ಕೆಲವೊಮ್ಮೆ ಈ ಅಫೀಸ್ ಜಂಜಾಟದಲ್ಲಿ ಕಳೆದುಹೋದ್ರೆ ಏನು ನೆನಪಾಗೋದೆ ಇಲ್ಲ. ಹೂಂ ನಿನ್ನ ಕೂಡ ಹೀಗೆ ಬಿಡುವಿಲ್ಲದಷ್ಟು ಕೆಲಸ . ಪಾಪ ಈ ನನ್ನ ಪುಟ್ಟ ಕೈಗಳು ಅದೇಷ್ಟು ಕೆಲಸ ಮಾಡಿಸ್ತಾಳೆ ಅಂತ ಬೈಕೊಂಡ್ವೋ ಏನೋ . ಕಿಲೀಮಣೆಗಳ ಮೇಲೆ ಬೆರಳುಗಳು ಓಡಾಡ್ತಿದ್ರೂ ಹೊಟ್ಟೆ ಮಾತ್ರ ಹಸಿವಾಯ್ತು ನಮಗೆ ಏನಾದ್ರೂ ತಿಂಡಿ ಕೊಡು ಅಂತ ಜೋರಾಗಿ ಕಿರುಚ್ತಾ ಇದ್ವು.
ಸ್ವಲ್ಪ ಸುಮ್ಮನಿರು ಏನಾದ್ರೂ ಕೊಡಸ್ತಿನಿ ಅಂತ ಹಸಿವಾದ ಹೊಟ್ಟೆಗೆ ಗದರಿದೆ . ಮತ್ತೆ ಯಾಕೋ ಕೆಲಸ ಮಾಡೋಕೆ ಮನಸ್ಸಾಗಲೆ ಇಲ್ಲ .ಕಂಪ್ಯೂಟರ್ ಅನ್ನೋ ಫ್ರೇಂಡ್ನಾ ನಾಳೆ ಮೀಟ್ ಮಾಡ್ತಿನಿ ಅಂತ ಹೇಳಿ ಆಫೀಸ್ನಿಂದ ಹೋರಬಂದೆ .
ಸಂಜೆ ಟೈಂ ಬೇರೆ , ಹೊರಗಡೆ ಸಣ್ಣಗೆ ಮಳೆ ಬರ್ತಾ ಇತ್ತು ,ಮಾರುದ್ದದ ಟ್ರಾಫಿಕ್ , ಕಲರ್ ಕಲರ್ ಲೈಟ್ಗಳು , ಮಳೆಗೆ ಬೈತಾ ಓಡಾಡೋ ಒಂದಿಷ್ಟು ಜನ , ಆ ಮಳೆಲ್ಲೂ ತಮ್ಮ ವ್ಯಾಪಾರ ಮುಂದುವರೆಸ್ತಾ ಇರೋ ಪಾಪದ ಜೀವಗಳು ಅಬ್ಬಾ ಹೊರಗಡೆ ಕಾಲಿಡ್ತಾ ಇದ್ದ ಹಾಗೆ ಏನೆನೆಲ್ಲಾ ಕಾಣಿಸಿಬಿಟ್ತು ಈ ಕಣ್ಣಿಗೆ ..!
ಈ ಹಸಿವಾದ ಹೊತ್ತಲ್ಲಿ ಏನ್ ತಿನ್ಬೇಕು ಅನಿಸಿದಾಗೆಲ್ಲ ನಂಗೆ ನೆನಪಾಗೋದು ಮಸಾಲ ದೋಸೆ . ಅದ್ರಲ್ಲು ಫುಟ್ಪಾತ್ನಲ್ಲಿ ಮಾಡೋ ಮಸಾಲ ದೋಸೆ ಅಂದ್ರೆ ನಂಗೆ ಸಿಕ್ಕಾಪಟ್ಟೆ ಇಷ್ಟ . ಊರಲ್ಲಿದ್ದಾಗ ಸತ್ಕಾರ್ ಹೊಟೆಲ್ನಲ್ಲಿ ಯಾವಾಗ್ಲೂ ಮಸಾಲ ದೋಸೆನೆ ತಿಂತಿದ್ದೆ . ಈ ಬೆಂಗಳೂರಿಗೆ ಬಂದ್ಮೇಲೆ ಅದ್ಯಾಕೋ ಆಫಿಸ್ ಹತ್ರ ಇರೋ ಯಾವ್ ಹೋಟೆಲ್ನಲ್ಲೂ ಮಸಾಲ ದೋಸೆ ಅಷ್ಟಾಗಿ ರುಚಿಸ್ಲೇ ಇಲ್ಲ . ಆವತ್ತೊಂದ್ ದಿನ ಹೀಗೆ ನೆಡ್ಕೊಂಡ್ ಹೋಗುವಾಗ ಪಾರ್ಕ್ ಹತ್ರ ಇದ್ದ ದೋಸೆ ಅಂಗಡಿಗೆ ಹೋಗಿ ಮಸಾಲ ದೋಸೆ ತಿಂದೆ ಅದೇನ್ ರುಚಿ ಅಂತೀರ . ..!
