ಹೌದು, ನಾನೂ ಅತ್ಯಾಚಾರಕ್ಕೆ ಒಳಗಾಗಿದ್ದೇನೆ!!!

ಅಸ್ವಸ್ಥ ಸಮಾಜ

ProfileImg
30 Jun '24
5 min read


image

ಹೌದು, ನಾನು ಕೂಡ ಅತ್ಯಾಚಾರಕ್ಕೆ ಒಳಗಾಗಿದ್ದೇನೆ. ಆದರೆ ನನಗೆ ಅತ್ಯಂತ ನೋವು ನೀಡಿದ್ದು ಅತ್ಯಾಚಾರವಲ್ಲ, ಅದರ ನಂತರ ನಾನು ಬದುಕು ಕಟ್ಟಿಕೊಳ್ಳಲು ಪರದಾಟ ನೆಡೆಸಿದ್ದು. ಅದನ್ನು ನೆನೆದಾಗಲೆಲ್ಲ ಕಣ್ಣು ತುಂಬಿ ಬರುತ್ತದೆ. 

ಅದ್ಯಾರೋ ಪಾಪಿಗಳು ತಮ್ಮ ಕಾಮದಾಹಕ್ಕೆ ಆ ದಿನ ನನ್ನ ಮೇಲೆ ಅತ್ಯಾಚಾರ ಎಸಗಿದರು ಆದರೆ ಈ ಕರಾಳ ಸಮಾಜದ ಕಣ್ಣಿನ ದಾಹಕ್ಕೆ ಪ್ರತಿಕ್ಷಣ ಪ್ರತಿದಿನ ಅತ್ಯಾಚಾರಕ್ಕೆ ಒಳಗಾಗುತ್ತಿದ್ದೇನೆ, ಅತ್ಯಾಚಾರಕ್ಕಿಂತ ಈ ನೋವು ಅತ್ಯಂತ ಭಯಾನಕವಾದದ್ದು. 

ಅದೊಂದು ದಿನ ಎಂದಿನಂತೆ ನನ್ನ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದೆ, ಅಂದೇಕೊ ಮನಸ್ಸು ಕೇಡನ್ನು ಸೂಚಿಸುತ್ತಿತ್ತು. ಅಂದು ಕೆಲಸದಿಂದ ಹೊರಟಾಗ ತಡವಾಗಿತ್ತು ಜೊತೆಗೆ ದಟ್ಟ ಮೋಡಗಳು ಎಲ್ಲೆಡೆ ಹರಡಿ ಕತ್ತಲಾವರಿಸಿತ್ತು. ಎಷ್ಟೇ ಬೇಗ ಹೊರಡಬೇಕೆಂದರೂ ಏನೇನೋ ಕಾರಣಗಳಿಂದ ತಡವಾಗಿತ್ತು. 

ಮನೆಯಿಂದ ಅಪ್ಪ, ಅಮ್ಮ ಕರೆ ಮಾಡುತ್ತಲೇ ಇದ್ದರು. ಅವರಿಗೂ ಆತಂಕ. ವಯಸ್ಸಿಗೆ ಬಂದ ಮಗಳು ಬೇಗನೆ ಮನೆ ಸೇರದಿದ್ದರೆ ಎಂತವರಿಗಾದರೂ ಭಯವಾಗುವುದು ಸಹಜವೇ. ನಾನು ಹೋಗುವ ದಾರಿಯಲ್ಲಿ ಸುಮಾರು 2-3 ಕಿಲೋ ಮೀಟರ್ ಖಾಲಿ ರಸ್ತೆ. ಆಟೋದಲ್ಲಿ ಓಡಾಡಲು ಸಹ ಭಯವಾಗುವಂತಹ ಪ್ರದೇಶ. ಪಕ್ಕದಲ್ಲಿಯೇ ರೈಲ್ವೆ ಹಳಿ ಇರುವ ಕಾರಣ ಒಬ್ಬೊಬ್ಬರೇ ಓಡಾಡುವುದು ಹೆಚ್ಚೇ ಅಪಾಯಕಾರಿ ಆದ್ದರಿಂದ ನಾನು ಬೇಗನೆ ಮನೆ ತಲುಪಿಬಿಡುತ್ತಿದ್ದೆ. 

ಒಮ್ಮೊಮ್ಮೆ ತಡವಾದರೆ ಅಪ್ಪ ಅಥವಾ ಅಣ್ಣ ಬಂದು ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಂದು ನನ್ನ ಹಣೆಬರಹ ಸರಿ ಇರಲಿಲ್ಲವೋ ಅಥವಾ ದೇವರು ಅದಾಗಲೇ ನನಗೆ ಕೆಟ್ಟದ್ದಾಗಲೆಂದು ಬರೆದುಬಿಟ್ಟಿದ್ದನೋ ಗೊತ್ತಿಲ್ಲ, ಅಪ್ಪನಿಗೆ ಹುಷಾರಿಲ್ಲದ ಕಾರಣ ಅವರು ಓಡಾಡುವ ಸ್ಥಿತಿಯಲ್ಲಿರಲಿಲ್ಲ, ಅಣ್ಣ ಕೆಲಸದ ನಿಮಿತ್ತ ಬೇರೆಡೆ ಹೋಗಿದ್ದನು ಆದ್ದರಿಂದ ಹೇಗೋ ಧೈರ್ಯ ಮಾಡಿ ನಾನೊಬ್ಬಳೆ ಹೋಗೋಣವೆಂದು ನಡೆಯುತ್ತಾ ಹೊರಟೆ. 

ಅಪ್ಪ ಬರುತ್ತೇನೆ ಎಂದರೂ ನಾನು ಕೇಳಲಿಲ್ಲ, ವಯಸ್ಸಾದ ಕಾರಣ ನಾನೇ ಬೇಡವೆಂದು ಬಲವಂತ ಮಾಡಿದೆ. ಅದಕ್ಕೂ ಮೊದಲು ಒಂದಿಬ್ಬರು ಆಟೋದವರನ್ನು ಕೇಳಿ ನೋಡಿದೆ ಆದರೆ ಯಾರೂ ಬರಲು ಒಪ್ಪಲಿಲ್ಲ. ಕಾರಣ ವಾಪಸು ಬರುವಾಗ ಅವರಿಗೆ ತೊಂದರೆ ಆಗುವ ಭಯ. 

ತುಸು ದೂರ ನಡೆಯುತ್ತಿದ್ದ ಹಾಗೆ ಜೋರಾದ ಮಳೆ ಆರಂಭವಾಯಿತು, ನನ್ನಲ್ಲಿದ್ದ ಧೈರ್ಯ ಕೂಡ ಕಡಿಮೆಯಾಗಿತ್ತು. ಒಂದೊಂದು ಕ್ಷಣವೂ ಒಂದೊಂದು ಯುಗದಂತೆ ಭಾಸವಾಗತೊಡಗಿತ್ತು. 

ಪ್ರತಿದಿನವೂ ನಡೆಯುತ್ತಿದ್ದ ಹಾದಿಯೆ ಆಗಿದ್ದರೂ ಅಂದೇಕೊ ಸಾಗಿದಷ್ಟೂ ದೂರ ದೂರ ಅನಿಸತೊಡಗಿತು. ಮಳೆ ಹೆಚ್ಚಾಗುತ್ತಿದ್ದ ಹಾಗೆ ನನ್ನ ಧೈರ್ಯ ಕುಸಿಯತೊಡಗಿತು. ಮುಂದೆ ಇರುವವರೂ ಕಾಣದಷ್ಟು ಜೋರಾದ ಮಳೆ. ಕೈಯಲ್ಲಿ ಛತ್ರಿ ಇದ್ದರೂ ಮೈ ಪೂರ ಒದ್ದೆ. 

ಅಷ್ಟರಲ್ಲೇ ಒಂದು ಆಟೋ ನನ್ನ ಪಕ್ಕ ಬಂದು ನಿಂತ ಅನುಭವ. ಮಳೆಯ ಸದ್ದಿಗೆ ಅದು ನನ್ನ ಹಿಂದೆ ಬರುತ್ತಿರುವುದು ತಿಳಿದಿರಲಿಲ್ಲ. ನನಗೆ ಇನ್ನೂ ಹೆಚ್ಚು ಭಯವಾಯಿತು. ಅಕ್ಕ ಪಕ್ಕ ನೋಡಿದೆ, ಊಹೂ ಯಾರೂ ಕಾಣಿಸಲಿಲ್ಲ, ಓಡಿ ಹೋಗೋಣವೆಂದರೆ ಮನೆಗಳೇ ಕೊಚ್ಚಿ ಹೋಗುವಂತಹ ಮಳೆ. 

ಆಟೋ ಅಲ್ಲಿ ನಿಂತದ್ದು ಗೊತ್ತೇ ಆಗದಂತೆ ನಾಟಕ ಮಾಡುತ್ತಾ ನನ್ನ ನಡಿಗೆ ಜೋರು ಮಾಡಿದೆ. ಆಟೋ ಕೂಡ ನನ್ನ ಹಿಂದೆಯೇ ಬರತೊಡಗಿತು. ಉಗುಳು ನುಂಗುತ್ತಾ, ಸೀರೆ ನಡಿಗೆ ಹಿಡಿದು ಓಡತೊಡಗಿದೆ. ಮುಂದೆ ದಾರಿ ಕೂಡ ಕಾಣದಾಗಿತ್ತು. ಅದ್ಯಾವ ಗುಂಡಿ ಇತ್ತೋ ಎಡವಿ ಬಿದ್ದು ಬಿಟ್ಟೆ, ಅಷ್ಟೇ!!! ಮುಂದಿನದು ನರಕಯಾತನೆ. 

ಕಾಡು ಮೃಗದ ಬಾಯಿಗೆ ಆಹಾರವಾಗಿದ್ದರೂ ನೆಮ್ಮದಿ ಇರುತ್ತಿತ್ತೇನೋ ಆದರೆ ನಾನು ಸಿಕ್ಕಿಹಾಕಿಕೊಂಡಿದ್ದು ಮೃಗಗಳಂತಿರುವ ಮನುಷ್ಯರ ಬಾಯಿಗೆ. ಮನಸೋ ಇಚ್ಛೆ ನನ್ನ ಅನುಭವಿಸಿದರು. ಒಬ್ಬರ ಹಿಂದೆ ಒಬ್ಬರಂತೆ ಸತತವಾಗಿ ನನ್ನ ದೇಹವನ್ನು ಹರಿದು ಮುಕ್ಕಿದರು. ಎಷ್ಟು ಬೇಡಿಕೊಂಡರೂ ಅವರ ಮನಸ್ಸು ಕರಗಲಿಲ್ಲ. ನಾನು ಮೂಕಳಾದೆ. ಯಾವಾಗ ಪ್ರಜ್ಞೆ ತಪ್ಪಿತೋ ತಿಳಿಯಲಿಲ್ಲ. 

ಪ್ರಯಾಸದಿಂದ ಅರೆ ಬರೆ ಕಣ್ಣು ಬಿಟ್ಟಾಗ ದೇಹವೆಲ್ಲ ಭಾರವೆನಿಸಿ ನೋಯುತ್ತಿತ್ತು. ಮಂಪರು ಹಿಡಿದಂತಾಗಿತ್ತು. ಸಣ್ಣದಾಗಿ ಗದ್ದಲ ಕೇಳಿ ಪೂರ್ತಿ ಕಣ್ಣುಗಳನ್ನು ತೆರೆದೆ. ಮೈ ಮೇಲಿನ ಬಟ್ಟೆ ಅಲ್ಲಲ್ಲಿ ಹರಿದು ಹೋಗಿತ್ತು, ಮೈ ಕೈ ಎಲ್ಲಾ ಪರಚಿದ ಗಾಯಗಳು. 

