ಡಿ.ಬಿ. 70% ಸೆಲ್ಯೂಶನ್ಸ್ ಸಂಸ್ಥೆಯ ಮೂರು ನಗರದ ಕಚೇರಿಗಳಿಗೆ ದಾಳಿ.
ಕೋಟ್ಯಂತರ ರೂಪಾಯಿ ಸೈಬರ್ ವಂಚನೆ.
ವಂಚನೆಯಲ್ಲಿ ಕಂಪೆನಿಯ ಪಾತ್ರವಿಲ್ಲ.
70% ಉದ್ಯೋಗಿಗಳ ಖಾತೆಗೆ ಹಣ ಜಮಾವಣೆಯಾದ ಸಾಕ್ಷಿ.
ಇನ್ನಷ್ಟು ಪ್ರತಿಷ್ಟಿತ ಸಾಫ್ಟವೇರ್ ಸಂಸ್ಥೆಗಳ ಉದ್ಯೋಗಿಗಳ ಮೇಲೆ ಖಾಕಿ ಕಣ್ಣು
ಮಾಸ್ಟರ್ ಮೈಂಡ್ ಡೆಲಿವರಿ ಬಾಯ್ ಅರೆಸ್ಟ್...
ಕಚೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದಂತೆ ಕಿವಿಗಪ್ಪಳಿಸಿದ ಬ್ರೇಕಿಂಗ್ ನ್ಯೂಸ್..
ತಲೆ ಎತ್ತಿ ಟಿ.ವಿ ಕಡೆ ನೋಡಿದೆ. ಸುದ್ದಿ ಚಿತ್ರ ಬದಲಾಗುತ್ತಿತ್ತು.
ಮೊಬೈಲ್ ಎತ್ತಿಕೊಂಡೆ. ರಿಪೋರ್ಟರ್ ನಂಬರ್ ಒತ್ತಿದೆ.
‘ಹಲೋ ಅನ್ಸಾರ್, ಅದೇನು ಕತೆ ಡೆಲಿವರಿ ಬಾಯ್‌ಯದ್ದು. ಅವ ಯಾರು ಗೊತ್ತಾ?’ ಪ್ರಶ್ನಿಸಿದೆ.
‘ಹಾಂ, ಶೆಟ್ರೆ. ಈಗ ತಾನೇ ಪ್ರೆಸ್ ಮೀಟ್ ಮುಗಿಯಿತು. ಎಸ್.ಪಿ. ಎಲ್ಲಾ ಬ್ರೀಫ್ ಮಾಡಿದ್ದಾರೆ. ಆಫೀಸ್‌ಗೆ ಬರುತ್ತೇನೆ ಸುದ್ದಿ ಕೊಡುತ್ತೇನೆ’
‘ಅಲ್ಲ ಅನ್ಸಾರ್, ಆ ಡೆಲಿವರಿ ಬಾಯ್ ಫೋಟೋ ಕೊಟ್ರಾ?’ ಕುತೂಹಲದಿಂದ ಪ್ರಶ್ನಿಸಿದೆ.
‘ಹೌದು, ಕಳ್ಳ ನನ್ಮಗಂದು ಫೋಟೋ ರಿಲೀಸ್ ಮಾಡಿದ್ದಾರೆ... ಅರೆಸ್ಟ್ ಕೂಡಾ ಆಗಿದೆ’
‘ಓಹ್... ಡಿ.ಬಿ..!’
‘ಹೌದು... ಅವನೆ.... ಅವನೇ..’
ಟಿ.ವಿಯಲ್ಲಿ ಪ್ರಸಾರವಾದ ಫೋಟೋ ನೋಡಿ ಉದ್ಘರಿಸಿದೆ.
ರಾತ್ರಿ ಕೆಲಸ ಮುಗಿದ ಮೇಲೆ ಕೋಮು ಗ್ರಹಚಾರ ಬಡಿದ ನಗರ ಪರಿಸರದ ಹೊಟೇಲ್ ಎಲ್ಲಾ ಬಂದ್.
ಒಂದು ಬಾರಿ ಮೊಬೈಲ್‌ಲ್ಲಿ ಫುಡ್ ಆರ್ಡರ್ ಮಾಡಿದಾಗ ಡಿ.ಬಿ. ಬಿರಿಯಾನಿ ತಂದು ‘ನಮಸ್ಕಾರ ಸರ್’ ಅಂದಿದ್ದ.
ತೀಕ್ಷ್ಣ ಕಣ್ಣುಗಳು. ಪ್ರಕಾಶಮಾನವಾದ ಮುಖ. ಆತ ಡೆಲಿವರಿ ಬಾಯ್ ಎಂದು ಹೇಳುವುದಕ್ಕೆ ತಕ್ಷಣಕ್ಕೆ ಸಾಧ್ಯವಾಗುತ್ತಿರಲಿಲ್ಲ.
‘ನೈಟ್ ಎಷ್ಟು ಹೊತ್ತಿಗೆ ಬೇಕಾದ್ರೂ ಕಾಲ್ ಮಾಡಿ ಸಾರ್, ಸರ್ವಿಸ್‌ಗೆ ನಾನು ರೆಡಿ’. ಎಂದ.
ಆತನ ಮೊಬೈಲ್ ನಂಬರ್ ಎಂಟ್ರಿ ಮಾಡಿಕೊಂಡೆ.
ಆನಂತರ ಆತ ನನ್ನ ಖಾಸಗೀ ಡೆಲಿವರಿ ಬಾಯ್. ಯಾವ ಫುಡ್, ಕ್ವಾರ್ಟರ್ ಬೇಕಾದ್ರೂ ತಂದು ಕೊಡುತ್ತಿದ್ದ.
ಜತೆಗೆ ಕುಳಿತು ಒಂದು ಪೆಗ್ ಹಾಕುವಷ್ಟು ಆತ್ಮೀಯನಾಗಿದ್ದ.
‘ಸರ್ ನೀವು ಪತ್ರಕರ್ತರು. ಎಲ್ಲಿಯಾದರೂ 70% ಸೈನ್ಸ್ ಕಲಿತ ಹುಡುಗರು, ಹುಡುಗಿಯರು ಇಂಜಿನಿಯರಿಂಗ್ ಕಲಿಯುವ ತುಡಿತ ಇರುವವರು. ಸೀಟು, ಫೀಸಿಗೆ ತೊಂದರೆ ಪಡುವವರು ಇದ್ರೆ ನನ್ನ ನಂಬರ್ ಕೊಡಿ ಸರ್. ನಮ್ಮದು ಡಿ.ಬಿ. 70% ಅಂತ ಒಂದು ಗ್ರೂಪ್ ಇದೆ. ಹೆಲ್ಪ್ ಮಾಡುತ್ತೇವೆ’ ಅಂದಿದ್ದ.
ಒಂದಿಬ್ಬರು ಹುಡುಗ, ಹುಡುಗಿಯರಿಗೆ ಆತನ ನಂಬರ್ ಕೂಡಾ ಕೊಟ್ಟಿದ್ದೆ.
ಈ ಡೆಲಿವರಿ ಬಾಯ್ ಜಂಬಕೊಚ್ಚಿಕೊಂಡದ್ದೋ ಅಥವಾ ನಿಜವಾಗಿಯೂ ಹೆಲ್ಪ್ ಮಾಡಿದ್ದಾನೋ ಅಂತ ತಿಳಿಯಲು ಕ್ರಾಸ್ ಚೆಕ್ ಮಾಡಿದ್ದೆ.
ನಾನು ನಂಬರ್ ಕೊಟ್ಟವರ ಖಾತೆಗೆ ಹಣ. ಎಲ್ಲೋ ಒಂದು ಕಡೆ ಇಂಜಿನಿಯರಿಂಗ್ ಸೀಟು ಎಲ್ಲಾ ಲಭ್ಯವಾಗಿತ್ತು.
ಇದೇ ಸಹಾಯ ಪಡೆದುಕೊಂಡವರು ಡಿ.ಬಿ. 70% ಸೆಲ್ಯೂಷನ್ಸ್ ಎಂಬ ಸಾಫ್ಟ್‌ವೇರ್ ಸಂಸ್ಥೆ ಕಟ್ಟಿ ಕೈತುಂಬಾ ಸಂಪಾದಿಸುತ್ತಿದ್ದರು. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದರು. ಆದರೂ ಆ ಹುಡುಗರಿಗೆ ಈ ಡೆಲಿವರಿ ಬಾಯ್‌ಯ ಮುಖ ಪರಿಚಯ ಇದ್ದಿರಲಿಲ್ಲ.
ಡೆಲಿವರಿ ಬಾಯ್ ಅರೆಸ್ಟ್ ಆಗಿದ್ದ.
