"ಅನ್ನದಾತ ಸುಖೀಭವ’ ಎನ್ನುವ ಸಂಸ್ಕೃತಿಯು ನಮ್ಮದು ಹಾಗಾಗಿ ಅನ್ನ ನೀಡುವ ರೈತ ಸದಾ ಸುಖವಾಗಿರಲಿ ಎಂದು ಆಶಿಸುತ್ತ ಅನ್ನದಾತನಿಗಾಗಿ ಸಮರ್ಪಿಸಲಾಗಿರುವ ಈ ದಿನದಂದು ದೇಶದ ಎಲ್ಲಾ ರೈತರಿಗೂ ಕೃತಜ್ಞತೆ ಸಲ್ಲಿಸೋಣ!
ಕೃಷಿ ಇದ್ದಲ್ಲಿ ದುರ್ಭಿಕ್ಷ ಇರಲಾರದು ಎಂಬ ಮಾತು ಅಕ್ಷರಶಃ ನಿಜ,ಕಾರಣ ನಮ್ಮ ದೇಶದ ಆರ್ಥಿಕ ಮೂಲವೇ ಕೃಷಿ ಹಾಗಾಗಿಯೇ ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯಯುವುದು ನೇಗಿಲ ಯೋಗಿ ರೈತನನ್ನು ಮತ್ತು ಆತನ ತ್ಯಾಗ ಕೊಡುಗೆಗಳನ್ನು ಗುರುತಿಸಲು ಹಾಗು ಕೃಷಿಯ ಕೊಡುಗೆಗಳನ್ನು ಸ್ಮರಿಸಲು ಡಿಸೆಂಬರ್ 23 ರನ್ನು "ರಾಷ್ಟ್ರೀಯ ರೈತ ದಿನ" ಅಥವಾ "ಕಿಸಾನ್ ದಿವಸ"ವನ್ನಾಗಿ ದೇಶಾದ್ಯಂತ ಆಚರಿಸಲಾಗುತ್ತದೆ.ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನ ವನ್ನು ರೈತದಿನ ಕಿಸಾನ್ ಕಿಸಾನ್ ದಿವಸ ಎಂದು ಆಚರಿಸಲು ಕಾರಣ ಕೃಷಿಯ ಆರ್ಥಿಕತೆಯ ಮಹತ್ವವನ್ನು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ದೇಶದ ಅನ್ನದಾತರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಅವರ ಪರವಾಗಿ ನಿಂತು ಆಧುನಿಕ ಕೃಷಿ ಅಳವಡಿಕೆ ಪದ್ಧತಿ ಸೇರಿ ರೈತರಿಗೆ ಪೂರಕವಾದ ಹಲವಾರು ರೈತಸ್ನೇಹಿ ಯೋಜನೆಗಳನ್ನು ಪ್ರಧಾನ ಮಂತ್ರಿಯಾಗಿ ತಮ್ಮ ಅಧಿಕಾರದ ಕಡಿಮೆ ಆವಧಿಯಲ್ಲಿ ಜಾರಿಗೆ ತಂದರು ಹಾಗಾಗಿ ಅವರ ಜನ್ಮ ದಿನವನ್ನು "ರಾಷ್ಟ್ರೀಯ ರೈತ ದಿನ" ವೆಂದು ಆಚರಿಸಲಾಗುತ್ತದೆ.