11 - ಮೂಸೆಲ

ಪೆದಂಬು ನರಮಾನಿ (ಕಾದಂಬರಿ ಭಾಗ - 11)

ProfileImg
01 Feb '25
4 ನಿಮಿಷದ ಓದು


image

ವರ್ಷದ ಕೊನೆಯ ನಾಟಿಯ ದಿನ.

ಜಿಟಿ ಜಿಟಿ ಮಳೆ.

ದೋಗಣ್ಣ ಪನೊಲಿ ತಲೆಗಿಟ್ಟುಕೊಂಡು ನಾಟಿ ಹೆಂಗಸರನ್ನು ಹುರಿದುಂಬಿಸುತ್ತಿದ್ದ.

ನಾಟಿ ಹೆಂಗಸರ ಹಿಂದೆ ಮಳೆಯಲ್ಲಿ ನೆನೆಯುತ್ತಾ ಉಳಿದೆಲ್ಲಾ ನೇಜಿ ಪಸರಿಸಿ ಮುಗಿಸಿ ಮನೆಗೆ ಬಂದ ಪದ್ದು ಕೈಕಾಲು ತೊಳೆದು, ಮೈ ಒರಸಿ ಗೇಣುದ್ದದ ಒಂದು ಫುಲ್ ಲೋಟ ಬಿಸಿ ಬಿಸಿ ಚಹಾ ಹಿಡಿದುಕೊಂಡು ಮನೆಯ ಮೊಗಂಟೆಯಲ್ಲಿ ಬೇಸಾಯ ಮುಗಿಯುವ ಆ ದಿನ ಕಲೆಂಬಿಯಿಂದ ತೆಗೆದ ಚೆನ್ನಮಣೆಯ ಮುಂದೆ ಕುಳಿತು ಜತೆಗಾರರಿಲ್ಲದೆ ಒಬ್ಬನೇ ಕಾಯಿ ಆಡಿಸುತ್ತಿದ್ದ.

ಮಳೆ ನೀರು ಮೊಗಂಟೆಗೆ ಬೀಸದಂತೆ ತೆಂಗಿನ ಮಡಲಿನ ಗಿಡ್ಕೆ ಅದರ ನಡುವೆ ಸಣ್ಣ ಕಿಟಕಿ.

ಅಂಗಳದಲ್ಲಿ ಹರಡಿದ ಹಾವಸೆಗೆ ಕಾಲು ತಾಗದಂತೆ ಮಂದ ಗಮನೆಯಾಗಿ ಬಣ್ಣದ ಕೊಡೆ ಹಿಡಿದು ಬರುವ ಹುಡುಗಿ ಕಾಣಿಸಿಕೊಂಡಳು. ಮೊಗಂಟೆ ಪ್ರವೇಶಿಸಿ ಕೊಡೆ ಮಡಚಿ, ಗಿಡ್ಕೆಯ ಸಂದಿನಲ್ಲಿ ನೇತಾಡಿಸಿದಳು.. ಕೈ ಹಣೆ, ಗಲ್ಲ, ತಲೆಯಲ್ಲಿದ್ದ ನೀರಿನ ಬಿಂದುಗಳನ್ನು ಕೊಡವಿ ಕೊಂಡಳು...

‘ಓಹೋ ಸುಜ್ಜ... ಬಾ... ಬಾ. ಈ ಮಳೆಗೂ ಚಹಾದ ವಾಸನೆ ನಿನಗೆ ಹೇಗೆ ಬರ‍್ತದೆ ಮಾರಾಯಿತಿ. ಅಷ್ಟು ಹೊತ್ತಿಗೆ ರೆಡಿಯಾಗುತ್ತಿ... ಬಾ... ಬಾ ಒಂದಾಟ ಚೆನ್ನೆ ಆಡುವ’ ಪದ್ದು ಸುಜ್ಜಾಳ ಕಡೆ ನೋಡಿ ನಕ್ಕ.

‘ಹೋಗ... ನಿನ್ನ ಚಹಾ ವಾಸನೆಗೆ ನಾನು ಬಂದದ್ದು ಅಲ್ಲ ಆಯ್ತಾ’ ಎನ್ನುತ್ತಾ ಮುಖ ಊದಿಸಿಕೊಂಡು ಪದ್ದುವಿನ ಮುಂಭಾಗದಲ್ಲಿ ಕುಳಿತಳು ಸುಜ್ಜ.

