ನಮ್ಮ ಪ್ರವಾಸದ ಎರಡನೇ ದಿನ ಗುರುಪೂರ್ಣಿಮೆ. ಈ ದಿವ್ಯಾವಸರದಲ್ಲಿ ಬೆಳಗ್ಗೆ ಬೇಗನೆ ಗುರುಶಿಖರವನ್ನೇರಿ ಗುರು ದತ್ತಾತ್ರೇಯರ ಸನ್ನಿಧಾನಕ್ಕೆ ತೆರಳಿದೆವು. ಅಲ್ಲಿ ಗುರು ದತ್ತಾತ್ರೇಯರು ಹಾಗೂ ಶ್ರೀದತ್ತಾತ್ರೇಯ ಗುರುಪಾದುಕೆಗಳನ್ನು ದರ್ಶಿಸಿ ಪುಣ್ಯಭಾಜನರಾದೆವು. ಎತ್ತರದಲ್ಲಿದ್ದ ಗುರುಶಿಖರದಲ್ಲಿ ಆ ಬೆಳಗಿನ ದರ್ಶನ ನಮ್ಮನ್ನು ಧನ್ಯರನ್ನಾಗಿಸಿತು.
ಮುಂದೆ ಅಲ್ಲಿಯೇ ಸಮೀಪದಲ್ಲಿ ಅತ್ರಿ ಮಹರ್ಷಿಗಳು ಹಾಗೂ ಅನುಸೂಯೆಯರ ಆಶ್ರಮವಿತ್ತು ಎಂದು ಗೊತ್ತಾಗಿತ್ತು. ಹೋಗುವ ದಾರಿ ತಿಳಿಯದು. ತಾನು ಗೈಡೆಂದು ಹೇಳಿಕೊಳ್ಳುತ್ತಾ ಒಬ್ಬ ವ್ಯಕ್ತಿ ಬೇರೆಯವರೊಂದಿಗೆ ಅದು, ಇದು, ಎಲ್ಲವನ್ನೂ ತೋರಿಸುವೆನೆಂದು ವಸೂಲಿ ಮಾಡುವ ಹುನ್ನಾರದಲ್ಲಿದ್ದ. ಅವನೊಡನೆ ತೆರಳಲು ನಮಗೆ ಮನಸ್ಸು ಬಾರದು. ಏನು ಮಾಡುವುದೆಂದು ಯೋಚಿಸುತ್ತಾ ಗೇಟಿನ ಬಳಿ ಬಂದಾಗ ಅಲ್ಲಿಯ ಮನೆಯೊಂದರಲ್ಲಿದ್ದ security ವ್ಯವಸ್ಥೆಯವನಂತೆ ಭಾಸವಾದ ಸರ್ಕಾರಿ ಅಧಿಕಾರಿಯೊಬ್ಬರು ಏನೆಂದು ಕೇಳಿದರು. ನಾವು ನಮ್ಮ ಅಪೇಕ್ಷೆಯನ್ನು ಆತನ ಬಳಿ ತೋಡಿಕೊಂಡೆವು.
ಆತ, ನಿಮಗೆ ಕಾಲು ಗಂಟೆ ತಡವಾದರೆ ಅಡ್ಡಿಯಿಲ್ಲವೆಂದಾದರೆ ನಾನೇ ಸ್ನಾನ ಮಾಡಿ ನಿಮ್ಮೊಡನೆ ಬರುತ್ತೇನೆಂದ. ಸರಿಯೆಂದು ನಾವು ಕಾದು ಕುಳಿತೆವು. ಫೋಟೋ ಕ್ಲಿಕ್ಕಿಸಿಕೊಂಡೆವು. ಸ್ವಲ್ಪ ಹೊತ್ತಿನಲ್ಲಿಯೇ ಬಂದು ಅವರು ಹೋಗೋಣವೆಂದು ನಮ್ಮಿಬ್ಬರನ್ನೂ ಕರೆದರು.
ಆ ವ್ಯಕ್ತಿಯ ಹೆಸರು ಶಂಭು ದಯಾಳ್. ಪ್ಯಾರ ಮಿಲಿಟರಿ- ಪೋಲಿಸ್ ಫೋರ್ಸಿನ ಆತ ನಮ್ಮ ಬಳಿ ಹೇಳಿದ್ದೇನೆಂದರೆ, ಇಲ್ಲಿಗೆ ಬರುವ ವ್ಯಕ್ತಿಗಳೆಲ್ಲ ಪುಣ್ಯಸ್ಥಳದ ಪಾವಿತ್ರ್ಯ ಕಾಪಾಡಲಾರರು. ಪ್ರೇಕ್ಷಣೀಯ ಸ್ಥಳದಂತೆ ಬೇಕಾಬಿಟ್ಟಿ ಬಂದು ಹುಚ್ಚೆಬ್ಬಿಸಿ ಹೋಗುತ್ತಾರೆ. ಅದಕ್ಕೆ ಈ ದಾರಿಯನ್ನು ಬಂದ್ ಮಾಡಿದ್ದಾರೆಮ ಆದರೆ ನಿಮ್ಮನ್ನು ನೋಡಿದಾಗ ಭಕ್ತಿಯಿಂದ ಬಂದಿರೆಂದಿಸಿತು. ಗುರುಪೂರ್ಣಿಮೆ ಆದ್ದರಿಂದ ನಾನೂ ಯಾರಾದರೂ ಜೊತೆ ಸಿಕ್ಕಿದರೆ ದರ್ಶನಕ್ಕೆ ಹೋಗಲು ಒಳ್ಳೆಯದಾಗುತ್ತಿತ್ತು ಎಂದು ಯೋಚಿಸುತ್ತಿದ್ದೆ. ನೀವು ಸಿಕ್ಕಿದಿರಿ ಎಂದರು. ನಮಗೂ ಧೈರ್ಯ. ಅವರು ಚೆನ್ನಾಗಿ ನಮಗೆ ಅತ್ರಿ ಅನುಸೂಯರ ದರ್ಶನ ಮಾಡಿಸಿ, ರುಚಿಯಾದ ಕಾಡುಹಣ್ಣುಗಳನ್ನೂ ತಿನ್ನಿರೆಂದು ಸವಿಯಲು ಕೊಟ್ಟರು. ನಮ್ಮ ಫೋಟೋ ತೆಗೆದರು. ನಾವೂ ಅವರೊಡನೆ ಸೆಲ್ಫಿ ತೆಗೆಸಿಕೊಂಡೆವು. ಕಾಡು-ಗುಡ್ಡದ ಆ ಒಳದಾರಿಯಲ್ಲಿ ನಡೆದು ಬಂದುದು ಅತೀವ ಖುಷಿ ನೀಡಿತು. ಅವರು ನಮಗೆ ಪುನಃ ಹೊರಡುವ ದಾರಿಯನ್ನು ನಿರ್ದೇಶಿಸಿ ದತ್ತಾತ್ರೇಯ ದರ್ಶನಕ್ಕೆ ಹೊರಟರು. ನಾವು ಅಲ್ಲಿಯೇ ಇದ್ದ ಹೋಟೇಲ್ ಒಂದರಲ್ಲಿ ತಿಂಡಿ ತಿಂದು ಅಲ್ಲಿಂದ ಹೊರಟೆವು.