ಅಲ್ಲಲ್ಲಿ ಜನರು ಗುಂಪುಗಟ್ಟಿ ನನ್ನನ್ನೇ ನೋಡುತ್ತಿದ್ದರು. ಯಾರೊಬ್ಬರೂ ಹತ್ತಿರ ಸುಳಿಯಲಿಲ್ಲ. ಬಹುಶಃ ನಾನು ಸತ್ತಿರಬಹುದೆಂದು ತಿಳಿದಿರಬೇಕು. ಅಲ್ಪ ಸ್ವಲ್ಪ ದೇಹ ಅಲ್ಲಾಡಿದ ನಂತರ ಕೆಲವರು ಹಿಂದಡಿ ಇಟ್ಟರು, ಮತ್ತೆ ಕೆಲವರು ಕೂತೂಹಲದಿಂದ ಒಂದು ಹೆಜ್ಜೆ ಮುಂದೆ ಬಂದರು. 

ಅಷ್ಟರಲ್ಲೇ ಪೊಲೀಸ್ ಜೀಪಿನ ಸದ್ದು ಕೇಳಿ ಎಲ್ಲರೂ ಚೆಲ್ಲಾಪಿಲ್ಲಿಯಾದರು, ಅದರ ಹಿಂದೆಯೇ ಆಂಬುಲೆನ್ಸ್ ಸದ್ದು. ಮೈ ಕೈ ನೋವಿನ ಪರಿಣಾಮ ನಾನು ಮತ್ತೆ ಮೂರ್ಛೆ ಹೋದೆ. ನಂತರ ಎಚ್ಚರವಾದದ್ದು ಆಸ್ಪತ್ರೆಯ ಹಾಸಿಗೆಯ ಮೇಲೆಯೆ. 

ಅಮ್ಮ ನನ್ನ ಪಕ್ಕದಲ್ಲಿ ಕುಳಿತು ಕಣ್ಣೀರು ಸುರಿಸುತ್ತಿದ್ದಳು, ಅಪ್ಪ ಹಾಗೂ ಅಣ್ಣ ಬಾಗಿಲ ಬಳಿ ನಿಂತು ಪೊಲೀಸರೊಡನೆ ಮಾತಿಗಿಳಿದಿದ್ದರು. ಪೊಲೀಸರು ಏನೋ ಹೇಳುತ್ತಿದ್ದರು ಆದರೆ ಇಬ್ಬರೂ ಒಪ್ಪಲು ತಯಾರಿರಲಿಲ್ಲ. ನನಗೆ ಏನೊಂದೂ ಅರ್ಥವಾಗಲಿಲ್ಲ, ಸುಮ್ಮನೆ ನೋಡುತ್ತಾ ಉಳಿದೆ. 

ನಿಧಾನವಾಗಿ ನನಗೆ ವಾಸ್ತವದ ಅರಿವಾಗತೊಡಗಿತು. ಹೇಳಲು ಮಾತುಗಳಿರಲಿಲ್ಲ. ಅಮ್ಮನ ಕಣ್ಣೀರು, ಅಪ್ಪನ ನಿಸ್ತೇಜ ಮುಖ, ಅಣ್ಣ ಅಸಹಾಯಕ ಪರಿಸ್ಥಿತಿ ಬಿಟ್ಟರೆ ಅಲ್ಲೇನು ಉಳಿದಿರಲಿಲ್ಲ. ಪೊಲೀಸರ ಮುಂದೆ ಹೇಳಿಕೆ ನೀಡಿದೆ. ಆದರೆ ಅದು ಪ್ರಯೋಜನ ಇಲ್ಲವೆಂದು ನನಗಾಗಲೇ ಅರಿವಾಗಿತ್ತು. ನಾಮಕಾವಸ್ಥೆ ಅವರು ಕಂಪ್ಲೇಂಟ್ ತೆಗೆದುಕೊಂಡರು. 

