ll ಬದುಕೇ ನಿನ್ನುತ್ತರ ll
ಜನ್ಮಕೊಟ್ಟ ಭೂಮಿಯಿಲ್ಲಿ ಗೆದ್ದಕಥೆ ನೂರಾರಿದೆ
ಪ್ರತಿ ಗೆಲುವಿನ ಹಿಂದೆ ಹಲವು ಏಳುಬೀಳಿದೆ
ಬೀಳುತ ನೀನೆದ್ದು ನಿಲ್ಲು ಗಟ್ಟಿತನವು ನಿನ್ನದೇ
ಆತ್ಮ ಬಲವು ನಿನ್ನದೇ ಗುರಿಯ ದಾರಿ ತೋರಿದೆ
ಗೆಲುವ ಬೆಲೆ ಕಂಡವನು ನೋವು ನಲಿವು ಅರಿತವನು
ಸೋತು ಸೋತು ಗೆಲ್ಲುತ ಇತಿಹಾಸವ ಬದಲಿಪನು
ಸೋಲು ಗೆಲುವು ಎಂಬುದು ನಾಣ್ಯದೆರಡು ಮುಖಗಳು ಶಿಸ್ತು ತಾಳ್ಮೆ ಸಂಯಮ ಇರಲಿ ಎಂದು ಬದುಕಿನೊಳು ll
ಬದುಕಿನ ಈ ಪುಸ್ತಕದಿ ಪುಟಗಳು ನೂರಾರಿದೆ
ಪ್ರತಿಯೊಂದು ಪುಟದಲೂ ತನದೇ ಹೆಜ್ಜೆಗುರುತಿದೆ
ಸೋಲುವ ಪ್ರತಿ ಹೆಜ್ಜೆಯಲ್ಲೂ ಗೆಲುವ ಛಾಪು ಮೂಡಿದೆ
ನೋವಿನ ಪ್ರತಿ ಹೆಜ್ಜೆಯ ಜೊತೆ ನಲಿವು ಹೆಜ್ಜೆ ಹಾಕಿದೆ ll
ಎಡರು ತೊಡರುಗಳನು ಮೆಟ್ಟಿ ಮುಂದೆ ಸಾಗಬೇಕಿದೆ
ನೋವಿನಲ್ಲಿ ಕುಗ್ಗದೇ ನಲಿವಿನಲ್ಲಿ ಹಿಗ್ಗದೆ
ಅಡಿಯ ಮುಂದೆ ಇಡುತಲಿರು ಕ್ಷಣಮಾತ್ರ ಜಗ್ಗದೇ ದಿಟ್ಟತನದಿ ಸಾಗುತಲಿರು ಗೆಲುವು ಮುಂದೆ ನಿನ್ನದೇ ll
ಅಂದು ಪ್ರಶ್ನೆ ಮಾಡಿದವಗೆ ಮೌನವೇ ನೀನ್ನುತ್ತರ
ತಲೆ ಎತ್ತಿ ಏರಬೇಕು ಗೌರಿಶಿಖರದೆತ್ತರ
ಗುರುಹಿರಿಯರ ಹಾರೈಕೆ ದೈವವೇ ಕೊಟ್ಟವರ
ಮರೆಯದಿರು ಹೆತ್ತವರ ತೊರೆಯದಿರು ನಿನ್ನ ತವರ ll
ಉತ್ತರ ನಿನಗುತ್ತರ ನಿನ ಬದುಕೇ ನಿನಗುತ್ತರ
ಏರು ನೀ ಬಾನೆತ್ತರ ಶ್ರಮಿಸುತಿರು ನಿರಂತರ
ಮರೆಯದಿರು ಆಶೋತ್ತರ ಬದುಕಾಗಲಿ ಸುಂದರ
ಗುರಿಯ ಕಡೆಗೆ ಎಚ್ಚರ ಏಳ್ಗೆ ಉತ್ತರೋತ್ತರ ||
✍🏻 ವಿಜಯಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು