ಕತೆಯಲ್ಲದ ಕಥೆ
ಕತೆಯೆಂದರೆ ಕಥೆಯೋ ಕತೆಯೋ ಇನ್ನೂ ಗೊಂದಲ, ಕತೆಗಾರ ಎಲ್ಲವನ್ನೂ ಹೇಳಿಬಿಡಬೇಕಾ ಅಥವಾ ಓದುಗನಿಗೆ ಒಂದಷ್ಟು ಬಿಡಬೇಕಾ ಅನ್ನೋದು ತೀರ್ಮಾನವಾಗಿಲ್ಲ, ಇದ್ದದ್ದನ್ನು ಮಾತ್ರಾ ಹೇಳಬೇಕಾ ಇಲ್ಲದ್ದನ್ನು ಸೇರಿಸಿ ಹೇಳಬೇಕಾ ಅಂತಾನೂ ಗೊತ್ತಿಲ್ಲ, ಅಷ್ಟಕ್ಕೂ ಇವೆಲ್ಲಾ ಬೇಕಾ ಅನ್ನೊದಂತೂ ಪೂರ್ಣ ಗೊಂದಲ, ಇಷ್ಟೆಲ್ಲ ಗೊಂದಲವನ್ನಿಟ್ಟುಕೊಂಡು ಒಂದು ಕತೆ ಹೇಳಹೊರಟ ಕತೆಗಾರನ ಕತೆ ಹೇಗಿರುತ್ತದೆ, ಓದಿಸಿಕೊಂಡು ಹೋಗಬಹುದಾ ಅನ್ನೋದು ಓದುಗರ ಗೊಂದಲ. ಅಷ್ಟನ್ನೂ ಮಿಕ್ಕಿ ಆತ ಕತೆಯೊಂದನ್ನು ಹೇಳಿದ, ನಾನು ಅವನು ಹೇಳಿದಂತೆ ಬರೆಯುತ್ತಾ ಗಣಪತಿಯಾದೆ.
ಕತೆಗಾರನ ಕತೆ
ಜಿಟಿಜಿಟಿ ಮಳೆ ಬೀಳುತ್ತಿದ್ದ ದಿವಸಗಳು, ಮೈಕಲ್ ತನ್ನ ಸೈಕಲ್ ತುಳಿಯುತ್ತಾ ಅಂಗಡಿಗೆ ಹೊರಟಿದ್ದ. ರಸ್ತೆಯುದ್ದಕ್ಕೂ ಜುಳುಜುಳು ನೀರು ಚರಂಡಿಯಲ್ಲಿ ಹರಿಯುತ್ತಿತ್ತು. ಸಿಳ್ಳೆ ಹೊಡೆಯುತ್ತಾ ಸೈಕಲ್ ತುಳಿಯುತ್ತಾ ಸಾಗುತ್ತಿದ್ದ ಮೈಕಲ್ ಗೆ ಚರಂಡಿಯಲ್ಲಿ ಯಾರೋ ಬೋರಲಾಗಿ ಮಲಗಿದ್ದು ಕಾಣಿಸಿತು ಹಾಗೂ ಪಕ್ಕದಲ್ಲಿ ಸೈಕಲ್ಲೊಂದು ಅನಾಥವಾಗಿ ಬಿದ್ದಿತ್ತು.
