18. ಗಡಿ ಇಲ್ಲದ ಗುತ್ತು

ಪೆದಂಬು ನರಮಾನಿ (ಕಾದಂಬರಿ ಭಾಗ -18)

ProfileImg
08 Mar '25
6 ನಿಮಿಷದ ಓದು


image

ದೊಡ್ಡ ಕುಟುಂಬದ ಗುತ್ತಿನ ಮನೆ ಅದು. ನಾಲ್ಕು ಊರಿನ ಯಜಮಾನಿಕೆಯ ಮನೆಯಾಗಿತ್ತು.

ಊರಿನ ಜಾತ್ರೆಗೆ  ಭಂಡಾರದ ಮನೆಯಿಂದ ದೈವದ ಭಂಡಾರ ಒಂದು ದಿನದ ಮೊದಲೇ ಸಾಗುವ ಪದ್ದತಿ ಅನಾದಿ ಕಾಲದ್ದು.

ಗುತ್ತಿನ ಮನೆಯಿಂದ ನಾಲ್ಕು ಊರ ಮಾಗಣೆಯ ಗಡಿ ಹಿಡಿದ ಯಜಮಾನನ ರಾಜ ಮರ್ಜಿಯ ಛತ್ರ ಚಾಮರ ಬಿರುದಾವಳಿ, ವಾದ್ಯ, ಬ್ಯಾಂಡು, ದೋಲು ಬೆಡಿ, ಗರ್ನಾಲು ವೈಭವದೊಂದಿಗೆ  ಸತ್ತು ಗುತ್ತು, ಆಹ್ವಾನಿತ ಗಣ್ಯರ, ಗುತ್ತಿನಾರರ ಜತೆ ಗಗ್ಗರ ಇಡುವ ಮೊದಲು ಭವ್ಯವಾಗಿ ನೇಮ ನಡೆವ ರಾಜದ ಕಲಕ್ಕೆ ಸಾಗುವ ಚೆಂದವೇ ಬೇರೆ ಇತ್ತು ಹೀಗೆ ಸಾಗಿ ಬಂದ ಗಡಿಹಿಡಿದ ಯಜಮಾನ ಹೋಮ ಇಡಬೇಕಾದ ಗೌರವಯುತವಾದ ಪುರಾತನ ಕ್ರಮ ಇತ್ತು.

ಸಾಕಷ್ಟು ಭೂಮಿ ಇದ್ದರೂ ಕುಟುಂಬ ಕಲಹದಿಂದ ಪಾಲಾಗದೆ. ಪಾಳು ಬಿದ್ದಿತ್ತು. ಕೆಲವರು ಭೂಮಿ ಪಾಲಾಗಬೇಕು ಎಂದರೆ ಇನ್ನು ಕೆಲವರು ಅದು ದೈವದ್ದು ಪಾಲಾಗುವುದಕ್ಕಿಲ್ಲ ಎಂಬ ವಿವಾದವಿತ್ತು.

ಪುರಾತನ ಕಾಲದ ಮನೆ. ವಿಶಾಲವಾದ ದೈವದ ಚಾವಡಿಯಲ್ಲಿ ಉಯ್ಯಾಲೆ ಮನೆ ದೈವದ ಡೊಡ್ಡ ದೊಡ್ಡ ಮುಗ ಮೂರ್ತಿಗಳು, ಖಡ್ಸಲೆ, ಗಂಟಾಮಣಿ, ನೀರಿನ ಕೂಚಿ ಗುತ್ತಿನವ ಇಲ್ಲದೆ ಅನಾಥವಾಗಿತ್ತು.
ಧೂಳು, ಜೇಡರ ಬಲೆ ಹಿಡಿದು ಬಣಗುಡುತ್ತಿತ್ತು.

ಪಾಲು ಪಾಲಿನ ಮನೆಯಲ್ಲಿ ಪಾಲಿಗೆ ಇದ್ದ ಗದ್ದೆಯನ್ನು ಗೇಣಿಗೆ ಬಿಟ್ಟು ಬೇಸಾಯ ಮಾಡಿಸಿಕೊಂಡಿದ್ದರು. ಎಲ್ಲಾ ಕುಟುಂಬದ ಹೆಚ್ಚಿನ ಸದಸ್ಯರು ಮುಂಬೈ, ಕೊಲ್ಲಿ, ಅಮೆರಿಕಾ, ಯುರೋಪ್, ಇಂಗ್ಲೆಂಡ್ ಮುಂತಾದ ವಿದೇಶಗಳಲ್ಲಿದ್ದರು. ಕೆಲವರು ಮನೆಯ ಸದಸ್ಯರನ್ನು ತಾವಿರುವಲ್ಲಿಗೇ ಕರೆಸಿಕೊಂಡಿದ್ದರು.

