‘ನೀವು ಆಟ ಬರೆಸಿದ್ದೀರಲ್ಲಾ? ಸೂತಕ ಬಂದವರು ಬಿಟ್ಟ ಆಟ ಒಂದು ಇದೆ. ಬೇಕಾದರೆ ಆದಷ್ಟು ಬೇಗ ಹೇಳಿ. ಹೇಗೋ ಮಂಗಳ ಕಾರ್ಯ ಆಗುತ್ತದಲ್ಲವಾ?’
ದೋಗಣ್ಣನಿಗೆ ಆಟದ ಕೊರಗಣ್ಣ ಹೇಳಿ ಕಳುಹಿಸಿದ್ದರು.
‘ಬೇಸಗೆಯ ಕೊನೆ ದಿನಗಳು. ಪತ್ತನಾಜೆಗೆ ನಾಲ್ಕು ದಿನ ಬಾಕಿ. ಮಳೆ ಬಂದರೆ ಎಲ್ಲಾ ನೀರಾಗುತ್ತದೆ.
ಆದರೆ ಒಂದು ಬಾರಿ ಮಳೆ ಬಿದ್ದು ಹೋಗಿದೆಯಲ್ಲಾ. ಹದಿನೈದು ದಿನ ಮಳೆ ಲಕ್ಷಣ ಇಲ್ಲ. ಆಟ ಸಿಗಬೇಕಾದರೆ ವರ್ಷಗಟ್ಟಲೆ ಕಾಯಬೇಕು. ಅಂತದ್ದರಲ್ಲಿ ಮದುವೆಯ ಮರು ದಿನ ಆಟ. ಒಳ್ಳೆಯ ಲಕ್ಷಣ. ಇರಲಿ.
ಟೆಂಟ್ ಮೇಳ ಎಲ್ಲಾ ಒಳಗಾಗಿದೆ. ಹಾಗಿರುವಾಗ ಅರುವ, ಕೋಳ್ಯೂರು, ಉಪಾಧ್ಯಾಯ, ಅಳಿಕೆ ಬರುವುದು ಗ್ಯಾರಂಟಿ, ಆಟ ರೈಸುತ್ತದೆ. ಇವರಿಗೆಲ್ಲ ಪುರಾಣ ಆಟದಲ್ಲಿ ಒಳ್ಳೆ ಕೆಲಸ,
ದೇವಿಮಹಾತ್ಮೆಯಲ್ಲಿ ಇವರಿಗೆಂತ ಏಸ? ಅವರೆಲ್ಲಾ ಯಾವ ಏಸ ಕೊಟ್ರೂ ರೈಸ್ತಾರೆ. ಇರಲಿ ದೇವಿಮಹಾತ್ಮೆಯೇ ಮಾಡಿಸುವ’ ಎಂದರು ದೋಗಣ್ಣ.
ಮದುವೆಯ ಮರು ದಿನ ಆಟ ನಿಘಂಟು ಆಗಿತ್ತು.
ಮಂಜೊಟ್ಟಿ ಗುತ್ತಿನಲ್ಲಿ ಆಟದ ಸಂಭ್ರಮ. ಬಾಕಿಮಾರು ಗದ್ದೆಗೆ ಮದುಮಗನ ಕಳೆ ಬಂದಿತು.
ಸುರತ್ಕಲ್ ಗೆ ಬಂದ ಆಟದ ಲಾರಿ ಕರೆತರಲು ರಘು ಹೋಗಿದ್ದ. ಪದವಿನಿಂದ ಗುಳಿಗಜೋರದ ಮೂಲಕ ಪದ್ದು ಮಾಡಿಸಿದ ಮಣ್ಣಿನ ರಸ್ತೆಯಲ್ಲಿ ಮೇಳದ ಲಾರಿ ಬಂತು. ಬಲಿಪರು ಎಲೆ ಅಡಿಕೆ ಮೆಲ್ಲುತ್ತಾ ಇಳಿದು ಗದ್ದೆಯ ಮೂಲೆಗೆ ಹೋಗಿ ಪಿಚಕಾರಿ ಮಾಡಿದರು.
ದೇವರಿಗೆ ದೈವದ ಚಾವಡಿ, ವೇಷದವರಿಗೆ ಅಲ್ಲಲ್ಲಿ ವ್ಯವಸ್ಥೆ ಏರ್ಪಾಡಾಯಿತು.
ಬಸಳೆ ಪುಂಡಿ, ಚಾ ಸೇವಿಸಿದ ಏಸದವರು ಸೆಖೆಗೆ ಮರದಡಿಯೆ ಒಳ್ಳೆಯದು ಎಂದು ಪಳ್ಳಿ ಗದ್ದೆಯ ಕಾಲುಭಾಗಕ್ಕೆ ಹರಡಿದ್ದ ಗೋಳಿಮರದ ಅಡಿಯ ದಟ್ಟ ನೆರಳಿನಲ್ಲಿ ಚಾಪೆ ಬಿಡಿಸಿದರು.
ಬಾಕಿಮಾರು ಗದ್ದೆಯಲ್ಲಿ ರಂಗಸ್ಥಳ ಎದ್ದು ನಿಂತಿತು. .
ಪದ್ದುವಿನ ಮದುವೆಗೆ ಬಾರದ ಶ್ರೀಧರ ಆಟದ ದಿನ ವಿಮಾನದಲ್ಲಿ ಬಜಪೆಗೆ ಬಂದಿಳಿದ. ರಿಕ್ಷಾದಲ್ಲಿ ಮನೆಯ ಅಂಗಳಕ್ಕೇ ಬಂದ 'ರೋಡ್ ಬೇರೆ ಆಗಿದೆ. ಇನ್ನು ಮಂಜೊಟ್ಟಿಗುತ್ತಿನ ಜಮೀನಿಗೆ ಒಳ್ಳೆ ರೇಟ್ ಸಿಗಬಹುದು' ಎಂದು ಮನದಲ್ಲೇ ಯೋಚಿಸಿದ.
