ಕಥೆ : ಹೌದು ಸ್ವಾಮಿ! ನಾವು ನೈಂಟೀ'ಸ್ ಕಿಡ್ಸ್.
ಲೇಖಕರು : ವಿನಯ್ ಕುಮಾರ್ ಆಯನೂರು.
ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಅಯ್ಯೋ ನಮ್ ಕಾಲದಲ್ಲಿ ಹಿಂಗೆಲ್ಲಾ ಇರ್ಲಿಲ್ಲಪ್ಪ ಅಂತ ನಮ್ ಅಪ್ಪನೋ, ಅಮ್ಮನೋ, ಅಜ್ಜ-ಅಜ್ಜಿನೋ ಅಥವಾ ಚಿಕ್ಕಪ್ಪ-ದೊಡ್ಡಪ್ಪನ ಬಾಯಲ್ಲೋ ಕೇಳ್ತಾನೆ ಇರ್ತೀವಿ.
ಹೌದೋ? ಅಲ್ವೋ?
ಯೋಚನೆ ಮಾಡಿದಾಗ ಅವ್ರದ್ದೆಲ್ಲಾ ಒಂದ್ ಕಾಲ ಅನ್ನೋದಾದ್ರೆ ನಮ್ಗಳ್ದು ಒಂದ್ ಕಾಲ ಇದೆ ಅದು ಯಾವುದು ಅಂತೀರಾ?
ಅದು 90's ಕಾಲ…
1990 ರಿಂದ 2000 ಇಸವಿ ಒಳಗೆ ಹುಟ್ಟಿ, ಈ ದಿನಗಳನ್ನೆಲ್ಲ ನೋಡಿರೋ ನಮ್ಮಂತವರಿಗೆ 90's ಕಿಡ್ಸ್ ಅಂತಾರೆ ನೋಡಿ.
ಬನ್ನಿ ಹಾಗಾದ್ರೆ, ಹಾಗೇ ನಮ್ ಕಾಲ ಹೇಗಿತ್ತು, ಏನೇನಲ್ಲ ಮಾಡ್ತಾ ಇದ್ವಿ ಅನ್ನೋದರ ಬಗ್ಗೆ ಒಂದಷ್ಟು ಚರ್ಚೆ ಮಾಡಣ.
ಕಳೆದೆರಡು ವರ್ಷದ ಹಿಂದೆ ಕರೋನ ಅಂತ ಲಾಕ್ ಡೌನ್ ಆಗಿ ಎಲ್ಲರೂ ಮನೆಯಲ್ಲಿ ಕೂತಿದ್ದಾಗ ಹೊಸ ಸೀರಿಯಲ್ ಗಳು ಯಾವುದು ಶೂಟಿಂಗ್ ಆಗ್ತಾ ಇರಲಿಲ್ಲ ಅದ್ಕೆ ಆ ಟೈಮಲ್ಲಿ ನಾವೆಲ್ಲಾ ಟಿವಿಲಿ ನೋಡ್ತಾ ಇದ್ದಿದ್ದು ಏನ್ ಹೇಳಿ...
ನೆನಪಾಯ್ತಾ.....
ಅವೇನೆ ನಮ್ಮ 90's ಕಿಡ್ಸ್ ಸೀರಿಯಲ್ ಗಳು. ಡಿಡಿ ನ್ಯಾಷನಲ್ ಅಥವಾ ಚಂದನದಲ್ಲಿ ಶಕ್ತಿಮಾನ್ ಅಂತ ಒಂದು ಸೀರಿಯಲ್ಲು. ಆಹಾ ಭಾನುವಾರ ಬಂದ್ರೆ ಸಾಕು ಕಾಯ್ತಾ ಇರ್ತಿದ್ವಿ ಅದನ್ನ ನೋಡೋಕೆ.
ಅದು ಮುಗಿದ ಮೇಲೆ ರಾಮಾಯಣ-ಮಹಾಭಾರತ.
ಈಗೆಲ್ಲಾ ಹೊಸ ಹಾಡುಗಳನ್ನು ಕೇಳೋಕೆ ಬೇಕಾದಷ್ಟು ಚಾನಲ್ಗಳು ಇರಬಹುದು, ಆದ್ರೆ ಅವಾಗ ನಮಗಿದ್ದಿದ್ದು ಬುಧವಾರ ಚಂದನದಲ್ಲಿ ಬರ್ತಾ ಇದ್ದ ಸೂಪರ್ ಸಿಕ್ಸ್ ಹಾಡುಗಳು ಮಾತ್ರ.
