ಯೂಟ್ಯೂಬ್‌ ಬಗ್ಗೆ ಆಶ್ಚರ್ಯಕರ ಮಾಹಿತಿ !

ಯೂಟ್ಯೂಬ್‌‌ನಲ್ಲಿ ಒಟ್ಟಾರೆ ಎಷ್ಟು ವಿಡಿಯೋಗಳಿವೆ ಗೊತ್ತಾ ? ಒಟ್ಟು ಎಷ್ಟು ಚಾನಲ್ ಇವೆ ಗೊತ್ತಾ ?



image

ಜಗತ್ತಿನ ಅತಿ ದೊಡ್ಡ ವೀಡಿಯೊ ಭಂಡಾರ ಎಂದರೆ ಅದುವೇ ಯೂಟ್ಯೂಬ್. ಈ ಸಾಮಾಜಿಕ ಜಾಲತಾಣದ ಬಗ್ಗೆ ನಿಮಗೆ ತಿಳಿಯದ ವಿಷಯಗಳು ಮತ್ತು ಒಂದಷ್ಟು ಸ್ವಾರಸ್ಯಕರ ಮಾಹಿತಿಗಳು ಈ ಲೇಖನದಲ್ಲಿ ತಿಳಿಸುವ ಪ್ರಯತ್ನ ಮಾಡಿದ್ದೇನೆ. ನಿಜಕ್ಕೂ ಈ ಮಾಹಿತಿ‌ ನಿಮ್ಮನ್ನು ಆಶ್ಚರ್ಯ ಚಕಿತರನ್ನಾಗಿ‌ ಮಾಡುವುದರಲ್ಲಿ ಸಂದೇಹವಿಲ್ಲ ಎಂಬ ನಂಬಿಕೆಯಲ್ಲಿ ನಾನಿದನ್ನು ಬರೆದಿದ್ದೇನೆ.‌

ಹೌದು, ಅನೇಕ ಹೊಸ ಹೊಸ ಫೀಚರ್ಸ್‌ಗಳಿಂದ ಯೂಟ್ಯೂಬ್ ತನ್ನ ಚಂದಾದಾರರನ್ನು ಇನ್ನಿಲ್ಲದಂತೆ ಸೆಳೆದಿಟ್ಟುಕೊಂಡಿದೆ. ಯೂಟ್ಯೂಬ್ ಹುಟ್ಟಿದಾಗಿನಿಂದ ಈವರೆಗೂ ಅದಕ್ಕೆ ಕಾಂಪಿಟೇಷನ್ ಅನ್ನೋದೇ ಇಲ್ಲಾ. ಏಕೆಂದರೆ ಯಾವುದೇ ವೀಡಿಯೊ ನೋಡಬೇಕೆಂದರೆ ಶೇ 99.99% ರಷ್ಟು ಜನರು ಈ ದೈತ್ಯ ಸಂಸ್ಥೆಯಾದ ಯೂಟ್ಯೂಬ್ ನಲ್ಲೇ ಹುಡುಕಾಟ ನಡೆಸುತ್ತಾರೆ. ಹೀಗೆ ಎಲ್ಲರೂ ಯೂಟ್ಯೂಬ್ ಮೇಲೆ ಅವಲಂಬಿತರಾಗಿರುವ ಕಾರಣ ಇದಕ್ಕೆ ಕಾಂಪಿಟೇಷನ್ ಕಡಿಮೆ.

ಅತ್ಯಂತ ಹಳೆಯದಾಗಲಿ, ಹೊಚ್ಚ‌ಹೊಸದಾಗಲಿ ಯಾವುದೇ ಚಿತ್ರಗೀತೆಗಳು ಸೇರಿದಂತೆ ಅನೇಕ ವೀಡಿಯೊ ಪ್ರಕಾರಗಳು ಯೂಟ್ಯೂಬ್ ನಲ್ಲಿ ಲಭ್ಯವಿದೆ.‌ ಇವೆಲ್ಲಾ ಯೂಟ್ಯೂಬ್ ನ ಮೇಲ್ನೋಟದ ವಿಷಯಗಳು. ಇದರ ಒಳಗೆ ಸುಳಿದರೆ ಏನೇನೆಲ್ಲಾ ಇದೆ ಎಂಬುದನ್ನು ಮುಂದೆ ಓದಿ.

