ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ… ಈ ಹೆಸರಿನಲ್ಲಿ ಅಡಗಿದೆ ಕನಸು, ಸ್ಫೂರ್ತಿ, ಸಾಹಸದ ಒಂದು ಅಪರೂಪದ ಕಥೆ. ಅವರು ಅಂತರಿಕ್ಷಕ್ಕೆ ತೆರಳಿದ ಪ್ರಪ್ರಥಮ ಭಾರತೀಯ ಮಹಿಳೆ ಮಾತ್ರವಲ್ಲ, ಲಕ್ಷಾಂತರ ಯುವಕ-ಯುವತಿಯರ ಕನಸುಗಳಿಗೆ ದಾರಿ ದೀಪವಾಗಿ ಬೆಳಗಿದವರು.
1962ರ ಮಾರ್ಚ್ 17ರಂದು ಹರಿಯಾಣ ರಾಜ್ಯದ ಕರ್ನಾಲಿನಲ್ಲಿ ಜನಿಸಿದ ಕಲ್ಪನಾ ಚಾವ್ಲಾ, ತಮ್ಮ ಬಾಲ್ಯದಲ್ಲಿಯೇ ಆಕಾಶದ ಕಡೆ ನೋಟ ಚೆಲ್ಲುತ್ತಿದ್ದ ಬಾಲಕಿ. ಅವರ ತಂದೆ ಬನಾರ್ಸಿ ಲಾಲ್ ಚಾವ್ಲಾ ಮತ್ತು ತಾಯಿ ಸಂಜೆಯಾ ಚಾವ್ಲಾ ಎಂಬುವರು, ತಮ್ಮ ಮಗುವಿಗೆ ಬೆಂಬಲವಾಗಿ ನಿಂತು, ಆಕೆಯು ಕನಸುಗಳ ಹಾರವನ್ನು ಕಟ್ಟಲು ಅವಕಾಶ ನೀಡಿದವರು. ಕಲ್ಪನಾ ಎಂದಿಗೂ "ಸಾಧಾರಣ ಬಾಲಕಿ" ಅಲ್ಲ. ಅವರು ತಮ್ಮದೇ ಆದ ದೃಷ್ಟಿಕೋನ ಹೊಂದಿದ್ದವರು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಾಯಿಯೊಡನೆ ಖಗೋಳ ವೀಕ್ಷಣೆ ಮಾಡುವುದೇ ಆಕೆಯ ಅನುದಿನದ ಮಹದಾಸೆಯಾಗಿತ್ತು.
ಕಲ್ಪನಾ ಅವರು ಪ್ರಸಿದ್ಧ ಪಂಜಾಬ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್‌ನಲ್ಲಿ ಬಿಎಸ್‌ಸಿ ಪದವಿಯನ್ನು ಪಡೆದಕೊಂಡರು. ಇದೇ ಹಾದಿ ಅವರಿಗೆ ಅಂತರಿಕ್ಷಕ್ಕೆ ಕರೆದೊಯ್ಯುವ ಹೆದ್ದಾರಿಯಾಯಿತು. ಅಮೆರಿಕದ ಪ್ರತಿಷ್ಠಿತ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ಪದವಿಯನ್ನು ಪಡೆದ ನಂತರ, ಜಗದ್ವಿಖ್ಯಾತ ಕೊಲೊರಾಡೋ ವಿಶ್ವವಿದ್ಯಾಲಯದಿಂದ ಎಮ್ಎಸ್ ಮತ್ತು ಪಿಎಚ್.ಡಿ ಗಳನ್ನು ಸಂಪಾದಿಸಿದರು. ಈ ಎಲ್ಲಾ ಹಂತಗಳಲ್ಲಿ ಅವರು ಗಗನಯಾನ ಕೈಗೊಳ್ಳುವ ಅದಮ್ಯ ಕನಸನ್ನು ಬೆಳೆಸಿಕೊಳ್ಳುತ್ತಾ ಮುಂದೆ ಸಾಗಿದರು.
ಬಾಲ್ಯದ ಕನಸು ಕೊನೆಗೂ ನನಸು:
1995ರಲ್ಲಿ ಅವರು ಅಮೇರಿಕಾ ಸಂಯುಕ್ತ ಸಂಸ್ಥಾನದ ಜಗತ್ಪ್ರಸಿದ್ಧ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ(NASA)ಕ್ಕೆ ಆಯ್ಕೆಯಾದರು, ಫೆಬ್ರವರಿ 1997ರಲ್ಲಿ‘STS-87’ ಎಂಬ ಕೊಲಂಬಿಯಾ ಸ್ಪೇಸ್ ಶಟಲ್‌ನಲ್ಲಿ ಅಂತರಿಕ್ಷದತ್ತ ಮೊದಲ ಹಾರಾಟ ಕೈಗೊಂಡರು. ಈ ಪ್ರಯಾಣದಲ್ಲಿ ಅವರು ಒಟ್ಟು 376 ಗಂಟೆಗಳ ಕಾಲ ಬಾಹ್ಯಾಕಾಶದಲ್ಲಿ ಸುತ್ತಾಡಿದರು. ತಮ್ಮ ವೈಜ್ಞಾನಿಕ ಪ್ರಾಯೋಗಿಕತೆ, ತಂತ್ರಜ್ಞಾನ ನೈಪುಣ್ಯತೆ ಮತ್ತು ಶಿಸ್ತಿನಿಂದ ಅವರು ತಮ್ಮದೇ ಆದ ಛಾಪು ಮೂಡಿಸಿದರು.
2003ರಲ್ಲಿ ಅವರು ಮತ್ತೊಮ್ಮೆ ಕೊಲಂಬಿಯಾ ಶಟಲ್‌ನ STS-107 ಯೋಜನೆಯಲ್ಲಿ ಭಾಗವಹಿಸಿದರು. ಈ ಯೋಜನೆ ವಿಜ್ಞಾನ ಕ್ಷೇತ್ರಕ್ಕೆ ಬಹುಪಾಲು ಪ್ರಯೋಗಗಳನ್ನು ಒದಗಿಸಿತು. ಆದರೆ ದುರದೃಷ್ಟವಶಾತ್ ಈ ಯಾತ್ರೆಯು ಕೊನೆಗೊಳ್ಳುವ ಮಾರ್ಗದಲ್ಲಿ ಭೀಕರ ಅಪಘಾತಕ್ಕೆ ಒಳಪಟ್ಟಿತು. ಅದು 2003ರ ಫೆಬ್ರವರಿ 1. ಕೊಲಂಬಿಯಾ ಸ್ಪೇಸ್ ಶಟಲ್ ಭೂ ವಾತಾವರಣವನ್ನು ಪ್ರವೇಶಿಸುವಾಗ ಸ್ಫೋಟಗೊಂಡು ಸರ್ವನಾಶವಾಗಿಹೋಯಿತು. ಈ ಅಪಘಾತದಲ್ಲಿ ಕಲ್ಪನಾ ಚಾವ್ಲಾ ಸೇರಿದಂತೆ ಒಟ್ಟು ಏಳು ವಿಜ್ಞಾನಿಗಳು ಮೃತಪಟ್ಟರು. ಈ ಘಟನೆಯು ಇಡೀ ಜಗತ್ತಿಗೆ ಒಂದು ಅಳಿಸಲಾಗದ ಆಘಾತವನ್ನು ಉಂಟುಮಾಡಿತು.
ಅವರ ಸಾವಿನಿಂದ ವಿಶ್ವ ವಿಜ್ಞಾನಲೋಕ ತುಂಬಲಾಗದ ನಷ್ಟಕ್ಕೆ ಒಳಗಾಯಿತು. ಆದರೆ ಅವರು ತಮ್ಮ ಬದುಕಿನ ಮೂಲಕ ಜೀವಂತ ಆದರ್ಶವನ್ನೇ ಸೃಷ್ಟಿಸಿದರು. ಅವರ ಪಥದಲ್ಲಿ ನೂರಾರು ವಿಜ್ಞಾನಿಗಳು, ಮಹಿಳಾ ಆಸ್ಟ್ರೋನಾಟ್‌ಗಳು ತಮ್ಮ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಕಲ್ಪನಾ ಚಾವ್ಲಾ ಇಂದು ಕೇವಲ ವ್ಯಕ್ತಿ ಅಲ್ಲ, ಅವರು ಒಂದು ಅದಮ್ಯ ಪ್ರೇರಣೆಯ ಶಕ್ತಿ.