ಈಗೆಲ್ರೂ ಎಂತ ಮೂವಿ ರಿಲೀಸ್ ಆದ್ರು OTT ಅಂತೆ PRIME ಅಂತೆ VOOT ಅಂತೆ ಅಂತೆಲ್ಲ ಅಡ್ವರ್ಟೈಸೇ ಇಲ್ದಂಗೆ ಫಿಲಂ ನೋಡೋ ಈಗಿನ ಕಾಲದವರಿಗೇನ್ರೀ ಗೊತ್ತು, ಒಂದು ಫಿಲ್ಮನ್ನ ಬಯೋಸ್ಕೋಪ್ ಅಂತಾ ದಿನ ಒಂದೊಂದು ಘಂಟೆ ನೋಡಿ, ನಾಳೆ ಮತ್ತೆ ಮುಂದುವರೆದ ಭಾಗ ಯಾವಾಗ ಬರುತ್ತೋ ಅಂತ ಕಾದು ಮೂರು- ಮೂರು ದಿನಗಳ ಗಟ್ಲೆ ಒಂದು ಸಿನಿಮಾ ನೋಡ್ತಾ ಇದ್ದಿದ್ದ ದಿನಗಳು.
ಈಗಿನ ಸ್ಕೂಲ್ ಹೋಗೋ ಮಕ್ಕಳು ಫುಲ್ ರೆಡಿಯಾಗಿ ಟೈ ಹಾಕೊಂಡು, ಶೂ ಹಾಕೊಂಡು ಅಷ್ಟೇ ಅಲ್ದೆ ಅವರನ್ನು ಬಿಟ್ಟು ಬರೋಕೆ ಅಮ್ಮ ಬಸ್ ಹತ್ರ ಹೋಗಿ ಟಾಟಾ ಮಾಡಿ ಕಳಿಸ್ತಾರೆ.
ಈಗ ನಾವು ಹೇಗೆ ಹೋಗ್ತಿದ್ವಿ ಅಂತ ಹೇಳ್ತೀನಿ ಕೇಳಿ - ಒಟ್ರಾಸಿ ಅಂಗಿ ಚಡ್ಡಿ ಹಾಕೊಂಡು ನಮ್ ಪಾಡಿಗೆ ನಾವು ಹೋಗ್ತಾ ಇದ್ವಿ. ನಮ್ ಜೊತೆಗಾರರಾಗಿ ಒಂದಷ್ಟು ಸ್ಪೆಷಲ್ ಗೆಳೆಯರಿದ್ದರು. ಅವರ ಮಜಾ ಕೇಳಿ ಈಗ.
ಅವರೆಲ್ಲ ಸ್ಕೂಲಿಗೆ ಬರ್ತಾನೆ ಇರ್ಲಿಲ್ಲ… 😳
ಒಂದು, ಅವರ ಅಮ್ಮ ಅಥವಾ ಅಪ್ಪ ಕೈಕಾಲು ಕಟ್ಟಿ ದರ ದರ ಅಂತ ಎಳ್ಕೊಂಡ್ ಬಂದು ಸ್ಕೂಲಿಗೆ ಬಿಟ್ಟು ಹೋಗ್ತಿದ್ರು.
ಇಲ್ಲಾಂದ್ರೆ ಅವರನ್ನ ಕರ್ಕೊಂಡು ಬರೋಕೆ ನಮ್ ಮಾಸ್ಟ್ರು, ಟೀಚರೇ ಅವರ ಮನೆಗೆ ಹೋಗ್ಬೇಕಿತ್ತು.😀😀
ಸೋ...ಮಾರಲ್ ಆಫ್ ದಿ ಸ್ಟೋರಿ ಈಸ್ ಈಗೆನಾದ್ರೂ ಮಕ್ಕಳು ಓಯ್, ನನ್ನ ಸ್ಕೂಲಿಗ್ ಕರ್ಕೊಂಡು ಹೋಗೋಕೆ ವ್ಯಾನ್ ಬರುತ್ತೆ ಗೊತ್ತಾ ಅಂತ ಏನಾದ್ರು ಬಿಲ್ಡಪ್ ತಗೊಳ್ಳೋಕೆ ಹೋದ್ರೆ
ನಾವು ನೈಂಟೀಸ್ ಕಿಡ್ಸ್ ಏನು ಹೇಳಬಹುದು ಹೇಳಿ?
