ನೀವು ಎಡಚರೇ

ProfileImg
14 Jun '24
3 min read


image

 

ತಲೆಬರಹ ನೋಡಿ ಗಾಬರಿಯಾಗಬೇಡಿ .ಲೆಫ್ಟಿಸ್ಟ್ಗಳಿಗೂ ಇದಕ್ಕೂ ಏನೇನೂ ಸಂಬಂಧವಿಲ್ಲ‌.ಇದು ಎಡಗೈಗೆ ಸಂಬಂಧ ಪಟ್ಟಿದ್ದು. ಅಯ್ಯೋ ಮತ್ತೂ ಇದು ಜಾತಿಗೆ ಸಂಬಂಧ ಪಟ್ಟದ್ದು ಅಂತ ತಿಳಿಯಬೇಡಿ.

ಊಹೆ ಮಾಡಿದ್ದು ಸಾಕು.ಇದು ಎಡಗೈ ಉಪಯೋಗಿಸುವವರಿಗೆ  ಸಂಬಂಧಪಟ್ಟದ್ದು.
ಊರಲ್ಲಿ ಸಂಬಂಧಿಕರಲ್ಲೋ ,ನೆರೆಕರೆಯಲ್ಲೊ ಸಮಾರಂಭಗಳಾದಾಗ ಆತ್ಮೀಯ ಅತಿಥಿಗಳೇ ಬಡಿಸಲು ಮುಂದಾಗುತ್ತಾರೆ. ಈಗ ಅದಕ್ಕೆ ದುಡ್ಡು ಕೊಟ್ಟೇ ಬಡಿಸುವವರನ್ನು ನೇಮಿಸುತ್ತಾರೆ.
ಅದೊಂದು ಸಮಾರಂಭ.ಊರಿಗೆ ಹೋಗಿದ್ದೆವು.ನನ್ನ ಯಜಮಾನರು ಬಹಳ ಉಮೇದಿನಲ್ಲಿ ಬಡಿಸಲು ನಿಂತರು. ಅವರು ಬಡಿಸಲು ಆರಿಸಿಕೊಂಡದ್ದು ಸಾರನ್ನು. ಇವರಿಗೆ ಬಡಿಸಲು ಅಭ್ಯಾಸವಿಲ್ಲ .ಯಾಕಾಗಿ ಹೋದರೋ ಅಂತ ಅನಿಸಿತು. ಅದಕ್ಕಿಂತ ಹೆಚ್ಚಾಗಿ ಅವರು ಬಡಿಸುವುದನ್ನು ನೋಡಿ ನನ್ನ ಎದೆ ಧಸಕ್ಕೆಂದಿತು. ಯಾಕೆಂದರೆ ಅವರು ಬಡಿಸಲು ಸೌಟು ಹಿಡಿದದ್ದು ಎಡಗೈಯಲ್ಲಿ.ಅಬ್ಬಾ .ಕುಳಿತವರ ಸಾಲಲ್ಲಿ  ಬಹಳ ಸಂಪ್ರದಾಯಸ್ಥರಿದ್ದರು.ನಾನು ಹೋಗಿ ಎಚ್ಚರಿಸಲೂ ಸಾಧ್ಯವಿಲ್ಲ.ಹಾಗೆ ಮಾಡಿದರೆ ಅನಾವಶ್ಯಕ ಅವರು ಎಡಗೈಯಲ್ಲಿ  ಬಡಿಸುವುದನ್ನು ತೋರಿಸಿಕೊಟ್ಟಂತಾಗುತ್ತದೆ.ನಾನು ದೂರದಲ್ಲಿದ್ದೆ. ಮಕ್ಕಳು ಎಡಗೈಯಲ್ಲಿ ಬಡಿಸುವಾಗ ಬಲಗೈ ಉಪಯೋಗಿಸು ಅಂತ ಆಗ್ರಹಿಸುತ್ತೇವೆ.ಇನ್ನು ಇವರನ್ನು ನೋಡಿದರೆ ಬಯ್ದುಕೊಳ್ಳದಿರುವರೇ. ಅವರಲ್ಲಿ ಹೇಳಿದರೂ ಪ್ರಯೋಜನವಿಲ್ಲ. ನನಗೆ ಯಾವ ಕೈ ಅನುಕೂಲವಾಗುತ್ತದೋ ಅದರನ್ನೇ ಉಪಯೋಗಿಸುತ್ತೇನೆ ಅಂತ ಹೇಳುವವರು. ಈ ಎಡಗೈ ಬಲಗೈ ಬಗ್ಗೆ ಚರ್ಚೆ ಈಗಲೂ ನಮ್ಮಲ್ಲಿ ನಡೆಯುತ್ತಿರುತ್ತದೆ.
ಎಡಗೈ ಉಪಯೋಗಿಸಿದರೆ ಎಂದರೆ "ಡೆಮ್ಮೆ ಕೈ" ಅಂತ ಹಳ್ಳಿಗಳಲ್ಲಿ  ತಮಾಷೆ ಮಾಡುತ್ತಾರೆ
