ವೀಳ್ಯದೆಲೆಯನ್ನು ಮೊಣಕೈಗೆ ಉಜ್ಜುತ್ತಾ ಮೊಗಂಟೆಯ ಹಲಗೆಯ ಮೇಲೆ ಕುಳಿತ ರಾಮಣ್ಣ ಮಾತಿಗಾರಂಭಿಸಿದ.
‘ಕ್ರಮ ಎಂತ. ಹಳೆ ನಿಜ ಕ್ರಮದಂತೆ ಹುಡುಗ ಹುಡುಗಿ ಒಟ್ಟಿಗೆ ಕುಳಿತುಕೊಳ್ಳಿಕ್ಕೆ ಇಲ್ಲ. ಗುರ್ಕಾರರು ಕೂತು ನಿಶ್ಚಯ ಮಾಡುವುದು. ಗುರ್ಕಾರರ ಹೆಂಡತಿ ಮದುಮಗಳಿಗೆ ಕರಿಮಣಿ ಕಟ್ಟುವುದು. ಹುಡುಗ ರಾತ್ರಿ ಅದೆಗೆ ಹೋದಾಗಲೇ ಹುಡುಗ - ಹುಡುಗಿ ಯಾರು? ಹೇಗೆ? ಕಾಲುಬರುತ್ತಾ, ಕೈ, ಕಣ್ಣು ಕಿವಿ ಉಂಟಾ? ಕಿವಿ ದೂರವಾ ಅಂತ ಗೊತ್ತಾಗುದು.
ಈಗ ಅದು ಕ್ರಮ ಸ್ವಲ್ಪ ಪರಜಾತಿಯಲ್ಲಿ ಉಂಟು. ಅವರೂ ಹಿಂದೆ ನಮ್ಮವರೇ ಅಲ್ವಾ? ಈಗ ನಾವು ಬೇರೆ ಬೇರೆ ನಮಗೆ ಬೇಕಾದ ಕ್ರಮ ಮಾಡ್ತೇವೆ. ಎಲ್ಲ ಹಳೆಯ ಕ್ರಮ ಹೇಳಿದರೆ ಜವನ್ಯರು ಬಂದು ಪರಬ, ನೀನೊಮ್ಮೆ ಮನೆಗೆ ಹೋಗು ಅಂದಾರು.
ಹಾಲ್‌ನ ಕ್ರಮಕ್ಕೆ ನಾನು ಬರುವುದಿಲ್ಲ. ಮನೆಯಲ್ಲಿ ಏನುಂಟು ಅದನ್ನು ಬೇಕಾದರೆ ಮಾಡುತ್ತೇನೆ. ಈಗ ಎಲ್ಲಾ ಕಾಲ ಕ್ರಮ ಬದಲಾಗಿದೆ ದೋಗಣ್ಣ. ಹಳೆಯದ್ದು ಯಾರಿಗೆ ಬೇಕು? ಮಾಡ್ಲಿಕ್ಕೂ ಅಗುದಿಲ್ಲ’
ದೋಗಣ್ಣ ಮದುವೆಯ ವಿಚಾರದಲ್ಲಿ ಚರ್ಚಿಸಲು ರಾಮಣ್ಣ, ಪೊಡಿಯನನ್ನು ಕರೆಸಿದ್ದರು. ಪದ್ದು ಹಾಜರಿದ್ದ.
‘ಹಾಗೆಲ್ಲಾ ಆಗುವುದಿಲ್ಲ. ನಾವು ಬದುಕಿದ್ದಷ್ಟು ಸಮಯ ನಮ್ಮದೇ ಕ್ರಮ ಆಗಬೇಕು. ಮತ್ತೆ ಏನಾಗುತ್ತದೋ ಗೊತ್ತಿಲ್ಲ. ಏನು ಹೇಳುತ್ತಿ ಪೊಡಿಯಾ?’ ಎಂದರು ದೋಗಣ್ಣ.
‘ಅದು ಸರಿ’ ಎಂದ ಪೊಡಿಯ.
‘ನಮ್ಮ ಕ್ರಮಗಳು ಮಾಯಕವಾದದ್ದು ಯಾಕೆಂದರೆ ಮಾಡುವ ನಾವು ಸರಿಯಿಲ್ಲ. ಮಾಡಿಸುವವರೂ ಸರಿ ಇಲ್ಲ.
ಮೊನ್ನೆ ಪೆಲತ್ತಡಿಯ ಸೀತಣ್ಣ ಮದುವೆ ಕ್ರಮ ಮಾಡ್ಲಿಕ್ಕೆ ಉಂಟು ಬಾ ಅಂತ ಕರೆಸಿದರು. ಎಲ್ಲಾ ಕ್ರಮ ಹೇಳಿ ನಿಘಂಟು ಆಗಿತ್ತು. ಮದುವೆಗೆ ಇನ್ನು ಎರಡು ದಿನ ಉಂಟು ಅಂತ ಆಗುವಾಗ ಮತ್ತೆ ಬಂದು ಮಾತಾಡಿದರು.