ಸರಕ್ಕನೆ ಬ್ರೇಕ್ ಹಾಕಿದ ಮೈಕಲ್,ಎರಡೂ ಬ್ರೇಕ್ ಒಟ್ಟಿಗೆ ಹಾಕಿದ್ದರೆ ಏನೂ ಆಗುತ್ತಿರಲಿಲ್ಲ,ಗಾಬರಿಯಲ್ಲಿ ಮುಂದಿನ ಚಕ್ರದ ಬ್ರೆಕ್ ಮೊದಲು ಹಿಡಿದ ಕಾರಣ ಅದು ಹಿಂದಿನ ಚಕ್ರದ ಓಟವನ್ನು ನಿಲ್ಲಿಸಲಾಗದ ಕಾರಣ ಸೈಕಲ್ ನಿಯಂತ್ರಣ ತಪ್ಪಿತು, ತಪ್ಪಿದ ನಿಯಂತ್ರಣ ಹಿಡಿತಕ್ಕೆ ತರಲಾರದೆ ದಡಾರಂತ ಚರಂಡಿಯೊಳಗೆ ಬೋರಲಾಗಿ ಬಿದ್ದ ಮೈಕಲ್, ಆತನಿಗೆ ಬಿದ್ದಿದ್ದೊಂದೆ ಗೊತ್ತು. ಆನಂತರ ಎಲ್ಲವೂ ಕತ್ತಲೆ.
ದಾರಿ ಹೋಕರಿಗೆ ಚರಂಡಿಯಲ್ಲಿ ಬೋರಲಾಗಿ ಬಿದ್ದ ವ್ಯಕ್ತಿ ಹಾಗೂ ಅವನ ಪಕ್ಕದಲ್ಲಿ ಬಿದ್ದ ಸೈಕಲ್ ಕಾಣಿಸಿತು.
#
ಇಷ್ಟು ಹೇಳಿ ಕತೆಗಾರ ಹೇಳುವುದ ನಿಲ್ಲಿಸಿದ. ಬರೆಯುತ್ತಿದ್ದ ನನಗೆ ಗೊಂದಲವಾಯಿತು, ಚರಂಡಿ ಪಕ್ಕದಲ್ಲಿ ಬಿದ್ದಿದ್ದು ಯಾರು? ಯಾರೋ ಬಿದ್ದಿದ್ದನ್ನ ಕಂಡಿದ್ದು ಮೈಕಲ್ ಅವನ ಜತೆಗೆ ಇವನೂ ಬಿದ್ದನಾ , ಬಿದ್ದವರು ಇಬ್ಬರಾದರೆ ದಾರಿಹೋಕರಿಗೆ ಎರಡು ಸೈಕಲ್ ಎರಡು ಜನ ಕಾಣಿಸಬೇಕಾಗಿತ್ತು, ಆದರೆ ಹಾಗಿಲ್ಲ ಗೊಂದಲವಾಗಿ ಮತ್ತೊಮ್ಮೆ ನಾನು ಬರೆದಿದ್ದ ಓದಿದೆ, ಇಲ್ಲ ನನ್ನ ಗೊಂದಲಕ್ಕೆ ಉತ್ತರ ಸಿಗದೆ ಇದು ಹೇಗೆ ಅಂತ ಕತೆಗಾರನ ಕೇಳಿದೆ ಆತ ಅದನ್ನ ಓದುಗರಿಗೆ ಬಿಡು ನೀ ಗಣಪತಿಯ ಕೆಲಸ ಮುಂದುವರೆಸು ಅಂದ.
##
ಪಾಂಡು ಗಡಿಯಾರದತ್ತ ನೋಡಿದ , ಹತ್ತೂವರೆ, ಅರೆ ಇಷ್ಟೊತ್ತಿಗೆ ಮೈಕಲ್ ಅಂಗಡಿ ಕಿ ತೆಗೆದುಕೊಂಡು ಹೋಗಿ ಬಾಗಿಲು ತೆರೆಯ ಬೇಕಿತ್ತು, ಯಾಕಿನ್ನೂ ಬರಲಿಲ್ಲ, ಚಕ್ಕರ್ ಹಾಕಿಬಿಟ್ಟನಾ, ತತ್ ಈ ಕೆಲಸಗಾರರ ಹಣೆಬರಹವೇ ಇಷ್ಟು, ಸಂಬಳ ಜಾಸ್ತಿ ಮಾಡಿ ಅನ್ನೋ ವರಾತ ಒಂದರ ಹೊರತಾಗಿ ಯಾವ ಜವಾಬ್ದಾರೀನು ಇಲ್ಲ, ಎಂದು ಗೊಣಗುತ್ತಾ ತೂಗು ಹಾಕಿದ್ದ ಕಿ ತೆಗೆದುಕೊಂಡು ಅಂಗಡಿಯತ್ತ ಹೊರಟ. ಅಂಗಡಿ ಇನ್ನೇನು ತಲುಪಬೇಕುವನ್ನುವಷ್ಟರಲ್ಲಿ ಶರವೇಗದಿಂದ ಕಾರೊಂದು ಬಂದು ಪಾಂಡುವಿಗೆ ಅಪ್ಪಳಿಸಿತು.