ಪ್ರಪಂಚದಲ್ಲಿ ಸುಮಾರು ೧೦% ಜನರು ಎಡಚರು ಅಂದರೆ ಎಡಗೈಯನ್ನು ಎಲ್ಲಾ ಕೆಲಸಗಳಿಗೆ ಉಪಯೋಗಿಸುವವರು.
ಕೆಲವರು ಎಡಗೈಯನ್ನೇ ಹೆಚ್ಚಾಗಿ ಯಾಕೆ ಉಪಯೋಗಿಸುತ್ತಾರೆ ಎಂಬುದಕ್ಕೆ ವೈಜ್ಞಾನಿಕ ಕಾರಣವೂ ಇದೆ. ಇದು ಸ್ವಲ್ಪ ಮಟ್ಟಿಗೆ ಅನುವಂಶೀಯ ಗುಣವೂ ಹೌದು.ನನ್ನ ಮಗಳು ಮತ್ತು ಪತಿ ಇಬ್ಬರೂ ಎಡಗೈಯವರು.
ಕಾರಣವೇನು?
ನಮ್ಮ ಮೆದುಳಿನ ಎರಡು ಭಾಗಗಳಲ್ಲಿ ಎಡ ಭಾಗ ಬಲ ಅಂಗಗಳನ್ನೂ ಎಡ ಭಾಗ ಬಲ ಅಂಗಗಳ ಚಲನೆಯನ್ನು ನಿಯಂತ್ರಿಸುತ್ತದೆ. ಬಲ ಭಾಗ ಹೆಚ್ಚು ಬೆಳೆದಿದ್ದವರಲ್ಲಿ ಎಡಭಾಗ ಬಲಯುತವಾಗಿರುತ್ತದೆ. ಆಂತಹ ವ್ಯಕ್ತಿಗಳು ಎಡಗೈಯನ್ನು ಹೆಚ್ಚಾಗಿ ಉಪಯೋಗಿಸುವುದು.ಇನ್ನು ಕೆಲವರ ಪ್ರಕಾರ ಮೆದುಳಿಗೆ ಆದ ಹಾನಿ ಎಡಚರಾಗಲು ಕಾರಣ.
ಎಡಚ ಮಕ್ಕಳು 
ಎಡಚ‌ಮಕ್ಕಳನ್ನು ಬಾಲ್ಯದಲ್ಲಿಯೇ ಗುರುತಿಸಬಹುದು. ಅವರು ತಿನ್ನಲು ,ವಸ್ತುಗಳನ್ನು ಹಿಡಿಯಲು , ಅವುಗಳನ್ನು ಕೊಡಲು ಉಪಯೋಗಿಸುವುದು ಎಡಗೈಯನ್ನೇ.ಬರೆಯುವುದೂ ಎಡಗೈಯಲ್ಲೇ.
ವಿದ್ಯಾಭ್ಯಾಸದ ಮೇಲೆ ಪರಿಣಾಮ.
ನನ್ನ ಮಗಳು ಮೊದಲು ಎಡಗೈಯಲ್ಲೇ ಬರೆಯುತ್ತಿದ್ದಳು. ಆಮೇಲೆ ಬಲಗೈಯಲ್ಲಿ ಬರೆಯಲು ಹೇಳಿದಾಗ ಬಲಗೈಯಲ್ಲಿ ಬರೆಯಲು ಪ್ರಾರಂಭಿಸಿದಳು. ಆಮೇಲೆ ಎರಡೂ ಕೈಯಲ್ಲಿ ಬರೆಯುತ್ತಿದ್ದವಳು. (ambidextrous) ಕ್ರಮೇಣ  ಬಲಗೈಯಲ್ಲಿ ಬರೆಯತೊಡಗಿದಳು.ಆದರೆ ಬೇರೆ ಎಲ್ಲಾ ಕೆಲಸಗಳಿಗೆ ಅವಳು ಬಲಗೈಯನ್ನೇ ಉಪಯೋಗಿಸುವುದು.
ನಾವು ಎಡದಿಂದ ಬಲಕ್ಕೆ ಬರೆಯುವುದು .ಹೀಗೆ ಬರೆಯಲು ಬಲಗೈಯವರಿಗೆ ಸುಲಭ ಆದರೆ ಎಡಗೈಯವರಿಗೆ ಸ್ವಲ್ಪ ಕಷ್ಟವೇ‌.ಬರೆಯುವ ಹಾಳೆಯನ್ನು ತಿರುಗಿಸಿ ಬರೆಯಬಹುದು . ಆದರೆ ಹೆಚ್ಚಿನ ಮಕ್ಕಳು ಹಾಗೆ ಮಾಡದೆ ಕೈಯನ್ನೇ ತಿರುಗಿಸಿ ವಿಚಿತ್ರವಾಗಿ ಬರೆಯುತ್ತಾರೆ ಬಾಲ್ಯದಲ್ಲಿ.