ಅದು ಹುಡುಗನ ಮಾವ ಬರುದಿಲ್ಲವಂತೆ, ಹುಡುಗಿ ಕಡೆಯಲ್ಲಿಯೂ ತಕರಾರು ಉಂಟಂತೆ. ನಿನ್ನ ಕ್ರಮ ಮಾಡಬೇಕಾದರೆ ಅವರೆಲ್ಲಾ ಬೇಕಲ್ಲವಾ? ಅವರೇ ಬರದಿದ್ದರೆ ಕ್ರಮ ಎಂತ ಮಾಡುವುದು?. ಮದುವೆ ಈಗಿನ ಕ್ರಮದಂತೆ ಮಾಡುತ್ತಾರಂತೆ.
ಅಲ್ಲಿ ಹುಡುಗ - ಹುಡುಗಿ ಇದ್ದರೆ ಆಯ್ತು, ಅಪ್ಪ, ಅಮ್ಮ, ಮಾವ, ಅಣ್ಣ, ತಮ್ಮ, ಮೈತಿದಿ, ಮಾಮಿ ಎಲ್ಲರನ್ನೂ ಬಾಡಿಗೆ ಕೊಟ್ಟು ತರುತ್ತಾರೆ. ನಿನಗೆ ಹೇಳಿ ಆಗಿದೆ ಅಲ್ವಾ. ನಿನ್ನ ಪಡಿ ಏನುಂಟು ಅದನ್ನ ಹೇಳು ಕೊಡುತ್ತೇವೆ’ ಎಂದರು.
ನಾನು ಕೆಲಸವೇ ಮಾಡಿಲ್ಲ ಅಂತೆ. ಮತ್ತೆ ಪಡಿ ಎಂತ ಪಡೆಯುವುದು?. ಅವರು ಹೇಳುವುದಕ್ಕಾದರೂ ಒಂದು ಮರ್ಯಾದೆ ಬೇಡವಾ...?
ಇನ್ನೊಂದು ಕಡೆ ಏನಾಯಿತು ಎಂದರೆ.... ಬೇಡ. ಅದೆಲ್ಲಾ ಈಗ ಯಾಕೆ? ಬಿಡುವ. ಲೋಕದ ಕತೆ ಹೀಗೆ ಉಂಟು.
ಮತ್ತೆ ನಮ್ಮ ಕ್ರಮಕ್ಕೆ ಹೆಣ್ಣಿನ ಕಡೆಯವರು ಒಪ್ಪಬೇಕು. ಹುಡುಗಿ ಎಲ್ಲಿಯದ್ದು?’ ರಾಮಣ್ಣ ಪ್ರಶ್ನಿಸಿದ.
ದೋಗಣ್ಣ ಜೋರಾಗಿ ನಕ್ಕ. ‘ಇದೊಳ್ಳೆ ಕತೆಯಾಯ್ತು. ಬೆಳಗಿನವರೆಗೆ ನಿದ್ದೆಗೆಟ್ಟು ರಾಮಾಯಣ ಆಟ ನೋಡಿದ ಮೇಲೆ ಸೀತೆ ರಾಮನಿಗೆ ಏನಾಗಬೇಕು ಅಂದ ಹಾಗೆ ಆಯಿತು...? ಹುಡುಗಿ ಪೊಡಿಯನ ಮಗಳು ಮಾರಾಯ. ಸುಜ್ಜಾ...’
‘ಆಂ...’ ರಾಮಣ್ಣ ಅವಕ್ಕಾಗಿ ಬಾಯಿ ಬಿಟ್ಟ.
‘ಹೌದಾ...? ಪೊಡಿಯಣ್ಣನ ಒದ್ದಾಟ ನೋಡಿ ನಾನು ಮೊದಲೇ ಲೆಕ್ಕ ಹಾಕಿದ್ದೆ. ಹುಡುಗಿ ಸುಂದರವಾಗಿದ್ದಾಳೆ. ಒಳ್ಳೆ ಗುಣ ಕೂಡಾ... ಪದ್ದುವಿಗೆ ತಕ್ಕ ಜೋಡಿ. ಆದರೆ ಗುತ್ತಿನ ವಿಷಯ. ಯಾರು ಏನು ಹೇಳುತ್ತಾರೋ? ನನಗ್ಯಾಗೆ ಅಂತ ಸುಮ್ಮನಿದ್ದೆ. ನೀವು ಹೇಳದಿದ್ರೆ ನನಗೆ ಹೇಗೆ ಗೊತ್ತಾಗಬೇಕು’ ಎಂದ ರಾಮಣ್ಣ.
‘ರಾಮ ನಿನಗೆ ನಮ್ಮ ಗುತ್ತಿನ ವಿಷಯ ಗೊತ್ತಿಲ್ವಾ? ನೀನು ಹೇಳಿದ್ದಕ್ಕೆ ಯಾರಾದರೂ ಕೆಟ್ಟದ್ದು ಹೇಳಿದ್ದು ಉಂಟಾ...? ನಿನ್ನ ಲೆಕ್ಕ ತಪ್ಪುವುದಿಲ್ಲ ನೋಡು. ಹೇಗೆ ಮಾಡುವ? ಕ್ರಮ ಹೇಗೆ? ಅಂದ ದೋಗಣ್ಣ.
