ಅಭಿವೃದ್ಧಿಗೆ ಮಾರಕವಾಗುತ್ತಿರುವ "ಸ್ಪೋಟಕ ಜನಸಂಖ್ಯೆ"

ProfileImg
11 Jul '25
4 ನಿಮಿಷದ ಓದು


image

ವಿಶ್ವದ ಜನಸಂಖ್ಯೆ ಅತೀ ವೇಗವಾಗಿ ಬೆಳೆಯುತ್ತಿದ್ದು ಪ್ರಸ್ತುತ ಜನಸಂಖ್ಯೆಯ ಬೆಳವಣಿಗೆಯು ಜಾಗತಿಕ ಮಟ್ಟದಲ್ಲಿ ಒಂದು ಪ್ರಮುಖ ಸಮಸ್ಯೆಯಾಗಿ ಇದು ಅನೇಕ ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಸವಾಲುಗಳಿಗೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯ  ದುಷ್ಪರಿಣಾಮ ಸಂಪನ್ಮೂಲಗಳ ಕೊರತೆ, ಪರಿಸರ ಮಾಲಿನ್ಯ ಮತ್ತು ಸಾಮಾಜಿಕ ಅಸಮಾನತೆ.ಬಡತನ, ನಿರುದ್ಯೋಗ ಸೇರಿ ಹಲವು ಗಂಭೀರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ.! ಇಂದು ವಿಶ್ವ ಜನಸಂಖ್ಯಾ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲ ಉದ್ದೇಶ ಜಾಗತಿಕ ಮಟ್ಟದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸುವುದು ಮತ್ತು ಪ್ರಮುಖವಾಗಿ ಕುಟುಂಬ ಯೋಜನೆ ಲಿಂಗ ಸಮಾನತೆ ಬಡತನ ತಾಯಿಯ ಆರೋಗ್ಯ ಮತ್ತು ಮಾನವ ಹಕ್ಕುಗಳ ಪ್ರಾಮುಖ್ಯತೆ ಸೇರಿದಂತೆ ಜನಸಂಖ್ಯೆಯ ಸಮಸ್ಯೆಗಳ ತುರ್ತು ಮತ್ತು ಪ್ರಾಮುಖ್ಯತೆಯ ಮೇಲೆ ಗಮನವನ್ನು ಕೇಂದ್ರೀಕರಿಸಲು ಈ ದಿನವು ಗುರಿಯನ್ನು ಹೊಂದಿದೆ. ಅಲ್ಲದೆ ಜನಸಂಖ್ಯಾ ಪ್ರವೃತ್ತಿಗಳು ಜಾಗೃತಿ ಮತ್ತು ಶಿಕ್ಷಣ,ಕುಟುಂಬ ಯೋಜನೆ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಒಳಗೊಂಡಂತೆ ಜಾಗತಿಕವಾಗಿ ಕ್ಷಿಪ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆಯ ಪರಿಣಾಮ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಜನಜಾಗೃತಿ ಮೂಡಿಸಲು ದಿನವು ನಿರ್ಣಾಯಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.! ಈ ವಿಶ್ವ ಜನಸಂಖ್ಯಾ ದಿನ ಬೆಳೆದು ಬಂದ ಇತಿಹಾಸ ನೋಡುವುದಾದರೆ 1989 ಜುಲೈ11 ರಂದು ವಿಶ್ವಸಂಸ್ಥೆ ಯು ಮೊದಲ ಬಾರಿಗೆ ವಿಶ್ವ ಜನಸಂಖ್ಯಾ ದಿನವವನ್ನು ಆಚರಿಸಲು ಪ್ರಾರಂಭಿಸಿತು ಈ ವಿಶ್ವ ಜನಸಂಖ್ಯಾದಿನದ ಹಿಂದಿನ ರೂವಾರಿ ನಮ್ಮ ಭಾರತ ದೇಶದ ಡಾ. ಕೆ.