ಅನ್ನ ದೈವಿಸ್ವರೂಪ ಹಾಗಾಗಿ ಅನ್ನವೇ ಪರಬ್ರಹ್ಮವೆಂದು ನಮ್ಮ ದೇಶದಲ್ಲಿ ಅನ್ನವನ್ನು ದೇವರೆಂದು ಗೌರವಿಸುತ್ತೇವೆ. ತಾಂತ್ರಿಕತೆ ಎಷ್ಟೇ ಮುಂದುವರೆದರೂ ಕಂಪ್ಯೂಟರ್ನಿಂದ ಇಲ್ಲವೇ ಫ್ಯಾಕ್ಟರಿಗಳಿಂದ ಅನ್ನವನ್ನು ಉತ್ಪಾದಿಸಲು ಸಾಧ್ಯವಿಲ್ಲ, ಹಾಗೆಯೇ ಎಷ್ಟೇ ದುಡ್ಡಿದ್ದರೂ ಕೂಡ ದುಡ್ಡನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಿಲ್ಲ, ನಾವು ಹೊಟ್ಟೆ ತುಂಬಿಸಿಕೊಳ್ಳಲು ರೈತ ಬೆಳೆಯನ್ನ ಬೆಳೆಯಲೇ ಬೇಕು.ಅದರಿಂದಲೇ ಹೊಟ್ಟೆ ತುಂಬಬೇಕು,ಆದರೆ ಹೊಟ್ಟೆ ತುಂಬಿಸುವ ಅನ್ನ ಬೆಳೆವ ರೈತನ ಸ್ಥಿತಿ ಮಾತ್ರ ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತೆ ಇರುವುದು ಶೋಚನೀಯ ರೈತ ಹಲವಾರು ಸವಾಲುಗಳನ್ನು ಎದುರಿಸಿ ತನ್ನ ಬೆಳೆಯನ್ನು ಕಾಪಾಡಿಕೊಂಡು ಉಳಿಸಿ ಜನರ ಹೊಟ್ಟೆ ತುಂಬಿಸುವ ಹಂತಕ್ಕೆ ತರುವಷ್ಟರಲ್ಲಿ ಅವನ ತ್ಯಾಗ ತಾಳ್ಮೆ,ಕಷ್ಟ ನಷ್ಟದ ಜೊತೆಗೆ ಅವನು ಎದುರಿಸಬೇಕಾದ ಸಮಸ್ಯೆಗಳು ಹತ್ತು ಹಲವು ಇರುತ್ತವೆ. ಒಂದೆಡೆ ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪಗಳು ಹೆಚ್ಚಾಗಿ ತೊಂದರೆಗೀಡು ಮಾಡುವವು. ತಿಂಗಳುಗಳ ಕಾಲ ಮಗುವಿನಂತೆ ಜೋಪಾನ ಮಾಡಿ ಕನಸು ಕಟ್ಟಿ ಬೆಳೆಸಿದ ಬೆಳೆಯೂ ಇನ್ನೇನು ಕೈಸೇರಿ ಮಾರಾಟ ಮಾಡಿ ತಮ್ಮ ನಿರೀಕ್ಷೆಗಳನ್ನು ಕನಸುಗಳನ್ನು ನನಸು ಮಾಡಿಕೊಳ್ಳೋಣ ಎನ್ನುವಷ್ಟರಲ್ಲೇ, ಅನಾವೃಷ್ಟಿ ಇಲ್ಲವೇ ಅತಿವೃಷ್ಟಿಯಾಗಿ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಬೆಳೆದ ಬೆಳೆ ನೀರು ಪಾಲಾದಾಗ ಆಗುವ ನೋವು ನಿರಾಸೆ ದುಃಖ ಅವನಿಗಷ್ಟೇ ಗೊತ್ತಿರುತ್ತದೆ, ಇದು ಪ್ರಕೃತಿಯ ಹೊಡೆತವಾದರೆ ಇನ್ನೊಂದೆಡೆ ತಾವು ಬೆಳೆದ ಬೆಳೆಗೆ ನಿರ್ದಿಷ್ಟ ಬೆಂಬಲ ಬೆಲೆ ಇಲ್ಲದೆ ನಷ್ಟ ಅನುಭವಿಸುವ ಅವರ ಗೋಳು ನಿಜಕ್ಕೂ ಬೇಸರ ತರಿಸುತ್ತದೆ, ಇಲ್ಲಿ ಪ್ರಸ್ಥಾಪಿಸಲೇಬೇಕಾದ ವಿಚಾರವೆಂದರೆ ರೈತರಲ್ಲಿ ಎರಡು ವರ್ಗ ಇದೆ ಒಂದು ಮಳೆಯನ್ನೇ ನಂಬಿ ಬೆಳೆ ಬೆಳೆಯುವ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರು ಮತ್ತು ಮಳೆಯ ಮೇಲೆ ಅವಲಂಬಿತವಾಗದೆ ಕೃತಕ ವ್ಯೆವಸ್ಥೆ ಮಾಡಿಕೊಂಡ ದೊಡ್ಡ ಬೆಳೆಗಾರರು, ಇವರಲ್ಲಿ ಹೆಚ್ಚಿನ ತೊಂದರೆ ಅನುಭವಿಸುವವರು ಸಣ್ಣ ಮತ್ತು ಅತಿಸಣ್ಣ ಬಡ ಹಾಗೂ ಮಧ್ಯಮ ಬೆಳೆಗಾರು ಹಾಗಾಗಿ ಸರ್ಕಾರಗಳು ಈ ವರ್ಗದವರ ಬೆನ್ನಿಗೆ ನಿಲ್ಲಬೇಕಿದೆ, ಈಗಾಗಲೇ ಸರ್ಕಾರ ರೈತರಿಗೆ ಆನೂಕೂಲವಾಗುವಂತಹ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡು ಪ್ರೋತ್ಸಾಹ ಕೊಡುತ್ತಿದ್ದರೂ ಕೂಡ ಇನ್ನೂ ಹಲವು ಯೋಜನೆಗಳ ಮೂಲಕ ರೈತರಿಗೆ ನೆರವಾಗಬೇಕಾದ ಅವಶ್ಯಕತೆ ಇದೆ. ಬಡ ಹಾಗು ಮಧ್ಯಮ ವರ್ಗದ ರೈತರಿಗೆ ವರ್ಷವಿಡೀ ಒಂದಿಲ್ಲೊಂದುಸಮಸ್ಯೆಗಳು ಕಟ್ಟಿಟ್ಟ ಬುತ್ತಿ ರೈತರ ಕೆಲವೊಂದು ಸಮಸ್ಯೆಗಳನ್ನು ಸರ್ಕಾರ ಯುಕ್ತಿಯಿಂದ ಮಾಡಬೇಕಾಗುತ್ತದೆ. ವಿದ್ಯುತ್ ಹಾಗು ನೀರಿನ ಸಮಸ್ಯೆಗಳು ಪ್ರತಿ ವರ್ಷವೂ ಸಾಮಾನ್ಯ. ಹಾಗಾಗಿ ಹಲವು ಉಚಿತ ಯೋಜನೆಗಳ ಜೊತೆಗೆ ಸಾಲಮನ್ನಾ , ಬಡ್ಡಿಮನ್ನಾದಂಥ ಸೌಲಭ್ಯಗಳ ಬದಲು ಪ್ರತಿ ಗ್ರಾಮಗಳಿಗೆ ಶಾಶ್ವತವಾಗಿ ಮಳೆ, ಬಿಸಿಲು, ಚಳಿಗಾಲಕ್ಕೆ ಬೆಳೆದ ಬೆಳೆಗಳು ನಷ್ಟವಾಗದಂತ ವ್ಯವಸ್ಥಿತ ಉಗ್ರಾಣಗಳ ವ್ಯೆವಸ್ಥೆ,ಬಿತ್ತನೆ ಬೀಜಗಳ ಉಚಿತ ವಿತರಣೆ ಹಾಗೂ ನೀರು (ಕೆರೆ,ಬಾವಿ) ಹಾಗು ವಿದ್ಯುತ್ (ಸೋಲಾರ್) ನ ಪರ್ಯಾಯ ವ್ಯವಸ್ಥೆ ಮಾಡಿ ಅದರ ನಿರ್ವಹಣೆಯನ್ನು ಸ್ಥಳೀಯ ಆಡಳಿತಕ್ಕೆ ಬಿಡಬೇಕು ಆಗ ರೈತರ ಆತ್ಮಹತ್ಯೆಯಂತಹ ಅತೀ ಕೆಟ್ಟ ಘಟನೆಗಳಿಗೆ ಕಡಿವಾಣ ಹಾಕಬಹುದು, ಆಗ ರೈತರಿಗೆ ಒಂದು ರೀತಿಯ ಬಲದ ಜೊತೆಗೆ ಭದ್ರತೆಯು ಸಿಗುತ್ತದೆ.