‘ಬೇರದ ಗರ್ದಿ ಮದುವೆಗೆ ಬರುದಕ್ಕೆ ಆಗಿಲ್ಲ. ಪೊಪ್ಪ ಹೇಳಿದ ಹರಕೆ ಸೇವೆ ಒಂದು ನೋಡಬೇಕಲ್ಲಾ’ ಮದುವೆಗೆ ಯಾಕೆ ಬರಲಿಲ್ಲ ಎಂದು ಕೇಳಿದವರಲ್ಲಿ ಹೇಳಿದ.
ತಾಲೀಮು ಬೆಂಕಿ, ತಲವಾರು, ಕೋಲು ಆಟ, ಬ್ಯಾಂಡು ಗರ್ನಾಲು ಮೆರವಣಿಗೆಯೊಂದಿಗೆ ಮುಸ್ಸಂಜೆ ಹೊತ್ತು ಬೆಳ್ಳಿಯ ತೊಟ್ಟಿಲು ಬಂದಿತು.
ಹೋಳಿಗೆ, ಪಾಯಸದ ಭೂರಿಭೋಜನ ಮೊದಲಾಯಿತು. ಕೇಳಿ, ನಿತ್ಯವೇಷ, ಅಬ್ಬರ ತಾಳ ಆರಂಭವಾಯಿತು.
ನೆಲದಲ್ಲಿ ಕುಳಿತು ಆಟ ನೋಡುವ ಸಂಪ್ರದಾಯ ಮಾಯವಾಗುತ್ತಾ ಅದಾಗಲೇ ರಂಗಸ್ಥಳದ ಎದುರು ಆಸನ ವ್ಯವಸ್ಥೆ ಆರಂಭವಾಗಿತ್ತು. ಶಂಭು ಶಂಕರ, ವನಜ, ಯಶೋಧ, ಪದ್ದು, ಸುಜ್ಜಾ ಎದುರು ಸಾಲಿನಲ್ಲಿ ಹಾಕಿದ ಕುರ್ಚಿಯಲ್ಲಿ ಕುಳಿತರು. ಅವರ ಜತೆಗೆ ವಾಸು. ರಘು, ಬಾಚು ಬಂದು ಸೇರಿಕೊಂಡರು.
ಬಲಿಪರು ಜಾಗಂಟೆಯನ್ನು ಕಿವಿಗೆ ಒತ್ತಿ ಕಂಚಿನ ಕಂಟದಲ್ಲಿ 'ಅಂಬುರುಗದಳ ನೇತ್ರೆ' ಹಾಡಿದರು. ನಿಡ್ಲೆಯವರು ಚೆಂಡೆ ಹೆಗಲಿಗೆ ಹಾಕಿ ಸಭೆಗೆ ವಂದಿಸಿ ನಿಂತು ಕೋಲು ಉರುಳಿಸಿದರು.
ಅರುವ, ಪೆರುವರ ಬ್ರಹ್ಮ, ವಿಷ್ಣು ವೇಷ, ಮಹೇಶ್ವರ, ತಲೆಭಾಗದಲ್ಲಿ ಬಣ್ಣ ಬಣ್ಣದ ತಿರುಗುವ ಪ್ರಭಾವಳಿಯ ದೇವಿಯ ದೃಶ್ಯ ರಂಗಸ್ಥಳದಲ್ಲಿ ಕಾಣಿಸಿಕೊಂಡಿತು.
‘ಅಗೊಳ ವನಜ, ಯಶೋಧ, ಸುಜ್ಜಾ... ಬಂದದ್ದು...’ ಎಂದು ಹೆಳೆಯ ನೆನಪಿನ ಬುತ್ತಿಗೆ ಕೈ ಹಾಕಿದ ವಾಸು.
‘ಅದು ಹಿಂಭಾಗದಲ್ಲಿ ದೇವಿ ನೀನಲ್ವಾ...?’ ಪದ್ದು ನೆಗಾಡಿದ.
ಆಟ ನೋಡುತ್ತಿದ್ದಂತೆ ಎದುರು ಕುಳಿತ ಈ ಗುಂಪಿನ ನೆನಪು ಹಿಂದೆ ಹಾರಿತು...
ಹೌದು...
ಬಿರು ಬೇಸಿಗೆ.
ದೋಗಣ್ಣ ರಣ ಬಿಸಿಲಿಗೆ ಬೈಲು, ಮಜಲಿನ ಕರೆಮೆದಿ ಕಡಿದು ಬಾಕಿಮಾರು ಗದ್ದೆಗೆ ಕಬೆಕೋಲಿನಲ್ಲಿ ತಂದು ರಾಶಿ ಹಾಕುತ್ತಿದ್ದ.
ಇದನ್ನು ನೋಡಿದ ಪದ್ದು ವಾಸುವಿಗೆ ಸುದ್ದಿ ಮುಟ್ಟಿಸಿದ.
ಕರೆಮೆದಿ ಕಡಿಯುವ ದಿವಸ ಮಂಜೊಟ್ಟಿ ಗುತ್ತಿನಲ್ಲಿ ಮಕ್ಕಳ ಆಟಕ್ಕೆ ದಿನ ಮುಹೂರ್ತ ಫಿಕ್ಸ್ ಆಗುತ್ತಿತ್ತು.