ವರ್ಷಕ್ಕೊಂದು ಬಾರಿ ಊರಿನ ಜಾತ್ರೆಯ ಸಂದರ್ಭದಲ್ಲಿ ವೇಸ್ಟಿ, ಉದ್ದ ಕೈಯ ಬಿಳಿ ಅಂಗಿ, ಶಾಲು, ಪೈರಾನ್, ಕುರ್ತಾ ಧರಿಸಿಕೊಂಡು ಹಾಜರಾಗಿ ಜಾತ್ರೆ ನಡೆಯುವಲ್ಲಿಗೆ ಗಡಿ ಹಿಡಿದ ಅರಸನಿಲ್ಲದ ಛತ್ರ ಚಾಮರದ ಅಡಿಯಲ್ಲಿ ನೇಮದ ಕಲಕ್ಕೆ ಬಂದು ನಾವು ಅಧಿಕಾರದ ಮನೆಯವರು ಎಂದು ಗತ್ತಿನಿಂದ ತಿರುಗಾಡುತ್ತಿದ್ದರು.

ಹೆಜ್ಜೆ ಹೆಜ್ಜೆಗೆ ಒಬ್ಬೊಬ್ಬರು ಒಂದೊಂದು ತಗಾದೆ ತೆಗೆಯುತ್ತಿದ್ದರು. ದೈವದ ಆಚರಣೆಗಳ ಬಗ್ಗೆ ಕಿಂಚಿತ್ತೂ ಗೊತ್ತಿಲ್ಲದೇ ಇದ್ದವರು ಕೂಡಾ. ದೈವದ ಮರ್ಯಾದೆಗೆ ಕೊರಳೊಡ್ಡಲು  ಪೈಪೋಟಿ ನಡೆಸುತ್ತಿದ್ದರು. ಸುಧಾರಿಸಬೇಕಾದವರು ಯಜಮಾನಿಕೆ ತೋರಿಸಿ ನಿಯಂತ್ರಿಸುತ್ತಿದ್ದರು. ಪರವೂರಿನಿಂದ ಬಂದ ಕುಟುಂಬದ ಕೆಲವರಿಗೆ ಅದೊಂದು ಮನೋರಂಜನಾ ವಿಲೇಜ್ ಫಾರ್ಮ್ ಹೌಸ್ ಗೆಟ್ ಟುಗೆದರ್ ಈವೆಂಟ್ ಆಗಿತ್ತು.

ಯಾರನ್ನು ಮುಂದಿಡುವುದು ಎಂದು ದೈವ ಪಾತ್ರಿ, ಕಟ್ಟುವವರಿಗೇ ಉಭಯ ಸಂಕಟವಾಗಿತ್ತು ಊರ ಸಂಪ್ರದಾಯ ಮುರಿಯಬಾರದು ಎಂದು ಊರವರು ಸಹಿಸಿಕೊಳ್ಳುತ್ತಿದ್ದರು. ಅಸಮಾಧಾನ ಹೆಚ್ಚಿದವರು ಊರಿನಲ್ಲಿದ್ದ ಇತರ ಸಣ್ಣ ಪುಟ್ಟ ದೈವಸ್ಥಾನ, ದೈವದ ಕಲ್ಲುಗಳನ್ನು ಜೀರ್ಣೋದ್ದಾರ ಸಮಿತಿ ರಚಿಸಿ ಅದರಲ್ಲಿ ಸೇರಿಕೊಂಡು ತಮ್ಮ ಧಾರ್ಮಿಕ ಭಕ್ತಿಯನ್ನು ಪಲ್ಲಟಗೊಳಿಸಿ ಇಲ್ಲಿಗೆ ದೂರದಿಂದಲೇ ಕೈ ಮುಗಿಯುತ್ತಿದ್ದರು. ಅತ್ತ ಕಡೆ ತಲೆ ಹಾಕುತ್ತಿರಲಿಲ್ಲ.

ಗುತ್ತಿನವರ ಅನಾರೋಗ್ಯಕರ ಪೈಪೋಟಿಯ ಕೋಲ ಕಂಡು ‘ನನ್ನ ಗಡಿ ಹಿಡಿಯಲು ಈಗ ಯಾರಿಗೂ ಅರ್ಹತೆ ಇಲ್ಲ. ಕಾಲ ಕೂಡಿಬಂದಾಗ ನಾನೇ ಆಯ್ಕೆ ಮಾಡುತ್ತೇನೆ’ ಎಂದು ದೈವ ನೇಮದ ನಡುನಡುವೆ ಅಬ್ಬರಿಸುತ್ತಿತ್ತು.