‘ನಿಮಗೆ ನಾನು ಹೇಳುವುದಾ? ಐದು ಮಕ್ಕಳಿಗೆ ಮದುವೆ ಮಾಡಿದವರು ನೀವು. ಹತ್ತು ಹೆತ್ತವಳಿಗೆ ಒಂದೂ ಹೆರದವಳು ಉಪದೇಶ ಮಾಡಿದಳಂತೆ’ ರಾಮಣ್ಣ ನಸುನಗುತ್ತಾ ಸುಣ್ಣ ಸವರಿದ ವೀಳ್ಯ ಬಾಯಿಗಿಟ್ಟ.
ಅದೆಲ್ಲ ಬಿಡು. ಅದರ ಕಾರ್‌ಬಾರ್, ಯೋಜನೆ ಎಲ್ಲಾ ಶೇಖರ, ಶ್ರೀಧರನದ್ದು. ನಾನು ನೆಪ ಮಾತ್ರ. ಅವರು ಹೇಳಿದ್ದಕ್ಕೆ ತಲೆ ಆಡಿಸಿದ್ದು ಮಾತ್ರ. ಅದು ಕುಡ್ಲ, ವೊಡಿಪು, ಪುತ್ತೂರು, ಬೊಂಬಾಯಿ ಅಂತ ಹಾಲ್‌ನಲ್ಲಿ ಆಯಿತು. ನನಗೆ ಮುಂಡಾಸು ಕಟ್ಟುವುದಕ್ಕೆ ಮಾತ್ರ.
ಇದು ಹಾಗಲ್ಲ. ಹುಡುಗ ನನ್ನ ಅಳಿಯ. ಗುತ್ತಿನ ಉತ್ತರಾಧಿಕಾರಿ. ಹುಡುಗಿ ನನ್ನ ತಮ್ಮನ ಸಮಾನ ಪೊಡಿಯನ ಮಗಳು. ನನಗೆ ಮಗಳು ಇದ್ದಂತೆ. ಈ ಮನೆಯಲ್ಲೇ ಬೆಳೆದವಳು. ಹಾಲ್ ಗೀಲ್ ಬೇಡ. ಮನೆ ದೊಡ್ಡದಿದೆ. ಬಾಕ್ಯಾರು, ಮಜಲು ಗದ್ದೆ ಇದೆ. ಚಪ್ಪರ ಹಾಕಿದ್ರೆ ಆಯ್ತು.
ಮನೆಯಲ್ಲೇ ಆಗಲಿ ಅಂತ ಪದ್ದು ಕೂಡಾ ಹೇಳ್ತಾನೆ. ನಮ್ಮ ಕ್ರಮ ಪ್ರಕಾರ ನೀನು ನಡೆಸಿಕೊಡಬೇಕು.' ದೋಗಣ್ಣ ವಿವರಿಸಿದ.
‘ನಿಶ್ಚಯ, ಮದುವೆ, ತೊಡಮನೆ ಇಷ್ಟು ಆಗಬೇಕಲ್ವಾ?’ ರಾಮಣ್ಣ ಪ್ರಶ್ನಿಸಿದ.
‘ಹೌದು, ಹೌದು’ ಅದು ಹೇಗೆ ಯಾರೆಲ್ಲಾ ಬೇಕು, ಏನು ಬೇಕು. ಎಲ್ಲಾ ಈಗ ನಿರ್ಧಾರ ಆಗಲಿ.
‘ನಮ್ಮ ಕಡೆಗೂ ಹೇಳಿಕೆ ಕೊಡುವುದಕ್ಕುಂಟು. ಯಾರು ಬರುತ್ತಾರೋ ಧೈರ್ಯವಿಲ್ಲ. ಬಂದರೆ ಬಂದಾರು’ ಎಂದ ಪೊಡಿಯ.
‘ಬಂದರೆ ಬರಲಿ. ಸುಜ್ಜಾ ಮನೆಯ ಮಗಳೆ. ಇಲ್ಲೇ ಎಲ್ಲಾ ಇದ್ದಾರೆ, ಸುಧಾರಿಸುವ’ ಎಂದರು ದೋಗಣ್ಣ.
‘ಅದು ಸರಿ. ಮಾವ, ಭಾವ, ಮೈತಿದಿ, ಅತ್ತೆ, ಅಕ್ಕ ತಂಗಿ, ಅಣ್ಣ ಅಂತ ಅವಳು ಕರೆಯುತ್ತಿದ್ದವರು ಎಲ್ಲರೂ ಇಲ್ಲೇ ಇದ್ದಾರಲ್ಲಾ ಸಾಕು ದಿಬ್ಬಣ ಬರುವುದು, ಹೋಗುವುದು ಅದೇನು ಇಲ್ಲ ಅಲ್ವಾ’ ಎಂದ ರಾಮಣ್ಣ.
‘ಮತ್ತೆ ದೈವಕ್ಕೆ ಏನು?’ ದೋಗಣ್ಣ ಪ್ರಶ್ನಿಸಿದ.