ಮಕ್ಕಳ ಮೊದಲ ಕೆಲಸ ಎಂದರೆ ಹತ್ತಿರದಲ್ಲಿ ಎಲ್ಲಿಯಾದರೂ ಆಟ ಆಗುತ್ತಿದ್ದರೆ ಅಲ್ಲಿಗೆ ಹೋಗುವುದು. ಅದರಂತೆ ರಘು, ವಾಸು, ಬಾಚು, ಪದ್ದು ಸುರತ್ಕಲ್‌ನಲ್ಲಿ ನಡೆದ ಭಾರ್ಗವ ವಿಜಯ ಆಟಕ್ಕೆ ಹಾಜರಾಗಿದ್ದರು. ಮೆಲ್ಲಗೆ ರಂಗಸ್ಥಳದ ಹಿಂದೆ ಸುಳಿದಾಡುತ್ತಾ ಧೂಪದ ಮರಾಯಿಯಿಂದ ಹಿಡಿ ಹಿಡಿಯಾಗಿ ಧೂಪದ ಹುಡಿ ತೆಗೆದು ಕಿಸಗೆ ತುಂಬಿಸಿ ಜಾಗ ಖಾಲಿ ಮಾಡಿದ್ದರು. ಮನೆಗೆ ಬಂದು ತೆಂಗಿನ ಗೆರಟೆಗಳಲ್ಲಿ ಹಾಕಿ ಮಾಡಿನ ಎಡೆಯಲ್ಲಿ ಅಡಗಿಸಿಟ್ಟರು.
ಆಟವನ್ನು ಬೆಳಗ್ಗಿನವರೆಗೆ ಚೂರೂ ಬಿಡದೆ ನೋಡಿ ಪದ್ಯ, ಸಂಭಾಷಣೆ ಬಾಯಿಪಾಠ ಮಾಡುತ್ತಾ ಮರು ದಿನ ಹೇಳಲು ಯತ್ನಿಸುತ್ತಿದ್ದ ವಾಸು ಭಾಗವತ ಮತ್ತು ಮಹಿಷಾಸುರ.
ಅವನೇ ಎಲ್ಲರಿಗೂ ಪಾತ್ರ ಹಂಚುತ್ತಿದ್ದ. ಅದಕ್ಕೆ ಬೇಕಾದ ಉಡುಪು, ಆಯುಧ, ವೇಷ ಎಲ್ಲಾ ಅವರವರೇ ತಯಾರು ಮಾಡಬೇಕು.
ಬ್ರಹ್ಮ, ವಿಷ್ಣು, ಮಹೇಶ್ವರ ಹೆಣ್ಣು ಮಕ್ಕಳಿಗೆ. ದೋಗಣ್ಣನ ಎರಡು ಹೆಣ್ಣು ಮಕ್ಕಳಾದ ವನಜ, ಯಶೋಧ ಬ್ರಹ್ಮ ಮತ್ತು ವಿಷ್ಣು, ಎಲ್ಲರಿಗಿಂತ ಕಿರಿಯವಳಾದ ಸುಜ್ಜಾ ಈಶ್ವರ. ಹಿಂಭಾಗದಲ್ಲಿ ಪದ ಹೇಳುವ ವಾಸು ಎದ್ದು ನಿಂತು ದೇವಿ ಆಗಿ ಸುಧಾರಿಸುತ್ತಿದ್ದ. ರಘು, ಬಾಚು, ಮಧು ಕೈಟಪ.
ಇಬ್ಬರು ಹೆಣ್ಣು ಮಕ್ಕಳು ದಿತಿ ಮತ್ತು ಮಾಲಿನಿ. ಚೆಂಡೆ ಎಂಬ ಡಬ್ಬಿ ಪುರ್‍ಸೊತ್ತು ಇದ್ದವರು ಬಾರಿಸಬೇಕು.
ಶಾಪ ಕೊಡುವ ಋಷಿ ಬಂದು ಚೆನ್ನಾಗಿ ಕುಣಿದು ರಂಗಸ್ಥಳ ಇಡಿಪೊಡಿ ಮಾಡುವುದರಿಂದ ಆ ಪಾತ್ರ ನನಗೆ ಎಂದು ಪದ್ದುವಿನ ಹಠ. ಜತೆಗೆ ಕೊತ್ತಲಿಂಗೆಯನ್ನು ಚೆನ್ನಾಗಿ ಸವರಿ ತುದಿಯಲ್ಲಿ ತೂತು ಮಾಡಿ ಅದಕ್ಕೆ ಇನ್ನೊಂದು ತುಂಡು ಸಿಕ್ಕಿಸಿ ಕೊಡಲಿಯ ರೂಪಕ್ಕೆ ತಯಾರು ಮಾಡುತ್ತಿದ್ದ ಆತ ತನಗೆ ಪರಶುರಾಮ ವೇಷವೇ ಬೇಕು ಎಂಬ ಆಗ್ರಹಿಸುತ್ತಿದ್ದ. ವೇಷ ಪ್ರವೇಶಕ್ಕೆ ಗತ್ತು ತೋರಿಸಲು ಶಂಕರ, ಶಂಭು ಆ ಕೊಡಲಿಯನ್ನು ಎಷ್ಟು ಗೋಗರೆದು ಕೇಳಿದರೂ ಕೊಡದೆ ಜಂಬ ಪ್ರದರ್ಶಿಸುತ್ತಿದ್ದ.
‘ಪರಶುರಾಮ ದೇವಿಮಹಾತ್ಮೆಯಲ್ಲಿ ಬರುವುದಿಲ್ಲ ಮಾರಾಯ’ ಎಂದು ವಾಸು ಹೇಳಿದರೆ.
‘ಮತ್ತೆ ಅದು ಮಾಲಿನಿ ಬರುವಾಗ ಬರುವ ಋಷಿ ಪರಶುರಾಮ ಅಲ್ವಾ. ನಾನು ಕೊಡಲಿ ಹಿಡಿದೇ ಬರುತ್ತೇನೆ. ಮತ್ತೆ ನಾನು ಕೊಡಲಿ ಮಾಡಿದ್ದು ಯಾವ ಕರ್ಮಕ್ಕೆ’ ಎಂದ.
‘ಆಯ್ತು ಮಾರಾಯ. ನಿನ್ನ ಪೆದಂಬು ಯಾರು ಸುಧಾರಿಸುವುದು. ಹೇಗಾದರೂ ಬಾ. ಮಾಲಿನಿಗೆ ಶಾಪ ಕೊಟ್ಟರೆ ಸಾಕು’ ಎಂದು ವಾಸು ಒಪ್ಪಿದ.