ಬೇಸ ತಿಂಗಳಲ್ಲಿ ಭೂತದ ಅಗೆಲಿಗೆ ಊರಿಗೆ ಬಂದು ಉಡುಪಿ, ಕಾರ್ಲದಲ್ಲಿ ಲಾಡ್ಜ್ ಮಾಡಿ ಅಗೆಲು, ನಾಗನಿಗೆ ತಂಬಿಲ ಕೊಟ್ಟು, ಗುತ್ತಿನ ಗಡಿಯ ಹಿಡಿಯಲು ‘ನನಗೆ ಪೊರ‍್ಸೊತ್ತಿಲ್ಲ ಅವ ತಯಾರಾಗಬೇಕು. ಇವ ತಯಾರಾಗಬೇಕು. ಭೂಮಿ ಪಾಲಾಗಬೇಕು’ ಎಂದು ಅವರವರದ್ದೇ ಮಾತುಗಳನ್ನು ಆಡಿ ಹೈಫೈ ಮಾಲು ಕುಡಿದು. ಅಗೆಲಿನ ಊಟ ಮಾಡಿ ಪರಸ್ಪರ ಕಾಲು ಕೆದರಿ ಬೈದಾಡಿಕೊಂಡು, ಒಟ್ಟು ಜಮೀನು ಎಷ್ಟಿದೆ. ಅದರಲ್ಲಿ ತಮ್ಮ ಪಾಲು ಎಷ್ಟು? ಸೆಂಟ್ಸ್ ಗೆ ಎಷ್ಷು ರೇಟು ಇದೆ. ಮಾರಿಹೋದ ಹಣದಲ್ಲಿ ಹೊಟೆಲು, ಬಾರು ಮಾಡಬಹುದೇ? ಹೊಸ ಮಾಡಲ್ ಕಾರು, ಫ್ಲಾಟು ಖರೀದಿಸಬಹುದೇ? ಮಕ್ಕಳನ್ನು ಓದಿಸಲು ವಿದೇಶಕ್ಕೆ ಕಳುಹಿಸಬಹುದೇ ಎಂಬ ಹಗಲು ಕನಸಿನೊಂದಿಗೆ ತಮ್ಮ ತಮ್ಮ ದಾರಿ ಹಿಡಿಯುತ್ತಿದ್ದರು.

ಅಂತಹಾ ಸಂಪಾಯಿ ಗುತ್ತಿನ ಅಂಗಳದಲ್ಲಿ ಸುಜ್ಜಾ ನಿಂತಿದ್ದಳು.

'ಓ. ಇದು ಮೈರಕ್ಕನೆ.  ಅವಳು ನೋಡುವುದು ನೋಡಂತೆ. ಕಣ್ಣು, ಹಣೆ, ಮೂಗು, ಮುಸುಂಟು, ನಡೆಯುವುದು. ಮಾತಾಡುದು ಎಲ್ಲಾ ದಿನ್ಸ್ ಅವರದ್ದೆ. ಅವರಷ್ಟು ಚೆಂದದ ಹೆಂಗಸು ಗುತ್ತಿನಲ್ಲಿ ಬೇರೆ ಇರಲಿಲ್ಲ.

ಅವರನ್ನು ಕಾಸ್ರೋಡು ಬದಿಯಡ್ಕಕ್ಕೆ ಕೊಟ್ಟದ್ದಲ್ವಾ. ಆಮೇಲೆ ಗುತ್ತಿನ ಪೊಲ್ಸು ಹೋಯಿತು. ಅವರಿರುವ ವರೆಗೆ ಗುತ್ತಿನಲ್ಲಿ ಬಲೆ,  ಕಸ, ಗೆದ್ದಲು ಇರಲಿಲ್ಲ. ಅವರ ಮಗಳನ್ನು ಗಂಡ ಬೊಂಬಾಯಿಗೆ ಕರ್ಕೊಂಡು ಹೋದ ನಂತರ ಇದ್ದಾರಾ, ಇಲ್ವಾ ಅಂತ ಮನಿಮಂಬು ಇಲ್ಲ.

ಇದು ಮೈರಕ್ಕನ ಪುಲ್ಲಿ ಬಂದದ್ದಾ?. ಈಗ ಸಂಪಾಯಿ ಗುತ್ತಿಗೆ ಪರಿಮಳ ಬಂತು..'

ಸುಜ್ಜಾಳ ಅಜ್ಜಿಯನ್ನು ನೋಡಿದ್ದ, ಸುತ್ತ ನೆರೆದ ಗುತ್ತಿನ ನೆರೆ ಮನೆಯ ಹಿರಿಯ ಹೆಂಗಸರು ಸುಜ್ಜಾಳನ್ನು ಮಾತಾಡಿಸತೊಡಗಿದರು.