ಬಿಸಿ ಬಿಸಿಯಾದ ಕಾವಲಿ ಮೇಲೆ ದೋಸೆ ಹುಯ್ದು ಅದರ ಮೇಲೆ ಖಾರದ ಪುಡಿ ಉದುರಿಸಿ , ದೋಸೆ ಮಧ್ಯ ಆಲೂಗಡ್ಡೆ ಪಲ್ಯ ಇಟ್ಟು , ದೋಸೆ ಸುತ್ತಲೂ ಒಂದೆರಡು ಚಮಚ ತುಪ್ಪ ಹಾಕಿ ದೋಸೆನ ಮಾಡಿಕೊಟ್ಟು ಚಟ್ನಿ , ಸಾಂಬಾರ್ ಜೊತೆ ತಿನ್ನೋಕೆ ಕೊಟ್ರೆ ಅಬ್ಬಾ ಅದರ ಮಜನೇ ಬೇರೆ , ಅದ್ರಲ್ಲೂ ಈ ದೋಸೆ ಜೊತೆ ನೊರೆನೊರೆಯಾದ ಕಾಫಿ ಇದ್ರೆ ನಾನಂತು ಹಾಗೆ ಹಾಗೆ ಕಳೆದುಹೋಗ್ತೀನಿ .
ದೋಸೆ ತಿನ್ನೋವಾಗೆಲ್ಲ ಅಂದ್ಕೊಳ್ತಿನಿ ನಮ್ಮ ಲೈಫ್ ಕೂಡ ಈ ಮಸಾಲ ದೋಸೆ ಹಾಗೆನಾ ಅಂತ .ಒಮ್ಮೊಮ್ಮೆ ಖಾರವಾಗಿದ್ರೆ ಈ ಲೈಫ್ ಮತ್ತೊಮ್ಮೆ ತುಂಬಾ ಸ್ವೀಟ್ ಅನಿಸಿಬಿಡುತ್ತೆ . ಕೆಲವೊಮ್ಮೆ ಖಾಲಿ ದೋಸೆ ತರಾ ಈ ಲೈಫ್ ಇದ್ರೆ ಇನ್ನೊಮ್ಮೆ ಬೆಣ್ಣೆ ದೋಸೆ ಹಾಗೆ ಆಗುತ್ತೆ . ಅದೇಷ್ಟು ಜನರನ್ನಾ ಮೀಟ್ ಮಾಡ್ತಿವಿ . ಕೆಲವೊಬ್ರು ಈ ದೋಸೆ ತರಾ ಇಷ್ಟವಾದ್ರೆ ಇನ್ನು ಕೆಲವರು ದೋಸೆ ಜೊತೆ ಕೊಡೋ ಸಾಂಬಾರ್ ಹಾಗೆ ಇಷ್ಟವೇ ಆಗಲ್ಲ . ಮತ್ತೆ ಕೆಲವ್ರೂ ಚಟ್ನಿ ತರಾ ಬೇಕೊ ಬೇಡವೊ ಅವರ ಜೊತೆ ಇರಬೇಕು ಅನಿಸುತ್ತೆ . ಅದ್ಯಾಕೆ ಈ ಪುಟ್ಟ ತಲೆಲ್ಲಿ ಇಷ್ಟೆಲ್ಲಾ ಯೋಚನೆಗಳು ಬರುತ್ವೊ ನಂಗಂತು ಅರ್ಥವೆ ಆಗಿಲ್ಲ ನೋಡಿ . ದೋಸೆ ಮಾಡ್ಬೇಕು ಅಂದ್ರೆ ಅದರ ಹಿಟ್ಟು ಚೆನ್ನಾಗಿಬೇಕು . ಹಿಟ್ಟು ಚೆನ್ನಾಗಿ ಇದ್ರೆ ತಾನೇ ದೋಸೆ ರುಚಿ ಹೆಚ್ಚೊದು. ಇಲ್ಲದೆ ಹೊದ್ರೆ ದೋಸೆಗೆ ರುಚಿನೆ ಇರೋಲ್ಲ . ಮನುಷ್ಯರಾದ ನಾವ್ಗಳು ಕೂಡ ಈ ದೋಸೆ ಹಿಟ್ಟಿನ ಹಾಗೆ ಪಕ್ವವಾಗ್ಬೇಕು ಇಲ್ದೆ ಹೋದ್ರೆ ಲೈಫ್ನಲ್ಲಿ ಅಂದ್ಕೊಂಡಿದ್ದನ್ನ ಮಾಡೋಕೆ ಆಗೋದೆ ಇಲ್ಲಾ ಅಲ್ವಾ..! ಈ ಮಸಾಲ ದೋಸೆ ಹಿಟ್ಟು ಖಾಲಿ ಆದ್ರೂ ನನ್ನ ಮಾತುಗಳಂತು ಮುಗಿಯೋದೆ ಇಲ್ಲ ಬಿಡಿ . ನೀವು ಹೋಗಿ ಮಳೆ ಬರ್ತಾ ಇದ್ರೆ ಬೆಚ್ಚಗೆ ಕೂತು ಗರಿ ಗರಿಯಾದ ದೋಸೆ ತಿಂದು ನಿಮ್ಮ ಲೈಫ್ನೊಮ್ಮೆ ಲೈಟಾಗಿ ರಿವೈಂಡ್ ಮಾಡ್ಕೊಬನ್ನಿ .
ಮೇಘಾ ಸಂತೋಷ್
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