ಅಯ್ಯೋ, ಸುಮ್ನಿರಪ್ಪ ನಿಮ್ಮನ್ನು ಕರ್ಕೊಂಡು ಹೋಗೋಕೆ ವ್ಯಾನ್ ಬಂದ್ರೆ ನಮ್ಮನ್ನ ಕರ್ಕೊಂಡ್ ಹೋಗೋಕೆ ಟೀಚರೇ ಬರ್ತಿದ್ರು ಅಂತ ಹೇಳಬಹುದು.😀
ಮೊನ್ನೆ ನನ್ನ ಅಳಿಯಂದ್ರು ಮಾಮಾ ಬಿಸ್ಕೆಟ್ ಕೊಡಿಸು ಅಂತ ಕೇಳಿದ್ರು..
ಯಾವ ಬಿಸ್ಕೆಟ್ ಅಂತ ಕೇಳಿದ್ದಕ್ಕೆ ಡಾರ್ಕ್ ಫ್ಯಾಂಟಸಿ, ಹೈಡ್ and ಸೀಕ್, ಇಲ್ಲ ಅಂದ್ರೆ ಬಾರ್ಬನ್ನೆ ಬೇಕು ಅಂತ ಕೇಳುದ್ರು.
ಅಬ್ಬಬ್ಬಾ ಎಷ್ಟೆಲ್ಲ ವೆರೈಟಿ ಅಲಾ ಬಿಸ್ಕೆಟ್ಲಿ ಅಂತ ಅನಿಸ್ತು. ಹಾಗೆ ನಮ್ಮ ನೈಂಟೀಸ್ ಫ್ಲಾಶ್ ಬ್ಯಾಕ್ ಹೋದೆ.
ನಾವು ಅವಾಗ ತಿಂತಾ ಇದ್ದಿದ್ ಬಿಸ್ಕೇಟ್ ಯಾವ್ದು ಗೊತ್ತಾ??
ಶಕ್ತಿ ಬಿಸ್ಕೆಟ್. 10 ಪೈಸೆ ಕೊಟ್ರೆ 10 ಬಿಸ್ಕೆಟ್ ಸಿಕ್ತಿತ್ತು. ಈ ಬಿಸ್ಕತ್ ಒಂಥರಾ ಬಡವರ ಬಾದಾಮಿ ಅಂತಾರಲ್ಲ ಹಾಗೆ ಚೀಪ್ ಅಂಡ್ ಬೆಸ್ಟ್. ಅದ್ಬಿಟ್ರೆ ಕೊಬ್ಬರಿ ಬಿಸ್ಕೇಟು ಇಲ್ಲ ಅಂದ್ರೆ ಬೆಣ್ಣೆ ಬಿಸ್ಕೆಟ್.
ಅಯ್ಯೋ ಇರಿ ಇರಿ…. !
ಇನ್ನ ಒಂದಿದೆ ಆ ಬಿಸ್ಕೆಟ್ ಈಗ್ಲೂನೂ ನಮ್ಮ ಮಕ್ಕಳಿಗೆ ಕೊಡ್ತಿದೀವಿ. ಯಾವುದು ಹೇಳಿ ಅದೇ G ಫಾರ್ ಜೀನಿಯಸ್ .. ಪಾರ್ಲೆ ಜಿ.
ಪಾಕೆಟ್ ನಲ್ಲಿ ಒಂದಷ್ಟು ಬಿಸ್ಕೆಟ್ ಕಮ್ಮಿ ಆಗಿರಬಹುದೇನೋ ಆದ್ರೆ ಪಾಕೆಟ್ ಕವರಿಂದ ಹಿಡಿದು ಪ್ಯಾಕೆಟ್ ಮೇಲಿರೋ ಹುಡುಗಿ ಕೂಡ ಚೇಂಜ್ ಆಗಿಲ್ಲ.