ಯೂಟ್ಯೂಬ್ ಚಾನಲ್‌ಗಳು ಮತ್ತು ಚಂದಾದಾರರು

ಗೆಳೆಯರೇ,  ಈ ಯೂಟ್ಯೂಬ್ ನಲ್ಲಿ ಒಟ್ಟು 114 ಮಿಲಿಯನ್ (ಅಂದರೆ 11 ಕೋಟಿಗೂ ಹೆಚ್ಚು) ಸಕ್ರಿಯ ಚಾನಲ್‌ಗಳಿವೆ ಎಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಯೂಟ್ಯೂಬ್ ವಿಶ್ವದಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಒಟ್ಟು 2.6 ಬಿಲಿಯನ್ (ಅಂದರೆ 260 ಕೋಟಿ) ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ದಿನವೊಂದಕ್ಕೆ 122 ಮಿಲಿಯನ್ (ಅಂದರೆ 12.2 ಕೋಟಿ) ಸಕ್ರಿಯ ಬಳಕೆದಾರರನ್ನು ಯೂಟ್ಯೂಬ್ ಹೊಂದಿದೆ. ಅಲ್ಲದೇ ವಿಶ್ವದ ಬೇರೆ ಬೇರೆ 80ಕ್ಕೂ ಹೆಚ್ಚಿನ ಭಾಷೆಗಳ ವೀಡಿಯೊಗಳು ಲಭ್ಯವಿದೆ.

ಮೇಲೆ ತಿಳಿಸಿದಂತೆ ಒಟ್ಟು 11 ಕೋಟಿ‌ ಚಾನಲ್‌ಗಳ ಪೈಕಿ 3.21 ಲಕ್ಷ ಚಾನಲ್‌ಗಳು 1 ಲಕ್ಷ ಅಥವಾ ಅದಕ್ಕಿಂತ ಅಧಿಕ ಚಂದಾದಾರರನ್ನು (Subscribers) ಹೊಂದಿವೆ. ಚೀನಾ, ಉತ್ತರ ಕೊರಿಯಾ, ಇರಾನ್, ಎರಿಟ್ರಿಯಾ ಮತ್ತು ತುರ್ಕಮೆನಿಸ್ತಾನ್ ಈ ಐದು ದೇಶಗಳಲ್ಲಿ ಯೂಟ್ಯೂಬ್ ಅನ್ನು ನಿಷೇಧಿಸಲಾಗಿದೆ.

ಯೂಟ್ಯೂಬ್ ವೀಡಿಯೊಗಳು ಮತ್ತು ಬಳಕೆ

ಸಾಮಾನ್ಯವಾಗಿ ಬಳಕೆದಾರರು ದಿನದಲ್ಲಿ ಸರಾಸರಿ 19 ನಿಮಿಷಗಳನ್ನು ಯೂಟ್ಯೂಬ್‌ನಲ್ಲಿ ಕಳೆಯುತ್ತಾರೆ. SEMrush ಎಂಬ ಸಂಸ್ಥೆಯೊಂದು ನಡೆಸಿದ ಸಂಶೋಧನೆಯ ಪ್ರಕಾರ ಜನರು ಅತ್ಯಧಿಕವಾಗಿ ಬಳಸುವ ವಿಶ್ವದ ಎರಡನೇ ವೆಬ್‌ಸೈಟ್ ಯೂಟ್ಯೂಬ್ ಆಗಿದೆ. ಮೊದಲನೆಯದು ಗೂಗಲ್.