ಆನಂತರ ಚೆನ್ನಾಗಿ ದಿಗಿಣ ಹಾಕಿ ಅಬತಾರ ಮಾಡುವ ಯಕ್ಷನ ಪಾತ್ರ, ಕೊನೆಗೆ ಕಾಳಿ ವೇಷವೂ ಕೊಡಲಿ ಝಳಪಿಸಲು ನನಗೇ ಬೇಕು ಎಂದು ಪದ್ದು ಒತ್ತಾಯಿಸಿ ತೆಗೆದುಕೊಂಡ. ಅವರೆಲ್ಲಾ ಕೊಡಲಿ ತರುವುದಕ್ಕೆ ಇಲ್ಲ ಎಂದರೂ ಕೇಳಲಿಲ್ಲ.
ಕಾಳಿ ಪಾತ್ರಕ್ಕೆ ಕಣ್ಣು ಹಾಕಿದ್ದ ಶಂಭುವಿಗೆ ನಿರಾಸೆಯಾಯಿತು.
ದೇವಿ ಪಾತ್ರ ಹಿರಿಯ ಹೆಣ್ಣು ಮಗಳು ವನಜಳಿಗೆ. ತೆಂಗಿನಮರದ ಕೊಂಬಿನಿಂದ ಮೈಸಾಸುರನ ಕೊಂಬು ತಯಾರಿಸಿ ಅದಕ್ಕೆ ಬೇಕಾದ ವೇಷ ಭೂಷಣ ಗೋಣಿಯಿಂದ ತಯಾರಿಸುತ್ತಿದ್ದ ವಾಸುವಿಗೆ ಮೈಸಾಸುರ ಖಾಯಂ. ಆಗ ಯುದ್ಧ ಆಗುವುದರಿಂದ ಭಾಗವತ ಬೇಡ ಎಂಬ ನಿರ್ಧಾರ.
ರಘು- ಬಾಚು ಶುಂಭಾನಿಶುಂಭ. ಶಂಕರ ರಕ್ತ ಬೀಜ, ಶಂಭುವಿಗೆ ಉಳಿದ ಚಿಲ್ಲರೆ ಪಾತ್ರ. ಮೈಸಾಸುರ ಬಲವನ್ನು ಪುರುಸೊತ್ತು ಇರುವ ಎಲ್ಲರೂ ಮಾಡಬೇಕು. ದೇವೇಂದ್ರ, ಬಲ ಹುಡುಗಿಯರಿಗೆ. ಪಾತ್ರ ಹಂಚಿಕೆ ಆಗಿ ಬಿಟ್ಟಿತು.
ದೋಗಣ್ಣ ಬಾಕಿಮಾರು ಗದ್ದೆಯಲ್ಲಿ ಹಾಕಿದ್ದ ಕರೆಮೆದಿ ಒಣಗಿ ಬೆಂಕಿ ಕೊಟ್ಟರೆ ಸುಡುವ ಹಂತಕ್ಕೆ ಬಂದಿತ್ತು. ಶನಿವಾರ, ಆದಿತ್ಯವಾರ ಪದವಿನ ಗಡಂಗ್ ಬಳಿ ಕೋಳಿಕಟ್ಟ. ಅಂದು ತೂಂಟಾನು ಕೊಡುವುದಿಲ್ಲ. ಸೋಮವಾರ ತಡವಾಗುತ್ತದೆ. ಶುಕ್ರವಾರವೇ ತೂಂಟಾನ್ ಇಡುವ ದಿನ ಎಂದು ನಿರ್ಧರಿಸಿ ಅಂದೇ ಸಂಜೆ ಮೂರುಗಂಟೆ ನಂತರ ಆಟ ಶುರು ಎಂದು ದಿನ ನಿಘಂಟು ಆಯಿತು.
ಶುಕ್ರವಾರ ಮದ್ಯಾಹ್ನ ಕಳೆಯುತ್ತಿದ್ದಂತೆ ವಾಸು ಮನೆಯ ಕೋಣಗಳನ್ನು ಮೇಯಿಸಲು ಎಂದು ಹೊಡೆದುಕೊಂಡು ಮಂಜೊಟ್ಟಿ ಗುತ್ತಿನ ಬಳಿಗೆ ಮಹಿಷಾಸುರ ವೇಷಭೂಷಣದೊಂದಿಗೆ ಬಂದ. ಗದ್ದೆ ಬದಿಯಲ್ಲಿ ಕೋಣಗಳನ್ನು ಬಿಟ್ಟು ಮಂಜೊಟ್ಟಿ ಗುತ್ತಿನ ಅಂಗಳಕ್ಕೆ ಹೊಂದಿಕೊಂಡು ಇದ್ದ ಹಟ್ಟಿಯ ಬಳಿ ಇಟ್ಟ ಪಡಿಮಂಚದಲ್ಲಿ ಬಂದು ಕುಳಿತ.
ಎಲ್ಲರೂ ಹಾಜರಾದರು. ಅಡುಗೆ ಮನೆ, ಹಟ್ಟಿ, ತೋಟ ಎಲ್ಲಾ ಕಡೆಯಿಂದ ವಿವಿಧ ಸೊತ್ತುಗಳು, ವಿಷ್ಣುವಿನ ಚಕ್ರ ಕೈಸಟ್ಟಿ, ದೊಡ್ಡ ಚಮಚ, ಕಡೆಗೋಲು, ಸಣ್ಣ ಉಜ್ಜೆರ್ ಇತ್ಯಾದಿ ಆಯುಧಗಳು, ಆಭರಣ, ಭೂಷಣಗಳು, ಮನೆಯ ಕೋಣೆಯೊಳಗಿನಿಂದ ಬೈರಾಸು. ಹೊದಿಕೆ, ಹಾಸು, ವೇಷ ಹಾಕಲು ಪಾಂಡ್ಸ್ ಪೌಡರ್, ಕಾಡಿಗೆ, ಕುಂಕುಮ, ಬೂದಿ, ಇದ್ದಿಲು ಎಲ್ಲವೂ ಆಟಕ್ಕೆಂದು ಬಂದವು. ಮೊದಲೇ ತಯಾರು ಮಾಡಿಟ್ಟ ಅಡಿಕೆ ಹಾಳೆಯ, ತ್ರಿಕೋನಾಕಾರದಲ್ಲಿ ಕತ್ತರಿಸಿದ ಲೇಖಕ್ ಪುಸ್ತಕದ ರಟ್ಟಿನ ಕಿರೀಟಕ್ಕೆ ಬಣ್ಣಕಾಗದ ಅಂಟಿಸಿ ನವಿಲು ಗರಿ ಕಟ್ಟಲಾಗಿತ್ತು. ಕೊತ್ತಲಿಂಗೆಯಿಂದ ಮಾಡಿದ ಬಿಲ್ಲು ಬಾಣ, ತ್ರಿಶೂಲ, ಖಡ್ಗ ತಯಾರಾಗಿತ್ತು.