‘ಹಿಂದಿನ ಕಾಲದಲ್ಲಿ ದೈವಕ್ಕೆ ಕೋಲ ಕೊಟ್ಟು ಮದುವೆ ನಿಶ್ಚಯ ಮಾಡುವ ಕ್ರಮ. ಈಗ ಅದೆಲ್ಲಾ ಕಷ್ಟ ಅಲ್ವಾ. ಮದುವೆಯ ಮೊದಲು ಒಂದು ಓಮಂಚ್ಚಜ್ಜಾಯ, ನಂತರ ಇನ್ನೊಂದು ಕೊಟ್ಟರೆ ಸಾಕು. ಶುದ್ದಕ್ಕೆ ಕಲಸ ನಾನೇ ಇಡುತ್ತೇನೆ. ಇಬ್ಬರೂ ಕಲಶ ಸ್ನಾನ ಮಾಡಬೇಕು. ದೇವಸ್ಥಾನಕ್ಕೆ ಹೋಗಿ ಮಾಡಿದರೂ ಆಗಬಹುದು. ನಿಮ್ಮ ಇಚ್ಚೆ’ ಎಂದ ರಾಮಣ್ಣ.
‘ಯಾಕೆ, ನೀನು ಮಾಡಿದ ಕಲಶ ನೀರು ಇಷ್ಟರವರೆಗೆ ಶುದ್ಧ ಇತ್ತಲ್ಲಾ. ಮದುವೆಗೆ ಅದು ಆಗುದಿಲ್ವಾ? ಅದೇ ಇರಲಿ’ ಎಂದರು ದೋಗಣ್ಣ.
ಒಂದು ಶುಭದಿನ ಮದುವೆ ನಿಶ್ಚಿತಾರ್ಥ ನಡೆದೇ ಬಿಟ್ಟಿತು. ಮೂಡು-ಪಡು ಚಾಪೆ ಹಾಕಿ ದೋಗಣ್ಣ, ಪೊಡಿಯ ತಾಂಬೂಲ ಬದಲಾಯಿಸಿದರು. ಊರಿನ ಗುತ್ತಿನಾರ್ ಮುಂಡಾಸ್ ಕಟ್ಟಿಕೊಂಡು ನಂಬಿದ ದೈವ, ಗ್ರಾಮ ದೇವರನ್ನು ನೆನವರಿಕೆ ಮಾಡಿಕೊಂಡು ಮುಂದಿಟ್ಟುಕೊಂಡು ಮಾರ್ಗದರ್ಶನ ನೀಡಿದರು. ಅಡಿಗಡಿಗೆ ಅನುಭವದ ಮಾತನ್ನು ಹೇಳುತ್ತಾ ರಾಮಣ್ಣ ಸಹಕರಿಸಿದ.
ಬೇಸ ಹತ್ತನೇ ದಿನ ಮದುವೆ ಎಂದು ಆಮಂತ್ರಣ ಪತ್ರಿಕೆ ಮುದ್ರಣವಾಯಿತು.
ಪೊಡಿಯ ಸುಜ್ಜಾಳನ್ನು ಕರೆದುಕೊಂಡು ಮಂಜೇಶ್ವರ, ಬದಿಯಡ್ಕ, ಕಾರ್ಲ ಸಂಪಾಯ್ ಗುತ್ತಿಗೆ ಹೋಗಿ ಆಮಂತ್ರಣ ಪತ್ರಿಕೆ ನೀಡಿ ದೈವಗಳ ಮುಂದೆ ಅಡ್ಡ ಬಿದ್ದ.
‘ಖಂಡಿತಾ ಬರುತ್ತೇನೆ’ ಎಂದ ಉಗ್ರಾಣಿ ಪೊಡಿಯನ ಜಮೀನಿನಲ್ಲಿ ಸುಜ್ಜಾಳ ದಾಖಲೆ ಸೇರಿಸುವ ಮೊದಲೇ ತಯಾರು ಮಾಡಿದ್ದ ದಾಖಲೆ ಪತ್ರಕ್ಕೆ ಇಬ್ಬರಿಂದಲೂ ಸಹಿ ಪಡೆದ.
ವೈಟ್ ವಾಸ್ ಮಂಜು ಮರದ ಕುದುರೆ ಹೊತ್ತು ತಂದ. ಅದರ ಮೇಲೇರಿ ಗೋಡೆ ಶುಚಿ ಮಾಡತೊಡಗಿದ. ಸುಣ್ಣ ಬಣ್ಣದೊಂದಿಗೆ
ಮದುವೆಗೆ ಮಂಜೊಟ್ಟಿ ಗುತ್ತು ಸಿದ್ದವಾಯಿತು. ಪದ್ದು ನೋಡ ನೋಡ ನೋಡುತ್ತಿದ್ದಂತೆ ಕನ್ಬಡಿಯಂತೆ ಸಜ್ಜಾದ ಮನೆಯ ಅಂಗಳದಲ್ಲಿ, ಬಾಕಿಮಾರು ಗದ್ದೆಯಲ್ಲಿ ಚಪ್ಪರ ಎದ್ದು ಬಿಟ್ಟಿತ್ತು. ರಘು, ಬಾಚು ಎಲ್ಲಾ ಉಸ್ತುವಾರಿ ನೋಡಿಕೊಂಡರು. ವಾಸು ಊಟದ ಹಿಂದೆ ಓಡಾಡಿ ಪದ್ದುವಿಗೆ ಯಾವುದೇ ರಗಳೆ ಇಲ್ಲದಂತೆ ಮಾಡಿದ್ದರು.