ವಿಶ್ವದಾದ್ಯಂತ ಕಾರ್ಯಾಚರಿಸುವ ಯೂಟ್ಯೂಬರ್ಸ್‌ಗಳಿಂದ ಪ್ರತಿ ನಿಮಿಷಕ್ಕೆ ಸರಾಸರಿ 2500 ಹೊಸ ವೀಡಿಯೊಗಳು ಅಪ್‌ಲೋಡ್ ಆಗುತ್ತವೆ. ಇದು ಒಟ್ಟು 183 ಗಂಟೆಗಳ ವೀಡಿಯೊಗಳಾಗಿದ್ದು ಸರಾಸರಿ ಒಂದು ವೀಡಿಯೊ 4.4 ನಿಮಿಷಗಳಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ. ಇದೇ ರೀತಿ ಗಂಟೆಗೆ 1.5 ಲಕ್ಷ ವೀಡಿಯೊಗಳು, ಒಂದು ದಿನಕ್ಕೆ ಸುಮಾರು 36 ಲಕ್ಷ ಹೊಸ ವೀಡಿಯೊಗಳು ಯೂಟ್ಯೂಬ್‌ಗೆ ಅಪ್‌ಲೋಡ್ ಆಗುತ್ತವೆ. ಇದು ಸರಾಸರಿ 4.4 ನಿಮಿಷಗಳ ಅವಧಿಯನ್ನು ಆಧರಿಸಿ ಸುಮಾರು 271,330 ಗಂಟೆಗಳ ವೀಡಿಯೊ ಎಂದು ಹೇಳಬಹುದಾಗಿದೆ.

2022 ರ ಅಂಕಿ ಅಂಶದ ಪ್ರಕಾರ ಜಾಗತಿಕವಾಗಿ ಜನರು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಗಳಲ್ಲಿ ಶೇ. 10.5% ರಷ್ಟು ಮಾತ್ರ  ಯೂಟ್ಯೂಬ್ ಬಳಸುತ್ತಾರೆ. ಉಳಿದ ಶೇ 89.5% ರಷ್ಟು ಜನರು ಸ್ಮಾರ್ಟ್‌ಫೋನ್ ಮೂಲಕ ಯೂಟ್ಯೂಬ್ ಗೆ ಪ್ರವೇಶಿಸುತ್ತಾರೆ. ಯೂಟ್ಯೂಬ್‌ನಲ್ಲಿ ಸಂಗೀತದ ವೀಡಿಯೊಗಳು ಅತ್ಯಂತ ಜನಪ್ರಿಯ ವೀಡಿಯೊ ಪ್ರಕಾರಗಳಾಗಿವೆ.


ಯೂಟ್ಯೂಬ್ ಶಾರ್ಟ್ಸ್

2020 ರಲ್ಲಿ ಪರಿಚಯಿಸಿದ ಯೂಟ್ಯೂಬ್ ಶಾರ್ಟ್ಸ್ ಕೂಡ ತ್ವರಿತವಾಗಿ ಬೆಳೆದಿದೆ. ಶಾರ್ಟ್ಸ್‌ಗಳು ಒಂದು ದಿನಕ್ಕೆ ಬರೊಬ್ಬರಿ 30 ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಆಕರ್ಷಿಸುತ್ತವೆ.
 

ಯೂಟ್ಯೂಬ್ ನಲ್ಲಿರುವ ಒಟ್ಟು ವೀಡಿಯೊಗಳ ಅಂಕಿಅಂಶ

ಯೂಟ್ಯೂಬ್ ನಲ್ಲಿ ಒಟ್ಟು ಕನಿಷ್ಟ 800 ಮಿಲಿಯನ್ (80 ಕೋಟಿ) ವೀಡಿಯೊಗಳಿವೆ ಎಂದು ಹೇಳಲಾಗಿದ್ದರೂ (ಸರಾಸರಿ ಒಂದೊಂದು ವೀಡಿಯೊ ಉದ್ದ 11.7 ನಿಮಿಷಗಳು) ನಿರಂತರವಾಗಿ ಹೊಸ ಹೊಸ ವೀಡಿಯೊಗಳು ಅಪ್‌ಲೋಡ್ ಆಗುವುದರಿಂದ ನಿಖರವಾಗಿ ಇಷ್ಟೇ ವೀಡಿಯೊಗಳಿವೆ ಎಂದು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಯೂಟ್ಯೂಬ್‌ನಲ್ಲಿರುವ ಎಲ್ಲಾ 80 ಕೋಟಿ ವೀಡಿಯೊಗಳನ್ನು ವೀಕ್ಷಿಸಬೇಕಾದರೆ ಬರೊಬ್ಬರಿ 900.36 ಕೋಟಿ ನಿಮಿಷಗಳು ಬೇಕು. ಗಂಟೆಗಳಲ್ಲಿ ಹೇಳುವುದಾದರೆ 15.6 ಕೋಟಿ ಗಂಟೆಗಳು ಮತ್ತು ದಿನಗಳಲ್ಲಿ ಹೇಳುವುದಾದರೆ 65 ಲಕ್ಷ ದಿನಗಳು ಹಾಗೂ ವರ್ಷಗಳಲ್ಲಿ ಲೆಕ್ಕ ಹಾಕಿದರೆ 17,810 ವರ್ಷಗಳ ಸತತ ವೀಕ್ಷಣೆ ನಡೆಸಬೇಕು.