ಮನೋವಿಜ್ಞಾನಿಗಳ ಪ್ರಕಾರ ಮಕ್ಕಳನ್ನು ಬಲಗೈಯಲ್ಲಿ ಬರೆಯುವಂತೆ ಒತ್ತಡ ಹಾಕಬಾರದಂತೆ.
 ಎಡಚರು ಭಾಷಾ ಕಲಿಕೆಯಲ್ಲಿ ಗಣಿತದಲ್ಲಿ ಮುಂದು ಅಂತ ಕೆಲವು ಸಂಶೋಧಕರು ಕಂಡುಕೊಂಡರೂ ನಿಖರವಾಗಿ ಹೇಳಲು ಇನ್ನೂ ಸಂಶೋಧನೆ ಮಾಡಬೇಕಿದೆ.

ಪ್ರಸಿದ್ಧ ಎಡಗೈ ಆಟಗಾರರು

ಟೆನ್ನಿಸ್ನಲ್ಲಿ ರಾಫೇಲ್ ನಡಾಫ್, ಜಿಮ್ಮಿ ಕಾರ್ಟರ್, ಮಾರ್ಟಿನಾ ನವ್ರಟಿಲೋವಾ, ಜಾನ್ ಮೆಕೆನ್ರೋ ಮುಂತಾದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಆಟಗಾರರು ಎಡಚರು.
ಕ್ರಿಕೆಟ್ನಲ್ಲಿಯೂ ಸುಪ್ರಸಿದ್ಧ ಕ್ರಿಕೆಟರ್  ಸೌರವ್ ಗಂಗೂಲಿ, ರವೀಂದ್ರ ಜಡೇಜಾ , ಗೌತಮ್ ಗಂಭೀರ್ ,ಶಿಖರ್ ಧವನ್ ಮುಂತಾದವರು ಬ್ಯಾಟ್ಸ್ಮನ್ಗಳಾದರೆ, ಬಿಷನ್ ಸಿಂಗ್ ‌ಬೇಡಿ ,ಜಹೀರ್ ಖಾನ್, ಇರ್ಫಾನ್ ಪಠಾಣ್,ಆಶಿಶ್ ನೆಹ್ರಾ  ಮುಂತಾದವರು ಎಡಗೈ ಬೌಲರ್ಸ್.
ವಿದೇಶೀ ಆಟಗಾರರಲ್ಲಿ ಬ್ರೈನ್ ಲಾರಾ,ಆಡಮ್ ಗಿಲ್ಕ್ರಷ್ಟ್,ಮಾಥ್ಯೂ ಹೈಡನ್, ಕುಮಾರ್ ಸಂಗಕ್ಕಾರ ,ಸನತ್ ಜಯಸೂರ್ಯ, ವಾಸಿಮ್ ಅಕ್ರಂ ,ಸಯೀದ್ ಅನ್ವರ್, ಕ್ಲೈವ್ ಲಾಯ್ಡ್...ಪಟ್ಟಿ ಉದ್ದವಿದೆ.

