28 ಬಪ್ಪು ಮತ್ತು ಕೊರೋನಾ

ಪೆದಂಬು ನರಮಾನಿ ಕಾದಂಬರಿಯ 28ನೇ  ಭಾಗ

ProfileImg
07 Jun '25
6 ನಿಮಿಷದ ಓದು


image

 

'ಕಂಜಿ ಸಾಕಿದ್ರೆ ಕಳ್ಳರು ಬಿಡುದಿಲ್ಲ ಮಾರಾಯಾ. ನೀನು ಪಂಜಿ ಸಾಕು. ಯಾರು ಕದಿಯುತ್ತಾರೋ ನೋಡುವ?’

ಮಂಜೊಟ್ಟಿ ಗುತ್ತಿನ ದನಗಳು ಕಳ್ಳರ ಪಾಲಾದ ನಂತರ ಮಿಲಿಟರಿ ಅಬುಟ ಪದ್ದುವಿಗೆ ಸಲಹೆ ನೀಡಿದ.

'ಕಂಜಿ ಎಲ್ಲಿ ಪಂಜಿ ಎಲ್ಲಿ ? ಈ ಪಿರ್ಕಿ ಮಿಲಿಟ್ರಿ ಮಾಮು ಎಂತ ಹೇಳುವುದು?' ಅರ್ಥವಾಗದೆ ಪದ್ದು ತಲೆ ಕೆರೆದ.

‘ಒಳ್ಳೆ ಡಿಮಾಂಡ್ ಇದೆ. ಮಾರ್ಕೆಟ್ ಎಲ್ಲಿಂಟು. ಸಾಗಾಟ ಹೇಗೆ ಅಂತ ನಾನು ಹೇಳ್ತೇನೆ. ಅದಕ್ಕೆ ಚೂರಿ ನೀನು ಹಾಕಬೇಕುಂತ ಇಲ್ಲ. ಅದಕ್ಕೆಲ್ಲಾ ಜನ ಮಾಡಿ ಕೊಡ್ತೇನೆ. ಸಾಕುವಾಗ ಸ್ವಲ್ಪ ವಾಸನೆ ಮಾತ್ರ ಉಂಟು’ ಅಬುಟ ಮಾಹಿತಿ ನೀಡತೊಡಗಿದ.

‘ನಾನು ಎಲ್ಲಿ ಸಾಕುವುದು ಅಬುಟಾಮು. ಮನೆ ಹತ್ರ ವಾಸನೆ ಬರುತ್ತದೆ. ಆ ಕೆಲಸ ನಮಗೆ ಹೇಳಿಸಿದ್ದಾ? ನನಗೆ ವಾಸನೆ ಅಂದ್ರೆ ಆಗುವುದಿಲ್ಲ’ ಪದ್ದು ಉತ್ತರಿಸಿದ.

‘ಯಾಕೆ ಆಗುದಿಲ್ಲ. ಕುಮ್ಕಿ ಜಾಗ ಉಂಟಲ್ಲ. ಅದು ಗುಡ್ಡ ಅಲ್ವಾ? ಅದರ ಹತ್ರ ಯಾರ ಮನೆಯೂ ಇಲ್ಲ. ಅಲ್ಲಿ ಶೆಡ್ ಮಾಡು. ಒಂದು ಹೊಂಡ ಮಾಡಿ ಗಲೇಜು ಒಟ್ಟಾಗುವ ಹಾಗೆ ಮಾಡು. ಹೇಗೂ ಕಂಗು, ತೆಂಗು ತೋಟ ಉಂಟಲ್ಲ. ಅದಕ್ಕೆ ಹಾಕಿದರೆ ಡಬಲ್ ಬೆನಿಫಿಟ್.

ಪಂಚಾಯತ್ ಹಂದಿ ಶೆಡ್‌ಗೆ ಹಣ ಕೊಡುತ್ತದೆ. ಹಿಂದೆ ಕಟ್ಲಿಕ್ಕೆ ಇಲ್ಲ. ಸಾಕುದಕ್ಕೆ ಜನ ಇಡು’ ಅಬುಟನ ಮಾತು ಪದ್ದುವಿಗೆ ಹಿತವೆನಿಸಿತು.

ಸುರತ್ಕಲ್ ಪೇಟೆಯಲ್ಲಿ ಬೇರ ಸಾಗುವುದಿಲ್ಲ ಎಂದು ಅಂಗಡಿ ಬಂದ್ ಮಾಡಿ ಶಿವಮೊಗ್ಗದ ಮಗನ ಮನೆಗೆ ಹೊರಟು ನಿಂತ ಖಾದ್ರಿಕಾಕನಿಗೆ ತನ್ನನ್ನೇ ನಂಬಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನಾಥ ಯುವಕ ಬಪ್ಪುವನ್ನು ಏನು ಮಾಡುವುದು ಎಂದು ಪೀಕಲಾಟವಾಯಿತು.

ಸಮಯಕ್ಕೆ ಸರಿಯಾಗಿ ಪದ್ದು ‘ಮನೆಯಲ್ಲಿ  ಕೆಲಸಕ್ಕೆ ಜನ ಬೇಕು ಯಾರಾದರೂ ಇದ್ದರೆ ಹೇಳಿ’ ಎಂದು ಹೇಳಿದ್ದರಿಂದ ಬಪ್ಪು ಮಂಜೊಟ್ಟಿಗುತ್ತಿಗೆ ಬಟ್ಟೆಯ ಗಂಟು ಹಿಡಿದುಕೊಂಡೇ ಬಂದ. ಹಂದಿ ಸಾಕುವುದಕ್ಕೆ ‘ಸೈ’ ಎಂದ.

ಯಾರೋ ಕ್ರೈಸ್ತರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕ ಬಪ್ಪುವನ್ನು ಅವರು ಮೂರು ತಿಂಗಳ ವಿಸಿಟಿಂಗ್ ವಿಸಾದಲ್ಲಿ ಆಸ್ಟ್ರೇಲಿಯಾದಲ್ಲಿದ್ದ ಮಕ್ಕಳ ಮನೆಗೆ ಹೋಗುವಾಗ ಖಾದ್ರಿಯ ಅಂಗಡಿಯಲ್ಲಿ ಬಿಡುತ್ತಿದ್ದರು.

ಹೀಗೆ ಬಂದ ಬಪ್ಪು ಒಂದು ಸಾರಿ ಅವರು ಮತ್ತೆ ಮನೆ ಕೆಲಸ ಮಾಡಲು ಕರೆದರೂ ಹೋಗಲಿಲ್ಲ.

'ಅವನಿಗೆ ಮನಸ್ಸಿದ್ದರೆ ಇರಲಿ, ಚೆನ್ನಾಗಿ ನೋಡಿಕೊಳ್ಳಿ' ಎಂದರು ಅವರು.

ಖಾದ್ರಿ ಬ್ಯಾರಿಯ ಅಚ್ಚು ಮೆಚ್ಚಿನ ಕೆಲಸದವನಾಗಿ ಅಂಗಡಿಯ ಜಗಲಿಯಲ್ಲಿ ಮಲಗುತ್ತಿದ್ದ.

ಅಂಗಡಿಗೆ ಸಾಮಾನು ಕಟ್ಟಿ ಕೊಡಲು ಬರುವ ಪತ್ರಿಕೆಗಳಲ್ಲಿನ ಕೆಲವು ಕಲರ್ ಚಿತ್ರಗಳನ್ನು ತದೇಕ ಚಿತ್ತವಾಗಿ ನೋಡಿ, ಯಾರಿಗೂ ಅರಿವಾಗದಂತೆ ಮೆಲ್ಲಗೆ ಎತ್ತಿ ಅಡಗಿಸಿ ಇಡುತ್ತಿದ್ದ ಬಪ್ಪುವಿಗೆ ಆತನ ಅಪ್ಪ ಅಮ್ಮನ ಮುಖವನ್ನೇ ಕಂಡ ನೆನಪಿರಲಿಲ್ಲ.

ಅದು ಯಾವ ಕಾರಣಕ್ಕೋ ಬಪ್ಪುವಿನ ಮೂಗು ವಾಸನಾ ಗ್ರಹಣಾ ಶಕ್ತಿಯನ್ನು ಕಳೆದುಕೊಂಡಿತ್ತು. ಈ ಕಾರಣಕ್ಕೆ ಜಾತಿ ಬೇಧ ಇಲ್ಲದೆ ಎಲ್ಲರೂ ಕೊಳೆತು ನಾರುವ ಪ್ರದೇಶಗಳನ್ನು ಸ್ವಚ್ಛ ಮಾಡಲು ಈತನನ್ನು ಕರೆಯುತ್ತಿದ್ದರು. ಬಪ್ಪು ಅದನ್ನು ಶ್ರದ್ದೆಯಿಂದ ಮಾಡುತ್ತಿದ್ದ. ಎಲ್ಲರ ಮನ ಗೆದ್ದಿದ್ದ.

ಮಂಜೊಟ್ಟಿ ಗುತ್ತಿನ ಹಟ್ಟಿಯ ವಿಶಾಲವಾದ ಅರ್ಕಂಜಿ ಕೋಣೆಯಲ್ಲಿ ಬಪ್ಪುವಿನ ವಾಸ್ತವ್ಯಕ್ಕೆ ವ್ಯವಸ್ಥೆಯಾಗಿತ್ತು. ಕೋಣೆಯ ಎರಡು ಗೋಡೆಗಳು ಸಂಧಿಸುವಲ್ಲಿ ತನ್ನ ಬಟ್ಟೆಯ ಗಂಟನ್ನು ಇಟ್ಟ ಬಪ್ಪು  ಇನ್ನೆರಡು ಬದಿಗೆ ತೆಂಗಿನ ಸೋಗೆಯ ಹೆಣೆದ ತಟ್ಟಿಯನ್ನು ಕಟ್ಟಿ ತನ್ನ ಕೋಣೆಯನ್ನು ಬೇರೆಯೇ  ಮಾಡಿಕೊಂಡ.

ಸುಜ್ಜಾ ಕೊಟ್ಟ ಹೊದಿಕೆ ಹಾಸನ್ನು ಮಡಿಸಿ ಬದಿಗೆ ಇಟ್ಟು ರಾತ್ರಿ ಹೊತ್ತು ತೊಳೆದು ಸ್ವಚ್ಛ ಮಾಡಿದ ಒಂದು ದೊಡ್ಡ ಗೋಣಿಯ ಒಳಗೆ ದೇಹವನ್ನು ತೂರಿಸಿ ಅದೇ ಚಾಪೆ, ಅದೇ ಹೊದಿಕೆ ಎಂದುಕೊಂಡು ಅದರ ಬಾಯಿಯನ್ನು ಮುಚ್ಚಿ ಮಲಗಿ ಗೋಣಿಯೊಳಗೆ ಗೊರಕೆ ಹೊಡೆಯುತ್ತಿದ್ದ.

ಬಪ್ಪು ನಿದ್ದೆಯ ಮತ್ತಿನಲ್ಲಿರುವಾಗ ಒಮ್ಮೊಮ್ಮೆ ಪದ್ದುವಿನ ಮಗ ಗೋಣಿಯ ಬಾಯನ್ನು ಗಟ್ಟಿಯಾಗಿ ಕಟ್ಟಿ ಕೀಟಲೆ ಮಾಡುತ್ತಿದ್ದ. ಹೇಗೋ ಎದ್ದು ಬಂದ ಬಪ್ಪು ಹುಡುಗನನ್ನು ಮುದ್ದಿಸುತ್ತಿದ್ದ.

ಖಾದ್ರಿಯ ಅಂಗಡಿಯಲ್ಲಿ ತಾನು ಬಚ್ಚಿಟ್ಟುಕೊಂಡಿದ್ದ ಚಿತ್ರಗಳನ್ನು ತಟ್ಟಿ ಗೋಡೆಯ ತುಂಬಾ ಅಂಟಿಸಿಕೊಂಡಿದ್ದ.

ಅದೇನೆಂದು ನೋಡಲು ಸುಜ್ಜಾ ಆತನ ತಟ್ಟಿ ಕೋಣೆಯ ಒಳಗೆ ನುಗ್ಗಿ ದಂಗಾಗಿ ಹೋಗಿದ್ದಳು.

ಪತ್ರಿಕೆಗಳಲ್ಲಿ ಬರುವ ಅನಾಥ ಬಾಲಕ - ಬಾಲಕಿಯರ ವಿವಿಧ ಭಂಗಿಯ ಕಲಾತ್ಮಕ‌ ಛಾಯಾಚಿತ್ರಗಳು ಅಲ್ಲೆಲ್ಲಾ ತುಂಬಿಕೊಂಡಿದ್ದವು. 

ತಬ್ಬಲಿ ಬಪ್ಪುವಿನ ಮೇಲೆ ಮಾತೃವಾತ್ಸಲ್ಯದ ಭಾವ ಆಕೆಯಲ್ಲಿ ಉಂಟಾಗಿತ್ತು.