ವನಜ, ಯಶೋಧ, ಶಂಕರ, ಶಂಭು ವಾರಕ್ಕೆ ಮೊದಲೇ ಆಗಮಿಸಿದ್ದರು. ಸುಜ್ಜಾಳಿಗೆ ಮದುವೆ ಸೀರೆ, ಪದ್ದುವಿಗೆ ವೇಸ್ಟಿ, ಪೈರಾನ್, ಪೇಟ, ಶಾಲು, ಎಲ್ಲರಿಗೂ ಉಡುಪು, ತೊಡಪು ತಂದಿದ್ದರು. ಅಳತೆಗೆ ಆಗದ್ದನ್ನು ಸೀನ ಬಂಡಾರಿ ಜವಳಿ ಅಂಗಡಿಯಲ್ಲಿ ಖರೀದಿಸಿದರು. ಪೊಸಂಗಡಿ ವಿಶ್ವಕರ್ಮ ಕೊಟ್ಯದಲ್ಲಿ ಚಿನ್ನ ಗುದ್ದಿಸಿ ಕರಿಮಣಿ, ಒಡ್ಡಿಯುಂಗುರ, ಉಂಗುರ, ಬಳೆ, ಸರ ಎಲ್ಲವನ್ನೂ ಮಾಡಿಸಿದರು.
ಹೆಣ್ಣು ಮಕ್ಕಳು ಸುಜ್ಜಾಳ ಆರೈಕೆ ಮಾಡತೊಡಗಿದರು.
‘ಲೇ. ಸುಜ್ಜಾ ನನಗಲ್ಲ ಮದುವೆ ನಿನಗೆ ಆಯ್ತಾ? ಯಾರು ಕೂಡಾ ನನಗೆ ಉಪಚಾರ ಮಾಡುವುದೇ ಇಲ್ಲ’ ಎಂದು ಪದ್ದು ಆರೋಪಿಸಿದ.
‘ನೀನು ಗಿಡ್ದೆರು ಇದ್ದ ಹಾಗೆ ಇದ್ದಿ ಮಾರಾಯಾ. ನಿನಗೆಂತ ಆರೈಕೆ, ಮುಸುಂಟಿಗೆ ಒಂದೆರಡು ದಿನ ಆದರೂ ಮುಲ್ತಾನ್ ಮಟ್ಟಿ ಹಾಕು, ಅದು ಬಿಳಿ ಅಗಲಿ. ಬರುವಾಗ ತಂದಿದ್ದೇವೆ’ ಎಂದು ಹೆಣ್ಣುಮಕ್ಕಳು ಕೊಟ್ಟರು.
‘ಇದೆಂತದು, ಇದನ್ನು ಕೂಡಾ ಅವಳ ಮುಸುಂಟಿಗೇ ಹಾಕಿ. ಅದನ್ನು ಹಾಕಿಕೊಂಡು ಪಾರದ ಪೆರೆಡೆಯಂತೆ ಕುಳಿತುಕೊಳ್ಳುವುದು ಯಾರು? ಮತ್ತೆ ನಾಳೆ ಬಿಸಿಲಲ್ಲಿ ಹೇಳಿಕೆ ಕೊಡಲು ಹೋದರೆ ಕರ್ಗುಂಡೆ ಅಗಬಹುದು’ ಎಂದು ಪದ್ದು ಎದ್ದು ನಡೆದ. ಸುಜ್ಜಾ ಸೇರಿ ಹುಡುಗಿಯರು ಮುಸಿ ಮುಸಿ ನಕ್ಕರು.
ಅಂಗಳದ ಚಪ್ಪರದ ಒಳಗೆ ವೀಳ್ಯದೆಲೆಯ ಸುಂದರವಾದ ಮಂಟಪ, ವೇದಿಕೆ ಸಿದ್ದವಾಯಿತು. ರಾಮಣ್ಣ ತನ್ನ ಕುಶಲತೆಯನ್ನೆಲ್ಲಾ ಬಳಸಿ ಅಲಂಕಾರಕ್ಕೆ ಮಾರ್ಗದರ್ಶನ ನೀಡಿದ. ಊಟಕ್ಕೆ ಬಾಕಿಮಾರು ಗದ್ದೆಯ ಚಪ್ಪರ, ಕೋಳಿಕಟ್ಟಕ್ಕೆ ಮಜಲು ಗದ್ದೆ ಎಂದು ನಿರ್ಧಾರವಾಯಿತು.
ಮದುವೆಯ ಮುಂಚಿನ ದಿನ ಲೈಟಿಂಗ್ ಸುರೇಷ ಮೈಕ, ವಯರ್ ಸರಂಜಾಮು ಹೊತ್ತು ತಂದ. ಸರ ಸರನೆ ತೆಂಗಿನ ಮರ ಏರಿ ಎತ್ತರದಲ್ಲಿ ಮೈಕ ಕಟ್ಟಿ ವಯರ್ ಅಳವಡಿಸಿ ಪ್ಲೇಟ್ ಇಟ್ಟ.
