17. ಅರೆ ಮಡಲು ಬಡಿದು ಹುಲಿ ಓಡಿಸಿದರು..

ಪೆದಂಬು ನರಮಾನಿ (ಕಾದಂಬರಿ ಭಾಗ - 17)

ProfileImg
02 Mar '25
4 ನಿಮಿಷದ ಓದು


image

'ಪಪ್ಪಾ.... ಪಪ್ಪಾ ಯಾರೋ ದನದ ವ್ಯಾಪಾರಿಗಳಂತೆ' ಪೊಲೀಸ ಜೋರಾಗಿ ಹೇಳಿದ.

'ಅಂಗಳಕ್ಕೆ ಬರಲು ಹೇಳು' ಉತ್ತರ ಬಂತು..

'ಬನ್ನಿ... ಅಂಗಳಕ್ಕೆ ಹೋಗಿ' ಎಂದ ಪೊಲೀಸ ಅಂಗಳದಲ್ಲಿದ್ದ ಬೈಕ್ ಏರಿ ಹೊರಟು ಹೋದ.

ನಾಯಿಗಳನ್ನು ನಿವಾರಿಸಿ ಉಗ್ರಾಣಿಯ ಅಂಗಳಕ್ಕೆ ಬರುವಾಗ ಅಡಿಕೆ ಸಿಪ್ಪೆ ಸುಲಿಯುತ್ತಾ ಮುದುಕನೊಬ್ಬ ಬಾಯಿ ಅಗಲಿಸಿ ಪ್ರಶ್ನಾರ್ಥಕವಾಗಿ ನೋಡಿದ...

'ಮಾರುವ ದನ ಇಲ್ಲ. ಈಗ ಇರುವ ಕಬೆತಿ ಒಳ್ಳೆ ಹಾಲು ಕೊಡುತ್ತಾಳೆ.. ಅದನ್ನು ಮಾರುವುದಿಲ್ಲ..' ಎಂದ ಮುದುಕ ಉಗ್ರಾಣಿ ಎದ್ದು ನಿಂತ.

ಪೊಡಿಯನನ್ನು ಸೂಕ್ಷ್ಮ ವಾಗಿ ದಿಟ್ಟಿಸಿ

'ಏಯ್ ನೀನು ಪೊಡಿಯನಲ್ವಾ.. ಎಲ್ಲಿ ಹೋದದ್ದು ಮಾರಾಯಾ...? ಹೋಗುವುದು ಅಂದರೆ ಹೋಗುವುದೆಯಾ... ಬದುಕಿದ್ದೇನೆ... ಸತ್ತಿದ್ದೇನೆ ಅಂತ ಹೇಳುವುದು ಬೇಡವಾ...?

ಈಗ ನಿನ್ನದು ದನದ ಬೇರವಾ? ಗಂಗಸರ ಬೇಯಿಸುವುದು ಬಿಟ್ಟು ಬಿಟ್ಟಿಯಾ?' ಎಂದು ನಗುತ್ತಾ ಮನೆಯೊಳಗೆ ಕರೆದುಕೊಂಡು ಹೋದ.

ಪದ್ದು ಮೌನವಾಗಿ ಹಿಂಬಾಲಿಸಿ ಅವರ ಸಂಭಾಷಣೆ ಕೇಳತೊಡಗಿದ.

' ನಾನು ಓಡಿಹೋದವ ಅಲ್ವಾ? ನಿಮ್ಮ ಮನೆಯ ಮುಂದೆ ಪೊಲೀಸ್ ನೋಡಿ ಹಾಗೆ ಹೇಳಿದೆವು' ಎಂದ ಪೊಡಿಯ.

'ಅವ ಚಿಕ್ಕ ಮಗ ಮಾರಾಯ. ನೀನು ನೋಡಿಲ್ವಾ? ಆಗ ಇಷ್ಟುದ್ದ ಇದ್ದ. ವರ್ಷ ಇಪ್ಪತ್ತು ಆಯಿತಲ್ವಾ. ನೋಡಿ ಹೆದರಿದ್ಯಾ ಹೇಗೆ?' ಉಗ್ರಾಣಿ ಬೊಚ್ಚು ಬಾಯಿ ಬಿಟ್ಟು ನಕ್ಕ.

‘ಮನೆಗೆ ಹೋಗಬಹುದಾ?’ ಪೊಡಿಯ ಪ್ರಶ್ನಿಸಿದ.