ದೇವಕಿ ಒಂದು ಲೋಟ ಚಹಾದ ಜತೆ ಕಾಯಿಸಿದ ಹಲಸಿನ ಹಪ್ಪಳ ತಂದಿಟ್ಟು ‘ನಿನಗೆ ಇಲ್ಲಿ ಚಹಾಕ್ಕೆ ಕಡಿಮೆ ಏನೂ ಇಲ್ಲ ಮಗಾ. ನೀನು ಬರ‍್ತಿ ಅಂತ ಗೊತ್ತಿತ್ತು’ ಅಂದರು.

‘ಇವತ್ತು ಯಾರು ಗಟ್ಟ ಹತ್ತುವುದು ನೋಡುವ...’ ಎಂದು ಪದ್ದು ಚೆನ್ನೆ ಮಣೆಯ ಗುಳಿಯಲ್ಲಿ ಕಾಯಿ ಹರಡಿದ.

ಚೆನ್ನೆ ಆಟ ಆರಂಭವಾಯಿತು.

‘ಪದ್ದು ನಿನಗೆ ಒಂದು ವಿಷಯ ಗೊತ್ತಾ ಅವ ಪ್ರಕಾಶ ಇದ್ದಾನಲ್ಲಾ... ಅವ ನನ್ನನ್ನು ಲವ್ ಮಾಡುತ್ತಾನಂತೆ...’ ಅಂದಳು ಸುಜ್ಜ.

‘ಲವ್ವಾ...? ಅವನಾ? ಮೀಸೆ ಬೋಳಿಸಿ, ತಲೆಯ ಹಿಂದೆ ಹೆಗಲವರೆಗೆ ಹಿಪ್ಪಿ ಬಿಟ್ಟು ಓಂತಿಯಂತಿದ್ದಾನಲ್ಲ ಪ್ರಕಾಶ.. ಬಹಳ ಪೊರ್ಲು ಇದ್ದಾನೆ ಮಾರಾಯ್ತಿ. ನಿನ್ನ ಪುಣ್ಯ.

ನಿನ್ನ ಚೆಂದ ನೋಡಿದ್ರೆ ನನಗೇ ಲವ್ ಮಾಡ್ಬೇಕು ಅಂತ ಅನಿಸ್ತದೆ. ಅವ ಮೊನ್ನೆ ಮುಂಬೈಯಿಂದ ಬಂದ ಅಲ್ವಾ.. ಅವನ ಕಣ್ಣು ನಿನ್ನ ಮೇಲೆ ಬಿತ್ತಾ... ಮಾಡು ಮಾಡು ಲವ್ ಮಾಡು... ಮದುವೆ ಆದ ಮೇಲೆ ಮುಂಬೈಗೆ ಕೆನರಾ ಪಿಂಟೋ ಬಸ್ಸು ಟಿಕೇಟು ನಾನೇ ಮಾಡಿಸಿ ಕೊಡ್ತೇನೆ...’ ಕಾಯಿ ಆಡಿಸುತ್ತಲೇ ಪದ್ದು ನಗುತ್ತಾ ನುಡಿದ.

‘ಎಬೇ... ಅವನಾ? ಅವ ಗಂಡಸೂ ಅಲ್ಲ, ಹೆಂಗಸೂ ಅಲ್ಲ... ಅವನನ್ನು ಯಾರು ಮದುವೆ ಆಗ್ತಾರೆ...’ ಸುಜ್ಜ ಮುಖ ಕಿವಿಚಿದಳು.

‘ಅವ ಗಂಡಸಲ್ವಾ? ಮತ್ತೆ ಗಂಡಸು ಅಂದ್ರೆ ಯಾರು?’ ಪದ್ದು ಕೆಣಕಿದ.

‘ಗಂಡಸು ಅಂದ್ರೆ ನಿನ್ನ ಹಾಗೆ ಇರಬೇಕು..’ ಚೆನ್ನೆ ಮಣೆಯ ಬುಲೆ ಹೆಕ್ಕುತ್ತಾ ಸುಜ್ಜ ನುಡಿದಳು.

‘ಹಾಗಾದರೆ ನನ್ನನ್ನೇ ಲವ್ ಮಾಡು’ ಎಂದ ಪದ್ದು.