ಪಿ.ಬಿ. ಶ್ರೀನಿವಾಸ್ ಕಂಠದ ಶರಣು ಮಹಾಗಣಪತಿ ಆರಂಭವಾಯಿತು. ಕೆಮ್ಮಲೆತಾ ಬ್ರಹ್ಮ, ಜೋಡುನಂದಾ.. ಎಕ್ಕಸಕ್ಕ, ಡಿಂಗಿರಿಮಾಮಾ, ರಾಜ್ ಕುಮಾರ್, ಹಿಂದಿ ಹಾಡುಗಳ ಊರಿಡೀ ಪ್ರತಿಧ್ವನಿಸಿ ಕಿವಿ ಕೆಪ್ಪಾಗಿಸಿತು.
ಕತ್ತಲಾದಂತೆ ಸುಜ್ಜ, ಪದ್ದು ಇಬ್ಬರೂ ರಾಮಣ್ಣ ಇಟ್ಟ ಕಲಶದ ನೀರಿನ ಸ್ನಾನ ಮಾಡಿದರು. ಇಬ್ಬರಿಗೂ ಬೇರೆ ಬೇರೆಯಾಗಿ ಮುಹೂರ್ತ ಮಾಡಿದರು. ಸುಜ್ಜಾಳಿಗೆ ಮೊದಲು ಮದರಂಗಿ ಇಡಲಾಯಿತು. ಆನಂತರ ಪದ್ದು ಮದಿರಂಗಿಗೆ ಕುಳಿತುಕೊಂಡ. ಮಂಜೊಟ್ಟಿ ಗುತ್ತು ನಗುವಿನ ಪರಮಾನಂದದಲ್ಲಿ ತೇಲಾಡಿತು.
ಪೊಡಿಯ ಕುಡಿಯುವುದನ್ನೇ ಮರೆತು ಎಲ್ಲದರಲ್ಲಿಯೂ ಪಾಲ್ಗೊಂಡ. ಎರಡು ದಿನದಿಂದ ಕುಡಿತ ಬಿಟ್ಟು ಬಿಳೀ ಅಂಗಿ, ವೇಸ್ಟಿ ಧರಿಸಿ ತಲೆಗೆ ಮುಂಡಾಸು ಸುತ್ತಿಕೊಂಡ ಆತನನ್ನು ಎಲ್ಲರೂ ಅಭಿನಂದಿಸಿದರು.
ಮದುವೆಗೆ ಬಂದ ಅತಿಥಿಗಳಿಗೆ ಅಲಂಕರಿಸಲ್ಪಟ್ಟ ಮಂಜೊಟ್ಟಿಗುತ್ತು, ಅಂಗಳ, ಬಾಕಿಮಾರು ಗದ್ದೆ, ಮಜಲು ಗದ್ದೆ ಅಚ್ಚರಿಯನ್ನು ಉಂಟು ಮಾಡಿತ್ತು. ಹಾಲ್ ಮದುವೆಗಳಲ್ಲಿ ಪಾಲ್ಗೊಂಡವರಿಗೆ ಮನೆಯಲ್ಲೂ ಇಷ್ಟು ಚೆನ್ನಾಗಿ ವ್ಯವಸ್ಥೆ ಮಾಡಬಹುದೇ ಎಂದುಕೊಂಡರು.
ಬೆಳಿಗ್ಗೆ ಒಂಭತ್ತು ಗಂಟೆಗೆ ವಾದ್ಯ, ಬ್ಯಾಂಡು, ಬೂಬಣ್ಣನ ಗರ್ನಾಲ್, ಮಾಲೆ ಪಟಾಕಿಯೊಂದಿಗೆ ರಾಮಣ್ಣನ ಕ್ರಮದೊಂದಿಗೆ ಮದುವೆ ವಿಧಿ ವಿಧಾನ ಆರಂಭವಾಯಿತು.
ಸುಜ್ಜಾಳಿಗೆ ಮಂಜೊಟ್ಟಿಗುತ್ತಿನ ಮನೆಯೇ ತವರು ಮನೆಯಂತಾಗಿತ್ತು. ದೋಗಣ್ಣನ ಮಕ್ಕಳೇ ಎಲ್ಲಾ ವಿಧಿ ವಿಧಾನಕ್ಕೆ ಮನಪೂರ್ವಕ ಸಹಕರಿಸಿದರು. ಹೂ ಹಾರ ಬದಲಾಯಿಸಲಾಯಿತು. ಗುತ್ತಿನಾರ್ ಹೆಂಡತಿ ಸಮೇತ ಬಂದು ನೆಲಮುಟ್ಟಿ, ದೈವಗಳನ್ನು ನೆನವರಿಕೆ ಮಾಡಿ, ಭೂಮಿ ಸಾಕ್ಷಿಯಾಗಿ, ಧಾರೆ ಎರೆದು, ಕರಿಮಣಿ ಕಟ್ಟಿಸಿದರು. ಹುಡುಗಿಯರು ಆರತಿ ಬೆಳಗಿ ಶೋಭಾನೆ ಹಾಡಿದರು. ಎಲ್ಲ ಮುಗಿದ ನಂತರ ಗುತ್ತಿನಾರ್ ಹಿತವಚನಗಳನ್ನು ನೀಡಿದರು.