ಸೀಮೆ ಎಣ್ಣೆಯ ಪಂಪಿಗೆ ಹಾಕಲು ತಂದ ಗ್ರೀಸ್ ನ ಖಾಲಿ ಡಬ್ಬ ಹಿಡಿದು ಶಂಭು ಚೆಂಡೆ ಬಾರಿಸತೊಡಗಿದ. ಮದ್ದಳೆ, ಚಕ್ರತಾಳ, ಶ್ರುತಿಯ ಗೊಡವೆ ಯಾರಿಗೂ ಇಲ್ಲ. ಎಲ್ಲರೂ ಬಂದು ಸುತ್ತ ಕುಳಿತರು.
ಒಣಗಲು ಹಾಕಿದ ಅರೆ ಚಂಡಿ ದೋಗಣ್ಣನ ಕಲಕಲದ ಬಣ್ಣದ ಲುಂಗಿಯನ್ನು ಬಾಚು, ರಘು ಅಡ್ಡ ಹಿಡಿದರು. ಬ್ರಹ್ಮ, ವಿಷ್ಣು, ಮಹೇಶ್ವರ. ಹಿಂಬದಿಯಲ್ಲಿ ಪಡಿ ಮಂಚದಲ್ಲಿ ನಿಂತ ವಾಸು. ಅದರ ಹಿಂದೆ ಕಟ್ಟಕುರುವೆಯನ್ನು ಪ್ರಭಾವಳಿಯಾಗಿ ಹಿಡಿದು ನಿಧಾನವಾಗಿ ತಿರುಗಿಸುವ ಪದ್ದು. ಆಟ ಶುರುವಾಯಿತು.
ಅವರವರದೇ ತಾಳ, ಅವರದೇ ಕುಣಿತ. ಸಂಭಾಷಣೆ. ವಾಸುವಿನ ಅರ್ಧಂಬರ್ಧ ಪದ. ಬೊಬ್ಬೆ.
ಮಧು ಕೈಟಭರ ಅಬ್ಬರದ ಪ್ರವೇಶ... ವಧೆ.
ಮಾಲಿನಿಯ ಎಂಟ್ರಿಯಾಗಿ ಆಕೆ ತಪಸ್ಸಿಗೆ ಕುಳಿತಳು.
ಪದ್ದು ಕೊಡಲಿ ಹಿಡಿದು ರೆಡಿಯಾದ..
‘ನೀನು ಸ್ವಲ್ಪ ಅಬ್ಬರ ಮಾಡು ಪದ್ದು. ನಾನು ಕೋಣಗಳು ಎಲ್ಲಿ ಮೇಯುತ್ತಿದೆ ಎಂದು ನೋಡಿ ಬರುತ್ತೇನೆ’ ಎಂದು ವಾಸು ಓಡಿದ.
ಪದ್ದು ಪ್ರವೇಶಿಸಿ ನಾನಾ ಭಂಗಿಯಲ್ಲಿ ಕುಣಿದಾಡತೊಡಗಿದ.
ಕೋಣಗಳನ್ನು ಸರಿದಾರಿಗೆ ತಂದ ವಾಸು ಅಂಗಳಕ್ಕೆ ಬಂದಾಗ ಪದ್ದು ಮಾಲಿನಿಯ ಕುತ್ತಿಗೆ ಹಿಡಿದಿದ್ದ. ‘ಈಗ ಕಡಿಯುತ್ತೇನೆ’ ಎಂದು ಒಂಟಿ ಕಾಲಿನಲ್ಲಿ ನಿಂತು ಕೊಡಲಿ ಝಳಪಿಸುತ್ತಿದ್ದ.
ವನಜ ‘ಹಾಗೆ ಇಲ್ಲ....ಪದ್ದು...ಈ ಆಟದಲ್ಲಿ ಹಾಗೆ ಇಲ್ಲ...’ ಎನ್ನುತ್ತಿದ್ದಳು.
ವಾಸು ಪದ್ದುವಿನ ಕೈಯಿಂದ ಕೊಡಲಿ ಕಸಿದುಕೊಂಡ ‘ನಿನ್ನ ಹೊಟ್ಟೆಯಲ್ಲಿ ಕೋಣ ಹುಟ್ಟಲಿ ಅಂತ ಶಾಪ ಕೊಡು ಮಾರಾಯ. ತಲೆ ಕಡಿಯವುದು ಭಾರ್ಗವ ವಿಜಯದಲ್ಲಿ’ ಎಂದು ಬೈದಾಡಿದ.
‘ದುಷ್ಟೆ ನಿನ್ನ ಹೊಟ್ಟೆಯಲ್ಲಿ ಕೋಣನೇ ಹುಟ್ಟಲಿ’ ಎಂದು ಪದ್ದು ನಡೆದ.
‘ಪದ್ದು... ಗಂಟೆ ನಾಲ್ಕಾಯಿತು. ಹಾಲು ಕೊಟ್ಟು ಬಾ...’ ದೇವಕಿ ಹಾಲಿನ ಕ್ಯಾನ್ ಹಿಡಿದು ಆಟ ನಡೆಯುವಲ್ಲಿಗೆ ಬಂದಳು.
