ಶುಭಾಂಶು ಶುಕ್ಲಾ - ಭಾರತದ ಅಂತರಿಕ್ಷದ ಕನಸು
ಶುಭಾಂಶು ಶುಕ್ಲಾ ಅವರು ಉತ್ತರ ಪ್ರದೇಶ ರಾಜ್ಯದ ಲಖನೌ ನಗರದವರು. ಅವರ ತಂದೆ ಶಂಭು ದಯಾಳ್ ಶುಕ್ಲಾ ನಿವೃತ್ತ ಸರ್ಕಾರಿ ಅಧಿಕಾರಿ, ತಾಯಿ ಆಶಾ ಶುಕ್ಲಾ ಗೃಹಿಣಿ. ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಪರಿಣಿತಿ ಹೊಂದಿರುವ ಶುಕ್ಲಾ ಅವರು ಕಾರ್ಗಿಲ್ ಯುದ್ಧದ ಪ್ರಭಾವದಿಂದ ಸೇನೆಗೆ ಸೇರುವ ಕನಸು ಕಂಡರು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ವಿಜ್ಞಾನದಲ್ಲಿ ಪದವಿ ಪಡೆದ ನಂತರ ವಾಯುಪಡೆಯಲ್ಲಿ ಯುದ್ಧವಿಮಾನದ ಪೈಲಟ್ ಆಗಿ 2006ರಲ್ಲಿ ಕೆಲಸಕ್ಕೆ ಸೇರಿದರು. ವಿವಿಧ ರೀತಿಯ ಯುದ್ಧ ವಿಮಾನಗಳ ಪೈಲಟ್ ಆಗಿ ಅಪಾರ ಅನುಭವವುಳ್ಳ ಶುಕ್ಲಾ ಅವರು ಸುಮಾರು 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಶುಕ್ಲಾ ಅವರ ಅಸಾಧಾರಣ ಕೊಡುಗೆಯನ್ನು ಪರಿಗಣಿಸಿ ಭಾರತೀಯ ವಾಯುಪಡೆ ಮಾರ್ಚ್ 2024ರಲ್ಲಿ ಅವರಿಗೆ ಗ್ರೂಪ್ ಕ್ಯಾಪ್ಟನ್ ಆಗಿ ಪದೋನ್ನತಿ ನೀಡಿತ್ತು.
2019ರಲ್ಲಿ ಶುಭಾಂಶು ಅವರಿಗೆ ಇಸ್ರೋದಿಂದ ಅವರ ಬದುಕನ್ನು ಬದಲಿಸಿದ ಕರೆಯೊಂದು ಬಂದಿತು. ಜಗದ್ವಿಖ್ಯಾತ ಭಾರತೀಯ ಬಾಹ್ಯಕಾಶ ಸಂಶೋಧನಾ ಕೇಂದ್ರ - ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಮಾನವ ಸಹಿತ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವ ನಾಲ್ವರು ಗಗನ ಯಾತ್ರಿಗಳಲ್ಲಿ ಶುಕ್ಲಾ ಅವರೂ ಒಬ್ಬರಾಗಿ ಆಯ್ಕೆ ಆಗಿದ್ದರು.
ಭೂಮಿಯಿಂದ 400 ಕಿ.ಮೀ ದೂರದ ಕೆಳ ಭೂ ಕಕ್ಷೆಗೆ ಗಗನಾಯಾನಿಗಳನ್ನು ಕರೆದೊಯ್ದು, ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವುದು ಗಗನಯಾನ ಯೋಜನೆಯ ಉದ್ದೇಶ. 2027ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಗುರಿಯನ್ನು ಇಸ್ರೋ ಹೊಂದಿದೆ.
ಅದಕ್ಕೂ ಮುನ್ನವೇ ಅಮೇರಿಕಾದ ನಾಸಾ ಸಂಸ್ಥೆಯ 'ಆಕ್ಸಿಯಂ 4' ಯೋಜನೆಯ ಭಾಗವಾಗಿ ಇತಿಹಾಸ ನಿರ್ಮಿಸಿದ್ದಾರೆ ಶುಭಾಂಶು ಶುಕ್ಲಾ ಅವರು. ಕಳೆದ ಬುಧವಾರ ಅಮೇರಿಕಾದ ಫ್ಲೋರಿಡಾ ರಾಜ್ಯದ ಕೆನಡಿ ಬಾಹ್ಯಾಕಾಶ ಸಂಶೋಧನಾ ಕೇಂದ್ರದಿಂದ ಮಧ್ಯಾಹ್ನ 12: 01ಕ್ಕೆ ಶುಕ್ಲಾ ಹಾಗೂ ಇನ್ನಿಬ್ಬರು ಗಗನ ಯಾತ್ರಿಗಳನ್ನು ಹೊತ್ತಿದ್ದ 'ಆಕ್ಸಿಯಂ 4' ಸ್ಪೇಸ್ ಶಟಲ್ ಅಂತರರಾಷ್ಟ್ರೀಯ ಬಾಹ್ಯಕಾಶ ನಿಲ್ದಾಣದತ್ತ ತನ್ನ ಪಯಣವನ್ನು ಆರಂಭಿಸಿತು. ಒಟ್ಟು 14 ದಿನಗಳ ಕಾಲ ಶುಕ್ಲಾ ಹಾಗೂ ಇತರ ಗಗನಾಯಾನಿಗಳು ಅಲ್ಲಿದ್ದು 60ಕ್ಕೂ ಹೆಚ್ಚು ವಿವಿಧ ರೀತಿಯ ಸಂಶೋಧನೆಗಳನ್ನು ಕೈಗೊಳ್ಳುವರು. 1984ರಲ್ಲಿ ರಾಕೇಶ್ ಶರ್ಮಾ ಅವರು ರಷ್ಯಾದ ಬಾಹ್ಯಾಕಾಶ ಸಂಶೋಧನಾ ಯೋಜನೆಯ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹೋಗಿ ಬಂದ ನಂತರ, ಬಾಹ್ಯಾಕಾಶಕ್ಕೆ ತೆರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು. ಬಾಹ್ಯಾಕಾಶದಲ್ಲಿರುವ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿರುವ ಮೊದಲ ಭಾರತೀಯ ಕೂಡಾ ಹೌದು.
ಇದು ಭಾರತದ ಬಾಹ್ಯಕಾಶ ಸಂಶೋಧನೆಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇಸ್ರೋದ ಮುಂದಿನ ಯೋಜನೆಗಳ ದೃಷ್ಟಿಯಿಂದ ಶುಕ್ಲಾ ಅವರ ಅನುಭವಕ್ಕೆ ಅತ್ಯಂತ ಪ್ರಾಮುಖ್ಯತೆ ಇದೆ. ಭಾರತವು 2027ರಲ್ಲಿ ಗಗನಾಯಾನ, 2035ಕ್ಕೆ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಹಾಗೂ 2040ರ ಹೊತ್ತಿಗೆ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹಾಕಿಕೊಂಡಿದೆ. ಈ ಎಲ್ಲಾ ಯೋಜನೆಗಳಿಗೆ ಶುಭಾಂಶು ಶುಕ್ಲಾ ಅವರ ಅನುಭವವು ನೆರವಿಗೆ ಬರಲಿದೆ.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