ಕೋವಿಶೀಲ್ಡ್ ನಿಜಕ್ಕೂ ಕೊಲ್ಲುತ್ತಿದೆಯಾ ?

ಕೋವಿಶೀಲ್ಡ್ ಲಸಿಕೆ ಪಡೆದಿರುವವರನ್ನು ಕಾಡುತ್ತಿರುವ ಆತಂಕ ಇನ್ನೆಷ್ಟು ದಿನ ?

ProfileImg
08 May '24
3 ನಿಮಿಷದ ಓದು


image

ಕಳೆದ ಎರಡು ವರ್ಷಗಳ ಹಿಂದೆ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ್ದ ಕೋವಿಡ್ - 19 ನಿಂದ ಮುಕ್ತಿ ಪಡೆದು ಇದೀಗ ತಾನೆ ಸುಧಾರಿಸಿಕೊಳ್ಳುತ್ತಿರುವ ನಡುವೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದು ಜನರನ್ನು ಆತಂಕಕ್ಕೆ ದೂಡಿದೆ.

ಕೊರೊನಾ ವೈರಸ್‌ಗೆ ರಾಮಬಾಣವಾಗಿ ಮೊದಲ ಬಾರಿಗೆ ದೇಶದಲ್ಲಿ ಕೊವ್ಯಾಕ್ಸೀನ್ ಲಸಿಕೆ ನೀಡಲಾಗಿತ್ತು. ತದನಂತರ ಇನ್ನಷ್ಟು ಪರಿಣಾಮಕಾರಿಯಾದ ಕೋವೀಶೀಲ್ಡ್ ಲಸಿಕೆಯನ್ನು ಜನತೆಗೆ ನೀಡಲಾಯಿತು.‌ ಜನರೂ ಸಹ ಆಸಕ್ತಿ ವಹಿಸಿ ಲಸಿಕೆ ಪಡೆದುಕೊಂಡರು. ದಿನಗಳು ಕಳೆದಂತೆ ಇಡೀ ಜಗತ್ತಿನಲ್ಲಿ ಕೊರೊನಾ ವೈರಸ್ ಹರಡುವಿಕೆ ಕ್ರಮೇಣ ಕಡಿಮೆಯಾಗುತ್ತಾ ಬಂದಿತು. ಹೀಗಿರುವಾಗ ಕೋವಿಶೀಲ್ಡ್ ಲಸಿಕೆಯಿಂದ ಅಡ್ಡ ಪರಿಣಾಮವಿದೆ, ಇದು ಮಾರಣಾಂತಿಕವಾಗಿದೆ ಎಂಬ ಮಾಹಿತಿ ಹೊರ ಬಿದ್ದಿದ್ದು ಇದು ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿನ ಜನರ ಆತಂಕಕ್ಕೆ ಕಾರಣವಾಗಿದೆ.

ಕೋವಿಶೀಲ್ಡ್ ಬಗ್ಗೆ ಹೊರ ಬಿದ್ದಿರುವ ಮಾಹಿತಿ ಏನು ?

ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆ ಜಂಟಿಯಾಗಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿದವು. ಈ ಕೋವಿಶೀಲ್ಡ್ ಲಸಿಕೆ ಕೋವಿಡ್ ವಿರುದ್ಧ ಶೇ 60 ರಿಂದ 80% ಪರಿಣಾಮಕಾರಿಯಾಗಲಿದೆ ಎನ್ನಲಾಗಿತ್ತು. ತದನಂತರ ಜಗತ್ತಿನ ಹಲವು ದೇಶಗಳು ಕೋವಿಶೀಲ್ಡ್ ಲಸಿಕೆಯನ್ನು ಪ್ರಜೆಗಳಿಗೆ ಕೊಡಿಸಿದವು. ಕೆಲ ದಿನಗಳ ನಂತರ ಕೋವಿಶೀಲ್ಡ್ ಲಸಿಕೆಯಲ್ಲಿ ಅಡ್ಡಪರಿಣಾಮವಿದ್ದು ಹೃದಯಾಘಾತ ಹಾಗೂ ರಕ್ತಹೆಪ್ಪುಗಟ್ಟುವಿಕೆಯಂತಹ ಗಂಭೀರ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ ಎಂಬ ವಿಷಯ ಹೊರ ಬಂದಿತು. ಆನಂತರ ಆಸ್ಟ್ರಿಯ ಸೇರಿದಂತೆ ಇತರ ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಬ್ಯಾನ್ ಮಾಡಲಾಯಿತು. ಈ ಕುರಿತ ವಿಷಯ ಲಂಡನ್‌ನ ನ್ಯಾಯಾಲಯಕ್ಕೆ ಹೋಯಿತು. ಇದೀಗ ಖುದ್ದು ತಯಾರಕರೇ ಕೋವಿಶೀಲ್ಡ್ ಲಸಿಕೆಯಿಂದ‌ ಅಡ್ಡ ಪರಿಣಾಮ ಇದೆ ಎಂದು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಬ್ರಿಟನ್ ಪತ್ರಿಕೆಯೊಂದರಿಂದ ಬಹಿರಂಗವಾಗಿದೆ.

ಹಾಗಾದರೆ ಲಸಿಕಾ ತಯಾರಿಕಾ ಸಂಸ್ಥೆ ಹೇಳಿರುವುದೇನು ?

ಕೋವಿಶೀಲ್ಡ್ ಲಸಿಕೆಯು 50 ಸಾವಿರ ಜನರ ಪೈಕಿ ಒಬ್ಬರ ದೇಹದ ಮೇಲೆ ಅಡ್ಡ ಪರಿಣಾಮ‌ ಬೀರಬಹುದು. ಅಂದರೆ ಲಕ್ಷಕ್ಕೆ ಇಬ್ಬರಲ್ಲಿ ಇದು ಕಾಣಿಸಿಕೊಳ್ಳಬಹುದು ಎಂದು ಕೋವಿಶೀಲ್ಡ್ ಲಸಿಕೆ ತಯಾರಕರು ಹೇಳಿದ್ದಾರೆಂದು ಪತ್ರಿಕಾ ವರದಿಗಳಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ 2020 ರಲ್ಲಿ 28,579 ಹಠಾತ್ ಸಾವುಗಳು ಸಂಭವಿಸಿದ್ದವು. ನಂತರ 2021 ರಲ್ಲಿ ಅದು 28,413 ಕ್ಕೆ ಇಳಿಕೆ ಕಂಡಿತ್ತು. ಆದರೆ 2022 ರಲ್ಲಿ 32,457ಕ್ಕೆ ಏರಿಕೆ‌ ಕಂಡಿತ್ತು. ಇದನ್ನು 2021 ಕ್ಕೆ ಹೋಲಿಸಿಕೊಂಡರೆ ಶೇ12% ರಷ್ಟು ಹೆಚ್ಚಾಗಿದೆ.

ಸರ್ಕಾರದ ಅಂಕಿ ಅಂಶಗಳ‌ ಪ್ರಕಾರ ದೇಶದಲ್ಲಿ ಒಟ್ಟು 80 ಕೋಟಿ ಜನರಿಗೆ ಬೂಸ್ಟರ್ ಡೋಸ್ ಸೇರಿದಂತೆ ಕೋವಿಶೀಲ್ಡ್  ನ ಒಟ್ಟು 200 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಇದಕ್ಕೆ ಹೋಲಿಸಿಕೊಂಡಾಗ 80 ಕೋಟಿ ಜನರ ಪೈಕಿ 4044 ಮಂದಿ ಹಠಾತ್ ಸಾವಿಗೀಡಾಗಿದ್ದಾರೆ. ಈ ಎಲ್ಲಾ ಸಾವುಗಳಿಗೂ ಲಸಿಕೆಯೇ ಕಾರಣ ಎಂದರೂ ಆ ಪ್ರಕಾರ 1.97,820 ಜನರ ಪೈಕಿ ಒಬ್ಬರಿಗೆ ಈ ಸಮಸ್ಯೆ ಸಂಭವಿಸುವ ಸಾಧ್ಯತೆ ಇದೆ ಎಂದಾಗುತ್ತದೆ.

ಮುಂದಿನ ಎಷ್ಟು ವರ್ಷಗಳವರೆಗೆ ಲಸಿಕೆಯ ಅಡ್ಡ ಪರಿಣಾಮ ಸಂಭವಿಸಬಹುದು ?

