ಕಳೆದ ಕೆಲವು ತಿಂಗಳುಗಳ ಹಿಂದೆ ಭಾರತದ ಕೊಕ್ಕೊ ತಂಡವು ಪುರುಷ ಹಾಗೂ ಮಹಿಳಾ ವಿಭಾಗದ ವಿಶ್ವ ಚಾಂಪಿಯನ್ಷಿಪ್ ಗೆದ್ದುಕೊಂಡಿತು. ಇದು ಚೊಚ್ಚಲ ಕೊಕ್ಕೊ ವಿಶ್ವ ಚಾಂಪಿಯನ್ಷಿಪ್. ಈ ಸಾಧನೆಯು ಭಾರತೀಯರೆಲ್ಲರೂ ಹೆಮ್ಮೆ ಪಡುವಂತಹ ವಿಚಾರ.
ಮಹಿಳಾ ತಂಡದ ಆಟಗಾರ್ತಿಯರಲ್ಲಿ ಎಲ್ಲರ ಗಮನ ಸೆಳೆದ ಆಟಗಾರ್ತಿ ಎಂದರೆ ನಮ್ಮ ರಾಜ್ಯದ ಚೈತ್ರಾ. ಈಕೆ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಕುರುಬೂರು ಗ್ರಾಮದವಳು. ಅಪ್ಪಟ ಗ್ರಾಮೀಣ ಪ್ರತಿಭೆ. ಕೊಕ್ಕೊ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಕೈಕ ದಕ್ಷಿಣ ಭಾರತದ ಆಟಗಾರ್ತಿ.
ಕುರುಬೂರು ಗ್ರಾಮದ ಕೆ. ಎಂ. ಬಸವಣ್ಣ ಹಾಗೂ ನಾಗರತ್ನ ದಂಪತಿಯ ಪುತ್ರಿ ಚೈತ್ರಾ.
'ಕಳೆದ 8 ವರ್ಷಗಳಿಂದ ಕೊಕ್ಕೊ ಆಡುತ್ತಿದ್ದಾಳೆ. ಆಕೆಗೆ ಶೂ ಕೊಡಿಸುವಷ್ಟೂ ಆರ್ಥಿಕ ಶಕ್ತಿ ನಮಗೆ ಇರಲಿಲ್ಲ. ಕಾರಣ ಮನೆಯಲ್ಲಿ ಕಡು ಬಡತನ. ಈ ಕಾರಣಕ್ಕಾಗಿಯೇ ಬರಿಗಾಲಿನಲ್ಲೇ ಅಭ್ಯಾಸ ನಡೆಸಿದ್ದಳು! ನಿರಂತರ ಆಟದಿಂದಾಗಿ ಆಕೆಯ ಪಾದಗಳು ಸೀಳುತ್ತಿದ್ದವು. ಅದಕ್ಕೆ ಕೆಲವೊಮ್ಮೆ ರಾತ್ರಿಯೆಲ್ಲಾ ಔಷಧಿ ಮಾಡಬೇಕಾಗುತ್ತಿತ್ತು. ಅದೆಲ್ಲವನ್ನೂ ಲೆಕ್ಕಿಸದೆ ಸಾಧನೆ ಮಾಡಿದ್ದಾಳೆ' ಎಂದು ತಂದೆ ಬಸವಣ್ಣ ಮಗಳ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಕುರುಬೂರು 'ವಿದ್ಯಾದರ್ಶಿನಿ' ಶಾಲೆಯಲ್ಲಿ ಆಕೆ ಮತ್ತು ಸಂಗಡಿಗರು ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ. ಈಕೆಗೆ ಆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಅವರ ಮಾರ್ಗದರ್ಶನವಿದೆ.
ಸದ್ಯ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಶ್ರೀ ಶಂಭುಲಿಂಗೇಶ್ವರ ಕಾಲೇಜಿನಲ್ಲಿ ಬಿಪಿ.ಇಡಿ ಓದುತ್ತಿರುವ ಚೈತ್ರಾ ಇದುವರೆಗೆ 30ಕ್ಕೂ ಹೆಚ್ಚು ಟೂರ್ನಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದು, 11 ಚಿನ್ನ ಸಹಿತ ಹಲವು ಪದಕಗಳಿಗೆ ಕೊರಳೊಡ್ಡಿದ್ದಾರೆ.
'ಮಗಳನ್ನು ಕ್ರೀಡೆಯಲ್ಲಿ ತೊಡಗಿಸಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದರು. ನಾವು ಅದನ್ನೇ ಆಶೀರ್ವಾದ ಎಂದುಕೊಂಡೆವು. ಮಗಳು ಅದನ್ನೇ ಸವಾಲಾಗಿ ಸ್ವೀಕರಿಸಿ ಆಡಿದ್ದಾಳೆ. ಸಾಧನೆ ಮೂಲಕವೇ ಉತ್ತರ ಕೊಟ್ಟಿದ್ದಾಳೆ' ಎಂದು ಆಕೆಯ ತಾಯಿ ನಾಗರತ್ನ ಅವರು ಭಾವುಕರಾಗುತ್ತಾರೆ.
ಚೈತ್ರಾಳ ಈ ಅಪೂರ್ವ ಸಾಧನೆ ನಮಗೆಲ್ಲರಿಗೂ ಸ್ಫೂರ್ತಿಯ ಸೆಲೆಯಾಗುವುದರಲ್ಲಿ ಸಂಶಯವಿಲ್ಲ.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