ಇಂದು ನಮ್ಮಲ್ಲಿ ಅನೇಕರಿಗೆ ಕೃಷಿ, ರೈತ ಎಂದರೆ ಏನೋ ಒಂದು ತಾತ್ಸಾರ ನಾವು ಓದಿದವರು ಅವರು ಏನೂ ಅರಿಯದವರು ಎಂಬ ಒಣ ಹಮ್ಮು, ಆದರೆ ಒಂದು ಬಾರಿ ಯೋಚಿಸಿ ನೋಡಿ ರೈತರಿಲ್ಲದ ಸಮಾಜ ಉಳಿಯಲು ಸಾಧ್ಯವಿಲ್ಲ, ಹಾಗೆಯೇ ಬಹಳಷ್ಟನ್ನು ಓದಿ, ಅನೇಕ ಪದವಿಗಳಿದ್ದೂ ಕೃಷಿಯತ್ತ ಮುಖಮಾಡಿ ಜೀವನ ನಡೆಸುವ ಅದೆಷ್ಟು ಜನರ ಉದಾಹರಣೆಗಳೂ ಕೂಡ ಇವೆ,ರೈತರು ಹಳ್ಳಿಯ ಮುಗ್ಧರೆ ಹೊರತು ಆದರೆ ಅಜ್ಞಾನಿಗಳಲ್ಲ. ಅವರುಗಳು ಇನ್ನೂ ಮಾನವೀಯತೆ ಕರುಣೆ, ನಿಷ್ಠೆ ಮತ್ತು ಶ್ರಮ ಜೀವನದಲ್ಲಿ ನಂಬಿಕೆ ಇರಿಸಿ ಬದುಕುತ್ತಿದ್ದಾರೆ. ಇವರ ಮುಗ್ದತೆಯನ್ನು ಮಧ್ಯವರ್ತಿಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗಾಗಿ ಬಡ ರೈತರು ಅವಶ್ಯವಾಗಿ ಶಿಕ್ಷಣವಂತ ರಾಗಬೇಕು ಕೃಷಿಯ ಸವಲತ್ತುಗಳು ಹಾಗೂ ಆದುನಿಕ ಕೃಷಿಯ ಬಗ್ಗೆ ಹಾಗೂ ಮಾರುಕಟ್ಟೆಗಳ ಸೌಲಭ್ಯ ಲಾಭ ನಷ್ಟಗಳ ಬಗ್ಗೆ ಜ್ಞಾನವಂತರಗಬೇಕು.ರೈತರ ದಿವಸದಂದು ಮಾತ್ರವಲ್ಲದೆ ರೈತನ ಶ್ರಮದ ಬಗ್ಗೆ ಸದಾ ಎಲ್ಲರಿಗೂ ಗೌರವವಿರಬೇಕು, ರೈತರ ಎಲ್ಲಾ ಸಂಕಷ್ಟಗಳನ್ನು ಮನಗಂಡು ಸರ್ಕಾರ ದೇಶದ ಬೆನ್ನೆಲುಬಾಗಿರುವ ರೈತರಿಗೆ ಬೆನ್ನಲುಬಾಗಿ ನಿಲ್ಲಬೇಕಿದೆ, ಅನ್ನದಾತ ಸುಖೀಭವ ಎಂಬ ಹಾರೈಕೆಯಂತೆ ಅನ್ನದಾತ ಸದಾ ಕಾಲಕ್ಕೂ ಸುಖವಾಗಿರಲಿ !
ಗೀತಾಂಜಲಿ ಎನ್,ಎಮ್
Author ✍️
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