Do you have a passion for writing?Join Ayra as a Writertoday and start earning.

ಯಾಜ್ಞವಲ್ಕ್ಯ- ಮೈತ್ರೇಯಿ ಮತ್ತು ದಾಂಪತ್ಯ ಗೀತೆ

ProfileImg
04 May '24
3 min read


image

ಯಾಜ್ಞವಲ್ಕ್ಯ- ಮೈತ್ರೇಯಿ ಮತ್ತು ದಾಂಪತ್ಯ ಗೀತೆ

ಗಂಡ-ಹೆಂಡತಿಯ ಸಂಬಂಧವನ್ನು ಮಾತನಾಡುವಾಗ ಅದರಲ್ಲಿ ನಂಬಿಕೆ ಮತ್ತು ವಿಶ್ವಾಸಗಳು ಪ್ರಧಾನವಾಗುತ್ತದೆ. ಏಕೆಂದರೆ, ಅದು ಜಗತ್ತಿನ ಅತಿ ದೊಡ್ಡ ವ್ಯವಹಾರ, ಹೌದು, ದಾಂಪತ್ಯವೂ ಕೂಡ ಒಂದು ವ್ಯವಹಾರವೇ. ಪ್ರೇಮದ ವ್ಯವಹಾರ, ಪ್ರೀತಿಯ ವ್ಯವಹಾರ, ಹೃದಯಗಳ ವ್ಯವಹಾರ, ಭಾವನೆಗಳ ವ್ಯವಹಾರ, ಕಾಮನೆಗಳ ವ್ಯವಹಾರ, ಇಷ್ಟಗಳ ವ್ಯವಹಾರ ಹೀಗೆ ಜಗತ್ತಿನ ಬಹುತೇಕ ವ್ಯವಹಾರಗಳು ಈ ಸಂಬಂಧದಲ್ಲೇ ಅಡಕವಾಗಿದೆ. ಹೀಗಾಗಿ ಯಾರಾದರೂ ಇಬ್ಬರಲ್ಲಿ ಒಬ್ಬರು ಪರಧಿಯ ಗೆರೆ ದಾಟಿದರೆ ನೈತಿಕತೆಯನ್ನು ಮೀರಿದವರಾಗುತ್ತಾರೆ ಮತ್ತು ವಿಶ್ವಾಸ ಘಾತಕರಾಗುತ್ತಾರೆ.

ಅದು ಹೆಣ್ಣಾಗಲಿ ಅಥವಾ ಗಂಡಾಗಲಿ ಒಬ್ಬರು ಮತ್ತೊಬ್ಬರಿಗೆ ನಿಷ್ಠರಾಗಿರುವಾಗ ಜೀವನದ ಮುಖಾಮುಖಿಗಳು ಅತ್ಯಂತ ಸುಲಭವೆನಿಸುತ್ತದೆ. ಆದರೆ ಇಬ್ಬರಲ್ಲಿ ಒಬ್ಬರು ಅದರ ನೈತಿಕತೆಯನ್ನು ಮುರಿದಾಗ, ಮುರಿದವರಿಗೆ ಎದುರಿಗಿರುವವರನ್ನು ಎದುರಿಸುವುದು ಕಷ್ಟವಾಗುತ್ತದೆ. ಎದುರಿಗೆ ಇರುವವರಿಗೆ ಅವರ ಜೊತೆಗೂಡಿ ನಡೆಯುವುದು ಕಷ್ಟಕರವಾಗುತ್ತದೆ.
ಏನೇ ಆಗಲಿ, ಅಭಿಪ್ರಾಯ ಬೇಧಗಳು ಎಷ್ಟೇ ಇರಲಿ, ಗಂಡ- ಹೆಂಡತಿ ಇಬ್ಬರ ಮಧ್ಯೆ ಮುಕ್ತ ಮನಸ್ಸಿನ ಸಂವಾದ ಆಗಾಗ ನಡೆಯುತ್ತಲೇ ಇರಬೇಕು. ಒಬ್ಬರು ಇನ್ನೊಬ್ಬರಲ್ಲಿ ವಿಶ್ವಾಸದ ಮಾತುಗಳನ್ನು ಆಡುತ್ತಿರಬೇಕು. ಏಕೆಂದರೆ ಗಂಡ- ಹೆಂಡತಿಯ ಸಂಬಂಧದಲ್ಲಿ ಕೇವಲ ಕಾಮ ಮತ್ತು ಭೋಗದ ಅಪೇಕ್ಷೆಗಳು ನೆಲೆಗೊಂಡಿರುವುದಿಲ್ಲ. ಅದು ಎರಡು ವಿಭಿನ್ನ ಮನಸ್ತತ್ವ, ಎರಡು ವಿರುದ್ಧ ದಿಕ್ಕಿನ ಆಲೋಚನೆಗಳು, ಎರಡು ವಿಭಿನ್ನ ಹಿನ್ನೆಲೆಗಳು ಒಟ್ಟುಗೂಡಿ ಬದುಕನ್ನು ಮುನ್ನಡೆಸುತ್ತಿರುವುದು.