ಅತಿ ಹೆಚ್ಚು ವೀಕ್ಷಣೆ ಹೊಂದಿರುವ ವೀಡಿಯೊ

ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿರುವ ವೀಡಿಯೊ 'ಬೇಬಿ ಶಾರ್ಕ್ ಡ್ಯಾನ್ಸ್'. ಇದು 14 ಶತಕೋಟಿ ವೀಕ್ಷಣೆಗಳನ್ನು ಪಡೆದಿದ್ದು ಮಕ್ಕಳಿಗಾಗಿ ಮಾಡಲಾಗಿರುವ 'ಬೇಬಿ ಶಾರ್ಕ್ - ಪಿಂಕ್‌ಫಾಂಗ್ ಕಿಡ್ಸ್' ಸಾಂಗ್ಸ್ ಅಂಡ್ ಸ್ಟೋರೀಸ್ ಎಂಬ ಚಾನಲ್‌ ಅಪ್‌ಲೋಡ್ ಮಾಡಿರುವ ವೀಡಿಯೊ ಇದಾಗಿದೆ.

ಅತಿ ಹೆಚ್ಚು ಸಬ್‌ಸ್ಕ್ರೈಬರ್ಸ್ ಹೊಂದಿರುವ ಚಾನಲ್‌ಗಳು

'ಟಿ-ಸಿರೀಸ್' ವಿಶ್ವದಲ್ಲೇ ಅತ್ಯಧಿಕ ಸಬ್‌ಸ್ಕ್ರೈಬರ್ಸ್ ಹೊಂದಿರುವ ಚಾನಲ್. ಇದರಲ್ಲಿ 262 ಮಿಲಿಯನ್ (26.2 ಕೋಟಿ) ಚಂದಾದಾರರಿದ್ದಾರೆ. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಿಸ್ಟರ್ ಬೀಸ್ಟ್(MrBeast) ಎಂಬ ಚಾನಲ್ ಎರಡನೇ ಸ್ಥಾನದಲ್ಲಿದ್ದು ಇದು 247 ಮಿಲಿಯನ್ (24.7 ಕೋಟಿ) ಸಬ್‌ಸ್ಕ್ರೈಬರ್ಸ್ ಹೊಂದಿದೆ.

ಮೂರನೇ ಸ್ಥಾನದಲ್ಲಿ ಕೊಕೊಮೆಲನ್ - ನರ್ಸರಿ ರೈಮ್ಸ್ ಎಂಬ ಚಾನಲ್ ಇದ್ದು ಇದು 173 ಮಿಲಿಯನ್ (17.3 ಕೋಟಿ) ಹಾಗೂ PewDiePie ಎಂಬ ಚಾನಲ್ 111 ಮಿಲಿಯನ್ (11.1ಕೋಟಿ) ಸಬ್‌ಸ್ಕ್ರೈಬರ್ಸ್ ಹೊಂದುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ..


SEMRush ಸಂಸ್ಥೆಯ ಸಂಶೋಧನೆಯ ಪ್ರಕಾರ ಶೇ 82% ಜನರು ಯೂಟ್ಯೂಬ್ ಅನ್ನು ಮನರಂಜನೆಯ ಮೂಲವಾಗಿ ಬಳಸುತ್ತಾರೆ. 18% ಜನರು ಇದನ್ನು ನಿರ್ದಿಷ್ಟವಾಗಿ ಬ್ರ್ಯಾಂಡ್‌ಗಳು ಮತ್ತು ಕಂಪನಿಗಳನ್ನು ಫಾಲೋ ಮಾಡಲು ಬಳಸುತ್ತಾರೆ. 30 ರಿಂದ 49 ವರ್ಷ ವಯಸ್ಸಿನ ಶೇ 37% ರಷ್ಟು‌ಬಳಕೆದಾರರು ಯೂಟ್ಯೂಬ್ ಅನ್ನು ಸುದ್ದಿ ಮೂಲವಾಗಿ ಬಳಸುತ್ತಾರೆ.