‘ಏಯ್... ಏನು ಹೋಗದೆ. ಅಲ್ಲಿ ಎಲ್ಲಾ ಪರಿಸ್ಥಿತಿ ಬದಲಾಗಿದೆ. ಅವರು ಮಾಡಿದ ನಾಟಕ ಜಾಸ್ತಿಯಾಯ್ತ. ನಿನ್ನ ಕೇಸು ಯಾವಾಗಲೋ ಬಿದ್ದು ಹೋಗಿದೆ. ಬಿದ್ದು ಹೋಗಿದೆ ಅಂತ ಹೇಳುವುದಕ್ಕಿಂತ ಕೇಸೇ ಆಗಿಲ್ಲ. ತನಿಖೆ ನಡೆಸುವುದಾದರೂ ಯಾರು?

ಹಿಂದಿನ ಕಾಲದಲ್ಲಿ ಮನೆ, ಹಟ್ಟಿ ಗೆ ಬಾಗಿಲು ಇರಲಿಲ್ಲ. ಹುಲಿಗೆ ಹೆದರಿ‌ ಜನ ಬಾಗಿಲ ಜಾಗದಲ್ಲಿ ತಾಳೆಮರದ ಅರೆಮಡಲು ಅಡ್ಡ ಕಟ್ಟುತ್ತಿದ್ದರು. ಹುಲಿ ಬಂದರೆ ಅರೆಮಡಲಿನ ಬರ ಬರ ಸದ್ದು ಕೇಳಿಯೇ ಹೆದರಿ ಓಡಲಿ ಅಂತ. ಹಾಗಾಯಿತು ನಿನ್ನ ಕತೆ.

ಅರೆಮಡಲ್ ಬಡಿದು ಹುಲಿ ಓಡಿಸಿದ ಹಾಗೆ ಅಂತಾರಲ್ಲಾ ಹಾಗೆ ಸುಮ್ಮನೆ ನಿನ್ನನ್ನು ಹೆದರಿಸಿ ಓಡಿಸಿದ್ದಾರೆ.

ನೀನು ಪಾಲಾಗಬೇಕು ಅಂತ ಚೊರೆಪಟ್ ಮಾಡಿದ್ದರಿಂದ ಈಗ ಅವರವರಿಗೆ ತುಂಡು ಭೂಮಿಯಾದರು ಹೆಸರಿಗೆ ಉಂಟು. ಈಗಾದ್ರೆ ಅದೂ ಕಷ್ಟ ಇತ್ತು. ನೀನು ಹುಲಿಯಂತೆ ಇದ್ದೆ ಪೊಡಿಯ. ನರಮಾನಿ ಪೆದಂಬು  ಅಂತ‌ ಮುರ್ಯೆ ತಿಂದರೂ ಅವ ಇಲ್ಲದಿದ್ದರೆ ಮಾತ್ರ ಅವನ ಬೆಲೆ ಗೊತ್ತಾಗುದು.'

‘ನೀನೊಬ್ಬ ಬೆಪ್ಪ, ಇದ್ದೇನೆ ಅಂತ ಒಂದು ಸುದ್ದಿ ನನಗೆ ಹೇಳಿದ್ದರೆ ಸಾಕಿತ್ತು. ನೀನು ಸತ್ತಿದ್ದಿ ಅಂತ ನಿನ್ನ ಎರಡು ಕಲಸೆ ಗದ್ದೆ ಅವರ ಹೆಸರಿಗೆ ಮಾಡುವುದಕ್ಕೆ ನೋಡಿದ್ದರು. ನಾನು ಬಿಡಬೇಕಲ್ಲಾ. ಪಂಚನಾಮೆ ಮಾಡಲು ನನ್ನ ಸಹಾಯ ಬೇಕಲ್ಲ. ಹಾಗೆಲ್ಲಾ ಸಾಯುವ ಜನ ಪೊಡಿಯ ಅಲ್ಲ. ಅವ ಇದ್ದಾನೆ. ಬರುತ್ತಾನೆ ಅಂತ ತಡೆ ಮಾಡಿದೆ.

ಹೆಂಡತಿ ಮಗಳನ್ನು ಕರೆದುಕೊಂಡು ಹೋಗಿದ್ದಿ ಅಂತ ಸುದ್ದಿ. ಬೊಂಬಾಯಲ್ಲಿ ತೂಟೆ ಹಿಡಿದು ಹುಡುಕಿದರೂ ಸಿಗಲಿಲ್ಲ. ಇಷ್ಟು ಸಮಯ ಎಲ್ಲಿದ್ದೆ?' ಉಗ್ರಾಣಿ ಪ್ರಶ್ನಿಸಿದ.