ಒಂದು ದಾಂಪತ್ಯದ ಅತ್ಯಂತ ಮುಕ್ತ ಸಂವಾದವನ್ನು ನೀವು ಎಲ್ಲಾದರೂ ಹುಡುಕಲು ಬಯಸುವುದಾದರೆ
ಬೃಹದಾರಣ್ಯಕ ಉಪನಿಷತ್‌ನಲ್ಲಿರುವ "ಯಾಜ್ಞವಲ್ಕ್ಯ-ಮೈತ್ರೇಯಿ ಸಂವಾದ" ನೋಡಬೇಕು. ಅವರಿಬ್ಬರೂ ಕೇವಲ ಪತಿ-ಪತ್ನಿಯರಲ್ಲ. ಅವರದು ಗುರು-ಶಿಷ್ಯರ ಸಂಬಂಧ, ಇಬ್ಬರು ಜ್ಞಾನ ಫಿಪಾಸುಗಳು, ಹೀಗಾಗಿ ಅವರದು  ಆತ್ಮ ಚಿಂತನಾ ಸಂಬಂಧ. ಋಗ್ವೇದದಲ್ಲಿ ಸುಮಾರು ಹತ್ತು ಸ್ತೋತ್ರಗಳು ಮೈತ್ರೇಯಿಗೆ ಸಲ್ಲುತ್ತವೆ. ಮೈತ್ರೇಯಿ-ಯಾಜ್ಞವಲ್ಕ್ಯ ಸಂವಾದ ಎಂದೂ ಕರೆಯಲ್ಪಡುವ ಸಂಭಾಷಣೆಯು 'ವ್ಯಕ್ತಿಯ ಆತ್ಮದಿಂದ ಪ್ರೀತಿಯನ್ನು ನಡೆಸುತ್ತದೆ' ಎಂದು ಹೇಳುತ್ತದೆ ಮತ್ತು ಇದು ಆತ್ಮ ಮತ್ತು ಬ್ರಹ್ಮನ ಸ್ವರೂಪ ಮತ್ತು ಏಕತೆಯನ್ನು ಚರ್ಚಿಸುತ್ತದೆ.