ರಾತ್ರಿ ಹೊತ್ತು ಹೊರಗೆ ಯಾರು ಏನು ಕೊಟ್ಟರೂ ಬಪ್ಪು ತಿನ್ನುತ್ತಿರಲಿಲ್ಲ. ‘ಮನೆಯಲ್ಲಿ ಅಮ್ಮ ಕಾಯುತ್ತಿದ್ದಾರೆ’ ಎಂದು ಹೇಳುತ್ತಿದ್ದ.

‘ಇವನಿಗೆ ಯಾವ ಅಮ್ಮ’ ಎಂದು ಎಲ್ಲರೂ ಆರ್ಶ್ಚರ್ಯ ಚಕಿತರಾಗಿದ್ದರು.

ರಾತ್ರಿ ಹೊತ್ತು ಸುಜ್ಜ ಬಡಿಸುತ್ತಿದ್ದ ಊಟದ ರುಚಿಗೆ ಆತ ಮನಸೋತಿದ್ದ.

ಅಣ್ಣ ಸೊಸೈಟಿ ಬ್ಯಾಂಕ್ ಎಕೌಂಟ್ ಮಾಡಿದ್ದಾರೆ. ತಿಂಗಳ ಸಂಬಳ ಹಾಕುತ್ತೇನೆ ಎಂದಿದ್ದಾರೆ. ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ. ಲಕ್ಷ ರೂಪಾಯಿ ಆದ ಮೇಲೆ ಮನೆ ಮಾಡುತ್ತೇನೆ. ನನ್ನಂತೆ ಇರುವ ಅನಾಥ ಹುಡುಗಿಯನ್ನು ಮದುವೆ ಆಗುತ್ತೇನೆ. ನೀವು ಧಾರೆ ಎರೆದು ಕೊಡಬೇಕು. ಮಕ್ಕಳನ್ನು ಚೆನ್ನಾಗಿ ಸಾಕುತ್ತೇನೆ. ಎಂದೆಲ್ಲಾ ತನ್ನ ಕನಸನ್ನು ತನ್ಮಯನಾಗಿ ಹೇಳುತ್ತಿದ್ದ ಬಪ್ಪುವಿನ ಮಾತುಗಳನ್ನು ಕೇಳಿ ಸುಜ್ಜಾ ಕಣ್ಣಲ್ಲಿ ನೀರು ತುಂಬಿಸಿಕೊಳ್ಳುತ್ತಿದ್ದಳು.

‘ದೇವರು ನಿನ್ನ ಕನಸು ನನಸು ಮಾಡಲಿ’ ಎನ್ನುತ್ತಿದ್ದಳು.

‘ಅದು ಯಾವ ದೇವರು? ಎಲ್ಲರಿಗೂ ಅಪ್ಪ ಅಮ್ಮನನ್ನು ಕೊಟ್ಟ ದೇವರು ನನಗೆ ಯಾಕೆ ಅವರನ್ನು ನೋಡಲು ಬಿಡಲಿಲ್ಲ. ದೇವರು ಇದ್ದರೆ ಹಾಗೆಲ್ಲಾ ಅನ್ಯಾಯ ಮಾಡುತ್ತಾನೆಯೇ? ದೇವರು ಇಲ್ಲ ಅಮ್ಮಾ... ನನಗೆ ಅನ್ನ ನೀಡಿದವರೇ ದೇವರು’ ಎಂದು ಬಪ್ಪು ಹೇಳುತ್ತಿದ್ದ.

ಪದ್ದು ಪಂಚಾಯತ್‌ಗೆ ಹಂದಿ ಸಾಕಣೆ ಶೆಡ್ ಮಾಡಲು ಅರ್ಜಿ ಸಲ್ಲಿಸಿದ.

ಒಂದು ಮಧ್ಯಾಹ್ನ ಪಂಚಾಯತ್ ಕಾರ್ಯದರ್ಶಿಯಿಂದ ಫೋನ್ ಕರೆ ಬಂತು.

‘ಪದ್ಮನಾಭಣ್ಣ, ನೀವು ಅರ್ಜಿ ಹಾಕಿದ್ದೀರಲ್ಲ. ಅದಕ್ಕೆ ಅಬ್ಚೆಕ್ಷನ್ ಉಂಟು. ಅದನ್ನು ಒಂದು ಕ್ಲಿಯರ್ ಮಾಡಿ. ಆಮೇಲೆ ಸವಲತ್ತು ಸಿಗುತ್ತದೆ’ ಅಂದ.

