ಯೋಗವನು ದಿನನಿತ್ಯ ನಿಷ್ಠೆಯಲಿ ಮಾಡಿದರೆ
ರೋಗವನು ದೂರಕ್ಕೆ ಅಟ್ಟುವುದು ಸುಲಭ..
ಮೊಗದಲ್ಲಿ ನೆಮ್ಮದಿಯ ಭಾವವನು ತುಂಬಿರಲು
ನೀಗುವುದು ಕಷ್ಟವನು - ಗೋಪಕಂದ..!!
ಇಂದು ದೇಶದೆಲ್ಲೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ. ರೋಗ ಪ್ರತಿಯೊಬ್ಬರನ್ನೂ ಕಾಡುತ್ತಿರಲು ಇಂದಿನ ಕಾಲಕ್ಕೆ ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾದುದು. ಮೊದಲಿನಂತೆ ಹಳ್ಳಿಯ ಜನ ತಮ್ಮದೇ ಗದ್ದೆಯಲ್ಲೋ, ತೋಟದಲ್ಲೋ ಬೆವರು ಬಿಚ್ಚಿ ದುಡಿಯುವವರು ಈಗ ತೀರಾ ಕಡಿಮೆ. ಹೆಚ್ಚಿನವರು ಹಳ್ಳಿಯಿಂದ ಪೇಟೆಗೆ ವಲಸೆ ಹೋಗುತ್ತಿದ್ದಾರೆ. ಇವರ ಮೇಲೆ ಯೋಗ ರಾಮಬಾಣದಂತೆ ಕೆಲಸ ಮಾಡುತ್ತದೆ. ನಿವೃತ್ತರು ಮನೆಯೊಳಗೆ, ಯುವಕರು ಕಚೇರಿಯೊಳಗೆ ಕೆಲಸ ಮಾಡುತ್ತಿರುತ್ತಾರೆ. ಆಹಾರ ಸೇವಿಸುವಲ್ಲಿ ಇತಿಮಿತಿಗಳಿಲ್ಲ, ಹೊತ್ತುಗಳಿಲ್ಲ. ಅಷ್ಟೇ ಏಕೆ..... ಸೇವಿಸುವ ಆಹಾರವೂ ವಿಷಯುಕ್ತವಾಗಿರುತ್ತದೆ. ಹೀಗಾಗಿ ರೋಗಗಳು ನಮಗೆ ಅರಿವಿಗೆ ಬಾರದಂತೆ ನಮ್ಮನ್ನು ಮುತ್ತುತ್ತಿವೆ.
ನಮ್ಮ ದೈನಂದಿನ ಚಟುವಟಿಕೆಯ ಪಟ್ಟಿಗೆ ಯೋಗವನ್ನೂ ಸೇರಿಸಬೇಕು. ಒಂದಷ್ಟು ಸಮಯವನ್ನು ಯೋಗ ಮಾಡುವುದಕ್ಕಾಗಿ ಇಡಬೇಕು. ಹಾಗೆಯೇ ತಿನ್ನುವ ಆಹಾರವನ್ನು ಮಿತಿಯಲ್ಲಿ ಇಟ್ಟುಕೊಳ್ಳಬೇಕು. ಈ ರೀತಿಯ ಶಿಸ್ತನ್ನು ಪಾಲಿಸಿದರೆ ತಕ್ಕಮಟ್ಟಿಗೆ ರೋಗ ಬಾರದಂತೆ ಅಥವಾ ಬಂದ ರೋಗವನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಹುದು.
ಹಿಂದಿನ ಕಾಲದಲ್ಲಿ ಹಿರಿಯರು ಮನೆಯಲ್ಲೇ ತಮಗೆ ಬೇಕಾದಷ್ಟು ತರಕಾರಿಯನ್ನು ಬೆಳೆಸುತ್ತಿದ್ದರು. ಅದನ್ನೇ ಸೇವಿಸುತ್ತಿದ್ದರು. ಅದು ರೋಗ ನಿರೋಧಕ ಶಕ್ತಿಯಿಂದ ಕೂಡಿತ್ತು. ಜನರಲ್ಲಿ ಉತ್ತಮ ಆರೋಗ್ಯವಿತ್ತು. ಆದರೆ ಈಗ....ಸೇವಿಸುವ ಆಹಾರವಿಡೀ ವಿಷಪೂರಿತವಾಗಿದ್ದು ರೋಗಕ್ಕೆ ಮುಕ್ತವಾಗಿ ದಾರಿಮಾಡಿ ಕೊಡುತ್ತದೆ.
ನಾವು ವೈದ್ಯರ ಬಳಿಗೆ ಔಷಧಿಗೆ ಹೋದಾಗ ಅವರು ಇಂದು ಹೇಳುವುದು ವಾಕಿಂಗ್ ಮಾಡಿ ಎಂದು. ಯೋಗಕ್ಕೆ ಹೆಚ್ಚಿನ ಮಹತ್ತ್ವವನ್ನು ಕೊಡಲಾಗುತ್ತದೆ. ಆದರೆ, ವಯಸ್ಸಾದವರ ದೇಹ ಬೇಕಾದಂತೆ ಬಾಗದು. ಇದಕ್ಕೆ ಸುಲಭ ಉಪಾಯ ದಿನಕ್ಕೊಂದು ಅರ್ಧ ಗಂಟೆ ವಾಕಿಂಗ್... ದೇಹವನ್ನುಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಮಸ್ಯೆ, ಗ್ಯಾಸ್ಟ್ರಿಕ್... ಒಂದೇ, ಎರಡೇ..!!
ಯೋಗವೆಂದರೆ ಯಾಗವೆಂಬ ತ್ಯಾಗ..! ಒಳಗಿನ ಕೊಳಕನು ತೊಳೆದು ಬೆಳಕಿನ ದೀಪವನ್ನು ಉರಿಸುವುದೇ ಯೋಗ. ಪುಟ್ಟ ಮಕ್ಕಳು ಉತ್ಸಾಹದಲಿ ಯೋಗವನ್ನು ಮಾಡುತ್ತಾರೆ. ದಿನ ಕಳೆದಂತೆ ನಿಧಾನಕ್ಕೆ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಆಹಾರ ಸೇವನೆಯಲ್ಲೂ ಬದಲಾವಣೆ ಬರುತ್ತದೆ. ರೋಗದ ಆಹ್ವಾನಕ್ಕೆ ಕಾರಣರಾಗುತ್ತಾರೆ. ಎಲ್ಲರೂ ಯೋಗ ಮಾಡಿ ಆರೋಗ್ಯವಾಗಿ ಇರೋಣ.
“ಯೋಗ ಮಾಡಿ ರೋಗ ಅಳಿಸಿ, ನೆಮ್ಮದಿ ಗಳಿಸಿ”
✍ ಮುರಳಿಕೃಷ್ಣ ಕಜೆಹಿತ್ತಿಲು
DTP Worker, Vittal, Mangalore
0 Followers
0 Following