ಮರ್ಯಾದೆಯ ದೊಡ್ಡ ಮನೆಯ ಅಮಾಯಕ ಸದ್ಘುಣವಂತ ಹುಡುಗಿಯನ್ನು ಮೋಸ ಮಾಡಿ, ಇಲ್ಲದ ಆಡಂಬರ ತೋರಿಸಿ ಮದುವೆಯಾಗಿ ದಾರಿಯಲ್ಲಿ ಹಾಕಿದಂತೆ, ಇದ್ದೂ ಇಲ್ಲದಂತೆ ಮಾಡಿ ಕೊಂದು ಬಿಟ್ಟೆನಲ್ಲಾ ಎಂದು ಪೊಡಿಯ ಕಣ್ಣೀರು ಇಳಿಸಿದ.

ಅಲ್ಲಿ ಎಲ್ಲರಿಗೂ ಸುಜ್ಜಾಳ ಅಮ್ಮ ನಾಪತ್ತೆಯಾಗಿದ್ದು ದೊಡ್ಡ ಸಮಸ್ಯೆಯಾಗಿತ್ತು.

ಬಲ್ಮೆಯಲ್ಲಿ, ದೈವ ದರ್ಶನದಲ್ಲಿ ‘ಹುಡುಕಾಡುತ್ತಿರುವ ಸಂಸಾರ ಕಳೆದು ಹೋಗಿದೆ. ಚಿಗುರು ಇದೆ ಹುಡುಕಬೇಕು. ಕರೆಸಬೇಕು. ಹದಿನಾರಕ್ಕೆ ಸೇರಿಸಬೇಕು’ ಎಂದು ಕಂಡು ಬರುತ್ತಿತ್ತು. ಆದರೆ ಖಚಿತವಾಗಿ ಸುಜ್ಜಾಳ ಅಮ್ಮ ತೀರಿಕೊಂಡ ಸುದ್ದಿ ಇರದೆ ಯಾವುದಕ್ಕೂ ಅನುಮಾನಿಸುತ್ತಿದ್ದರು. ವರ್ಷ ವರ್ಷ ಎಲ್ಲರೂ ಸೇರಿದಾಗ ‘ಹುಡುಕಬೇಕು... ಹುಡುಕಬೇಕು’ ಎಂದು ಹೇಳಿಕೊಳ್ಳುತ್ತಾ ಮರುದಿನ ಮರೆಯುತ್ತಿದ್ದರು.

ಸುಜ್ಜಾ, ಪೊಡಿಯನ ಆಗಮನ, ವಂಶದ ಕುಡಿ ಇರುವುದು ಅವರಲ್ಲಿ ಕೆಲವರಿಗೆ ಸಂತಸ ನೀಡಿದರೆ. ಇನ್ನು ಕೆಲವರಿಗೆ ಆಸ್ತಿಗೊಬ್ಬಳು ಪಾಲುದಾರೆ ಬಂದ ಕಸಿವಿಸಿ. ಪೊಡಿಯನ ಹೆಂಡತಿಗಾಗಿ ತಿಲಹೋಮ ಮಾಡಿಸಿ, ಪಿಂಡ ಬಿಡಿಸಿ ಕುಟುಂಬದ ಅಗೆಲಿನಲ್ಲಿ ಹದಿನಾರಕ್ಕೆ ಸೇರಿಸುವ ಕೆಲಸವನ್ನು ಮಾಡಿ ಕುಟುಂಬದವರು ಕೃತಾರ್ಥರಾದರು.

ಸುಜ್ಜಾ ಎಲ್ಲದಕ್ಕೂ ಹಾಜರಾದಳು. ಅಮ್ಮನ ನೆನಪಿನಲ್ಲಿ ಕಣ್ಣೀರಾದಳು.

ತಮ್ಮ ಕುಟುಂಬದ ದೋಷವನ್ನೇನೋ ಆ ಗುತ್ತಿನವರು ಕಳೆದುಕೊಂಡರು ಆದರೆ ಸುಜ್ಜಾಳ ಮದುವೆಯ ವಿಚಾರದಲ್ಲಿ ಅವರಲ್ಲಿ ನಿರಾಸಕ್ತಿ ಇತ್ತು.

'ಕೆಡ್ಡಸದ ಮರುದಿನ ದೈವದ ವಾಡಿಕೆ ನೇಮವಿದೆ ಆಗ ಮಗಳನ್ನು ಕರೆದುಕೊಂಡು ಬಾ. ಪರವೂರಿನವರೆಲ್ಲಾ ಬರ್ತಾರೆ. ಹುಡುಗ  ಏನಾದರೂ ಸೆಟ್ ಆಗುತ್ತದಾ ನೋಡುವ' ಎಂದರು.

ಕೆಡ್ಡಸದ ಮರುದಿನ ಪೊಡಿಯ ಸುಜ್ಜಾಳನ್ನು ಕರೆದುಕೊಂಡು ಪದ್ದುವಿನ ಜತೆ ಕಾರ್ಲಕ್ಕೆ ನಡೆದ.

