ಮಾನವ ಹಕ್ಕುಗಳ ದಿನ ಡಿಸೆಂಬರ್ 10
ಭೂಮಿಯ ಮೇಲೆ ಜೀವಿಸಲು ಪ್ರತಿಯೊಂದು ಜೀವಿಗೂ ಹಕ್ಕಿದೆ.ಆದರೆ ಎಲ್ಲಾ ಜೀವಿಗಳಿಗಿಂತಲೂ ಮಾನವ ಬುದ್ದಿಜೀವಿಯಾಗಿದ್ದು ಆತನಿಗೆ ಮಾತನಾಡುವ ಕೌಶಲ್ಯ ಇರುವುದರಿಂದ ತನ್ನ ಅಗತ್ಯತೆಗಳಿಗೆ ತಕ್ಕಂತೆ ವ್ಯವಸ್ಥೆಗಳನ್ನು ರೂಪಿಸಿಕೊಂಡು ಸಂತೃಪ್ತಿಯ ಜೀವನವನ್ನು ನಡೆಸುವುದಕ್ಕೆ ಮುಂದಾಗುತ್ತಾನೆ.
ಪ್ರತಿಯೊಬ್ಬ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ಆಹಾರ, ಉಡುಪು ಮತ್ತು ವಸತಿ. ಇವು ಮೂಲಭೂತ ಹಕ್ಕುಗಳು. ಇವುಗಳಿಲ್ಲದೆ ಮನುಷ್ಯನ ಜೀವನ ಎಂದಿಗೂ ಕಷ್ಟವೇ. ಈ ಮೂಲಭೂತ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ.ಇದರೊಂದಿಗೆ ವ್ಯಕ್ತಿಯ ಜೀವನ, ಘನತೆಗೆ ಸಂಬಂಧಿಸಿದ ಹಕ್ಕುಗಳು, ವಾಕ್ ಸ್ವಾತಂತ್ರ್ಯ,ಆಹಾರ, ಶಿಕ್ಷಣ, ಸಾಮಾಜಿಕ ಭದ್ರತೆ, ಸಂಘಟನೆ,ರಾಷ್ಟ್ರೀಯತೆ, ರಕ್ಷಣೆ, ಆರೋಗ್ಯದ ಜತೆಗೆ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವ ಹಕ್ಕುಗಳು ಕೂಡ ಇದರ ವ್ಯಾಪ್ತಿಯಲ್ಲಿ ಬರುತ್ತವೆ.
ಹಾಗಾದರೆ ಮಾನವ ಹಕ್ಕುಗಳು ಎಂದರೇನೆಂದು ವ್ಯಾಖ್ಯಾನಿಸುವಾಗ “ ಜನಾಂಗ, ಲಿಂಗ, ರಾಷ್ಟ್ರೀಯತೆ, ಭಾಷೆ, ಧರ್ಮ ಅಥವಾ ಯಾವುದೇ ಇತರ ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರಿಗೆ ಅಂತರ್ಗತವಾಗಿರುವ ಹಕ್ಕುಗಳೇ ‘ಮಾನವ ಹಕ್ಕು’. ಈ ಎಲ್ಲ ಹಕ್ಕುಗಳು ನಿಯಮ ಬದ್ಧವಾದ ಅಥವಾ ಕಾನೂನು ಬದ್ಧವಾಗಿ ಸಾರ್ವತ್ರಿಕವಾಗಿದ್ದಾಗ ಜೀವನ ನಿರ್ವಹಣೆ ಉತ್ತಮವಾಗುತ್ತದೆ. ಆದರೆ ಕೆಲವೊಮ್ಮೆ ಇವುಗಳ ಬಗ್ಗೆ ತಿಳುವಳಿಕೆ ಇದ್ದರೆ ಮಾತ್ರ ಸಾಲದು ಅದನ್ನು ಸಮಯ ಸಂದರ್ಭದಲ್ಲಿ ತಕ್ಕಂತೆ ಪಡೆದುಕೊಳ್ಳಲು ತಿಳಿದಿರಬೇಕು.
