ವಿಶ್ವಕ್ಕೆ ಭಾರತ ಕೊಟ್ಟ ಹೆಮ್ಮೆಯ ಕೊಡುಗೆ "ಯೋಗ"

ProfileImg
21 Jun '24
3 min read


image

ಮನುಷ್ಯ ತನ್ನ ಜೀವಿತಾವಧಿಯಲ್ಲಿ ಯಾವುದೇ ಖರ್ಚಿಲ್ಲದೆ ಸದಾ ಚಟುವಟಿಕೆ,ಲವಲವಿಕೆ, ತಾರುಣ್ಯ ದೊಂದಿಗೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದಿರಲು
"ಯೋಗ" ಬಹು ಮುಖ್ಯವಾದ ಒಂದು ಸಂಪತ್ತು!
ಯೋಗ ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಅಮೂಲ್ಯ ವಿದ್ಯೆ,ಇದು ಇಂದು ವಿಶ್ವ ವ್ಯಾಪ್ತಿಯಾಗಿ ಬೆಳೆದು ವಿಶ್ವಯೋಗ ದಿನವಾಗಿ ನಿಂತಿರುವುದು ನಮ್ಮ ಹೆಮ್ಮೆ!ಯೋಗವು ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚಿನ ಕಲೆ. ಯೋಗವು ನಮ್ಮ ಮನಸ್ಸು, ದೇಹವನ್ನು ಪುನರ್ಯೌವನಗೊಳಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ ಹಾಗೂ ದೇಹವನ್ನು ಚೈತನ್ಯದಿಂದ ಇರುವಂತೆ ಮಾಡುವುದರಿಂದ ಜಗತ್ತಿನಾದ್ಯಂತ ಬಹುತೇಕ ಜನರು ತಮ್ಮ ಮಾನಸಿಕ ಒತ್ತಡ ಉತ್ತಮ ಆರೋಗ್ಯ ಹಾಗೂ ದೈಹಿಕ ಸೌಂದರ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಸಿನಿಮಾ ತಾರೆಯರು, ಮಾಡೆಲ್ಗಳು ತಮ್ಮ ಸೌಂದರ್ಯಕ್ಕಾಗಿ ಯೋಗಾಭ್ಯಾಸವನ್ನು ನಿತ್ಯದ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುತ್ತಿರುವುದು ಫ್ಯಾಶನ್ ಆಗಿಬಿಟ್ಟಿದೆ ಎಂದೇ ಹೇಳಬಹುದು ಯೋಗ ಒಂದು ಜೀವನ ಶೈಲಿ! ಯೋಗವು ಮನುಕುಲಕ್ಕೆ ಉತ್ತಮ ಕೊಡುಗೆಯಾಗಿದೆ, ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎಂಬ ನಾಣ್ನುಡಿಯಂತೆ ಯೋಗವನ್ನು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡವರಿಗಷ್ಟೇ ಗೊತ್ತು ಅದರ ಮಹತ್ವ ಮತ್ತು ಉಪಯೋಗಗಳು ಯೋಗ ಮನಸ್ಸು ದೇಹ ಚಿಂತನೆ ಮತ್ತು ಕ್ರಿಯೆ ಸಂಯಮ ಸಹನೆ ಮತ್ತು ಸಾರ್ಥಕತೆ ಯನ್ನು ಒಗ್ಗೂಡಿಸುತ್ತದೆ ಹಾಗೇಯೆ ಪ್ರಕೃತಿ ಮತ್ತು ಮನುಷ್ಯನ ನಡೆವೆ ಸಾಮರಸ್ಯವನ್ನುಂಟು ಮಾಡುತ್ತದೆ. ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮ ವಾಗಿರಲು ಸಹಕರಿಸುವುದಲ್ಲದೆ ಸದಾ ಉತ್ಸಾಹಿಗಳನ್ನಾಗಿ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಯೋಗವು ಅಸಂಖ್ಯಾತ ಪ್ರಯೋಜನಗಳನ್ನು ಹೊಂದಿದ್ದು ವ್ಯಕ್ತಿಯನ್ನು ದೈಹಿಕವಾಗಿ ಸದೃಢವಾಗಿಸು ವುದರ ಜೊತೆಗೆ ವ್ಯಕ್ತಿ ಮಾನಸಿಕವಾಗಿ ಧನಾತ್ಮಕವಾಗಿ ಚಿಂತಿಸುವತ್ತ ಪ್ರೇರೇಪಿಸುತ್ತದೆ ಅಲ್ಲದೆ ವ್ಯಕ್ತಿಯ ಮಾನಸಿಕ ಸಮತೋಲನವನ್ನು ಕಾಪಾಡುತ್ತದೆ,! ಯೋಗ ಮತ್ತು ಆಯುರ್ವೇದ" ಜಗತ್ತಿಗೆ ನಮ್ಮ ಭಾರತ ದೇಶ ಕೊಟ್ಟ ಹೆಮ್ಮೆಯ ಕೊಡುಗೆಗಳು, ಭೌತಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸದ ಈ ಪ್ರಾಚೀನ ಕಲೆ 6000 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಭಾರತದಲ್ಲಿ ಹುಟ್ಟಿದ  ಕಲೆ ಇಂದು ಜಗತ್ತಿನಾದ್ಯಂತ ಪಸರಿಸಿ ಜನಪ್ರಿಯತೆಯೊಂದಿಗೆ ತನ್ನ ಸುಮಧುರ ಕಂಪನ್ನು ಬೀರುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಹಾಗೂ ಸಂತೋಷದ ವಿಷಯ. 'ಯೋಗ' ಎಂಬ ಪದವು ಸಂಸ್ಕೃತದಿಂದ ಬಂದಿದೆ. ದೇಹ ಮತ್ತು ಪ್ರಜ್ಞೆಯ ಒಟ್ಟುಗೂಡುವಿಕೆಯನ್ನು ಸಂಕೇತಿಸುವುದು ಸೇರುವುದು ಅಥವಾ ಒಂದುಗೊಡುವುದು ಎಂಬುದು ಇದರ ಆರ್ಥ.ಭಾರತದ ಜನರಿಗೆ ಮಾತ್ರ ಪರಿಚಯವಿದ್ದ ಈ ಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ್ದು ನಮ್ಮ ಹೆಮ್ಮೆಯ ಪ್ರಧಾನಿಮಂತ್ರಿ ಮೋದಿ ಜೀ ಯವರು.! ಭಾರತದ ವಿಶ್ವ ಸಂಸ್ಥೆಯ ಪ್ರತಿನಿಧಿ ಅಶೋಕ್‌ ಮುಖರ್ಜಿ ಯವರು ಯೋಗದ ಮಹತ್ವದ ಬಗ್ಗೆ ಕರಡನ್ನು ಸಿದ್ಧಪಡಿಸಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಿದರು. ಈ ಕರಡಿಗೆ ಯಾವುದೇ ವಿರೋಧವಿಲ್ಲದೆ 177 ದೇಶಗಳು ಒಪ್ಪಿದ್ದಲ್ಲದೆ ಒಂದೇ ಒಂದು ಮತ ಚಲಾವಣೆಯಾಗದೆ ಯೋಗ ದಿನ ಆಚರಣೆಯ ಕರಡು ಪ್ರತಿ ಅಂಗೀಕಾರ ವಾಯಿತು  ಅಲ್ಲದೆ ಇದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯಾವುದೇ ತಕರಾರು ಇಲ್ಲದೆ ಹೆಚ್ಚಿನ ಬೆಂಬಲ ಪಡೆದು ಅಂಗೀಕಾರಗೊಂಡ ಮಸೂದೆ ಎಂಬಖ್ಯಾತಿಯನ್ನು ಸಹ ಪಡೆಯಿತು. ತದನಂತರ ಪ್ರಧಾನಿ ನರೇಂದ್ರ ಮೋದಿ ಯವರು 2014 ರಲ್ಲಿ ತಮ್ಮ ಯುಎನ್ ಭಾಷಣದ ಉದ್ಘಾಟನಾ ಸಂದರ್ಭದಲ್ಲಿ ತಮ್ಮ ಭಾಷಣದ ಮೂಲಕ ಯೋಗದ ಮಹತ್ವವನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಯಶಸ್ಸನ್ನು ಕಂಡರು.ಆ ಅಧಿವೇಶನದಲ್ಲಿ ಮೋದಿಜೀ ಯವರು ಯೋಗವನ್ನು ಪರಿಚಯಿಸುತ್ತ "ಯೋಗವು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ ನಮ್ಮ ಆರೋಗ್ಯ ಮತ್ತು ನಮ್ಮ ಯೋಗಕ್ಷೇಮಕ್ಕೆ ಯೋಗ ಮೌಲ್ಯಯುತವಾದ ಒಂದು ಸಮಗ್ರ ವಿಧಾನ. ಯೋಗವೆಂದರೆ ಕೇವಲ ವ್ಯಾಯಾಮವಲ್ಲ ಇದು ನಮ್ಮೊಂದಿಗೆ ಮತ್ತು ಪ್ರಪಂಚ ಹಾಗೂಪ್ರಕೃತಿಯೊಂದಿಗೆ  ಏಕತೆಯ ಅರ್ಥವನ್ನು ಕಂಡುಕೊಳ್ಳುವ ಒಂದು ಉತ್ತಮ ಮಾರ್ಗವಾಗಿದೆ"ಎಂದು ಬಹುಸುಂದರವಾಗಿ ವಿಶ್ಲೇಷಿಸಿದರು ಅಂದು ವಿಶ್ವಸಂಸ್ಥೆಯ ಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಯೋಗ ದಿನ ಆಚರಿಸಲು ಪ್ರಸ್ತಾಪಿಸಿದ ಬಳಿಕ  ವಿಶ್ವಸಂಸ್ಥೆಯು ಡಿಸೆಂಬರ್ 11, 2014 