ಮಂಜೇಶ್ವರದಿಂದ ಉಗ್ರಾಣಿ ತನ್ನ ಮಗನೊಂದಿಗೆ ಬೆಳಗ್ಗೆಯೇ ಹಾಜರಿದ್ದ. ಪೊಡಿಯನ ಮನೆಯವರು, ಬದಿಯಡ್ಕದವರು ಮದುವೆ ದೂರ ಎಂದು ಗೈರುಹಾಜರಾದರು. ಕಾರ್ಲದ ಸಂಪಾಯಿಗುತ್ತಿನವರು ‘ಊರಿನಲ್ಲಿ ಯಾರೂ ಇಲ್ಲ ಎಲ್ಲಾ ಪರವೂರಿನಲ್ಲಿದ್ದಾರೆ’ ಎಂದರು. ಉಗ್ರಾಣಿ ಜತೆ ಪೊಡಿಯ ಬೇಸರ ತೋಡಿಕೊಂಡ.
'ಅವರು ಬರದಿದ್ದರೇನು. ಮಗಳು ಒಳ್ಳೆಕಡೆ ಸೇರಿಕೊಂಡಳಲ್ಲ. ನಿನಗೆ ಇನ್ನೇನು ಬೇಕು' ಎಂದು ಉಗ್ರಾಣಿ ಸಮಾಧಾನಿಸಿದ.
ಧಾರೆ ಮುಗಿಯುತ್ತಿದ್ದಂತೆ ಮಜಲು ಗದ್ದೆಯಲ್ಲಿ ಕೋಳಿ ಅಂಕದ ಸಂಭ್ರಮ. ಹತ್ತಾರು ಒಟ್ಟೆ ಕೋಳಿಗಳು ಪುಕ್ಕ ಕಳೆದುಕೊಂಡು ತುಂಡು ತುಂಡಾಗಿ ಮಸಾಲೆ ಬೆರೆತು ಪರಿಮಳ ಬರತೊಡಗಿತು.
ಮುಂಜಾನೆಯೇ ಮೀನಿನ ಕೇಕದ ಹೆಂಗಸು ಮಗಳು, ಸೊಸೆ ಜತೆ ಮೂರು ಬುಟ್ಟಿ ಪಜ್ಜಿ ಪಜ್ಜಿ ಬಂಗುಡೆ ಮೀನು ತಂದು ಅದರ ಕರುಳು ಬಗೆದು, ತಲೆತುದಿ ಬಾಲ ಕತ್ತರಿಸಿ ತೊಳೆದು ಇಟ್ಟಿದ್ದಳು. ಅದಕ್ಜೆ ಮಸಾಲೆ ಸೇರಿತು.
ಹೊತ್ತು ನೆತ್ತಿಗೆ ಬರುವಾಗ ಬಾಕಿಮಾರು ಗದ್ದೆಯಲ್ಲಿ ಊಟ ತಯಾರಾಗಿತ್ತು.
ಉಪ್ಪಿನಕಾಯಿ, ಕಡ್ಲೆ-ಮನೊಲಿ, ಬಂಗುಡೆ ಗಸಿ, ಕೋಳಿ ಸುಕ್ಕ, ಕೋಳಿ ರೊಟ್ಟಿ, ಅನ್ನ ಸಾಂಬಾರ್, ಹೋಳಿಗೆ ಪಾಯಸದ ಭೂರಿಭೋಜನವನ್ನು ಬಂಧು ಮಿತ್ರರು ಸವಿದು ವಧೂವರರನ್ನು ಮನಸಾರೆ ಆಶೀರ್ವದಿಸಿ ಅಭಿನಂದಿಸಿದರು.
ಅಂದೇ ರಾತ್ರಿ ತೊಡಮನೆ ಕ್ರಮ ಏರ್ಪಡಿಸಲಾಗಿತ್ತು.
ಪೊಡಿಯ ತನ್ನ ಸಂಪಾದನೆಯ ಎಲ್ಲಾ ಹಣ ಹುಡುಕಿ ತೆಗೆದುದ್ದ. ಸಾಲ ಮಾಡಿ ತೊಟ್ಟೆ ಕುಡಿದವರನ್ನು ಬೇತಾಳನಂತೆ ಬೆಂಬತ್ತಿದ್ದ. 'ಈಗ ಕೊಡದಿದ್ದರೆ ಮತ್ತೆ ಯಾವಾಗ ಕೊಡುವುದು?' ಎಂದು ಎಲ್ಲರೂ ತೊಟ್ಟೆ ಸಾಲ ಬಡ್ಡಿ ಸಹಿತ ತೀರಿಸಿದ್ದರು. ಅದರಿಂದ ಪದ್ದುವಿಗೆ ಬ್ರೇಸ್ ಲೆಟ್ ಉಡುಗೊರೆ ನೀಡಿದ.