ಯಾಜ್ಞವಲ್ಕ್ಯ ಋಷಿಗೆ ಇಬ್ಬರು ಪತ್ನಿಯರು - ಮೈತ್ರೇಯಿ ಮತ್ತು ಕಾತ್ಯಾಯನಿ.  ಯಾಜ್ಞವಲ್ಕ್ಯರು ನಾಲ್ಕನೇ ಆಶ್ರಮವಾದ ಸನ್ಯಾಸ ( ಜೀವನದ ಈ ಹಂತಕ್ಕೆ ಎರಡು ಸಾಂಪ್ರದಾಯಿಕ ಪ್ರವೇಶ ಬಿಂದುಗಳಿವೆ. ಬ್ರಹ್ಮಚರ್ಯ ಹಂತದಲ್ಲಿಯೇ ಸನ್ಯಾಸ ಸ್ವೀಕಾರ. ಮತ್ತೊಂದು
ಹೆಚ್ಚು ಸಾಂಪ್ರದಾಯಿಕ ಜೀವನವನ್ನು ನಡೆಸಿದ ಗೃಹಸ್ಥನು
ಎರಡು ಮತ್ತು ಮೂರು ಹಂತಗಳ (ಗೃಹಸ್ಥ, ವಾನಪ್ರಸ್ಥ)
ನಂತರ ಸನ್ಯಾಸತ್ವಕ್ಕೆ ಪ್ರವೇಶಿಸುತ್ತಾನೆ. ಎರಡೂ ಸಂದರ್ಭಗಳಲ್ಲಿ, ತಮ್ಮದೇ ಆದ ರೀತಿಯಲ್ಲಿ, ಎಲ್ಲಾ ಹಿಂದಿನ ಜವಾಬ್ದಾರಿಗಳನ್ನು ಪೂರೈಸಿದ ನಂತರ, ಒಬ್ಬ ವ್ಯಕ್ತಿಯು ಆಧ್ಯಾತ್ಮಿಕ ಬೆಳವಣಿಗೆಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಮುಕ್ತನಾಗಿರುತ್ತಾನೆ.  ಅತ್ಯಂತ ಸರಳವಾದ ಜೀವನವನ್ನು ನಡೆಸುತ್ತಾರೆ, ಕನಿಷ್ಠ ಭೌತಿಕ ಆಸ್ತಿಯಲ್ಲಿ ಬದುಕುತ್ತಾರೆ ಮತ್ತು ಅಹಿಂಸೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ.  ಜನ್ಮ ಮತ್ತು ಪುನರ್ಜನ್ಮದ ಚಕ್ರದಿಂದ ಮುಕ್ತಿಯನ್ನು ಪಡೆಯುವುದೇ ಇದರ ಮೂಲ ಗುರಿಯಾಗಿದೆ) ಕ್ಕೆ ತೆರಳುವ ಮುನ್ನ ಮೈತ್ರೇಯಿಗೆ 'ನಾನು ನನ್ನ ಆಸ್ತಿಯನ್ನು ನಿನಗೂ, ಕಾತ್ಯಾಯನಿಗೂ ಹಂಚುತ್ತೇನೆ' ಎಂದು ಹೇಳುತ್ತಾರೆ.
ಆಗ ಮೈತ್ರೇಯಿ 'ನೀವು ಜೀವನದ ನಾಲ್ಕನೇ ಹಂತಕ್ಕೆ ಪ್ರವೇಶಿಸುವ ಬಗ್ಗೆ ಮಾತನಾಡುತ್ತಿದ್ದೀರಿ, ಒಟ್ಟಾರೆಯಾಗಿ ಬದುಕುವ ಹೊಸ ದೃಷ್ಟಿಕೋನವನ್ನು ಅಳವಡಿಸಿಕೊಳ್ಳುತ್ತಿದ್ದೀರಿ ಮತ್ತು ಆದ್ದರಿಂದ ನೀವು ಇಲ್ಲಿ ನಮ್ಮಿಬ್ಬರ ನಡುವೆ ಆಸ್ತಿಯನ್ನು ಹಂಚಿಕೊಳ್ಳಲು ಪ್ರಸ್ತಾಪಿಸುತ್ತಿದ್ದೀರಿ, ಇದರಿಂದ ನಾವು ಆರಾಮದಾಯಕ ಮತ್ತು ಸಂತೋಷವಾಗಿರಬಹುದು ಎಂಬುದು ನಿಮ್ಮ ಭಾವನೆ. ಆದರೆ ಇದು ಸಾಧ್ಯವೇ?  ನಾವು ಅಂತಿಮವಾಗಿ, ಭೌತಿಕ ಸೌಕರ್ಯ ಮತ್ತು ಆಸ್ತಿಯನ್ನು ಹೊಂದುವ ಮೂಲಕ ಶಾಶ್ವತವಾಗಿ ಸಂತೋಷವಾಗಿರಲು ಸಾಧ್ಯವೇ?  ಇದು ಮೈತ್ರೇಯಿಯ ಪ್ರಶ್ನೆ ಆಗಿರುತ್ತದೆ. ಇಲ್ಲಿಂದ ಆಧ್ಯಾತ್ಮ, ಆತ್ಮ, ಬದುಕು, ಪ್ರೀತಿ ಇವುಗಳ ಮುಕ್ತ ಸಂವಾದ ಆರಂಭಗೊಳ್ಳುತ್ತದೆ. ಯಾಜ್ಞವಲ್ಕ್ಯರು ಆಕೆಯ ಪ್ರಶ್ನೆಯಿಂದ ಪ್ರಭಾವಿತರಾಗುತ್ತಾರೆ ಮತ್ತು 'ಸಂಪತ್ತಿನಿಂದ ಅಮರತ್ವವನ್ನು ಪಡೆಯಲಾಗುವುದಿಲ್ಲ' ಎಂದು ಉತ್ತರಿಸುತ್ತಾರೆ.