'ನಾನು ಬೊಂಬಾಯಿ ಟಿಕೇಟು ತೋರಿಸಿದ್ದು ಮಾತ್ರ. ಕಾರ್ಲದಿಂದ ಹೆಂಡತಿ ಮಕ್ಕಳನ್ನು ಬೊಂಬಾಯಿಗೆ ಕರೆದುಕೊಂಡು ಹೋಗುತ್ತೇನೆ ಅಂತ ಮನೆಯವರಿಗೆ ಟಿಕೇಟು ತೋರಿಸಿ ಹೋದದ್ದು ಸುರತ್ಕಲಿಗೆ. ಮತ್ತೆ ಬೊಂಬಾಯಲ್ಲಿ ಸಿಗುವುದು ಎಲ್ಲಿ?' ಪೊಡಿಯ ನಗುತ್ತಾ ಹೇಳಿದ.

'ತಪ್ಪಿಸುದರಲ್ಲಿ ನೀನು ಹುಶಾರ್ ಮಾರಾಯಾ. ಕೇಸು ಟೈಟ್ ಆಗಿದ್ದಿದ್ರೆ ಸುರತ್ಕಲ್ ನಿಂದ ಕೈಕಾಲು ಕಟ್ಟಿ ತರುದಕ್ಕೆ ಪೊಲೀಸರಗೇನೂ ಹೊತ್ತು ಇತ್ತಾ? ನಿನ್ನ ಗ್ರಹಚಾರದಲ್ಲಿ ಹಾಗೆ ಬರೆದಿರಬೇಕು. ಶನಿ ಬರ್ತಾನೆ ಅಂತ ಈಶ್ವರ ಬೆದ್ರ್ ಪುಂಡೆಯೊಳಗೆ ಅಡಗಿದ್ದ ಅಂತೆ.

ಈಗ ನಿಮ್ಮ ಮನೆಯವರಿಗೆ ನಿನ್ನದೆ ಜಪ. ಅವರ ಆಸ್ತಿ ಪಾಲು ಮಾಡುವುದಕ್ಕೆ ನಿನ್ನ ಸಹಿ ಬೇಕು. ನೀನು ನಾಪತ್ತೆ.

ದೈವ ಒಂದೇ ಹೇಳುವುದು ನೀನು ಜೀವದಲ್ಲಿ ಇದ್ದಿ ಅಂತ. ಬಡಗು ದಿಕ್ಕಿನಲ್ಲಿ ಇದ್ದಿ,  ನಿನ್ನನ್ನು ತರಿಸುತ್ತೇನೆ ಅಂತ. ಇಲ್ಗಿಗೆ ಬಡಕಾಯಿ ಅಂದ್ರೆ ಬೊಂಬಾಯಿಯೂ ಹೌದು, ಸುರತ್ಕಲ್ಲೂ ಹೌದು ಅಲ್ವಾ?

ಕಳೆದ ವರ್ಷ ದರ್ಶನ ಮಾಡಿಸಿದ್ದರು. ಒಂದು ವರ್ಷದಲ್ಲಿ ತರಿಸುತ್ತೇನೆ ಅಂತ ದೈವ ಅಭಯ ನೀಡಿತ್ತು. ನೀನು ಬಂದು ಬಿಟ್ಟೆ... ದೈವ ಉಂಟು ನೋಡು...'

ಉಗ್ರಾಣಿಯ ಮಾತಿಗೆ ಪೊಡಿಯ, ಪದ್ದು ನಿಟ್ಟುಸಿರು ಬಿಟ್ಟರು.