‘ಇವತ್ತು ಹಾಲು ಕೊಂಡು ಹೋಗುವ ಕೆಲಸ ನನಗಲ್ಲ ಶಂಭುವಿಗೆ’ ಪದ್ದು ತಗಾದೆ ಎಬ್ಬಿಸಿದ.
ಮೊದಲೇ ಕಾಳಿ ವೇಷ ತಪ್ಪಿ ಹೋದ ಕೋಪದಲ್ಲಿ ಶಂಕರ ‘ನಾನು ನಿನ್ನೆ ಕೊಂಡು ಹೋಗಿದ್ದೇನೆ. ಇವತ್ತು ನಿನ್ನ ಸರದಿ. ಬೇಕಾದರೆ ಕೊಂಡು ಹೋಗು’ ಎಂದು ಕೊಸರಿಕೊಂಡು ಹೇಳಿದ.
‘ಆಟ ಬೇಡ. ನಿಲ್ಲಿಸುವ ವಾಸು’ ಎಂದು ಪದ್ದು ಕೋಪದಲ್ಲಿ ನುಡಿದ.
‘ನೀನು ಹಾಲು ಪದವಿಗೆ ಕೊಟ್ಟು ಬಾ ಅಲ್ಲಿಯವರೆಗೆ ಕುಕ್ಕುತಪ್ಪು, ಕಟ್ಟೇಸ, ಸ್ತ್ರೀವೇಶ, ಅರ್ಧನಾರಿ ವೇಶ ಮಾಡುವ’ ಎಂದ ವಾಸು.
ಪದ್ದು ಹಾಲಿನ ಕ್ಯಾನ್ ಹಿಡಿದು ಪದವಿನ ಕಡೆಗೆ ಓಡಿದ.
ಪದ್ದುವಿನಿಂದ ಹಾಲಿನ ಕ್ಯಾನ್ ಪಡೆದ ಕಾಮತ್ ಮಾಮ್ ಹಾಲನ್ನು ಪಾತ್ರೆಗೆ ಹಾಕಿದ. ಅದು ಮುಕ್ಕಾಲುಭಾಗದಲ್ಲಿ ತುಂಬಿಕೊಂಡಿತು. ಪದ್ದುವನ್ನು ಕೆಕ್ಕರಿಸಿ ನೋಡಿದ ಮಾಮ್. ‘ನೀನು ಯಾಕೆ ಜೀವ ಬಿಟ್ಟು ಓಡಿ ಬಂದದ್ದು ಮಾರಾಯ?. ಹಾಲೆಲ್ಲಾ ಚೆಲ್ಲಿ ಹೋಗಿದೆ. ನೋಡು ಅಂಗಿ, ಚೆಡ್ಡಿ, ಕಾಲಿನಲ್ಲಿ ಹಾಲು. ನಿಧಾನ ಬರುದಕ್ಕೆ ಆಗುವುದಿಲ್ವಾ. ಯಾವುದಕ್ಕೂ ದೋಗಣ್ಣ ಬರಲಿ... ದುಡ್ಡು ಭರ್ತಿ ಕೊಡುವುದಿಲ್ಲ’ ಎಂದ.
ಪದ್ದು ಅದರ ಕಡೆಗೆ ಗಮನವೇ ಕೊಡದೆ ಖಾಲಿ ಕ್ಯಾನ್ ಹಿಡಿದು ಮನೆಗೆ ಓಡಿದ.
ಪದ್ದು ಮರಳಿ ಬಂದಾಗ ಅರ್ಧನಾರೀಶ್ವರ ಕುಣಿಯುತ್ತಿತ್ತು.
‘ಇನ್ನು ಮೈಸಾಸುರ ಮಾಡುವ ಎಂದ’ ಪದ್ದು.
‘ಕತ್ತಲಾಗಿಲ್ಲ. ತೂಂಟಾನ್ ಇಡುವುದು ಕತ್ತಲು ಬಂದ ಮೇಲೆ ಈಗ ಶುಂಬಾನಿಶುಂಭ ಶುರುಮಾಡುವ’ ಎಂದ ವಾಸು.
ದೇವಕಿ ಬುಟ್ಟಿಯಲ್ಲಿ ಹುರುಳಿ ತಂದು ಪಡಿಮಂಚದ ಬಳಿ ಇಟ್ಟಳು. ‘ಆಟ ಮತ್ತೆ ಮಾಡು ಪದ್ದು ಮೊದಲು ಕುಟ್ಟಿ ಕೋಣಗಳಿಗೆ ಹಾಕು’ ಎಂದು ಆಜ್ಞಾಪಿಸಿದಳು.
ಪದ್ದುವಿಗೆ ಕಿರಿ ಕಿರಿ, 'ಎಲ್ಲದಕ್ಕೂ ನಾನೇ ಆಗಬೇಕಾ' ಎಂದ ಕೋಪದಿಂದ ಕೈಕಾಲು ಬಡಿದ. ಹುರುಳಿ ಕುಟ್ಟಿ ಹಾಕದೇ ಇದ್ದರೆ ಮತ್ತೆ ಮಾವ ಬೈಯ್ತಾರೆ. ಬೆತ್ತ ಕೈಗೆ ಬಂದರೂ ಬಂದೀತು ಎಂದು ಸುಜ್ಜಾಳನ್ನು ಕರೆದುಕೊಂಡು ಹುರುಳಿ ಗುರಿಕಲ್ಲಿಗೆ ಹಾಕಿ ಒನಕೆಯಿಂದ ಕುಟ್ಟತೊಡಗಿದ. ಸುಜ್ಜಾ ಕಲ್ಲಿನ ಬಳಿ ಕುಳಿತು ಹುರುಳಿಯನ್ನು ಗುರಿಕಲ್ಲಿಗೆ ಕೈಯಿಂದ ಸರಿಸತೊಡಗಿದಳು.