ಒಮ್ಮೆ ಎಂದಿನಂತೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಅತಿಯಾದ ಜನಸಂದಣಿಯಿಂದ ನಿಲ್ಲುವುದಕ್ಕೂ ಕಷ್ಟಕರವಾದಂತಹ ಪರಿಸ್ಥಿತಿ. ಉಚಿತ ಪ್ರಯಾಣದ ಭರಾಟೆಯಲ್ಲಿ ಅಪರೂಪಕ್ಕೆ ಜನಸಂದಣಿ ಇರುತ್ತಿದ್ದ ಬಸ್ಸುಗಳು ಇತ್ತೀಚೆಗೆ ಪ್ರತಿನಿತ್ಯವೂ ತುಂಬಿ ತುಳುಕುತ್ತಿದೆ.ಈ ಹಿಂದೆ ವಯಸ್ಸಾದವರಿಗೆ, ಅಸಹಾಯಕರಿಗೆ ,ಚಿಕ್ಕ ಮಕ್ಕಳನ್ನು ಎತ್ತಿಕೊಂಡಿರುವವರಿಗೆ ಕರೆದು ಸೀಟನ್ನು ಕೊಡುತ್ತಿದ್ದ ಕಾಲ ಒಂದಿತ್ತು. ಆದರೆ ಇತ್ತೀಚೆಗೆ ಮೌಲ್ಯಗಳು ಕುಸಿದಿದ್ದು, ತಮ್ಮ ತಮ್ಮ ಅನುಕೂಲತೆಗಳೇ ಮುಖ್ಯವಾಗಿ ಹೋಗಿದೆ. ಜೀವನ ನಿರ್ವಹಣೆಗಾಗಿ ವೃತ್ತಿಯ ದಿಸೆಯಲ್ಲಿ ದಿನಂಪ್ರತಿ ಬಸ್ಸಿನಲ್ಲಿ ಪ್ರಯಾಣಿಸುವವರಿಗಂತೂ ಪ್ರತಿನಿತ್ಯ ನರಕ ಸದೃಶ. ಇಂತಹ ಪರಿಸ್ಥಿತಿಯಲ್ಲಿ ದೈಹಿಕ ನ್ಯೂನತೆ ಇರುವ ಒಬ್ಬ ವ್ಯಕ್ತಿ ಬಸ್ಸಿಗೆ ಹತ್ತುತ್ತಾನೆ. ಆತ ಕಷ್ಟ ಪಟ್ಟು ಹೇಗೋ ವಿಕಲಚೇತನರಿಗೆ ಮೀಸಲಾಗಿರಿಸಿದ್ದ ಸೀಟಿನ ಹತ್ತಿರ ಬಂದು ಅಲ್ಲಿ ಕುಳಿತಿದ್ದ ವ್ಯಕ್ತಿಗೆ ತನಗೆ ಕುಳಿತುಕೊಳ್ಳಲು ಅವಕಾಶ ಕೇಳುತ್ತಾನೆ. ಸೀಟನ್ನು ಕೊಡಲು ನಿರಾಕರಿಸಿದಾಗ,“ವಿಕಲಚೇತನರಿಗಾಗಿ” ಎಂದು ಬರೆದಿರುವ ಬೋರ್ಡ್ ನ್ನು ತೋರಿಸಿ ತನ್ನ ಹಕ್ಕನ್ನು ಚಲಾಯಿಸಿಕೊಂಡು ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ. ಆಗ ನನಗೆ ಅನಿಸಿದ್ದು,
ತೊಟ್ಟಿಲಲ್ಲಿ ಮಲಗಿರುವ ಮಗು ಅಳದೆ ತನ್ನಷ್ಟಕ್ಕೆ ಇದ್ದರೆ ತಾಯಿ, “ನಿಶ್ಚಿಂತೆಯಾಗಿ ಮಗು ಮಲಗಿದೆ. ಅದಕ್ಕೆ ಹಸಿವು ,ನೀರಡಿಕೆಯ ಅಗತ್ಯವಿಲ್ಲ “ವೆಂದು ಭಾವಿಸಬಹುದು.ಆದರೆ ಮಗು ಅತ್ತರೆ ಮಾತ್ರ ಅದರ ಬೇಡಿಕೆ ಏನಾಗಿರಬಹುದು ಎಂದು ತಾಯಿ ಗಮನಿಸುತ್ತಲೇ ಇರುತ್ತಾಳೆ.ಅದಕ್ಕಲ್ಲವೇ ಹೇಳುವುದು “ಮಗು ಅತ್ತರಷ್ಟೇ ಹಾಲು” ಎಂದು.