ಬೀಗ ಹಾಕಲ್ಪಟ್ಟ ಡಿ.ಬಿ. 70% ಸೆಲೂಶನ್ಸ್ ಸಾಫ್ಟ್‌ವೇರ್ ಕಂಪೆನಿಯ ನೂರಾರು ಇಂಜಿನಿಯರ‍್ಸ್ ಊಟ ತಿಂಡಿ, ನಿದ್ದೆ ಬಿಟ್ಟು ಪೊಲೀಸ್ ಠಾಣೆ, ನ್ಯಾಯಾಲಯದ ಮುಂದೆ ಜಮಾಯಿಸಿದ್ದರು. ಪ್ರತಿಷ್ಠಿತ ಲಾಯರನ್ನೇ ಗೊತ್ತು ಮಾಡಿದ್ದರು.
ಡೆಲಿವರಿ ಬಾಯ್ ಹತ್ತಾರು ವರ್ಷಗಳಲ್ಲಿ ಬ್ಯಾಂಕ್‌ಗಳಿಗೆ ನೂರ ಐವತ್ತು ಕೋಟಿಗೂ ಹೆಚ್ಚು ಸೈಬರ್ ವಂಚನೆ ಮಾಡಿದ್ದ.
ಆತನ ಮನೆಗೆ ರೈಡ್ ಮಾಡಿದ ಪೊಲೀಸರಿಗೇ ಅಚ್ಚರಿಯಾಗಿತ್ತು. ಡೆಲಿವರಿ ಡಬ್ಬಾ ಹೇರಿಕೊಂಡ ಒಂದು ಹಳೆಯ ಸ್ಕೂಟರ್. ಇಂದೋ ನಾಳೆಯೂ ಮುರಿದು ಬೀಳುವಂತಿದ್ದ ಬಾಡಿಗೆ ಮನೆಯೊಳಗೆ ಒಂದೆರಡು ಕಂಪ್ಯೂಟರ್, ವೈಫೈ ಸಲಕರಣೆಗಳು.
ಸಂಜೆವರೆಗೆ ಡ್ರೈವರ್ ಕೆಲಸ ಮಾಡಿ ಸಂಜೆ ನಂತರ ಗಂಟಲವರೆಗೆ ಕುಡಿದು ಕಣ್ಣು ಕೆಂಪು ಮಾಡಿಕೊಂಡು ತೂರಾಡುವ ಅಪ್ಪ. ಮನೆ ಕೆಲಸ ಮಾಡುವ ಅಮ್ಮ. ಯಾರಾದರೂ ನ್ಯಾಯಾಧೀಶ ನೋಡಿದರೆ ‘ಏಯ್, ಇವನನ್ನು ಯಾಕೆ ಹಿಡಿದಿದ್ದೀರಾ? ಬಿಟ್ಟು ಬಿಡಿ’ ಎಂದು ತೀರ್ಪೇ ಕೊಟ್ಟು ಬಿಡುವ ಪರಿಸ್ಥಿತಿ.
ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು.
ವಾರವೊಂದು ಕಳೆಯುತ್ತಿದ್ದಂತೆ ಡೆಲಿವರಿ ಬಾಯ್‌ಗೆ ಜಾಮೀನು ಸಿಕ್ಕಿತ್ತು. ಡಿ.ಬಿ. 70% ಸೆಲ್ಯೂಷನ್ಸ್ ಸಾಫ್ಟ್‌ವೇರ್ ಸಂಸ್ಥೆಯ ಇಂಜಿನಿಯರ‍್ಸ್ ಒಟ್ಟು ಸೇರಿ ಎಲ್ಲಾ ಮೊತ್ತವನ್ನು ಬ್ಯಾಂಕ್‌ಗೆ ಪಾವತಿಸಿದ್ದರು. ಹಣ ವಾಪಾಸು ಸಿಕ್ಕಿತಲ್ಲ ಎಂದು ಬ್ಯಾಂಕ್‌ಗಳು ನೆಮ್ಮದಿಯ ಉಸಿರು ಬಿಟ್ಟು ಸುಮ್ಮನಾದವು.
ಒಂದು ರಾತ್ರಿ ನನ್ನ ಫೋನ್ ರಿಂಗಣಿಸಿತು.
‘ನಮಸ್ಕಾರ್ ಸಾರ್ ಆರ್ಡರ್ ಇದ್ರೆ ಹೇಳಿ ಸಾರ್...’ ಡೆಲಿವರಿ ಬಾಯ್ ಧ್ವನಿ.
