿದ್ದರು.

ಕೋಳಿ ಕಟ್ಟಕ್ಕೆ ಹೋದವರು ಯಾರೂ ಉದ್ದಾರ ಆಗಿಲ್ಲ ಎಂಬ ಮಾತು ಜನ ಜನಿತ. ಆದರೆ ಪದ್ದುವಿನ ವಿಚಾರದಲ್ಲಿ ಆ ಮಾತು ಸುಳ್ಳಾಗಿತ್ತು. ಎಲ್ಲಿಯವರೆಗೆ ಎಂದರೆ ಆ ಊರು ಮತ್ತು ಆತನ ಆಸುಪಾಸಿನ ಊರಿನಲ್ಲಿ ಕೋಳಿ ಕಟ್ಟ ನಡೆದರೆ ಪದ್ದು ಜೂಜು ಕಟ್ಟಿದ ಕೋಳಿಯ ವಿರುದ್ಧ ಯಾರೂ ಜೂಜು ಕಟ್ಟುತ್ತಿರಲಿಲ್ಲ. ಯಾಕೆಂದರೆ ಗೆಲುವು ಪದ್ದುವಿನದ್ದೆ.

ಅದಕ್ಕೆಂದೇ ಆತ ಊರಿನಲ್ಲಿ ಆಸುಪಾಸಿನ ಊರಿನಲ್ಲಿ ಕೋಳಿ ಕಟ್ಟದಲ್ಲಿ ಜೂಜು ಕಟ್ಟುತ್ತಿರಲಿಲ್ಲ. ಕೆಲವೊಮ್ಮೆ ದೊಡ್ಡ ಜೂಜನ್ನು ಕಟ್ಟಿ ಆತ ಸೋತದ್ದೂ ಇದೆ. ಆದರೂ ಆತನ ಮುಖದಲ್ಲಿನ ನಸುನಗು ಹೆಚ್ಚಾಗುತ್ತಿತ್ತೇ ಹೊರತು ಅದು ಕುಂದಿ ಹೋಗುತ್ತಿರಲಿಲ್ಲ. 'ಇದೇನು ಇಕ್ಮತ್' ಎಂದು ಇತರರು ಪೆಚ್ಚಾಗುತ್ತಿದ್ದರು.

ಈಗೆಲ್ಲಾ ಕೋಳಿ ಕಟ್ಟ ಭಾರೀ ಡೇಂಜರ್. ಹಾಗೆಲ್ಲಾ ಕೋಳಿ ಸಾಕುವುದಕ್ಕೆ ಗೊತ್ತಿದೆ ಅಂತ ಹೋದರೆ ಸಾಕಾಗುವುದಿಲ್ಲ. ದಿನಾ ಬೆಳಿಗ್ಗೆ ಎದ್ದು ಓಡುವುದನ್ನೂ ಪ್ರಾಕ್ಟೀಸ್ ಮಾಡಬೇಕು. ತೋಡು, ಪುಣಿ, ಬಾವಿ, ಜರ್ಕೆ ಹಾರುವುದನ್ನೂ ಅಭ್ಯಾಸ ಮಾಡಬೇಕು. ಪೊಲೀಸರ ರೈಡ್, ಅನುಮತಿ ಇಲ್ಲ. ಅಂಕ, ಆಯನ, ಅಮಾಸೆ ಹುಣ್ಣಿಮೆ ಅಂತ  ನೆಪ ಹೇಳಿ ‘ಅನಧಿಕೃತ ಪರವಾನಗಿ’ ಅಂದರೆ ಪೊಲೀಸರು ರೈಡ್ ಮಾಡಬಾರದು ಎಂಬ ಕರಾರಿನ ಫೀಸು ಪಾವತಿಸಿ ಕೋಳಿ ಕಟ್ಟ ನಡೆಯುತ್ತದೆ.

ಕೆಮ್ಮಣ್ಣಿನಲ್ಲಿ ಶನಿವಾರ ಬೆಳಿಗ್ಗೆ ಎಂಟು ಗಂಟೆಯಿಂದ ಆದಿತ್ಯವಾರ ಬೆಳಿಗ್ಗೆ ಎಂಟು ಗಂಟೆಯವರೆಗೆ ನಡೆಯುವ ಭಾರೀ ದೊಡ್ಡ ಜೂಜಿಗೆ ಯಾವ ಪೊಲೀಸ್ ರೈಡ್ ಕೂಡಾ ಆಗುವುದಿಲ್ಲ. ಯಾಕೆಂದರೆ ಅಲ್ಲಿ ಕೋಳಿ ಕಟ್ಟ ನಡೆಯುವುದು ಎಲ್ಲಾ ಊರಿನ ಮಾತ್ರವಲ್ಲ ಪರವೂರಿನ ದುಡ್ಡಿದ್ದ ಜೂಜು ಕೋರರಿಗೆ ಗೊತ್ತಿದ್ದರೂ ಪೊಲೀಸರಿಗೆ ಮಾತ್ರ ಈ ವರೆಗೆ ಗೊತ್ತಿಲ್ಲ. ಯಾಕೆಂದರೆ ಅವರು ಅನುಮತಿ ಕೊಟ್ಟಿಲ್ಲ.