ಇದರ ಜೊತೆಗೆ ಪ್ರತಿಯೊಬ್ಬಬ್ಬರು ತಮ್ಮ ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಬೇಕಾಗಿರುವುದು ಅಷ್ಟೇ ಮುಖ್ಯ.ಎಲ್ಲಿ ನಮ್ಮ ಹಕ್ಕುಗಳು ನಮಗೆ ದೊರೆಯುವುದಿಲ್ಲವೋ ಅಲ್ಲಿ ಅದನ್ನು ಚಲಾಯಿಸಿ ಪಡೆದುಕೊಳ್ಳಬೇಕಾಗುತ್ತದೆ.
ಇಂದು ಮಾನವ ಹಕ್ಕುಗಳ ದಿನ.ಮಾನವ ಹಕ್ಕುಗಳ ದಿನವನ್ನು ಪ್ರಪಂಚದಾದ್ಯಂತ ಡಿಸೆಂಬರ್ 10 ರಂದು ವಾರ್ಷಿಕವಾಗಿ ಆಚರಿಸಲಾಗುತ್ತದೆ. ಇದು ವಿಶ್ವದ ಅತ್ಯಂತ ಅದ್ಭುತವಾದ ಜಾಗತಿಕ ಪ್ರತಿಜ್ಞೆಗಳ ವಾರ್ಷಿಕೋತ್ಸವವಾಗಿದೆ. ಯುನಿವರ್ಸಲ್ ಡಿಕ್ಲರೇಶನ್ ಆಫ್ ಹ್ಯೂಮನ್ ರೈಟ್ಸ್ (UDHR) ಇದು ಜನಾಂಗ, ಬಣ್ಣ, ಧರ್ಮ, ಲಿಂಗ, ಭಾಷೆ, ರಾಜಕೀಯ ಅಥವಾ ಇತರ ಅಭಿಪ್ರಾಯಗಳು, ರಾಷ್ಟ್ರೀಯ ಅಥವಾ ಸಾಮಾಜಿಕ ಮೂಲ, ಆಸ್ತಿ, ಜನ್ಮ ಅಥವಾ ಇತರ ಸ್ಥಾನಮಾನಗಳನ್ನು ಲೆಕ್ಕಿಸದೆ - ಎಲ್ಲರಿಗೂ ಅರ್ಹವಾದ ಹಕ್ಕುಗಳನ್ನು ಪ್ರತಿಪಾದಿಸುತ್ತದೆ.ಇದು ಮೊದಲು 10 ಡಿಸೆಂಬರ್ 1948 ರಂದು ಪ್ಯಾರಿಸ್‌ನಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯಿಂದ ಘೋಷಿಸಲಾಯಿತು. ಮತ್ತು ಮೊದಲ ಬಾರಿಗೆ ಮೂಲಭೂತ ಮಾನವ ಹಕ್ಕುಗಳನ್ನು ಸಾರ್ವತ್ರಿಕವಾಗಿ ರಕ್ಷಿಸುವಲ್ಲಿ ಚಿಂತಿಸಲಾಯಿತಾದರೂ 1950 ರಿಂದ ಔಪಚಾರಿಕವಾಗಿ ಇದರ ಆಚರಣೆಯು ಪ್ರಾರಂಭವಾಯಿತು.