‘ಫುಲ್ ಬಿರಿಯಾನಿ, ಆಫ್ ಹಿಡಿದುಕೊಂಡು ಬಾ ನಿನ್ನಲ್ಲಿ ಮಾತಾಡುದಕ್ಕಿದೆ’ ಎಂದೆ.
‘ಅಲ್ಲ ಮಹರಾಯ ನೀನು ಅಷ್ಟು ಬ್ರಿಲಿಯಂಟ್ ಇದ್ದಿಯಾ. ಮತ್ಯಾಕೆ ಈ ಡೆಲಿವರಿ ಬಾಯ್ ಕೆಲಸ’ ಎಂದು ಬಿರಿಯಾನಿ ಬಿಚ್ಚಿ, ಗ್ಲಾಸ್ ಮುಂದೆ ಇಟ್ಟು ಕುಳಿತಾಗ ಆತನನ್ನು ಪ್ರಶ್ನಿಸಿದೆ.
ಡೆಲಿವರಿ ಬಾಯ್ ನಸು ನಕ್ಕ. ಅದರಲ್ಲಿ ವಿಷಾದ, ಕೀಟಲೆ, ಸಂತಸ ಯಾವುದು ಇದೆ ಎಂದು ಅರ್ಥವಾಗಲಿಲ್ಲ.
‘ಸರ್, ನಾನು ಪಿಯುಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ನೂರಕ್ಕೆ ನೂರು ಅಂಕ ತೆಗೆದವ. ಕೆಮೆಷ್ಟ್ರಿ, ಫಿಸಿಕ್ಸ್ ಅರ್ಥವಾಗುತ್ತಿರಲ್ಲ. ಹೇಗೋ 70% ತೆಗೆದೆ. ಸಿಇಟಿ ಅಷ್ಟೇನೂ ಬರಲಿಲ್ಲ. ಕಂಪ್ಯೂಟರ್ ಇಂಜಿನಿಯರ್ ಆಗಬೇಕು ಅಂತ ಕನಸು. ಸೀಟು ಸಿಗಲಿಲ್ಲ. ಹಣ ಸುರಿದರೆ ಸೀಟು ರೆಡಿ ಇತ್ತು.
ಅಪ್ಪನನ್ನು ರಜೆ ಮಾಡಿಸಿ ಇದ್ದ ಎಲ್ಲಾ ಬ್ಯಾಂಕ್ ಅಲೆದಾಡಿದೆ. ನನ್ನ ಅರ್ಹತೆ, ಅಪ್ಪನ ಪರಿಸ್ಥಿತಿ, ಪಾನ್, ಸಿಬಿಲ್, ಜಾಮೀನು, ಅಡವು ಜಂಜಾಟ. ಅದೇನೋ ಅವರದೇ ಲೆಕ್ಕಾಚಾರ.. ಮನೆಯ ಅವಸ್ಥೆ ನೋಡಿ ಯಾರೂ ಲೋನ್ ಕೊಡಲೇ ಇಲ್ಲ. ‘ಸರ್ ಒಂದು ಬಾರಿ ಎಜುಕೇಶನ್‌ಗೆ ಇರುವ ಬಡ್ಡಿ ರಹಿತ ಲೋನ್ ಕೊಡಿ ಹಣ ಮಾತ್ರ ಅಲ್ಲ ಋಣವನ್ನು ನಿಮ್ಮ ಜೀತ ಮಾಡಿ ತೀರಿಸುತ್ತೇನೆ’ ಎಂದು ಬ್ಯಾಂಕ್ ಅಧಿಕಾರಿಯ ಕಾಲಿಗೇ ಬಿದ್ದೆ.
ನನ್ನ ಅಪ್ಪನ ಕಣ್ಣು ಮೊದಲೇ ಕೆಂಪು, ಅದು ಮತ್ತಷ್ಟು ಕೆಂಪಾಯಿತು. ಕಾಲಿಗೆ ಬಿದ್ದ ನನ್ನ ಕಾಲರ್ ಪಟ್ಟಿ ಹಿಡಿದು ಮೇಲೆತ್ತಿದ್ದರು. ಹೊರಗೆಳೆದು ತಂದರು.