ರಂದು, ಪ್ರತಿ ವರ್ಷ ಜೂನ್ 21 ರ ದಿನ ಅಂತರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಬೇಕೆಂದು ಅಧಿಕೃತವಾಗಿ ಘೋಷಿಸಿತು. ಮೋದಿಜೀಯವರು ಯೋಗದಿನವನ್ನು ಆಚರಿಸಲು ಜೂನ್‌ 21ರಂದೇ ಏಕೆ ಆಯ್ಕೆ ಮಾಡಿಕೊಂಡ ರೆಂದರೆ ಇಡೀ ವರ್ಷದಲ್ಲಿ ಜೂನ್‌ 21ರಂದು ಭೂಮಿಯ ಉತ್ತರ ಭಾಗದಲ್ಲಿ ದಿನ ಅಧಿಕವಾಗಿ ಇರುತ್ತದೆ. ಅಂದರೆ ಅಂದು ಉತ್ತರ ಭಾಗದಲ್ಲಿ ಹಗಲು ಹೆಚ್ಚು ಸಮಯವಿದ್ದು ದಕ್ಷಿಣದಲ್ಲಿ ಹಗಲಿನ ಅವಧಿ ಕಡಿಮೆ ಇರುತ್ತದೆ. ಅಂದು ಸೂರ್ಯ ತನ್ನ ಪಥವನ್ನು ದಕ್ಷಿಣದತ್ತ ಬದಲಿಸುತ್ತಾನೆ. ಅಲ್ಲದೆ ಅಂದು ಸಾಮಾನ್ಯವಾಗಿ ಹುಣ್ಣಿಮೆಯಾಗಿದ್ದು, ಗುರುಪೂರ್ಣಿಮ ದಿನವಾಗಿರುತ್ತದೆ. ಇದು ಯೋಗ ಮಾಡಲು ಅಥವಾ ಆರಂಭಿಸಲು ಸೂಕ್ತ ದಿನವಾಗಿದೆ.ಅಲ್ಲದೆ ಭಾರತೀಯರಿಗೆ ಪ್ರಕೃತಿಗೆ ಗೌರವ ಸಲ್ಲಿಸುವುದು ಆಧ್ಯಾತ್ಮಿಕತೆಯ ಅವಿಭಾಜ್ಯ ಅಂಗವಾಗಿದೆ. ಹಾಗೆಯೇ ಪ್ರಕೃತಿಯ ಕೊಡುಗೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸುತ್ತೇವೆ ಎಂದು ಮೋದಿಜೀಯವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಅದನ್ನೂ ಸಹ ವಿಶ್ವಸಂಸ್ಥೆ ಯಾವುದೇ ವಿರೋಧವಿಲ್ಲದೆ ಮಾನ್ಯ ಮಾಡಿತು, ನಂತರ 21 ಜೂನ್ 2015 ರಂದು ಮೊದಲ ವಿಶ್ವ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು. ಅಂದು ಭಾರತ ಸರ್ಕಾರ ನವದಿಲ್ಲಿಯ ರಾಜಪಥ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಒಂದು ಸುಂದರ ಕಾರ್ಯಕ್ರಮ ರೂಪಿಸಿತು ಈ ಕಾರ್ಯಕ್ರಮದಲ್ಲಿ ಜಗತ್ತಿನ 84 ದೇಶಗಳ ಪ್ರತಿನಿಧಿಗಳು ಸೇರಿದಂತೆ 35,985 ಜನರು 35 ನಿಮಿಷಗಳ ಕಾಲ ಸುಮಾರು 21ಬಗೆಯ ಯೋಗಾಸನಗಳನ್ನು ಪ್ರದರ್ಶಿಸಿದರು. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಲಕ್ಷಾಂತರ ಜನ ವೀಕ್ಷಣೆ ಮಾಡಿದ್ದಲ್ಲದೆ ಅನೇಕ ವಿದೇಶಿಗರು ಯೋಗದ ಪ್ರಯೋಜನಗಳಿಗೆ ಮಾರುಹೋಗಿ ಯೋಗವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಂಡರು. ಅಲ್ಲದೆ ಅಂದು ನೆಡೆದ ಈ ಕಾರ್ಯಕ್ರಮ ಎರಡು ಗಿನ್ನೆಸ್‌ ದಾಖಲೆಗಳನ್ನು ಸಹ ಬರೆಯಿತು ಒಂದು ಈ ಕಾರ್ಯಕ್ರಮದಲ್ಲಿ ಒಂದೇ ಬಾರಿಗೆ 35,985 ಜನರು ಏಕಕಾಲಕ್ಕೆ ಒಂದೆಡೆ ಯೋಗ ಅಭ್ಯಾಸ ಮಾಡಿದ್ದಾದರೆ, ಎರಡನೇಯದು ಒಂದೇ ಬಾರಿಗೆ 84 ದೇಶದ ಪ್ರತಿನಿಧಿಗಳು ಯೋಗದಲ್ಲಿ ಭಾಗವಹಿಸಿದ್ದು ಮತ್ತೊಂದು ದಾಖಲೆಯಾಯಿತು.
ಗೀತಾಂಜಲಿ ಎನ್ ಎಮ್

Category:Yoga



ProfileImg

Written by Geethanjali NM

Author ✍️

0 Followers

0 Following