UDHR ನ ಆರ್ಟಿಕಲ್ 1 ಹೀಗೆ ಹೇಳುತ್ತದೆ: "ಎಲ್ಲಾ ಮಾನವರು ಸ್ವತಂತ್ರವಾಗಿ ಹುಟ್ಟಿದ್ದಾರೆ ಮತ್ತು ಘನತೆ ಮತ್ತು ಹಕ್ಕುಗಳಲ್ಲಿ ಸಮಾನರಾಗಿದ್ದಾರೆ." ತಾರತಮ್ಯದಿಂದ ಮುಕ್ತಿ, ಅನುಚ್ಛೇದ 2 ರಲ್ಲಿ ನಿಗದಿಪಡಿಸಲಾಗಿದೆ, ಈ ಸಾಲುಗಳು ಸಮಾನತೆಯನ್ನು ಖಚಿತಪಡಿಸುವಲ್ಲಿ UDHR ನ ಪಾತ್ರವನ್ನು ತಿಳಿಸುತ್ತಿದೆ.
ವಿಶ್ವ ಮಾನವ ಹಕ್ಕುಗಳ ದಿನದ ಉದ್ದೇಶಗಳು ಹೀಗಿವೆ.
ಯಾವುದೇ ಧರ್ಮ, ಜಾತಿ, ಲಿಂಗ, ಜನಾಂಗ, ಬಣ್ಣ, ಭಾಷೆ, ರಾಜಕೀಯ ಅಥವಾ ಇತರೆ ಅಭಿಪ್ರಾಯಗಳು, ಸ್ಥಾನಮಾನವನ್ನು ಲೆಕ್ಕಿಸದೆ ಎಲ್ಲಾ ಮಾನವರು ಸಮಾನರು. ಎಲ್ಲರೂ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂಬುದನ್ನು ಸೂಚಿಸುವುದು .
ಘರ್ಷಣೆಗಳು ಮತ್ತು ಬಿಕ್ಕಟ್ಟುಗಳು ಹೆಚ್ಚುತ್ತಿರುವ ಜಗತ್ತಿನಲ್ಲಿ, ಮಾನವ ಹಕ್ಕುಗಳ ಅರಿವನ್ನು ಮೂಡಿಸಲು ನಮಗೆ ಅವಕಾಶವನ್ನು ನೀಡುವುದಲ್ಲದೆ ಮೂಲಭೂತ ಹಕ್ಕುಗಳಿಗೆ ಧಕ್ಕೆ ಬಂದಾಗ, ಮಾನವ ಹಕ್ಕುಗಳು ಮತ್ತು ಮಾನವ ಘನತೆಯನ್ನು ರಕ್ಷಿಸಲು ಮತ್ತು ಹೆಚ್ಚಿಸಲು ತಮ್ಮನ್ನು ತೊಡಗಿಸಿಕೊಳ್ಳಲು ಇದು ಕರೆ ನೀಡುತ್ತದೆ .
ಇನ್ನು ಭಾರತದಲ್ಲಿನ ಮಾನವ ಹಕ್ಕುಗಳ ಸ್ಥಿತಿ ಗತಿ ನೋಡುವುದಾದರೆ,ಭಾರತವು ವಿಶ್ವದ ಅತಿದೊಡ್ಡ ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿದ್ದು ನಮ್ಮ ಸಂವಿಧಾನದಲ್ಲಿ ಲಿಖಿತವಾದ ಮೂಲಭೂತ ಹಕ್ಕುಗಳನ್ನು ಹೀಗಿವೆ.