ಕೋವಿಶೀಲ್ಡ್ ನ ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ ಮೂರು ತಿಂಗಳ ಅಂತರ ನೀಡಲಾಗಿತ್ತು. ಅದರ ಬಳಿಕ ಬೂಸ್ಟರ್ ಡೋಸ್ ಗೆ ಇನ್ನು ಕೆಲ ತಿಂಗಳುಗಳ ಅಂತರ ಕೊಡಲಾಯ್ತು. ಈ ಹಿನ್ನೆಲೆ ಮುಂದಿನ ಎಷ್ಟು ವರ್ಷಗಳವರೆಗೆ ಅಡ್ಡ ಪರಿಣಾಮ ಎದುರಿಸಬೇಕು ಎಂಬುದರ ಬಗ್ಗೆ ವೈದ್ಯಕೀಯ ಸಂಶೋಧನೆಗಳಿಂದ ತಿಳಿಯಬೇಕಾಗುತ್ತದೆ. ಇದನ್ನು ಲಸಿಕೆ ತಯಾರಿಕರೇ ಸ್ಪಷ್ಟ ಪಡಿಸಬೇಕಿದೆ.

ಈ ರೀತಿಯ ಅಡ್ಡಪರಿಣಾಮ ಕೇವಲ ಕೋವಿಶೀಲ್ಡ್ ನಲ್ಲಿ ಮಾತ್ರವೇ ?

ಆರೋಗ್ಯ ಸಮಸ್ಯೆಗಳ ನಿವಾರಣೆಗೆ ತೆಗೆದುಕೊಳ್ಳುವ ಬಹುತೇಕ ಔಷಧಗಳಲ್ಲಿ ಅಡ್ಡಪರಿಣಾಮವಿರುತ್ತದೆ. ಇದು ಹೊಸತೇನಲ್ಲ. ಸಾಮಾನ್ಯ ಜ್ವರಕ್ಕೆ ಕೊಡುವ ಮಾತ್ರೆಗಳು ಅಥವಾ ಇತರ ಯಾವುದೇ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ನೀಡುವ ಆಂಟಿ ಬಯೋಟಿಕ್ ಮಾತ್ರೆಗಳ ಜೊತೆ ಗ್ಯಾಸ್ಟ್ರಿಕ್ ಮಾತ್ರೆಗಳನ್ನು ಸಹ ವೈದ್ಯರು ಬರೆಯುವುದು ಇದೇ ಕಾರಣಕ್ಕೆ.

ಕೇವಲ ಔಷಧವಷ್ಟೇ ಅಲ್ಲದೇ ರೋಗಿಗಳಿಗೆ ಅಗತ್ಯವಾಗಿ ಮಾಡಿಸುವ ವಿವಿಧ ಬಗೆಯ ಸ್ಕ್ಯಾನಿಂಗ್‌ಗಳು, ಎಕ್ಸ್ ರೇ ಸೇರಿದಂತೆ ಇನ್ನಿತರ ವೈದ್ಯಕೀಯ ಚಿಕಿತ್ಸೆಗಳು ಸಹ ದೇಹಕ್ಕೆ ಒಳ್ಳೆಯದಲ್ಲ. ಔಷಧಿ ಪಡೆದು ಖಾಯಿಲೆ ಗುಣಪಡಿಸಿಕೊಳ್ಳುವುದಕ್ಕಿಂತ ಅದು ಬಾರದಂತೆ ತಡೆಗಟ್ಟುವುದು ಸೂಕ್ತ ಎನ್ನುವುದು ವೈದ್ಯಲೋಕದ ಉವಾಚ.

ತಂಪು ಪಾನೀಯ, ಐಸ್ ಕ್ರೀಂ ಸೇವನೆ ಮಾಡಬಹುದೇ ?

ಕೊರೊನಾ ವೈರಸ್‌ನಿಂದ ಮುಕ್ತಿಗಾಗಿ ಸರ್ಕಾರ ನೀಡಿದ್ದ ಕೋವಿಶೀಲ್ಡ್ ಲಸಿಕೆ ಪಡೆದವರು ತಂಪು ಪಾನೀಯ, ಐಸ್ ಕ್ರೀಂ ನಂತಹ ಪದಾರ್ಥಗಳನ್ನು ಸೇವಿಸಬಾರದು ಎಂಬ ಖಾಸಗಿ ಕಾಲೇಜೊಂದರ ಆಡಳಿತ ಮಂಡಳಿ ಬಿಡುಗಡೆಗೊಳಿಸಿದೆ ಎನ್ನಲಾಗಿರುವ ಪತ್ರವೊಂದರಲ್ಲಿ ಈ ರೀತಿಯ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಇದು ಸುಳ್ಳು ಸುದ್ದಿ ಎಂಬುದಾಗಿ ಆರೋಗ್ಯ ಇಲಾಖೆ ಸ್ಪಷ್ಟ ಪಡಿಸಿದೆ. ಹಾಗಾಗಿ ಇದರ ಮೇಲೆ ಹೆಚ್ಚು ಚರ್ಚೆಗಳು ಅನಗತ್ಯ ಹಾಗೂ ಕಾಲಾಹರಣ ಎಂದಷ್ಟೇ ಹೇಳಬಹುದು.