ನಿನ್ನಲ್ಲಿ ಕಾಳಗ ಮಾಡುತ್ತಿದ್ದಾರಲ್ಲಾ ಅವರೆಲ್ಲಾ ಈಗ ಯಾರೂ ಇಲ್ಲ. ಈಗ ಅವರ ಮಕ್ಕಳ ಕಾರುಬಾರು. ಬೇಸಾಯ ಮಾಡುವುದಕ್ಕೆ ಜನ ಇಲ್ಲ. ಪಾಲಿಗೆ ಬಂದ ಅಂಗೈ ಅಗಲ ಜಾಗದಲ್ಲಿ ಬೇಸಾಯ ಎಂತ ಕರ್ಮ? ಮನೆಯ ಕಾಳಗದಿಂದ ರೋಸಿ ಎಲ್ಲಾ ಮನೆ ಬಿಟ್ಟು ಮುಂಬಾಯಿ, ಕಾಸರಗೋಡು, ಬೆಂಗಳೂರು ಅಂತ ಇದ್ದಾರೆ. ನಿನ್ನ ಚಿಕ್ಕಪ್ಪನ ಮಗ ಒಬ್ಬ ಹುಡುಗ ಇದ್ದಾನಲ್ಲಾ ಅವ ಎಲ್ಲಾ ಬೇಸಾಯ ಅದು ಇದು ಅಂತ ಮಾಡ್ತಾ ಇದ್ದಾನೆ. ಜನ ಒಳ್ಳೆಯವ. ‘ದೊಡ್ಡಪ್ಪನ್ನು ಒಮ್ಮೆ ಹುಡುಕಿ ಕೊಡಿ ಉಗ್ರಾಣಿಯಣ್ಣಾ’ ಅಂತಾನೇ ಇದ್ದಾನೆ. ಬೇರೆ ಯಾವುದಕ್ಕೂ ಅಲ್ಲ. ನಿನ್ನ ಗದ್ದೆ ಇಲವರಿ ಮಾಡುವ ಅಂತ ಮತ್ತೆಂತ ಕರ್ಮ?. ನೀನೇ ಬಂದಿಯಲ್ಲ. ಮಗಳನ್ನು ಕರ್ಕೊಂಡು ಬಾ ಜಾಗ ಅವಳ ಹೆಸರಿಗೆ ಮಾಡುವ’ ಎಂದ ಉಗ್ರಾಣಿ.

ಪದ್ದುವಿನ ಜತೆ ಪೊಡಿಯ ತನ್ನ ಹಳೆಯ ಮನೆಯ ದಾರಿ ಹಿಡಿದ.

ಸಣ್ಣ ಪುಟ್ಟ ಬದಲಾವಣೆಗಳನ್ನು ಬಿಟ್ಟು ಉಳಿದಂತೆ ಒಂದು ಚೂರೂ ಬದಲಾಗದೆ ಮನೆಯ ಪರಿಸರ ಇತ್ತು. ಮೂರುನಾಲ್ಕು ಪಾಲಿನ ಮನೆಗಳಲ್ಲಿ ಮೂರು ಮನೆಗಳ ಮುಂದೆ ಬೀಗ ನೇತಾಡುತ್ತಿತ್ತು. ಅವುಗಳಿಗೆ ಹೋಗುವ ದಾರಿ ಹಾಗೇ ಇತ್ತು, ಅಂದು ಸಣ್ಣದಿದ್ದ ತೆಂಗಿನ ಮರಗಳು ದೊಡ್ಡದಾಗಿ ಫಲ ಬಿಡುತ್ತಿದ್ದವು.

ನಾಯಿಯ ಆರ್ಭಟ ಕೇಳಿದ ಪೊಡಿಯನ ಚಿಕ್ಕಪ್ಪನ ಕಿರಿಯ ಮಗ ನಾಗೇಶ ಮನೆ ಕಡೆ ಧಾವಿಸಿ ಬಂದ. ಅಪರಿಚಿತರನ್ನು ಕಂಡು ಪ್ರಶ್ನಾರ್ಥಕವಾಗಿ ನೋಡಿದ.

‘ಪೊಡಿಯಾಮ.... ನಿನ್ನ ದೊಡ್ಡಪ್ಪನ ಮಗ... ನೆನಪುಂಟಾ...?’ ಪದ್ದು ಪ್ರಶ್ನಿಸಿದ.

‘ಓಹೋ... ಹೋ... ಪೊಡಿಯಣ್ಣ.... ನೀವು ಹೋಗುವಾಗ ನಾನು ಕಾಲೇಜಿಗೆ ಹೋಗುತ್ತಿದ್ದೆ, ಬನ್ನಿ ಬನ್ನಿ... ಮೊನ್ನೆ ಪತ್ತನಾಜೆ ದರ್ಶನದಲ್ಲಿ ದೈವ ಹೇಳಿತು. ಒಂದು ವರ್ಷದೊಳಗೆ ದೇಶಾಂತರ ಹೋದವ ಬರುತ್ತಾನೆ ಅಂತ... ದೈವ ಕರೆಸಿತು... ಬನ್ನಿ... ಬನ್ನಿ...’ ಎನ್ನುತ್ತಾ ಮನೆಯೊಳಗೆ ಕರೆದುಕೊಂಡು ಹೋದ.

ನಾಗೇಶನ ಅಮ್ಮ, ಹೆಂಡತಿ ಯಾರು ಎನ್ನುವಂತೆ ಅಡುಗೆ ಕೋಣೆಯಿಂದ ಹೊರಗೆ ಬಂದರು. ‘ಇವರು ಅಮ್ಮ... ಅಣ್ಣ... ಪೊಡಿಯಣ್ಣ....’ ಎಂದ ನಾಗೇಶನ ಮಾತು ಕೇಳಿ ಅಮ್ಮನ ಮುಖ ಅರಳಿತು.

ಮಾತನಾಡುತ್ತಿದ್ದಂತೆ ನಾಗೇಶನ ಹೆಂಡತಿ ಬೆಲ್ಲನೀರು. ಲಿಂಬೆ ಶರಬತ್ತು ಎಲ್ಲಾ ತಂದಿಟ್ಟಳು.

‘ನಿಮ್ಮ ಪಾಲಿನ ಡಾಕ್ಯುಮೆಂಟಿಗೆ ನಿಮ್ಮ ಸಹಿ ಒಂದೇ ಬಾಕಿ ಅಣ್ಣ. ಎಲ್ಲ ಸರಿಯಾದರೆ ಕಾಸರಗೋಡು, ಮುಂಬೈ, ಬೆಂಗಳೂರು ಅಂತ ಹೋದವರು ದೈವಕ್ಕೆ ಅಂತ ಒಂದಿಷ್ಟು ಉಳಿಸಿ ಉಳಿದದ್ದು ಮಾರುವ ಅಂತಾ ಇದ್ದಾರೆ.

ನಿಮ್ಮ ಎರಡು ಕಲಸೆ ಗದ್ದೆ ಇದೆಯಲ್ಲಾ. ಅದನ್ನು ನನಗೇ ಕೊಡಿ ಅಣ್ಣ. ಹೇಗೂ ಮಗಳ ಮದುವೆ ಖರ್ಚಿಗೆ ಆಗುತ್ತದೆ. ಹೆಚ್ಚೇನೂ ಕೊಡುದಕ್ಕೆ ನನ್ನಲ್ಲಿ ಇಲ್ಲ. ಮತ್ತೆ ನೀವು ಬಂದಿದ್ದೀರಿ ಅಂತ ಪೊಲೀಸರಿಗೆ ಗೊತ್ತಾದರೆ ಕಷ್ಟ...’ ಅನ್ನುತ್ತಾ ನಾಗೇಶ ಮೆಲ್ಲಗೆ ನಾಲಗೆ ಕಚ್ಚಿದ.

ಪೊಡಿಯ ನಾಗೇಶನ ಮುಖ ದಿಟ್ಟಿಸಿದ. ನಾಗೇಶ ಅಪರಾಧಿಯಂತೆ ತಲೆ ತಗ್ಗಿಸಿದ.

‘ಅದೂ ಹೌದು. ಮತ್ತೆ ಪೊಲೀಸರು ಬಂದರೆ ನನ್ನನ್ನು ಜೈಲಿಗೆ ಹಾಕಿದರೆ ನನ್ನ ಗದ್ದೆಗೆ ಗತಿ ಇಲ್ಲ ಅಂತ ಆಗ್ತದೆ. ಇಪ್ಪತ್ತು ವರ್ಷ ಕಳೆದರೂ ಅದೇ ಹಳೆಯ ಬುದ್ದಿ ಮಾತ್ರ ಹೋಗಿಲ್ಲ... ಪೊಲೀಸರ ಬುದ್ದಿ.... ಅವರು ಬಂದೇ ಬರುತ್ತಾರೆ...’ ಪೊಡಿಯ ಎಸೆದ ಬಾಣ ನಾಗೇಶನಿಗೆ ನಾಟಿತು. ಪದ್ದು ತಲೆ ದೂಗಿದ.

ನಾಗೇಶನ ಬಾಯುಪಚಾರದ ಮಾತುಗಳನ್ನು ಕೇಳಿದ ಪೊಡಿಯನಿಗೆ ಸುಜ್ಜಾಳಿಗೆ ಇಲ್ಲಿ ಗಂಡು ಹುಡುಕುವುದಕ್ಕೆ ಯಾವುದೇ ಸಹಾಯ ಆಗಲಿಕ್ಕಿಲ್ಲ ಎಂದು ಅನಿಸಿತು.