ಎಡಗೈ ಮತ್ತು ಕೆಲಸ

ಅಡಿಗೆ ಮನೆಯಲ್ಲಾಗಲೀ ಫ್ಯಾಕ್ಟರಿಗಳಲ್ಲಾಗಲೀ  ಉಪಯೋಗಿಸುವ ವಸ್ತುಗಳು ಬಲಗೈಯವರಿಗಾಗಿ ತಯಾರು ಮಾಡಿದ್ದು. ಉದಾಹರಣೆಗೆ ಕೆಲವು ಪಾತ್ರೆಗಳ ಹಿಡಿ ಬಲಗೈಯವರಿಗೆ ಉಪಯೋಗಿಸಲು ಸುಲಭ. ಎಡಚರಿಗೆ ಕಷ್ಟ. ಕತ್ತರಿಗಳು ಬಲಗೈಯವರಿಗೆ ಉಪಯೋಗಿಸುವಂತೆ ಇದೆ.ಕಾಕತಾಳೀಯವೋ ಎಂಬಂತೆ ನಮ್ಮ ಮನೆಯ ಬಾಗಿಲು ಎಡಚರಿಗೆ ತೆರೆಯಲು ಸುಲಭವಾಗುವಂತೆ ಇದೆ!!ಹಾಗಾಗಿ ನಾವೂ ಈಗ ಎಡಗೈಯಿಂದಲೇ ತೆರೆಯಬೇಕಾಗಿದೆ😌