ಭಾವನೆಗಳ ಜ್ವಾಲಾ ಮುಖಿಯನ್ನು ಅದುಮಿ ಹಿಡಿದುಕೊಂಡು ಎಲ್ಲದರಲ್ಲೂ ನಗು ನಗುತ್ತಾ ಭಾಗವಹಿಸುತ್ತಿದ್ದ ಸುಜ್ಜಾಳನ್ನು ಪದ್ದು ಕೆಣಕಿದ.
‘ನಗುತ್ತಾನೆ ಇದ್ದಿಯಲ್ಲಾ. ತೊಡಮನೆಯಲ್ಲಿ ಗಂಡನ ಮನೆಗೆ ಹೋಗುವಾಗಲಾದರೂ ಸ್ವಲ್ಪ ಅಳು ಮಾರಾಯ್ತಿ... ನೋಡಿದವರು ಏನು ತಿಳಿದುಕೊಂಡಾರು?’ ಪಿಸುಗುಟ್ಟಿದ.
ಜ್ವಾಲಾಮುಖಿ ಸ್ಪೋಟಗೊಂಡಿತ್ತು.
ಇದ್ದಕ್ಕಿದ್ದಂತೆ ಸುಜ್ಞಾಳ ಕಣ್ಣು ಒದ್ದೆಯಾಗಿತ್ತು. ತಾಯಿಯ ನೆನಪು, ತನ್ನ ಅನಾಥ ಸ್ಥಿತಿ, ಮಂಜೊಟ್ಟಿಗುತ್ತಿನಲ್ಲಿ ಸಿಕ್ಕ ಆದರ. ಪೊಡಿಯನ ದುಸ್ಥಿತಿ, ಕುಟುಂಬದ ಮನೆಗಳಲ್ಲಿ ಅನಾದಾರ ಎಲ್ಲವನ್ನು ನೆನೆದು ದುಃಖ ಒತ್ತರಿಸಿ ಬರತೊಡಗಿತು. ಯಶೋಧ, ವನಜ ಬಳಿ ಬಂದು ಸಮಾಧಾನಿಸತೊಡಗಿದರು.
'ಅವ ಪದ್ದು ಏನೋ ಪೆದಂಬು ಹೇಳಿರಬೇಕು' ಎನ್ನುತ್ತಾ ಪದ್ದುವಿಗೆ ಬೈಯ್ಯುತ್ತಾ ದೇವಕಿ, ದೋಗಣ್ಣನ ಹೆಂಡತಿ ಸುತ್ತ ಸೇರಿ ‘ಯಾಕೆ ಅಳುತ್ತಿ, ಏನಾಯ್ತು ಈಗ, ಎಲ್ಲಾ ಒಳ್ಳೆಯದೇ ಆಯಿತಲ್ಲಾ?’ ಎಂದು ಸಮಾಧಾನಿಸತೊಡಗಿದರು.
'ಪೊಡಿಯಾ, ನಿನ್ನ ಹೆಂಡತಿ ಜೀವ ಎಳೆಯುವಾಗ ಮಗು ಸುಜ್ಜಾಳ ಕೈಯನ್ನು ನನ್ನ ಕೈಗೆ ಕೊಟ್ಟು ಇನ್ನು ಇವಳು ನಿಮ್ಮ ಕೊನೆಯ ಮಗಳು. ಕೈ ಬಿಡಬೇಡಿ ಎಂದಿದ್ದಳು. ಅವಳನ್ನು ಕೊನೆಯವರೆಗೆ ಮಗಳಾಗಿಯೇ ನೋಡಿ ಈಗ ಮನೆ ತುಂಬಿಸಿಕೊಂಡಿದ್ದೇನೆ. ಇನ್ನು ಈ ಮನೆಯ ಸತ್ಯೊಗಳ ಚಿತ್ತ' ದೋಗಣ್ಣ ನುಡಿದ.
ಪೊಡಿಯ ಶಾಲಿನ ತುದಿಯಿಂದ ಕಣ್ಣೀರು ಒರಸುತ್ತಾ 'ಅವಳಿಗೆ ಸಾಯುವಾಗಲೂ ನನ್ನ ಮೇಲೆ ಎಳ್ಳಿನಷ್ಟೂ ಧೈರ್ಯ ಇರಲಿಲ್ಲ ದೋಗಣ್ಣಾ' ಎಂದ.
ಸುಜ್ಜಾಳ ಅಳು ನಿಲ್ಲಲೇ ಇಲ್ಲ. ಆಕೆ ಬಿಕ್ಕಳಿಸಿ ಅಳುತ್ತಲೇ ಮಂಜೊಟ್ಟಿ ಗುತ್ತಿನ ಹೊಸ್ತಿಲು ದಾಟಿದಳು.
‘ತಾನು ಯಾಕಾಗಿ ಹಾಗೆ ಅಂದನೋ’ ಎಂದು ಪದ್ದು ಪೆಚ್ಚಾದ.
ಮುಂದಿನ ವಾರಾಂತ್ಯದಲ್ಲಿ : ಮಹಿಷನಿಗೆ ಉರಬಡು ಏಟು
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