ಗುತ್ತಿನ ಮರ್ಜಿ ನೋಡಿ ಪದ್ದುವಿಗೆ ಏನೋ ಅಸಹಜತೆ ಅನಿಸಿತು. ಮೈ ಜುಮ್ಮೆನಿಸುವ ದೈವದ ಚಾವಡಿ. ಗೌರವದಿಂದ ತಲೆ ತಗ್ಗಿಸುವಂತಹ ನೇಮದ ಕಲ. ಆದರೆ ಇದರ ಹಿರಿಮೆಯೇ  ಅರಿಯದೆ ಎಲ್ಲೆಂದರಲ್ಲಿ ಸ್ವೇಚ್ಚೆಯಿಂದ ತಿರಗಾಡುವ ಗುತ್ತಿನ ಪರವೂರ ಮಂದಿ.

ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ನೇಮದ ದಿನ ಮಧ್ಯಾಹ್ನ ಊಟದ ನಂತರ ನೇಮದ ಕಲದಲ್ಲಿ ಕೆಲಸ ಕಾಲು ಮುರಿದುಕೊಂಡು ಬಿದ್ದಿದ್ದರೂ ನಾಲ್ಕು ಕವರಿನ ಪ್ರಮುಖರ ಇಸ್ಪೀಟು ಕೋಟ್ ಕಲ ಗುತ್ತಿನ ಮೊಗಂಟೆಯಲ್ಲಿ ಬೀಳುತ್ತಿತ್ತು.

'ಅವ ನೇಮ ಕಟ್ಟುವವ ವರ್ಷ ವರ್ಷ ನಿಮಗೆ ಗಡಿ ಆಗುವ ಯೋಗ್ಯತೆ ಇಲ್ಲ ಅಂತ ಹೇಳುವುದು. ಅಧಿಕ ಪ್ರಸಂಗ ಮಾತಾಡಿ ಊರಿನವರ ಮುಂದೆ ನಾಲಿಸ್ ಮಾಡುದಲ್ವಾ? ಈ ಸಲ ಪಾಠ ಕಲಿಸಬೇಕು. ಮುಂದೆ ಗಡಿ ವಿಚಾರ ಎತ್ತಬಾರದು' ಒಂದನೇ ಕವರಿನ ಹಿರಿಯವ ಇಸ್ಪೀಟು ಎಲೆ ಹಂಚುತ್ತಾ ನುಡಿದ.

'ನಾವು ನಾಲ್ಕು ಕವರಿನ ನಾಲ್ಕು ಜನ ತಯಾರಿದ್ದೇವೆ. ಗಡಿ ಯಾರಿಗೆ ನೀನೇ ನಿರ್ಧರಿಸು. ಮುಂದೆ ಯೋಗ್ಯತೆ ಬಗ್ಗೆ ಮಾತು ಬರಬಾರದು ಎಂದು ಮೊಗ ಏರಿದ್ದಾಗಲೆ ಕೇಳುವ. ಅವ ಏನು ಮಾಡ್ತಾನೆ ನೋಡುವ. ಗಡಿ ಮಾಡುವುದು ಅವನಾ, ದೈವವಾ? ದೈವ ನುಡಿಯುವುದಾ? ಕಟ್ಟಿದವ ಹೇಳುವುದಾ ನೋಡುವ'   ಎಂದ.

'ಹಾಗೆ ಕೇಳುವುದೇನೋ ಸರಿ. ನನಗೆ ಬಂದರೆ ನಾನು ಗಡಿ ಆಗುದಿಲ್ಲ. ನನಗೆ ಅದೆಲ್ಲಾ ಆಗುದಿಲ್ಲ'  ಎರಡನೇ ಕವರಿನವ ಅನುಮಾನಿಸಿದ.

'ನಮ್ಮಿಂದ ಕೂಡಾ ಅಗ್ಲಿಕ್ಕಿಲ್ಲ' ಎಂದರು ಉಳಿದ ಎರಡು ಕವರಿನವರು.

'ಮತ್ತೆ ನನ್ನಿಂದ ಆಗ್ತದಾ?