ಸಿ. ಜಕರಿಯಾ ಇವರನ್ನು ವಿಶ್ವ ಜನಸಂಖ್ಯಾ ದಿನದ ಪಿತಾಮಹ ಎಂದು ಸಹ ಕರೆಯಲಾಗುತ್ತದೆ.ಇವರು ಕೇರಳದ ತಿರುವನಂತಪುರಂ ನಲ್ಲಿರುವ ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್‌ನಲ್ಲಿ ಗೌರವ ಪ್ರಾಧ್ಯಾಪಕರಾಗಿ ನಂತರ ವಿಶ್ವಬ್ಯಾಂಕ್‌ನ ಹಿರಿಯ ಜನಸಂಖ್ಯಾ ಶಾಸ್ತ್ರಜ್ಞರಾಗಿ ಜನಸಂಖ್ಯಾ ಪರಿಣಿತರಾಗಿ ಸೇವೆಸಲ್ಲಿಸಿದ್ದಾರೆ. ಡಾ.ಜಕರಿಯಾ ಅವರು ವಿಶ್ವಬ್ಯಾಂಕ್‌ನಲ್ಲಿ ಜನಸಂಖ್ಯಾ ಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಜಾಗತಿಕ ಜನಸಂಖ್ಯೆಯು ಐದು ಶತಕೋಟಿಯನ್ನು ತಲುಪಿದ ಮೈಲಿಗಲ್ಲನ್ನು ಸ್ಮರಿಸಲು ಸೂಚಿಸಿ, ವಿಶ್ವ ಜನಸಂಖ್ಯಾ ದಿನದ ಆಚರಣೆಯನ್ನು ಪ್ರತಿಪಾದಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.!ವಿಶ್ವ ಜನಸಂಖ್ಯೆಯು ಪ್ರಸ್ತುತ ಜೀವಂತವಾಗಿರುವ ಮಾನವರ ಒಟ್ಟು ಸಂಖ್ಯೆಯನ್ನು ವಿಶ್ವಸಂಸ್ಥೆಯು 2022 ರ ನವೆಂಬರ್ ಮಧ್ಯದಲ್ಲಿ 8 ಶತಕೋಟಿಯನ್ನು ಮೀರಿದೆ ಎಂದು ಅಂದಾಜಿಸಿದೆ ಕೆಲವೊಂದಿಷ್ಟು ದೇಶಗಳನ್ನು ಬಿಟ್ಟರೆ ಜಾಗತಿಕವಾಗಿ ಜನಸಂಖ್ಯೆ ಆರೋಗ್ಯಕರವಾಗಿ ಬೆಳೆಯುತ್ತಿಲ್ಲ, ಬದಲಿಗೆ ಜನಸಂಖ್ಯೆ ಸ್ಫೋಟಗೊಳ್ಳುತ್ತಿದೆ ಎಂದೇ ಹೇಳಬಹುದು ಬಡತನ, ಹಸಿವು, ನಿರುದ್ಯೋಗ,ಪ್ರಕೃತಿ ವಿಕೋಪ, ಸೇರಿದಂತೆ ಇಂದು ಜಗತ್ತಿನಲ್ಲಿ ಆಗುತ್ತಿರುವ ಬಹುತೇಕ ಬದಲಾವಣೆಗಳಿಗೆ ಜನಸಂಖ್ಯಾ ಸ್ಪೋಟವೇ ಕಾರಣ ಜನಸಂಖ್ಯೆ ಹೆಚ್ಚಿದಷ್ಟು ಸಂಪನ್ಮೂಲಗಳು ಅವಶ್ಯಕತೆಗಳು ಬೇಡಿಕೆಗಳು ಪೈಪೋಟಿಗಳು,ಹೆಚ್ಚುತ್ತಾ ಹೋಗುತ್ತವೆ ಇದರ ಫಲವಾಗಿ ಸಂಪನ್ಮೂಲಗಳ ಕೊರತೆ,ಪರಿಸರ ಅವನತಿ,ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಗಳಂತಹ ತ್ವರಿತ ಸಮಸ್ಯೆಗಳು ದಿನದಿನಕ್ಕೆ ಹೆಚ್ಚುತ್ತಿವೆ ,2023 ರ ಗಣತಿಯಂತೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಟಾಪ್ಟೆನ್ ರಾಷ್ಟ್ರಗಳೆಂದರೆ ಭಾರತ,ಚೀನಾ ಅಮೇರಿಕ ಸಂಯುಕ್ತ ಸಂಸ್ಥಾನ ಇಂಡೋನೇಷ್ಯಾ ಪಾಕಿಸ್ತಾನ, ಬ್ರೆಜಿಲ್,ನೈಜೀರಿಯಾ,ಬಾಂಗ್ಲಾದೇಶ,
ರಷ್ಯಾ ಇಥಿಯೋಪಿಯಾ,ಇದುವರೆಗೂ ವಿಶ್ವದಲ್ಲಿ ಚೀನಾ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿತ್ತು, ಆದರೆ ಇತ್ತೀಚಿನ ವರದಿಗಳ ಪ್ರಕಾರ ಆ ಸ್ಥಾನವನ್ನು ಭಾರತ ತುಂಬುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.ವಿಶ್ವ ಜನಸಂಖ್ಯೆಯ ಆರನೇ ಒಂದು ಭಾಗವನ್ನು ಭಾರತವೇ ಹೊಂದಿದ್ದು ಇಂದು ಭಾರತ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ, ಪ್ರಸ್ತುತ ವಿಶ್ವದ ಜನಸಂಖ್ಯೆ ಸುಮಾರು 8.2 ಬಿಲಿಯನ್ ಆಗಿದ್ದು, ವರ್ಷಕ್ಕೆ ಸುಮಾರು 70 ಮಿಲಿಯನ್ ಜನರು ಹೆಚ್ಚಾಗುವ ನಿರೀಕ್ಷೆಯಿದೆ. 2037 ರ ವೇಳೆಗೆ ವಿಶ್ವದ ಜನಸಂಖ್ಯೆಯು 9 ಬಿಲಿಯನ್ ತಲುಪುವ ನಿರೀಕ್ಷೆಯಿದೆ ವಿಶ್ವಸಂಸ್ಥೆಯ (UN) ಅಂದಾಜಿನ ಪ್ರಕಾರ , ಏಪ್ರಿಲ್ 2023 ರ ಅಂತ್ಯದ ವೇಳೆಗೆ1,425,775,850 ಜನಸಂಖ್ಯೆಯೊಂದಿಗೆ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಚೀನಾವನ್ನು ಹಿಂದಿಕ್ಕಿದೆ  ನೆರೆಯ ರಾಷ್ಟ್ರದ ಜನಸಂಖ್ಯೆಯ ಸಂಖ್ಯೆಗಳು ನಿಯಮಿತವಾಗಿ ಕುಸಿಯುತ್ತಿದೆ ಅದರಲ್ಲೂ ಭಾರತದ ಜನಸಂಖ್ಯೆ ನಿಯಮಿತವಾಗಿ ಕುಸಿಯುತ್ತಿರುವ ಚೀನಾದ ಜನಸಂಖ್ಯೆಯನ್ನು ಮೀರಿಸಿದೆ ಎಂದು ವರದಿಗಳು ತೋರಿಸುತ್ತಿವೆ. ವರ್ಲ್ಡ್ ಪಾಪ್ಯುಲೇಶನ್ ರಿವ್ಯೂನ (WPR) ಪ್ರಕಾರ ಭಾರತದ ಜನಸಂಖ್ಯೆಯ ಬೆಳವಣಿಗೆ ಎಷ್ಟೇ ಕನಿಷ್ಠವಾಗಿ ಬೆಳೆದರೂ 2050ರ ವೇಳೆಗೆ ಭಾರತದ ಜನಸಂಖ್ಯೆ ಹೊಸ ದಾಖಲೆಯ ಎತ್ತರವನ್ನು ತಲುಪುವ ಹೆಚ್ಚಿನ ಸಂಭವನೀಯತೆ ಇದೆ ಎಂದು ಊಹಿಸಲಾಗಿದೆ ಎಂದು ವರದಿ ತಿಳಿಸಿದೆ,ನಮ್ಮ ದೇಶದಲ್ಲಿ ಜನಸಂಖ್ಯೆ ಇಷ್ಟು ಕ್ಷಿಪ್ರಗತಿಯಲ್ಲಿ ಬೆಳೆಯಲು ಬಾಲ್ಯ ವಿವಾಹ,ಆನಕ್ಷರತೆ, ಅಜ್ಞಾನ ಧಾರ್ಮಿಕ ಮೌಢ್ಯತೆ ಹಾಗೂ ಗಂಡು ಮಗು ಬೇಕೇ ಬೇಕು ಎಂಬ ಕೆಟ್ಟಮೂಢನಂಬಿಕೆ ಕುಟುಂಬ ಯೋಜನೆಗಳ ನಿರಾಕರಣೆ ಹೆಚ್ಚುತ್ತಿರುವ ವಲಸಿಗರ ಸಂಖ್ಯೆ ಸೇರಿ ಹಲವು ಕಾರಣಗಳಿವೆ. ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳು ನಿಜಕ್ಕೂ ಜನರ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮಗ ಳನ್ನು ಬೀರುತ್ತಿವೆ, ಮೂಲಭೂತ ಸೌಕರ್ಯಗಳು ಸೇರಿ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಶಿಕ್ಷಣ ವ್ಯೆವಸ್ಥೆಗಳು ಕುಸಿಯುತ್ತಿವೆ. ಸಂಪನ್ಮೂಲಗಳ ಕೊರತೆಯೊಂದಿಗೆ ಬಡತನ ಹಸಿವು, ಅನಕ್ಷರತೆ, ನಿರುದ್ಯೋಗ ವ್ಯೆದ್ಯಕೀಯ ಸೌಲಭ್ಯಗಳ ಕೊರತೆ ಹೀಗೆ ಲೆಕ್ಕವಿಲ್ಲದಷ್ಟು ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.ಭಾರತದ ಜನಸಂಖ್ಯೆಯ ಬೆಳವಣಿಗೆಯು ಜನರ ಜೀವನ ಮಟ್ಟದ ಮೇಲೆ ನೇರವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ, ಇದಕ್ಕಾಗಿಯೇ ಸ್ವಾತಂತ್ರ್ಯದ ನಂತರ ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ನಮ್ಮದೇಶದ ಅದ್ಭುತ ಪ್ರಗತಿಯ ಹೊರತಾಗಿಯೂ,ಜನರ ತಲಾ ಆದಾಯವು ಗಮನಾರ್ಹವಾಗಿ ಏರಲಿಲ್ಲ.ಎಂಬುದು ವಿಷಾದನೀಯ, ಜನಸಂಖ್ಯೆಯ ಬೆಳವಣಿಗೆ ನಮ್ಮ ದೇಶದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂದರೆ 25 ಮಿಲಿಯನ್ ಜನರು (1000 ಮಿಲಿಯನ್ ಜನರಲ್ಲಿ, ಅಂದರೆ, 2.5%) ನಿರಾಶ್ರಿತರಾಗಿದ್ದಾರೆ, 171 ಮಿಲಿಯನ್ ಜನರು (ಅಂದರೆ, 17%) ಸುರಕ್ಷಿತ ಕುಡಿಯುವ ನೀರಿನ ಪ್ರದೇಶವನ್ನು ಹೊಂದಿಲ್ಲ, 328.9 ಮಿಲಿಯನ್ ವಯಸ್ಕರು (ಅಂದರೆ, 33%) ಅನಕ್ಷರಸ್ಥರು