ಅವರ ಹೆಸರಿನಲ್ಲಿ ಭಾರತದಲ್ಲಿ ಹಲವಾರು ವಿದ್ಯಾಸಂಸ್ಥೆಗಳು, ರಸ್ತೆಗಳು, ವಿಜ್ಞಾನ ಕೇಂದ್ರಗಳು ಸ್ಥಾಪನೆಗೊಂಡಿವೆ. ನಾಸಾದಲ್ಲಿ “Kalpana Chawla Hall” ಹಾಗೂ ಬಾಹ್ಯಾಕಾಶದಲ್ಲಿ ಹೆಸರಿಸಲಾದ ಉಪಗ್ರಹಗಳೂ ಸಹ ಅವರ ಸ್ಮರಣೆಗೆ ಮೀಸಲಾಗಿದೆ. ಇವರ ಜೀವನವನ್ನು ಆಧಾರವನ್ನಾಗಿಟ್ಟುಕೊಂಡು ಹಲವಾರು ಚಲನಚಿತ್ರಗಳು, ಜೀವನ ಚರಿತ್ರೆಗಳೂ ಬಂದಿವೆ.
ಅವರು ತಮ್ಮ ಜೀವನದ ಮೂಲಕ ನಮ್ಮೆಲ್ಲರಿಗೂ ಏನನ್ನೋ ಕಲಿಸಿದರು – "ಕನಸು ಕಾಣಲು ಹೆದರಬೇಡಿ, ಕನಸು ಕಾಣುವುದು ಎಲ್ಲರ ಹಕ್ಕು. ಆದರೆ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಿ, ನಂಬಿಕೆ ಇಟ್ಟುಕೊಳ್ಳಿ". ಅವರು ನೀಡಿರುವ ಈ ಸಂದೇಶ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಸ್ಪಂದಿಸುತ್ತಿದೆ.
ಅವರ ಮಂದಸ್ಮಿತಹಾಸ, ಶಿಸ್ತಿನ ಬದುಕು, ಸಾಧನೆಯ ಹಾದಿ, ಬಲವಾದ ನಿರ್ಧಾರಗಳು – ಇವೆಲ್ಲವೂ ನಮ್ಮ ಮುಂದಿನ ತಲೆಮಾರಿಗೆ ಶ್ರೇಷ್ಠ ಮಾದರಿಯಾಗಿದೆ.
'ಕಲ್ಪನಾ' ಅಂದರೆ ಕಲ್ಪನೆ, ಕನಸು. ಅವರು ತಮ್ಮ ಹೆಸರಿನಂತೆ ಕನಸು ಕಂಡರು, ಅದನ್ನು ನನಸಾಗಿಸಿದರು ಅಲ್ಲದೆ, ಇತರರಿಗೂ ಅದು ಸಾಧ್ಯವೆಂದು ತೋರಿಸಿಕೊಟ್ಟರು.
ಅವರು ಈಗ ಜೀವಂತವಾಗಿಲ್ಲದಿದ್ದರೂ, ಅವರ ಕನಸುಗಳು, ಧೈರ್ಯ, ಸಾಧನೆಗಳು ನಮ್ಮೆಲ್ಲರ ಆತ್ಮದಲ್ಲಿ ಜೀವಂತವಾಗಿವೆ. "ಆಕಾಶವೇ ಗಡಿ" ಎನ್ನುವ ನುಡಿಗೆ ಅರ್ಥ ನೀಡಿದ ವ್ಯಕ್ತಿಯಾಗಿದ್ದಾರೆ ಅವರು. ಕಲ್ಪನಾ ಚಾವ್ಲಾ – ಒಂದು ಹೆಸರು, ಸಾವಿರ ಕನಸುಗಳ ಆಶಾಕಿರಣ.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