ಅಪ್ಪ, ಅಣ್ಣ ಅದ್ಯಾಕೋ ಅದನ್ನೆಲ್ಲ ಮುಂದುವರೆಸುವ ಆಲೋಚನೆ ಮಾಡಲಿಲ್ಲ. ಅದು ಅಲ್ಲಿಗೇ ಅಂತ್ಯವಾಗಿತ್ತು ಜೊತೆಗೆ ನನ್ನ ಆಸೆ ಕನಸುಗಳು ಕೂಡ!!!

ಅತ್ಯಾಚಾರ ಆಗಿದ್ದರಲ್ಲಿ ನನ್ನ ತಪ್ಪೇನೂ ಇರಲಿಲ್ಲ ಆದರೂ ಎಲ್ಲರ ಕಣ್ಣಿನಲ್ಲಿ ನಾನೊಬ್ಬಳು ಅಪರಾಧಿ!!! 

ಆ ಆಘಾತದಿಂದ ಹೊರಬರಲು ಸುಮಾರು ತಿಂಗಳುಗಳೇ ತೆಗೆದುಕೊಂಡೆ ಆದರೆ ವಿಪರ್ಯಾಸ ಎಂದರೆ ಸಮಾಜ ಅದ್ಯಾವುದನ್ನೂ ಮರೆತಿರಲಿಲ್ಲ, ನಾನು ಹೊಸ್ತಿಲು ದಾಟಿದ ಕ್ಷಣವೇ ನನ್ನ ಮೇಲೊಂದು ಚೂಪು ನೋಟ. ಕಣ್ಣಿನಲ್ಲೇ ಕೊಲ್ಲುವ ಪ್ರಶ್ನೆಗಳು, ವಿಚಿತ್ರ ವರ್ತನೆಗಳು, ಸಾಂತ್ವನದ ನೆಪ ಹೇಳಿ ಮತ್ತೆ ಮತ್ತೆ ಆ ಕರಾಳ ದಿನವನ್ನು ನೆನಪಿಸುವ ಹಿತ ಶತ್ರುಗಳ ಕೂತುಹಲಭರಿತ ಮಾತುಗಳು. 

ಅತ್ಯಾಚಾರಕ್ಕೆ ಒಳಗಾಗಿದ್ದೆ ಎನ್ನುವುದೇ ನನಗೆ ದೊಡ್ಡ ಶಾಪವಾಗಿದೆ. ಆ ಕಾಮುಕರಿಗೆ ಶಿಕ್ಷೆ ಆಗಲಿಲ್ಲ ಆದರೆ ನಾನು ಪ್ರತಿದಿನ ಶಿಕ್ಷೆ ಅನುಭವಿಸುತ್ತಿರುವೆ. ಕೇವಲ ನಾನೊಬ್ಬಳೆ ಅಲ್ಲ ನನ್ನೊಂದಿಗೆ ನನ್ನ ಇಡೀ ಕುಟುಂಬವೂ ಶಿಕ್ಷೆ ಅನುಭವಿಸುವಂತಾಗಿದೆ. ಒಂದು ರೀತಿ ಶಾಪಗ್ರಸ್ತರಾದಂತೆ ಬದುಕುತ್ತಿದ್ದೇವೆ. 

ಸಮಾಜಕ್ಕೆ ನಾನು ಕೆಲವು ಪ್ರಶ್ನೆಗಳನ್ನು ಕೇಳಬೇಕಿದೆ. ಅತ್ಯಾಚಾರ ಆಗಿ ನೋವು ಅನುಭವಿಸುತ್ತಿರುವುದು ನಾನು ಮತ್ತು ನನ್ನ ಕುಟುಂಬ, ಸಾಂತ್ವನ ಬೇಕಿದೆ ನಮಗೆ ಹೊರತು ನಿಮ್ಮ ಚುಚ್ಚು ಮಾತುಗಳಲ್ಲಿ. ಶಿಕ್ಷೆ ಆಗಬೇಕಿರುವುದು ಆ ದುರುಳರಿಗೆ ಆದರೆ ನೀವೆಲ್ಲರೂ ಏಕೆ ಪ್ರತಿದಿನ ನಮಗೆ ಶಿಕ್ಷೆ ನೀಡುತ್ತಿರುವಿರಿ? ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಹಿಂಸೆ ಮಾಡುತ್ತಿರುವಿರಿ? ನಾನೇನು ಬೇಕೆಂದು ಅವರ ಬಳಿ ಹೋಗಲಿಲ್ಲ. ಆದರೂ ಯಾಕೆ ಕೆಟ್ಟ ದೃಷ್ಟಿ ನನ್ನ ಮೇಲೆ?