*ಸಮಾನತೆಯ ಹಕ್ಕು,*ಸ್ವಾತಂತ್ರ್ಯದ ಹಕ್ಕು,*ಶೋಷಣೆಯ ವಿರುದ್ಧದ ಹಕ್ಕು,*ಧಾರ್ಮಿಕ ಸ್ವಾತಂತ್ರ್ಯದ ಹಕ್ಕು,*ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು,* ಸಂವಿಧಾನಬದ್ಧ ಪರಿಹಾರದ ಹಕ್ಕು. ಇದರಲ್ಲಿ ಧರ್ಮದ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ, ಹಾಗೆಯೇ ಕಾರ್ಯಾಂಗ ಮತ್ತು ನ್ಯಾಯಾಂಗದ ಪ್ರತ್ಯೇಕತೆ ಮತ್ತು ದೇಶ ಮತ್ತು ವಿದೇಶದಲ್ಲಿ ಚಲಿಸುವ ಸ್ವಾತಂತ್ರ್ಯವನ್ನು ಇದು ಒಳಗೊಂಡಿದೆ. ದೇಶವು ಸ್ವತಂತ್ರ ನ್ಯಾಯಾಂಗವನ್ನು ಹೊಂದಿದೆ.ಜೊತೆಗೆ ಮಾನವ ಹಕ್ಕುಗಳ ಸಮಸ್ಯೆಗಳನ್ನು ಪರಿಶೀಲಿಸಲು ವಿವಿಧ ಸಂಸ್ಥೆಗಳನ್ನೂ ರೂಪಿಸಿದೆ.
ಇದರ ಹೊರತಾಗಿಯೂ, ದೇಶದ ಜನಸಂಖ್ಯೆಯ ತೀವ್ರತೆ ಮತ್ತು ಅದರ ವೈವಿಧ್ಯಮಯ ಸಂಸ್ಕೃತಿಯಿಂದ ಸಂಕೀರ್ಣವಾದ ಸಮಸ್ಯೆಗಳನ್ನು ದೇಶವು ಎದುರಿಸುತ್ತಿದೆ . ಭಾರತವು "ಗಂಭೀರ ಮಾನವ ಹಕ್ಕುಗಳ ಕಾಳಜಿಯನ್ನು ಹೊಂದಿದ್ದರೂ, ನಾಗರಿಕ ಸಮಾಜದ ಗುಂಪುಗಳು ಕಿರುಕುಳವನ್ನು ಎದುರಿಸುತ್ತಿವೆ. ಮತ್ತು ಸರ್ಕಾರಿ ವಿಮರ್ಶಕರು ಬೆದರಿಕೆ ಮತ್ತು ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ. ವಾಕ್ ಸ್ವಾತಂತ್ರ್ಯವು ರಾಜ್ಯದಿಂದ ದಾಳಿಗೆ ಒಳಗಾಗಿದೆ .ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆಯೂ ಸಮಸ್ಸೆಗಳನ್ನು ಎದುರಿಸುತ್ತಿದೆ.
ಹೀಗೆ ಹತ್ತು ಹಲವು ಕಾಳಜಿಗಳ ನಡುವೆ ಒಂದೆಡೆ ಕಾನೂನುಬದ್ಧ ಅಧಿಕಾರಿಗಳ ವರ್ಗ ಚಾಪೆ ಕೆಳಗೆ ತೂರಿದರೆ ಅದನ್ನು ಉಲ್ಲಂಘಿಸುವವರ ಹಾಗೂ ಅಧಿಕಾರದ ದುರುಪಯೋಗ ಮಾಡುವವರು ರಂಗೋಲೆ ಕೆಳಗೆ ನುಗ್ಗುವಂತಹ ಪರಿಸ್ಥಿತಿ ಕಾಣುತ್ತಿದ್ದೇವೆ. ಭ್ರಷ್ಟಾಚಾರವು ಹಲವು ರಂಗಗಳಲ್ಲಿ ತಾಂಡವವಾಡುತ್ತಿದೆ.ಇದರ ರಕ್ಷಣೆ ಸಿಂಹಸ್ವಪ್ನವಾಗಿದೆ.ಮಾನವ ಹಕ್ಕುಗಳ ಹೆಸರಿನಲ್ಲಿ ಎಷ್ಟೋ ಮನಸ್ಸುಗಳು ಧೈರ್ಯವಾಗಿ ಕರ್ತವ್ಯ ಪಾಲನೆ ಮಾಡಲು ತಿಣುಕಾಡುತ್ತಿವೆ.ಆದರೂ ನೂರು ಅಪರಾಧಿಗಳಿಗೆ ಶಿಕ್ಷೆಯಾದರೂ ಪರ್ವಾಗಿಲ್ಲ ಆದರೆ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂಬ ಪ್ರಜ್ಞೆಯಿಂದ ಎಲ್ಲರೂ ಬಾಳಬೇಕಿದೆ.
ಮಾನವ ಹಕ್ಕುಗಳು ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಉತ್ತಮ ನಾಳೆಯನ್ನು ರೂಪಿಸಲು ಚಿಂತಿಸಬೇಕಿದೆ.
ಹಾಗಾಗಿ ಈ ದಿನದಂದು ಮಾನವನ ಒಳ್ಳೆಯದಕ್ಕಾಗಿ , ರಕ್ಷಣಾತ್ಮಕ ಮತ್ತು ಪರಿವರ್ತಕ ಶಕ್ತಿಯಾಗಿ ನಿರ್ಣಾಯಕ ಪಾತ್ರವನ್ನು ವಹಿಸಬೇಕಿದೆ. "ಮಾನವ ಹಕ್ಕುಗಳು ಶಾಂತಿಯುತ, ನ್ಯಾಯಯುತ ಮತ್ತು ಅಂತರ್ಗತ ಸಮಾಜಗಳಿಗೆ ಅಡಿಪಾಯವಾಗಲು ತಮ್ಮನ್ನೇ ತೊಡಗಿಸಿಕೊಳ್ಳಬೇಕಿದೆ."ಅದರೊಂದಿಗೆ ಮೂಲಭೂತ ಹಕ್ಕುಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬಡವನಾಗಲಿ ಸಿರಿವಂತನಾಗಲಿ ಪ್ರತಿಯೊಬ್ಬರಿಗೂ ಅವರವರದೇ ಆತ್ಮಗೌರವವಿರುತ್ತದೆ. ಸಮಾಜದಲ್ಲಿ ಯಾರನ್ನೂ ಕಡೆಗಣಿಸದೆ, ಎಲ್ಲರ ಏಳಿಗೆಗಾಗಿ ಕೈಜೋಡಿಸೋಣ.
ಇತರರ ಹಕ್ಕುಗಳನ್ನು ಉಲ್ಲಂಘಿಸದೆ, ನಮ್ಮ ಹಕ್ಕುಗಳನ್ನು ಇತರರು ಉಲ್ಲಂಘಿಸಲು ಅವಕಾಶ ಕೊಡದೆ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಎಲ್ಲರಿಗೂ ಸಮಾನವಾಗಿರುವ ಹಕ್ಕುಗಳ ಜೊತೆಯಲ್ಲಿ ನಮ್ಮ ಕರ್ತವ್ಯಗಳ ಬಗ್ಗೆಯೂ ಅಷ್ಟೇ ಜಾಗರೂಕರಾಗಿದ್ದು ಕಾರ್ಯಪ್ರವೃತರಾಗೋಣ.
✍️ ಮೀರಾ ಸುಮನ್ ಕ್ಯಾಸ್ತಲಿನ್
ಸ. ಪ್ರೌ.ಶಾಲೆ ಕಡಕೊಳ.ಮೈಸೂರು .
ಸ. ಪ್ರೌ.ಶಾಲೆ.ಕಡಕೋಳ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