ಕೇಳುವ. ನಮಗೆ ಯೋಗ್ಯತೆ ಇದೆ, ನಾವು ತಯಾರಿದ್ದೇವೆ ಅಂತ ಊರಿನವರಿಗೆ ತೋರಿಸುವ. ಗಡಿ ಆಗುವುದು ಆಮೇಲೆ ಅಲ್ವಾ? ಅಲ್ಲೇ ಅಗಲೇ ಆಗುದಿಲ್ಲ ಅಲ್ವಾ? ತೋರಿಸಿ ಕೊಡುತ್ತೇನೆ ಅಂತ ನೇಮ ಕಟ್ಟಿದವ ಅಷ್ಟೇ ಹೇಳುದಲ್ವಾ? ತೋರಿಸು ಅಂತ ನಾವು ಹೇಳಬೇಕು. ನೇಮ ಕಟ್ಟುವವನ ಬಾಯಿ ಮುಚ್ಚಿಸಬೇಕು ಮತ್ತೆ ಅವ ವರ್ಷ ವರ್ಷ ಯೋಗ್ಯತೆ ಅಂತ ಮಾತಾಡಬಾರದು. ಇವತ್ತು ಅವನಿಗೆ ಏನು ಮಾಡುವುದು ಅಂತ ಗೊತ್ತಾಗಬಾರದು' ಎನ್ನುತ್ತಾ ಇಸ್ಪೀಟು ಗುಲಾಮನನ್ನು 'ತುರ್ಪು ಔಟ್, ಕೋಟ್' ಎನ್ನುತ್ತಾ ಹಿರಿಯ ಕವರಿನವ ಕಲಕ್ಕೆ ಕುಟ್ಟಿದ.

ಕೋಟ್ ಖಚಿತವಾಗಿ ಉಳಿದವರು ಕೈಯಲ್ಲಿದ್ದ ಇಸ್ಪೀಟು ಎಲೆಗಳನ್ನು ಕಲಕ್ಕೆ ಒಗೆದರು.

'ಇವತ್ತು ನೇಮಕಟ್ಟುವವನ ತುರ್ಪು ಔಟ್ ಆಗಬೇಕು' ಎಂದು ಹಿರಿಯ ಕವರಿನವ ನಕ್ಕ.

ಸಲಹೆ ಎಲ್ಲರಿಗೂ ಒಪ್ಪಿಗೆ ಆಯಿತು.

ಕೋಟ್ ಅಟದಲ್ಲಿ ಆಸಕ್ತಿ ಹೊಂದಿದ್ದ ಪದ್ದು ಸಮಯ ಕಳೆಯಲು ಅವರ ಆಟವನ್ನು ಗಮನ ಇಟ್ಟು ವೀಕ್ಷಿಸಿ ಮಾತುಗಳನ್ನು ಕೇಳುತ್ತಿದ್ದ .

'ದೈವದ ಕಾರಣಿಕ ಇವರಿಗೆ ಗೊತ್ತಿಲ್ಲ ಕಾಣ್ಬೇಕು. ಇದು ಪೆದಂಬು ಅಲ್ವಾ?'  ಎಂದು ಪೊಡಿಯನಲ್ಲಿ ಪಿಸುಗುಟ್ಟಿದ.

ಗುತ್ತಿನ ಮನೆಯಿಂದ ಮೆರವಣಿಗೆ ನೇಮದ ಕಲಕ್ಕೆ ಬಂತು. ನೇಮ ವಿಜೃಂಭಿಸತೊಡಗಿತು. ಗಗ್ಗರ, ಹದಿನಾರು ಕಟ್ಟು ಕಟ್ಟಲೆಗಳು ಆರಂಭವಾಯಿತು, ಬಂಡಿ ಬಾಕಿಮಾರಿಗೆ ಇಳಿದು ಹಿಂತಿರುಗಿತು.

ಗುತ್ತಿನ ನಾಲ್ಕು ಕವರಿನವರು ದೈವದ ಮುಂದೆ ನಿಂತರು.

'ನಾವು ನಾಲ್ಕು ಕವರಿನವರು ಇದ್ದೇವೆ. ಗಡಿ ಯಾರಿಗೆ ಅಂತ ಈಗ ನಿಶ್ಚಯ ಆಗಬೇಕು. ಗಡಿ ಆಗಲು ಗುತ್ತಿನಲ್ಲಿ ಜನ ಇಲ್ಲ ಅಂತ ಮಾತು ಇನ್ನು ಮುಂದೆ ಬರ ಬಾರದು' ಎಂದರು.

ದೈವ ನುಡಿ ಕೇಳಲು ಪದ್ದು ಕಾತುರನಾಗಿದ್ದ.

ಅನಿರೀಕ್ಷಿತ ಪ್ರಶ್ನೆ.

ದೈವ ಮುಗುಳು ನಗುತ್ತಾ ಕುಳಿತಲ್ಲೇ ಕಾಲು ಅಲ್ಲಾಡಿಸಿತು.

ಘನ ಘನ ಗಗ್ಗರ ಧ್ವನಿ ವಾತಾವರಣದ ನಿಶ್ಯಬ್ದಕ್ಕೆ ಘನತೆ ಹೆಚ್ಚಿಸಿತು.

ಓ.......

'ಗುತ್ತಿನ ಸಂಸಾರದ ಅಂಗಲಾಪಾ....? ಮಾಯೆಯ ಪರೀಕ್ಷೆಯಾ? ಎರಡಲ್ಲೊಂದು ನಿರ್ಧಾರ ಆಗಲಿ.