ಏನ್ ಮಾಡೋದು.. ಕಾಲ ಚೇಂಜ್ ಆಗಿದಿಯೋ ಅಥವಾ ನಾವೇ ಚೇಂಜ್ ಆಗ್ತಾ ಇದಿವೋ ಗೊತ್ತಿಲ್ಲ. ಆದರೆ ಬಂದಂಗೆ ಹೋಗ್ಬೇಕು ಅನ್ನೋ ಹಾಗಾಗಿದೆ.
ಅಯ್ಯೋ ಮರ್ತೆ ಬಿಟ್ಟಿದ್ದೆ ನಮ್ಮ ನೈಂಟೀಸ್ ಕಿಡ್ಸ್ ಆಟಗಳನ್ನು ನೆನಪು ಮಾಡ್ಕೂಂಡ್ಬಿಡಣ ಅಲ್ವಾ??
ಮೊಬೈಲ್ ಅಲ್ಲಿ ಲೂಡೋ ಆಡೋ ಮಕ್ಳಿಗ್ ಏನ್ರೀ ಗೊತ್ತು ನಾವುಗಳು ಆಡುತ್ತಿದ್ದ ಚೌಕಬಾರ ಆಟ.
ಮನೆ ಕಟ್ಟೆ ಮೇಲೋ, ಇಲ್ಲ ಅಂದ್ರೆ ಮನೆ ಒಳಗಡೆನೇ ದೊಡ್ಮನೆ ಆಟಕ್ಕೆ ಬೆಂಗಳೂರು ನಗರ ಅಂತ ರಾಗ ಹೇಳ್ಕೊಂಡು ಗೆರೆ ಹಾಕಿ, ಸಣ್ಮನೆ ಆಟಕ್ಕೆ ದಾವಣಗೆರೆ ಅಂತ ರಾಗ ಹೇಳ್ಕೊಂಡು ಗೆರೆ ಹಾಕಿ ಮನೆ ಮಂದಿ ಎಲ್ಲರೂ ಕೂತ್ಕೊಂಡು ಆಡ್ತಾ ಇದ್ವಿ.
ಈಗಿನ ಮಕ್ಳು ಯಾವ ಆಟ ಕೇಳಿದ್ರು ಅದನ್ನ ಮೊಬೈಲ್ನಲ್ಲಿ ಆಡ್ತೀವಿ ಅಂತಾರೆ. ಆದರೆ ನಮ್ಮ ಕಾಲದಲ್ಲೂ ಇದ್ವು ಆಟಗಳು ಲಗೋರಿ ಅಂತ. ಆರು -ಏಳು ಕಲ್ಲು ಕಟ್ಟಿ ಎರಡು ಟೀಮಲ್ಲಿ ಒಂದು ಟೀಮ್ ಕಲ್ಲನ್ನು ಬೀಳಿಸಿ ಇನ್ನೊಂದು ಟೀಮ್ ನ ಕಲ್ಲು ಕಟ್ಟೋದಕ್ಕೆ ಬಿಡದೆ ಬಾಲ್ ತಗೊಂಡು ಓಡಿಸಿಕೊಂಡು ಹೋಗಿ ಹೊಡಿತಾ ಇದ್ವಿ. ಹಿಂಗೆ ಆಡ್ತಾ ಆಡ್ತಾ ಅದೆಷ್ಟು ಸಲ ಮಣ್ಣಲ್ ಬಿದ್ದು ಎದ್ದಿದ್ದೀವೋ ನಮಗೆೇ ಗೊತ್ತಿಲ್ಲ..
ಅದಷ್ಟೇ ಅಲ್ದೆ ಚಿನ್ನಿದಾಂಡು, ಗೋಲಿ, ಬುಗುರಿ ಅಂತ ಇನ್ನು ಏನೇನೋ ಆಟಗಳು.
