ನವ ವರ್ಷ ಧಾರೆಯದು ಇಳೆಗಾಗಿ ಧರೆಗುರುಳೆ
ಪುಳಕದಿಂ ತಾ ಇಳೆಯು ಮಧುರತೆಗೆ ಮೈಮರೆಯೆ
ತಿಳಿ ಮನಸ ಒಳಗೊಂದು ಕಳವಳವು ಉಳಿದಿಹುದು
ಬಳಿಗೆಂದು ನೀ ಬರುವೆ ಕಾದಿರುವೆ ಬಸವಳಿದು
ಜಿನುಗುಡುವ ಜಲಬಿಂದು ಮಣ್ಣ ಸೊಗಡಿನಲು
ಸೌಗಂಧ ಮಾಧುರ್ಯದಲಿ ತಾನು ಹರಿಬರಲು
ಇಳಿ ಸಂಜೆ ತಂಗಾಳಿ ಮೈಯೊಡ್ಡಿ ಕುಳಿತಿರುವೆ
ನೀನಿಲ್ಲದೀ ಹೊತ್ತಿನಲಿಯೆನಗೆ ಮುದವಿಹುದೆ
ಮನದ ಬಯಕೆಯು ತೀರ ಅದಕೆ ಎಲ್ಲಿಯ ತೀರ
ನೀನಿಲ್ಲದಿರೆ ಏಕೋ ಪ್ರತಿ ಕ್ಷಣವು ಬಹು ಭಾರ
ಅರಿತು ಕೊರತೆಯ ನೀಗಿ ಬಂದೆನ್ನ ಉಸಿರಾಗು
ಪ್ರೀತಿಯೊರತೆಯ ನೀಡಿ ಬಾಳಿನಲಿ ಹಸಿರಾಗು
ನನ್ನ ಗಮನವು ಪೂರ ನಿನ್ನ ಗಮನದ ಕಡೆಗೆ
ನಾಟಿಹುದು ಎಲ್ಲಿ ಮನ ಅರುಹು ಯಾರೆಡೆಗೆ
ಉಸುರು ನೀಯೆನಗೆ ಎಂದು ನಿನ್ನಾಗಮನ
ಗಮಿಸು ಬೇಗನೆ ನೀನು ಕಾದಿಹುದು ನನ್ನ ಮನ
0 Followers
0 Following