ಶುಂಭಾನಿಶುಂಭ, ಚಂಡ-ಮುಂಡ ಮುಗಿಯುವ ಹೊತ್ತಿಗೆ ಹುರುಳಿ ಹುಡಿಯಾಗಿತ್ತು. ಓಡುತ್ತಾ ಅದನ್ನು ಬೈಪನೆಯಲ್ಲಿ ಕೋಣಗಳ ಎದುರಿನ ಮರಾಯಿಗೆ ಸುರಿದು ಬಂದ.
ಶಂಕರನ ರಕ್ತ ಬೀಜ. ಅಕ್ಕಚ್ಚು ಸುರಿಯುವ ಎಲಿಮಿನಿಯಂ ಬಾಲ್ದಿಯನ್ನು ಕವಚಿ ಹಾಕಿ ಅದರ ಮೇಲೆ ಕುಳಿತ ವನಜ ರಕ್ತಬೀಜನಿಗೆ ಉತ್ತರಿಸುತ್ತಿದ್ದಳು.
ಶುಂಭಾನಿಶುಂಭರ ವಧೆ ಆದರೂ, ಸೂರ್ಯ ಕಾಣೆಯಾಗುತ್ತಿದ್ದರೂ ದೋಗಣ್ಣ ತುಂಟಾನಿಗೆ ಬೆಂಕಿ ಹಚ್ಚುವುದು ಕಾಣಿಸಲಿಲ್ಲ.
‘ಇವತ್ತು ಕೋರ್‍ಧಟ್ಟ ಇಲ್ಲ. ಇವರು ಎಲ್ಲಿ ಹೋದರು? ಛೇ ಇವತ್ತು ಬೆಂಕಿ ಕೊಡುವುದಿಲ್ಲವಾ ಏನಾ?’ ಎಂದು ಮಕ್ಕಳು ಮಾತನಾಡುತ್ತಿದ್ದಂತೆ. ಮುಂಡಾಸು ಕಟ್ಟಿಕೊಂಡು ಕತ್ತಿ, ಕಬೆಕೋಲು ಹಿಡಿದುಕೊಂಡು ದೋಗಣ್ಣ ತೂಂಟಾನ್ ಕಡೆ ನಡೆಯುವುದು ಕಂಡಿತು.
ವಾಸು ಮೈಸಾಸುರ ಕಿರೀಟ ತಲೆಗೆ ಕಟ್ಟಿದ. ಹೊದಿಕೆ, ಹಾಸು. ಬೈರಾಸು ಕುತ್ತಿಗೆಗೆ ಹಾಕಿ ಮುಂದಕ್ಕೆ ಇಳಿಸಿಕೊಂಡ.
ಪದ್ದು ಮಾಲಿನಿಯಾಗಿ ‘ಬಾ ಮಗ ಮಹಿಷಾ... ಬಾ...’ ಎಂದು ಕರೆದ.
ವಾಸು ಆರ್ಭಟಿಸಿದ. ರಘು ಗೆರೆಟೆಯಲ್ಲಿದ್ದ ಧೂಪದ ಹುಡಿ ಹಿಡಿದುಕೊಂಡು ತೂಂಟಾನ್ ಗದ್ದೆಯ ಕಡೆ ನಡೆದ. ಚೆಂಡೆ, ರಂಗಸ್ಥಳ ಯಾವುದೂ ಇಲ್ಲ. ಎಲ್ಲರೂ ದೋಗಣ್ಣ ಬೆಂಕಿಕೊಟ್ಟ ತೂಂಟಾನ್ ಸುತ್ತ ನೆರೆದಿದ್ದರು. ವಾಸು ತೆಂಗಿನ ಮಡಲಿನಿಂದ ಕಟ್ಟಿದ ತೂಟೆಗೆ ಧೂಪದ ಹುಡಿ ಎಸೆಯುತ್ತಾ ಅಬತಾರ ಮಾಡುತ್ತಿದ್ದ. ಕೋಣದಂತೆ ಬೊಬ್ಬಿರಿಯುತ್ತಿದ್ದ.
ದೋಗಣ್ಣ ಮಕ್ಕಳ ಆಟ ಕಂಡು ನಸುನಗುತ್ತಿದ್ದ. ‘ಕಟ್ಟಿಕೊಂಡ ಮಂದಿರ್, ಹೊದಿಕೆ ಜಾಗ್ರತೆ ವಾಸು. ಕಿಟಿ ಬಿದ್ದರೆ ಒಟ್ಟೆ ಆಗುತ್ತದೆ. ಅದನ್ನು ತೆಗೆದು ಪುಣಿಯಲ್ಲಿ ಇಡು’ ಎಂದು ಎಚ್ಚರಿಸುತ್ತಿದ್ದ.
ಸಂಜೆ ಕತ್ತಲು ಆವರಿಸುತ್ತಿದ್ದಂತೆ ತೂಂಟಾನಿನ ಬೆಂಕಿಯ ನಾಲಗೆ ಆಕಾಶಕ್ಕೆ ಚಾಚುತ್ತಿತ್ತು. ವಾಸು ಅದರ ಸುತ್ತ ಓಡುತ್ತಿದ್ದ. ಉಳಿದ ಗಂಡು ಮಕ್ಕಳು ಅವನನ್ನು ಅನುಸರಿಸುತ್ತಿದ್ದರು. ಹೆಣ್ಣು ಮಕ್ಕಳು ದೂರದಲ್ಲಿ ನಿಂತು ಮೈಸಾಸುರನ ಅಬ್ಬರ ನೋಡುತ್ತಿದ್ದರು.
ಇಷ್ಟು ಹೊತ್ತಿಗೆ ವಾಸುವಿನ ಅಪ್ಪ ತನಿಯ ಎರಡೂ ಕೈ ಹಿಂದೆ ಕೈ ಕಟ್ಟಿಕೊಂಡು ತೂಂಟಾನ್ ಇಡುವಲ್ಲಿಗೆ ಬಂದು ದೋಗಣ್ಣನ ಬಳಿ ನಿಂತ.