ಬರೀ ಗಂಡುಮಕ್ಳು ಆಟಗಳನ್ನೇ ಹೇಳ್ತಾ ಇದೀನಿ ಅಂತ ಅನ್ಕೋಬೇಡಿ. ಒಂದಿಷ್ಟು ಹೆಣ್ಣು ಮಕ್ಕಳ ಆಟಗಳೂ ನಂಗೆ ನೆನ್ಪಿದೆ. ಉದಾಹರಣೆ ರೈಟಾ, ರೈಟಾ ಅಂತ ಕೇಳ್ಕೊಂಡು ಆಡ್ತಾ ಇದ್ದಂತ ಕುಂಟಬಿಲ್ಲೆ. ಇವರ ಆಟದ ಲಿಸ್ಟಲ್ಲಿ ಒಂದು ಸ್ಪೆಷಲ್ ಆಟ ಹೇಳ್ತೀನಿ ಕೇಳಿ.
ಅದು ಅಡುಗೆ ಆಟ. ಅಲ್ಲೇ ಸಿಗೋ ಸೊಪ್ಪು ಅದು ಇದು ಎಲ್ಲಾ ತಂದು ಆ ಅಡಿಗೆ ಮಾಡ್ತಿದಿವಿ ಈ ಅಡಿಗೆ ಮಾಡ್ತಿದಿವಿ ಅಂತ ಭರ್ಜರಿ ಅಡುಗೆ ಮಾಡಿದ್ದೇ ಮಾಡಿದ್ದು, ಬಡ್ಸಿದ್ದೇ ಬಡ್ಸಿದ್ದು.
ಇನ್ನೊಂದ್ ವಿಶೇಷ ಏನ್ ಗೊತ್ತಾ ನಾವೆಲ್ಲ ಚಿಕ್ಕೋರಿದ್ದಾಗ ಮಣ್ಣಲ್ಲಿ ಯಾವುದೋ ಹುಳ ಗೂಡು ಕಟ್ಟಿರ್ತಿತ್ತು. ಅದನ್ನ ತಗ್ಸೋದೇ ಒಂದು ಆಟ.
ಅದೂ ಹೆಂಗೆ ಅಂದ್ರೆ ಗುಬ್ಬಚ್ಚಿ ಗುಬ್ಬಚ್ಚಿ ಬಾಗ್ಲು ತೆಗಿ, ಗುಬ್ಬಚ್ಚಿ ಗುಬ್ಬಚ್ಚಿ ಬಾಗ್ಲು ತೆಗಿ ಅಂತ.
ಒಟ್ನಲ್ಲಿ ಹಿಂಗೆ ಇನ್ಸ್ಟಾಗ್ರಾಮ್ ನೋಡ್ತಾ ಇದ್ದಾಗ ಮೆಮೋರಿಸ್ ಆಫ್ ನೈಂಟೀಸ್ ಕಿಡ್ಸ್ ಅಂತೆಲ್ಲ ಟ್ರೋಲ್ ಬಂದಾಗ ಸ್ಕಿಪ್ ಮಾಡ್ದೆ ಅವನ್ನೆಲ್ಲಾ ನೋಡ್ತಾ ಇದ್ದಾಗ "ವೀ ಆರ್ ಪ್ರೌಡ್ ಟು ಸೇ - ಎಸ್ ವಿ ಆರ್ ನೈಂಟೀಸ್ ಕಿಡ್ಸ್".
ಸರಿ...ಇಲ್ಲಿಗೆ ನನ್ನ ಕಥೆ ಮುಗಿಸ್ತೀನಿ.
ಕಥೆ ಕೇಳಿ ಅಭಿಪ್ರಾಯ ತಿಳಿಸುವಾಗ ನಾನು ಹೇಳಿದ ಆಟಗಳನ್ನ ಅಥವಾ ಬೇರೆ ಏನಾದರೂ ನಿಮ್ಮ ನೈಂಟೀಸ್ ಮೆಮೊರಿಸ್ಗಳನ್ನ ಹಂಚ್ಕೋಬೇಕು ಅನ್ಸಿದ್ರೆ ಖಂಡಿತ ಹಂಚಿಕೊಳ್ಳಿ.
ಜೊತೆಲಿ ಈಗಿನ ಮಕ್ಕಳಿಗೆ ಮೊಬೈಲ್ ಕಮ್ಮಿ ಮಾಡ್ಸಿ ನಮ್ಮ ಕಾಲದ ಆಟಗಳನ್ನು ಆಡ್ಸಿ ಖುಷಿಪಡಿ ಅನ್ನೋದಷ್ಟೇ ನನ್ನ ಮನವಿ.
*************************
0 Followers
0 Following