ಈ ಪದ್ದು ಎಲ್ಲಿ ಇಲ್ಲದೇ ಇದ್ದರೂ ಕೆಮ್ಮಣ್ಣಿನ ರೆಸಾರ್ಟ್‌ನಲ್ಲಿ ಹಾಜರ್. ಶನಿವಾರ ಎಂಟು ಗಂಟೆಯ ನಂತರ ಮರು ದಿನ ಬೆಳಿಗ್ಗೆಯವೆಗೆ ಆತ ತೂಟೆ ಕಟ್ಟಿ ಹುಡುಕಿದರೂ ಸಿಗುವುದೇ ಇಲ್ಲ. ಮೊಬೈಲ್ ನಾಟ್‌ರೀಚೇಬಲ್, ವಾಟ್ಸಾಫ್, ಫೇಸ್ ಬುಕ್ ಯಾವುದೇ ಸಂಪರ್ಕ ಇಲ್ಲ. ಕೋಳಿ ಕಟ್ಟದ ಸ್ಥಳಕ್ಕೆ ಹೋಗಬೇಕಾದರೆ ಮೊಬೈಲ್ ಕೌಂಟರಲ್ಲಿ ಕೊಟ್ಟು ಹೋಗಬೇಕು. ಹೊರಗಿನ ಸಂಪರ್ಕ ಇಲ್ಲ. ಹಾಗೆಂದು ಮುಂಬೈ, ಕೊಲ್ಲಿ ರಾಷ್ಟ್ರಗಳು, ಬೆಂಗಳೂರು ಅಂತ ಎಲ್ಲ ಪ್ರದೇಶದ ಗಟ್ಟಿ ಜೂಜು ಕುಳಗಳು ಅಲ್ಲಿ ಜೂಜು ಕಟ್ಟುತ್ತಾರೆ. ಅವರಿಗೆಲ್ಲಾ ಮೊಬೈಲ್ ನಲ್ಲೇ ಆನ್‌ಲೈನ್ ಸಂಪರ್ಕ. ಕೋಳಿಯ ಬಣ್ಣ, ಜಾತಿ ಇತ್ಯಾದಿ ವಿವರ ಅವರಿಗೆ ಮುಟ್ಟುತ್ತದೆ. ಅವರು ಐಪಿಎಲ್ ಬೆಟ್ ಕಟ್ಟಿದಂತೆ ತಮ್ಮ ತಮ್ಮ ಕೋಳಿ ಆಯ್ಕೆ ಮಾಡಿಕೊಳ್ಳುತ್ತಾರೆ. ಗೆದ್ದರೆ ನಿಗದಿಯಾದ ಹಣ ಇ_ಪೇ.

ಈಗೀಗ ಪದ್ದು ಜೂಜು ಕಟ್ಟಿದ ಕೋಳಿಯ ಮುಂದೆ ಕೌಂಟರ್‌ನಲ್ಲಿದ್ದವ ಸಣ್ಣಗೆ ಮಾರ್ಕ್ ಮಾಡುವುದು ಪದ್ದುವಿನ ಗಮನಕ್ಕೂ ಬಂದಿತ್ತು. ಯಾಕೆಂದರೆ ಪದ್ದು ಕಟ್ಟಿದ್ದ ಕೋಳಿ ಗೆಲ್ಲುತ್ತದೆ ಎಂಬುದನ್ನು ಆತ ಸೂಕ್ಷ್ಮವಾಗಿ ಕಂಡು ಕೊಂಡಿದ್ದ. ಇವನಿಗೆ ಮದ್ದು ಅರೆಯಬೇಕು ಎಂದು ಪದ್ದು ಮನಸ್ಸಿನಲ್ಲೇ ಯೋಚಿಸುತ್ತಿದ್ದ. ಅದರಂತೆ ಪದ್ದು ಹತ್ತು ಸಾವಿರ ಜೂಜು ಕಟ್ಟಿದ ಕೋಳಿ ಈಗ ಸೋತಿದೆ...

ಕೌಂಟರ್‌ನಲ್ಲಿದ್ದವ ಇದ್ಯಾಕೆ ಪೆದಂಬು ಆಯಿತು ಎಂದು ಮುಖ ಹುಳಿ ಹುಳಿ ಮಾಡಿದ.

ನನ್ನ ಜೂಜಿನ ಮುಂದೆ ಬಾರಿ ಮಾರ್ಕ್ ಮಾಡ್ತಿಯಾ..... --ಮಗ ಎಂದು ಪದ್ದು ಮನದಲ್ಲೇ ಬೈದ.

ಸ್ವಲ್ಪ ಹೊತ್ತಿನ ನಂತರ ಕಾರ್ಲದ ದೀಪು ಬಂದು ಪದ್ದುವಿನ ಕಿಸೆಗೆ ಐದು ಸಾವಿರ ಹಾಕಿದ. ಆನಂತರ ಮುಂಡೇರಿನ ಮಾಧವ, ಕಾಪುವಿನ ಶಬರಿ, ಪಡ್ಡೆದ್ರದ ರಾಘವ, ಬಜಗೋಳಿಯ ಬ್ಯಾಪ್ಟಿಸ್, ಜಪ್ಪುವಿನ ಹರೀಶ ನಿಯಮಿತವಾಗಿ ಬಂದು ಪದ್ದುವಿನ ಕಿಸೆಗೆ ತಲಾ ಐದೈದು ಸಾವಿರ ಹಾಕಿ ಹೆಬ್ಬೆರಳು ಎತ್ತಿ ನಗುತ್ತಾ ನಡೆದರು...

ಹತ್ತು ಸಾವಿರ ಸೋತು, ಇಪ್ಪತೈದು ಸಾವಿರ ಗೆದ್ದಿದ್ದ ಪದ್ದು.

ಉರಿಯ ಕೋಳಿ ಗೆಲ್ಲುವುದಿಲ್ಲ ಎಂದು ಆತನಿಗೆ ಗೊತ್ತೇ ಇತ್ತು. ಆತ ಅರೆದ ಮದ್ದು ನಾಟಿತ್ತು.

(ಮುಂದಿನ ಭಾಗದಲ್ಲಿ : ಮಾವನ ಅನುಭವ ಕದ್ದ ಅಳಿಯ!)

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