‘ಮೊದಲ ಮಳೆಗೆ ಹಾಕಿದ ನೇಜಿ ಹೇಗಿದೆ ತನಿಯಾ..? ಮಳೆ ಬೇಗ ಬರಬಹುದಾ....? ನಾಟಿಮಾಡಲು ನೇಜಿಗೆ ದಿನ ಆದರೆ ಮತ್ತೆ ಕಷ್ಟ...’ ಎಂದು ದೋಗಣ್ಣ ತನಿಯನನ್ನು ಮಾತಿಗೆ ಎಳೆದ..
‘ನೇಜಿ ಏನೋ ಹಾಕಿದ್ದೇನೆ... ದೋಗಣ್ಣಾ... ಆದರೆ....’ ಅನ್ನುತ್ತಾ ತನಿಯ ಮೆಲ್ಲನೆ ಕಳ್ಳ ಹೆಜ್ಜೆಯಲ್ಲಿ ವಾಸುವಿನ ಬಳಿ ನಡೆದ.
ತುಂಟಾನ್ ಕಡೆ ನೋಡುತ್ತಾ ಕೋಣದಂತೆ ‘ವಾಂಯ್...... ವಾಂಯ್ ಕ್’ ಎನ್ನುತ್ತಿದ್ದ ವಾಸುವಿನ ಕತ್ತಿನ ಪಟ್ಟಿ ಎಡಗೈಯಲ್ಲಿ ಗಟ್ಟಿಯಾಗಿ ಹಿಡಿದ.
‘ಇದೇನು?’ ಎಂದು ಹಿಂತಿರುಗಿ ನೋಡುವಷ್ಟರಲ್ಲಿ ಬೆನ್ನ ಹಿಂದೆ ಅಂಗಿಯ ಒಳಗೆ ಅಡಗಿಸಿಟ್ಟ ಉರಬಡು ತನಿಯನ ಬಲಕೈಗೆ ಬಂದಿತ್ತು... ಬಲವಾಗಿ ವಾಸುವಿನ ಕುಂಡೆಯನ್ನು ಅಪ್ಪಳಿಸಿತು.
ವಾಸು ‘ಅಯ್ಯೋ... ಅಯ್ಯೋ’ ಎಂದು ತಪ್ಪಿಸಿಕೊಳ್ಳಲು ಯತ್ನಿಸುತ್ತ ಓಡುತ್ತಿದ್ದ. ಕಾಲರ್ ಪಟ್ಟಿ ಹಿಡಿದುಕೊಂಡೆ ತನಿಯ ಹಿಂದೆಯೇ ಓಡುತ್ತಾ ಉರಬಡುವಿನಿಂದ ಬಡಿಯುತ್ತಿದ್ದ. ವಾಸು ತುಂಟಾನ್‌ನ ಸುತ್ತ ಓಡತೊಡಗಿದ. ತನಿಯ ಬೆಂಬತ್ತಿ ಬಾರಿಸತೊಡಗಿದ. ವಾಸು ಆಯ ತಪ್ಪಿ ನೆಲದಲ್ಲಿ ಬಿದ್ದು ಹೊರಳಾಡುತ್ತಿದ್ದ. ಆತನ ಕೊಂಬಿನ ಕಿರೀಟ ದೂರ ಎಲ್ಲಿಗೋ ಹಾರಿ ಬಿದ್ದಿತ್ತು. ನೆಲದಲ್ಲಿ ಬಿದ್ದರೂ ಬಿಡದೆ ತನಿಯ ಉರುಳಾಡಿಸಿ ಬಾರಿಸುತ್ತಿದ್ದ.
ವಾಸುವಿನ ನೋವಿನ ಕಿರುಚಾಟ ಸಹಿಸಲಾರದ ಪದ್ದು ಛಂಗನೆ ಹಾರಿ ತನಿಯನ ಉರುಬಡು ಹಿಡಿದ ಕೈಯನ್ನು ಹಿಡಿದು ನೇತಾಡಿದ. ತನಿಯನ ಹಿಡಿತ ತಪ್ಪಿದ ವಾಸು ದೂರ ಓಡಿ ಮೈಕೈಯಲ್ಲಿ ಆದ ಗಾಯ ಮುಟ್ಟುತ್ತಾ, ಸವರುತ್ತಾ ಅಳತೊಡಗಿದ.
ಆಶ್ಚರ್ಯದಿಂದ ಬಾಯಗಲಿಸಿ ನೋಡುತ್ತಿದ್ದ ದೋಗಣ್ಣ ‘ಯಾಕೆ. ತನಿಯಾ... ಮಗನಿಗೆ ಆ ರೀತಿ ಹೊಡೆಯುತ್ತಿಯಾ? ರಕ್ತ ಬರುವ ಹಾಗೆ ಮಕ್ಕಳಿಗೆ ಯಾವಾಗಲೂ ಹಾಗೆಲ್ಲಾ ಹೊಡೆಯಬಾರದು..’ ಎಂದ.
‘ಕೋಣ ಮೇಯಿಸಿ ಬಾ ಅಂದರೆ ಇವನದ್ದು ಇಲ್ಲಿ ಮೈಸಾಸುರ ಅಂತೆ... ಅಲ್ಲಿ ಗದ್ದೆಗೆ ಇಳಿದ ಕೋಣ ನೇಜಿಯನ್ನೆಲ್ಲಾ ಸಪಾಯಿ ಮಾಡಿದೆ ದೋಗಣ್ಣ. ಇನ್ನು ಮಳೆ ಬಂದರೆ ನಾಟಿ ಮಾಡುವುದು ಏನನ್ನು? ಇವನನ್ನೆ ಕುತ್ತಕಂಡೆ ಹೂತು ಹಾಕಬೇಕು....’ ತನಿಯ ಕೋಪದಿಂದ ಏದುಸಿರು ಬಿಡುತ್ತಾ ಹೇಳಿದ...
ಮುಂದಿನ ವಾರಾಂತ್ಯದಲ್ಲಿ ; ಗುತ್ತಿಗೆ ಬಿತ್ತು ಒಡಕಿನ ಬೀಜ
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