ಯಾಕೆ, ಹೇಗೆ ಅತ್ಯಾಚಾರ ಆಯಿತು ಎಂದು ನನ್ನನ್ನು ಪ್ರಶ್ನಿಸುವುದನ್ನು ಬಿಟ್ಟು ಆ ದುರುಳರನ್ನು ಪ್ರಶ್ನಿಸಿ, ಯಾಕೆ ಅತ್ಯಾಚಾರ ಮಾಡಿದೆ? ಹೇಗೆ ಮಾಡಿದೆ? ನಿನಗೆ ಅಕ್ಕ, ತಂಗಿ, ಹೆಂಡತಿ, ಅಮ್ಮ, ಮಗಳು ಯಾರೂ ಇಲ್ಲವೇ? ಅವರಿಗೂ ಹೀಗೆ ಆದರೆ ನೀನೇನು ಮಾಡುವೆ? ಹೀಗೆ ಪ್ರಶ್ನೆಯ ಪ್ರಶ್ನೆ ಕೇಳಿ, ಆಗಲಾದರೂ ಅವರುಗಳ ಮನ ಕರಗಬಹುದು, ಅವರ ತಪ್ಪಿನ ಅರಿವಾಗಬಹುದು, ಮುಂದೆ ಅವರು ಬದಲಾದರೂ ಆಗಬಹುದು. 

ಕಾನೂನು ಕೊಡುವ ಶಿಕ್ಷೆಗಿಂತ ಜನರು ನೀಡುವ ಶಿಕ್ಷೆಯೇ ದೊಡ್ಡದು. ಅವರಿಗೆ ಪಶ್ಚಾತ್ತಾಪ ಆಗುವ ಹಾಗೆ ಮೇಲಿಂದ ಮೇಲೆ ಪ್ರಶ್ನಿಸಿ. ಮುಂದೆಂದೂ ಅವರು ಕನಸಿನಲ್ಲಿಯೂ ಕೂಡ ಬೇರೆ ಹೆಣ್ಣನ್ನು ಕೆಟ್ಟದಾಗಿ ಕಲ್ಪಿಸಿಕೊಳ್ಳಲು ಹೆದರಬೇಕು ಹಾಗೆ ಪ್ರಶ್ನಿಸಿ. ಅತ್ಯಾಚಾರಕ್ಕೆ ಒಳಗಾದವರನ್ನು ಹಿಂಸಿಸಿ ವಿಕೃತ ಆನಂದ ಪಡುವ ಬದಲು ಅತ್ಯಾಚಾರಿಗಳನ್ನು ಹಿಂಸಿಸಿ, ಸಂತ್ರಸ್ತರಿಗೆ ಸಂತಸ ನೀಡಿ.

ಪ್ರತಿಬಾರಿಯೂ ಅತ್ಯಾಚಾರ ನಡೆದಾಗ 99% ಜನರು ಹೆಣ್ಣು ಮಕ್ಕಳದ್ದೆ ತಪ್ಪೆಂದು ವಾದಿಸುವುದು ಯಾಕೆ? ಹೆಣ್ಣಿನ ಬಟ್ಟೆ, ವಯ್ಯಾರ, ನಡತೆ ಬಗ್ಗೆಯೆ ಯಾಕೆ ಮಾತುಗಳು? ರಾತ್ರಿ ಹೆಣ್ಣು ಹೊರಗೆ ಹೋಗಬಾರದೆನ್ನುವ ಬದಲು ನಿಮ್ಮ ಮನೆಯ ಗಂಡು ಮಕ್ಕಳನ್ನು ರಾತ್ರಿ ಹೊರಗೆ ಸುತ್ತಾಡಲು ಹೋಗುವುದನ್ನು ನಿಷೇಧಿಸಿ. 