ಮನೆಗೆ ಬಂದವರೇ ‘ನೀನು ಕಂಪ್ಯೂಟರ್ ಕಂಪ್ಯೂಟರ್ ಅಂತ ನೂರಕ್ಕೆ ನೂರು ತೆಗೆದಿಯಲ್ಲಾ ನಿನಗೆ ಅಷ್ಟು ತಾಖತ್ತು ಇದ್ರೆ ಬ್ಯಾಂಕ್‌ನಲ್ಲಿ ಕೋಟಿ ಕೋಟಿ ದುಡ್ಡು ಕೊಳೆಯುವುದಕ್ಕೆ ಇಟ್ಟಿದ್ದಾರಲ್ಲಾ ಅವರ ಖಾತೆಗೆ ಕನ್ನ ಕೊರೆ. ಈಗ ಎಲ್ಲ ಕಡೆ ಮನೆಯಲ್ಲೇ ಕುಳಿತು ಬ್ಯಾಂಕ್‌ಗೆ ಮೋಸ ಮಾಡುತ್ತಾರಲ್ಲಾ ಹಾಗೇ ಮಾಡು. ಇಲ್ಲದಿದ್ದರೆ ಮನೆಯಲ್ಲಿ ಬಿದ್ದಿರು. ಎರಡು ಹೊತ್ತು ಊಟ ಕೊಡ್ತೇನೆ. ಯಾರ‍್ಯಾರದ್ದೋ ಕಾಲಿಗೆ ಬೀಳುವುದಕ್ಕೆ ಹೋಗಬೇಡ’ ಎಂದು ಅಬ್ಬರಿಸಿದರು.
ಅವರಿವರತ್ರ ಬೇಡಿ ಸಾಲ ಮಾಡಿ ಹಳೆಯ ಸ್ಕೂಟರ್ ತೆಗೆದುಕೊಂಡೆ. ಡೆಲಿವರಿ ಬಾಯ್ ಕೆಲಸಕ್ಕೆ ಸೇರಿದೆ. ಸಮಯ ಇರುವಾಗ ಇಂಟರ್‌ನೆಟ್ ಜಾಲಾಟ. ನೂರಕ್ಕೆ ನೂರು ಹ್ಯಾಕಿಂಗ್ ಮಾಡುವುದನ್ನು ಕರಗತ ಮಾಡಿ ಕೊಂಡೆ. ಬ್ಯಾಂಕ್‌ನಲ್ಲಿ ಕೋಟಿ ಕೋಟಿ ಡೆಪಾಸಿಟ್ ಅಂತ ಇಡ್ತಾರಲ್ಲ. ಅವರ ಖಾತೆಯ ಕೋಡ್ ಕೀಲಿ ಕೈಗೆ ಬಂತು. ಯಾರೂ ಈ ವರೆಗೆ ಮಾಡದ್ದು ಮಾಡಬೇಕು ಎಂಬ ಛಲ.
70% ಅಂಕ ತೆಗೆದು ತ್ರಿಶಂಕು ಸ್ಥಿತಿಯಲ್ಲಿರುವ ಹುಡುಗ- ಹುಡುಗಿಯರನ್ನು ಹುಡುಕಿದೆ. ಅವರ ಖಾತೆಗೆ ನೇರ ಹಣ ಹಾಕಿದೆ. 'ಡಿ.ಬಿ 70%' ಇಷ್ಟು ಮಾತ್ರ ಅವರಿಗೆ ಗೊತ್ತು. ಮತ್ತೆ ನಾನ್ಯಾರೆಂದು ಅವರು ತಿಳಿದೇ ಇರಲಿಲ್ಲ.
ಅದೇ ಹುಡುಗ - ಹುಡುಗಿಯರು ಸೇರಿಕೊಂಡು ಡಿ.ಬಿ. 70% ಸೆಲ್ಯೂಶನ್ಸ್ ಸಾಫ್ಟ್‌ವೇರ್ ಕಂಪೆನಿಯನ್ನೇ ಮಾಡಿ ಬಿಟ್ರು. ಇನ್ನೂ ಹಲವಾರು ಮಂದಿ ಉತ್ತಮ ಸಂಸ್ಥೆ ಸೇರಿದ್ದಾರೆ. ಅವರೆಲ್ಲಾ ಸೇರಿ ನನ್ನನ್ನು ಬಿಡಿಸಿದರು ಕತೆ ಅಷ್ಟೆ’
ನಾನು ಅವನ ಮುಖವನ್ನೇ ನೋಡುತ್ತಾ ಕುಳಿತೆ…
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