 ಎಡಗೈ ಮತ್ತು ಸಂಪ್ರದಾಯ.
ನಾವು ಎಲ್ಲಾ ಕೆಲಸಗಳಿಗೆ ಬಲಗೈಯನ್ನೇ ಉಪಯೋಗಿಸುವುದು . ಪೂಜೆ ಮಾಡುವಾಗ ಕೂಡ ಆಚಮನ ಹೇಗೆ ಮಾಡಬೇಕೆಂದು ಶಾಸ್ತ್ರ ಹೇಳಿದೆ. ಹಾಗಾಗಿ ಮನಸಿನಲ್ಲಿಯೂ ಬಲಗೈ ಒಳ್ಳೆಯದು ,ಎಡಗೈ ಹಾಳು ಎಂಬ ಭಾವನೆ ಅಚ್ಚೊತ್ತಿದೆ. ಹಾಗಾಗಿ ನಾವು ಬರೆಯಲು ,ತಿನ್ನಲು , ಹಣ ಕೊಡಲು ,ತೆಗೆದುಕೊಳ್ಳಲು  ಬಲಗೈಯನ್ನೇ ಉಪಯೋಗಿಸುತ್ತೇವೆ. ಇನ್ನೊಂದು ಮೂಢನಂಬಿಕೆಯೂ ಇದೆ ಅದೇನೆಂದರೆ ಎಡಗೈಯಲ್ಲಿ ತೆಗೆದುಕೊಂಡರೆ ಆ ವಸ್ತುವನ್ನು ಕಳಕೊಳ್ಳುತ್ತೇವೆ ಎಂಬ ನಂಬಿಕೆ. ಅಲ್ಲದೆ ಎಡಗೈಯಲ್ಲಿ ಇಟ್ಟರೆ ಆ ವಸ್ತು ವನ್ನು ಎಲ್ಲಿ ಇಟ್ಟಿದ್ದೇವೆ ಅಂತ ಮರೆತುಹೋಗುತ್ತಂತೆ. ಪಾಪ ಎಡಗೈಯನ್ನು ಎಷ್ಟು ಹಳಿಯುತ್ತಾರೆ ಅಲ್ಲವೇ.
ಒಮ್ಮೆ ಒಬ್ಬ ವಿದ್ಯಾರ್ಥಿ ‌ಏನೋ ಅರ್ಜಿ ತೆಗೆದುಕೊಂಡು ಬಂದ. ಪ್ರಿನ್ಸಿಪಾಲರಿಗೆ ಅದನ್ನು ಆತ ಕೊಟ್ಟದ್ದು ಎಡಗೈಯಲ್ಲಿ. ಪ್ರಿನ್ಸಿಪಾಲರಿಗೆ ಕೆಂಡದಂತ ಕೋಪ ಬಂತು.. "ನೀನು ಯಾವ ಕೈಯಲ್ಲಿ ತೊಳಕೊಳ್ತೀಯಾ ,ಎಡಗೈಯಲ್ಲಿ ತಿಂತೀಯಾ ಅಂತ ಎಗರಾಡಿದ್ದೇ ಎಗರಾಡಿದ್ದು. ನಾನೂ ಆಗ ಅಲ್ಲೇ ಇದ್ದೆ. ಆ ಹುಡುಗ ಉತ್ತರ ಭಾರತದವನು. ಉತ್ತರ ಭಾರತದವರು ಚಪಾತಿಯನ್ನು ಹೆಚ್ಚಾಗಿ ಎಡಗೈಯಲ್ಲೇ ತಿನ್ನುವುದು . ರೊಟ್ಟಿ ತುಂಡು ಮಾಡಲು ಎರಡೂ ಕೈಯನ್ನು ಉಪಯೋಗಿಸುತ್ತಾರೆ .ಅವರಲ್ಲಿ ಮಡಿ ಗಿಡಿ ಏನೂ ಇಲ್ಲ.
ಹಾಗಾಗಿ ಅವರು ತಿನ್ನಲು ಎಡಗೈಯನ್ನೂ ಉಪಯೋಗಿಸುತ್ತಾರೆ.
ನಟ ಅಮಿತಾಭ್ ಬಚ್ಚನ್ ಎಡಗೈಯವರೇ.
ನನ್ನ ಯಜಮಾನರು ,ಮಗಳೂ ಎಡಗೈಯವರು ಅಂತ ಹೇಳಿದೆನಲ್ಲಾ. ಈಗ ಮೊಮ್ಮಗಳೂ ಎಡಗೈ ‌. ಒಮ್ಮೆ " ನಾನು ಅವಳಲ್ಲಿ ಒಪ್ಪ ಕೈಯಲ್ಲಿ ತಿನ್ನು ಮುದ್ದೂ" ಅಂತ ಹೇಳಿದಾಗ ಮಗಳೇ ಕೆಕ್ಕರಿಸಿ ಹೇಳಿದಳು "ಎಡಗೈ ಏನು ಚೆನ್ನಾಗಿಲ್ವಾ . ಎರಡೂ ಕೈ ಒಂದೇ ತಾನೇ "ಅಂತ . ಹೌದು ಬಲಗೈ ಉಪಯೋಗಿಸು ಅಂತ ಒತ್ತಡ ಹಾಕ ಬಾರದು ಅಂತ ಗೊತ್ತಿದ್ದೂ ನಾನು  ಒತ್ತಾಯ ಮಾಡಿದ್ದೆ 😁
 ಕೊನೆ ಹನಿ..ಮಕ್ಕಳು  ಯಾವ ಕೈ ಯನ್ನು  ಹೆಚ್ಚಾಗಿ ಉಪಯೋಗಿಸುತ್ತಾರೋ ಅದನ್ನೇ ಮುಂದುವರಿಸಲಿ.ಎಡಗೈ ಅಂತ ಕೀಳರಿಮೆ ಬೇಡ 
ಧನ್ಯವಾದಗಳು.
✍️ಪರಮೇಶ್ವರಿ ಭಟ್

 

 

 

 

 

 

 


 

 

Category:Parenting and Family



ProfileImg

Written by Parameshwari Bhat

0 Followers

0 Following