ಆದರೆ ಅಂಗಡಿ ಬಾಗಿಲು ತೆರೆದಿತ್ತು, ಕೆಲ ಗಿರಾಕಿಗಳು ಅದೇನೋ ಖರೀದಿಲ್ಲಿ ಮಗ್ನರಾಗಿದ್ದರು. ದಿನಾಲೂ ಗಲ್ಲಾ ಪೆಟ್ಟಿಗೆಯಲ್ಲಿ ಕುಳಿತು ಹಣ ಎಣಿಸುತ್ತಿದ್ದ ಪಾಂಡು ಇಂದು ಮೈಕಲ್ ಬಾರದ ಕಾರಣ ಗಿರಾಕಿಗಳಿಗೆ ಬಟ್ಟೆ ತೋರಿಸುವ ಕೆಲಸ ಮಾಡುತ್ತಿದ್ದ. ಆದರೆ ಈ ದೃಶ್ಯಕ್ಕೆ ಚಲನೆ ಇಲ್ದೆ ಸ್ತಬ್ದವಾಗಿತ್ತು.
ಪೇಟೆಯಲ್ಲಿ ಓಡಾಡುತ್ತಾ ಇರೋರಿಗೆ ಪಾಂಡು ಅಂಗಡಿ ಮುಂದೆ ಅಂಗಡಿ ಕಿ ಕೈಯಲ್ಲಿ ಹಿಡಿದು ಬೋರಲಾಗಿ ಬಿದ್ದದ್ದು ಕಾಣಿಸುತ್ತಿತ್ತು.
####
ನಾನು ಬರೆಯುವದ ನಿಲ್ಲಿಸಿ ಕತೆಗಾರನತ್ತ ನೋಡಿದೆ, ನನಗಂತೂ ತಲೆಬುಡ ಅರ್ಥವಾಗಲಿಲ್ಲ, ಆದರೆ ಕತೆಗಾರ ಮಾತ್ರಾ ತನ್ನ ನಿಲುವಿಗೆ ಬದ್ಧನಾಗಿದ್ದ ಗಟ್ಟಿತನವನ್ನು ಹೊಂದಿದ್ದ,
ಇದು ಸಂಭವಿಸಲಾಗದ ಅರ್ಥವಿಲ್ಲದ ಕತೆಯಲ್ಲವೇ ಅಂತ, ಇದರ ಬರೆಯುವ ಅವಶ್ಯಕತೆಯಿದೆಯೇ ಅನುಮಾನ ವ್ಯಕ್ತಪಡಿಸಿದೆ ಕತೆಗಾರ ನಿರುಮ್ಮಳವಾಗಿ ಹಾಗೂ ದೃಢವಾಗಿ ಹೇಳಿದ
" ಮಿದುಳಿಗೆ ಸಹಜವಾದ ಶಕ್ತಿಯೊಂದಿದೆ ಕೊನೆಯ ಹಂತದಲ್ಲಿ ಮುಂದಿನಕ್ಷಣಗಳನ್ನು ತೋರಿಸಿ ಸ್ಥಬ್ದವಾಗುತ್ತದೆ ಒಮ್ಮೊಮ್ಮೆ ಅದಕ್ಕೆ ತೋಚಿದಂತೆಯೂ"
ನನಗಂತೂ ಅರ್ಥವಾಗಲಿಲ್ಲ , ಬರೆದೆ ಬಿಟ್ಟೆ.
0 Followers
0 Following