‘ಎಬೇ... ನೀನಾ..? ನೀನೊಬ್ಬ ಕೋರ‍್ದಟ್ಟದ ಕುಡ್ಚೆಲ...’ ಸುಜ್ಜ ಕಿಲ ಕಿಲ ನಕ್ಕಳು.

ಪದ್ದು ಸುಜ್ಜಾ ಕಿವಿ ಹಿಡಿದ.

‘ಕುಡ್ಚೆಲ ನಾನಲ್ಲ ನಿನ್ನ ಪೊಪ್ಪ ಪೊಡಿಯ. ಊರಿಗೆಲ್ಲಾ ತೊಟ್ಟೆ ಕುಡಿಸುತ್ತಾನೆ. ಇಪ್ಪತ್ತ ನಾಲ್ಕು ಗಂಟೆ ಕುಡಿತಾನೆ ಇರ‍್ತಾನೆ. ಅವನ ರಕ್ತದಲ್ಲಿ ಹಿಮೋಗ್ಲೋಬಿನ್ ಇಲ್ಲ ಆಯ್ತಾ... ಗಂಗಸರ... ಆಲ್ಕೋಹಾಲ್ ಇರುವುದು ಗೊತ್ತಾ? ಮತ್ತೆ ಕೋರ‍್ದಟ್ಟ ಮಾಡುವುದು ನಾನಾ? ಗಡಂಗಿನ ಬಳಿ ನಿನ್ನ ಪೊಪ್ಪ ಮಾಡುವುದಲ್ವಾ?’ ಎಂದ.

ಸುಜ್ಜ ಕಿವಿ ಬಿಡಿಸುತ್ತಾ ‘ನನಗೆ ನಿಮ್ಮೆಲ್ಲರ ಮೇಲೆ ಮೋಕೆ, ಅಕ್ಕರೆ ಅಷ್ಟೆ... ಮಂಜೊಟ್ಟಿ ಗುತ್ತಿನ ಹುಡುಗರಿಗೆ ಗುತ್ತಿನ ರಾಜಕುಮಾರಿ ಬರ‍್ತಾಳೆ... ನಮ್ಮದೇನಿದ್ದರೂ ಕರಬಿಸಲೆ ತೊಳೆಯುವುದೇ ಕೆಲಸ. ಮತ್ತೆ ನಾನು ನಿನ್ನನ್ನು ಲವ್ ಮಾಡಿದ್ರೆ ಮಾಮಿ ಕುಂಟಿಮೈಪಲ್ಲಿ ಹೊಡೆದಾರು’ ಎಂದಳು.

‘ಇಲ್ಲ, ಅಮ್ಮನಿಗೆ ನಿನ್ನ ಮೇಲೆ ಮೋಕೆ ಇದೆ. ಚಾ, ಹಪ್ಪಳ ತಂದು ಇಟ್ಟದ್ದಲ್ವಾ...?’ ಎಂದ ಪದ್ದು.

‘ಅದು ನಿನ್ನ ಅಮ್ಮ ಅಲ್ವಾ...? ನೀನು ಹೊಗಳದೆ ಬೇರೆ ಯಾರು ಹೊಗಳುವುದು...?’ ಎಂದಳು ಸುಜ್ಜ.

ಪದ್ದು ಮತ್ತೆ ಆಕೆಯ ಕಿವಿ ಹಿಡಿಯಲು ಮತ್ತೆ ಬಗ್ಗಿದ.

ತಪ್ಪಿಸಿಕೊಂಡ ಸುಜ್ಜ ‘ನೋಡು. ಅವ ಲವ್ ಲೆಟರ್ ಕೊಟ್ಟಿದ್ದಾನೆ..’ ಎಂದಳು.

‘ಹೌದಾ...? ಏನು ಬರ‍್ದಿದ್ದಾನೆ...?’ ಪದ್ದು ಕುತೂಹಲಗೊಂಡ.

‘ನಾನು ಓದಿಲ್ಲ... ನೀನೇ ಓದು.. ’ ಎಂದು ಪತ್ರ ಪದ್ದುವಿನ ಕೈಗೆ ಕೊಟ್ಟಳು.

‘ಇನ್ನೊಬ್ಬರ ಲವ್ ಲೆಟರ್ ನಾನು ಯಾಕೆ ಓದಬೇಕು..?’ ಪದ್ದು ಪತ್ರ ಹಿಂತಿರುಗಿಸಿದ.