ಜಗತ್ತಿನ ಮೊದಲ ಯೂಟ್ಯೂಬರ್ ಮತ್ತು ಮೊದಲ ವೀಡಿಯೊ

ಜಾವೇದ್ ಕರೀಮ್ ಎಂಬುವರು ಜಗತ್ತಿನ ಮೊದಲ ಯೂಟ್ಯೂಬರ್ ಆಗಿದ್ದಾರೆ. ಇವರು  ಯೂಟ್ಯೂಬ್‌ನ ಸಂಸ್ಥಾಪಕರೂ ಆಗಿದ್ದರು. ಇವರು 18 ವರ್ಷಗಳ ಹಿಂದೆ ಏಪ್ರಿಲ್ 23, 2005 ರಂದು ಮೊಟ್ಟಮೊದಲ ವೀಡಿಯೊವನ್ನು ಅಪ್‌ಲೋಡ್ ಮಾಡಿದರು. ಇದಕ್ಕೆ ಮೀ ಅಟ್ ದಿ ಝೂ ಎಂಬ ಟೈಟಲ್ ನೀಡಿದ್ದು ಈ ವೀಡಿಯೊಗೆ ಒಟ್ಟು 314 ಮಿಲಿಯನ್ (31.4 ಕೋಟಿ) ವೀಕ್ಷಣೆಗಳಾಗಿದೆ.

ಅತ್ಯಂತ ಶ್ರೀಮಂತ ಯೂಟ್ಯೂಬರ್ ಇವರು

ಫೋರ್ಬ್ಸ್ ಪ್ರಕಾರ ಕಳೆದ ವರ್ಷ 'ಮಿಸ್ಟರ್ ಬೀಸ್ಟ್' 54 ಮಿಲಿಯನ್ ಡಾಲರ್ ಪಾವತಿಯೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾರೆ. ಇವರು ಜೇಕ್ ಪಾಲ್ ($45 ಮಿಲಿಯನ್), ಮಾರ್ಕಿಪ್ಲಿಯರ್ ($38 ಮಿಲಿಯನ್) ರೆಟ್ ಮತ್ತು ಲಿಂಕ್ ($30 ಮಿಲಿಯನ್) ಮತ್ತು ಅನ್ಸ್ಪೀಕಬಲ್ ($28.5 ಮಿಲಿಯನ್) ಅವರುಗಳನ್ನು ಹಿಂದೆ ಬಿಟ್ಟು ಅತಿ ಹೆಚ್ಚು ಹಣ ಪಡೆದ ಯೂಟ್ಯೂಬರ್ ಆಗಿದ್ದಾರೆ.

ವಿಶ್ವದ ಒಟ್ಟು ಯೂಟ್ಯೂಬರ್‌ಗಳು

ಯೂಟ್ಯೂಬ್‌ನಲ್ಲಿ ಒಟ್ಟು 51 ಮಿಲಿಯನ್ ಚಾನಲ್‌ಗಳಿವೆ. ಆದರೆ ಅವುಗಳಲ್ಲಿ 38 ಮಿಲಿಯನ್ ಚಾನಲ್‌ಗಳನ್ನು ಮಾತ್ರ 'ಸಕ್ರಿಯ' ಎಂದು ಪರಿಗಣಿಸಲಾಗುತ್ತದೆ. ಈ ಲೇಖನ ನಿಮಗೆ ನಿಜಕ್ಕೂ ಇಷ್ಟವಾಗಿದ್ದರೆ ತಪ್ಪದೇ ಲೈಕ್ ಮಾಡಿ. ಶೇರ್ ಮಾಡಿ. ಹೊಸ ಯೂಟ್ಯೂಬ್ ಚಾನಲ್ ಪ್ರಾರಂಭಿಸುವುದು ಹೇಗೆ ಎಂಬುದರ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ.


                 - ✍️  ಎಂ.ಡಿ.ಯುನುಸ್

Category:Entertainment



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ

0 Followers

0 Following