ಪದ್ದು ಅವಕ್ಕಾದ. ಹಂದಿ ಶೆಡ್ ಮಾಡುತ್ತೇನೆ ಎಂದದ್ದಕ್ಕೆ ಮಾವ ದೋಗಣ್ಣ ಆಕಾಶ - ಭೂಮಿ ಒಂದು ಮಾಡಿದ್ದ. ‘ನಿನಗೆ ದೈವದ ಜಾಗ ಕೊಟ್ಟದ್ದು ನನ್ನ ನಂತರ ಹೂ ನೀರು ಇಡುವುದಕ್ಕೆ. ಅಲ್ಲಿ ವಾಸನೆ ಬರುವ ಹಾಗೆ ಮಾಡಿ ಭೂತದ ಕೋಪಕ್ಕೆ ಕಾರಣ ಆಗುತ್ತಿಯಾ? ಪಂಜಿ ಸಾಕುವುದು, ಮಾರುವುದು, ತಿನ್ನುವುದು ನಮಗೆ ವಿರುದ್ಧ. ನಿನ್ನ ಅಲೋಚನೆ ಎಲ್ಲಾ ಪೆದಂಬೇ ಸಾಗುವುದು. ಸರಿ ಸಾಗುವುದಿಲ್ಲ' ಎಂದೆಲ್ಲಾ ಬೈಯ್ದಾಡಿದ್ದ.

‘ನಾನು ಸಾಕುವುದು ಕಾಡು ಪಂಜಿ ಅಲ್ಲ. ಪೀಪಂಜಿ’ ಎಂದು ಪದ್ದು ಉತ್ತರಿಸಿದ್ದ.

ಮಾವ ಪಂಚಾಯತ್‌ಗೆ ಹೋಗಿ ತಕರಾರು ಮಾಡಿರಲಿಕ್ಕಿಲ್ಲ.

‘ತಕರಾರು ಮಾಡಿದ್ದು ಯಾರು?’ ಪದ್ದು ಪ್ರಶ್ನಿಸಿದ.

‘ಅದು ನಿಮ್ಮ ಮಾವನ ಮಗ ಶ್ರೀಧರ, ಮುಂಬೈಯಿಂದ ಫೋನ್ ಮಾಡಿ ಅಬ್ಚೆಕ್ಷನ್ ಇದೆ, ಊರಿಗೆ ಬಂದು ಬರೆದು ಕೊಡುತ್ತೇನೆ. ಎನ್ ಓ ಸಿ ಕೊಡಬೇಡಿ ಅಂತ ಹೇಳಿದ್ದಾರೆ. ಅವರಲ್ಲಿ ಒಂದು ಮಾತಾಡಿ. ಅವರು ಓ.ಕೆ. ಅದರೆ ಆಯ್ತು’ ಕಾರ್ಯದರ್ಶಿ ತಣ್ಣಗೆ ಹೇಳಿದ.

ಇದು ಮಾವನ ಕಿತಾಪತಿ. ತನ್ನಿಂದ ಆಗುವುದಿಲ್ಲ ಅಂತ ಮಗನಿಗೆ ಫೋನ್ ಮಾಡಿದ್ದಾರೆ. ಪದ್ದುವಿಗೆ ತಕ್ಷಣ ಹೊಳೆಯಿತು.

ಪದ್ದು ಕುಮ್ಕಿ ಸಂದಿನ ತನ್ನ ವರ್ಗದ ಜಾಗದಲ್ಲಿ ಶೆಡ್ ಮಾಡಲು ಜಾಗ ಸಮತಟ್ಟು ಮಾಡಿದ. ಕುಮ್ಕಿ ಜಾಗದಲ್ಲಿ ದೊಡ್ಡ ಹೊಂಡ ತೆಗೆಸಿದ.

ಇದನ್ನು ನೋಡಿ ದೋಗಣ್ಣ ಕೈಕೈ ಹಿಸುಕಿಕೊಳ್ಳುತ್ತಿದ್ದ.

ಒಂದು ಸಂಜೆ ಅಂಬಾಸಿಡರ್ ಕಾರೊಂದು ಮಂಜೊಟ್ಟಿ ಗುತ್ತಿನ ಅಂಗಳಕ್ಕೆ ಬಂದು ನಿಂತಿತು. ಅದರಿಂದ ಶ್ರೀಧರ ಇಳಿದ. ಯಾವುದೋ ಕೆಲಸಕ್ಕೆ ಅವ ಬಾಡಿಗೆ ಕಾರು ಮಾಡಿಕೊಂಡು ಊರಿಗೆ ಬಂದಿದ್ದ.

ಮರು ದಿನ ಬೆಳಿಗ್ಗೆ ಗುಳಿಗ ಜೋರದಿಂದ ಇಳಿದ ರಸ್ತೆಯ ಆಯಕಟ್ಟಿನ ಸ್ಥಳದಲ್ಲಿ ಜೆಸಿಬಿ ಆರ್ಭಟಿಸಿತು.

ಶ್ರೀಧರ ಇನ್ನೂ ನಿದ್ದೆಯಲ್ಲಿದ್ದ.

ದೋಗಣ್ಣ ಎದ್ದು ಬಂದಾಗ ಗುಳಿಗ ಜೋರದ ರಸ್ತೆಯ ನಡುವೆ ಜೆಸಿಬಿ ದೊಡ್ಡ ಕಣಿಯನ್ನೇ ತೋಡಿಹಾಕಿ ಗುಡ್ಡ ಏರಿ ಮರೆಯಾಯಿತು. ಪದ್ದು ನೇರ ಮನೆಗೆ ಬಂದ.

‘ಏಯ್, ಕಣ್ಣ್ ಪುಡಾದ್ಂಡಬೆ. ಶ್ರೀಧರನ ಕಾರು ಹೋಗುವುದು ಹೇಗೆ?’ ದೋಗಣ್ಣ ಪದ್ದುವನ್ನು ತಡೆದು ನಿಲ್ಲಿಸಿ ಕೇಳಿದ.

‘ನನ್ನ ಜಾಗ. ನಾನು ಏನು ಬೇಕಾದರೂ ಮಾಡುತ್ತೇನೆ. ಅವ ಆಕಾಶದಲ್ಲಿ ಕಾರು ಕೊಂಡು ಹೋಗಲಿ’ ಎನ್ನುತ್ತಾ ಪದ್ದು ಬೈಕ್ ಏರಿ ತನ್ನ ತೋಟದ ನಡುವಿನ ಕಾಲು ದಾರಿಯಲ್ಲಿ ಹೊರಟು ಹೋದ.

ಮಧ್ಯಾಹ್ನದ ಹೊತ್ತಿಗೆ ಪೊಲೀಸ್ ಠಾಣೆಯಿಂದ ಪದ್ದುವಿಗೆ ಫೋನ್ ಬಂತು.

‘ನೋಡಿ, ಕಾನೂನು ನನಗೂ ಸ್ವಲ್ಪ ಗೊತ್ತಿದೆ. ನನ್ನ ಹೆಸರಿನ ಸ್ವಂತ ಜಾಗ. ಅದರಲ್ಲಿ ನಾನು ಏನು ಬೇಕಾದರೂ ಮಾಡುತ್ತೇನೆ. ಅಷ್ಟಕ್ಕೂ ಇದು ಸಿವಿಲ್ ಮ್ಯಾಟರ್ರು. ನೀವು ಬಂದು ಏನೂ ಮಾಡುವ ಹಾಗೆ ಇಲ್ಲ’ ಎಂದು ಫೋನ್‌ನಲ್ಲಿ ಬಂದ ಆವಾಜ್‌ಗೆ ಪದ್ದು ಪ್ರತಿ ಆವಾಜ್ ಹಾಕಿದ.

ತುಸು ಹೊತ್ತಿನ ನಂತರ ಪಂಚಾಯತ್ ಕಾರ್ಯದರ್ಶಿ ಕರೆ ಮಾಡಿ. ‘ನಿಮ್ಮ ಹಂದಿ ಶೆಡ್‌ನ ತಕರಾರು ಹಿಂತೆಗೆದುಕೊಂಡಿದ್ದಾರೆ. ಅದು ಒಂದು ರಸ್ತೆ ಸರಿ ಮಾಡಿ ಬಿಡಿ ಪದ್ದಣ್ಣ. ನಿಮ್ಮ ಮಾವನ ಮಗ ಫೋನ್ ಮಾಡಿದ್ದಾರೆ’ ಎಂದ.

‘ಹೌದಾ... ಸರಿ ದಾರಿಗೆ ಬರಬೇಕಾದರೆ ಪೆದಂಬು ಗೊಬ್ಬು ಬೇಕೇ ಬೇಕು. ಅವನಿಗೆ ಜೆಸಿಬಿಯವನ ನಂಬರ್ ಕೊಡಿ. ಬೇಕಾದರೆ ಅದನ್ನು ಅವನೇ ಸರಿ ಮಾಡಿಸಿ ಕಾರು ತೆಗೆದುಕೊಂಡು ಹೋಗಲಿ. ನನಗೆ ಪುರ‍್ಸೊತ್ತು ಇಲ್ಲ’ ಪದ್ದು ಫೋನ್ ಸ್ವಿಚ್‌ಆಫ್ ಮಾಡಿದ.

‘ಮರು ದಿನ ಬೆಳಿಗ್ಗೆ ಮತ್ತೆ ಜೆಸಿಬಿ ಆರ್ಭಟಿಸಿತು. ದಾರಿಯ ಕಣಿ ಸಮತಟ್ಟು ಆಯಿತು. ಶ್ರೀಧರನ ಕಾರು ಸಾಗಿ ಹೋಯಿತು.

ಬಪ್ಪುವಿನಿಂದ ಪದ್ದುವಿನ ಹಂದಿ ಸಾಕಣೆ ಯಶಸ್ವಿಯಾಯಿತು.

ವಾಸನೆ ಎಂದರೆ ಏನೆಂದೇ ಅರಿಯದ ಬಪ್ಪುವಿಗೆ ಡ್ರೈವಿಂಗ್ ಕಲಿಸಿ ಮೂರು ಚಕ್ರದ ಸೆಕೆಂಡ್ ಹ್ಯಾಂಡ್ ರಿಕ್ಷಾ ಟೆಂಪೋ ತೆಗೆಸಿಕೊಟ್ಟ.

ಬಪ್ಪು ಪೇಟೆಯ ಅಂಗಡಿ, ಹೊಟೇಲು, ಕ್ಯಾಟರಿಂಗ್, ಮದುವೆ ಮಂಟಪ, ಹಾಸ್ಟೆಲ್ ತ್ಯಾಜ್ಯ ಎಲ್ಲವನ್ನು ತಂದು ಹಂದಿಯ ಮುಂದೆ ಸುರಿದ.

ಹಂದಿ ತ್ಯಾಜ್ಯದ ಸ್ಲರಿ ತೆಂಗು ಕಂಗಿನ ಬುಡಕ್ಕೆ ಹರಿದು ಹೋಗುವಂತೆ ಮಾಡಿದ. ಗಿಡಗಳು ದಷ್ಟಪುಷ್ಟವಾಗಿ ಫಲ ನೀಡತೊಡಗಿತು.

ಅಬುಟ ಹಂದಿಗೆ ಬೇಕಾದ ಮಾರುಕಟ್ಟೆ ಒದಗಿಸಿಕೊಟ್ಟ. ಹಂದಿ ಗೂಡಿನ ಬಳಿಗೆ ಹೋದರೆ ವಾಂತಿ ಮಾಡಿಕೊಳ್ಳುತ್ತಿದ್ದ ಪದ್ದು ಆ ಕಡೆ ತಲೆ ಹಾಕದೆ ತನ್ನ ಮುಂಬೈ- ಊರಿನ ವ್ಯವಹಾರದಲ್ಲಿ ತೊಡಗಿಕೊಂಡ.

ಮಂಜೊಟ್ಟಿ ಗುತ್ತಿನ ಮನೆಯಲ್ಲಿ ಶ್ರೀಧರ ಹಕ್ಕು ಸ್ಥಾಪಿಸುವ ಸುಳಿವು ಆತನ ಮಾತಿನ ಮೂಲಕ ದೊರೆತ ಪದ್ದು ತನ್ನ ತೋಟದಲ್ಲಿ ಮನೆಗೆಂದು ಕಾದಿರಿಸಿದ ಜಾಗದಲ್ಲಿ ಮನೆ ಕಟ್ಟತೊಡಗಿದ.

ಈ ನಡುವೆ ಕೊರೊನಾ ಮಾರಿ ವಕ್ಕರಿಸಿತು.

ವ್ಯಾಪಾರ, ವಹಿವಾಟು, ಜನಜೀವನ ಎಲ್ಲವೂ ಇದ್ದಕ್ಕಿದ್ದಂತೆ ಇದ್ದಲ್ಲೇ ಸ್ಥಗಿತ.

ಅದು ಹೇಗೋ ಅಬುಟನ ಸಹಾಯದಿಂದ ಪದ್ದು ಹಂದಿಗಳನ್ನು ಕಡಿಮೆ ರೇಟಿಗೆ ಸಾಗಿಸಿ ಕೈತೊಳೆದುಕೊಂಡ. ಹಂದಿ ಶೆಡ್ ಖಾಲಿಯಾಯಿತು.