ಕೋವಿಡ್‌ನ ಎರಡನೇ ಅಲೆಯಲ್ಲಿ ಸಾವಿನ ಸರಮಾಲೆ

ಕೋವಿಡ್‌ನ ಎರಡನೇ ಅಲೆ ಎದ್ದಾಗ ಇದ್ದಕ್ಕಿದ್ದಂತೆ ಸಾವುಗಳ ಸಂಖ್ಯೆ ದಿಢೀರ್ ಏರಿಕೆ ಕಂಡಿತ್ತು. ಆಗಲೂ ಮಧ್ಯ ವಯಸ್ಕರೇ ಹೆಚ್ಚಾಗಿ ಸಾವಿಗೀಡಾಗಿದ್ದರು. ನಿತ್ಯ ಕೇಳಿ ಬರುತ್ತಿದ್ದ ಸಾವಿನ ಸುದ್ದಿಗಳೇ ಇನ್ನಷ್ಟು ದುರ್ಬಲ ಮನಸ್ಸಿನವರ ಹಠಾತ್ ಸಾವುಗಳಿಗೆ ಕಾರಣವಾದ ಸಮಯವದು. ಈ ಮಧ್ಯೆ ಜನಸಾಮಾನ್ಯರಿಗೆ ಉಚಿತವಾಗಿ ಕೊಡಲಾದ ಲಸಿಕೆ ಸಾಕಷ್ಟು ಸಾವು ನೋವುಗಳನ್ನು ತಡೆದಿದೆ ಎಂಬ ಮಾತು ಸಹ ಇದೆ. ಹೀಗಿದ್ದು ಲಸಿಕೆಯಿಂದ ಅಡ್ಡ ಪರಿಣಾಮವಿದೆ ಎಂಬ ವಿಚಾರ ಬಹಿರಂಗವಾಗಿದೆ. ಕೋವಿಶೀಲ್ಡ್ ಪಡೆದಿರುವವರ ಆರೋಗ್ಯದ ಮೇಲೆ ಇದು ಮುಂದಿನ ಇನ್ನು ಎಷ್ಟು ಸಮಯದವರೆಗೆ ಅಡ್ಡ ಪರಿಣಾಮ ಬೀರಲಿದೆ ಎಂಬುದರ ಬಗ್ಗೆ ಲಸಿಕೆ ತಯಾರಿಸಿದ ಸಂಸ್ಥೆಯೇ ಸೂಕ್ತವಾದ ಸ್ಪಷ್ಟನೆಯನ್ನು ಕೊಡಬೇಕಾಗಿರುವುದು ಅತ್ಯಾವಶ್ಯಕವಾಗಿದೆ.

ಹಕ್ಕುತ್ಯಾಗ: ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳು ಮತ್ತು Ayra ಅಥವಾ Ayra ಟೆಕ್ನಾಲಜೀಸ್‌ನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಒದಗಿಸಿದ ಮಾಹಿತಿಯನ್ನು ಪರಿಶೀಲಿಸಲಾಗಿಲ್ಲ. ಇದು ವೈದ್ಯಕೀಯ ಸಲಹೆಯಾಗಿ ಉದ್ದೇಶಿಸಿಲ್ಲ. ಯಾವುದೇ ಆರೋಗ್ಯ ಅಥವಾ ಕ್ಷೇಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಓದುಗರು ಆರೋಗ್ಯ ವೃತ್ತಿಪರ ಅಥವಾ ವೈದ್ಯರನ್ನು ಸಂಪರ್ಕಿಸಬೇಕು.

ಕೆಟೆಗರೀ / ವರ್ಗ:ಶಿಕ್ಷಣ



ProfileImg

ಇದರ ಲೇಖಕರು ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