ಮನಸ್ಥಿತಿಗಳು ಬದಲಾಗದ ಹೊರತು ಪರಿಸ್ಥಿತಿ ಬದಲಾಗುವುದಿಲ್ಲ. 

ಕೆಲವು ಸಂದರ್ಭಗಳಲ್ಲಿ ಹೆಣ್ಣಿನದ್ದೆ ತಪ್ಪು ಎನ್ನುವ ಮಾತನ್ನು ಸ್ವಲ್ಪ ಮಟ್ಟಿಗೆ ಒಪ್ಪೋಣ ಆದರೆ ಹಸುಗೂಸನ್ನು ತಂದೆಯೇ ಅತ್ಯಾಚಾರ ಮಾಡುವನು, ತಂಗಿಯನ್ನು ಅಣ್ಣನೇ ತನ್ನ ಕಾಮ ತೃಷೆಗೆ ಬಳಸಿಕೊಳ್ಳುವನು, ತಂದೆಯ ಸ್ಥಾನದಲ್ಲಿ ನಿಂತು ದಾರಿ ತೋರಬೇಕಾದ ಗುರುಗಳೇ ವಿದ್ಯಾರ್ಥಿಗಳನ್ನು ತಮ್ಮ ಇಷ್ಟಕ್ಕೆ ಉಪಯೋಗಿಸಿಕೊಳ್ಳುವರು ಕೊನೆಗೆ ಹಣ್ಣು ಹಣ್ಣು ಮುದುಕಿಯನ್ನು ಬಿಡರು ಕಾಮುಕರು. ಅಂತಹ ಪ್ರಕರಣಗಳಲ್ಲಿ ನಿಮ್ಮ ವಾದವೇನು? ಅಲ್ಲೂ ಕೂಡ ಹೆಣ್ಣಿನ ತಪ್ಪನ್ನೇ ಎತ್ತಿ ಹಿಡಿಯುವಿರ? ಪ್ರಪಂಚದ ಜ್ಞಾನವೇ ಇರದ ಮಗುವಿನ ನಗುವಿನಲ್ಲೂ ಕಾಮವನ್ನೇ ಕಾಣುವಿರ? ನಿಮ್ಮ ಉತ್ತರ ಹೌದು ಎಂದಾದರೆ ಅದು ಹೆಣ್ಣು ಮಕ್ಕಳ ದುರಾದೃಷ್ಟವೇ ಸರಿ.

ಪುರುಷ ಪ್ರಧಾನ ಸಮಾಜ ಎನ್ನುವ ಮನಸ್ಥಿತಿ ದೂರ ಮಾಡಿಕೊಳ್ಳಿ. ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತ ಎನ್ನುವ ಕಲ್ಪನೆ ಬಿಟ್ಟು ಹೊರ ಬನ್ನಿ. ಆಕೆ ನಿಮಗಿಂತ ಉನ್ನತ ಸ್ಥಾನಕ್ಕೇರಿದಾಗ ಅಥವಾ ನಿಮಗಿಂತ ಹೆಚ್ಚು ಸಂಬಳ ಪಡೆಯುವಾಗ ನಿಮ್ಮ ಪುರುಷ ಅಹಂ ಬಿಟ್ಟು ಅವಳೊಂದಿಗೆ ಗೆಲುವನ್ನು ಸಂಭ್ರಮಿಸಿ. ಅಂದಾಗ ಮಾತ್ರವೇ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. 

#ಸ್ವಸ್ಥ ಮನಸ್ಸು, ಸ್ವಸ್ಥ ಸಮಾಜ

ಧನ್ಯವಾದಗಳು 🙏

 

 

Category:Women



ProfileImg

Written by Ashwiini H K 1176

Writer

0 Followers

0 Following