ನಾ ಹುಟ್ಟಿದ ಮನೆಯ ಹೊಂಗೆಮರ ನೀನು ನನ್ನವ್ವ. ಅದೆಷ್ಟು ತಂಪನ್ನೀಯುತ್ತೀಯೇ? ಗುಡುಗು, ಸಿಡಿಲು, ಬಿಸಿಲು, ಮಳೆಗೆ ತತ್ತರಿಸದೆ ಸ್ಥಿರವಾಗಿ ನಿಂತು ಉಸಿರು ನೀಡುತ್ತಿ. ಆಲದ ಮರದ ಹಾಗೆ ಹರಡಿ ಬೆಚ್ಚನೆಯ ಬಾಹುಗಳಲ್ಲಿ ನಿನ್ನ ಕರುಳ ಬಳ್ಳಿಗಳಿಗೆ ಆಸರೆ ನೀಡಿ ಜೋಪಾನ ಮಾಡುತ್ತಿ. ಕಬ್ಬಿನ ಜಲ್ಲೆಯಂತೆ ಹಿಂಡಿ ಹಿಪ್ಪೆಯಾದರೂ ನನ್ನ ಮಕ್ಕಳು ಸಿಹಿ ಸವಿದರಷ್ಟೇ ಸಾಕೆಂದು ತನ್ನ ಬಗ್ಗೆ ಕಿಂಚಿತ್ತೂ ಗಮನ ಕೊಡದಷ್ಟು ನಿಸ್ವಾರ್ಥವ ಯಾರು ತುಂಬಿದರು ನಿನ್ನಲ್ಲಿ?
ಹೊತ್ತು ಮೀರಿ ನೆತ್ತಿಗೇರಿದರೂ ಇನ್ನು ಬೆಳಕರಿಲಿಲ್ವೆ ನಿನ್ಗೆ ಅಂತ ಬಯ್ಯೋ ಬದಲಿಗೆ ಸರಿದಿದ್ದ ಕಂಬಳಿಯನ್ನು ಸರಿಯಾಗಿ ಹೊದಿಸಿ, ತಲೆ ಸವರಿ ಹೋಗುವ ನಿನ್ನ ಕೈ ಸ್ಪರ್ಶದಲ್ಲೇನಿದೆ ನಾನರಿಯದ್ದು..? ಎದ್ದೇಳೋದು ಇನ್ನೂ ತಡ ಆದ್ರೆ ಹೊತ್ತು ಮೀರೋಯ್ತು ಇನ್ನು ಹೊಟ್ಟೆಗೆ ಉಣ್ಣಲಿಲ್ಲ ಅಂತ, ಮದ್ದಾನ ಆಗೋಯ್ತಲ್ಲವ್ವಾ..! ಮಾಡಿದ್ದನ್ನ ಆರೋಯ್ತು ಎಂದು ತಳಮಳಗೊಳ್ಳುವ ನಿನಗೆ ನನ್ನ ಮೇಲೆ ಅದೆಷ್ಟು ಪ್ರೀತಿ..?
ಎದೆಯುದ್ದ ಬೆಳೆದು ನಿಂತವಳಿಗೆ ಈಗಲೂ ತಲೆ ದಿಂಬು ನಿನ್ನ ಮಡಿಲು. ನಾನೇ ತಿನ್ನಿಸಿದರೆ ಎರಡು ತುತ್ತು ಹೆಚ್ಚಾಗಿ ತಿನ್ನಿಸಬಹುದೆಂದು ಕೈ ತುತ್ತುಣಿಸುವ ನಿನಗೆ ಅದೆಷ್ಟು ಖುಷಿ ನನ್ನ ಹೊಟ್ಟೆ ತುಂಬಿಸುವುದೆಂದರೆ ? ನೀ ನೀಡಿದ ತುತ್ತಿನ ರುಚಿಯೇ ಬೇರೆ. ಯಾರು ಸೇರಿಸಿದರು ನಿನ್ನ ಬೆರಳುಗಳಲ್ಲಿ ಆ ಅಮೃತವಾ? ಹಠ ಮಾಡಿದರೂ ಬಿಡದೆ ಅಂಗೈಗೆ ಹರಳೆಣ್ಣೆ ಸುರಿದುಕೊಂಡು ತಲೆಯ ಮೇಲೆ ತಟ ತಟ ತಟ್ಟುವಾಗಲೂ ಆ ಬಡಿತದಲ್ಲೇನೋ ಹಿತ..!