‘ಇಲ್ಲ ಪದ್ದು ನಾನು ಲವ್ ಮಾಡ್ತಾ ಇಲ್ಲ. ಮತ್ತೆ ನಾನ್ಯಾಕೆ ಓದ್ಬೇಕು?. ಅವನ ಉಪದ್ರ ಹೆಚ್ಚಾಗಿದೆ ಏನಾದ್ರೂ ಮಾಡ್ಬೇಕಲ್ಲ.. ನನಗೆ ಸಹಾಯ ಮಾಡು’ ಸುಜ್ಜ ಮ್ಲಾನ ವದನಳಾಗಿ ನುಡಿದಳು.

ಪದ್ದು ಪತ್ರ ಬಿಡಿಸಿ ಓದತೊಡಗಿದ. ಪ್ರಕಾಶ ತನ್ನನ್ನು ತಾನು ಆಕಾಶಕ್ಕೆ ಏರಿಸಿ ಬರೆದಿದ್ದ. ಸುಜ್ಜಳನ್ನು ತುಸು ಕೀಳಾಗಿ ಒಕ್ಕಣಿಸಿ, ನೀನು ಗತಿ ಇಲ್ಲದ ಹುಡುಗಿ. ನಿನಗೆ ನಾನೇ ಗತಿ ಎನ್ನುವಂತೆ ಬರೆದಿದ್ದ. ಉತ್ತರಿಸು ಎಂದು ಮುಗಿಸಿದ್ದ.

ಪದ್ದುವಿಗೆ ಪ್ರಕಾಶನ ಮೇಲೆ ಇನ್ನಿಲ್ಲದ ಸಿಟ್ಟು ಬಂತು.  ಇನ್ನೊಂದು ಹುಡುಗಿಯನ್ನು ಅದು ಕೂಡಾ ಸುಜ್ಜಾಳನ್ನು ಕೀಳಾಗಿ ಕೆಣಕಿ ಬರೆದ ಅವನಿಗೆ ಸರಿಯಾದ ಬುದ್ದಿ ಕಲಿಸಬೇಕು ಎಂದು ಭಾವಿಸಿದ.

‘ಸುಜ್ಜ. ನೀನು ಲವ್ ಮಾಡುತ್ತಿಲ್ಲ ತಾನೇ. ಹಾಗಿದ್ದರೆ ನಾನು ಬುದ್ದಿ ಕಲಿಸುತ್ತೇನೆ. ನಿನಗೆ ಯಾರೂ ಇಲ್ಲ ಎಂದು ಭಾವಿಸಬೇಡ, ನಾವೆಲ್ಲಾ ಇಲ್ವಾ? ಎಂದ ಪದ್ದು.

‘ಇಲ್ಲ ಪದ್ದು ಅವನ ಪೀಡೆ ತೊಲಗಿದರೆ ಸಾಕು’ ಎಂದಳು ಸುಜ್ಜ.

ಮರು ದಿನ ಪದ್ದು ಒಂದು ಲಕೋಟೆ ತಂದು ಸುಜ್ಜಳ ಕೈಗೆ ಕೊಟ್ಟ. ‘ಇದನ್ನು ಅವನಿಗೆ ಕೊಡು ಸಾಕು ಅವ ಮತ್ತೆ ನಿನ್ನ ಕಡೆ ಕಣ್ಣೆತ್ತಿ ನೋಡುವುದಿಲ್ಲ’ ಎಂದ.

ಅಂದೇ ಸಂಜೆ ಸುಜ್ಜ ಪ್ರಕಾಶನಿಗೆ ಲಕೋಟೆ ಹಸ್ತಾಂತರಿಸಿದಳು. ಪ್ರಕಾಶ ಹುಡುಗಿ ಬುಟ್ಟಿಗೆ ಬಿತ್ತು ಅಂತ ಹಿಗ್ಗಿದ.

ಮನೆಗೆ ಹೋದ ಪ್ರಕಾಶ ಲಕೋಟೆ ಬಿಚ್ಚಿದ. ಅದರ ಒಳಗೆ ಮಡಿಸಿದ ಒಂದು ಕಾಗದ ಇತ್ತು.