ಪೊಡಿಯ ಪದ್ದುವಿನ ಜತೆ ಎರಡು ಬೆಳೆ ತೆಗೆಯುತ್ತಿದ್ದ, ಧಾನ್ಯ ಮಾಡುತ್ತಿದ್ದ ತನ್ನ ಎರಡು ಕಲಸೆ ಗದ್ದೆಯನ್ನು ವೀಕ್ಷಿಸಿದ. ಗದ್ದೆ ಹಾಗೇ ಇತ್ತು ನಾಗೇಶ ಬೇಸಾಯ ಮಾಡುತ್ತಿದ್ದ.

‘ಇನ್ನು ಆಗಾಗ ಬರ‍್ತಾ ಇರ‍್ತೇನೆ ನಾಗೇಶ.. ಗದ್ದೆ ಬೇಸಾಯ ನಾನೇ ಮಾಡ್ತೇನೆ’ ಪೊಡಿಯ ಮಾತು ಕೇಳಿ ನಾಗೇಶ ಬೆಚ್ಚಿ ಬಿದ್ದ.

‘ಮತ್ತೆ... ಮತ್ತೆ... ಪೊಲೀಸರು...’ ನಾಗೇಶ ನುಡಿದ.

ಪೊಡಿಯ ಪದ್ದುವಿನ ಕಡೆ ಕೈ ತೋರಿಸಿದ. ‘ಅರೆ ಮಡಲ ಸದ್ದಿಗೆ ಈಗ ಬೆಲೆ ಇಲ್ಲ... ಇವ ಇದ್ದಾನಲ್ಲ ಸಾಮಾನ್ಯನಲ್ಲ ಇವನ ಮಾವ ಕೇರಳದ ಡಿಐಜಿ ಆಗಿದ್ದಾರೆ. ಅದಕ್ಕೇ ಅವನನ್ನು ಕರೆದುಕೊಂಡು ಬಂದದ್ದು. ಯಾವ ಪೊಲೀಸ ಬರ‍್ತಾನೋ ನೋಡುವ...’ ಎಂದು ರೈಲು ಬಿಟ್ಟ. ಪದ್ದು ಮನಸ್ಸಿನ ಒಳಗೇ ನಕ್ಕ.

ನಾಗೇಶನ ವರ್ತನೆ ಆಮೇಲೆ ಬದಲಾಗಿತ್ತು. ಅನ್ಯಮನಸ್ಕನಾಗಿ ಪೊಡಿಯನ ಜತೆ ಮಾತನಾಡುತ್ತಿದ್ದ.

ಮನೆಯ ಒಳಗಿದ್ದ ದೈವಗಳಿಗೆ ಅಡ್ಡ ಬಿದ್ದು ಜಾಗದ ದೈವ ನಾಗಗಳಿಗೆ ವಂದಿಸಿದ ಪೊಡಿಯ ‘ಇನ್ನು ಹೊರಡುವ ಪದ್ದು’ ಎಂದ.

ಪೊಡಿಯ ಜಮೀನು ಮೂರು ಕಾಸಿಗೆ ಒಳಗೆ ಹಾಕಲು ನೋಡಿದ ನಾಗೇಶ ಅದು ಫಲಿಸದೇ ಇದ್ದದ್ದರಿಂದ ನಿರಾಶನಾಗಿ ‘ಊಟ ಮಾಡಿ ಹೋಗಿ ಎಂದು ಮನಸ್ಸಿಲ್ಲದ ಮನಸ್ಸಿನಲ್ಲಿ ಒತ್ತಾಯಿಸುತ್ತಾ’ ಪೊಡಿಯ, ಪದ್ದುವನ್ನು ಬೀಳ್ಕೊಂಡ.

ಮಂಜೇಶ್ವರದಲ್ಲಿ ನಿರಾಸೆಗೊಂಡ ಪೊಡಿಯನಿಗೆ ತನ್ನ ಮೇಲೆ ಕೇಸು ಇಲ್ಲ ಎಂಬು ವಿಚಾರವೊಂದೇ ಸಂತಸ ನೀಡಿತ್ತು.

ಪದ್ದುವನ್ನು ಕರೆದುಕೊಂಡು ಸುಜ್ಜಾಳ ತಾಯಿ ಮನೆಯಿಂದ ಏನಾದರೂ ಸಹಾಯ ಸಿಗುವುದೋ ಎಂದು ಕಾರ್ಲದ ಕಡೆ ನಡೆದ.


ಮುಂದಿನ ಭಾಗ : ಗಡಿ ಇಲ್ಲದ ಗುತ್ತು

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