ಮೈತ್ರೇಯಿ, ‘ನನಗೆ ಅಮರತ್ವವನ್ನು ನೀಡದ ಯಾವುದನ್ನೂ ನಾನು ಬಯಸುವುದಿಲ್ಲ.  ಆದರೆ ನಾನು ಅಮರತ್ವವನ್ನು ಪಡೆಯುವ ವಿಧಾನಗಳನ್ನು ತಿಳಿದುಕೊಳ್ಳಲು ಇಚ್ಚಿಸುತ್ತೇನೆ' ಎಂದಾಗ ಯಾಜ್ಞವಲ್ಕ್ಯರು ‘ಪತಿಯು ತನ್ನ ಹೆಂಡತಿಗೆ ಪ್ರಿಯನಾಗುವುದು ತನ್ನ ಇಚ್ಛೆಯಿಂದಲ್ಲ. ಪತ್ನಿಯು ತನ್ನ ಗಂಡನಿಗೆ ಪ್ರಿಯಾಳಾಗುವುದು ತನ್ನ ಇಚ್ಛೆಯಿಂದಲ್ಲ.  ಮಕ್ಕಳು ತಮ್ಮ ಇಚ್ಛೆಯ ಮೂಲಕ ತಮ್ಮ ಹೆತ್ತವರಿಗೆ ಆತ್ಮೀಯರಾಗುವುದಿಲ್ಲ.  ಇದೆಲ್ಲವೂ ಪರಮಾತ್ಮನಿಂದಲೇ ಆಗುತ್ತದೆ. ಆದ್ದರಿಂದ ಯಾವುದೇ ವ್ಯಕ್ತಿಯ ಪ್ರೀತಿಯನ್ನು ಪಡೆಯಲು, ಪರಮಾತ್ಮನ ಅನುಗ್ರಹ ಅಗತ್ಯ.  ಪರಮಾತ್ಮನನ್ನು ಮಾತ್ರ ಧ್ಯಾನಿಸಬೇಕು ಮತ್ತು ಅಂತಹ ಧ್ಯಾನದ ಮೂಲಕವೇ ಇದೆಲ್ಲವೂ ಅರ್ಥವಾಗುತ್ತದೆ. ಮೈತ್ರೇಯಿಗೆ ಮುಕ್ತಿಯ ಮಾರ್ಗವನ್ನು ಕಲಿಸುವ ಸಂವಾದ ಅದು ನಿರಂತರವಾಗಿ ಮುನ್ನಡೆಯುತ್ತದೆ.

ಯಾರು ಯಾರಿಗೆ ಪ್ರಿಯ?

ನಿಜವಾಗಲೂ ಗಂಡ- ಹೆಂಡತಿಯ ಪ್ರೀತಿಯ ಬಗ್ಗೆ  ನಾವು ಲೌಕಿಕವಾಗಿ ನೋಡೋಣ. ಪತಿಯು ತನ್ನ ಹೆಂಡತಿಗೆ ಪ್ರಿಯನಾಗುವುದು ತನ್ನ ಇಚ್ಛೆಯಿಂದಲ್ಲ. ಪತ್ನಿಯು ತನ್ನ ಗಂಡನಿಗೆ ಪ್ರಿಯಾಳಾಗುವುದು ತನ್ನ ಇಚ್ಛೆಯಿಂದಲ್ಲ ಯಾಜ್ಞವಲ್ಕ್ಯ- ಮೈತ್ರೇಯಿ ನಡುವೆ ಅನನ್ಯವಾದ ದಾಂಪತ್ಯ ಏರ್ಪಟ್ಟಿದ್ದು ಕಾಮನೆಗಳಿಂದ ಅಲ್ಲ, ಬದಲಾಗಿ ಇಬ್ಬರಲ್ಲಿದ್ದ ಜ್ಞಾನ ಮತ್ತು ಆತ್ಮ ಸಂವಾದದ ಕ್ರಿಯೆಗಳಿಂದ. ಕೇವಲ ಯಾಜ್ಞವಲ್ಕ್ಯ- ಮೈತ್ರೇಯಿ ದಾಂಪತ್ಯವಂತಲ್ಲ ಜಗತ್ತಿನ ಯಾವುದೇ ದಾಂಪತ್ಯವನ್ನು ನೋಡಿದರೂ  ಎರಡು ಮನಸ್ಸುಗಳ ನಡುವೆ ಏರ್ಪಡುವ ಇಷ್ಟದಿಂದಲೇ ಅದು ಮೊದಲು ಗೊಳ್ಳುತ್ತದೆ. ಒಂದು ಇಷ್ಟ ಅನ್ನೋದು ಏರ್ಪಡುವುದೇ ಇಬ್ಬರ ನಡುವೆ ಒಂದು ಏಕಾಭಿಪ್ರಾಯದ ಭಾವನೆ ಇದ್ದಾಗ! ಪರಸ್ಪರ ಪ್ರೀತಿ ಮತ್ತು ಭಾವನೆಗಳು ಒಟ್ಟುಗೂಡುವುದು ಕೇವಲ ಭೌತಿಕ ಆಕರ್ಷಣೆ ಮತ್ತು ಕಾಮನೆಗಳಿಂದ ಅಲ್ಲ. ಇಬ್ಬರ ಮನಸ್ಸಲ್ಲಿ ಏರ್ಪಡುವ ಸದಾಭಿಪ್ರಾಯ, ಗೌರವ ಮತ್ತು ಆಲೋಚನೆ ಆ ನಂತರದಲ್ಲೇ ಕಾಮನೆಗಳು.