ಗುತ್ತಿನವ ಯಾರೆಂದು ಕಟ್ಟಿದ ಮಾನಿ ನಿರ್ಧರಿಸುವುದಲ್ಲ... ಮಾಯೆ ನಿರ್ಧರಿಸುವುದು.  ಯಾರಿಗೆಲ್ಲಾ ಮನಸ್ಸುಂಟು ಮುಂದೆ ಬನ್ನಿ....' ದೈವ ಕಂಚಿನ ಕಂಠದಲ್ಲಿ ಅಬ್ಬರಿಸಿತು.

ದೈವ ಪಿಂಗಾರದ ಎಸಳುಗಳನ್ನು ಹಿಡಿದು ಮೇಲೆ ಹಾರಿಸಿ ಮತ್ತೆ ಹಿಡಿಯಿತು. ಒಂದಷ್ಟು ಎಸಳುಗಳು ಹಾರಿ ದೂರ ಬಿದ್ದವು.

'ಅರೆ ಇದೇನಾಗುತ್ತಿದೆ...'

ದೈವದ ನಡೆಯಿಂದ ಐದು ಮಂದಿಯೂ ತಬ್ಬಿಬ್ಬಾದರು.

'ಯಾರು ಹಿರಿಯ ಕವರಿನ ಸಂಸಾರ ಪುರ್ಪ ಹಿಡಿಯಲಿ'

ಹಿರಿಯ ಕವರಿನವ ಕೈ ಮುಂದೆ ಮಾಡಿದ.

'ಇದು ಬೇಡ ಇತ್ತು,.. ಗ್ರಹಚಾರ ನನಗೇ ಬರ್ತದಾ ಏನಾ?' ಎಂದು ನಡುಗಿದ.

ಪಿಂಗಾರ ಕೈಗೆ ಬಂತು. ನಿಧಾನವಾಗಿ ಒಂದೊಂದೆ ಎಸಳನ್ನು ದೈವ ಸಹಾಯಕ ಹಿಡಿದ ಬಟ್ಟಲಿಗೆ ಹಾಕಿದ. ಕೊನೆಗೆ ಕೈಯಲ್ಲಿ ಎರಡು ಎಸಳು ಉಳಿಯಿತು.

'ಏನಂತೆ ಈ ಸಂಸಾರಕ್ಕೆ ಗಡಿ ಬೇಕಾ?' ದೈವ ಅಬ್ಬರಿಸಿತು.

'ಇಲ್ಲ... ಕಟ್ಟಿ ಬಂದಿದೆ. ಆಗುದಿಲ್ಲ' ಎಂದ ಮಧ್ಯಸ್ಥ

'ಬಡಜೀವ ಬದುಕಿದೆ' ಎಂದು ಹಿರಿಯ ಕವರಿನವ ಬದಿಗೆ ಸರಿದ.

ಉಳಿದ  ಕವರಿನವರೂ ಇದು ತಮ್ಮ ತಲೆಗೆ ಸುತ್ತುತ್ತದ ಏನಾ ಎಂದು ಒಲ್ಲದ ಮನಸ್ಸಿನಿಂದಲೇ ಕೈ ಹಿಡಿದರು.

ಯಾರಿಗೂ ಸರಿ ಬರದೇ ಹೋಯಿತು.

'ಸಂಸಾರದ ಮನಸ್ಸಿನಲ್ಲಿ ಇದ್ದ ಆಸೆ ನೆರವೇರಿತಾ ಹೇಗೆ...?

ಈ ಭೂಮಿಗೆ ಬಿದ್ದ ಪ್ರಾಣಿ ರೂಪ, 
ಪಕ್ಷಿರೂಪ, ಮನುಷ್ಯರೂಪ, 
ಅರಣೆ, ಹಲ್ಲಿ, ಹಾವು, 
ಹೊಟ್ಟೆಯಲ್ಲಿ ಜನನ, 
ಬೆನ್ನಿನಲ್ಲಿ ಮರಣದ 
ಸಮಸ್ತ ಜೀವ ರಾಶಿಗೆ ನೂರು ವರ್ಷ, 
ಐವತ್ತು, ಹತ್ತು, ಎರಡುವರ್ಷ, 
ಒಂದು ದಿನ....

ಓ......

ಆದರೆ ನನಗೆ ಇದೆಲ್ಲಾ 
ರೆಪ್ಪೆ ಅಲುಗಾಟದ ಕ್ಷಣ..

ಈ ಗುತ್ತಿನಲ್ಲಿ ನನ್ನ ಗಡಿ ಹಿಡಿವ ಯೋಗ್ಯತಾವಂತ ಈಗ ಯಾರೂ ಇಲ್ಲ...

ಏನಂತೆ ಸಂಸಾರ?'

ಗಗ್ಗರದ ಧ್ವನಿ ನಿಶ್ಯಬ್ದವನ್ನು ಬೇಧಿಸಿತು.