‘ಪ್ರಿಯಾ, ನಮ್ಮ ಪ್ರೀತಿ ಹೃದಯದಿಂದ ಆರಂಭವಾಗಲಿ. ನೀನು ಇದರ ಪರಿಮಳವನ್ನು ಮೂಸಿ ಪತ್ರ ಬಿಡಿಸು’ ಎಂದು ಅದರ ಮೇಲೆ ಬರೆದಿತ್ತು.

ಪ್ರಕಾಶ ಹಿಗ್ಗುತ್ತಾ ಮಡಿಸಿದ ಪತ್ರ ಹಿಡಿದು ಚೆನ್ನಾಗಿ ಮೂಸಿ ಬಿಟ್ಟ.

ತಕ್ಷಣ ‘ಅಯ್ಯೋ’ ಎಂದು ಕೂಗಿದ ಕೆಳಕ್ಕೆ ಬಿದ್ದು ವಿಲ ವಿಲ ಒದ್ದಾಡತೊಡಗಿದ. ಒಂದೇ ಸವನೆ ಸೀನತೊಡಗಿದ. ನಿಂತಲ್ಲಿ ನಿಲ್ಲಲಾರದೆ ಚಡಪಡಿಸತೊಡಗಿದೆ. ಮನೆಯವರು ಓಡಿ ಬಂದರು. ಪ್ರಕಾಶ ತೇಲುಗಣ್ಣು ಬಿಡುತ್ತಿದ್ದ. ನೆರೆ ಮನೆಗೆ ಕರೆ ಹೋಯಿತು.

ಅಲ್ಲಿ ಬೇಕೆಂದೇ ಠಳಾಯಿಸುತ್ತಿದ್ದ ಪದ್ದು ಓಡಿ ಬಂದ. ರಿಕ್ಷಾ ಮಾಡಿಸಿ ಆಸ್ಪತ್ರೆಗೆ ಸಾಗಿಸಿದ. ಅಷ್ಟು ಹೊತ್ತಿಗೆ ಪ್ರಕಾಶ ಪ್ರಜ್ಞಾಶೂನ್ಯನಾಗಿದ್ದ.

ಪ್ರಕಾಶನ ಮನೆಯಲ್ಲಿ ಜನ ಸೇರಿದ್ದರು. ಆತ ಮೂಸಿದ ಪತ್ರ ಬಿಡಿಸಿ ನೋಡಿದರೆ. ಅದರಲ್ಲಿ ಏನೋ ಬಿಳಿ ಪುಡಿ ಕಂಡು ಬಂದಿತ್ತು.

‘ಮೂಸಿ ಬಿಡಿಸು’ ಎಂಬ ಒಕ್ಕಣೆಯ ಖಾಲಿ ಪತ್ರ ಎಲ್ಲರನ್ನೂ ಆಕರ್ಷಿಸಿತು.

ಮೊದಲೇ ಹೆಣ್ಣು ಮಕ್ಕಳಿದ್ದಲ್ಲಿ ಮೂಸುವ ಅವನ ಚಾಳಿ ಗೊತ್ತಿದ್ದ ಜನರು ‘ಅವ ಮೂಸಿ ಆಸ್ಪತ್ರೆ ಸೇರಿದ’ ಎಂದರು.

ಒಂದೆರಡು ಗಂಟೆ ಆಕ್ಸಿಜನ್ ಮೂಗಿಗೆ ಇಟ್ಟ ಮೇಲೆ ಆತನ ಶ್ವಾಸ ಕೋಶ ಸೇರಿದ್ದ ತುರಿಕೆ ಪೌಡರ್ ಕೆಮಿಕಲ್ ತಮ್ಮ ಪ್ರಭಾವ ಕಳೆದುಕೊಂಡಿತು. ಪ್ರಕಾಶ ನಾಚುತ್ತಾ ಮನೆಗೆ ಬಂದ.

ಮರುದಿನದಿಂದ ಅವನನ್ನು ನೋಡಿದ ಕೂಡಲೇ ಎಲ್ಲರೂ ‘ಓಹೋ ಮೂಸೆಲ’ ಎಂದು ಕರೆಯತೊಡಗಿದರು.

ಮೂಸೆಲ ಹೆಸರು ಪ್ರಕಾಶನಿಗೆ ಶಾಶ್ವತವಾಯಿತು.

ಮುಂದಿನ ಭಾಗದಲ್ಲಿ : *ನಡು ರಾತ್ರಿ ಕಿರುಗೆಜ್ಜೆ ಧ್ವನಿ*

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Ravindra Shetty

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