ಆರೋಗ್ಯ ಕೆಟ್ಟು,ಮೂರು ದಿನ ಮಂಚ ಹಿಡಿದು, ವೈದ್ಯ ಕೊಟ್ಟ ಗುಳಿಗೆಗಳಿಗೆ ಚೇತರಿಸಿಕೊಳ್ಳಲಾಗದ ದೇಹ ನಿನ್ನ ಆರೈಕೆಯಲ್ಲಿ ಎರಡೇ ದಿನಕ್ಕೆ ಗುಣಮುಖವಾಗುವುದೆಂದರೆ ಅದೆಂತಹ ಶಕ್ತಿಯಡಗಿದೆ ನಿನ್ನೊಳಗೆ..? ವೈದ್ಯನ ಗುಳಿಗೆ ವಾಸಿ ಮಾಡದ್ದನ್ನ ನಿನ್ನ ವಾತ್ಸಲ್ಯ ವಾಸಿ ಮಾಡಿದ್ದು ಸೋಜಿಗವಲ್ಲದೆ ಬೇರೇನು?
ಧಗಿಸೋ ಕೆಂಡ ಒಡಲೊಳಗುದುಗಿದ್ದರೂ ಮುಖದ ತುಂಬಾ ಮುಗಳ್ನಗೆಯನ್ನೊದ್ದು ಅದೆಷ್ಟು ಕಾಲ ತನ್ನೊಳಗೆ ತಾನೇ ಸುಡುವೆ ನನ್ನವ್ವ...? ಹಿಮ್ಮಡಿ ಒಡೆದು ರಕ್ತ ಸೋರುತ್ತಿದ್ದರೂ ನಡೆಯಲಾಗದೆ ಒದ್ದಾಡಿ, ಮರೆಯಲ್ಲಿ ಅಯ್ಯೋ ಎಂದು ಮನೆಯವರೆದುರಲ್ಲಿ ಏನೂ ಆಗದಂತೆ ನಟಿಸಿ ಕಣ್ಣಿಗೆ ಮಣ್ಣೆರೆಚುವುದನ್ನು ಅಷ್ಟು ಚೆನ್ನಾಗಿ ಅದೆಲ್ಲಿ ಕಲಿತೆ?
ನಿನ್ನೊಡಲ ಜೀವ ನಾನು.. ನನ್ನೊಳಗಿನ ಭಾವ ನೀನು.. ನನ್ನುಸಿರಿನ ಏರಿಳಿತದ ಲೆಕ್ಕವಿಡುವ ಚಾಣಾಕ್ಷೆ. ಮುಖದ ಮೇಲೆ ಗೋಚರವಾಗದ ನನ್ನಂತರಾಳದ ಕದನಗಳನ್ನ ಯಾವ ಸಾಧನ ಬಳಸಿ ಕಂಡುಹಿಡಿವೆ? "ಕಣ್ಣರಿಯದಿದ್ದರೂ ಕರುಳರಿಯದೆ..?"ಎಂಬ ಮಾತು ನಿನ್ನ ನೋಡಿಯೇ ಜನ್ಮತಾಳಿತೇನು?
ನಿನ್ನನ್ನೊಗಳುವ ಮನಸ್ಸು ನನಗಿಲ್ಲ. ನಾ ಕಟ್ಟುವ ಪದಗಳಿಗೆ ನೀ ನಿಲುಕುವವಳಲ್ಲ. ನಿನ್ನ ಮೇಲೆ ಗ್ರಂಥ ಬರೆಯುವ ಹಂಬಲ ನನಗಿಲ್ಲ. ನೀ ವ್ಯಾಖ್ಯಾನಕ್ಕೆ ಸಿಗುವ ವ್ಯಕ್ತಿತ್ವದವಳಲ್ಲ. ನಿನ್ನ ಗುಣಗಾನ ಮಾಡುವ ಗೋಜಿಗೆ ಹೋಗುವುದಿಲ್ಲ. ನೀ ಹೋಲಿಕೆಗೆ ಸಿಗುವ ಗುಣದವಳಲ್ಲ . ನಿನ್ನ ಗುಡಿ ಕಟ್ಟಿ ಪೂಜಿಸುವುದಿಲ್ಲ. ನೀ ದೇವರಿಗಿಂತ ಮಿಗಿಲು..! - ರೂಪಾ ಹೊಸದುರ್ಗ
Writer