ನಮ್ಮ ಮುಂದಿನ ನಿಲ್ದಾಣ ಅಚಲಗಢ.
ಅಲ್ಲಿ ಅಚಲೇಶ್ವರ ಮಹಾದೇವನ ದರ್ಶನ ಪಡೆದು ಮೇಲೆ ಹೋದೆವು.
ಕಡಿದಾದ ದಾರಿಯಲ್ಲಿ ಎತ್ತರೆತ್ತರ ಹತ್ತಿದರೆ ಹಲವು ಜೈನ ದೇವಸ್ಥಾನಗಳು.
ಅವು ದಿಲ್ವಾರಾ ಜೈನ ಮಂದಿರಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಆಕರ್ಷಿಸಿದವು.
ಮತ್ತೂ ಮೇಲೆ ಹೋದರೆ ಚಾಮುಂಡಿ ಮಾತೆಯ ಮಂದಿರ. ಬಹಳ ಆಯಾಸವಾಗುವಷ್ಟು ಮೇಲಕ್ಕೆ ಹತ್ತಿ ಅಲ್ಲಿ ಮಾತೆಯ ದರ್ಶನ ಪಡೆದಾಗ ಹತ್ತಿದ್ದೂ ಸಾರ್ಥಕವೆನ್ನುವ ಭಾವ!
ಅಲ್ಲಿಯೇ ಸಮೀಪವೊಂದು ಪಾಳು ಕೋಟೆಯೂ ಇತ್ತು.
ಮುಂದೆ ಹೋಗಿ ಸ್ವಲ್ಪ ಕೆಳಗಿಳಿದರೆ ಕಾಳಿಕಾ ಮಾತೆಯ ಗುಹೆ. ಅಲ್ಲಿಯೂ ದರ್ಶನ ಪಡೆದು ದೇವಿಯ ಸ್ತುತಿ ಮಾಡಿ ಕೆಳಗಿಳಿದೆವು. ದಾರಿ ಮಧ್ಯೆ ದಣಿದಿದ್ದ ನಮಗೆ ಸೋಡಾ ಶರ್ಬತ್ತು ಕುಡಿಯೋಣವೆನಿಸಿತು. ಅದಾಗಿ ಪೂರ್ತಿ ಕೆಳಗೆ ಬಂದೆವು. ಅಲ್ಲಿಯೇ ಸಮೀಪ ಇನ್ನೊಂದು ಜೈನ ಮಂದಿರ. ಅದೂ ವಿಶಾಲವಾಗಿತ್ತು. ಅದರ ಎದುರುಗಡೆ ಮತ್ತೊಂದು ದೊಡ್ಡ ಕೋಟೆ. ಅದೂ ಪಾಳು ಬಿದ್ದಿತ್ತು. ಆದರೆ ಅದು ಮೊದಲು ಎಷ್ಟು ಚೆನ್ನಾಗಿತ್ತೆಂಬ ಕಲ್ಪನೆ ಬರುವಂತೆ ಅವಶೇಷಗಳು ಉಳಿದುಕೊಂಡಿದ್ದವು. ಅದೆಲ್ಲವನ್ನೂ ನೋಡಿಯಾಯಿತು.
ಹಿಂದಿರುಗುವ ಸಮಯ ಅದಾಗಲೇ ಹತ್ತಿರ ಬಂದಿತ್ತು. ಪುನಃ ನಾವು ಗಾಡಿಯನ್ನು ತೆಗೆದುಕೊಂಡಲ್ಲಿಗೆ ಧಾವಿಸಿ ನಮ್ಮೆರಡು ದಿನದ ಸಾರಥ್ಯವನ್ನು ಮಾಡಿದುದಕ್ಕೆ ಧನ್ಯವಾದ ಹೇಳಿ ವಿದಾಯ ಹೇಳಿದೆವು. ನಂತರ ಬಸ್ ಹತ್ತಿ ಕುಳಿತು ಮೌಂಟ್ ಅಬುಗೆ ವಿದಾಯ ಹೇಳಿ ಗುಜರಾತಿನತ್ತ ಪಯಣ ಬೆಳೆಸಿದೆವು.
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