‘ಯಾರಿಗೆಲ್ಲಾ ವಾಸನೆ ಸತ್ತು ಹೋಗಿದೆಯೋ ಅವರು ಟೆಸ್ಟ್ ಮಾಡಿಸಿಕೊಳ್ಳಿ. ವಾಸನೆ ಬಾರದೇ ಇರುವುದು ಕೊರೊನಾದ ಒಂದು ಅಪಾಯಕಾರಿ ಲಕ್ಷಣ. ಅಂತವರು ಸುಲಭವಾಗಿ ಸಾವಿಗೆ ತುತ್ತಾಗಬಹುದು’ ಕೊರೊನಾ ಮುನ್ನೆಚ್ಚರಿಕೆ ಬಪ್ಪುವಿಗೆ ಭೀತಿಯನ್ನುಂಟು ಮಾಡಿತು. ಆತ ಪದ್ದುವಿನಲ್ಲಿ ವಾಸನೆಯೇ ಬರದಿರುವ ತನ್ನ ಗೋಳು ತೋಡಿಕೊಂಡ.

‘ಆಸ್ಪತ್ರೆಗೆ ಈಗ ಹೋದರೆ ಹೆಣ ಕೂಡಾ ಸಿಗಲಿಕ್ಕಿಲ್ಲ. ಈಗ ಬೇಡ. ಕೊರೊನಾ ಕಡಿಮೆಯಾದರೆ ಟೆಸ್ಟ್ ಮಾಡಿಸುವ’ ಎಂದ ಪದ್ದು.

ಕೊರೊನಾ ಭೀತಿ ಕಳೆದು ಜಗತ್ತು ಮತ್ತೆ ಸುಸ್ಥಿತಿಗೆ ಬಂತು.

ಬಪ್ಪುವನ್ನು ಪದ್ದು ಗಂಟಲು, ಮೂಗು ತಜ್ಞರ ಬಳಿಗೆ ಕರೆದುಕೊಂಡು ಹೋದ.

‘ಸಣ್ಣ ಅಪರೇಶನ್ ಮಾಡಬೇಕು. ಆಗ ಸರಿಯಾಗುತ್ತದೆ’ ಎಂದರು ವೈದ್ಯರು.

‘ಆಗಲಿ ಮಾಡಿಸುವ’ ಎಂದ ಪದ್ದು.

ಬಪ್ಪು ಅಪರೇಶನ್ ಮುಗಿಸಿ ಮತ್ತೆ ಮಂಜೊಟ್ಟಿ ಗುತ್ತಿಗೆ ಮರಳಿದ.

‘ನಾಲ್ಕು ಪಂಜಿ ಕುರ್ಲೆ ಇದೆ ತೆಕೊಂಡು ಹೋಗಿ ಸಾಕು’ ಎಂದ ಅಬುಟ.

ಬಪ್ಪು ಅಬುಟನ ಹಂದಿ ಶೆಡ್‌ನ ಬಳಿಗೆ ನಡೆದು ಹಂದಿಮರಿಗಳನ್ನು ಎತ್ತಿಕೊಂಡ. ವಾಸನೆ ಮೂಗಿಗೆ ಬಡಿಯಿತು. ಬೆಳಿಗ್ಗೆ ತಿಂದದ್ದೆಲ್ಲಾ ವಾಂತಿಯಾಯಿತು.

ಹಂದಿ ಮರಿಗಳನ್ನು ಶೆಡ್‌ಗೆ ತಂದ ಬಪ್ಪುವಿಗೆ ಆನಂತರ ಹಂದಿ ಗೂಡಿನ ಬಳಿಗೆ ಹೋದರೆ ವಾಂತಿಯಾಗತೊಡಗಿತು. ಭಯಂಕರ ವಾಸನೆ ಮೂಗಿಗೆ ಬಡಿಯತೊಡಗಿತು. ಆತ ಕಂಗಾಲಾದ.

ಪದ್ದು ಹಂದಿ ಮರಿಗಳನ್ನು ಮತ್ತೆ ಅಬುಟನ ಬಳಿಗೆ ಸಾಗಿಸಿದ.

‘ಕೆಲವು ವರ್ಷ ಹಂದಿ ಸಾಕಿದ್ದರಿಂದ ತುಂಬಾ ಲಾಭವಾಯಿತು. ಇನ್ನು ಬೇಡ ಅಬುಟಾಮು. ಸಾಧ್ಯವಿಲ್ಲ’ ಎಂದು ಪದ್ದು ಅಬುಟನಿಗೆ ಕೈಮುಗಿದ.

 

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