ಎಂದು ಅಂದಾಜಿಸಲಾಗಿದೆ. ಐದು ವರ್ಷದೊಳಗಿನ ಶೇಕಡಾ 53 ರಷ್ಟು ಮಕ್ಕಳು ಕಡಿಮೆ ತೂಕವನ್ನು ಹೊಂದಿದ್ದಾರೆ ಮತ್ತು ಇಡೀ ದೇಶವು ವಿಶ್ವ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135 ನೇ ಸ್ಥಾನವನ್ನು ಹೊಂದಿದೆ. ಎಂದು ವರದಿಗಳು ಉಲ್ಲೇಖಿಸುತ್ತಿವೆ.ಭಾರತ 2010 ರಲ್ಲಿ ಆರ್ಥಿಕವಾಗಿ ಮುಂದುವರಿದ 9 ನೇ ಅತಿದೊಡ್ಡ ದೇಶವಾಗಿತ್ತು. ನಂತರ ಭಾರತವು 2019 ರಲ್ಲಿ ಬ್ರಿಟನ್ ದೇಶವನ್ನು ಹಿಂದಿಕ್ಕಿ ಜಾಗತಿಕವಾಗಿ 5 ನೇ ಅತಿದೊಡ್ಡ ರಾಷ್ಟ್ರವಾಗಿ ಬೆಳೆದಿದೆ ಹಾಗೂ 2030 ರ ವೇಳೆಗೆ ವಿಶ್ವದ 3 ನೇ ಆರ್ಥಿಕತೆಯ ದೇಶ ಆಗಲಿದೆ ಎಂದು ವರದಿ ಹೇಳುತ್ತಿರುವುದು ಸಂತೋಷ ಹಾಗೂ ಹೆಮ್ಮೆಯ ವಿಷಯ, ಈ ಸ್ಥಾನಕ್ಕೆ ಬರಬೇಕಾದ ಸಂಧರ್ಭದಲ್ಲಿ ಭಾರತದಲ್ಲಿ ಸ್ಪೋಟಗೊಳ್ಳು ತ್ತಿರುವ ಜನಸಂಖ್ಯೆಯ ಸಂಖ್ಯೆಯನ್ನು ನೋಡಿದರೆ ನಿಜಕ್ಕೂ ಸಹಜವಾಗಿಯೇ ಆತಂಕವಾಗುತ್ತದೆ. ಇನ್ನು ಆರ್ಥಿಕ ಸಾಮಾಜಿಕ ಶೈಕ್ಷಣಿಕವಾಗಿ ನಮ್ಮದೇಶ ಅಭಿವೃದ್ಧಿ ಕಾಣಬೇಕೆಂದರೆ, ಮೂಲಭೂತ ಸೌಲಭ್ಯಗಳ ಕೊರತೆ ನೀಗಿ,ನಿರುದ್ಯೋಗ ಸಮಸ್ಯೆ ಕಳೆದು ಬಡತನ ಮುಕ್ತ ರಾಷ್ಟ್ರವಾಗಿ ಆರ್ಥಿಕವಾಗಿ ಮುಂಚೂಣಿಯಲ್ಲಿರುವ ದೇಶವಾಗಿ ಹೊರಹೊಮ್ಮಬೇಕೆಂದರೆ ನಮ್ಮ ದೇಶದ ಧಾರ್ಮಿಕ ಮೂಡನಂಬಿಕೆಗಳ ಹೊರತಾಗಿ ಜನಸಂಖ್ಯೆಯ ಮೇಲೆ ಕಡಿವಾಣ ಬೀಳುವಂತ ಕಟ್ಟುನಿಟ್ಟಿನ ಕಾನೂನುಗಳು ಜಾರಿಗೊಳ್ಳಬೇಕು ಜನಗಳು ಸಹ ತಮ್ಮ ತಮ್ಮ ಜವಾಬ್ದಾರಿ ಅರಿತು ವಯುಕ್ತಿಕ ಲಾಭಗಳನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕು ಆಗ ಮಾತ್ರ ದೇಶ ಆರೋಗ್ಯಕರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ!
ಗೀತಾಂಜಲಿ ಎನ್ ಎಮ್

ಕೆಟೆಗರೀ / ವರ್ಗ:ಸುದ್ದಿ



ProfileImg

ಇದರ ಲೇಖಕರು Geethanjali NM

Author ✍️

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