ಆತ್ಮರತಿ ಶೃಂಗಾರಕ್ಕೆ ಎಷ್ಟು ಪ್ರಧಾನವೋ, ಆತ್ಮದ ಅರ್ಪಣೆ ದಾಂಪತ್ಯಕ್ಕೆ ಅಷ್ಟೇ ಮುಖ್ಯ. ತನ್ನನ್ನು ತಾನು ಅರ್ಪಿಸಿಕೊಳ್ಳುವ ಕ್ರಿಯೆಯಲ್ಲಿ ಅದು ಗಂಡು ಅಥವಾ ಹೆಣ್ಣು ಯಾರೇ ಆದರೂ 'ನಾನು' ಅನ್ನುವುದು ಮರೆತೇ ಹೋಗಬೇಕು. 'ನಾನು' ಅನ್ನುವುದು 'ತಾನು' (ಹೆಂಡತಿಗೆ ಗಂಡ, ಗಂಡನಿಗೆ ಹೆಂಡತಿ ಆಗಿ, 'ತಾನು' ಅನ್ನೋದು 'ನಾನು' ಆದಾಗ ಭಾವಾಭಿಪ್ರಾಯಗಳು,  ಭಿನ್ನಾಭಿಪ್ರಾಯಗಳು  ದಾಂಪತ್ಯದ ವೈವಿಧ್ಯತೆಯ ಗುಣಲಕ್ಷಣಗಳಾಗಿ ಪರಿವರ್ತನೆಗೊಳ್ಳುತ್ತವೆ. ದಾಂಪತ್ಯದ ನಿಜ ಸುಖ ಅಡಗಿರುವುದು ಯಾರು ಯಾರನ್ನು ಎಷ್ಟು ಪ್ರೀತಿಸುತ್ತಾರೆ ಅನ್ನುವುದರಲ್ಲ, ಯಾರು, ಯಾರಿಗೆ, ಹೇಗೆ ಅರ್ಪಿತರಾಗಿದ್ದಾರೆ ಅನ್ನುವುದು, ಯಾವ ಅರ್ಪಣೆಯ ಮನೋಭಾವನೆ ಇಬ್ಬರನ್ನು ಪರಸ್ಪರ ಕಟ್ಟಿ ಹಾಕಿದೆ ಎಂಬುದರ ಮೇಲೆ. ನಿಜವಾದ ಸುಖಿ ಮನುಷ್ಯ, ತನ್ನ ಸುಖವನ್ನು ತನ್ನಲ್ಲಿ ಹುಡುಕುವುದಿಲ್ಲ. ಬದಲಾಗಿ ತನ್ನ ಸುಖದ ಸ್ಥಾನವಾದ ಪ್ರೀತಿಯಲ್ಲಿ ಹುಡುಕುತ್ತಾನೆ. ಅವಳು ನಗುನಗುತ್ತಿದ್ದರೆ ಇವನು ಸುಖಿ, ಇವನು ನಗು ನಗುತ್ತಿದ್ದರೆ ಅವಳು ಸುಖಿ!

Category : Relationships


ProfileImg

Written by Ravindra Kotaki

Verified

ಲೇಖಕ/ಅಂಕಣಕಾರ