ದೈವ ನುಡಿಗೆ ಪದ್ದು ರೋಮಾಂಚಿತನಾಗಿದ್ದ.

'ಧರ್ಮದೈವ ಆದಷ್ಟು ಬೇಗ ಗಡಿಗೆ ಜನ ತೋರಿಸ ಬೇಕು' ಎಂದು ಮಧ್ಯಸ್ಥ ಕೈ ಮುಗಿದ.

ದೈವದ ಮುಖದಲ್ಲಿ ನಗು

'ಓ.....

ತೋರಿಸಿ ಎಂದರೆ ತೋರಿಸುವ ದೈವವಲ್ಲ . 
ಬೇಡ ಎಂದರೆ ಬಿಡುವುದೂ ಇಲ್ಲ. 
ನನಗೆ ಅವಸರವೂ ಇಲ್ಲ.
ಅಲವಿನಲ್ಲಿ ನಾನಿಲ್ಲ.
ಹಿತ್ತಾಳೆ, ಕಂಚು, 
ಬೆಳ್ಳಿ, ಬಂಗಾರದಲ್ಲಿ ನಾನಿಲ್ಲ
ಗುಡಿ, ಗೋಪುರಗಳಲ್ಲಿ ನಾನಿಲ್ಲ
ಅವೆಲ್ಲ ನಿಮಗೆ, ನನಗಲ್ಲ.

ಓ....

ಆಕಾಶ ನಾನು, ಪಾತಾಳ ನಾನು, 
ಎಂಟು ದಿಕ್ಕು ನಾನು. 
ಬೀಸುವ ಗಾಳಿ ನಾನು, 
ಸುಡುವ ಬೆಂಕಿ ನಾನು
ಹರಿವ ನೀರು ನಾನು.....

ಏನು ಮದ್ಯಸ್ಥರೇ...?

ಇವೆಲ್ಲಾ ಗಂಡೋ... ಹೆಣ್ಣೋ....?
ಮಾಯೆಯ ಗುಟ್ಟು ಯಾರಿಗಾದರೂ ಗೊತ್ತಾ?'

'ತಿಳಿಯದು ' ಎಂದ ಮದ್ಯಸ್ಥ

ಓ....

'ಹೆಣ್ಣಿಗೆ ಹೆಣ್ಣು ನಾನು.
ಗಂಡಿಗೆ ಗಂಡು ನಾನು. 
ತಂದೆ ನಾನು, ತಾಯಿ ನಾನು. 
ಮೋಕೆ ಮಾಡುವ ತಮ್ಮಲೆ ನಾನು.

ಚರ್ಮ ದೃಷ್ಟಿಗೆ ಇವತ್ತಿಗೆ  ನಿಮಗೆ
ಈ ರೂಪದಲ್ಲಿ ನಾನು  ಗೋಚರ. 
ನನಗೆ ರೂಪವಿಲ್ಲ. ಕೋಪವಿಲ್ಲಾ. ಮತ್ಸರವಿಲ್ಲ..

ಇಂದು ಸಂಸಾರ ನನ್ನ ಪರೀಕ್ಷೆಗೆ ಹೊರಟರೆ 
ಕೈಯ ಎಣ್ಣೆ ಕಣ್ಣಿಗೆ ತಾಗೀತು. 
ತಿಳಿಯದೆ ಮಾಡಿದ ತಪ್ಪು ಮಾತ್ರ ಅಲ್ಲ. 
ತಿಳಿದು ಮಾಡಿದ ತಪ್ಪನ್ನೂ ಕ್ಷಮಿಸುವ  ಮಾಯೆ ನಾನು
ಸಂಪಾಯಿ ಗುತ್ತಿನ ಮಣ್ಣಿನ ಪರಿಮಳಕ್ಕೆ ಯಜಮಾನ ಯಾರು? ನಾನು ನಿರ್ಧರಿಸುತ್ತೇನೆ.
ಮಾಯೆಯ ಮುಂದೆ ಮಕ್ಕಳಾಟ ಬೇಡ....

ಏನು ಸಂಸಾರ... ಗೋಚಾರ ಆಗುತ್ತದಲ್ವಾ...?'

ನಾಲ್ಕು ಕವರಿನವರು ತಲೆ ತಗ್ಗಿಸಿದರು...

ಮಾಯೆಯ ತುರ್ಪ್ ಔಟ್ ಮಾಡಲು ಮನುಷ್ಯರಿಂದ ಸಾಧ್ಯವೇ?

ಪದ್ದು ದೈವ ನಿರ್ಣಯಕ್ಕೆ ಮನದಲ್ಲೆ ನಮಿಸಿದ.

ಮುಂದಿನ ವಾರಾಂತ್ಯದಲ್ಲಿ : ಭಾಗ್ಯದ ಸೊತ್ತು

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